ಮಧು ಮಂದಗೆರೆ ಈವರೆಗೆ ನಟಿಸಿರುವ 75 ಚಿತ್ರಗಳ ಪೈಕಿ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟುಮಸ್ತಾದ ದೇಹ ಅವರನ್ನು ಪೊಲೀಸ್ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡುವಂತಾಗಿದೆ. ಈಗ ಅವರು “ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ
ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳಿಗೇನು ಕೊರತೆ ಇಲ್ಲ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಕಾಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೂ ಇವೆ. ಒಂದಷ್ಟು ಸಿನಿಮಾಗಳು ಸದ್ದು ಮಾಡಿದ್ದೂ ಇದೆ. ಈಗ ಆ ಸಾಲಿಗೆ “ದನಗಳು’ ಎಂಬ ಚಿತ್ರವೂ ಸೇರಿದೆ ಅನ್ನೋದು ವಿಶೇಷ. ಹೌದು, ಇದು ಕಥೆಗಾರ ಡಾ.ಬಿ.ಎಲ್.ವೇಣು ಅವರ ಕಾದಂಬರಿ ಆಧರಿಸಿದ ಚಿತ್ರ. ಈ ಚಿತ್ರಕ್ಕೆ ಬಾಲಾಜಿ ಪೋಳ್ ನಿರ್ದೇಶಕರು. ಇದರೊಂದಿಗೆ ಅವರೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರದ ಮೂಲಕ ಮಧು ಮಂದಗೆರೆ ಅವರೂ ಹೀರೋ ಆಗಿ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಹಾಗೆ ನೋಡಿದರೆ, ಮಧು ಅವರಿಗೆ ಸಿನಿಮಾರಂಗ ಹೊಸದೇನೂ ಅಲ್ಲ, ಒಂದು ದಶಕಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾರಂಗವನ್ನು ಅರಿತಿರುವ ಮಧು ಮಂದಗೆರೆ, ಸಾಕಷ್ಟು ಹೀರೋಗಳ ಜೊತೆ ನಟಿಸಿದ್ದಾರೆ. ಈಗಿನ ಸ್ಟಾರ್ ನಟರ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಹಾಗೆ ಹೇಳುವುದಾದರೆ, ಮಧು ಮಂದಗೆರೆ ಅವರು ಇದುವರೆಗೆ ಸುಮಾರು ೭೫ ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನೋದು ಮತ್ತೊಂದು ವಿಶೇಷ.
ಹೌದು, ಮಧು ಮಂದಗೆರೆ ಈವರೆಗೆ ನಟಿಸಿರುವ ೭೫ ಚಿತ್ರಗಳ ಪೈಕಿ ಸುಮಾರು ೫0 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟುಮಸ್ತಾದ ದೇಹ ಅವರನ್ನು ಪೊಲೀಸ್ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡುವಂತಾಗಿದೆ. ಈಗ ಅವರು “ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದು ಕಲಾತ್ಮಕ ಚಿತ್ರ. ನೈಜ ಘಟನೆಯೊಂದನ್ನು ಲೇಖಕರು ಕಾದಂಬರಿಗೆ ಅಳವಡಿಸಿದ್ದು, ಅದನ್ನು ನೈಜವಾಗಿಯೇ ಚಿತ್ರೀಕರಿಸಿರುವ ಖುಷಿ ಚಿತ್ರ ನಿರ್ದೇಶಕರದ್ದು. “ದನಗಳು” ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಸೆನ್ಸಾರ್ ಮುಗಿಸಿರುವ ಚಿತ್ರ, ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ಕೊರೊನಾ ಹಾವಳಿಯಿಂದಾಗಿ ಶೇ.೫೦ರಷ್ಟು ಆಸನ ಭರ್ತಿಗೆ ಅವಕಾಶ ಕೊಟ್ಟಿರುವುದರಿಂದ ರಿಲೀಸ್‌ಗೆ ತಡವಾಗುತ್ತಿದೆ. ಸರ್ಕಾರ ಶೇ.೧೦೦ ರಷ್ಟು ಆಸನ ಭರ್ತಿಗೆ ಅವಕಾಶ ಕೊಟ್ಟರೆ, ಚಿತ್ರ ಬಿಡುಗಡೆ ಮಾಡಲು ತಂಡ ತಯಾರಿ ಮಾಡಿಕೊಳ್ಳಲಿದೆ.
ಇನ್ನ, “ದನಗಳು” ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ರಾತ್ರಿ ವೇಳೆಯಲ್ಲಿ ದನ, ಹಸುಗಳನ್ನು ವಾಹನಗಳಲ್ಲಿ ಸಾಗಿಸುವ ಮೂಲಕ ಅವುಗಳನ್ನು ಕಸಾಯಿ ಖಾನೆಗೆ ತಳ್ಳುವ ಗುಂಪಿನ ಕಥೆಯೇ ಇದರ ಹೈಲೈಟು. ಆ ದುಷ್ಟ ಗುಂಪನ್ನು ಹಿಡಿದು, ಬಗ್ಗು ಬಡಿಯುವ ಪೊಲೀಸ್ ಅಧಿಕಾರಿ, ರೈತರ ಗೋವುಗಳನ್ನು ರಕ್ಷಣೆ ಮಾಡಿ ರೈತರಿಗೆ ಒಪ್ಪಿಸುವ ಕಥೆ ಇಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಕೆ.ಆರ್.ಪೇಟೆ, ಕಿಕ್ಕೇರಿ, ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ನಡೆದಿದೆ.
ಈಗಾಗಲೇ “ದನಗಳು’ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಇದೆ. ವಾಸ್ತವ ಸಂಗತಿಗಳನ್ನೂ ಇಲ್ಲಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ಹೀರೋ, ಮಧು ಮಂದಗೆರೆ ಅವರಿಗೆ ಈ ಸಿನಿಮಾ ಒಳ್ಳೆಯ ಅನುಭವ ನೀಡಿದೆಯಂತೆ. ಒಂದೊಳ್ಳೆಯ ಕಥಾಹಂದರ ಇರುವಂತಹ ಚಿತ್ರದಲ್ಲಿ ನಟಿಸಿದ್ದು, ಖುಷಿ ಕೊಟ್ಟಿದೆ ಎನ್ನುವ ಅವರು, “ದನಗಳು” ಚಿತ್ರ ಹೊರಬಂದರೆ, ನಿಜಕ್ಕೂ ಮೆಚ್ಚುಗೆ ಪಡೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ.
ಚಿತ್ರದಲ್ಲಿ ಮಧು ಮಂದಗೆರೆ ಅವರ ಜೊತೆ ಸಂಗೀತಾ ಜೋಡಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ವಿವನ್‌ಕೃಷ್ಣ, ಅಶೋಕ್ ಜಂಬೆ, ಸಂಪತ್, ಪ್ರಿಯಾ, ಚಂದ್ರು, ಹರಿಚರಣ ತಿಲಕ್, ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶ್ವನಾಥ್ ಛಾಯಾಗ್ರಹಣವಿದೆ. ಸ್ವಾಮಿ ಅವರ ಸಂಕಲನವಿದೆ. ಅರವ್ ರಿಶಿಕ್ ಸಂಗೀತವಿದೆ. ಮಧು ಮಂದಗೆರೆ ಅವರು ನಟಿಸಿರುವ “ಭಜರಂಗಿ ೨”, “ಅರ್ಜುನ್ ಗೌಡ”, “ಜಾಸ್ತಿ ಪ್ರೀತಿ”,” ಕಬ್ಜ”,” ಪ್ರಾರಂಭ”,” ಅಲ್ಲೇ ಡ್ರಾ ಅಲ್ಲೇ ಬಹುಮಾನ”, “ಫೈಟರ್” ಸೇರಿದಂತೆ ಒಂದಷ್ಟು ಚಿತ್ರಗಳಿವೆ.