ಕಿಚ್ಚು ಹೆಚ್ಚಿಸಿದ ಕಿಚ್ಚನಿಗೆ ಪ್ರೇಕ್ಷಕರ ಬಹುಪರಾಕ್! ಕಳ್ಳ ಪೋಲೀಸ್ ಆಟದಲ್ಲಿ ಭರಪೂರ ಮನರಂಜನೆ!!

ಚಿತ್ರ ವಿಮರ್ಶೆ: ವಿಶಾಲಾಕ್ಷಿ

ಚಿತ್ರ : ಕೋಟಿಗೊಬ್ಬ 3

ನಿರ್ದೇಶನ: ಶಿವಕಾರ್ತಿಕ್

ನಿರ್ಮಾಣ : ಸೂರಪ್ಪ ಬಾಬು

ತಾರಾಗಣ: ಸುದೀಪ್, ನವಾಬ್, ಮಡೋನ ಸೆಬಾಸ್ಟಿಯನ್, ರವಿಶಂಕರ್ ಇತರರು

ಅಭಿನವ ಭಾರ್ಗವನ ಮುಂದೆ ಹಲ್ಲಲ್ಲು ಕಡಿದ, ಸಾಹಸಸಿಂಹ ವಿಷ್ಣುದಾದಾ ವಿರುದ್ದ ಕತ್ತಿ ಮಸೆದ ಖಳನಾಯಕನಿಗೆ ಕಿಚ್ಚ ಸುದೀಪ್ ಆಯುಧಪೂಜೆ ದಿನದಂದೇ ಮಹೂರ್ತವಿಟ್ಟಿದ್ದರು.ಧೂರ್ತ ದೇವೇಂದ್ರನ ಸಾಮ್ರಾಜ್ಯವನ್ನು ಹೊಡೆದುರುಳಿಸಬೇಕು ಜೊತೆಗೆ ಒಡೆಯ ದೇವೇಂದ್ರನನ್ನು ಮುಗಿಸಬೇಕು ಅಂತ ಸ್ಕೆಚ್ ಹಾಕಿದ್ದರು. ಆದರೆ, ಆಯುಧಪೂಜೆಯ ದಿನದಂದು ಅಂದುಕೊಂಡ ಕೆಲಸ ನೆರವೇರಲಿಲ್ಲ. ಹಾಗಂತ, ಹಾಕಿದ್ದ ಸ್ಕೆಚ್ ಮರುದಿನ ಮಿಸ್ ಆಗಲೇ ಇಲ್ಲ.ಪ್ಲ್ಯಾನ್ ಪ್ರಕಾರ ಎಲ್ಲವೂ ನಡೀತು. ಕ್ಯಾನ್ಸಲ್ ಆದ ಶೋಗಳು ಮರುದಿನ ಬೆಳಗ್ಗೆಯಿಂದಲೇ ಪ್ರಾರಂಭಗೊಂಡವು. ಕಿಚ್ಚನ ಸೈನ್ಯ ಥಿಯೇಟರ್ ಗೆ ಮುತ್ತಿಗೆ ಹಾಕ್ತು. ಇತ್ತ ಕಿಚ್ಚ ಕಣ್ಣಲ್ಲೇ ಕೆಂಡ ಉಗುಳುತ್ತಾ, ಬಾಲಿವುಡ್ ಬಾದ್ ಷಾ ನಂತೆ ಎಂಟ್ರಿಕೊಟ್ಟರು. ನೋಡುಗರು ಏನಾಯ್ತು ಎನ್ನುವಷ್ಟರಲ್ಲಿ ದಾದಾ ವಿರುದ್ಧ ಕತ್ತಿಮಸೆದವನನ್ನು ಅಡ್ಡಡ್ಡ ಉದ್ದುದ್ದ ಮಲಗಿಸಿಬಿಟ್ಟರು. ಇಷ್ಟೆಲ್ಲಾ ಆಗಿದ್ದು ಕೋಟಿಗೊಬ್ಬ 3 ಚಿತ್ರ ಬೆಳ್ಳಿತೆರೆ ಮೇಲೆ ಧಗಧಗಿಸಿದಾಗ.

ಅಂದ್ಹಾಗೇ, ಜೇಷ್ಠ ಸಿನಿಮಾದಲ್ಲಿ ದಾದಾಗೆ ಬಿಟೌನ್ ನವಾಬ್ ಎದುರಾಳಿಯಾಗಿದ್ದರು. ಭರ್ತಿ ಹದಿನೇಳು ವರ್ಷಗಳು ಕಳೆದ ಮೇಲೆ ಕಿಚ್ಚನ ಕೋಟಿಗೊಬ್ಬ 3 ಗೆ ಖಳನಾಯಕನಾಗಿ ಮತ್ತೆ ಕನ್ನಡಕ್ಕೆ ಬಂದು ಕಮಾಲ್ ಮಾಡಿದ್ದಾರೆ. ಕೋಟಿಗೊಬ್ಬ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಎವರ್ ಗ್ರೀನ್‌ ಸಿನಿಮಾ.‌ ಇದೇ ಸಿನಿಮಾದ ಟೈಟಲ್ ನ ಕೋಟಿಗೊಬ್ಬ 2 ಚಿತ್ರಕ್ಕೆ ಬಣ್ಣಹಚ್ಚಿದ ಕಿಚ್ಚ ದಾದಾ ಅಭಿಮಾನಿಗಳ ಹೃದಯ ಗೆದ್ದರು. ಯಜಮಾನನ ಭಕ್ತರು ಮಾಣಿಕ್ಯನನ್ನು ತಲೆಮೇಲೆ ಹೊತ್ಕೊಂಡು ಮೆರೆಸಿದರು. ಅಭಿಮಾನಿ ದೇವರುಗಳು ತೋರಿಸಿದ ಪ್ರೀತಿ ಹಾಗೂ ಪ್ರೋತ್ಸಾಹವೇ ಕೋಟಿಗೊಬ್ಬ 3 ಚಿತ್ರಕ್ಕೆ ಸ್ಪೂರ್ತಿಯಾಯ್ತು. ಫೈನಲೀ, ಕೋಟಿಗೊಬ್ಬ 3 ಚಿತ್ರ ಪ್ರೇಕ್ಷಕರನ್ನು ತಲುಪಿದೆ. ಬೆಳ್ಳಿತೆರೆ ಮೇಲೆ ಅಭಿನಯ ಚಕ್ರವರ್ತಿ ದರ್ಬಾರ್ ಜೋರಾಗಿದೆ. ಕೋಟಿಗೊಬ್ಬ ಅಂತ ಹೆಸರಿಟ್ಟುಕೊಂಡು ಎರಡನೇ ಭಾರಿ ಬಿಗ್ ಸ್ಕ್ರೀನ್ ಮೇಲೆ ಬಂದ ಕಿಚ್ಚನ ಸಿನಿಮಾ ಬರೀ ಮನರಂಜನೆ ನೀಡೋದಲ್ಲದೆ, ಒಂದೊಳ್ಳೆ ಸಂದೇಶ ನೀಡಿದೆ.

ಕೋಟಿಗೊಬ್ಬ 3 ಚಿತ್ರದಲ್ಲಿ ಅಂತದ್ದೇನಿದೆ? ಸತ್ಯ ಯಾರು ? ಶಿವ ಯಾರು ? ಸತ್ಯ ಹಾಗೂ ಶಿವ ಇಬ್ಬರು ಒಬ್ಬರೇನಾ ಅಥವಾ ಇಬ್ಬರು ಬೇರೆ ಬೇರೆನಾ? ಈ ರೀತಿಯ ಕನ್ಫೂಷನ್ ನ ಕೋಟಿಗೊಬ್ಬ 2 ಚಿತ್ರದಲ್ಲಿ ಕ್ರಿಯೇಟ್ ಮಾಡಿದ್ದರು. ಸಿನಿರಸಿಕರನ್ನು ಗೊಂದಲಕ್ಕೀಡು ಮಾಡಿದ್ರು. ಬಹುಷಃ ಆ ಕನ್ಫ್ಯೂಷನ್ ಗೆ ಕೋಟಿಗೊಬ್ಬ 3ನಲ್ಲಿ ಉತ್ತರ ಕೊಟ್ಟಿರ್ತಾರೆ ಅಷ್ಟೇ. ಹೀಗೆ ‌ಅಂದುಕೊಂಡು ಚಿತ್ರಮಂದಿರಕ್ಕೆ ಬರುವವರಿಗೆ ಕ್ಲ್ಯಾರಿಟಿ ಕೊಡುವುದರ ಜೊತೆಗೆ ಕಾಸು ಕೊಟ್ಟು ಥಿಯೇಟರ್ ಒಳಗಡೆ ಬಂದ ಪ್ರೇಕ್ಷಕ ಮಹಾಷಯನಿಗೆ ಮನರಂಜನೆಯನ್ನು ಕೊಟ್ಟು ಬೀಳ್ಕೊಟ್ಟಿದ್ದಾರೆ. ಒಂದಂತೂ ನಿಜ ಕೊಟ್ಟ ಕಾಸಿಗೆ ಇಲ್ಲಿ ಮೋಸವಿಲ್ಲ.

ಆಟೋರಿಕ್ಷಾ ಏರಿ ಎಂಟ್ರಿ ತೆಗೆದುಕೊಳ್ಳುವ ಕೋಟಿಗೊಬ್ಬ ಕಿಚ್ಚ, ಬಿಗ್ ಬಿ ಅಮಿತಾಬ್ ರಂತೆ ಕಾಣ್ತಾರೆ. ಪಟಾಕಿ ಪೋರಿ ಆಶಿಕಾ ರಂಗನಾಥ್ ಜೊತೆ ಕುಣಿದು ಕುಪ್ಪಳಿಸ್ತಾರೆ, ಬೇಬಿಡಾಲ್ ಆದ್ಯಾ ಮುಂದೆ ಮಂಡಿಯೂರ್ತಾರೆ. ಸ್ಟೈಲಿಷ್ ಲುಕ್ ನಲ್ಲಿ ಕಿಕ್ಕೇರಿಸುತ್ತಾರೆ. ಕಾರ್ ಚೇಸಿಂಗ್ ಮಾಡಿ ಚಿತ್ರಪ್ರೇಮಿಗಳನ್ನು ಎಡ್ಜ್ ಆಫ್‌ ದಿ ಸೀಟ್ ನಲ್ಲಿ ಕೂರಿಸ್ತಾರೆ. ಎದುರಾಳಿಗಳ ಜೊತೆ ಹೊಡೆದಾಡಿ ಮೀಸೆ ತಿರುವುತ್ತಾರೆ. ಕೊನೆಗೆ ಹೆತ್ತ ತಾಯಿ ಸಾವಿಗೆ ಕಾರಣರಾದ ಧೂರ್ತನಂತಿರುವ ದೇವೇಂದ್ರ ಅಲಿಯಾಸ್ ನವಾಬ್ ಷಾರನ್ನು ಮುಗಿಸಿ ಮರೆಯಾಗುತ್ತಾರೆ. ಅಲ್ಲಿಗೆ, ಕೋಟಿಗೊಬ್ಬ 3 ಗೆ ತೆರೆಬೀಳುತ್ತೆ.

ಕೋಟಿಗೊಬ್ಬ 2 ಚಿತ್ರ ದಲ್ಲಿದ್ದ ಎರಡು ಕ್ಯಾರೆಕ್ಟರ್ ಗಳು ಮಾತ್ರ ಕೋಟಿಗೊಬ್ಬ 3 ನಲ್ಲಿ ಕಂಟಿನ್ಯೂ ಆಗಿವೆ. ಸತ್ಯ ಹಾಗೂ ಶಿವ ಎರಡು ಪಾತ್ರದಲ್ಲಿ ಪ್ರೇಕ್ಷಕರಿಗೆ ಕನ್ಫ್ಯೂಸ್ ಮಾಡಿದ್ದ ಸುದೀಪ್, ಭಾಗ 3 ರಲ್ಲೂ ಸತ್ಯ- ಶಿವ ಹಾಗೂ ಗೋಸ್ಟ್ ಅಂತ ಮತ್ತೆ ಕನ್ಫ್ಯೂಸ್ ಮಾಡಿದ್ದಾರೆ. ಜೈಲು ಹಕ್ಕಿ ಆಗಿದ್ದ ರವಿಶಂಕರ್ ಕೋಟಿಗೊಬ್ಬ 3 ನಲ್ಲೂ ಕಂಬಿಹಿಂದೆ ಹಲ್ಲಲ್ಲು ಕಡಿದು , ಕಿಚ್ಚನ ಮುಂದೆ ಬಂದಾಗ ಕಾಮಿಡಿ ಮಾಡುತ್ತಾ ಹಾಸ್ಯದ ರಸದೌತಣ ಉಣಬಡಿಸಿದ್ದಾರೆ. ನವಾಬ್ ಷಾ, ಅಫ್ತಾಬ್ ಶಿವದಾಸಿನಿ, ಶ್ರದ್ದಾದಾಸ್ ಕೋಟಿಗೊಬ್ಬನ ಜೊತೆ ಮೆರೆದಿದ್ದಾರೆ. ರಾಜೇಶ್ ನಟರಂಗ್, ಅಭಿರಾಮಿ,ತಾರಕ್ ಪಾತ್ರಗಳು ಗಮನ ಸೆಳೆಯುತ್ತವೆ. ರವಿಶಂಕರ್, ಶಿವರಾಜ್ ಕೆ. ಆರ್ ಪೇಟೆ ಅವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.ರಂಗಾಯಣ ರಘು ಹಾಗೂ ತಬಲನಾಣಿಯವರ ಪ್ರತಿಭೆಯನ್ನು ಇಲ್ಲಿ ಸರಿಯಾಗಿ ಬಳಸಿಕೊಂಡಿಲ್ಲ. ಕಿಚ್ಚನ ಜೊತೆ ಸ್ಕ್ರೀನ್ ಶೇರ್ ಮಾಡಿದರೂ ಕೇರಳದ ಕುಟ್ಟಿ ಮಡೋನ್ನ ಸೆಬಾಸ್ಟಿನ್ ಅಷ್ಟೇನು ಮೋಡಿ ಮಾಡಿಲ್ಲ ಅನ್ನೋದು ಬೇಸರದ ಸಂಗತಿ.

ಶೇಖರ್ ಚಂದ್ರ ಅವರ ಕ್ಯಾಮೆರಾ ಕೈಚಳಕ ಮೋಡಿ ಮಾಡಿದೆ. ಪೋಲ್ಯಾಂಡ್ ಕಾರ್ ಚೇಸಿಂಗ್ ದೃಶ್ಯಗಳು ರೋಮಾಂಚನಗೊಳಿಸುತ್ತವೆ. ಅರ್ಜುನ್ ಜನ್ಯಾ ಸಂಗೀತದ ಒಂದು ಹಾಡು ಹುಚ್ಚೆದ್ದು ಕುಣಿಸುತ್ತೆ, ಬ್ಯಾಗ್ರೌಂಡ್ ಸ್ಕೋರ್ ಕೊಂಚ ಸೊರಗಿದೆ. ಮೊದಲರ್ಧ ಮನರಂಜನೆಯಾಗಿ ಸಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ಗಂಭೀರವಾಗುತ್ತೆ. ಅಲ್ಲಲ್ಲಿ ಪಂಚಿಂಗ್ ಡೈಲಾಗ್ ಕೊರತೆ ಎದ್ದು ಕಾಣುತ್ತೆ.. ಕಿಚ್ಚ ಕೊಟ್ಟ ಒನ್ ಲೈನ್ ಸ್ಟೋರಿಗೆ ಸ್ಕ್ರೀನ್ ಪ್ಲೇ ಮಾಡಿಕೊಂಡ ನಿರ್ದೇಶಕ ಶಿವಕಾರ್ತಿಕ್ ಇನ್ನಷ್ಟು ಧಮ್ ಕಟ್ಟಬೇಕಿತ್ತು. ನಿರೂಪಣೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಎಲ್ಲೋ ಒಂದು ಕಡೆ ಟ್ರ್ಯಾಕ್ ಚೇಂಜ್ ಆಗುತ್ತೆ ಅನ್ನುವ ಹೊತ್ತಿಗೆ ಮದರ್ ಸೆಂಟಿಮೆಂಟ್ ಮೈನಸ್ ಪಾಯಿಂಟ್ ಗಳನ್ನ ಮರೆಸುತ್ತೆ. ಅಲ್ಲಲ್ಲಿ ಬಾಲಿವುಡ್ ರೇಂಜ್ ಗಿರುವ ಮೇಕಿಂಗ್ ಖುಷಿ ಕೊಡುತ್ತೆ. ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯಕ್ಕೆ ಇಂಟರ್ ನ್ಯಾಷನಲ್ ಕಿಲಾಡಿ‌ ಕಿರೀಟ ಸಲ್ಲಬೇಕು. ಕೋಟಿ‌ಕೋಟಿ ಸುರಿದು ನಾಲ್ಕು ವರ್ಷ ಕೈಕಟ್ಟಿ ಕುಳಿತ ಅನ್ನದಾತ ನಿರ್ಮಾಪಕ ಸೂರಪ್ಪ ಬಾಬುಗೆ ಕಿಚ್ಚನ ಪಡೆ ಸೆಲ್ಯೂಟ್ ಹೊಡಿಲೇಬೇಕು. ಕಾರಣ ಅದ್ಧೂರಿತನ.

ಇಲ್ಲಿ ಸತ್ಯ- ಶಿವ ಬೇರೆ ಬೇರೆನಾ? ಅಥವಾ ಇಬ್ಬರು ಒಬ್ಬರೇನಾ? ಇದೊಂದು ಕೂತೂಹಲಕ್ಕೆ ಸಿನಿಮಾ ನೋಡಬೇಕಿಲ್ಲ. ಕ್ರಿಷ್ ಹಾಗೂ ಧೂಮ್‌ ಸಿನಿಮಾದಷ್ಟೇ ರೋಚಕ ಎನಿಸೋ ಕಾರ್ ಚೇಸ್ ನೋಡಿದ ನಂತರ ಕೋಟಿಗೊಬ್ಬನ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚದೇ ಇರದು.ಇಲ್ಲೊಂದು ಮೆಡಿಕಲ್‌ ಮಾಫಿಯಾ ಇದೆ. ಜೊತೆಗೆ ರಿವೇಂಜ್ ಸ್ಟೋರಿ ಇಲ್ಲಿ ಹೈಲೆಟ್. ಉಳಿದಂತೆ, ಇಲ್ಲಿ ಸಣ್ಣ ಪ್ರೇಮ್ ಕಹಾನಿ ಇದೆ, ಅಮ್ಮನ ಸೆಂಟಿಮೆಂಟ್ ಕೂಡ ಇದೆ. ಭರ್ಜರಿ ಆಕ್ಷನ್ ಮತ್ತೊಂದು ಹೈಲೆಟ್.ಒಟ್ಟಾರೆ, ಇದು ಎಲ್ಲಾ ವರ್ಗಕ್ಕೂ ಸಲ್ಲುವ ಮನರಂಜನಾತ್ಮಕ ಸಿನಿಮಾ.

ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Related Posts

error: Content is protected !!