ಅಪ್ಪು ಜನಾನುರಾಗಿ; ಅವರ ಸರಳತೆ ರೂಪಿಸಿಕೊಳ್ಳಿ- ಪುನೀತ್ ಗುಣಗಾನ ಮಾಡಿದ ಸಿದ್ಧರಾಮಯ್ಯ


ನನಗೆ ಗೊತ್ತಿರುವಂತೆ ಅಪ್ಪು ರೀತಿ ಯಾರೂ ಇಷ್ಟೊಂದು ಜನಪ್ರಿಯತೆ ಗಳಿಸಿರಲಿಲ್ಲ. ಅವರು ನಯ, ವಿನಯ, ಮಾನವೀಯ ಮೌಲ್ಯ ಮೈಗೂಡಿಸಿಕೊಂಡಿದ್ದ ಅಪರೂಪದ ವ್ಯಕ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಅಪ್ಪು ನಮನ ಕಾರ್ಯಕ್ರಮದಲ್ಲಿ ನಮನ ಸಲ್ಲಿಸಿದ ಅವರು ಮಾತಾಡಿದ್ದು ಹೀಗೆ. “ನಾನು ಅಪ್ಪು ನಿಧನರಾದಾಗ ದೂರದಲ್ಲಿದ್ದೆ. ಆ ವಿಷಯ ನಂಬಲಿಲ್ಲ. ಚಿಕ್ಕವಯಸ್ಸಲ್ಲೇ ಸಾವು ಹೇಗೆ ಸಾಧ್ಯ? ದೇಹವನ್ನು ಚೆನ್ನಾಗಿ ಇಟ್ಟುಕೊಂಡಿದ್ದರು. ನಿಧನಕ್ಕೂ ಅವರ ಸಾವು ಅಚ್ಚರಿ ಆಯ್ತು. ಅವರ ಸಾವಿನ ದುಃಖ ತಡೆಯೋಕೆ ಸಾಧ್ಯವಾಗಲಿಲ್ಲ. ನಮ್ಮ ಮನೆಯವರೇ ನಿಧನರಾದಷ್ಟು ನೋವಾಯಿತು. ಆ ದುಃಖ ನನ್ನನ್ನು ಆವರಿಸಿತ್ತು. ನನಗೂ ಡಾ.ರಾಜಕುಮಾರ್‌ ಅವರ ಕುಟುಂಬಕ್ಕೆ ಮೊದಲಿನಿಂದಲೂ ಆತ್ಮೀಯತೆ ಇದೆ. ರಾಜಕುಮಾರ್‌ ಅವರು ನಮ್ಮ ಜಿಲ್ಲೆಯವರು. ಈಗ ಚಾಮರಾಜನಗರಕ್ಕೆ ಸೇರಿದೆ. ನನ್ನನ್ನು ನೋಡಿದಾಗ ಅವರು ಬನ್ನಿ ಬನ್ನಿ ನಮ್ಮ ಕಾಡಿನವರು ಬಂದ್ರು ಅಂತ ಪ್ರೀತಿಯಿಂದ ಹೇಳುತ್ತಿದ್ದರು. ರಾಜಕುಮಾರ್‌ ಅವರಲ್ಲಿದ್ದ ಮಾನವೀಯ ಲಕ್ಷಣ, ನಯ, ವಿನಯ, ಸಜ್ಜನಿಕೆ ಮತ್ತು ಮನುಷ್ಯರನ್ನು ಪ್ರೀತಿಸುತ್ತಿದ್ದ ರೀತಿ, ಅಭಿಮಾನಿಗಳನ್ನು ಕಾಣುತ್ತಿದ್ದ ರೀತಿ ದೊಡ್ಡದು. ಪುನೀತ್‌ ಅವರ ನಗು, ವಿನಯತೆ, ಸರಳತೆ, ಮರೆಯೋಕೆ ಸಾಧ್ಯವಿಲ್ಲ. ಎಲ್ಲರನ್ನೂ ಬಹಳ ಗೌರವದಿಂದಲೇ ಕಾಣುತ್ತಿದ್ದರು ಎಂದರು ಸಿದ್ಧರಾಮಯ್ಯ.‌

ಒಮ್ಮೆ ಮೈಸೂರಿನಲ್ಲಿ ಪುನೀತ್‌ ಸಿಕ್ಕಿದ್ದರು. ಆಗ ರಾಜಕುಮಾರ ಸಿನಿಮಾ ಬಿಡುಗಡೆಯಾಗಿದೆ ನೋಡಿ ಮಾಮ ಅಂದಿದ್ದರು. ಅವರು ನನ್ನನ್ನು ಮಾಮ ಅನ್ನುತ್ತಿದ್ದರು. ನಾನು ಸಕ್ರಿಯ ರಾಜಕಾರಣಕ್ಕೆ ಬಂದ ಮೇಲೆ ಹೆಚ್ಚು ಸಿನಿಮಾ ನೋಡಿರಲಿಲ್ಲ. ಅದಕ್ಕೂ ಮೊದಲು ರಾಜಕುಮಾರ್‌ ಅವರ ಸಿನಿಮಾಗಳನ್ನು ವಿದ್ಯಾರ್ಥಿಯಾಗಿದ್ದ ವೇಳೆ ಸೈಕಲ್‌ ಮೇಲೆ ಹೋಗಿ ನೋಡುತ್ತಿದ್ದೆ. ಹಾಗಾಗಿ ನಾನು ಪುನೀತ್‌ ಅವರ ರಾಜಕುಮಾರ ಸಿನಿಮಾವನ್ನು ಮೈಸೂರಲ್ಲಿ ಸರಸ್ವತಿ ಥಿಯೇಟರ್ ನೋಡಿದ್ದೆ. ಅದೊಂದು ಅದ್ಭುತ ಸಿನಿಮಾ. ಒಳ್ಳೆಯ ನಟನೆ ಮಾಡಿದ್ದರು. ಅವರು ಕೇವಲ ಸಿನಿಮಾಗಾಗಿ ಸೀಮಿತವಾಗಿರಲಿಲ್ಲ. ಸಾಮಾಜಿಕ ರಂಗದಲ್ಲೂ ತೊಡಗಿಸಿಕೊಂಡಿದ್ದರು. ಸರಕಾರದ ಪ್ರತಿ ಕಾರ್ಯಕ್ರಮಗಳು ಜನರಿಗೆ ತಲುಪಬೇಕು ಎಂದು ಸರ್ಕಾರದ ಜೊತೆ ನಿಲ್ಲುತ್ತಿದ್ದರು. ಸದ್ದಿಲ್ಲದೆಯೇ ಸಮಾಜ ಸೇವೆ ಮಾಡಿದ್ದರು.

ಅವರ ತಾಯಿ ಪಾರ್ವತಮ್ಮ ಅವರು ಶಕ್ತಿಧಾಮ ಸ್ಥಾಪಿಸಿ, ಅಲ್ಲಿ ಸಾವಿರಾರು ಮಕ್ಕಳಿಗೆ, ಅಶಕ್ತಿ ಮಹಿಳೆಯರಿಗೆ ಸೂರು ಕಲ್ಪಿಸಿದ್ದರು. ರಾಜ್‌ ಕುಟುಂಬ ಅಂಥದ್ದೊಂದು ಜವಾಬ್ದಾರಿ ಹೊತ್ತುಕೊಂಡಿತ್ತು. ನಿಜಕ್ಕೂ ಅದು ಶ್ಲಾಘನೀಜಯ ಎಂದರು.
ಒಬ್ಬ ನಟ ನಿಧನರಾದಾಗ ಕೋಟಿ ಜನರು ಕಣ್ಣೀರು ಹಾಕಿದ್ದನ್ನು ನಿಜಕ್ಕೂ ನಾನು ನೋಡಿರಲಿಲ್ಲ. ಅಷ್ಟರಮಟ್ಟಿಗೆ ಪುನೀತ್‌ ಅವರ ಜನಪ್ರಿಯತೆ ಹೊಂದಿದ್ದರು. ಜನಾನುರಾಗಿಯಾಗಿದ್ದರು. ಅವರು ಇನ್ನೂ ಇರಬೇಕಿತ್ತು. ಆದರೆ ವಿಧಿ ಆಟ. ದೊಡ್ಡ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಬದುಕಿನ ಆದರ್ಶ, ಯುವ ಜನರಿಗೆ ದಾರಿದೀಪ ಎಂದು ಭಾವಿಸಿದ್ದೇನೆ. ಅವರಿಗೆ ಗೌರವಿಸಬೇಕಾದರೆ, ಅವರ ಸರಳತೆ, ವಿನಯ, ಜನಸೇವೆ, ಅವರ ಬದುಕನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಇನ್ನು, ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಹಾಗಾಗಿ ನಾನು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಪುನೀತ್ ನಿಧನರಾದ ಸಂದರ್ಭದಲ್ಲಿ ಮರಣೋತ್ತರ ಪದ್ಮಶ್ರೀ ಕೊಡಬೇಕು ಎಂದು ಹೇಳಿದ್ದೆ. ಸಿಎಂ ಇಲ್ಲೇ ಇದ್ದಾರೆ. ಸಂಪುಟದಲ್ಲಿ ತೀರ್ಮಾನಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಒತ್ತಾಯಿಸಬೇಕು ಎಂದರು.

Related Posts

error: Content is protected !!