ಕನ್ನಡದಲ್ಲಿ ಈಗಾಗಲೇ ಭಾಗ-2 3 ಸಿನಿಮಾಗಳಿಗೆ ಲೆಕ್ಕವಿಲ್ಲ. ಪಾರ್ಟ್ 1, ಪಾರ್ಟ್ 2 ಮತ್ತು ಪಾರ್ಟ್ 3 ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಆ ಸಾಲಿಗೆ ಈಗ ರಮೇಶ್ ಅರವಿಂದ್ ಅಭಿಯದ ಸಿನಿಮಾ ಕೂಡ ಸೇರಿದೆ. ಹೌದು, ಕಳೆದ 2020ರಲ್ಲಿ ಬಿಡುಗಡೆಯಾಗಿದ್ದ “ಶಿವಾಜಿ ಸುರತ್ಕಲ್” ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಸ್ವತಃ ವಿತರಕರಿಂದಲೇ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿತ್ತು. ರಮೇಶ್ ಅರವಿಂದ್ ಅವರ ಈ ಚಿತ್ರವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದರು. ರೇಖಾ ಕೆ.ಎನ್ ಮತ್ತು ಅನೂಪ್ ಅವರು ನಿರ್ಮಿಸಿದ್ದರು. ಈಗ ಅದೇ ಶೀರ್ಷಿಕೆಯಲ್ಲಿ ಭಾಗ -2 ಮಾಡ ಹೊರಟಿರುವುದು ಗೊತ್ತೇ ಇದೆ.
ಕಥೆ, ಚಿತ್ರಕಥೆ ರೆಡಿ ಮಾಡಿ ಕೊಂಡಿರುವ ಚಿತ್ರತಂಡ, ಅಕ್ಟೋಬರ್‌ನಲ್ಲಿ ಚಿತ್ರೀಕರಿಸುವ ಯೋಜನೆ ರೂಪಿಸಿದೆ.
ಶಿವಾಜಿಯಾಗಿ ರಮೇಶ್ ಅರವಿಂದ್ ಕಾಣಿಸಿಕೊಳ್ಳಲಿದ್ದು, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಭಾಗ-2ರಲ್ಲೂ ಮುಂದುವರಿಯಲಿದ್ದಾರೆ. ಉಳಿದಂತೆ ಚಿತ್ರದಲ್ಲಿ ಒಂದಷ್ಟು ಹೊಸ ಪ್ರತಿಭೆಗಳು ಕಾಣಿಸಿಕೊಳ್ಳಲಿವೆ. “ಶಿವಾಜಿ ಸುರತ್ಕಲ್” ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು.
ಆದರೆ, ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೇದಾರಿ ಕತೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಅಂಶಗಳು ಇಲ್ಲಿ ಹೈಲೈಟ್ ಆಗಿರಲಿವೆ. ಚಿತ್ರಕ್ಕೆ ಗುರುಪ್ರಸಾದ್ ಕ್ಯಾಮೆರಾ ಹಿಡಿಯಲಿದ್ದು, ಉಳಿದಂತೆ ತಾಂತ್ರಿಕ ತಂಡದ ಆಯ್ಕೆ ಇಷ್ಟರಲ್ಲೇ ನಡೆಯಲಿದೆ. “ಶಿವಾಜಿ ಸುರತ್ಕಲ್” ಚಿತ್ರದ ಯಶಸ್ಸು ಮತ್ತು ತಮಿಳು, ಮಲಯಾಳಂ, ತೆಲುಗಿಗೆ ರೀಮೇಕ್ ರೈಟ್ಸ್ ಮಾರಾಟವಾಗಿದ್ದರಿಂದ ಚಿತ್ರತಂಡ ಮತ್ತಷ್ಟು ಉತ್ಸಾಹದಿಂದ ಅದ್ದೂರಿಯಾಗಿ ಚಿತ್ರ ಮಾಡುವ ತಯಾರಿಯಲ್ಲಿದೆ.