ಐದು ಫಿಲ್ಮ್ ಫೆಸ್ಟಿವಲ್‌ಗೆ ಸಿಕ್ತು ದಾರಿ! ಕನ್ನಡ ಸಿನಿಮಾಗೆ ‌ಚಿತ್ರೋತ್ಸವದ ವೇದಿಕೆ; ವೈಕುಂಠಕೆ ದಾರಿ ಹಿಡಿದು ಸಂಭ್ರಮಿಸಿದರು…

ಕನ್ನಡ ಚಿತ್ರರಂಗ ಇದೀಗ ಬೇರೆ ಭಾಷಾ ಚಿತ್ರರಂಗಗಳಿಗೆ ಹೋಲಿಸಿದರೆ, ತುಸು ಗುಣಮಟ್ಟದ ಚಿತ್ರಗಳನ್ನೇ ಕೊಡುತ್ತ ಬಂದಿದೆ. ಅಷ್ಟೇ ಅಲ್ಲ, ಸಾಕಷ್ಟು ವಿಭಿನ್ನ ಸಿನಿಮಾಗಳ ಮೂಲಕ ಗಮನಸೆಳೆಯುತ್ತಿರುವುದು ಕೂಡ ಖುಷಿಯ ವಿಚಾರ. ಈಗಾಗಲೇ ಕನ್ನಡದ ಬಹುತೇಕ ಸಿನಿಮಾಗಳು ಈಗ ಗಡಿ ದಾಟಿವೆ, ಸಾಗರದಾಚೆಯೂ ಹೋಗಿವೆ. ಹಲವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ ಚಿತ್ರೋತ್ಸವಗಳಲ್ಲೂ ಆಯ್ಕೆಯಾಗಿ, ಮೆಚ್ಚುಗೆ ಪಡೆದಿವೆ.

ಈಗ ಅಂಥದ್ದೊಂದು ಖುಷಿ ವಿಚಾರಕ್ಕೆ ಕನ್ನಡ ಸಿನಿಮಾವೊಂದು ಕಾರಣವಾಗಿದೆ. ಹೌದು, ಆ ಕನ್ನಡ ಸಿನಿಮಾ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಅದು “ದಾರಿ ಯಾವುದಯ್ಯ ವೈಕುಂಠಕೆ”. ಸಿದ್ದು ಪೂರ್ಣಚಂದ್ರ ನಿರ್ದೇಶನದ ಈ ಚಿತ್ರ ಸದ್ಯ ಸುದ್ದಿ ಮಾಡುತ್ತಿದ್ದು, ರಾಜಸ್ತಾನ ಅಂತಾರಾಷ್ಟ್ರೀಯ ಚಿತ್ರೋತ್ಸವ, ನಾವ್ಡ ಅಂತಾರಾಷ್ಟ್ರೀಯ ಚಿತ್ರೋತ್ಸವ, ಕಲರ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌, ಬೆಟ್ಟಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಮತ್ತು ಇಂಡಿಯನ್‌ ವರ್ಲ್ಡ್‌ ಫಿಲ್ಮ್‌ ಫೆಸ್ಟಿವಲ್‌ಗೆ ಈ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಇಷ್ಟರಲ್ಲೇ ಆಯಾ ಚಿತ್ರೋತ್ಸವದ ಜ್ಯೂರಿಗಳು ಚಿತ್ರ ವೀಕ್ಷಣೆ ಮಾಡಲಿದ್ದಾರೆ.

ಈ ಚಿತ್ರದಲ್ಲಿ ವರ್ಧನ್‌ ತೀರ್ಥಹಳ್ಳಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ “ತಿಥಿ” ಖ್ಯಾತಿಯ ಪೂಜಾ, ಅನೂಷಾ, ಬಲರಾಜವಾಡ, ಸ್ಪಂದನಾ ನೀನಾಸಂ, ಪ್ರಯಣಮೂರ್ತಿ ಸೇರಿದಂತೆ ಹಲವರು ಇದ್ದಾರೆ. ಚಿತ್ರದ ಒನ್‌ಲೈನ್‌ ಸ್ಟೋರಿ ಬಗ್ಗೆ ಹೇಳುವುದಾದರೆ, ಒಬ್ಬ ಕೊಲೆಗಾರ, ಕಳ್ಳ, ದೊಡ್ಡ ಕ್ರಿಮಿನಲ್‌ ವ್ಯಕ್ತಿಗೆ ಭಾವನೆಗಳ ಸ್ಪರ್ಶ ಕೊಟ್ಟರೆ, ಅವನು ಹೇಗೆ ಬದಲಾಗುತ್ತಾನೆ ಅನ್ನುವುದರ ಮೇಲೆ ಕಥೆ ಸಾಗುತ್ತದೆ.

ಇಡೀ ಚಿತ್ರದ ಚಿತ್ರೀಕರಣ ಸ್ಮಶಾನ ಮತ್ತು ಒಂದು ಹಳ್ಳಿ, ಒಂದು ಮನೆಯಲ್ಲಿ ನಡೆಯುತ್ತದೆ. ಸುಮಾರು ೩೦ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಇದೊಂದು ವಿಭಿನ್ನ ಕಥಾಹಂದರವಾಗಿದ್ದು, ಇಲ್ಲಿರುವ ಪ್ರತಿ ಪಾತ್ರಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ. ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ವರ್ಧನ್‌ ತೀರ್ಥಹಳ್ಳಿ ಅವರಿಗೆ ಇದೊಂದು ವಿಶೇಷ ಚಿತ್ರವಂತೆ. “ಸಿನಿಲಹರಿ” ಜೊತೆ ಮಾತನಾಡಿದ ವರ್ಧನ್‌ ತೀರ್ಥಹಳ್ಳಿ, “ನಾನು ಇದುವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ.

ಅದರಲ್ಲಿ ಹೆಚ್ಚು ನೆಗೆಟಿವ್‌ ಶೇಡ್‌ ಪಾತ್ರಗಳೇ. ಆಕ್ಷನ್‌ ಜೊತೆ ಬಂದ ಪಾತ್ರಗಳನ್ನು ಕೂಡ ನಿರ್ವಹಿಸಿದ್ದೇನೆ. ಆದರೆ, ನನಗೆ ಬೇರೆ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಅಂತಹ ಪಾತ್ರಗಳಿಗೆ ಎದುರು ನೋಡುತ್ತಿದ್ದೆ. ಅದೀಗ “ದಾರಿ ಯಾವುದಯ್ಯ ವೈಕುಂಠಕೆ” ಸಿನಿಮಾ ಮೂಲಕ ಸಿಕ್ಕಿದೆ. ಅದು ನನ್ನ ಅದೃಷ್ಟ.‌ ನನ್ನದು ರಫ್‌ ಲುಕ್. ಅದಕ್ಕೆ ಬೇರೆ ರೀತಿಯದ್ದೇ ಆಯ್ಕೆ ಇರುತ್ತೆ.

ಈ ಚಿತ್ರದ ಪಾತ್ರ ಕೂಡ ನನಗೆ ಸರಿಹೊಂದಿದ್ದರಿಂದ, ಅದು ನನ್ನ ಪಾಲಾಯಿತು. ಒಬ್ಬ ಕ್ರಿಮಿನಲ್‌ ಆಗಿ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಕ್ರಿಮಿನಲ್‌ಗೂ ಹೃದಯ ಇರುತ್ತೆ, ಅವನಲ್ಲೂ ಭಾವನೆಗಳಿರುತ್ತವೆ, ಅವು ಗರಿಗೆದರಿದಾಗ ಅವನು ಹೇಗೆ ರಿಯಾಕ್ಟ್‌ ಮಾಡ್ತಾನೆ ಅನ್ನುವುದರ ಮೇಲೆ ಸಿನಿಮಾ ಸಾಗುತ್ತದೆ. ಆ ಪಾತ್ರ ಮಾಡಿದ್ದಕ್ಕೆ ನನಗೆ ಖುಷಿ ಇದೆ. ಅದರಲ್ಲೂ ಐದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಚಿತ್ರ ಆಯ್ಕೆಯಾಗಿದೆ. ಇದಕ್ಕಿಂತ ಖುಷಿ ಬೇರೊಂದಿಲ್ಲ ಎನ್ನುತ್ತಾರೆ ವರ್ಧನ್‌ ತೀರ್ಥಹಳ್ಳಿ.


ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಈ ಹಿಂದೆ, ಇವರು, “ಕೃಷ್ಣ ಗಾರ್ಮೆಂಟ್ಸ್‌” ಚಿತ್ರ ನಿರ್ದೇಶಿಸಿದ್ದರು. ಶರಣಪ್ಪ ಎಂ.ಕೊಟಗಿ ಅವರಿಗೆ ಇದು ಮೊದಲ ಚಿತ್ರ. ಸಿನಿಮಾಗೆ ನಿತಿನ್‌ ಕ್ಯಾಮೆರಾ ಹಿಡಿದರೆ, ಲೋಕಿ ಸಂಗೀತವಿದೆ. ಮುತ್ತುರಾಜ್‌ ಸಂಕಲನ ಮಾಡಿದ್ದಾರೆ.

Related Posts

error: Content is protected !!