ಈಗಂತೂ ಎಲ್ಲೆಡೆ ವೆಬ್‌ಸೀರೀಸ್‌ಗಳದ್ದೇ ಮಾತು. ಅದರಲ್ಲೂ ಕಂಟೆಂಟ್ ಇರುವ ವೆಬ್‌ಸೀರಿಸ್‌ಗಳ ಬಗ್ಗೆಯಂತೂ ಎಲ್ಲಿಲ್ಲದ ಮಾತು. ಹಲವು ಭಾಷೆಗಳಲ್ಲಿ ಈಗಾಗಲೇ ವೆಬ್‌ಸೀರೀಸ್‌ಗಳ ಹವಾ ಜೋರಾಗಿದೆ. ಅದು ಕನ್ನಡಕ್ಕೂ ಹೊರತಲ್ಲ. ಹೌದು, ಇತ್ತೀಚೆಗೆ ಕನ್ನಡದಲ್ಲಿ ಸಾಕಷ್ಟು ವೆಬ್‌ಸೀರೀಸ್‌ಗಳು ಪ್ರಸಾರವಾಗುತ್ತಿವೆ. ಯುವಕರೇ ಹೆಚ್ಚಾಗಿ ವೆಬ್‌ಸೀರೀಸ್‌ಗಳತ್ತ ಮುಖ ಮಾಡುತ್ತಿದ್ದಾರೆ. ಆ ಮೂಲಕ ಅವರೆಲ್ಲರೂ ಗುರುತಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಈಗ ಮತ್ತೊಂದು ಹೊಸ ವೆಬ್‌ಸೀರೀಸ್ ಶುರುವಾಗುತ್ತಿದೆ.
ಹೌದು, ಈಗಾಗಲೇ “ರಂಕಲ್ ರಾಟೆ” ಮತ್ತು “ಮದುವೆ ಮಾಡ್ರೀ ಸರಿ ಹೋಗ್ತಾನೆ” ಸಿನಿಮಾಗಳನ್ನು ನಿರ್ದೇಶಿಸಿರುವ ಗೋಪಿ ಕೆರೂರ್ ಅವರು, ಹೊಸದೊಂದು ವೆಬ್‌ಸೀರೀಸ್‌ಗೆ ಕೈ ಹಾಕಿದ್ದಾರೆ. ಅದಕ್ಕೆ “ಕಿಟ್ಟಿ ಸಂಸಾರದಲ್ಲಿ ಸಿಡಿಮಿಡಿ” ಎಂದು ನಾಮಕರಣ ಮಾಡಿದ್ದಾರೆ. ಈ ವೆಬ್‌ಸೀರೀಸ್ ನಿರ್ದೇಶನದ ಜೊತೆಗೆ ಅವರು ಹೀರೋ ಆಗಿಯೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸದ್ಯ ವೆಬ್‌ಸೀರೀಸ್ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಗೋಪಿ ಕೆರೂರ್ ಅವರಿಗೆ ನಾಯಕಿಯಾಗಿ ಐಶ್ವರ್ಯ ಇದ್ದಾರೆ.
ಉಳಿದಂತೆ ಸಿದ್ಧಿ ವಿನಾಯಕ ಕಾಣಿಸಿಕೊಳ್ಳುತ್ತಿದ್ದಾರೆ. ಆಶಾ ಅವರು ಇತ್ತೀಚೆಗೆ ಕ್ಯಾಮೆರಾ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಇನ್ನು, ಈ ವೆಬ್‌ಸೀರೀಸ್ ಅನ್ನು ಝೇಂಕಾರ್ ಮ್ಯೂಸಿಕ್ ಕಂಪನಿ ನಿರ್ಮಿಸುತ್ತಿದೆ.
ಎಂಟರ್‌ಟೈನ್ಮೆಂಟ್ ಈಗ ಮೊದಲಿಗಿಂತಲೂ ಹೊಸತನದಿಂದ ಕೂಡಿದೆ. ಹೊಸಬರು ಹೊಸ ಹೊಸ ಅಲೋಚನೆಗಳಲ್ಲಿ ಕಥೆ ಹೆಣೆಯುತ್ತಿದ್ದಾರೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ವೆಬ್‌ಸೀರೀಸ್‌ಗಳು ಮೂಡಿ ಬರುತ್ತಿವೆ. ಆ ಸಾಲಿಗೆ ಈಗ ಕಿಟ್ಟಿ ಸಂಸಾರದಲ್ಲಿ ಸಿಡಿಮಿಡಿ ಕೂಡ ಸೇರುತ್ತಿದೆ.