Categories
ಸಿನಿ ಸುದ್ದಿ

ಭಜರಂಗಿ ಪ್ರಿರಿಲೀಸ್ ಫಂಕ್ಷನ್‌ಗೆ ರಾಕಿಂಗ್‌ಸ್ಟಾರ್ ಗೆಸ್ಟ್ ! ದೊಡ್ಮನೆ ಭಕ್ತರಿಗೂ-ರಾಕಿ ಬಳಗಕ್ಕೂ ಎಲ್ಲಿಲ್ಲದ ಸಂಭ್ರಮ !

ಭಜರಂಗಿಯ ದಿವ್ಯದರ್ಶನಕ್ಕೆ ಮುಹೂರ್ತ ಫಿಕ್ಸಾಗಿದೆ. ಅಕ್ಟೋಬರ್ 29ರಂದು ಬೆಳ್ಳಿತೆರೆ ಮೇಲೆ ದರ್ಶನ ಕೊಡಲಿರುವ ಭಜರಂಗಿಯನ್ನು ಕಣ್ತುಂಬಿಕೊಳ್ಳೋದಕ್ಕೆ ಇಡೀ ಪ್ರೇಕ್ಷಕಕುಲ ಕಾತುರದಿಂದ ಕಾಯ್ತಿದೆ. ಬಿಗ್‌ಸ್ಕ್ರೀನ್ ಮೇಲೆ ಹೇಗರ‍್ಬೋದು ಭಜರಂಗಿಯ ಅಬ್ಬರ ಆರ್ಭಟ ಎನ್ನುವ ಕೂತೂಹಲದ ನಡುವೆ ದೊಡ್ಮನೆ ಭಕ್ತರು ಹಾಗೂ ರಾಕಿಂಗ್ ಬಳಗದವರು ಸೀಟಿ ಹೊಡೆದು ಸಂಭ್ರಮಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. ಅದುವೇ, ಭಜರಂಗಿ-2 ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮ.

ಹೌದು, ಚಿತ್ರ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿರುವ ಹೊತ್ತಲ್ಲಿ ಭಜರಂಗಿಯ ಧ್ಯಾನವನ್ನು ಹೆಚ್ಚಿಸೋಕೆ ಹಾಗೂ ಭಜರಂಗಿಯ ಬಗ್ಗೆ ಯಾರಿಗೂ ತಿಳಿಯದಿರುವ ಅಚ್ಚರಿಯ ಸಂಗತಿಗಳನ್ನು ಹಂಚಿಕೊಳ್ಳೋದಕ್ಕೆ ಚಿತ್ರತಂಡ ಒಂದು ವೇದಿಕೆಯನ್ನು ಸಜ್ಜುಮಾಡಿದೆ. ಅಲ್ಲಿಗೆ, ಸೆಲ್ಫ್ ಮೇಡ್ ಷೆಹಜಾದ್‌ನನ್ನು ಕರೆಸೋದಕ್ಕೆ ಫಿಲ್ಮ್ ಟೀಮ್ ಪ್ಲ್ಯಾನ್ ಮಾಡಿದೆ. ಇದೇ ಅಕ್ಟೋಬರ್ 29ರಂದು ಪ್ರಿರಿಲೀಸ್ ಇವೆಂಟ್ ಆರ್ಗನೈಸ್ ಮಾಡಿದ್ದು ಕೆಜಿಎಫ್ ಸಾಮ್ರಾಜ್ಯದ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಆಗಮಿಸಲಿದ್ದಾರೆ. ಭಜರಂಗಿ ಶಿವಣ್ಣ ಹಾಗೂ ಇಡೀ ಚಿತ್ರತಂಡದ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಸುದ್ದಿ ಭಜರಂಗಿ ಕೋಟೆಯಿಂದ ನುಸುಳಿಕೊಂಡು ಬಂದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ದೊಡ್ಮನೆ ಅಭಿಮಾನಿ ದೇವರುಗಳು ಹಾಗೂ ಅಣ್ತಮ್ಮನ ಫ್ಯಾನ್ಸ್ ಗಳು ಒಟ್ಟಿಗೆ ಸೇರಿ ಸಂಭ್ರಮಿಸುವಂತಾಗಿದೆ.

ಈಗಾಗಲೇ ಹಲವು ಭಾರಿ ಶಿವಣ್ಣ ಹಾಗೂ ಯಶ್ ವೇದಿಕೆ ಹಂಚಿಕೊಂಡಿದ್ದಾರೆ. ಆದರೆ, ಭಜರಂಗಿ-2 ಚಿತ್ರ ಬಿಡುಗಡೆಗೂ ಮುನ್ನ ನಡೆಯುತ್ತಿರುವ ಈ ಪೂರ್ವಭಾವಿ ಕಾರ್ಯಕ್ರಮ ಫ್ಯಾನ್ಸ್ ಗೆ ಮಾತ್ರವಲ್ಲ ಅವರಿಬ್ಬರಿಗೂ ಸ್ಪೆಷಲ್. ಯಾಕಂದ್ರೆ, ಜಯಣ್ಣ ಹಾಗೂ ಭೋಗೇಂದ್ರ ಅವರು ಶಿವಣ್ಣ ಹಾಗೂ ಯಶ್ ಇಬ್ಬರ ಪಾಲಿಗೂ ಅನ್ನದಾತರು. ಗೂಗ್ಲಿ, ಗಜಕೇಸರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಿಗೆ ಕೋಟಿ ಬಂಡವಾಳ ಹೂಡಿದ ಕೀರ್ತಿ ಸದ್ಯ `ಭಜರಂಗಿ-೨’ ಚಿತ್ರಕ್ಕೆ ದುಡ್ಡು ಹಾಕಿರುವ ನಿರ್ಮಾಪಕರುಗಳಾದ ಜಯ್ಯಣ್ಣ ಹಾಗೂ ಭೋಗೇಂದ್ರ ಅವರಿಗೆ ಸಲ್ಲುತ್ತೆ. ಹೀಗಾಗಿ, ಸೆಂಚುರಿಸ್ಟಾರ್ ಹಾಗೂ ಸೆಲ್ಫ್ ಮೇಡ್ ಷೆಹಜಾದ್ ಒಟ್ಟಿಗೆ ಸ್ಟೇಜ್ ಶೇರ್ ಮಾಡುತ್ತಿರುವುದು, ಭಜರಂಗಿಯ ಅಬ್ಬರ-ಆರ್ಭಟಕ್ಕೆ ಕಿಕ್‌ಸ್ಟಾರ್ಟ್ ಕೊಡಲಿಕ್ಕೆ ಬರುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ.

ಅಂದ್ಹಾಗೇ, ಭಜರಂಗಿ ಎಂಟು ವರ್ಷಗಳ ನಂತರ ಸೀಕ್ವೆಲ್ ಮೂಲಕ ಬೆಳ್ಳಿಪರದೆಗೆ ಎಂಟ್ರಿಕೊಡ್ತಿರುವುದರಿಂದ ಸಹಜವಾಗಿ ನಿರೀಕ್ಷೆಗಳು ಗರಿಗೆದರಿವೆ. ಟೀಸರ್-ಟ್ರೈಲರ್-ಮೇಕಿಂಗ್ ಜೊತೆ ಪ್ರತಿಯೊಂದು ಪಾತ್ರವೂ ಕೂಡ ಸಿನಿಮಾಕುಲವನ್ನು ಕಣ್ಣುಜ್ಜಿಕೊಂಡು ಕಾಯುವಂತೆ ಮಾಡ್ತಿದೆ. ನಿರ್ದೇಶಕ ಎ. ಹರ್ಷ ಅವರು ಒಂದೊಂದು ಕ್ಯಾರೆಕ್ಟರನ್ನು ಕೂಡ ಅಷ್ಟೇ ಕೇರ್‌ಫುಲ್ಲಾಗಿ ಮತ್ತು ಕ್ಯೂರಿಯಸ್ಸಾಗಿ ಸೃಷ್ಟಿ ಮಾಡಿದ್ದಾರೆ. ಶಿವಣ್ಣ-ಸೌರವ್ ಲೋಕಿ-ಶ್ರುತಿ-ಭಾವನ ಜೊತೆಗೆ ಯುವಪ್ರತಿಭೆಗಳಾದ ಪ್ರಸನ್ನ ಹಾಗೂ ಚೆಲುವರಾಜ್ ಪಾತ್ರ ಕೂತೂಹಲದ ಕಟ್ಟೆಯನ್ನು ಹೊಡೆದುರುಳಿಸಿದೆ.

ಪಾತ್ರವರ್ಗದ ಲುಕ್-ಗೆಟಪ್-ಖದರ್ ಜೊತೆಗೆ ಕಣ್ಣಿಗೆ ಹೊಡೆಯುವಂತಹ ಮೇಕಿಂಗ್ ಭಜರಂಗಿ-2' ಚಿತ್ರದ ಮೇಲಿನ ಕೌತುಕವನ್ನು ಒಂದೊಂದೆ ತೂಕ ಹೆಚ್ಚಿಸುತ್ತಾ ಹೋಗಿವೆ. ದೇವರು ಮತ್ತು ರಾಕ್ಷಸರ ನಡುವಿನ ಕದನ ನೋಡೋದಕ್ಕೆ ಒಂಟಿಕಾಲಿನಲ್ಲಿ ನಿಂತು ಕಾಯುವಂತೆ ಮಾಡಿವೆ. ಈ ಕೂತೂಹಲಭರಿತ ಕದನಕ್ಕೆ ಅಕ್ಟೋಬರ್ 29ರಂದು ತೆರೆಬೀಳಲಿದೆ. ನಾಲ್ಕು ಭಾರಿ ಸೂರ್ಯ, ನಾಲ್ಕು ಭಾರಿ ಚಂದ್ರ ಬಂದುಹೋದರೆ ಮುಗೀತು ಬಿಳಿಪರದೆಯ ಮೇಲೆಭಜರಂಗಿ’ ವಜ್ರದಂತೆ ಝಳಪಿಸುತ್ತಾನೆ. ಅಲ್ಲಿವರೆಗೂ ಕಾಯ್ರಿ.

ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಉಪೇಂದ್ರ- ರವಿಚಂದ್ರನ್‌ ತ್ರಿಶೂಲಂ ಚಿತ್ರಕ್ಕೆ ವಿದೇಶದಲ್ಲಿಈಗಿಂದಲೇ ಬೇಡಿಕೆ!

ಕನ್ನಡ ಚಿತ್ರರಂಗ ಸಾಗರದಾಚೆ ಸುದ್ದಿಯಾಗಿರುವುದು ಹೊಸದೇನಲ್ಲ. ಆದರೆ, ಸಿನಿಮಾ ಮೊದಲು ಇಲ್ಲಿ ತೆರೆಕಂಡು ಆ ಬಳಿಕ ವಿದೇಶಗಳಲ್ಲಿ ಸದ್ದು ಮಾಡಿದ್ದು ಗೊತ್ತಿದೆ. ಈಗ ಹೊಸ ಸುದ್ದಿ ಅಂದರೆ, ಉಪೇಂದ್ರ ಮತ್ತು ರವಿಚಂದ್ರನ್‌ ಅಭಿನಯದ “ತ್ರಿಶೂಲಂ” ಚಿತ್ರ ಬಿಡುಗಡೆ ಮುನ್ನವೇ ವಿದೇಶಿಗರಿಂದ ಬೇಡಿಕೆ ಹೆಚ್ಚಿದೆ. ಹೌದು, ಸದ್ಯ ಜನವರಿಯಲ್ಲಿ ಬಿಡುಗಡೆಯಾಗಲಿರುವ “ತ್ರಿಶೂಲಂ” ಚಿತ್ರವನ್ನು ಆರ್.ಎಸ್. ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಇನ್ನು, ಈ ಸಿನಿಮಾಗೆ ಓಂಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಆರ್.ಎಸ್. ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ “ತ್ರಿಶೂಲಂ”
ಚಿತ್ರ ಇನ್ನೂ ಚಿತ್ರೀಕರಣದಲ್ಲಿದೆ. ಈಗಲೇ ಭಾರಿ ಸದ್ದು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.


ಈ ಚಿತ್ರದ ಬಗ್ಗೆ ಮಾಹಿತಿ ತಿಳಿದುಕೊಂಡ ಇಂಗ್ಲೆಂಡ್‌ನ ಸಿನಿಮಾ ವ್ಯಾಪಾರಿಗಳು, ಈ ಚಿತ್ರದ ವ್ಯಾಪಾರಕ್ಕೆ ಮುಂದೆ ಬಂದಿದ್ದಾರೆ. ಸದ್ಯ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ನಿರ್ಮಾಪಕ ಆರ್ ಶ್ರೀನಿವಾಸ್ ತಿಳಿಸಿದ್ದಾರೆ. ಅಕ್ಟೋಬರ್‌ 26 ರಿಂದ ಹೈದರಾಬಾದ್‌ನಲ್ಲಿ ಗಣೇಶ್ ಮಾಸ್ಟರ್ ಅವರ ಸಾರಥ್ಯದಲ್ಲಿ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ನಡೆಯಲಿದೆ. ಉಪೇಂದ್ರ, ರವಿಚಂದ್ರನ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.


ಆರ್. ಶ್ರೀನಿವಾಸ್ ಹಾಗೂ ಬಿ.ಎಸ್. ಕಿರಣ್ ಗೌಡ ನಿರ್ಮಿಸುತ್ತಿರುವ ಈ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದಾರೆ. ಚಂದ್ರಮೌಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ರವಿ ಕ್ಯಾಮೆರಾ ಹಿಡಿದರೆ, ಲಕ್ಷ್ಮಣ ರೆಡ್ಡಿ ಸಂಕಲನವಿದೆ. ರವಿವರ್ಮ, ಗಣೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶಾನ್ವಿ ನಿಮಿಕಾ ರತ್ನಾಕರ್, ಸಾಧುಕೋಕಿಲ, ಪ್ರದೀಪ್ ರಾವತ್, ನಾಗಶೇಖರ್, ರಂಗಾಯಣ ರಘು, ಅಚ್ಯುತರಾವ್, ಸುಧಾ ಬೆಳವಾಡಿ, ಉಗ್ರಂ ಮಂಜು ಇತರರು ಇದ್ದಾರೆ. ಇನ್ನುಳಿದಂತೆ ಮುಂಬೈ ಬೆಡಗಿ ಅದಿತಿ ಆರ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ಮೇಘನಾ ಗಾಂವ್ಕರ್ ಈಗ ಡಿಸಿಪಿ!‌ ಶಿವಾಜಿ ಸುರತ್ಕಲ್‌ 2 ಸಿನಿಮಾಗೆ ಕ್ರೈಂ ಬ್ರಾಂಚ್‌ ಆಫೀಸರ್‌

ನಟಿ ಮೇಘನಾ ಗಾಂವ್ಕರ್‌ ಈಗ ಡಿಸಿಪಿಯಾಗಿದ್ದಾರೆ. ಅರೇ ಡಿಸಿಪಿ ಆಗಿರೋದು ನಿಜ. ಅದು ಸಿನಿಮಾದಲ್ಲಿ. ಕಳೆದ ವರ್ಷ ಬಿಡುಗಡೆಯಾಗಿ ಜೋರು ಸುದ್ದಿಯಾದ “ಶಿವಾಜಿ ಸುರತ್ಕಲ್” ಸಿನಿಮಾ ಎರಡನೇ ಭಾಗ ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಶಿವಾಜಿ ಸುರತ್ಕಲ್ ಆಗಿ ಕಾಣಿಸಿಕೊಂಡಿದ್ದ ರಮೇಶ್ ಅರವಿಂದ್ ಅವರ ಜೊತೆ ರಾಧಿಕಾ ನಾರಾಯಣ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ ಅವರು ಇಲ್ಲೂ ಮುಂದುವರಿಯುತ್ತಿದ್ದಾರೆ.

ಈ ಪಾತ್ರಗಳ ಜೊತೆಗೆ ಈಗ ಮೇಘನಾ ಗಾಂವ್ಕರ್‌ ಕೂಡ ಎಂಟ್ರಿ ಕೊಡುತ್ತಿದ್ದಾರೆ. ಅವರಿಲ್ಲಿ ಡಿಸಿಪಿ ದೀಪ ಕಾಮತ್ ಆಗಿ ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ. ಬೆಂಗಳೂರ್ ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೇಘನ ಗಾಂವ್ಕರ್ ಅವರು ಮೊದಲ ಬಾರಿಗೆ ಟಫ್ ಕಾಪ್ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರವಾದ ಡಿಸಿಪಿ ದೀಪ ಕಾಮತ್, ಶಿವಾಜಿ ಸುರತ್ಕಲ್ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಮತ್ತು ಮೇಲಧಿಕಾರಿಯ ಪಾತ್ರವಂತೆ.

ಇನ್ನಷ್ಟು ಹೊಸ ಪಾತ್ರಗಳು ಚಿತ್ರತಂಡ ಸೇರಲಿದ್ದು ಚಿತ್ರದ ನಿರ್ಮಾಣದ ಕೆಲಸವು ಈಗಾಗಲೇ ನಡೆಯುತ್ತಿದೆ, ಕೆಲವೇ ದಿನದಲ್ಲಿ ಮುಹೂರ್ತ ನಡೆಸಿ ಚಿತ್ರೀಕರಣಕ್ಕೆ ಹೋಗುವುದಾಗಿ ಚಿತ್ರತಂಡ ತಿಳಿಸಿದೆ. ರಮೇಶ್ ಅರವಿಂದ್ ಅವರ 103ನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ ಅವರು ನಿರ್ದೇಶಿಸಿ, ರೇಖಾ.ಕೆ.ಎನ್ ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಕಬ್ಜ ಕೋಟೆಗೆ ಕೆಜಿಎಫ್ ಡಾನ್ ಲಗ್ಗೆ ; ಉಪ್ಪಿ- ಕಿಚ್ಚ ಎದುರು ತೊಡೆ ತಟ್ಟಿದ ‘ಕೆಜಿಎಫ್’ ಕಿಂಗ್ ಪಿನ್ ರಾಜೇಂದ್ರ ದೇಸಾಯಿ!

ತಾಜ್ ಮಹಲ್ ಸಾರಥಿ ಆರ್. ಚಂದ್ರು ಕಟ್ಟುತ್ತಿರುವ “ಕಬ್ಜ” ಕೋಟೆ ಮುಂದೊಂದು ದಿನ ದೊಡ್ಡ ಸಾಮ್ರಾಜ್ಯವಾಗಿ ಬೆಳೆದು‌ ನಿಲ್ಲುತ್ತೆ. ಇಡೀ ಜಗತ್ತು ಕಣ್ಣರಳಿಸಿ ನೋಡುವಂತಹ ಸಾಮ್ರಾಜ್ಯವಾಗುತ್ತೆ. ಅದರಲ್ಲಿ ಎರಡು‌ ಮಾತಿಲ್ಲ. ಯಾಕಂದ್ರೆ, ಗಾಂಧಿ‌ನಗರದ ಮಂದಿಗೆ ಯಾವತ್ತೋ ಹಾಲಿವುಡ್ ತೋರಿಸಿದವರು, ಕಾಲಿಟ್ಟ ಕಡೆಯಲೆಲ್ಲಾ ಮಾಣಿಕ್ಯನೇ ಸರೀ‌ ಎಂದೆನಿಸಿಕೊಂಡು ಬಾದ್ ಷಾ ಆಗಿ ಮೆರೆಯುತ್ತಿರುವವರು ‘ಕಬ್ಜ’ ಕಿಂಗ್ ಢಮ್ ಗೆ ಸೇರಿಕೊಂಡಿದ್ದಾರೆ. ಇವರಿಬ್ಬರು ಕಿಂಗ್ ಮೇಕರ್‌ಗಳಾದರೆ, ಕಿಂಗ್ ಫಿನ್ ಗಳು ಇರ್ಬೇಕಲ್ಲವೇ, ಅಪ್ ಕೋರ್ಸ್ ಇರಬೇಕು ಅಂತಾನೇ ನಿರ್ದೇಶಕ ಆರ್ ‌ಚಂದ್ರು ಅವರು ಖಡಕ್ ಖಳನಾಯಕರನ್ನು ಒಬ್ಬೊಬ್ಬರನ್ನಾಗಿ ಕಬ್ಜ ಕೋಟೆಗೆ ಕಳುಹಿಸಿಕೊಡ್ತಿದ್ದಾರೆ. ಬಿಟೌನ್ ನವಾಬ್ ಅಖಾಡಕ್ಕೆ ಎಂಟ್ರಿಕೊಟ್ಟ ಬೆನ್ನಲ್ಲೇ ಕೆಜಿಎಫ್ ಡಾನ್ ಆಗಮನವಾಗಿದೆ.

ಭಾರತೀಯ ಚಿತ್ರರಂಗ ಒಮ್ಮೆ ಹಿಂತಿರುಗಿ‌ ನೋಡಿದಂತಹ ಸಿನಿಮಾ ಕೆಜಿಎಫ್. ಇಂತಹ ಮಹೋನ್ನತ ಚಿತ್ರದಲ್ಲಿ ಅಭಿನಯಿಸಿ ಜಗತ್ತು ಸುತ್ತಿಬಂದ ಖಳನಾಯಕ ಈಗ ಕಬ್ಜ ಕೋಟೆಗೆ ಲಗ್ಗೆ ಇಟ್ಟಿದ್ದಾರೆ. ನಿರ್ದೇಶಕ ಆರ್ ಚಂದ್ರು ಅವರು ಕೆಜಿಎಫ್ ಡಾನ್ ಗೆ ರತ್ನಗಂಬಳಿ ಹಾಕಿ‌ ಬರಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಖಳ್ ನಾಯಕ್ ಬೇರಾರು ಅಲ್ಲ ‘ಕೆಜಿಎಫ್ ‘ ಚಿತ್ರದಲ್ಲಿ ರಾಕಿಭಾಯ್ ಎದುರು ಧಗಧಗಿಸಿದ ರಾಜೇಂದ್ರ ದೇಸಾಯಿ ಅಲಿಯಾಸ್ ಲಕ್ಕಿ ಲಕ್ಷ್ಮಣ್. ಲಕ್ಕಿ‌ಲಕ್ಣ್ಮಣ್ ಮೂಲ ಹೆಸರು. ಮೂಲತಃ ಮೈಸೂರಿನವರು. ಸಾಫ್ಟ್‌ವೇರ್ ಕಂಪೆನಿಯಲ್ಲಿ ಸಾವಿರಾರು ಉದ್ಯೋಗಿಗಳಿಗೆ ಇವರೇ ಬಾಸ್. ಕೈತುಂಬಾ ಕಾಸು.
ಹೀಗಿದ್ರೂ ಸಿನಿಮಾದ ಸೆಳೆತ, ಬಿಗ್ ಸ್ಕ್ರೀನ್ ಮೇಲೆ ಧಗಧಗಿಸಬೇಕು ಎನ್ನುವ ಹಪಹಪಿತನ ಇವರನ್ನ ಬಣ್ಣದ ಲೋಕಕ್ಕೆ ಎಳೆದುಕೊಂಡು ಬಂದು ಬಿಟ್ಟಿತು. ಕೆಜಿಎಫ್ ಎನ್ನುವ ಕನ್ನಡದ ಹೆಮ್ಮೆಯ ಸಿನಿಮಾದಲ್ಲಿ ಅವಕಾಶವನ್ನೂ ಕೊಡಿಸಿತು. ಇಲ್ಲಿಂದ ಇವರ ನಸೀಬೇ ಬದಲಾಯ್ತು. ಲಕ್ಕಿ ಲಕ್ಷ್ಮಣ್ ‌ಆಗಿದ್ದವರು ರಾಜೇಂದ್ರ ದೇಸಾಯಿಯಾಗಿ ಬದಲಾದರು. ಕೆಜಿಎಫ್ ಮೂಲಕ ಗಡಿದಾಟಿ‌ ಬೆಳೆದರು. ಒಂದೇ ಚಿತ್ರದಲ್ಲಿ ನೇಮು- ಫೇಮು ಹೆಚ್ಚಿಸಿಕೊಂಡರು. ಕಲಾವಿದನಾಗುವ ಕನಸಿಗೆ ಕಿಚ್ಚು ಹಚ್ಚಿಕೊಂಡಿದ್ದಕ್ಕೆ ಕೆಜಿಎಫ್ ಪಾರ್ಟ್ 2 ನಲ್ಲಿ ಕಂಟಿನ್ಯೂ ಆದರು. ಈಗ ಬಿಡುಗಡೆಗಾಗಿ ಇಡೀ ವಿಶ್ವದ ಜೊತೆ ಇವರು ಕಾಯ್ತಿದ್ದಾರೆ. ಈ ಮಧ್ಯೆ ಕನ್ನಡದ ಬಹುನಿರೀಕ್ಷೆಯ ಕಬ್ಜ ಚಿತ್ರಕ್ಕೆ ಸೇರಿಕೊಂಡಿದ್ದಾರೆ.

ಕೆಜಿಎಫ್ ಅಂಗಳದಲ್ಲಿ ಡಾನ್ ಆಗಿ ಅಬ್ಬರಿಸಿದ ಲಕ್ಕಿ ಲಕ್ಷ್ಮಣ್, ಕಬ್ಜ ಕೋಟೆಯಲ್ಲಿ ಏನಾಗಲಿದ್ದಾರೆ? ಇವರ ಪಾತ್ರವೇನು? ರಿಯಲ್ ಸ್ಟಾರ್ ವಿರುದ್ದ ತೊಡೆ ತಟ್ಟುತ್ತಾರಾ ಅಥವಾ ಕಿಚ್ಚನ ಜೊತೆ ಕೈಜೋಡಿಸ್ತಾರಾ? ಹೇಗಿರಲಿದೆ ಕೆಜಿಎಫ್ ಕಿಂಗ್ ಪಿನ್ ರಾಜೇಂದ್ರ ದೇಸಾಯಿಯ ಹೊಸ ಅವತಾರ ಹಾಗೂ ಅಬ್ಬರ? ಈ ಕೂತೂಹಲಕ್ಕೆ ನಿರ್ದೇಶಕ ಆರ್ ಚಂದ್ರು ಅವರು ಬ್ರೇಕ್ ಹಾಕಿಲ್ಲ‌. ಬದಲಾಗಿ, ಕಬ್ಜ ಕೋಟೆಗೆ ಲಕ್ಕಿ ಲಕ್ಷ್ಮಣ್‌ರನ್ನು ಸ್ವಾಗತಿಸಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡಲು ಖುಷಿ ಹಾಗೂ ಕಾತುರತೆ ಇರೋದಾಗಿ ಸೋಷಿಯಲ್ ಮೀಡಿಯಾ ದಲ್ಲಿ ಅನೌನ್ಸ್ ಮಾಡಿದ್ದಾರೆ. ಅಂದ್ಹಾಗೇ, ಕಬ್ಜ ಸಾಮ್ರಾಜ್ಯ ದೊಡ್ಡದಾಗುತ್ತಿದೆ. ಒಬ್ಬರ ನಂತರ ಒಬ್ಬರು ಕಬ್ಜ ಕೋಟೆಗೆ ಲಗ್ಗೆ ಇಡುತ್ತಿದ್ದಾರೆ.


ರಿಯಲ್ ಸ್ಟಾರ್ ಉಪೇಂದ್ರ ನಾಯಕತ್ವದ ಕೋಟೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರ ಘರ್ಜನೆ ಜೋರಾಗಿರಲಿದೆ. ವಿಷ್ಣು ದಾದಾ ಮುಂದೆ ಗುಡುಗಿದ್ದ ಬಿಟೌನ್ ನವಾಬ್ ಷಾ ಮತ್ತೆ ಕನ್ನಡಕ್ಕೆ ಅಭಿನಯಿಸಿದ್ದರು ಕಬ್ಜ ಚಿತ್ರತಂಡ ಸೇರಿಕೊಂಡಿದ್ದಾರೆ. ಈಗ ಕೆಜಿಎಫ್ ಕಿಂಗ್ ಫಿನ್ ರಾಜೇಂದ್ರ ದೇಸಾಯಿ ಆಗಮನವಾಗಿದೆ. ಕಬೀರ್ ದುಹಾನ್ ಸಿಂಗ್, ಪ್ರದೀಪ್ ರಾವತ್, ಸಮುದ್ರಕಣಿ, ಪ್ರಕಾಶ್ ರಾಜ್, ಡ್ಯಾನೀಶ್ ಸೇಠ್, ಅನುಪ್ ರೇವಣ್ಣ ಸೇರಿದಂತೆ ಅತೀ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಒಬ್ಬೊಬ್ಬರಾಗಿ ಕಬ್ಜ ಕಿಂಗ್ ಡಮ್ ಪ್ರವೇಶ ಮಾಡುತ್ತಿದ್ದು, ಸೋಷಿಯಲ್ ಮೀಡಿಯಾ ಮೂಲಕವೇ ಡೈರೆಕ್ಟರ್ ಬಡಾ ಬ್ರೇಕಿಂಗ್ ನ್ಯೂಸ್ ಗಳನ್ನು ನೀಡುತ್ತಿದ್ದಾರೆ.

‘ಕಬ್ಜ’ ಕನ್ನಡದ ಹೆಮ್ಮೆಯ ಸಿನಿಮಾ ಆಗಲಿದೆ, ಗಂಧದಗುಡಿಯ ಕೀರ್ತಿಯನ್ನು ಹೆಚ್ಚಿಸಲಿದೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ‌ ಹೊಸದೊಂದು‌‌ ಮೈಲುಗಲ್ಲು ಸೃಷ್ಟಿಸಲಿದೆ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ.‌‌ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳು ಕಬ್ಜ ಕೋಟೆಯಲ್ಲಿದ್ದಾರೆ ಎನ್ನುವುದು ನಿರೀಕ್ಷೆಯ ಮೂಲ ಕಾರಣವಾದರೆ, ಕಣ್ಣಿಗೆ ಹೊಡೆಯುವಂತಹ ಮೇಕಿಂಗ್, ಒಂದೊಂದು‌ ಫ್ರೇಮ್ ನಲ್ಲಿ ಎದ್ದುಕಾಣುವ ಅದ್ದೂರಿತನ ಸಿನಿಮಾ ಪ್ರೇಮಿಗಳನ್ನು ಸರಕ್ಕನೆ ತಿರುಗಿ‌ ನೋಡುವಂತೆ ಮಾಡ್ತಿದೆ.‌ ಕಬ್ಜ ಕೋಟೆ ಸಕಲರನ್ನೂ ಸೆಳೆಯುತ್ತಿದೆ. ಸದ್ಯ, ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ, ಹೈದ್ರಬಾದ್ ಹಾಗೂ ಫಾರಿನ್ ನಲ್ಲೂ ಶೂಟಿಂಗ್ ಪ್ಲ್ಯಾನ್ ಆಗಿದೆ. ಕೆಜಿಎಫ್ ನಂತರ ಕನ್ನಡದ ಕೀರ್ತಿಪತಾಕೆಯನ್ನು ಹೊರದೇಶದಲ್ಲಿ ಹಾರಿಸಬೇಕು ಎನ್ನುವ ಹುಮ್ಮಸ್ಸು ಹಾಗೂ ಹುರುಪಿನಿಂತ ಇಡೀ ಕಬ್ಜ ಟೀಮ್ ಬೆವರು ಸುರಿಸಿ ಕೆಲಸ ಮಾಡ್ತಿದೆ. ಶ್ರಮವಹಿಸಿ ದುಡಿಯುತ್ತಿರುವ ತಂಡಕ್ಕೆ ಶುಭವಾಗಬೇಕು ಅಲ್ಲವೇ.


ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ಕೋಟಿಗೊಬ್ಬನ ಸಂಭ್ರಮ

ಸುದೀಪ್ ನಟನೆಯ ಕೋಟಿಗೊಬ್ಬ3 ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಸಂಭ್ರಮವಿದೆ. ಚಿತ್ರತಂಡ ಕೂಡ ಖುಷಿ ಹಂಚಿಕೊಂಡಿದೆ.

ಅಂದು ಸಂಭ್ರಮ ಜೊತೆ ಕಲಾವಿದ, ತಂತ್ರಜ್ಞರ ಗೆಲುವಿನ ಮಾತುಗಳೇ ಹರಿದುಬಂದವು. ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ನಟ ಉಪೇಂದ್ರ ಕೂಡ ಈ ಕಾರ್ಯಕ್ರದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದು ಹೈಲೆಟ್. ಈ ವೇಳೆ ನಿರ್ಮಾಪಕ ಸೂರಪ್ಪಬಾಬು ಭಾವುಕರಾದರು. ಈ ವೇಳೆ ಮಾತಿಗಿಳಿದ ಅವರು, ನಾನು ಈವರೆಗೆ ನಿರ್ಮಿಸಿದ ಯಾವುದೇ ಚಿತ್ರದ ಡೇಟ್ ಅನೌನ್ಸ್ ಮಾಡಿದ ಮೇಲೆ ಮುಂದೆ ಹಾಕಿದ್ದಿಲ್ಲ, ಇದೇ ಮೊದಲ ಬಾರಿಗೆ ನನ್ನ ಸಿನಿಮಾ ತಡೆಯುವ ಪ್ರಯತ್ನ ನಡೆಯಿತು, ಈ ಸಂದರ್ಭದಲ್ಲಿ ಕಾಲ್ ಮಾಡಿದ ಸುದೀಪ್, ನಾನಿದ್ದೀನಿ, ಏನೇ ಇದ್ದರೂ ನಾನು ನೋಡಿಕೊಳ್ತೇನೆ, ಧೈರ್ಯವಾಗಿರಿ ಎಂದು ಧೈರ್ಯ ತುಂಬಿದರು. ಇಷ್ಟು ವರ್ಷ ನಾನು ಉಳಿಸಿಕೊಂಡು ಬಂದಿದ್ದ ಗೌರವಕ್ಕೆ ಧಕ್ಕೆಯಾಯಿತು. ನನ್ನ ಮಗಳೂ ಸಹ ಕಾಲ್‌ಮಾಡಿ ಧೈರ್ಯ ತುಂಬಿದ್ದರಿಂದ ನಾನಿಲ್ಲಿ ನಿಂತಿದ್ದೇನೆ, ಜಾಕ್‌ಮಂಜು, ಸೈಯದ್ ಸಲಾಂ, ಗಂಗಾಧರ್ ಇವರೆಲ್ಲ ನನಗೆ ಹೆಗಲಾಗಿ ನಿಂತಿದ್ದರಿಂದ ಸಿನಿಮಾ ಬಿಡುಗಡೆಯಾಯಿತು. ಸುದೀಪ್ ಜೊತೆ ನಾನೇನೇ ಜಗಳ ಆಡಿದ್ದರೂ ಅದು ಸಿನಿಮಾಗಾಗಿ ಮಾತ್ರ, ಅವರು ಮುಂದೆ ನನಗೆ ಕಾಲ್‌ಶೀಟ್ ಕೊಡುತ್ತಾರೋ ಇಲ್ವೋ ಗೊತ್ತಿಲ್ಲ, ಆದರೆ, ನನ್ನ ಜೀವ ಇರೋವರ‍್ಗೂ ಅವರಿಗೆ ಕೃತಜ್ಞನಾಗಿರುತ್ತೇನೆ. ಈ ಕಾರ್ಯಕ್ರಮವನ್ನು ಶ್ರೇಯಸ್ ಮೀಡಿಯಾ ಪರವಾಗಿ ಮಿತ್ರ ನವರಸನ್ ಆಯೋಜಿಸಿದ್ದಾರೆ, ಅವರಿಂದ ಕನ್ನಡ ಚಿತ್ರಗಳ ಪ್ರೊಮೋಷನ್‌ಗೆ ತುಂಬಾ ಹೆಲ್ಪ್ ಆಗುತ್ತಿದೆ, ಎಲ್ಲರೂ ಅವರನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಮಾತಿಗಿಳಿದ ಸುದೀಪ್, ಕೊನೇ ಗಳಿಗೆಯಲ್ಲಿ ಬಾಬು ಅವರಿಗೆ ಕರೆಮಾಡಿ ನಾನಿದ್ದೀನಿ ಅಂತ ಹೇಳಬೇಕಾದರೆ ಅದಕ್ಕೆ ಕಾರಣ ನಾನಲ್ಲ, ನಾನಿಷ್ಟು ವರ್ಷ ಸಂಪಾದಿಸಿದ್ದ ಸ್ನೇಹಿತರ ಬಳಗ, ಅವರಿಗೆ ನಾನಿಲ್ಲಿ ಥ್ಯಾಂಕ್ಸ್ ಹೇಳುತ್ತೇನೆ. ಸಿನಿಮಾ ಒಂದು ಪೇಂಟಿಂಗ್, ಅದು ಇಷ್ಟು ಚೆನ್ನಾಗಿ ಬರಬೇಕಾದರೆ ಶಿವಕಾರ್ತೀಕ್, ಗೆಳೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕಲಾವಿದರಾದ ರವಿಶಂಕರ್, ಮಡೊನ್ನ, ಆಶಿಕಾ ಅಲ್ಲದೆ ಇನ್ನೂ ಅನೇಕರು ಈ ಸಕ್ಸಸ್‌ನಲ್ಲಿ ಪಾಲುದಾರರು ಎಂದ ಅವರು, ಪೈರಸಿ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ರೂ ಕೆಲವರು ಅದನ್ನು ಮಾಡಿದರು. ಎಲ್ಲಕಡೆ ಕೆಟ್ಟ ಜನ ಇದ್ದೇ ಇರುತ್ತಾರೆ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಅಷ್ಟೆ.

ನಮ್ಮತಂಡ ಹಗಲು ರಾತ್ರಿ ಕಷ್ಟಪಟ್ಟು ಸಾಕಷ್ಟು ಲಿಂಕ್‌ಗಳನ್ನು ಡಿಲೀಟ್ ಮಾಡಿಸಿದೆ. ಈ ಹಂತದಲ್ಲಿ ಗಿರೀಶ್ ಅವರ ಶ್ರಮವನ್ನು ಮೆಚ್ಚಲೇಬೇಕು, ಜನರಿಗೂ ಅಷ್ಟೇ, ಈಗಾಗಲೇ ಎರಡು ವರ್ಷದಿಂದ ಮೊಬೈಲ್, ಟಿವಿಯಲ್ಲಿ ಸಿನಿಮಾಗಳನ್ನು ನೋಡಿದ್ದೀರಿ. ಈಗಲಾದರೂ ಅದರಿಂದ ಹೊರಬಂದು ಚಿತ್ರಮಂದಿರದಲ್ಲಿ ಸಿನಿಮಾನೋಡಿ. ಮೊಬೈಲಿನಲ್ಲಿ ನೋಡುವುದಕ್ಕೂ, ಥಿಯೇಟರಿನಲ್ಲಿ ಸಿನಿಮಾ ನೋಡುವುದಕ್ಕೂ ವ್ಯತ್ಯಾಸ ಏನೆಂಬುದನ್ನೇ ನೀವೇ ಕಂಡುಕೊಳ್ಳಿ. ಅಲ್ಲದೆ ಕಲೆಕ್ಷನ್ ಅನ್ನೋದು ನನಗೆ ಮಾನದಂಡ ಆಗಿಲ್ಲ. ನಿರ್ಮಾಪಕರು ಖುಷಿಯಾಗಿದ್ದಾರೆ, ವಿತರಕರು ಖುಷಿಯಾಗಿದ್ದಾರೆ. ನನಗೆ ಅಷ್ಟು ಸಾಕು. ನಿರ್ಮಾಪಕರು ಕಲೆಕ್ಷನ್ ಬಗ್ಗೆ ಏನಾದರೂ ಹೇಳಿದರೆ ನಾನು ಅದನ್ನು ಅನುಮೋದಿಸಬಹುದು ಎಂದು ಸುದೀಪ್ ಹೇಳಿದರು.

ಉಪೇಂದ್ರ ಮಾತನಾಡಿ, ಸುದೀಪ್ ಹೆಸರಿನಲ್ಲೆ ಕಿಚ್ಚು ಇದೆ, ಅವರು ತಮ್ಮ ಜೊತೆ ಕೆಲಸ ಮಾಡೋರಿಗೆಲ್ಲ ಕಿಚ್ಚು ಹಚ್ಚಿಬಿಡ್ತಾರೆ ಎಂದರು. ನಾಯಕಿ ಮಡೋನ್ನ, ಅಭಿರಾಮಿ. ಬೇಬಿ ಆದ್ಯ, ರವಿಶಂಕರ್‌ಗೌಡ ಸೇರಿದಂತೆ ಚಿತ್ರತಂಡದ ಸದಸ್ಯರು ಇದ್ದರು.

Categories
ಸಿನಿ ಸುದ್ದಿ

ಕನ್ನಡಕ್ಕೊಂದು ಸ್ಪೆಷಲ್ ಗಿಫ್ಟ್ ! ಮದ್ವೆ ಸಮಾಚಾರ ಕೊಡ್ತಾರೆ ವಿಕ್ರಮ್ ಪ್ರಭು !

ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾನೂ ಸೇರಿದೆ. ಶೀರ್ಷಿಕೆಯೇ ಹೇಳುವಂತೆ, ಇದೊಂದು ಮಜವಾದ ಕಥೆ ಹೊಂದಿರುವ ಚಿತ್ರ. ಚಿತ್ರಕ್ಕೆ ನಿಶಾನ್ ನಾಣಯ್ಯ ಹೀರೋ. ಸೋನು ಗೌಡ ನಾಯಕಿ. ವಿಶೇಷ ಪಾತ್ರದಲ್ಲಿ ಪ್ರೇಮ ಇದ್ದಾರೆ…

ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದ ಚಿತ್ರೀಕರಣ ನವೆಂಬರ್ 15 ರಿಂದ ಆರಂಭವಾಗಲಿದೆ. ಬೆಂಗಳೂರು, ಉಡುಪಿ, ಮಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ನಿಶಾನ್ ನಾಣಯ್ಯ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ಸೋನು ಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಪ್ರೇಮ(ಓಂ ಖ್ಯಾತಿ) ಕಾಣಿಸಿಕೊಳ್ಳಲಿದ್ದಾರೆ. ಪವಿತ್ರ ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ಚಿತ್ರದ ಸಲುವಾಗಿ ನಿಶಾನ್ ನಾಣಯ್ಯ, ಸೋನು ಗೌಡ ಹಾಗೂ ಪ್ರೇಮ ಅವರ ಫೋಟೊ ಶೂಟ್ ಅದ್ದೂರಿಯಾಗಿ ನಡೆಯಿತು.

ಇಪ್ಪತ್ತು ವರ್ಷಗಳಿಂದ ಸೇಲ್ಸ್ ಹಾಗೂ ಸ್ಟಾಕ್ ಮಾರ್ಕೆಟಿಂಗ್ ನಲ್ಲಿ ಅನುಭವ‌ ಹೊಂದಿರುವ ನಿರ್ದೇಶಕ ವಿಕ್ರಂಪ್ರಭು ಮೂಲತಃ ಮಂಗಳೂರಿನವರು. ಈಗ ಪುಣೆಯಲ್ಲಿ ವಾಸ. ಕಾನ್ಫಿಡದಲ್ಲಿ ನಿರ್ದೇಶನ ತರಬತಿ ಹಾಗೂ ZIMA ದಲ್ಲಿ ಸಂಕಲನ ಕಾರ್ಯದ ಬಗ್ಗೆ ತಿಳಿದುಕೊಂಡಿರುವ ಅವರು,
ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶಕರು, ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂಜಯ್ ಶರ್ಮ, ಅಭಯ್ ದೇವ್ ಪುರಿ, ಅಶೀಶ್ ಪಾವಸ್ಕರ್ ಬರೆದಿದ್ದಾರೆ. ಸತೀಶ್ ಹೆಚ್ ವಿ ಹಾಗೂ ಆಂಟೋನಿ ಎಮ್ ಈ ಚಿತ್ರದ ಸಹ ನಿರ್ದೇಶಕರು.

ಮೂರು ಹಾಡುಗಳಿದ್ದು, ಬಾಲಚಂದ್ರ ಪ್ರಭು ಸಂಗೀತ ನೀಡಲಿದ್ದಾರೆ. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಗೀತರಚನೆ ಹಾಗೂ ಉದಯಲೀಲ ಅವರ ಛಾಯಾಗ್ರಹಣ “ವೆಡ್ಡಿಂಗ್ ಗಿಫ್ಟ್” ಚಿತ್ರಕ್ಕಿರಲಿದೆ.

Categories
ಸಿನಿ ಸುದ್ದಿ

ಸಿಲಿಕಾನ್ ಸಿಟಿಗೆ ಬಂದಿಳಿದರಾ ಮೋಹಕತಾರೆ ರಮ್ಯಾ? ಅಣ್ಣಾವ್ರ ನೆನಪಲ್ಲಿ-ಸಿಟಿ ರೌಂಡ್ಸ್ !

ದಿಲ್ಲಿ ಮೇಡಂ ರಮ್ಯಾ ಸೈಲೆಂಟಾಗಿ ಸಿಲಿಕಾನ್ ಸಿಟಿಗೆ ಬಂದಿಳಿದ್ರಾ? ಫ್ಯಾನ್ಸ್ಗೆ ಸಪ್ರೈಸ್ ಕೊಡೋದಕ್ಕೆ ಫ್ಲೈಟ್ ಏರಿ ಬಂದು ರಾಜಧಾನಿಯಲ್ಲಿ ಲ್ಯಾಂಡ್ ಆದ್ರಾ? ಗೆಸ್ಟ್ ಆಗಿ ಬಂದಿದ್ದಾರಾ ಅಥವಾ ಬೆಂಗಳೂರಿನಲ್ಲೇ ಸೆಟ್ಲ್ ಆಗ್ತಾರಾ? ಸದ್ಯಕ್ಕೆ ಎಲ್ಲಿದ್ದಾರೆ? ಕೆಂಪೇಗೌಡ ಅಖಾಡಕ್ಕೆ ಬಂದಾಕ್ಷಣ ರಮ್ಯಾ ಮೇಡಂ, ಅಣ್ಣಾವ್ರ ನೆನಪಲ್ಲಿ-ಖುಷಿಖುಷಿಯಲ್ಲಿ ಸಿಟಿ ರೌಂಡ್ಸ್ ಮಾಡಿದ್ದು ಎಲ್ಲೆಲ್ಲಿ? ಈ ಎಲ್ಲಾ ಪ್ರಶ್ನೆಗಳು ಒಮ್ಮೆಲೆ ಹುಟ್ಟುವುದಕ್ಕೆ ಕಾರಣ ಮೋಹಕತಾರೆಯ ಇನ್ಸ್ಟಾಗ್ರಾಮ್ ಸ್ಟೇಟಸ್

ರಮ್ಯಾ.. ಕೇವಲ ಎರಡೇ ಎರಡು ಅಕ್ಷರದ ಈ ಹೆಸರಿಗೆ ಅದರದ್ದೇ ಆದ ಗತ್ತಿದೆ ಮತ್ತು ತಾಕತ್ತಿದೆ. ಬಣ್ಣದ ಲೋಕದಿಂದ ದೂರ ಉಳಿದರೂ, ರಾಜಕೀಯದಿಂದ ಅಂತರ ಕಾಯ್ದುಕೊಂಡರೂ ಕೂಡ ಮೋಹಕತಾರೆ ರಮ್ಯಾ ಹೆಸರು ಪೆಪ್ಪರ್‌ಮೆಂಟ್ ತಿನ್ನೋರಿಂದ ಹಿಡಿದು ಪಾರ್ಲಿಮೆಂಟ್‌ನಲ್ಲಿ ಕೂಡುವವರ ಬಾಯಲೆಲ್ಲಾ ನಲಿದಾಡುತ್ತೆ. ದುನಿಯಾದಲ್ಲಿ ನಟಿ ರಮ್ಯಾ ಹವಾ ಹಿಂಗಿರುವಾಗ, ಬಜಾರ್‌ನಲ್ಲಿ ಬ್ರ್ಯಾಂಡ್ ಆಗಿರುವಾಗ, ಫೀಲ್ಡ್ ನಲ್ಲಿದ್ದರೇನು- ಫೀಲ್ಡ್ ನಲ್ಲಿಲ್ಲದಿದ್ದರೇನು ಸುದ್ದಿಯಾಗಲೆಬೇಕು ಸದ್ದು ಮಾಡ್ಲೆಬೇಕು. ಅದೇ ಕೆಲಸ ಸೋಷಿಯಲ್ ಲೋಕದಲ್ಲಿ ಭರದಿಂದ ಸಾಗ್ತಿದೆ.ಊರಿಗೊಬ್ಳೆ ಪದ್ಮಾವತಿ ಸೋಷಿಯಲ್ ಅಂಗಳದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.

ಈ ವಿಚಾರ ತಮಗೂ ಗೊತ್ತಿರುತ್ತೆ. ತನಗೆ ಅನಿಸಿದ್ದನ್ನು ನೇರಾನೇರಾ ಹೇಳುತ್ತಾ, ಟಾಂಗ್ ಕೊಡುತ್ತಾ, ಟೀಕೆ ಮಾಡುತ್ತಾ, ಬುದ್ದಿವಾದ ಹೇಳುತ್ತಾ ಸಕ್ರಿಯವಾಗಿರುವ ದಿಲ್ಲಿ ಮೇಡಂ, ಫ್ಯಾನ್ಸ್ ಜೊತೆ ಚಾಟ್ ಮಾಡುತ್ತಾ, ಸ್ಟೇಟಸ್ ಹಾಕುತ್ತಾ ಸೋಷಿಯಲ್ ಮೀಡಿಯಾದಲ್ಲೇ ಕ್ವಾಲಿಟಿ ಟೈಮ್‌ನ ಸ್ಪೆಂಡ್ ಮಾಡುತ್ತಾರೆ. ಅದೇ ರೀತಿ, ಕಳೆದ ಹದಿನೆಂಟು ಗಂಟೆಗಳ ಹಿಂದೆ ಅಪ್‌ಲೋಡ್ ಮಾಡಿರುವ ಸ್ಟೇಟಸ್, ಸ್ಯಾಂಡಲ್‌ವುಡ್ ಕ್ವೀನ್ ಸದ್ದಿಲ್ಲದೇ ಬೆಂಗಳೂರಿಗೆ ಬಂದಿಳಿದಿರಬಹುದು ಎನ್ನುವ ಹಿಂಟ್ ಕೊಡ್ತಿದೆ. ಅಣ್ಣಾವ್ರ ನೆನೆದು `ನಗುತಾ ನಗುತಾ ಬಾಳು ನೀನು ನೂರು ವರುಷ’ ಗೀತೆಯನ್ನು ಹಾಕಿಕೊಂಡು ಖುಷಿಖುಷಿಯಲ್ಲಿ ಸಿಟಿ ರೌಂಡ್ಸ್ ಹಾಕಿದ್ದಾರೆ. ಕಠಾರಿವೀರ ಸುರಸುಂದರಾಂಗನ ರಾಣಿಯ ರೌಂಡ್ಸ್ ನೋಡಿ ಫ್ಯಾನ್ಸ್ ಮಾತ್ರವಲ್ಲ ನೋಡುಗರೆಲ್ಲರೂ ಕೂಡ ಥ್ರಿಲ್ಲಾಗಿದ್ದಾರೆ.

ಕಳೆದ ಭಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಸೋಲೊಪ್ಪಿಕೊಂಡ ಬೆನ್ನಲ್ಲೇ, ದಿಲ್ಲಿ ಮೇಡಂ ರಮ್ಯಾ ಅಜ್ಞಾತವಾಸಕ್ಕೆ ಹೋದರು. ಈ ಮಧ್ಯೆ ರಾತ್ರೋರಾತ್ರಿ ಮಂಡ್ಯಕ್ಕೆ ಬಂದು ಮನೆ ಖಾಲಿ ಮಾಡಿಸಿಕೊಂಡು ಹೋದರು. ಆ ಮೇಲೆ ದಿಲ್ಲಿಯಲ್ಲಿ ಸೆಟ್ಲ್ ಆದ್ರಾ ಅಥವಾ ಡೆಲ್ಲಿ ಬಿಟ್ಟು ಫಾರಿನ್‌ಗೆ ಹಾರಿದ್ರಾ ಗೊತ್ತಿಲ್ಲ? ಇನ್ಸ್ ಟಾಗ್ರಾಮ್ ಸ್ಟೇಟಸ್ ನೋಡಿದಾಗೆಲ್ಲಾ ಪದ್ಮಾವತಿ ಅದೆಲ್ಲೋ ಫಾರಿನ್‌ನಲ್ಲಿ ಟಂಗೂರಿದಂತೆ ಕಾಣ್ತಿತ್ತು. ಸೋಷಿಯಲ್ ಮೀಡಿಯಾದಲ್ಲಿ ಒಮ್ಮೆ ಲೈವ್ ಬಂದಾಗ ಕೊರೊನಾ ವ್ಯಾಕ್ಸಿನೇಷನ್ ಹಾಕಿಸಿಕೊಂಡಿಲ್ಲ. ಮೊಡೊರ್ನಾ ವ್ಯಾಕ್ಸಿನ್‌ಗಾಗಿ ಕಾಯ್ತಿದ್ದೀನಿ ಎಂದಾಗ ಅಕ್ಕ ಫಾರಿನ್‌ನಲ್ಲಿ ಇರಬೇಕು ಅಂತ ಎಲ್ಲರೂ ಅಂದುಕೊಂಡಿದ್ದರು. ಎಲ್ಲಾದರೂ ಇರಲಿ ಗೌರಮ್ಮ ಚೆನ್ನಾಗಿರಲಿ ಅಂತ ಫ್ಯಾನ್ಸ್ ಹಾರೈಸಿದ್ದರು. ಈಗ ಸದ್ದುಗದ್ದಲವಿಲ್ಲದೇ ಗೌರಮ್ಮ ರಾಜಧಾನಿಗೆ ಕಾಲಿಟ್ಟಿರುವಂತೆ ಕಾಣ್ತಿದೆ.

ಅಷ್ಟಕ್ಕೂ, ರಮ್ಯಕ್ಕ ರಾಜಧಾನಿಗೆ ಬಂದಿರಬಹುದು ಎನ್ನುವ ಸಂಶಯ ಬಂದಿದ್ದು ಸ್ಟೇಟಸ್‌ನಿಂದ. ಪದ್ಮಾವತಿ ಕ್ಯಾಪ್ಚರ್ ಮಾಡಿ ಅಪ್‌ಲೋಡ್ ಮಾಡಿರುವ ವಿಡಿಯೋ ನೋಡಿದರೆ ಹಂಡ್ರೆಂಡ್ ಪರ್ಸೆಂಟ್ ಅಕ್ಕ ಬೆಂಗಳೂರಿಗೆ ಎಂಟ್ರಿಕೊಟ್ಟಿದ್ದಾರೆ ಅನ್ಸುತ್ತೆ. ಒಂದ್ವೇಳೆ ಬಂದಿರುವುದು ನಿಜವಾದರೆ ಅವರ ಅಭಿಮಾನಿಗಳಿಗೆ ಅದಕ್ಕಿಂತ ಖುಷಿಯ ಸಂಗಂತಿ ಬೇರೊಂದಿಲ್ಲ ಬಿಡಿ. ಯಾಕಂದ್ರೆ, ಲಕ್ಕಿ ಬೆಡಗಿ ಫಿಲ್ಮ್ ಫೀಲ್ಡ್ ಗೆ ಕಮ್‌ಬ್ಯಾಕ್ ಮಾಡೋದು ಕೊಂಚ ತಡವಾಗಲಿ ಪರವಾಗಿಲ್ಲ ಆದರೆ ತವರಿಗೆ ಮರಳಬೇಕು ನಮ್ಮ ನಡುವೆ ನಮ್ಮಕ್ಕ ಇರಬೇಕು ಅಂತ ಅಭಿಮಾನಿ ದೇವರುಗಳೆಲ್ಲರೂ ಆಸೆ ಪಡ್ತಿದ್ದಾರೆ. ಅವರ ಬಯಕೆ ಈಡೇರಿಸುತ್ತಾರಾ? ಸಿಲಿಕಾನ್ ಸಿಟಿಯಲ್ಲೇನಾದರೂ ಸೆಟಲ್ ಆಗ್ತಾರಾ? ಬಣ್ಣ ಹಚ್ಚಿಕೊಂಡು ಗಾಂಧಿನಗರಕ್ಕೆ ಮರುಳುತ್ತಾರಾ? ಸಿಂಪಲ್‌ಸ್ಟಾರ್ ಅಪ್‌ಕಮ್ಮಿಂಗ್ ಚಿತ್ರಕ್ಕೆ ಹೀರೋಯಿನ್ ಆಗ್ತಾರಾ? ಈ ಎಲ್ಲಾ ಪ್ರಶ್ನೆಗೆ ಉತ್ತರವಿಲ್ಲ. ಯಾಕಂದ್ರೆ, ಗೌರಮ್ಮ ಕೆಂಪೇಗೌಡನ ಅಂಗಳಕ್ಕೆ ಬಂದಿರುವ ಸುದ್ದಿ ಇನ್ನೂ ಕನ್ಫರ್ಮ್ ಆಗಿಲ್ಲ. ಸೋ, ವೇಯ್ಟ್ ಅಂಡ್ ವಾಚ್ ಅಷ್ಟೇಯಾ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕ್ರಿಯೇಟಿವ್ ಟೈಮ್ಸ್ ಸ್ಟುಡಿಯೋ ಉದ್ಘಾಟನೆ: ಸಿನಿ ಮಂದಿ ಕನಸಿಗೆ ವಾಸು ಹೊಸ ಪರಿಕಲ್ಪನೆ

ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ೩೦ ವರ್ಷಗಳ ಕಾಲ ಬರಹಗಾರ, ಧಾರಾವಾಹಿ ನಿರ್ದೇಶಕನಾಗಿ ಸೇವೆ ಸಲ್ಲಿಸಿರುವ ಬುಕ್ಕಾಪಟ್ಟಣ ವಾಸು ಈಗಾಗಲೇ ಸೆಂಚುರಿ ಫಿಲಂ ಇನ್ಸ್ಟಿಟ್ಯೂಟ್ ಎಂಬ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಆ ಮೂಲಕ ಹಲವಾರು ಪ್ರತಿಭೆಗಳನ್ನು ಹುಟ್ಟುಹಾಕಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಗೆಳೆಯ ಶ್ರೀಸಾಯಿಕೃಷ್ಣ ಅವರ ಜೊತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಷದೊಂದಿಗೆ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಎಂಬ ಹೊಸ ಸ್ಟುಡಿಯೊವೊಂದನ್ನು ಆರಂಭಿಸಿದ್ದಾರೆ. ಇದರ ಉದ್ಘಾಟನಾ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನೆರವೇರಿತು.

ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ದೊಡ್ಡರಂಗೇಗೌಡರು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕ ಓಂ ಸಾಯಿಪ್ರಕಾಶ್, ಸಂಗೀತ ನಿರ್ದೇಶಕ ವಿ.ಮನೋಹರ್, ಬಾಮ ಹರೀಶ್, ಬಾಮ ಗಿರೀಶ್ ಹಾಗೂ ನಟಿ ಭವ್ಯಶ್ರೀ ರೈ ಇಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.
ತಮ್ಮ ಹೊಸ ಸ್ಟುಡಿಯೋದ ವಿಶೇಷತೆಗಳ ಕುರಿತಂತೆ ಮಾತನಾಡಿದ ಶ್ರೀಸಾಯಿಕೃಷ್ಣ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನೊಳಗೊಂಡ ಸ್ಟುಡಿಯೋ ಇದಾಗಿದೆ. ಈ ಹೆಸರಿಗೆ ತಕ್ಕಂತೆ ಪ್ರತಿ ಹಂತದಲ್ಲೂ ಕ್ರಿಯೇಟಿವಿಟಿ ತರಬೇಕಾಗಿತ್ತು. ವಾಸು ಅವರಲ್ಲಿರುವ ಕ್ರಿಯೇಟಿವಿಟಿ, ನಮ್ಮ ಯೋಚನೆ ಸೇರಿಸಿ ಈ ಸ್ಟುಡಿಯೋ ಬೆಳೆಸುವ ಪ್ರಯತ್ನ ಮಾಡಿದ್ದೇವೆ. ಒಂದೇ ಫ್ಲೋರ್‌ನಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನಮ್ಮ ಸ್ಟುಡಿಯೋದಲ್ಲಿ ಒದಗಿಸಲಾಗುತ್ತದೆ, ಹೊಸ ಪ್ರತಿಭೆಗಳಿಗೆ ಸಪೋರ್ಟಿವ್ ಆಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.


ನಂತರ ಬುಕ್ಕಾಪಟ್ಟಣ ವಾಸು ಮಾತನಾಡಿ ಮೊದಲು ಜಾಹೀರಾತಿಗೆಂದೇ ಈ ಸಂಸ್ಥೆ ನಿರ್ಮಿಸಿದ್ದು, ಇದೇ ಬ್ಯಾನರ್‌ನಿಂದ ಈಗ ಹೊಸ ಚಿತ್ರಗಳನ್ನು ಶುರು ಮಾಡುತ್ತಿದ್ದೇವೆ, ಮಾರ್ಕೆಟಿಂಗ್ ಮಾಡಿಕೊಡುತ್ತೇನೆಂದು ಬಂದ ಶ್ರೀಸಾಯಿಕೃಷ್ಣ, ನವೀನ ತಂತ್ರಜ್ಞಾನಗಳನ್ನೊಳಗೊಂಡ ಸ್ಟುಡಿಯೋ ಏಕೆ ಮಾಡಬಾರದು ಎಂದರು. ಆಗ ಗ್ರೀನ್‌ಮೇಟ್ ಸ್ಟುಡಿಯೋ, ಎಡಿಟಿಂಗ್ ಸ್ಟುಡಿಯೋ ರೆಡಿಯಾಯಿತು. ಸೌಂಡ್ ಎಂಜಿನಿಯರ್ ಪಳನಿ ಜೊತೆ ಸೇರಿದ ನಂತರ ರೆಕಾರ್ಡಿಂಗ್ ಸ್ಟುಡಿಯೋ ಕೂಡ ಆಯಿತು. ಸಿನಿಮಾ ಸ್ಕ್ರಿಪ್ಟ್ ಹಿಡಿದುಕೊಂಡು ಇಲ್ಲಿಗೆ ಬಂದರೆ ಬಂದರೆ ಮೊದಲಪ್ರತಿ ತೆಗೆದುಕೊಂಡು ಹೋಗಬಹುದು. ಪ್ರೇಮ್, ಶೇಖರ್, ಪಳನಿ, ರೇಣು ಸ್ಟುಡಿಯೋ ಹೀಗೆ ಬಹಳಷ್ಟು ಸ್ನೇಹಿತರು ಜೊತೆ ಸೇರಿದರು ಎಂದು ಹೇಳಿದರು.


ನಿರ್ದೇಶಕ ಸಾಯಿಪ್ರಕಾಶ್ ಮಾತನಾಡಿ ವಾಸು ೨೮ ವರ್ಷದ ಹಿಂದೆ ನನ್ನಜೊತೆ ಕೆಲಸ ಮಾಡಿದ್ದರು. ಪಕ್ಕದ ಆಂಧ್ರದಲ್ಲಿ ಆದಂಥ ಬೆಳವಣಿಗೆ ಇಲ್ಲಿ ಕಾಣುತ್ತಿಲ್ಲ, ಅಲ್ಲಿ ಪ್ರತಿಯೊಬ್ಬ ಸ್ಟಾರ್‌ಗಳು ಸ್ಟುಡಿಯೋ ಮಾಡಿ ಇಂಡಸ್ಟಿಗೆ ಕೊಡುಗೆ ಕೊಟ್ಟಿದ್ದಾರೆ. ಕನ್ನಡ ಫಿಲಂ ಇಂಡಸ್ಟ್ರಿ ಈಗ ತುಂಬಾ ಬೆಳೆದಿದೆ, ಅದಕ್ಕೆ ವಾಸು ಅವರೂ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ನಂತರ ಪ್ರೊ. ದೊಡ್ಡರಂಗೇಗೌಡರು ಮಾತನಾಡಿ ನನ್ನ ವಾಸು ಸಂಬಂಧ ತುಂಬಾ ಹಳೆಯದು, ಕುಂಕುಮ ಭಾಗ್ಯ ಎನ್ನುವ ಮೆಗಾಸೀರಿಯಲ್‌ಗೆ ನನ್ನಿಂದ 11 ಹಾಡುಗಳನ್ನು ಬರೆಸಿದ್ದರು. ಇದು ಸೆಂಚುರಿ ಫಿಲಂ ಇನ್ ಸ್ಟಿಟ್ಯೂಟ್‌ನ ಇನ್ನೊಂದು ಶಾಖೆ ಎನ್ನಬಹುದು.

ಅತ್ಯಾಧುನಿಕ ಸ್ಟುಡಿಯೋವನ್ನು ಇಂಥಾ ವಿಷಮ ಸಂದರ್ಭದಲ್ಲಿ ಮಾಡಿದ್ದಾರೆ. ಷಾರ್ಟ್ ಫಿಲಂ, ಡಾಕ್ಯುಮೆಂಟರಿಗಳನ್ನು ಸಹ ಇಲ್ಲಿ ಮಾಡಬಹುದಾಗಿದೆ ಎಂದರು, ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಮಾತನಾಡಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಸಿಗುವಂಥ ಸ್ಟುಡಿಯೋ ಮೂಲಕ ಹೊಸ ಸಾಹಸವನ್ನು ವಾಸು ಮಾಡಿದ್ದಾರೆ ಎಂದರು, ವಿ.ಮನೋಹರ್ ಮಾತನಾಡುತ್ತ ಹೊಸ ಸ್ಟುಡಿಯೋಗೆ ಶುಭ ಹಾರೈಸಿದರು,

Categories
ಸಿನಿ ಸುದ್ದಿ

ವಿವಾದದಲ್ಲಿ ಶ್ರೀಲೀಲಾ : ಕೆರೆದು ಹುಣ್ಣು ಮಾಡಕೊಳ್ಳುವುದೆಂದರೆ ಹೀಗೆ ! ಕಿಸ್ ಚೆಲುವೆಗೆ ಇದೆಲ್ಲ ಬೇಕಿತ್ತಾ?


‘ಕಿಸ್ ‘ ಚೆಲುವೆಗೆ ಇದೆಲ್ಲ ಬೇಕಿತ್ತಾ? ಕನ್ನಡ ದ ಸಿನಿಮಾ ಪ್ರೇಕ್ಷಕರು ಹೀಗೆಂದುಕೊಳ್ಳುತ್ತಿದ್ದಾರೆ‌ . ಅದಕ್ಕೆ ಅವರ ವೈಯಕ್ತಿಕ ವಿಚಾರ. ಅದನ್ನು ಬಯಲು ಮಾಡಿಕೊಡಿದ್ದು ಅವರೇ.‌ ಇಷ್ಟಕ್ಕೂ ಅದೆನೆಂದರೆ ನಟಿ ಶ್ರೀಲೀಲಾ ಅಪ್ಪ ಯಾರು ಅಂತ. ಕನ್ನಡದ ಮಟ್ಟಿಗೆ ಶ್ರೀಲೀಲಾ ಸಿನಿಮಾರಂಗಕ್ಕೆ ಬಂದು ಮೂರ್ನಾಲ್ಕು ವರ್ಷಗಳೇ ಅದವು. ಅಲ್ಲಿಂದ ಇಲ್ಲಿ ತನಕ ನಟಿ ಶ್ರೀ ಲೀಲಾ ತಂದೆ ಯಾರು ಅಂತನೆ ಗೊತ್ತಿರಲಿಲ್ಲ. ಆ ಬಗ್ಗೆ ಇಲ್ಲಿನ ಮಾಧ್ಯಮವೂ ಕೂಡ ಅವರಿಗೆ ಪ್ರಶ್ನೆ ಮಾಡಿರಲಿಲ್ಲ. ಅದರೆ ಈಗ ನಟಿ ಶ್ರೀಲೀಲಾ ಟಾಲಿವುಡ್ ಗೆ ಕಾಲಿಟ್ಟಿದ್ದಾರೆ. “ಪೆಳ್ಳಿ ಸಂದಡಿ” ಹೆಸರಿನ ಚಿತ್ರದ ಮೂಲಕ ಹೈದ್ರಾಬಾದ್ ವಾಸಿ ಆಗಿದ್ದಾರೆ.

ಅನೇಕ ಕಾರಣಕ್ಕೆ ಅ‌ಸಿನಿಮಾ‌ ಸಖತ್ ಸದ್ದು ಮಾಡುತ್ತಿದೆ. ಶ್ರೀಲೀಲಾ ಅವರ ಹಾಟ್ ಲುಕ್ ಅಂತೂ ಟಾಲಿವುಡ್ ಬೆಚ್ಚಿ ಬೀಳುವಂತೆ ಮಾಡಿದೆ. ಇದೇ ಹಿನ್ನೆಲೆಯಲ್ಲಿ ಮಾಧ್ಯಮದಲ್ಲಿ ಸಖತ್ ಸುದ್ದಿಯಾಗುತ್ತಿರುವ ಒಂದು ವಾಹಿನಿ ಸಂದರ್ಶನ ದಲ್ಲಿ ಮಾತನಾಡುತ್ತಾ ತಮ್ಮ‌ತಂದೆ ಕುರಿತು ಹೇಳಿಕೊಂಡಿದ್ದರು. ಅವರು ಕೂಡ ಅಂಧ್ರದವರೆ ಅಂತ ಹೆಮ್ಮೆ ಯಿಂದ ಹೇಳಿಕೊಂಡಿದ್ದರು. ಒಳ್ಳೆಯ ಪಾತ್ರಗಳನ್ನು ಮಾಡುತ್ತಾ ಗುರುತಿಸಿಕೊಳ್ಳುತ್ತಿರುವ ನಟಿ ಶ್ರೀಲೀಲಾ ಖ್ಯಾತ ಉದ್ಯಮಿ ಸುರಪನೇನಿ ಸುಭಾಕರ ರಾವ್ ಅವರ ಮಗಳು ತಾನು ಎಂದು ಹೇಳಿಕೊಂಡಿದ್ದರು. ಅದೀಗ ವಿವಾದ ಎಬ್ಬಿಸಿದೆ.

ನಟಿ ಶ್ರೀಲೀಲಾ ಅವರ ಈ ಹೇಳಿಕೆ ಟಾಲಿವುಡ್ ನಲ್ಲಿ ಸಂಚಲನ‌‌ ಮೂಡಿಸಿತ್ತು. ಅದೆಷ್ಟು ಜನ ಮೂಗಿನ ಮೇಲೆ‌ಬೆರಳಿಟ್ಟುಕೊಂಡಿದ್ದರು. ಇದಾದ ಬೆನ್ನಲೇ ಉದ್ಯಮಿ ಸುಭಾಕರ್ ಅವರು ನೀಡಿರುವ ಸ್ಪಷ್ಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಶ್ರೀಲೀಲಾ‌ ಹೇಳಿಕೆಗೆ ತೆಲುಗು ವಾಹಿನಿಯೊಂದರ ಜೊತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ ಸುಭಾಕರ ರಾವ್‌, ಶ್ರೀಲೀಲಾ ನನ್ನ ಮಗಳು ಅಲ್ಲ, ನನ್ನ ಪತ್ನಿಯ ಜೊತೆ ಡಿವೋರ್ಸ್ ಆದ ಬಳಿಕ ಶ್ರೀಲೀಲಾ ಜನಿಸಿದ್ದಾಳೆ. ನಾನು ನನ್ನ ಪತ್ನಿ 20 ವರ್ಷದಿಂದ ಬೇರೆಯಾಗಿದ್ದೇವೆ. ಡಿವೋರ್ಸ್ ಕೇಸ್ ಇನ್ನೂ ಕೋರ್ಟ್‍ನಲ್ಲಿ ಬಾಕಿ ಇದೆ. ನಾನು ಅವಳ ತಂದೆಯಲ್ಲ. ಶ್ರೀಲೀಲಾ ಮಾಧ್ಯಮಗಳ ಸಂದರ್ಶನದಲ್ಲಿ ನನ್ನ ಹೆಸರು ಬಳಸುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದು ನನ್ನ ಹೆಸರು ಬಳಕೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ನಾನು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ‌ ಉದ್ಯಮಿ ಸುಭಾಕರ್.

ಶ್ರೀಲೀಲಾ ಯು.ಎಸ್‍.ನಲ್ಲಿ ಜನಿಸಿದರು, ನಂತರ ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದರು. ಈಕೆಯ ತಾಯಿ ಡಾ.ಸ್ವರ್ಣಲತಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಶ್ರೀಲೀಲಾ ಮಾಡೆಲಿಂಗ್ ಮತ್ತು ರಾಂಪ್ ವಾಕ್‍ನಲ್ಲಿ ತೊಡಗಿಸಿಕೊಂಡಿದ್ದರು. 2019 ರಲ್ಲಿ ಎಪಿ ಅರ್ಜುನ್ ಅವರ ರೋಮ್ಯಾಂಟಿಕ್ ಎಂಟರ್‌ಟೇನರ್ ಸಿನಿಮಾವಾಗಿರುವ ಕಿಸ್ ಸಿನಿಮಾ ಮೂಲಕವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಭರಾಟೆ ಸಿನಿಮಾದಲ್ಲಿ ನಟಿಸಿ ಮನೆ ಮಾತಾಗಿದ್ದಾರೆ.

ಕಿಸ್, ಭರಾಟೆ ಕನ್ನಡ ಸಿನಿಮಾಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಟಿ ಶ್ರೀಲೀಲಾ ಅವರು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರು ಅಭಿನಯಿಸಿರುವ ತೆಲುಗು ಸಿನಿಮಾ ಪೆಳ್ಳಿ ಸಂದಡಿ ಸಿನಿಮಾ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿದೆ. ಶ್ರೀಲೀಲಾ ಅ, ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಇದೀಗ ಹೊಸದೊಂದು ಸುಳಿಗೆ ಸಿಲುಕಿಕೊಂಡು ಸುದ್ದಿಯಾಗಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾರಂಗದ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ; ಗೃಹಮಂತ್ರಿ ಅರಗ ಜ್ಞಾನೇಂದ್ರ

ಕನ್ನಡ ಚಿತ್ರರಂಗದಲ್ಲಿ ಅನೇಕ ಸಮಸ್ಯೆಗಳಿವೆ. ಆ ಬಗ್ಗೆ ಹಲವು ವರ್ಷಗಳಿಂದಲೂ ಚಿತ್ರೋದ್ಯಮದ ಗಣ್ಯರು ಸರ್ಕಾರದ ಗಮನಕ್ಕೆ ತರುತ್ತಲೇ ಇದ್ದಾರೆ. ಆದರೆ, ಭರವಸೆಗಳು ಸಿಗುತ್ತಿವೆ ಹೊರತು, ಅದಕ್ಕೆ ಪರಿಹಾರ ಸಿಕ್ಕಿಲ್ಲ. ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಚಿತ್ರರಂಗದವರ ಜೊತೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಪಕರಿಗೆ ಧೈರ್ಯ ತಂಬಿದ್ದಾರೆ. ಅಷ್ಟಕ್ಕೂ ಆರಗ ಜ್ಞಾನೇಂದ್ರ ಅವರು ಹೇಳಿದ್ದೇನು ಗೊತ್ತಾ?


ಕನ್ನಡ ಸಿನಿಮಾ ನಿರ್ಮಾಪಕರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿರ್ಮಾಪಕರ ಸಮಸ್ಯೆಗಳ ಕುರಿತಂತೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ. ನಾನೂ ಸಹ ಚಿತ್ರರಂಗದೊಂದಿಗೆ ನಿಕಟ ಸಂಪರ್ಕದಲ್ಲಿರುತ್ತೇನೆ. ಕನ್ನಡ ಚಿತ್ರರಂಗ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕು ಸರ್ಕಾರ ಅದಕ್ಕೆ ಬೇಕಾದ ನೆರವು ನೀಡಲಿದೆ. ನಾನು ಹೆಚ್ಚಾಗಿ ಚಿತ್ರಗಳನ್ನು ನೋಡಿಲ್ಲ. ಆದರೆ, ರಾಜ್‌ಕುಮಾರ್ ಅಭಿಮಾನಿ. ಕನ್ನಡ ಚಿತ್ರರಂಗ ಅತ್ಯುತ್ತಮ ಪ್ರತಿಭೆಗಳನ್ನು ನೀಡಿದೆ. ಚಿತ್ರರಂಗದ ಕೊಡುಗೆ ಮರೆಯುವಂತಿಲ್ಲ. ಈಗಾಗಲೇ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್‌ನಿಂದ ಆಗಿರುವ ನಷ್ಟ ಸರಿತೂಗಿಸುವ ಬಗ್ಗೆ ಚರ್ಚಿಸಲಾಗುವುದು. ಈಗಾಗಲೇ ಚಿತ್ರಮಂದಿರಗಳ ಕೆಲವು ತೆರಿಗೆಗಳನ್ನು ಮನ್ನಾ ಮಾಡುವ ಕಾರ್ಯ ನಡೆದಿದೆ. ಕಲಾವಿದರಿಗೆ ನೆರವನ್ನೂ ನೀಡಲಾಗಿದೆ ಎಂದರು.


ಪೈರಸಿ ಕುರಿತು ಮಾತಿಗಿಳಿದ ಅವರು, “ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆಯನ್ನು ನಮ್ಮ ಸರ್ಕಾರ ಕೆಲ ದಿನಗಳ ಹಿಂದಷ್ಟೆ ತಂದಿದೆ. ಭಾರಿ ಒತ್ತಡ ಇದ್ದರೂ ನಾವು ಕಾಯ್ದೆ ತಂದಿದ್ದೇವೆ. ಹಾಗೆಯೇ ಪೈರಸಿ ವಿರುದ್ಧ ಕಾಯ್ದೆ ತರಬೇಕಾದ ಪರಿಸ್ಥಿತಿ ಬಂದರೆ ಖಂಡಿತ ನಾವು ಹಿಂಜರಿಯುವುದಿಲ್ಲ ಎಂಬ ಭರವಸೆ ನೀಡಿದ ಅವರು, ನಮ್ಮ ಸೈಬರ್ ಸೆಲ್ ಬಹಳ ಶಕ್ತವಾಗಿದೆ. ತರಬೇತಿ ಪಡೆದವರನ್ನೇ ನೇಮಕ ಮಾಡಿಕೊಂಡಿದ್ದೇವೆ.

ಗುಜರಾತ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ನಮ್ಮ ಕೆಲವು ಅಧಿಕಾರಿಗಳನ್ನು ತರಬೇತಿಗೆಂದೇ ಅಲ್ಲಿಗೆ ಕಳಿಸಿದ್ದೇವೆ. ಆಧುನಿಕ ತಂತ್ರಜ್ಞಾನ ಹೊಂದಿದ ಘಟಕವನ್ನು ಹೊಂದಿದ್ದೇವೆ. ತಂತ್ರಜ್ಞಾನದ ವಿಷಯದಲ್ಲಿ ಇನ್ಫೋಸಿಸ್ ದೊಡ್ಡ ಸಹಾಯ ಮಾಡಿದೆ ಎಂದರು.
ನಾನು ರೈತರ ಮಗ. ಸಿನಿಮಾರಂಗ ಹೊಸದು.

ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್‌ಗಳ ಸಮಸ್ಯೆ ಬಗೆಹರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಗಮನ ಹರಿಸುತ್ತೇನೆ. ಅಧಿಕಾರಿಗಳಿಂದ ಮಾಹಿತಿ ಪಡೆದು ನಮ್ಮಿಂದ ಆಗಬೇಕಾದ ಸಹಾಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸೋಣ ಎಂದಿದ್ದಾರೆ. ಈ ವೇಳೆ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಜೈ ರಾಜ್‌, ಸಾ.ರಾ.ಗೋವಿಂದು, ಚಿನ್ನೇಗೌಡ, ಎನ್.ಎಂ.ಸುರೇಶ್‌, ಉಮೇಶ್‌ ಬಣಕಾರ್‌, ಕೆ.ಮಂಜು, ಪ್ರವೀಣ್‌ ಕುಮಾರ್‌, ಗಣೇಶ್‌, ನರಸಿಂಹಲು ಸೇರಿದಂತೆ ಇತರು ಇದ್ದರು.

error: Content is protected !!