Categories
ಸಿನಿ ಸುದ್ದಿ

ಪೋಲೀಸ್ ಸ್ಟೋರಿಗೆ 25! ಯಶಸ್ವಿ ಚಿತ್ರಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸಾಯಿಕುಮಾರ್

ಕೆಲ ಸಿನಿಮಾಗಳು ಹಾಗೆನೇ. ಎಷ್ಟೇ ವರ್ಷ ಉರುಳಿದರೂ ಪದೇ ಪದೇ ನೆನಪಾಗುತ್ತಲೇ ಇರುತ್ತವೆ. ಅಷ್ಟರಮಟ್ಟಿಗೆ ಪ್ರಭಾವ ಬೀರಿರುವ ಸಿನಿಮಾಗಳ ಪೈಕಿ, ಈ ಹಿಂದೆ ಕನ್ನಡದಲ್ಲಿ ಜೋರು ಸದ್ದು ಮಾಡಿದ “ಪೋಲೀಸ್‌ ಸ್ಟೋರಿ”ಯೂ ಒಂದು. ಹೌದು, “ಪೋಲೀಸ್‌ ಸ್ಟೋರಿ” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ್ದಂತೂ ನಿಜ. ಅದಕ್ಕೆ ಕಾರಣ, ಚಿತ್ರದ ಕಥೆ ಹಾಗೂ ಸಾಯಿಕುಮಾರ್‌ ಅವರ ನಟನೆ. ಅಲ್ಲಿ ನಟನೆ ಅನ್ನುವುದಕ್ಕಿಂತ ಅವರ ಡೈಲಾಗ್‌ ಡಿಲವರಿಯೇ ಚಿತ್ರವನ್ನು ಬಹು ಎತ್ತರಕ್ಕೆ ಕೊಂಡೊಯ್ದ ವಿಷಯ ಎಲ್ಲರಿಗೂ ಗೊತ್ತು. ಆ ಚಿತ್ರದ ಡೈಲಾಗ್‌ಗಳು ಎಲ್ಲರ ಬಾಯಲ್ಲೂ ಗುನುಗುವಂತಾಗಿದ್ದು ಸುಳ್ಳಲ್ಲ. ಇಂದಿಗೂ ಪಡ್ಡೆ ಹುಡುಗ್ರು ಸಾಯಿಕುಮಾರ್‌ ಬಾಯಿಂದ ಬಂದಂತಹ ಪೋಲೀಸ್‌ ಸ್ಟೋರಿ ಸಿನಿಮಾದ ಡೈಲಾಗ್‌ ಹೇಳ್ತಾರೆ ಅಂದರೆ, ಆ ಸಿನಿಮಾದ ಖಡಕ್‌ ಮಾತುಗಳು ಎಷ್ಟರಮಟ್ಟಿಗೆ ಪರಿಣಾಮ ಬೀರಿವೆ ಅನ್ನೋದನ್ನು ಊಹಿಸಿಕೊಳ್ಳಿ.


ಅಷ್ಟಕ್ಕೂ ಈಗ ಯಾಕೆ “ಪೋಲೀಸ್‌ ಸ್ಟೋರಿ” ಸಿನಿಮಾ ವಿಷಯ ಅಂದುಕೊಂಡ್ರಾ? ವಿಷಯವಿದೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯಿಸಿ, ಭರ್ಜರಿ ಯಶಸ್ಸು ಕಂಡಿದ್ದ “ಪೊಲೀಸ್ ಸ್ಟೋರಿ” ಚಿತ್ರ ಇಂದಿಗೆ ಯಶಸ್ವಿ ೨೫ ವರ್ಷಗಳನ್ನು ಪೂರೈಸಿದೆ. ಹೌದು, ಆಗಸ್ಟ್ 16 ಕ್ಕೆ “ಪೋಲಿಸ್‌ ಸ್ಟೋರಿ” ರಿಲೀಸ್‌ ಆಗಿ 25 ವರ್ಷಗಳಾಗಿವೆ. 1996 ರಲ್ಲಿ ತೆರೆ ಕಂಡ ಈ ಸಿನಿಮಾ, ಭರ್ಜರಿ ಯಶಸ್ಸು ಪಡೆದಿತ್ತು.
ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲೂ ಈ ಚಿತ್ರ ಗೆಲುವು ಕಂಡಿತ್ತು.

ಇಪ್ಪತ್ತೈದು ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಟ ಸಾಯಿಕುಮಾರ್ ಅವರು, “ಪೋಲೀಸ್‌ ಸ್ಟೋರಿ” ಚಿತ್ರದ ಯಶಸ್ಸಿಗೆ ಕಾರಣರಾದ ನಿರ್ಮಾಪಕ, ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಚಿತ್ರ‌ ಯಶಸ್ಸು ಕಾಣಲು ಮಾಧ್ಯಮದವರ ಹಾಗೂ ಕನ್ನಡ ಕಲಾಭಿಮಾನಿಗಳ ಪಾಲು ಬಹು ದೊಡ್ಡದು. ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ ಸಾಯಿಕುಮಾರ್.‌ ಇದೇ ಖುಷಿಯಲ್ಲಿರುವ ಸಾಯಿಕುಮಾರ್‌, ಅದೇ ತಂಡದ ಜೊತೆ ಇಷ್ಟರಲ್ಲೇ ಹೊಸ ಚಿತ್ರ ಶುರುಮಾಡುವ ಯೋಚನೆಯೂ ಇದೆ ಎಂದಿದ್ದಾರೆ.

Categories
ಸಿನಿ ಸುದ್ದಿ

ಕನ್ನಡದಲ್ಲಿ ಅದ್ಧೂರಿ ಚಿತ್ರಕ್ಕೆ ತಯಾರಿ!ಸೆಟ್ಟೇರಲಿದೆ 500 ಕೋಟಿ ಬಜೆಟ್‌ ಸಿನಿಮಾ!! ದಾಖಲೆ ಬರೆಯುತ್ತಾ ಕೃಷ್ಣರಾಜ-4 ಚಿತ್ರ?

ಇದು ನಿಜಕ್ಕೂ ಕನ್ನಡದ ಮಟ್ಟಿಗೆ ದಾಖಲೆಯೇ ಸರಿ. ಆದರೆ, ಆ ದಾಖಲೆ ಬರೆಯುವ ಮಟ್ಟಕ್ಕೆ ಕೆಲಸವಾಗಬೇಕಷ್ಟೇ. ಇಲ್ಲೀಗ ಹೇಳ ಹೊರಟಿರುವ ವಿಷಯ. ಒಂದು ಹೊಸ ಚಿತ್ರದ್ದು. ಗಾಂಧಿನಗರದಲ್ಲಿ ಹೊಸ ಸಿನಿಮಾಗಳ ಸಂಖ್ಯೆ ದಿನ ಕಳೆದಂತೆ ಏರುತ್ತಲೇ ಇದೆ. ಅಂತಹ ಸಿನಿಮಾಗಳ ಬಗ್ಗೆ ವಿವರವೂ ಸಿಗುತ್ತಿರುತ್ತೆ. ಆದರೆ, ಇಲ್ಲೊಂದು ಸೆಟ್ಟೇರಲಿರುವ ಹೊಸ ಸಿನಿಮಾ ಬಗ್ಗೆ ಒಂದಷ್ಟು ಕುತೂಹಲವಂತೂ ಇದೆ. ಆ ಕುತೂಹಲಕ್ಕೆ ಕಾರಣವಿಷ್ಟೇ. ಅದೊಂದು ಬಿಗ್‌ ಬಜೆಟ್‌ ಚಿತ್ರ. ಅರೇ, ಈಗಾಗಲೇ ಕನ್ನಡದಲ್ಲಿ ದಾಖಲೆ ಮೊತ್ತದ ಬಜೆಟ್‌ ಸಿನಿಮಾಗಳು ಸೆಟ್ಟೇರಿ, ಬಿಡುಗಡೆಯಾಗಿವೆಯಲ್ಲ ಎಂಬ ಪ್ರಶ್ನೆ ಎದುರಾಗಬಹುದು. ಆದರೂ ಈಗ ಒಂದು ಬಿಗ್‌ಬಜೆಟ್‌ ಸಿನಿಮಾ ಬಗ್ಗೆ ಹೇಳಲೇಬೇಕು.
ಹೌದು, “ಕೆಜಿಎಫ್”, “ವಿಕ್ರಾಂತ್ ರೋಣ”, “ಕಬ್ಜ” ಹೀಗೆ ಕನ್ನಡದಲ್ಲಿ ಇನ್ನೂ ಅನೇಕ ಬಿಗ್‌ ಬಜೆಟ್‌ ಚಿತ್ರಗಳು ತಯಾರಾಗುತ್ತಿವೆ. ಈಗಾಗಲೇ ಕನ್ನಡ ಚಿತ್ರರಂಗದತ್ತ ಇತರೆ ಚಿತ್ರರಂಗಗಳೂ ತಿರುಗಿ ನೋಡಿವೆ. ಈಗ ಅಂಥದ್ದೇ ದೊಡ್ಡ ಸಿನಿಮಾವೊಂದು ಸೆಟ್ಟೇರಲು ಅಣಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸೇರಿ ಏಳು ಭಾಷೆಗಳಲ್ಲಿ ಆ ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಅನ್ನೋದೇ ಈ ಹೊತ್ತಿನ ಸುದ್ದಿ.


ಅಂದಹಾಗೆ, ಅಂಥದ್ದೊಂದು ದಾಖಲೆ ಮೊತ್ತದ ಬಜೆಟ್‌ನಲ್ಲಿ ಸಿನಿಮಾ ತಯಾರಿಸಲು ಹೊರಟಿರೋದು ದೊಡ್ಡಬಳ್ಳಾಪುರ ಮೂಲದ ಉದ್ಯಮಿ ಹಾಗೂ ಶ್ರೀ ಭಗವತಿ ದೇವಿಯ ಆರಾಧಕ ಗಾನ ಶರವಣ ಸ್ವಾಮೀಜಿ. ಹೌದು, 1995 ರಿಂದ ಕನ್ನಡ ಚಿತ್ರರಂಗದಲ್ಲಿ ಗಾಯಕನಾಗಿ ಗುರುತಿಸಿಕೊಂಡಿರುವ ಇವರು, ಸಿನಿಮಾರಂಗದೊಂದಿಗೆ ಅಷ್ಟೇ ನಂಟು ಹೊಂದಿದವರು. ಟ್ರ್ಯಾಕ್ ಸಿಂಗರ್ ಆಗಿ ದೊಡ್ಡ ಮ್ಯೂಸಿಕ್ ಡೈರೆಕ್ಟರ್‌ಗಳ ಜೊತೆಯಲ್ಲೂ ಕೆಲಸ ಮಾಡಿದ್ದಾರೆ. ಆನಂತರ ಗೋಲ್ಡ್ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡು ಬ್ಯುಸಿಯಾದ ಮೇಲೆ ಚಿತ್ರರಂಗದತ್ತ ಗಮನ ಹರಿಸಲು ಇವರಿಗೆ ಸಾಧ್ಯವಾಗಲಿಲ್ಲವಂತೆ. ಲಂಡನ್, ಹಾಂಕಾಂಗ್, ಮಲೇಶಿಯಾ ದಲ್ಲೂ ಇವರು ಗೋಲ್ಡ್ ಕಂಪನಿ ಹೊಂದಿದ್ದು, ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಆರೇಳು ತಿಂಗಳ ಹಿಂದೆ ಗಾನಶರವಣ ಸ್ವಾಮೀಜಿ ಅವರು ಕೇರಳದ ಭಗವತಿದೇವಿ ದೇವಸ್ಥಾನದ ನವೀಕರಣಕ್ಕೆ ಬರೋಬರಿ 526 ಕೋಟಿ ರೂ. ಕೊಟ್ಟಿದ್ದರು. ಅದು ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಇವರೀಗ ಬರೋಬರಿ ಐನೂರು ಕೋಟಿಯ ಬಿಗ್‌ ಬಜೆಟ್ ಚಿತ್ರವನ್ನು ಏಳು ಭಾಷೆಗಳಲ್ಲಿ ನಿರ್ಮಿಸಲು ಹೊರಟಿದ್ದಾರೆ.

ಇತ್ತೀಚೆಗೆ ಅವರು ತಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಜಿ.ಎಸ್.ಆರ್.ಫಿಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಆ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ “ಕೃಷ್ಣರಾಜ-೪” ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರದ ಕಥೆಯಷ್ಟೇ ರೆಡಿಯಾಗಿದೆ. ಆದರೆ, ಯಾರು ನಿರ್ದೇಶಕ, ನಾಯಕ, ನಾಯಕಿ ಯಾರಾಗುತ್ತಾರೆ. ಯಾರೆಲ್ಲ ತಾಂತ್ರಿಕ ವರ್ಗ ಕೆಲಸ ಮಾಡಲಿದೆ. ಕಲಾವಿದರು ಯಾರ್‌ ಯಾರ್‌ ನಟಿಸುತ್ತಾರೆ ಎಂಬಿತ್ಯಾದಿ ಮಾಹಿತಿ ಇಲ್ಲ. ಅದನ್ನು ಇಷ್ಟರಲ್ಲೇ ಅನೌನ್ಸ್‌ ಮಾಡಲು ಶರವಣ ಸ್ವಾಮೀಜಿ ತಯಾರು ಮಾಡಿಕೊಳ್ಳುತ್ತಿದ್ದಾರೆ.
ಟೈಟಲ್‌ ಲಾಂಚ್ ಮಾಡಿ ಮಾತನಾಡಿದ ನಿರ್ಮಾಪಕ, ಕಥೆಗಾರ ಹಾಗೂ ಸಂಗೀತ ನಿರ್ದೇಶಕ ಗಾನಶರವಣ ಸ್ವಾಮೀಜಿ, “ಸಂಗೀತ ಕಲೆ ನನಗೆ ರಕ್ತಗತವಾಗಿ ಬಂದಿದೆ. ಕಳೆದ ಐದಾರು ವರ್ಷದಿಂದಲೂ ಸಿನಿಮಾ ಮಾಡುವ ಯೋಜನೆ ಇತ್ತು.

ಮೂರು ವರ್ಷಗಳ ಹಿಂದೆ ಒಂದು ಕಥೆಯ ಹೊಳೆಯಿತು. ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆ ಇರುವ ಕಥೆ ಮಾಡಿದೆ. ಅದಕ್ಕೆ “ಕೃಷ್ಣರಾಜ-೪” ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದೇನೆ. ಸುಮಾರು 400ರಿಂದ 500 ಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗಲಿದೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆ. ಸ್ವಾಮೀಜಿ ಫಿಲಂಸಿಟಿಯನ್ನು ನಿರ್ಮಿಸಲು ಮೈಸೂರಿನಲ್ಲಿ ಈಗಾಗಲೇ 640 ಎಕರೆ ಜಾಗವನ್ನೂ ಸಹ ಖರೀದಿಸಲಾಗಿದೆ. ಅಲ್ಲೊಂದು ಅದ್ದೂರಿ ವೆಚ್ಚದ ಸೆಟ್ ಹಾಕಲಿದ್ದೇವೆ. ಅದು ಅಲ್ಲೇ ಶಾಶ್ವತವಾಗಿ ಉಳಿಯಲಿದೆ, ಇನ್ನು ಲಂಡನ್‌ನಲ್ಲಿ ನಮ್ಮ ಮ್ಯೂಸಿಕ್ ಸ್ಟುಡಿಯೋ ಇದ್ದು, ಅಲ್ಲೇ ಈ ಚಿತ್ರದ ಮ್ಯೂಸಿಕ್ ಕೆಲಸಗಳು ನಡೆಯಲಿದೆ. ಅಲ್ಲದೆ ಭಾರತದಲ್ಲಿ ಹೆಸರು ಮಾಡಿರುವ ನಿರ್ದೇಶಕರೊಬ್ಬರನ್ನು ಈ ಚಿತ್ರಕ್ಕೆ ಕರೆತರುವ ಪ್ಲಾನ್ ಇದೆ, ಅದು ಯಾರು ಅನ್ನೋದು ಇಷ್ಟರಲ್ಲೇ ಗೊತ್ತಾಗಲಿದೆ. ನಾಯಕನ ಪಾತ್ರಕ್ಕೂ ಕೂಡ ಹುಡುಕಾಟ ನಡೆಯುತ್ತಿದೆ. ಎಲ್ಲಾ ಭಾಷೆಯಲ್ಲೂ ಸ್ಥಳೀಯ ಕಲಾವಿದರನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಯೋಚನೆಯೂ ಇದೆ ಎಂಬುದು ಅವರ ಮಾತು.
ಶರವಣ ಸ್ವಾಮೀಜಿ ಅವರ ಲೀಗಲ್ ಅಡ್ವೈಜರ್‌ ಎಂ.ವಿ. ಅದಿತಿ ಅವರು ಸಹ ನಿರ್ಮಾಪಕಿಯಾಗಿ ಕೆಲಸ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಗಂಧದಗುಡಿಗೆ ಬೇಕಿತ್ತು ಗೌಡ್ರಂತಹ ಅನ್ನದಾತರು ಹೇಗಿರಲಿದೆ ಗೊತ್ತಾ `ಉಮಾಪತಿ ಫಿಲ್ಮ್ ಸಿಟಿ’ !?

  • ವಿಶಾಲಾಕ್ಷಿ

ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಷ್ ಸೇರಿದಂತೆ ಹಲವಾರು ದಿಗ್ಗಜರು ಗಂಧದಗುಡಿಯನ್ನು ಕಟ್ಟಿಬೆಳೆಸುವುದಕ್ಕೆ ಶ್ರಮಪಟ್ಟಿದ್ದಾರೆ. ನಾಯಕನಟರುಗಳೊಟ್ಟಿಗೆ ನಿರ್ದೇಶಕರು ಹಾಗೂ ನಿರ್ಮಾಪಕರು ಬೆವರುಸುರಿಸಿದ್ದಾರೆ. ಇವತ್ತು ಚಂದನವನದತ್ತ ಭಾರತೀಯ ಚಿತ್ರರಂಗ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ಕಾರಣ ಅಣ್ಣಾವ್ರಿಂದ ಹಿಡಿದು ಅಣ್ತಮ್ಮನವರೆಗಿನ ಪ್ಯಾಷನೇಟ್ ನಟರುಗಳು-ನಿರ್ದೇಶಕರು-ನಿರ್ಮಾಪಕರು ಸೇರಿದಂತೆ ಶ್ರದ್ದಾ-ಭಕ್ತಿಯಿಂದ ಕನ್ನಡ ಸಿನಿಮಾಗಾಗಿ ದುಡಿಯುವ ಪ್ರತಿಯೊಬ್ಬರು. ಕಾರಣಿಭೂತರಾಗುತ್ತಾರೆ. ಹೀಗೆ ಎಲ್ಲರ ಪರಿಶ್ರಮ ಹಾಗೂ ಸಮಕ್ಷಮದಿಂದ ಕನ್ನಡ ಚಿತ್ರರಂಗಕ್ಕೆ ಚಿನ್ನದ ಬೆಲೆ ಬರುತ್ತಿದೆ. ಪರಭಾಷಾ ಮಂದಿ ಮಾತ್ರವಲ್ಲ ಹೊರದೇಶದವರು ಕಣ್ಣರಳಿಸಿ ನೋಡುವಂತಾಗಿದೆ. ಇಂತಹ ಹೊತ್ತಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೌಡ್ರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕೈಹಾಕಿ ಅಚ್ಚರಿ ಮೂಡಿಸಿದ್ದಾರೆ. ಸ್ಯಾಂಡಲ್‌ವುಡ್ ಕೀರ್ತಿಪತಾಕೆಯನ್ನು ಎತ್ತಿಹಿಡಿಯುವಂತಹ ನಯಾ ಸಾಹಸಕ್ಕೆ ಮುಂದಾಗಿದ್ದಾರೆ.

ಕನ್ನಡ ಫಿಲ್ಮ್ ಇಂಡಸ್ಟ್ರಿ ಚಿಕ್ಕದು.. ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ.. ಹೊರದೇಶದಲ್ಲಿ ಅಲ್ಲಾ ಹೊರರಾಜ್ಯದಲ್ಲೇ ಬೇಡಿಕೆ ಇಲ್ಲಾ.. ಕೋಟಿ ಕೋಟಿ ಕಮಾಯಿ ಮಾಡುವ ತಾಕತ್ತಿಲ್ಲ.. ಹೀಗೆ ಮಾತನಾಡುತ್ತಿದ್ದವರೆಲ್ಲರ ಬಾಯಿಗೆ ಕೆಜಿಎಫ್ ಟೀಮ್ ಬೀಗ ಹಾಕಿದ್ದು ಎಲ್ಲರಿಗೂ ಗೊತ್ತೆಯಿದೆ. ಕನ್ನಡ ಸಿನಿಮಾದ ತಾಕತ್ತೇನು? ಗಂಧದಗುಡಿಯ ಪ್ರತಿಭೆಗಳಿಗಿರುವ ಶಕ್ತಿ ಎಂತಹದ್ದು ಎನ್ನುವುದು ಕೆಜಿಎಫ್ ಪ್ರೂ ಮಾಡಿ ತೋರಿಸಿತು. ಅನಂತರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಗೊಂಡ ಚಿತ್ರಗಳು ಕೂಡ ಹೊರರಾಜ್ಯದವರನ್ನು ಹಾಗೂ ಪರಭಾಷೆಯವರನ್ನ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದವು. ಇದೀಗ, `ಉಮಾಪತಿ ಫಿಲ್ಮ್ ಸಿಟಿ’ ನಿರ್ಮಾಣದ ಸುದ್ದಿ ಆಚೆ-ಈಚೆ-ನೀಚೆ-ಪೀಚೆ ಇರುವ ಸಿನಿಮಾ ಮಂದಿಯನ್ನು ಬೆಕ್ಕಸ ಬೆರಗಾಗಿಸಿದೆ. ಈ ಗಂಧದಗುಡಿಯ ಮಂದಿ ಸಾಮಾನ್ಯದವರಲ್ಲ ಬುಡು ಗುರು ಎನ್ನುವ ಡೈಲಾಗ್ ಎಲ್ಲರ ಬಾಯಲ್ಲೂ ಬರುವಂತಾಗಿದೆ.

ಅನ್ನದಾತರಾಗಿ ಗಂಧದಗುಡಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿರುವ ಉಮಾಪತಿ ಶ್ರೀನಿವಾಸ್ ಗೌಡ್ರು ಸಾಮಾನ್ಯದವರಲ್ಲ ಬಿಡಿ. ತಾವು ಎಷ್ಟು ಕೋಟಿಗೆ ಬದುಕ್ತೀವಿ ಅಂತ ಅವರು ಬಾಯ್ಬಿಟ್ಟು ಹೇಳಲ್ಲ ಅಷ್ಟೇ. ಅವರ ಮಹಾಕನಸುಗಳೇ ಕೋಟಿ ಕಥೆಯನ್ನ ಹೇಳುತ್ತವೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಬ್ಬುಲಿ' ಚಿತ್ರದ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಅನಂತರ ಚಾಲೆಂಜಿಂಗ್ ಚಕ್ರವರ್ತಿಯರಾಬರ್ಟ್’ ಚಿತ್ರಕ್ಕೆ ಕೋಟಿ ಕೋಟಿ ಬಂಡವಾಳ ಸುರಿದು ಕೋಟ್ಯಾನುಕೋಟಿ ಗಳಿಸಿದರು. ಈ ಮಧ್ಯೆ ರಾಷ್ಟ್ರಪ್ರಶಸ್ತಿ ಪಡೆಯುವಂತಹ ಒಂದಲ್ಲಾ.. ಎರಡಲ್ಲಾ..' ಸಿನಿಮಾ ಮಾಡಿ ಗೆದ್ದರು. ಈಗಮದಗಜ’ನಿಗೆ ಹಣ ಹೂಡಿಕೆ ಮಾಡಿದ್ದಾರೆ. `ಉಪಾಧ್ಯಕ್ಷ’ ಸಿನಿಮಾಗೆ ದುಡ್ಡು ಹಾಕಿ ಚಿಕ್ಕಣ್ಣನ್ನ ಹೀರೋ ಮಾಡೋದಕ್ಕೆ ಹೊರಟಿದ್ದಾರೆ. ಇಷ್ಟೆಲ್ಲದರ ನಡುವೆ ತಮ್ಮ ದಿವ್ಯಕನಸಿನ ಸಾಕಾರಕ್ಕಾಗಿ 175 ಕೋಟಿ ಇನ್ವೆಸ್ಟ್ ಮಾಡ್ತಿದ್ದಾರೆ.

ಫಿಲ್ಮ್ ಸಿಟಿ ನಿರ್ಮಾಣ ಮಾಡ್ಬೇಕು ಎನ್ನುವುದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ್ರ ಬಹುದೊಡ್ಡ ಕನಸು. ಆ ಕನಸಿನ ಸಾಕಾರಕ್ಕಾಗಿ ಬಹಳಷ್ಟು ದಿನದಿಂದ ಎದುರುನೋಡ್ತಿದ್ದರು. ಕೊನೆಗೂ ಆ ಮಹಾಕನಸಿಗೆ ಭದ್ರಬುನಾದಿ ಹಾಕಿದ್ದಾರೆ. ನಾಗರ ಪಂಚಮಿ ದಿನದಂದು `ಉಮಾಪತಿ ಫಿಲ್ಮ್ ಸಿಟಿ’ಯ ಅಂಗಳದಲ್ಲಿ ಭೂಮಿ ಪೂಜೆ ನೆರವೇರಿದೆ.
ಕನಕಪುರ ರಸ್ತೆಯ ರವಿಶಂಕರ್ ಆಶ್ರಮದ ಬಳಿ ೨೫ ಎಕರೆ ಜಮೀನಿನಲ್ಲಿ ಭರ್ತಿ ೧೭೫ ಕೋಟಿ ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಾಣಗೊಳ್ಳಲಿದೆ. ಈ ವರ್ಷದ ಕೊನೆಯಲ್ಲಿ ಸ್ಟುಡಿಯೋ ಕೆಲಸಕಾರ್ಯ ಆರಂಭ ಮಾಡುವುದಕ್ಕೆ ಪ್ಲ್ಯಾನ್ ರೂಪಿಸಿದ್ದಾರೆ. ರಸ್ತೆಬದಿಗಳು, ಹಳ್ಳಿಗಳು, ರೈಲ್ವೆ ಸ್ಟೇಷನ್, ಆಸ್ಪಿಟಲ್, ಬಂಗ್ಲೋ ನಿರ್ಮಾಣ ಮಾಡಲಾಗುತ್ತೆ.
ಒಂದು ಸಿನಿಮಾದ ಮೇಜರ್ ಪೋರ್ಷನ್ಸ್ ಚಿತ್ರೀಕರಣಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆ ಉಮಾಪತಿ ಮಿನಿ ಫಿಲ್ಮ್ ಸಿಟಿಯಲ್ಲಿ ಮಾಡಲಾಗುತ್ತದೆ.

ರಾಮೋಜಿ ಫಿಲ್ಮ್ ಸಿಟಿ ನೋಡಿ ಪ್ರೇರಣೆಗೊಂಡಿದ್ದ ಉಮಾಪತಿಯವರು ರಾಮೋಜಿ ಫಿಲ್ಮ್ ಸಿಟಿಯಷ್ಟು ದೊಡ್ಡದಾಗಿ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗದಿದ್ದರೂ ಕೂಡ ಚಿಕ್ಕದಾಗಿಯಾದರೂ ಫಿಲ್ಮ್ ಸಿಟಿ ಮಾಡ್ಬೇಕು ಎಂದುಕೊಂಡಿದ್ದರು. ಕೊನೆಗೂ ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ನಮ್ಮ ಸ್ಯಾಂಡಲ್‌ವುಡ್ ಮಂದಿ ಚಿತ್ರೀಕರಣಕ್ಕಾಗಿ ಹೈದ್ರಬಾದ್‌ಗೆ ಹೋಗುವುದನ್ನ `ಉಮಾಪತಿ ಫಿಲ್ಮ್ ಸಿಟಿ’ ತಪ್ಪಿಸಲಿದೆ. ಎಲ್ಲಾ ಅಂದುಕೊಂಡಂಗೆ ಆದರೆ ೨೦೨೩ರ ಹೊತ್ತಿಗೆ ಕನಕಪುರದ ಹತ್ತಿರ ಉಮಾಪತಿ ಫಿಲ್ಮ್ ಸಿಟಿ ತಲೆಎತ್ತಲಿದೆ. ಗಂಧದಗುಡಿ ಮಂದಿಯ ಸಿನಿಮಾ ಕನಸಿಗೆ ಉಮಾಪತಿ ಸ್ಟುಡಿಯೋ ಜೀವತುಂಬಲಿದೆ. ವಿಶೇಷ ಅಂದರೆ ಗಂಧದಗುಡಿಗೆ ಸರ್ಕಾರ ಫಿಲ್ಮ್ ಸಿಟಿ ನಿರ್ಮಾಣ ಮಾಡಿಕೊಡುವ ಮೊದಲೇ ಅನ್ನದಾತರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕೈಹಾಕಿರುವುದು ಹೆಮ್ಮೆಯ ವಿಷ್ಯ. ಹೀಗಾಗಿ, ಉಮಾಪತಿಯವರನ್ನು ಗಾಂಧಿನಗರದ ಮಂದಿ ಮರೆಯೋ ಹಂಗಿಲ್ಲ. ತಲೆ ಮೇಲೆ ಹೊತ್ತು ಮೆರೆಸುವುದನ್ನು ನಿಲ್ಲಿಸೋ ಹಾಗಿಲ್ಲ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕೆಜಿಎಫ್ -2 ಮತ್ತು ಆರ್ ಆರ್ ಆರ್ ಬಳಿಕ ‘ಅದ್ಧೂರಿ’ ಜೋಡಿ ಮೇಲೆ ಲಹರಿ ಕಣ್ಣು; ದುಬಾರಿ ಮೊತ್ತಕ್ಕೆ ಆಡಿಯೋ ರೈಟ್ಸ್ !

  • ವಿಶಾಲಾಕ್ಷಿ

ಇಡೀ ಜಗತ್ತು ಕಣ್ಣರಳಿಸಿ ನೋಡುತ್ತಿರುವ ಸಿನಿಮಾಗಳಿಗೆ ಕೋಟಿ ಕೋಟಿ ಸುರಿದು ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಕೊಂಡುಕೊಂಡಿದೆ.‌ ಕನ್ನಡದ ಹೆಮ್ಮೆಯ‌ ಸಿನಿಮಾ‌ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ 7.6 ಕೋಟಿ‌ ಕೊಟ್ಟು ಆಡಿಯೋ ರೈಟ್ಸ್ ಪಡೆದ ಲಹರಿ ಸಂಸ್ಥೆ, ಬರೋಬ್ಬರಿ‌ 25 ಕೋಟಿ ಕೊಟ್ಟು ರಾಜಮೌಳಿಯ ಆರ್ ಆರ್ ಆರ್ ಚಿತ್ರದ ಹಾಡುಗಳ ಹಕ್ಕನ್ನು ತಮ್ಮ ಪಾಲಾಗಿಸಿಕೊಂಡಿತ್ತು. ಈ ಮೂಲಕ ಮ್ಯೂಸಿಕ್ ಲೋಕದಲ್ಲಿ ನಯಾ ಮೇನಿಯಾ ಸೃಷ್ಟಿಸಿಕೊಂಡಿತ್ತು. ಇದೀಗ ಅದ್ಧೂರಿ ಜೋಡಿಯ ಅಪ್ ಕಮ್ಮಿಂಗ್ ಸಿನಿಮಾದ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಸಂಗೀತ ಲೋಕದಲ್ಲಿ ಹಾಗೂ ಗಾಂಧಿನಗರದಲ್ಲಿ ಸಂಚಲನ‌ ಸೃಷ್ಟಿಸಿದೆ.

ಅದ್ಧೂರಿ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡ್ತಿರುವುದು ನಿಮಗೆಲ್ಲ ಗೊತ್ತೆಯಿದೆ.‌ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಎ.ಪಿ. ಅರ್ಜುನ್ ಎರಡನೇ ಬಾರಿಗೆ ಜೊತೆಯಾಗಿದ್ದಾರೆ. ಒಂಭತ್ತು ವರ್ಷಗಳ ನಂತರ ಮತ್ತೆ ಸೇರಿರುವ ಈ‌ ಡೆಡ್ಲಿ ಕಾಂಬೋ ಮೇಲೆ ನಿರೀಕ್ಷೆ ಹೆಚ್ಚಿದೆ.‌ ಅದಕ್ಕೆ ಕನ್ನಡ ಹಿಡಿದಂತೆ ಲಹರಿ ಮ್ಯೂಸಿಕ್‌ ಸಂಸ್ಥೆ ಅದ್ಧೂರಿ ಜುಗಲ್ ಬಂಧಿಯ ಸಿನಿಮಾದ ಆಡಿಯೋ ಹಕ್ಕುಗಳನ್ನು‌ ದುಬಾರಿ ಮೊತ್ತಕ್ಕೆ ಖರೀದಿಸಿದೆಯಂತೆ. ಮ್ಯೂಸಿಕ್ ಮಾಂತ್ರಿಕ ಆಕ್ಷನ್ ಪ್ರಿನ್ಸ್ ಚಿತ್ರಕ್ಕೆ ಹಾಡುಗಳನ್ನು ಹೊಸೆಯುವ ಮುನ್ನವೇ ಲಹರಿ ಸಂಸ್ಥೆ ಆಡಿಯೋ ರೈಟ್ಸ್ ನ ಮುಡಿಗೇರಿಸಿಕೊಂಡಿದೆ ಅಂದರೆ ಲೆಕ್ಕಹಾಕಿ ಅದ್ಧೂರಿ ಜೋಡಿಯ ಹವಾ ಹೆಂಗೈತೆ ಅಂತ ನೀವೆ ಲೆಕ್ಕ ಹಾಕಬೇಕು.

ಆಕ್ಷನ್ ಪ್ರಿನ್ಸ್ ಹಾಗೂ ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಮಾರ್ಟಿನ್‌ ಹೆಸರಲ್ಲಿ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆಯಾದರೂ ಇನ್ನೂ ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಿಲ್ಲ. ಚಿತ್ರದ ನಟಿ ಸೇರಿದಂತೆ ತಾರಾಬಳಗದ ಆಯ್ಕೆಯಾಗಬೇಕಿದೆ. ಟಾಲಿವುಡ್ ಜನಪ್ರಿಯ ಮ್ಯೂಸಿಕ್ ಡೈರೆಕ್ಟರ್ ಅದ್ದೂರಿ ಜೋಡಿಯ ಎರಡನೇ ಚಿತ್ರಕ್ಕೆ ಮ್ಯೂಸಿಕ್ ಬಾರಿಸಲಿದ್ದಾರಂತೆ. ಅಷ್ಟಕ್ಕೂ, ಆ ಸಂಗೀತ ಮಾಂತ್ರಿಕ ಯಾರು ಎನ್ನುವ ಸುಳಿವು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.‌

ಈಗಾಗಲೇ,ಬಹದ್ದೂರ್ ಗಂಡು ಮೈಕೊಡವಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಇಂಡಿಯಾದ ಜನಪ್ರಿಯ ಫೈಟ್ ಮಾಸ್ಟರ್ ಗಳಾದ ರಾಮ್- ಲಕ್ಷ್ಮಣ್ ಪೊಗರು ಹೈದನಿಗೆ ಆಕ್ಷನ್ ಕೊರಿಯಾಗ್ರಫಿ ಮಾಡ್ತಿದ್ದಾರೆ. ‌ಆರಂಭಿಕ ಹಂತದಲ್ಲೇ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಧ್ರುವ ಅಭಿನಯದ‌ ಐದನೇ ಚಿತ್ರ ಅದ್ದೂರಿಯಾಗಿ ತಯ್ಯಾರಾಗಲಿದೆ.‌ ಬೆಳ್ಳಿಪರದೆ ಬೆಚ್ಚುವಂತೆ ದುಬಾರಿ ಹುಡುಗನ ಐದನೇ ಚಿತ್ರ ಮೂಡಿಬರಲಿದೆ. ಅಂದಹಾಗೆ, ಆಗಸ್ಟ್‌ ೧೫ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕುಲವಧು ವಚನಾಗೆ ಸೀಮಂತ ಶಾಸ್ತ್ರ; ಆನಂದ ಸಾಗರದಲ್ಲಿ ಮಿಸ್ಟರ್ & ಮಿಸಸ್ ರಂಗೇಗೌಡ ಕುಟುಂಬ!

“ಬರ್ತಾನವ್ವ ಭೂಪ.. ಬರ್ತಾನವ್ವ ಭೂಪ.. ಈ ಬಂಗಾರಿ ಮಡಿಲಿನಲಿ.. ಮುತ್ತು ರತ್ನದಂತೆ.. ಬೆಳ್ಳಿ ಬೊಂಬೆಯಂತೆ… ಮಿಸ್ಟರ್ & ಮಿಸಸ್ ರಂಗೇಗೌಡ ವಂಶದಲ್ಲಿ… ಯಸ್, ಮಿಸ್ಟರ್ & ಮಿಸಸ್ ರಂಗೇಗೌಡರ ಕುಟುಂಬದಲ್ಲಿ ಸಂತೋಷ-ಸಂಭ್ರಮ ಮನೆ ಮಾಡಿದೆ. ಆನಂದ ಸಾಗರದಲ್ಲಿ ಮಿಂದೇಳುತ್ತಿರುವ ಎರಡು ಮನೆಯ ಕುಟುಂಬಸ್ತರು ಕರುಳ ಕುಡಿಯನ್ನು ಸ್ವಾಗತಿಸುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಕುಲವಧು ವಚನಾ ಖ್ಯಾತಿಯ ಅಮೃತಾಳ ಆಸೆಯಂತೆ ಸೀಮಂತ ಕಾರ್ಯವನ್ನು ನಮ್ಮನೆ ಯುವರಾಣಿ ಖ್ಯಾತಿಯ ಸಾಕೇತ್ ಅದ್ದೂರಿಯಾಗಿ ನೆರವೇರಿಸಿದ್ದಾರೆ.

ಖುಷಿ ಖುಷಿಯಾಗಿ-ಶಾಸ್ತ್ರೋಕ್ತವಾಗಿ ನಡೆದ ಅಮೃತಾಳ ಸೀಮಂತ ಕಾರ್ಯದ ಪೋಟೋವನ್ನು ನೀವು ಒಮ್ಮೆ ನೋಡ್ಲೆಬೇಕು. ಯಾಕಂದ್ರೆ, ಕುಲವಧು ವಚನಾ ದೃಷ್ಟಿ ಬೊಂಬೆಯಂತೆ ಕಂಗೊಳಿಸುತ್ತಿದ್ದಾರೆ. ರೆಡ್ ಅಂಡ್ ಗೋಲ್ಡನ್ ಕಲರ್ ಕಾಂಬಿನೇಷನ್ ಸೀರೆಯುಟ್ಟು ಸೀಮಂತಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಪತ್ನಿ ಅಮೃತಾ ಅಚ್ಚರಿಪಡುವಂತೆ ಸೀಮಂತದ ವೇದಿಕೆಯನ್ನ ರಾಘು ಡೆಕೋರೇಟ್ ಮಾಡಿಸಿದ್ದರು. ಮನೆ ಬೆಳಗಲು ಬಂದಿರುವ ಪತ್ನಿ ಅಮೃತಾಳ ಸೀಮಂತ ಕಾರ್ಯವನ್ನು ಗ್ರ್ಯಾಂಡ್ ಆಗಿ ಆಚರಿಸಿದರು. ಪತಿ ರಾಘವೇಂದ್ರ ಕೊಟ್ಟ ಸಪ್ರೈಸ್‌ಗೆ ಥ್ರಿಲ್ ಆದ ಅಮೃತಾ ಸೀಮಂತದ ಶುಭ ಕ್ಷಣವನ್ನು ಪದಗಳಲ್ಲಿ ಕಟ್ಟಿಕೊಟ್ಟರು.
“ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು, ಕನಸುಗಳು ಇರುತ್ತದೆ. ಹಾಗೆ ನನ್ನ ಬಹುದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ. ಇದಕ್ಕೆ ಮೊದಲ ಕಾರಣ ನನ್ನ ಜೀವ ಅಂದರೆ ಪತಿ ರಾಘವೇಂದ್ರ ಅವರು. ನಂತರ ಅತ್ತೆ, ಮಾವ, ಅತ್ತಿಗೆ, ಅಣ್ಣಾ, ಅಮ್ಮ, ಅಪ್ಪ, ಅಕ್ಕ, ಭಾವ, ಸ್ನೇಹಿತರು ಹಾಗೂ ನನ್ನ ಆತ್ಮೀಯರು” ಅಂತ ಅಮೃತಾ ತಮ್ಮ ಸೋಷಿಯಲ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.


ಕಿರುತೆರೆ ಪ್ರೇಕ್ಷಕರಿಗೆ ಮಿಸ್ಟರ್ & ಮಿಸಸ್ ರಂಗೇಗೌಡ ಖ್ಯಾತಿಯ ಜೋಡಿಯ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ಗೊತ್ತಿರುತ್ತೆ. ಸೀರಿಯಲ್ ನೋಡದೇ ಇರುವ ಪ್ರೇಕ್ಷಕರಿಗೆ ಈ ಜೋಡಿಯ ಬಗ್ಗೆ ಹೆಚ್ಚಿನ ಕಥೆ ಗೊತ್ತಿರುವುದಿಲ್ಲ. ಹೀಗಾಗಿ, ಮೊದಲು ಈ ಕ್ಯೂಟ್ ಕಪಲ್ಸ್ ಬಗ್ಗೆ ಶಾರ್ಟ್ ಅಂಡ್ ಸ್ವೀಟಾಗಿ ತಿಳಿದುಕೊಂಡು ಬಿಡೋಣ. ಬಿಗ್‌ಸ್ಕ್ರೀನ್ ನಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಹೇಗೋ ಹಾಗೆಯೇ ಸ್ಮಾಲ್‌ಸ್ಕ್ರೀನ್ ನಲ್ಲಿ ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ್ರು ಭಾರೀ ಫೇಮಸ್.. ಇದೇ ಹೆಸರಿನ ಸೀರಿಯಲ್ ಮೂಲಕ ಗಂಡ-ಹೆಂಡತಿಯಾಗಿ ಸ್ಮಾಲ್‌ಸ್ಕ್ರೀನ್‌ನಲ್ಲಿ ಮಿಂಚಿದ ಅಮೃತ ಹಾಗೂ ರಾಘವೇಂದ್ರ ಗೌಡ ರಿಯಲ್ ಲೈಫ್‌ನಲ್ಲೂ ಜೋಡಿಯಾದರು. ೨೦೧೯ರ ಮೇ ೧೩ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ತಮ್ಮ ಎರಡನೇ ವರ್ಷದ ಆನಿವರ್ಸರಿಯಂದು ನಟಿ ಅಮೃತಾ ರಾಮಮೂರ್ತಿ ಹಾಗೂ ರಾಘವೇಂದ್ರ ಗೌಡ ಅವರು ಸಿಹಿಸುದ್ದಿ ಕೊಟ್ಟಿದ್ದರು. ಇಲ್ಲಿವರೆಗೂ ನಾವಿಬ್ಬರಿದ್ದೆವು ಈಗ ಮೂವರಾಗಿದ್ದೇವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು. ಅಂದೇ ಈ ಜೋಡಿಗೆ ಭರಪೂರ ಶುಭಾಷಯಗಳು ಹರಿದು ಬಂದಿತ್ತು. ಪತ್ನಿ ಅಮೃತಾಳನ್ನು ಜೋಪಾನವಾಗಿ ನೋಡಿಕೊಳ್ಳಿ ರಂಗೇಗೌಡ್ರೇ ಅಂತ ಫ್ಯಾನ್ಸ್ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದರು. ಅದರಂತೇ, ತನ್ನ ಪಾಲಿನ ಹಾಗೂ ತನ್ನ ಮನೆಯ ಐಶ್ವರ್ಯ ಅಮೃತಾ ರಾಮಮೂರ್ತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಿದ್ದಾರೆ.

ಅದ್ದೂರಿಯಾಗಿ ಸೀಮಂತ ಮಾಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗಂಡಾಗಲೀ ಹೆಣ್ಣಾಗಲಿ ನನ್ನ ಮಗು ನನ್ನ ಹೆಂಡ್ತಿ ಆರೋಗ್ಯವಾಗಿರ‍್ಬೇಕು ಅಂತ ರಾಘು ಆಸೆ ಪಡ್ತಿದ್ದಾರೆ. ಅವರ ಆಸೆಯಂತೆ ಎಲ್ಲವೂ ನೆರವೇರಲಿ.
ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲವ್ ಮಾಕ್ಟೇಲ್ 2 ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಕೃಷ್ಣ ಮಿಲನ

ಲವ್ ಮಾಕ್ಟೇಲ್ ಮೂಲಕ ಜೋರು ಸುದ್ದಿ ಮಾಡಿದ್ದ ಬ್ಯೂಟಿಫುಲ್ ಸ್ಟಾರ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು, ಅವರು ಮದ್ವೆಯಾಗಿದ್ದು ದೊಡ್ಡ ಸುದ್ದಿಯೂ ಗೊತ್ತು. ಹಾಗಾದರೆ, ಹೊಸ ಲೈಫಲ್ಲಿ ಸಿಹಿ ಸುದ್ದಿ ಏನಾದ್ರೂ ಕೊಡ್ತಾ ಇದಾರಾ? ಈ ಪ್ರಶ್ನೆ ಸಹಜ. ಯಾಕಂದರೆ, ಇತ್ತೀಚೆಗಷ್ಟೇ ಮದ್ವೆ ಆಗಿದ್ದ ಜೋಡಿ ಆಗಿದ್ದರಿಂದ ಸಿಹಿ ಸುದ್ದಿ ನಿರೀಕ್ಷೆ ಸಹಜವೇ. ಆದರೆ, ಅವರೀಗ ಹೊಸ ಸುದ್ದಿ ಹಂಚಿಕೊಂಡಿದ್ದಾರೆ.


ಅದು ‘ಲವ್ ಮಾಕ್ಟೇಲ್ 2’ ಸಿನಿಮಾ ಸುದ್ದಿ. ಈ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ವಿಷಯವನ್ನ ಸ್ವತಃ ಡಾರ್ಲಿಂಗ್ ಕೃಷ್ಣ ಅವರೇ ತಮ್ಮ ಮುಖಪುಟದಲ್ಲಿ ಹಂಚಿಕೊಂಡಿದ್ದಾರೆ.

‘ಲವ್ ಮಾಕ್‌ಟೇಲ್ 2′ ಚಿತ್ರದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ, ನಿದ್ದೆಯಿಲ್ಲದ ರಾತ್ರಿಗಳಲ್ಲಿ ಹೋರಾಡಿಯೇ ನಾವು ಒಂದೊಳ್ಳೆಯ ಚಿತ್ರವನ್ನು ನೀಡಲು ಪ್ರಯತ್ನಿಸಿದ್ದೇವೆ. ಈ ವೇಳೆ ಮಿಲನ ನಾಗರಾಜ್ ಅವರೊಂದಿಗೆ ಅಂಥದ್ದೊಂದು ಅದ್ಭುತ ಜರ್ನಿ ಕೂಡ ಮಾಡಿದ್ದೇನೆ’ ಎಂದು ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ.

ಕಳೆದ ಲಾಕ್ಡೌನ್ ವೇಳೆ ಲವ್ ಮಾಕ್ಟೇಲ್ ಸಿನಿಮಾ ತೆರೆಕಂಡಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಅದೇ ಯಶಸ್ಸಿನಲ್ಲಿದ್ದ ಜೋಡಿ ‘ ಲವ್ ಮಾಕ್ಟೇಲ್ 2’ ಶುರು ಮಾಡಿತ್ತು. ಈಗ ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿದ ಖುಷಿಯಲ್ಲಿದ್ದಾರೆ.
ಅದೇನೆ ಇರಲಿ, ಸಕ್ಸಸ್ ಸಿನಿಮಾ ಕೊಟ್ಟಿರುವ ಈ ಜೋಡಿ ಮತ್ತೆ ನಿರೀಕ್ಷೆ ಹುಟ್ಟಿಸಿದೆ. ಫ್ಯಾನ್ಸ್ ಕೂಡ ಸಿನಿಮಾ ಎದುರು ನೋಡುತ್ತಿದ್ದು, ಚಿತ್ರಕ್ಕೆ ಹಾಗೂ ಶ್ರಮದಿಂದ ಸಿನಿಮಾ ಮಾಡಿರೋ ಈ ಜೋಡಿಗೆ ಯಶಸ್ಸು ಸಿಗಲೆಂದು ಸಿನಿಲಹರಿ ಆಶಿಸುತ್ತದೆ.

Categories
ಸಿನಿ ಸುದ್ದಿ

ನಾನ್‌ ಒಳ್ಳೇವ್ನೆ ನನ್‌ ಟೈಮೇ ಸರಿ ಇಲ್ಲ! ಅಪ್ಪು ಹಾಡಿದ್ರು, ಜನ ಮೆಚ್ಚಿದ್ರು!! ಗ್ಯಾಂಗ್‌ ಕಟ್ಟಿಕೊಂಡೋರ ಹಾಡಿಗೆ ಭರಪೂರ ಮೆಚ್ಚುಗೆ…

ಏನ್ಮಾಡ್ಲಿ ಹೇಳಿ ಈಗ, ನನಗಿಲ್ಲ ಚೂರು ಮೂಡು… ಯಾಕೆ ಹೀಗೆ ಬದುಕು ಆಯ್ತು. ಕಾಣದೇ ಹೋದೆನಾ… ಬದುಕಿನಲ್ಲಿ ಖುಷಿಯೇ ಇಲ್ಲ. ಹೇಗೋ ಈ ಜೀವನ… ಹಿಂಗೆಲ್ಲಾ ಯಾಕಾಯ್ತೋ, ಈ ದುನಿಯಾ… ಅದೇಕೋ ನಮಗಿಲ್ಲ.. ಇದು ಖಾಲಿ ಹಾಳೆ ಜೀವನ…ʼ ಎನ್ನುವ ಪದಗಳಲ್ಲಿ ಅರ್ಥವಿದೆ. ಕಾಲೇಜ್‌ ಸ್ಟುಡೆಂಟ್ಸ್‌ಗೆ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಗೀತೆ ಇದು.

ಯಾರ್‌ ಏನಾರ ಅಂದ್‌ಕೊಳ್ಲಿ. ಒಮ್ಮೊಮ್ಮೆ ಸ್ಟಾರ್‌ ಸಿನಿಮಾದ ಹಾಡು ಕೂಡ ಗುನುಗೋ ಥರಾ ಇರಲ್ಲ. ಅಷ್ಟೇ ಅಲ್ಲ, ಒಮ್ಮೊಮ್ಮೆ ಸ್ಟಾರ್‌ ಅಲ್ಲದವರ ಸಿನಿಮಾ ಹಾಡಂತೂ ಗುನುಗಲೇಬೇಕು ಅಂತೆನಿಸದೇ ಇರಲ್ಲ…! ಇದೇನಪ್ಪಾ ಹೊಸಬರ ಸಿನಿಮಾದ ಹಾಡು ಅಷ್ಟೊಂದ್‌ ಚೆಂದಾಗೈತಾ? ಹೀಗೊಂದು ಪ್ರಶ್ನೆ ಕಾಡಬಹುದು. ನಿಜ ಹೇಳೋದಾದರೆ, ಹೊಸಬರ ಸಿನಿಮಾದ ಹಾಡು ಚೆನ್ನಾಗೈತೆ. ಬರೆದಿರೋ ಸಾಹಿತ್ಯವೂ ಈಗಿನ ಟ್ರೆಂಡ್‌ಗೆ ತಕ್ಕಂತೆ ಐತೆ. ಅದರಲ್ಲೂ ಅಂತದ್ದೊಂದು ಹಾಡಿಗೆ ಧ್ವನಿಯಾಗಿರೋರ ಹಾಡು ಇಷ್ಟವಾಗದೇ ಇರುತ್ತಾ? ಹೌದು, ಹೊಸಬರ “ಗಜಾನನ ಗ್ಯಾಂಗ್‌” ಸಿನಿಮಾದ ವಿಡಿಯೊ ಸಾಂಗ್‌ವೊಂದು ಆನಂದ್‌ ಆಡಿಯೊ ಯುಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆಗಿದೆ. ಅ ಹಾಡಿಗೆ ಧ್ವನಿಯಾಗಿರೋದು ಪವರ್‌ ಸ್ಟಾರ್‌ ಪುನೀತ್‌ರಾಜಕುಮಾರ್.‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಳ್ಳೆಯ ವೀಕ್ಷಣೆ ಪಡೆದಿದ್ದು, ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ನಿರ್ದೇಶ ಅಭಿಷೇಕ್‌ ಶೆಟ್ಟಿ ಬರೆದ ” ನಾನ್‌ ಒಳ್ಳೇವ್ನೆ… ನನ್‌ ಟೈಮೇ ಸರಿ ಇಲ್ಲ… ಟೈಮ್‌ ಸರಿ ಐತೆ.. ಜೊತೆಗಿರೋರೇ ನೆಟ್ಟಗಿಲ್ಲ…” ಎಂದು ಶುರುವಾಗುವ ಈ ಹಾಡು ಸದ್ಯ ವೈರಲ್‌ ಆಗುತ್ತಿದೆ. ಈ ಹಾಡು ಕೇಳಿದವರಿಗೆ ಮತ್ತೆ ಮತ್ತೆ ಕೇಳಬೇಕು ಎನಿಸುವುದು ನಿಜ. ಇದೊಂದು ಪಕ್ಕಾ ಕಾಲೇಜ್‌ ಹುಡುಗರ ಸಾಂಗು. ಅಷ್ಟೇ ಅಲ್ಲ, ಪಡ್ಡೆ ಹೈಕ್ಳು ಕೂಡ ಒಂದೊಮ್ಮೆ ಕೇಳಿದಂರಂತೂ ಗುನುಗೋದು ದಿಟ. ಪುನೀತ್‌ ಅವರಿಂದಲೇ ಹಾಡಿಸಿರುವುದರಿಂದ ಹಾಡಿಗೊಂದು ಮೆರುಗು ಸಿಕ್ಕಿದೆ. “ಯಾಕೆ ಹೀಗೆ ಬದುಕು ಆಯ್ತು. ಕಾಣದೇ ಹೋದೆನಾ… ಬದುಕಿನಲ್ಲಿ ಖುಷಿಯೇ ಇಲ್ಲ. ಹೇಗೋ ಈ ಜೀವನ… ಹಿಂಗೆಲ್ಲಾ ಯಾಕಾಯ್ತೋ, ಈ ದುನಿಯಾ… ಅದೇಕೋ ನಮಗಿಲ್ಲ.. ಇದು ಖಾಲಿ ಹಾಳೆ ಜೀವನ…ʼ ಎನ್ನುವ ಪದಗಳಲ್ಲಿ ಅರ್ಥವಿದೆ. ಕಾಲೇಜ್‌ ಸ್ಟುಡೆಂಟ್ಸ್‌ಗೆ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಗೀತೆ ಇದು.

ಈ ಗೀತೆಗೆ ರಾಗ ಸಂಯೋಜನೆ ಕೂಡ ಸೊಗಸಾಗಿದೆ. ಅಷ್ಟೇ ಅಂದವಾಗಿಯೇ ಚಿತ್ರೀಕರಿಸಲಾಗಿದೆ. ಒಂದು ಕಾಲೇಜ್‌ ಹುಡುಗನ ಲೈಫ್‌ ಸ್ಟೋರಿಯನ್ನು ಹೇಳುವಂತಹ ಗೀತೆ ಇದಾಗಿದ್ದು, ಸದ್ಯ ಜೋರು ಸದ್ದು ಮಾಡುತ್ತಿದೆ.
ಬೃಂದಾವನ್‌ ಎಂಟರ್‌ಪ್ರೈಸಸ್‌ ಮತ್ತು ಅದ್ವಿ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಮೂಡಿಬಂದಿರುವ ಈ ಸಿನಿಮಾ ಸದ್ಯ ರಿಲೀಸ್‌ಗೆ ಸಜ್ಜಾಗಿದೆ. ಈಗಾಗಲೇ “ನಮ್‌ ಗಣಿ ಬಿಕಾಂ ಪಾಸ್‌” ಸಿನಿಮಾ ನಿರ್ಮಿಸಿದ್ದ ನಿರ್ಮಾಪಕ ನಾಗೇಶ್‌ ಕುಮಾರ್. ಯು.ಎಸ್.‌ ಅವರು ಆ ಚಿತ್ರತಂಡದ ಮೇಲೆ ಭರವಸೆ ಇಟ್ಟು ಪುನಃ “ಗಜಾನನ ಗ್ಯಾಂಗ್‌” ಸಿನಿಮಾ ಮಾಡಿದ್ದಾರೆ.

ಇವರೊಂದಿಗೆ ಪ್ರಶಾಂತ್ ಕುಮಾರ್ ಶೆಟ್ಟಿ ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಅದೇ ತಂಡ ಕಟ್ಟಿಕೊಂಡು ಕೆಲಸ ಮಾಡಿರುವ ಅಭಿಷೇಕ್‌ ಶೆಟ್ಟಿ, ಒಂದೊಳ್ಳೆಯ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ನಟನೆ ಹಾಗೂ ನಿರ್ದೇಶನ‌ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆ ಉಳಿಸಿಕೊಂಡಿರುವ ನಿರ್ದೇಶಕ ಅಭಿಷೇಕ್ ಶೆಟ್ಟಿ “ಗಜಾನನ ಗ್ಯಾಂಗ್‌” ಸಿನಿಮಾವನ್ನು ತುಂಬಾ ಸೊಗಸಾಗಿಯೇ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಶ್ರೀ ಹೀರೋ ಆಗಿದ್ದರೆ, ಅವರಿಗೆ ಅದಿತಿ ಪ್ರಭುದೇವ ನಾಯಕಿ. ಇನ್ನು, ಅಪ್ಪು ಹಾಡಿರುವ ಗೀತೆಗೆ ಪ್ರದ್ಯೋತ್ನ ರಾಗ ಸಂಯೋಜನೆ ಇದೆ.
ಈ ಹಿಂದೆ “ನಮ್‌ ಗಣಿ ಬಿಕಾಂ ಪಾಸ್” ಸಿನಿಮಾ ಒಂದೊಳ್ಳೆಯ ಸಂದೇಶ ಹೊತ್ತು ಬಂದಿತ್ತು. ಒಳ್ಳೇ ಹೆಸರು ತಂದು ಕೊಟ್ಟಿದ್ದರಿಂದ ನಿರ್ಮಾಪಕ ನಾಗೇಶ್‌ ಕುಮಾರ್‌ ಅವರಿಗೂ ಆ ಚಿತ್ರತಂಡದ ಮೇಲೆ ಪ್ರೀತಿ ಮತ್ತು ನಂಬಿಕೆ ಇತ್ತು. ಹಾಗಾಗಿ, ಅದೇ ತಂಡದೊಂದಿಗೆ “ಗಜಾನನ ಗ್ಯಾಂಗ್‌” ಸಿನಿಮಾ ಮಾಡಿದ್ದಾರೆ. ಆರಂಭದಿಂದಲೂ ಕ್ರೇಜ್‌ ಹುಟ್ಟಿಸಿದ್ದ ”ಗಜಾನನ ಅಂಡ್‌ ಗ್ಯಾಂಗ್‌” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು.

ಅಷ್ಟೇ ಒಳ್ಳೆಯ ತಂಡ ಕಟ್ಟಿಕೊಂಡ ನಿರ್ದೇಶಕ ಅಭಿಷೇಕ್‌ ಶೆಟ್ಟಿ, ಚಿತ್ರದ ಮೊದಲ ಲುಕ್‌ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ಕುತೂಹಲ ಮೂಡಿಸಿದ್ದರು. ಈಗ “ನಾನ್‌ ಒಳೇವ್ನೇ, ನನ್‌ ಟೈಮೇ ಸರಿ ಇಲ್ಲ…” ಹಾಡೊಂದನ್ನು ಹೊರಬಿಟ್ಟು ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದಾರೆ. ಈ ಹೊಸಬರ “ಗ್ಯಾಂಗ್‌” ಈಗ ಕಂಪ್ಲೀಟ್‌ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾ ಮಾಡಿರುವ ನಿರ್ದೇಶಕರು, ಯೂಥ್‌ ಟಾರ್ಗೆಟ್‌ ಮಾಡಿಯೇ ಸಿನಿಮಾ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಈ ಚಿತ್ರ ಇಷ್ಟವಾಗುತ್ತೆ ಎಂಬ ನಂಬಿಕೆಯೂ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಹಿಂದೆ ಪ್ರೇಮಿಗಳ ದಿನದಂದು ಬಿಡುಗಡೆಯಾದ “ಲವ್ ಡೇ ” ಸಾಂಗ್ ಕೂಡ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಸದ್ಯ ಅಭಿಷೇಕ್‌ ಅವರ ಗ್ಯಾಂಗ್‌ ಹೇಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. “ಬಿಕಾಂ ಪಾಸ್‌” ಮಾಡಿರುವ ಹುಡುಗರು ಈಗ “ಗ್ಯಾಂಗ್‌” ಮೂಲಕವೇ ರ್ಯಾಂಕ್‌ ಬರಲಿ ಅನ್ನೋದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಡಿಬಾಸ್‌ 24! ದರ್ಶನ್‌ ಗಾಂಧಿನಗರಕ್ಕೆ ಕಾಲಿಟ್ಟು ‌ಯಶಸ್ವಿ ಇಪ್ಪತ್ನಾಲ್ಕು ವರ್ಷ- ಗೆಳೆಯರಿಂದ ಹರಿದು ಬಂದ ಶುಭಹಾರೈಕೆ

ಸಿನಿಮಾ ರಂಗದಲ್ಲಿ ಅವಕಾಶ ಸಿಗೋದೇ ಕಷ್ಟ. ಸಿಕ್ಕರೂ ಅದನ್ನು ಉಳಿಸಿಕೊಂಡು ಹೋಗೋದು ಇನ್ನೂ ಕಷ್ಟ. ಅರೇ ಇದೇನಪ್ಪಾ ಕಷ್ಟದ ಬಗ್ಗೆ ಮಾತಾಡ್ತಾ ಇದಾರಲ್ಲ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಹೌದು, ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದು ತುಂಬಾನೇ ಸವಾಲು. ಅಂತಹ ಹಲವಾರು ಸವಾಲು-ಕಷ್ಟಗಳನ್ನು ಎದುರಿಸಿ ನಿಂತವರು ಸಾಕಷ್ಟು ಮಂದಿ ಇಲ್ಲಿದ್ದಾರೆ. ಆ ಸಾಲಿಗೆ ಚಾಲೆಂಜಿಂಗ್‌ ದರ್ಶನ್‌ ಕೂಡ ಮೊದಲ ಸಾಲಲ್ಲಿ ಕಾಣುತ್ತಾರೆ. ಇಲ್ಲೀಗ ದರ್ಶನ್‌ ಅವರ ಬಗ್ಗೆ ಹೇಳುವುದಕ್ಕೂ ಕಾರಣವಿದೆ. ದರ್ಶನ್‌ ಅವರು ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಯಾಗಿ ಇಂದಿಗೆ ಬರೋಬ್ಬರಿ 24 ವರ್ಷಗಳು ಕಳೆದಿವೆ. ಇನ್ನೊಂದು ವರ್ಷ ಪೂರೈಸಿದರೆ, ಅವರ ಸಿನಿಮಾ ರಂಗದ ಪಾದಾರ್ಪಣೆಗೆ ಬೆಳ್ಳಿಹಬ್ಬದ ಸಂಭ್ರಮ ಆಚರಿಸುತ್ತಾರೆ. ಸದ್ಯ 24 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ದರ್ಶನ್‌ ಅವರಿಗೆ ಅಪಾರ ಮೆಚ್ಚುಗೆಯ ಮಾತುಗಳೇ ಕೇಳಿಬರುತ್ತಿವೆ.


ಆರಂಭದಲ್ಲಿ ಕೇವಲ ಲೈಟ್‌ಬಾಯ್‌ ಆಗಿ ಕಾರ್ಯನಿರ್ವಹಿಸುತ್ತಲೇ ಇಂದು, ಬಹು ಬೇಡಿಕೆಯ ನಟ ಎನಿಸಿಕೊಂಡಿರುವ ದರ್ಶನ್‌, ನಿಜಕ್ಕೂ ಅವರು ಕನ್ನಡ ಚಿತ್ರರಂಗದ ಮಟ್ಟಿಗೆ ಬಾಕ್ಸಾಫೀಸ್ ಸುಲ್ತಾನ್!‌ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟಿರುವ ದರ್ಶನ್‌, ಹಗಲಿರುಳು ಶ್ರಮಿಸಿದ್ದುಂಟು. ಖಳನಟರೆಂದೇ ಖ್ಯಾತಿ ಪಡೆದ ತೂಗದೀಪ ಶ್ರೀನಿವಾಸ್‌ ಅವರ ಪುತ್ರರಾಗಿ, ಅವರು ಇಲ್ಲಿ ಅನೇಕ ಏಳು-ಬೀಳು ಕಂಡಿದ್ದುಂಟು. ಒಂದೊಂದೇ ಯಶಸ್ಸಿನ ಮೆಟ್ಟಿಲು ಏರಿ ಬಂದ ದರ್ಶನ್, ಇಂದು ಸ್ಟಾರ್‌ ನಟ ಎನಿಸಿಕೊಂಡಿದ್ದಾರೆ. ಇದರ ಹಿಂದೆ ನೂರೆಂಟು, ನೋವು-ಅವಮಾನಗಳೂ ಇವೆ. ಅವರ ಹಠ ಮತ್ತು ಛಲದಿಂದಲೇ ಇಲ್ಲಿಯವರೆಗೆ 24 ವರ್ಷಗಳನ್ನು ಪೂರೈಸಿರುವ ದರ್ಶನ್‌, ತಾನು ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ ಕೂಡ.


ಸದ್ಯ ಗಾಂಧಿನಗರಕ್ಕೆ ಕಾಲಿಟ್ಟು ೨೪ ವರ್ಷ [ಪೂರೈಸಿರುವ ಸಂತಸ ದರ್ಶನ್‌ ಅವರದು. ಅವರ ಫ್ಯಾನ್ಸ್‌ ಕೂಡ ಈ ಸಂಭ್ರಮವನ್ನು ದೊಡ್ಡ ಮಟ್ಟದಲ್ಲೇ ಆಚರಿಸಿಕೊಳ್ಳುತ್ತಿದ್ದಾರೆ. ದರ್ಶನ್ ತಮ್ಮ ಗೆಳೆಯರ ಜೊತೆ ಸೇರಿ 24 ವರ್ಷದ ಸಂತಸವನ್ನು ಹಂಚಿಕೊಂಡಿದ್ದಾರೆ.

ಡಿ ಬಾಸ್ 24 ವರ್ಷದ ಪಯಣವನ್ನು ಅವರ ‌ ಸ್ನೇಹಿತರು ಅದ್ದೂರಿಯಾಗಿ ಆಚರಿಸಿದ್ದಾರೆ. ಕೇಕ್ ಕತ್ತರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ವಿನೋದ್‌ ಪ್ರಭಾಕರ್‌, ರಾಕ್ ಲೈನ್ ವೆಂಕಟೇಶ್, ಸೌಂದರ್ಯ ಜಗದೀಶ್ ಸೇರಿದಂತೆ ಸಂಭ್ರಮಾಚರಣೆಯಲ್ಲಿ ದರ್ಶನ್ ಆಪ್ತರು ಭಾಗಿಯಾಗಿ ಶುಭಕೋರಿದ್ದಾರೆ.

Categories
ಸಿನಿ ಸುದ್ದಿ

ಅಮರ ಪ್ರೇಮಿ ಅರುಣ್‌! ಮೊದಲ ಹಂತ ಮುಗಿಸಿದ ಖುಷಿಯಲ್ಲಿ ಹೊಸಬರು…

ಅಮರ ಪ್ರೇಮಿ ಅರುಣ್ ಸಿನಿಮಾದ ವಿಶೇಷ ಪಾತ್ರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಪದ್ಮಶ್ರೀ ಜೋಗತಿ ಮಂಜಮ್ಮ ನಟಿಸಿದ್ದಾರೆ…

ಒಲವು ಸಿನಿಮಾ ಸಂಸ್ಥೆಯು ನಿರ್ಮಿಸುತ್ತಿರುವ ʼಅಮರ ಪ್ರೇಮಿ ಅರುಣ್ʼ ಸಿನಿಮಾ, ತನ್ನ ಮೊದಲ ಸುತ್ತಿನ ಚಿತ್ರೀಕರಣವನ್ನು ಬಳ್ಳಾರಿ ನಗರದಲ್ಲಿ ಮುಗಿಸಿದ್ದು, ಈಗ ಮತ್ತೆ ಬಳ್ಳಾರಿಯಲ್ಲಿಯೇ ನಡೆಯಲಿರುವ ಎರಡನೇ ಸುತ್ತಿನ ಚಿತ್ರೀಕರಣಕ್ಕೆ ತಂಡ ತಯಾರಾಗುತ್ತಿದೆ.

ಬಳ್ಳಾರಿ ನಗರದ ಪ್ರಮುಖ ಜಾಗಗಳಲ್ಲಿ ನಾಯಕ ಹರಿಶರ್ವಾ, ನಾಯಕಿ ದೀಪಿಕಾ ಆರಾಧ್ಯ ಸೇರಿದಂತೆ ಧರ್ಮಣ್ಣ, ಭೂಮಿಕಾ ಭಟ್, ಮಹೇಶ್ ಬಂಗ್, ಬಲರಾಜ್ವಾಡಿ, ರೋಹಿಣಿ, ವಿಜಯಲಕ್ಷ್ಮಿ ಮತ್ತು ಅನೇಕ ಕಲಾವಿದರ ನಟನೆಯಲ್ಲಿ ದೃಶ್ಯಗಳನ್ನು ಚಿತ್ರಿಸಲಾಗಿದೆ.

ʼಅಮರ ಪ್ರೇಮಿ ಅರುಣ್ʼ ಸಿನಿಮಾ ವಿಶೇಷ ಪಾತ್ರಗಳಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಪದ್ಮಶ್ರೀ ಜೋಗತಿ ಮಂಜಮ್ಮನವರು ಮತ್ತು ಖ್ಯಾತ ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ ಅವರು ನಟಿಸಿದ್ದಾರೆ.

ಚಿತ್ರಕ್ಕೆ ಪ್ರವೀಣ್ ಕುಮಾರ್ ಜಿ ಅವರ ರಚನೆ-ನಿರ್ದೇಶನ, ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ನಿರಂಜನ್ ದೇವರ ಮನೆಯವರ ಸಂಕಲನ, ಮಂಡ್ಯ ಮಂಜು ಅವರ ಕಾರ್ಯಕಾರಿ ನಿರ್ಮಾಣವಿದೆ. ಜಯಂತ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಅವರ ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಜೋಗಿ ಪ್ರೇಮ್ ಚಿತ್ರದಲ್ಲಿ ಹಳ್ಳಿ ಹೈದ ಹನುಮಂತ ಗಾನ; ಕೊಟ್ಟ ಮಾತು ಉಳಿಸಿಕೊಂಡ್ರು ಅರ್ಜುನ್ ಜನ್ಯಾ !

ಹೊತ್ತಿಲ್ಲದ ಹೊತ್ತು, ತುತ್ತಿಲ್ಲದೇ ನಿಂತು,ಕಾದಿದ್ದೆ ನಿನಗಾಗಿ ಯಾಕೇ, ಹೇಳು ಯಾಕೇ, ಹೇಳು ಯಾಕೇ.ಆಣೆಯ ಇಟ್ಟು ಭಾಷೆಯ ಕೊಟ್ಟು, ಹಿಂದಿಂದೆ ಬಂದಿದ್ದು ಯಾಕೇ,ಹೇಳು ಯಾಕೇ, ಹೇಳು ಯಾಕೇ, ಈ ರೀತಿ ಸಾಗುವ ಏಕ್ ಲವ್ ಯಾ’ ಚಿತ್ರದ ಹಾಡು ಸುನೀಲ್ ಹಾಗೂ ಹನುಮನ ಕಂಠಸಿರಿಯಲ್ಲಿ ಮೂಡಿ ಬರಲಿದೆ…

  • ವಿಶಾಲಾಕ್ಷಿ

ಹೊಡಿರೀ ಹಲಗಿ.. ಹಚ್ಚಿ ಪಟಾಕಿ… ಹಳ್ಳಿಹೈದ ಹನುಮಂತಣ್ಣ ಮತ್ತೆ ಅಖಾಡಕ್ಕೆ ಇಳಿದಿದ್ದಾನೆ. ಮ್ಯೂಸಿಕ್ ಲೋಕದಲ್ಲಿ ಮ್ಯಾಜಿಕ್ ಮಾಡೋದಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾನೆ. ಅಂದ್ಹಾಗೇ, ಚಿಲ್ಲೂರು ಚಿಂಗಾರಿಯನ್ನು ಮತ್ತೆ ಕಣಕ್ಕೆ ಇಳಿಸಿರುವುದು ಡೈರೆಕ್ಟರ್ ಜೋಗಿ ಪ್ರೇಮ್ ಹಾಗೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ . ಹಾವೇರಿ ಜಿಲ್ಲೆ ಸವಣೂರ್ ತಾಲೂಕ್ ಬಡ್ನಿ ತಾಂಡಾದಲ್ಲಿ ಮತ್ತೆ ಕುರಿ ಕಾಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಹನುಮನನ್ನು ಮತ್ತೆ ಬೆಂಗಳೂರಿಗೆ ಕರೆತಂದಿದ್ದಾರೆ. ಜನ್ಯಾಜೀ ಫೋನ್ ಹೋಗಿದ್ದೇ ತಡ ಬಡ್ನಿ ಹೈದ ಹನುಮ ಅಂಗಿ-ಲುಂಗಿ ತೊಟ್ಟು ಹೆಗಲಿಗೊಂದು ಟವಲ್ ಹಾಕಿಕೊಂಡು ಬೆಂಗಳೂರಿಗೆ ಬಂದಿಳಿದಿದ್ದಾನೆ.

ಸವಣೂರ್ ಸೂಪರ್‌ಸ್ಟಾರ್ ಎನಿಸಿಕೊಂಡಿದ್ದ ಹನುಮಂತನಿಗೆ ಅರ್ಜುನ್ ಜನ್ಯಾ ತಮ್ಮ ಸಿನಿಮಾದಲ್ಲಿ ಒಂದು ಅವಕಾಶ ಕೊಡ್ತೀನಿ ಅಂತ ಸಾರೆಗಾಮ' ಅಂಗಳದಲ್ಲೇ ಅನೌನ್ಸ್ ಮಾಡಿದ್ದರು. ಪ್ರೇಮ್ ನಿರ್ದೇಶನದ ಸಿನೆಮಾದಲ್ಲಿ ಸಾರೆಗಾಮ ರನ್ನರ್ ಅಪ್ ಹನುಮನಿಗೆ ಹಾಡುವ ಅವಕಾಶ ಸಿಗಲಿದೆ ಎನ್ನುವ ಸುದ್ದಿಯೊಂದು ಈ ಹಿಂದೆ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು. ಇದೀಗ, ಆ ಸುದ್ದಿ ನಿಜವಾಗಿದೆ. ಹಳ್ಳಿಹಕ್ಕಿ ಹನುಮನಿಗೆ ಜೋಗಿ ಪ್ರೇಮ್ ನಿರ್ದೇಶನದಏಕ್ ಲವ್’ ಯಾ’ ಚಿತ್ರದಲ್ಲಿ ಹಾಡುವ ಚಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದು, `ಸಾರೆಗಾಮ’ ಸೀಸನ್ 13ರ ವಿನ್ನರ್ ಸುನೀಲ್ ಜೊತೆ ಚಿಲ್ಲೂರು ಚಿಂಗಾರಿ ಹನುಮಂತ ಕಂಠಕುಣಿಸಿದ್ದಾರೆ.

ಹೊತ್ತಿಲ್ಲದ ಹೊತ್ತು, ತುತ್ತಿಲ್ಲದೇ ನಿಂತು.. ಕಾದಿದ್ದೆ ನಿನಗಾಗಿ ಯಾಕೇ.. ಹೇಳು ಯಾಕೇ.. ಹೇಳು ಯಾಕೇ.. ಆಣೆಯ ಇಟ್ಟು ಭಾಷೆಯ ಕೊಟ್ಟು.. ಹಿಂದಿಂದೆ ಬಂದಿದ್ದು ಯಾಕೇ.. ಹೇಳು ಯಾಕೇ.. ಹೇಳು ಯಾಕೇ.. ಈ ರೀತಿಯಾಗಿ ಸಾಗುವ ಏಕ್ ಲವ್ ಯಾ’ ಚಿತ್ರದ ಹಾಡು ಸುನೀಲ್ ಹಾಗೂ ಹನುಮನ ಕಂಠಸಿರಿಯಲ್ಲಿ ಮೂಡಿಬರಲಿದೆ. ಇತ್ತೀಚೆಗೆ ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ಕಾರ್ಯ ಮುಗಿದಿದೆ. ಅದರ ಝಲಕ್‌ನ ಡೈರೆಕ್ಟರ್ ಪ್ರೇಮ್ ಹಾಗೂ ಜನ್ಯಾಜೀಯವರು ತಮ್ಮ ಸೋಷಿಯಲ್ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ನೋಡಿ ಬಡ್ನಿಭೀಮನ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಂತಹ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾಗೆ ಉಘೇ ಉಘೇ ಎನ್ನುತ್ತಿದ್ದಾರೆ. ಸೆನ್ಸೇಷನಲ್ ಡೈರೆಕ್ಟರ್ ಸಿನಿಮಾದಲ್ಲಿ ಹನುಮ ಹಾಡಿದ್ದಾಯ್ತು ಈ ಹಾಡಿನಿಂದ ಹಳ್ಳಿ ಹೈದನ ಸಂಗೀತ ಪಯಣಕ್ಕೆ ಕಿಕ್‌ಸ್ಟಾರ್ಟ್ ಸಿಗುವಂತಾಗಲಿ, ಬಣ್ಣದ ಲೋಕದಲ್ಲಿ ಬಡ್ನಿಭೀಮನ ಜವಾರಿ ಬಂಡಿ ಸಾಗಲಿ ಅನ್ನೋದೇ ಸಿನಿಲಹರಿ ಆಶಯ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!