ದುಬೈನಲ್ಲೂ ಸುಧೀರ್‌ ಅತ್ತಾವರ್‌ ಸಕ್ಸಸ್! ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿಸ್ತರಿಸಿದ ‌ಸಕ್ಸಸ್‌ ಫಿಲ್ಮ್ಸ್‌ ಕಾರ್ಯವ್ಯಾಪ್ತಿ…

ದುಬೈನ ಡೇರಾ ಪ್ರಾಂತ್ಯದಲ್ಲಿ ‌ನಿರ್ದೇಶಕ ಸುಧೀರ್‌ ಅತ್ತಾವರ್ ಅವರ ಕನಸಿನ ಸಕ್ಸಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ಶುರುವಾಗಿದೆ. ಇತ್ತೀಚೆಗೆ ದುಬೈ ನ ಖ್ಯಾತ ರೇಡಿಯೋ ವೈಬ್ FM 105.4ನ ಚಾನೆಲ್ ಹೆಡ್ ಸೈಯದ್ ಹರ್ಷದ್, ಅಂತಾರಾಷ್ಟ್ರೀಯ ಉರ್ದು ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ತಾರೀಕ್ ಫೈಜೀ ಮತ್ತು ಸಿನಿಮಾ ನಟ ಹುಸೇನ್ ದುಬೈನ ಖ್ಯಾತ ರಂಗ ಕರ್ಮಿ ಡಾ. ಫರ್ಹದ್ ಚೌಧರಿ ಅವರು ಆಗಮಿಸಿ “ಸಕ್ಸಸ್‌ ಫಿಲ್ಮ್ಸ್”‌ ಸಂಸ್ಥೆಯ ನೂತನ ಕಚೇರಿಗೆ ಶುಭಕೋರಿದ್ದಾರೆ

ಸುಧೀರ್‌ ಅತ್ತಾವರ್… ಈ ಹೆಸರು ಕೇಳಿದಾಕ್ಷಣ ಥಟ್ಟನೆ ನೆನಪಾಗೋದೇ “ಮರಳಿ ಮರೆಯಾಗಿ…” ಎಂಬ ಅದ್ಭುತ ಗೀತೆ. ಹೌದು, ಇಂತಹ ಅದೆಷ್ಟೋ ಜನಪ್ರಿಯ ಹಾಡುಗಳನ್ನು ಗೀಚಿದ ಸುಧೀರ್‌ ಅತ್ತಾವರ್‌, ಬರೀ ಗೀತ ಸಾಹಿತಿಯಲ್ಲ, ಅವರೊಬ್ಬ ಸೂಕ್ಷ್ಮ ಸಂವೇದನೆಯ ನಿರ್ದೇಶಕ. ನೈಜತೆಗೆ ಹೆಚ್ಚು ಒತ್ತು ಕೊಡುವ ಸುಧೀರ್‌, ಕನ್ನಡ ಮಾತ್ರವಲ್ಲ, ಮರಾಠಿ ಮತ್ತು ಬಾಲಿವುಡ್‌ ಸಿನಿಮಾಗಳಿಗೂ ಆಕ್ಷನ್‌-ಕಟ್‌ ಹೇಳಿದ್ದಾರೆ. ಕನ್ನಡದ ಅಪ್ಪಟ ಪ್ರತಿಭೆ ಸುಧೀರ್‌ ಅತ್ತಾವರ್‌, ಬಾಲಿವುಡ್‌ ಅಂಗಳದಲ್ಲಷ್ಟೇ ಅಲ್ಲ, ಈಗ ಸಾಗರದಾಚೆಗೂ ತನ್ನ ಪ್ರತಿಭೆಯನ್ನು ವಿಸ್ತರಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ನತ್ತ ಪಯಣ ಬೆಳೆಸಿದ ಸುಧೀರ್‌ ಅತ್ತಾವರ್‌, ಅಲ್ಲೇ ಗಟ್ಟಿ ನೆಲೆ ಕಾಣಬೇಕು ಎಂಬ ಉದ್ದೇಶದಿಂದ ಮರಾಠಿ ಸಿನಿಮಾಗಳ ಜೊತೆ ಹಿಂದಿ ಸಿನಿಮಾಗಳ ಮೇಲೂ ಒಲವು ತೋರಿಸಿ ಅಲ್ಲಿ ನಿರ್ದೇಶನಕ್ಕಿಳಿದರು. ಜೊತೆ ಜೊತೆಯಲ್ಲಿ ಅವರು ಮುಂಬೈನಲ್ಲಿ ಸಕ್ಸಸ್‌ ಫಿಲ್ಮ್ಸ್‌ ಸಂಸ್ಥೆಯನ್ನೂ ಸ್ಥಾಪಿಸಿದರು. ಇಂಡಿಯಾಕ್ಕೆ ಸೀಮಿತವಾಗಿದ್ದ ಅವರ ಸಕ್ಸಸ್‌ ಫಿಲ್ಮ್ಸ್‌ ಇದೀಗ ತನ್ನ ಕಾರ್ಯ ವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿಕೊಂಡಿದೆ ಎನ್ನುವುದೇ ಹೆಮ್ಮೆಯ ವಿಷಯ.

ಸಹಜವಾಗಿಯೇ ಇದು ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರಿಗಷ್ಟೇ ಅಲ್ಲ, ಅವರ ಬಳಗ ಮತ್ತು ಗೆಳೆಯರಿಗೂ ಸಂಭ್ರಮದ ವಿಷಯವೇ ಸರಿ. ಸುಧೀರ್‌ ಅತ್ತಾವರ್‌ ಅವರ ಸಕ್ಸಸ್ ಕನಸು ಈಗ ದುಬೈನಲ್ಲೂ ನನಸಾಗಿದೆ ಅನ್ನೋದೇ ಹೆಮ್ಮೆ. ಯುಎಇಯ ದುಬೈನಲ್ಲಿ ಅವರು ತಮ್ಮ ಪ್ರೀತಿಯ ಸಕ್ಸಸ್‌ ಫಿಲ್ಮ್ಸ್‌ ಇಂಟರ್ನ್ಯಾಷನಲ್‌ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ದುಬೈನ ಡೇರಾ ಪ್ರಾಂತ್ಯದಲ್ಲಿ ಅವರು ಈ ತಮ್ಮ ಸಕ್ಸಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ದುಬೈ ನ ಖ್ಯಾತ ರೇಡಿಯೋ ವೈಬ್ FM 105.4ನ ಚಾನೆಲ್ ಹೆಡ್ ಸೈಯದ್ ಹರ್ಷದ್, ಅಂತಾರಾಷ್ಟ್ರೀಯ ಉರ್ದು ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ತಾರೀಕ್ ಫೈಜೀ ಮತ್ತು ಸಿನಿಮಾ ನಟ ಹುಸೇನ್ ದುಬೈನ ಖ್ಯಾತ ರಂಗ ಕರ್ಮಿ ಡಾ. ಫರ್ಹದ್ ಚೌಧರಿ ಅವರು ಸುಧೀರ್‌ ಅತ್ತಾವರ್‌ ಅವರ ಪ್ರೀತಿಯ ಆಹ್ವಾನದ ಮೇರೆಗೆ, “ಸಕ್ಸಸ್‌ ಫಿಲ್ಮ್ಸ್”‌ ಸಂಸ್ಥೆಯ ನೂತನ ಕಚೇರಿಗೆ ಆಗಮಿಸಿ, ಶುಭಕೋರಿದ್ದಾರೆ. ಈ ವೇಳೆ ಕನ್ನಡಿಗ ಸುಧೀರ್ ಅತ್ತಾವರ್ ಅವರೆಲ್ಲರನ್ನೂ ಅಷ್ಟೇ ಪ್ರೀತಿಯಿಂದ ಸ್ವಾಗತಿಸಿ, ತಮ್ಮ ಸಂಸ್ಥೆಯ ಕೆಲಸ ಕಾರ್ಯಗಳ ಕುರಿತು ತಿಳಿಸಿಕೊಟ್ಟರು.

ದುಬೈನಲ್ಲಿ ಮಹತ್ವಾಕಾಂಕ್ಷೆ ಯೋಜನೆ!
ಇದೇ ಮೊದಲ ಬಾರಿಗೆ ಕನ್ನಡಿಗರೊಬ್ಬರೂ ಅದರಲ್ಲೂ ಸದಾ ಸಿನಿಮಾವನ್ನೇ ಧ್ಯಾನಿಸುವ ಸೂಕ್ಷ್ಮ ಸಂವೇದನೆಯ ನಿರ್ದೇಶಕರೊಬ್ಬರು ದುಬೈನಲ್ಲಿ ಸಿನಿಮಾ ಸ್ಟುಡಿಯೋ ಮತ್ತು ಪ್ರೊಡಕ್ಷನ್ ಹೌಸ್ ಆರಂಭಿಸಿರುವುದು ಹೆಮ್ಮೆಯ ವಿಷಯ. ಇನ್ನು, ಇದೇ ಸಂದರ್ಭದಲ್ಲಿ www.success films international.com ಎಂಬ ವೆಬ್‌ಸೈಟನ್ನೂ ಸಹ ದುಬೈನ ಖ್ಯಾತ ರಂಗಕರ್ಮಿ ಡಾ. ಫರ್ಹದ್ ಚೌಧರಿ ಅವರು ಸಕ್ಸಸ್ ಫಿಲ್ಮ್ಸ್‌ನ ವಿದ್ಯಾಧರ್ ಶೆಟ್ಟಿ ಅವರೊಂದಿಗೆ ಲೋಕಾರ್ಪಣೆ ಮಾಡಿದರು. ಇನ್ನು, ಸಕ್ಸಸ್ ಫಿಲ್ಮ್ಸ್‌ನ ದುಬೈ ಪಾಲುದಾರರಾದ ದೆಹಲಿ‌ ಮೂಲದ ಮಿನ್ಹಾಜ್ ಖಾನ್ ಅವರು ಈ ವೇಳೆ ಧನ್ಯವಾದ ಅರ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುಧೀರ್‌ ಅತ್ತಾವರ್‌ ಅವರು, ಶೀಘ್ರದಲ್ಲೇ ದುಬೈನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅರಬ್ ಪಾಲುದಾರಿಕೆಯಲ್ಲಿ ಆರಂಭಿಸುವ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರತಿಭೆಗೆ ಸಂದ ಪ್ರಶಸ್ತಿ

ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರು ಎಂದಿಗೂ ಪ್ರಶಸ್ತಿ, ಸನ್ಮಾನ ಬಯಸಿದವರಲ್ಲ. ಆದರೆ, ಅವರ ಸಿನಿಮಾಗಳು, ಸಾಧನೆ ಅವರಿಗೆ ಪ್ರಶಸ್ತಿ ಹುಡುಕಿ ಬಂದಿದೆ. ಸನ್ಮಾಗಳೂ ಲೆಕ್ಕವಿಲ್ಲದಷ್ಟು ನಡೆದಿವೆ. ಮೊದಲೇ ಹೇಳಿದಂತೆ ಅವರು ಸೂಕ್ಷ್ಮ ಸಂವೇದನೆಯ ನಿರ್ದೇಶಕ. ಅವರು ಇತ್ತೀಚೆಗೆ ನಿರ್ದೇಶಿಸಿದ್ದ “ಮಡಿʼ ಚಿತ್ರಕ್ಕೆ ರಿಫ್ಟ್‌ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಜೊತೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಿಕ್ಕಿದೆ. ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ “ಮಡಿ” ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಅದರ ಜೊತೆಯಲ್ಲಿ ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಂದಿರುವುದು ಅವರ ಕಥೆಯೊಳಗಿನ ಗಟ್ಟಿತನಕ್ಕೆ ಕಾರಣ.


“ಹಸಿವು ಮತ್ತು ದಾರಿದ್ರ್ಯ ಚಿತ್ರದ ಹೈಲೈಟ್. ಆಗಿತ್ತು. ಜಾತಿ ಕೂಡ ಮನುಕುಲದ ದುರಂತ ಎಂಬಂತಹ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕವನ್ನು ಚಿತ್ರ ಹೊಂದಿತ್ತು. ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿದ್ದರು. “ಮಡಿ” ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅಷ್ಟೇ ಅಲ್ಲ, ಬಾಲಿವುಡ್‌ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದರು. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ.

ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ. ಈ ಚಿತ್ರದಲ್ಲಿ ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್‌ ಅತ್ತಾವರ್‌ ಅವರೇ “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.

ಬಾನುಲಿ ಸರಣಿ
ಸುಧೀರ್ ಅತ್ತಾವರ್ ಪರಿಕಲ್ಪನೆಯಲ್ಲಿ ಹೋರಾಟಗಾರರ ಪರಿಚಯಿಸೋ “ಹಮಾರೇ ಸ್ವತಂತ್ರ್ಯ ತಾ ಸೇನಾನಿʼ ಬಾನುಲಿ ಸರಣಿ ಕೂಡ ಬಂದಿದೆ. ಅದಕ್ಕೆ ಈಗಾಗಲೇ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವಂತಹ ಕೆಲಸ ಮಾಡಿದ ಸುಧೀರ್‌ ಬಗ್ಗೆ ಒಳ್ಳೇಯ ಮಾತುಗಳು ಕೇಳಿಬಂದಿದ್ದವು. ಮುಂಬೈನಲ್ಲಿರೋ ತಮ್ಮ ಸಕ್ಸಸ್ ಫಿಲ್ಮ್ಸ್ ಮೂಲಕ ಈ ಬಾನುಲಿ ಸರಣಿಯನ್ನು ನಿರ್ಮಾಣ ಮಾಡಿದ್ದರು.

ಡಿ.ಕೆ. ಫ್ಲ್ಯಾಗ್ ಫೌಂಡೇಷನ್ ನ ಡಾ. ರಾಕೇಶ್ ಬಕ್ಷಿ ಈ ಸರಣಿಯನ್ನು ನಡೆಸಿಕೊಟ್ಟಿದ್ದರು. ಖ್ಯಾತ ಹಿನ್ನೆಲೆ ಗಾಯಕರಾದ ಶಾನ್, ಶರೋನ್ ಪ್ರಭಾಕರ್, ಆರತಿ ಮುಖರ್ಜಿ, ಡಾ.ಸಂದೇಶ್ ಮಾಯೆಕರ್, ಹಾಕಿ ಪ್ಲೇಯರ್ ಧನರಾಜ್ ಪಿಳೈ, ಹಜ್ ಹೌಸ್ ಅಧ್ಯಕ್ಷ ಮಕ್ಸೂದ್ ಅಹ್ಮದ್ ಖಾನ್, ಬೀನಾ ಸಂತೋಷ್ ಸೇರಿದಂತೆ ಇತರರು ಭಾಗವಹಿಸಿದ್ದು ವಿಶೇಷ.

Related Posts

error: Content is protected !!