ಗಾಂಧಿನಗರಕ್ಕೆ ಹಲವು ಮಂದಿ ಆಸೆಯ ಕಂಗಳಲ್ಲೇ ಎಂಟ್ರಿಯಾಗುತ್ತಾರೆ. ತಾನೂ ಹೀರೋ ಆಗಬೇಕು, ನಿರ್ದೇಶಕ ಆಗಬೇಕು ಅಂತ. ಆದರೆ, ಕಲೆ ಕೆಲವರನ್ನು ಮಾತ್ರ ಕೈ ಬೀಸಿ ಕರೆಯುತ್ತೆ. ಆ ಸಾಲಿಗೆ ಮಾಧ್ಯಮ ಗೆಳೆಯ ಕಿರಣ್ ಹಾವೇರಿ ಮತ್ತು ಅವರ ಗೆಳೆಯರು ಸೇರಿದ್ದಾರೆ. ಹೌದು, ಕಿರಣ್ ಹಾವೇರಿ ಅವರು ಅವರು ಹೀರೋ ಆಗಿರೋದು ಗೊತ್ತೇ ಇದೆ. “ಗೋರಿ” ಸಿನಿಮಾ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. “ಗೋರಿ” ಎಂಬ ಹೆಸರೇ ಒಂದು ರೀತಿ ಕುತೂಹಲ ಹುಟ್ಟಿಸುತ್ತೆ. ಹಾಗೆಯೇ ಸಿನಿಮಾದ ಕಥೆ ಕೂಡ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಕಾರಣ, ಇದೊಂದು ಪ್ರೇಮಕಥೆ. ಅದರಲ್ಲೂ ಸಮಾನ ಮನಸ್ಕ ಗೆಳೆಯರೆಲ್ಲರೂ ಕೂಡಿ ಮಾಡಿರುವ ಚಿತ್ರವಿದು. ಕಷ್ಟಪಟ್ಟು ಅನ್ನುವುದಕ್ಕಿಂತ ತುಂಬಾನೇ ಇಷ್ಟಪಟ್ಟು ಮಾಡಿರುವ ಚಿತ್ರ. ಆ ಕಾರಣಕ್ಕೆ, “ಗೋರಿ” ಒಂದು ಹೊಸ ಬಗೆಯ ಸಿನಿಮಾ ಅನ್ನಬಹುದು. ಈಗಾಗಲೇ ಚಿತ್ರ ಒಂದಷ್ಟು ಸದ್ದು ಮಾಡಿದೆ. ಆ ಸಾಲಿಗೆ ಮತ್ತೊಂದು ಹಾಡಿನ ಮೂಲಕವೂ ಸೌಂಡು ಮಾಡುತ್ತಿದೆ.
“ನೀನಿರದೇ ನೀನಿರದೇ ನಾನು, ನಿಂತಲ್ಲೇ ಶವವಾದೆ ಗೊತ್ತೇನು…” ಎಂಬ ಹಾಡು ರಿಲೀಸ್ ಆಗಿದ್ದು, ಅದೊಂದು ಎಮೋಷನಲ್ ಸಾಂಗ್. ಈ ಹಾಡನ್ನು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರು, ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಗೀತ ಸಾಹಿತಿ ಕೆ.ಕಲ್ಯಾಣ್ ಅವರ ಸಾಹಿತ್ಯ ಇರುವ ಈ ಗೀತೆಗೆ ವಿನು ಮನಸು ಅವರ ಸಂಗೀತವಿದೆ. ಕಿರಣ್ ಹಾವೇರಿ ನಟಿಸಿರುವ ಈ ಚಿತ್ರವನ್ನು ಗೋಪಾಲಕೃಷ್ಣ ಹೊಮ್ಮರಡಿ ನಿರ್ದೇಶನ ಮಾಡಿದ್ದಾರೆ.
ಸದ್ಯ ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಈ ಸಿನಿಮಾ ಯು/ಎ ಸರ್ಟಿಫಿಕೆಟ್ ಪಡೆದಿದೆ. “ಪ್ರೀತಿಯ ಸಮಾದಿ” ಎಂಬುದು ಶೀರ್ಷಿಕೆಯ ಅಡಿಬರಹ. ಈ ಅಡಿಬರಹ ಓದಿದರೆ, ಇದೊಂದು ಅಪ್ಪಟ ಪ್ರೇಮಿಗಳ ಕಥೆ ಅನ್ನುವುದು ಗೊತ್ತಾಗುತ್ತೆ. ಎಲ್ಲಾ ಲವ್‌ಸ್ಟೋರಿಗಳಲ್ಲೂ ನೋವು ಸಹಜ. ಈ “ಗೋರಿ” ಸಿನಿಮಾದಲ್ಲೂ ಆ ನೋವು ಇದೆಯಾ? ಗೊತ್ತಿಲ್ಲ.
ಆದರೆ, ಸಿನಿಮಾ ನೋಡಿದವರಿಗೆ ಆ ಪ್ರೀತಿಯ ಕಥೆ, ವ್ಯಥೆ ಮತ್ತು ಪ್ರೇಮಿಗಳ ಮನದೊಳಗಿರುವ ಗಾಢವಾದ ನೋವು ಏನೆಂಬುದು ಗೊತ್ತಾಗುತ್ತೆ. ಸದ್ಯ ಆನಂದ್ ಆಡಿಯೋದ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಇನ್ನು, ಈ ಹಾಡಿಗೆ ಸರಿಗಮಪ ಖ್ಯಾತಿಯ ಮೆಹಬೂಬ್ ಸಾಬ್ ಅವರು ಹಾಡಿದ್ದಾರೆ.