ಜಕ್ಕಣ್ಣ ಅಲಿಯಾಸ್ ರಾಜಮೌಳಿಯವರು ಇಂಡಿಯನ್ ಸಿನಿಮಾ ಇತಿಹಾಸದಲ್ಲಿ ಹಿಂದ್ಯಾರು ಬರೆಯದ ಐತಿಹಾಸಿಕ ದಾಖಲೆಯನ್ನು ಬರಿಬೇಕು ಅಂತ ಫಿಕ್ಸಾಗಿ ಫೀಲ್ಡ್ ಗೆ ಇಳಿಯುತ್ತಾರೆ ಅಂತ ಕಾಣುತ್ತೆ. ಬಾಹುಬಲಿ ಮೂಲಕ ಭಾರತೀಯ ಚಿತ್ರರಂಗದಲ್ಲಿ ನಯಾ ದಾಖಲೆ ಕೆತ್ತಿದ್ದು ನಿಮಗೆಲ್ಲ ಗೊತ್ತೆಯಿದೆ. ಇದೀಗ ಮೌಳಿ ಸಾರಥ್ಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ ಆರ್ ಆರ್ ಆರ್ ಹೊಸ ರೆಕಾರ್ಡ್ ಮಾಡಿದೆ. ಭಾರತೀಯ ಚಿತ್ರರಂಗದ ಐತಿಹಾಸಿಕ ಪುಟದಲ್ಲಿ ಯಾವೊಂದು ಚಿತ್ರವೂ ಬರೆಯದ ಇತಿಹಾಸಕ್ಕೆ ಆರ್ ಆರ್ ಆರ್ ಸಾಕ್ಷಿಯಾಗಿದೆ.
ಆರ್ ಆರ್ ಆರ್ ಇಡೀ ವಿಶ್ವವೇ ಕಣ್ಣರಳಿಸಿ ಕಾಯ್ತಿರುವ ಚಿತ್ರ. ಸೆಟ್ಟೇರಿದಾಗಲೇ ಸುಂಟರಗಾಳಿ ಎಬ್ಬಿಸಿದ್ದ ಈಚಿತ್ರ ಮೇಕಿಂಗ್ ನಿಂದ ವಲ್ಡ್ ವೈಡ್ ಸುನಾಮಿ ಎಬ್ಬಿಸಿರುವುದು ಗೊತ್ತೆಯಿದೆ. ಇದೀಗ ಆಡಿಯೋ ರೈಟ್ಸ್ ವಿಚಾರಕ್ಕೆ ಭಾರತೀಯ ಚಿತ್ರರಂಗವೇ ಹಿಂತಿರುಗಿ ನೋಡುವಂತೆ ಮಾಡಿದೆ. ಆರ್ ಆರ್ ಆರ್ ಆಡಿಯೋ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಟಿ ಸಿರೀಸ್ ಹಾಗೂ ಲಹರಿ ಸಂಸ್ಥೆ ಭರ್ತಿ 25 ಕೋಟಿ ಕೊಟ್ಟು ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದೆ ಎನ್ನಲಾಗ್ತಿದೆ. ಫ್ರೆಂಡ್ ಶಿಪ್ ಡೇಯಂದು ಸ್ಪೆಷಲ್ ಸಾಂಗ್ ರಿಲೀಸ್ ಆಗಲಿದೆ.
ಇತ್ತೀಚೆಗೆ ಲಹರಿ ಸಂಸ್ಥೆ ಕೆಜಿಎಫ್ ಚಾಪ್ಟರ್ 2 ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿತ್ತು. 7.2 ಕೋಟಿಗೆ ಕೆಜಿಎಫ್ 2 ಆಡಿಯೋ ರೈಟ್ಸ್ ಸೇಲ್ ಆಗಿತ್ತು. ಈ ಮೂಲಕ ಬಾಹುಬಲಿ 2 ಚಿತ್ರದ ಆಡಿಯೋ ದಾಖಲೆಯನ್ನ ಹಿಂದಿಕ್ಕಿ ಕೆಜಿಎಫ್ ಮುನ್ನುಗ್ಗಿತ್ತು. ಇದೀಗ, ಕೆಜಿಎಫ್ ರೆಕಾರ್ಡ್ ನ ಆರ್ ಆರ್ ಆರ್ ಬೀಟ್ ಮಾಡಿದೆ. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಆರ್ ಆರ್ ಆರ್ ಆಡಿಯೋ ಹಕ್ಕುಗಳನ್ನು ಟಿ ಸಿರೀಸ್ ಹಾಗೂ ಲಹರಿ ಸಂಸ್ಥೆ ಬಾಚಿಕೊಂಡಿದೆ. 25 ಕೋಟಿ ಸುರಿದು ಆಡಿಯೋ ರೈಟ್ಸ್ ಪಡೆದಿವೆ ಅಂದರೆ ನೀವೇ ಲೆಕ್ಕಹಾಕಿ
ಎಂ ಎಂ ಕೀರವಾಣಿ ಸಂಯೋಜಿಸಿರುವ ಹಾಡುಗಳು ಹೇಗಿರಬಹುದೆಂದು.
ಆರ್ ಆರ್ ಆರ್ ಐತಿಹಾಸಿಕ ಕಥಾಹಂದರವುಳ್ಳ ಸಿನಿಮಾ. ಕೋಮರಾಮ್ ಭೀಮ್ ಪಾತ್ರಕ್ಕೆ ಜೂನಿಯರ್ ಎನ್ ಟಿಆರ್ ಜೀವತುಂಬಿದರೆ, ಅಲ್ಲುರಿ ಸೀತರಾಮ ರಾಜು ಪಾತ್ರಕ್ಕೆ ರಾಮ್ ಚರಣ್ ತೇಜಾ ಬಣ್ಣ ಹಚ್ಚಿದ್ದಾರೆ.
ಬಿಟೌನ್ ಬ್ಯೂಟಿ ಅಲಿಯಾ ನಾಯಕಿಯಾಗಿ ಮಿಂಚಿದ್ದಾರೆ. ಅಜಯ್ ದೇವಗನ್ ಮುಖ್ಯಪಾತ್ರದಲ್ಲಿದ್ದು ವಿದೇಶಿ ಕಲಾವಿದರು ಕೂಡ ಚಿತ್ರದಲ್ಲಿದ್ದಾರೆ. ಡಿ.ವಿ.ವಿ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ 400 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆರ್ ಆರ್ ಆರ್ ಚಿತ್ರ ಅಕ್ಟೋಬರ್ 13 ರಂದು ತೆರೆಗೆ ತರೋದಕ್ಕೆ ಸಕಲ ತಯ್ಯಾರಿ ನಡೀತಿದೆ.
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ