Categories
ಸಿನಿ ಸುದ್ದಿ

ಹೊಸ ವರ್ಷಕ್ಕೆ ಶುಭ ಕೋರಿದ ದಚ್ಚು-ಕಿಚ್ಚ

ಹೊಸ ವರ್ಷ ಶುರುವಾಗಿದೆ. ಎಲ್ಲರೂ ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕನ್ನಡದ ಬಹುತೇಕ ಸ್ಟಾರ್‌ ನಟರು ಕೂಡ ತಮ್ಮ ಸೋಶಿಯಲ್‌ ಮೀಡಿಯಾ ಮೂಲಕ ಶುಭಾಶಯ ತಿಳಿಸಿದ್ದಾರೆ. ದರ್ಶನ್‌, ಸುದೀಪ್‌, ಗಣೇಶ್‌, ಡಾಲಿ ಧನಂಜಯ್‌, ದುನಿಯಾ ವಿಜಯ್‌, ನೆನಪಿರಲಿ ಪ್ರೇಮ್‌ ಸೇರಿದಂತೆ ಕನ್ನಡದ ಬಹುತೇಕ ನಟ,ನಟಿಯರು, ನಿರ್ದೇಶಕರು ಕೂಡ ಹೊಸ ವರ್ಷ ಎಲ್ಲರಿಗೂ ಒಳ್ಳೆಯದ್ದನ್ನು ತರಲಿ ಎಂದು ಶುಭಾಶಯ ಕೋರಿದ್ದಾರೆ.


ಹೊಸ ವರ್ಷದ ಪ್ರತೀ ಕ್ಷಣವೂ ಸಂತಸ ತುಂಬಿರಲಿ
ನಟ ದರ್ಶನ್ ಟ್ವೀಟ್‌ ಮಾಡುವ ಮೂಲಕ ನಾಡಿನ ಜನರಿಗೆ ಹಾಗು ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ. “ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಆಶಿಸುತ್ತಾ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು”. ಎಂದು ಟ್ವೀಟ್‌ ಮಾಡಿದ್ದಾರೆ. ಅವರ ಬರಹ ಇರುವ ಟ್ವೀಟ್‌ನಲ್ಲಿ ಅವರದ್ದೊಂದು ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಕೆಟ್ಟದ್ದು ಬಿಡಿ, ಒಳ್ಳೆಯದ್ದು ತಗೊಂಡ್‌ ಮುಂದೆ ಸಾಗಿ
ನಟ ಸುದೀಪ್‌ ಕೂಡ ಟ್ವೀಟ್‌ ಮಾಡಿದ್ದು, ಟ್ವೀಟ್‌ನಲ್ಲಿ ಕೆಟ್ಟದನ್ನು ಬಿಟ್ಟು ಒಳ್ಳೆಯದನ್ನು ತೆಗೆದುಕೊಂಡು ಮುಂದುವರೆಯಬೇಕು ಎಂದಿದ್ದಾರೆ.

ಸುದೀಪ್‌ ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ಹಂಚಿಕೊಂಡು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. “ಉತ್ತಮ ಮತ್ತು ಉತ್ತಮವಲ್ಲದ ಘಟನೆಗಳು, ಸಂದರ್ಭಗಳು ಪ್ರತಿ ವರ್ಷ ಬರುತ್ತವೆ. ನಾವೆಲ್ಲರೂ ಉತ್ತಮ ಅಲ್ಲದನ್ನು ಹಿಂದೆ ಬಿಟ್ಟು, ಉತ್ತಮ ಆಗಿರುವುದನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ಸುಂದರವಾದ ಸೂರ್ಯೋದಯದೊಂದಿಗೆ ನಾವು 2022ಕ್ಕೆ ಕಾಲಿಟ್ಟದ್ದೇವೆ. ಮತ್ತು ಈ ವರ್ಷ ಉತ್ತಮವಾದದನ್ನು ಮಾಡೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ” ಎಂದು ಸುದೀಪ್‌ ಟ್ವೀಟ್ ಮಾಡಿದ್ದಾರೆ.

Categories
ಸಿನಿ ಸುದ್ದಿ

ಅಪ್ಪು ಮನೆಗೆ ಕಮಲ್‌ ಹಾಸನ್‌ ಭೇಟಿ; ಕುಟುಂಬಕ್ಕೆ ಸಾಂತ್ವನ

ಪುನೀತ್ ರಾಜ್‌ಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅದ್ಭುತ ಸಿನಿಮಾಗಳ ಮೂಲಕ ಅವರಿನ್ನೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರು ಇಲ್ಲ ಎಂಬ ಭಾವನೆ ಯಾರಲ್ಲೂ ಇಲ್ಲ. ಅವರು ನಿಧನರಾಗಿ ಎರಡು ತಿಂಗಳಾದರೂ ಪ್ರತಿ ದಿನ ಸಮಾಧಿಗೆ ಸಾವಿರಾರು ಜನ ಭೇಟಿ ನೀಡಿ ಪೂಜಿಸುತ್ತಿದ್ದಾರೆ. ಅವರ ಮನೆಗೂ ಭೇಟಿ ನೀಡುವ ಸ್ಟಾರ್‌ ನಟರ ಸಂಖ್ಯೆ ಕೂಡ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ನಟ ಪ್ರಭಾಸ್‌ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಜನವರಿ ೧ರಂದು ತಮಿಳಿನ ಖ್ಯಾತ ನಟ ಕಮಲ್‌ ಹಾಸನ್‌ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಅವರು ವಿಕ್ರಂ ಸಿನಿಮಾದ ಶೂಟಿಂಗ್‌ಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಈ ಸಮಯದಲ್ಲಿ ಅವರು ಪುನೀತ್‌ ರಾಜಕುಮಾರ್‌ ಅವರ ನಿವಾಸಕ್ಕೆ ಭೇಟಿ ನೀಡಿ, ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರ ಜೊತೆ ಮಾತನಾಡಿ, ಚರ್ಚಿಸಿ ಸಾಂತ್ವನ ಹೇಳಿದ್ದಾರೆ.

ಪುನೀತ್ ಅವರು ನಿಧನರಾದಾಗ ಕಮಲ್ ಹಾಸನ್ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದರು. ಪುನೀತ್‌ ಅವರ ಅಂತಿಮ ದರ್ಶನಕ್ಕೆ ಅವರು ಆಗಮಿಸಿರಲಿಲ್ಲ. ಈಗ ಪುನೀತ್ ನಿವಾಸಕ್ಕೆ ಆಗಮಿಸಿ, ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಈಗಾಗಲೇ ಸ್ಟಾರ್ ನಟ-ನಟಿಯರು ಪುನೀತ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಚಿರಂಜೀವಿ, ರಾಮ್ ಚರಣ್ ತೇಜ, ಜೂ ಎನ್‌ಟಿಆರ್, ಬಾಲಕೃಷ್ಣ, ನಾಗಾರ್ಜುನ, ಮೋಹನ್‌ಬಾಬು, ತಮಿಳು ನಟ ವಿಶಾಲ್, ಸೂರ್ಯ, ಸಿದ್ಧಾರ್ಥ್ ಸೇರಿದಂತೆ ಹಲವರು ಆಗಮಿಸಿ ಸಾಂತ್ವನ ಹೇಳಿದ್ದಾರೆ.

Categories
ಸಿನಿ ಸುದ್ದಿ

ಜೀ5 ಹೊಸ ಪ್ರಯತ್ನ.. ಅಭಿಮಾನಿಗಳೊಟ್ಟಿಗೆ ಶಿವಣ್ಣನ ‘ಭಜರಂಗಿ-2’ ಸಕ್ಸಸ್ ಸೆಲೆಬ್ರೇಷನ್!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ಜೀ 5 ಓಟಿಟಿಯಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ಭಜರೇ ಭಜರಂಗಿ-2 ಓಟಿಟಿಗೆ ಬಂದ ಮೂರೇ ದಿನಗಳಲ್ಲಿ 5 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆ ಪಡೆದುಕೊಂಡಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆ ಕಂಡ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಭಜರಂಗಿ 2’ ಪಾತ್ರವಾಗಿದೆ. ಇದು ಭಜರಂಗಿ ಬಳಗಕ್ಕೆ ಹಾಗೂ ಶಿವಣ್ಣ ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದೆ.

ಅಭಿಮಾನಿಗಳೊಟ್ಟಿಗೆ ‘ಭಜರಂಗಿ-2’ ಸೆಲೆಬ್ರೇಷನ್!

ಭಜರಂಗಿ-2 ಸಿನಿಮಾ ಡಿಸೆಂಬರ್ 23ಕ್ಕೆ ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ದೊಡ್ಡ ರೆಕಾರ್ಡ್ ಬರೆದ ಭಜರಂಗಿ-2 ಸಿನಿಮಾವನ್ನು ಜೀ5 ಒಟಿಟಿಯಲ್ಲಿ ನೋಡಿವರಿಗೆ ಶಿವಣ್ಣನನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಬಂಗಾರದಂತಹ ಅವಕಾಶವನ್ನು ಜೀ5 ಕಲ್ಪಿಸಿತ್ತು. ಮೂರೇ ದಿನದಲ್ಲಿ 5 ಕೋಟಿ ವೀಕ್ಷಣೆ ಮಾಡಿದ ಪ್ರೇಕ್ಷಕರಲ್ಲಿ ಆಯ್ದ 10 ಮಂದಿಗಳಿಗೆ ಜೀ5 ಶಿವಣ್ಣನೊಟ್ಟಿಗೆ ಮಾತುಕತೆ ನಡೆಸುವ ಸುವರ್ಣಾವಕಾಶ ನೀಡಿತ್ತು. ಅದರಂತೆ ಅಭಿಮಾನಿಗಳು ಶಿವಣ್ಣನೊಟ್ಟಿಗೆ ಬೆರೆತು ಸಮಯ ಕಳೆದಿದ್ದಾರೆ. ಭಜರಂಗಿ-2ಗೆ ಜೈಕಾರ ಹಾಕಿದ್ದಾರೆ. ಅಲ್ಲದೇ ಭಜರಂಗಿ-3ಗೆ ಎದುರು ನೋಡುತ್ತಿರುವುದಾಗಿ ಆಸೆ ವ್ಯಕ್ತಪಡಿಸಿದ್ದಾರೆ.

ಜೀ ಕನ್ನಡ ಈಗಾಗ್ಲೇ ಹಲವು ವಿಭಿನ್ನ ಪ್ರಯತ್ನಗಳಿಗೆ ಮುನ್ನುಡಿ ಬರೆದಿದೆ. ಅದೇ ರೀತಿ ಸ್ಟಾರ್ಸ್ ಗಳೊಟ್ಟಿಗೆ ಅಭಿಮಾನಿಗಳನ್ನು ಬೆರೆಸುವ ಕೆಲಸ ಮಾಡ್ತಿದೆ. ಒಳ್ಳೆ ಕಂಟೆಂಟ್ ಸಿನಿಮಾಗಳನ್ನು ಜೀ5 ಮೂಲಕ ಪ್ರಪಂಚದೆದುರು ತೆರೆದಿಡ್ತಿದ್ದು, ಇದು ಜಸ್ಟ್ ಸ್ಯಾಂಪಲ್ ಅಷ್ಟೇ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ-ವಿಶೇಷ ಯೋಜನೆಗಳನ್ನು ಜೀ5 ಹಾಕಿಕೊಂಡಿದ್ದು, ಅದು ಪ್ರತಿ ಪ್ರೇಕ್ಷಕರಿಗೆ ತಲುಪಿಸಿದೆ ಕನ್ನಡದ ನಂಬರ್ 1 ಮನರಂಜನಾ ಚಾನೆಲ್ ಜೀ ಕನ್ನಡ. ಹೀಗೆ ಸಾಗಲಿ ಈ ಯಶಸ್ವಿನ ಹಾದಿ.

Categories
ಸಿನಿ ಸುದ್ದಿ

ಹೊಸ ವರ್ಷ, ಹೊಸ ಕನಸು ರಮೇಶ್‌ ಅರವಿಂದ್‌ ಜೊತೆ ಹೊಸ ಮಾತು! ಇದು ಎಂದಿಗೂ ಮಾಸದ ಮಾತು…

ಸ್ಟೋರಿ ಟೆಲ್‌ ಕನ್ನಡದಲ್ಲಿ ಆಡಿಯೋ ಸರಣಿಯನ್ನು ಆರಂಭಿಸುತ್ತಿದೆ. ನಟ ರಮೇಶ್‌ ಅರವಿಂದ್‌ ಅವರ ಜೊತೆ ಸ್ಟೋರಿ ಟೆಲ್‌ ಹೊಸದೊಂದು ಸರಣಿ ಆರಂಭಿಸುತ್ತಿದೆ. ಅದೇ “ಮಾಸದ ಮಾತುಗಳುʼ ಹೊಸ ವರ್ಷದಲ್ಲಿ ಸ್ಟೋರಿಟೆಲ್‌ನಲ್ಲಿನ ಆಡಿಯೋ ಸರಣಿಯ ರೂಪದಲ್ಲಿ ರಮೇಶ್‌ ಅರವಿಂದ್‌ ಅವರು, ಭರವಸೆ ನೀಡುವಂತಹ, ಬುದ್ಧಿವಂತಿಕೆ ಹೆಚ್ಚಿಸುವಂತಹ ಮತ್ತು ಬದುಕನ್ನು ರೂಪಿಸಿಕೊಳ್ಳುವಂತಹ ಸಲಹೆಗಳನ್ನು ನೀಡಲಿದ್ದಾರೆ. ಈ ಹೊಸ ಬಗೆಯ ಸ್ಟೋರಿ ಟೆಲ್‌ ಆಡಿಯೋ ಸರಣಿ ಮೂಲಕ ಹೊಸದೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಅವರದು.

ಹೌದು, ಕಥೆ ಬರೆಯೋದು, ಓದೋದು ಅಂದರೆ ತುಂಬಾ ಖುಷಿಪಡುವಂತಹ ವಿಷಯ. ಇದುವರೆಗೆ ಯಾರೋ ಬರೆದ ಕಥೆಗಳನ್ನು ಓದುವುದರ ಜೊತೆಗೆ ಮನದಲ್ಲೇ ಸಂಭ್ರಮಿಸಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಕಾಲದ ಜೊತೆಗೆ ತಾಂತ್ರಿಕತೆಯೂ ಬೆಳೆದಿದೆ. ವಿಷಯ ಏನಪ್ಪಾ ಅಂದರೆ, ಸ್ಟೋರಿ ಟೆಲ್‌ ಕನ್ನಡದಲ್ಲಿ ಆಡಿಯೋ ಸರಣಿಯನ್ನು ಆರಂಭಿಸುತ್ತಿದೆ. ನಟ ರಮೇಶ್‌ ಅರವಿಂದ್‌ ಅವರ ಜೊತೆ ಸ್ಟೋರಿ ಟೆಲ್‌ ಹೊಸದೊಂದು ಸರಣಿ ಆರಂಭಿಸುತ್ತಿದೆ. ಅದೇ “ಮಾಸದ ಮಾತುಗಳುʼ.
ಈ ಬಾರಿಯ ಹೊಸ ವರ್ಷದಲ್ಲಿ ಸ್ಟೋರಿಟೆಲ್‌ನಲ್ಲಿನ ಆಡಿಯೋ ಸರಣಿಯ ರೂಪದಲ್ಲಿ ರಮೇಶ್‌ ಅರವಿಂದ್‌ ಅವರು, ಭರವಸೆ ನೀಡುವಂತಹ, ಬುದ್ಧಿವಂತಿಕೆ ಹೆಚ್ಚಿಸುವಂತಹ ಮತ್ತು ಬದುಕನ್ನು ರೂಪಿಸಿಕೊಳ್ಳುವಂತಹ ಸಲಹೆಗಳನ್ನು ನೀಡಲಿದ್ದಾರೆ. ಈ ಹೊಸ ಬಗೆಯ ಸ್ಟೋರಿ ಟೆಲ್‌ ಆಡಿಯೋ ಸರಣಿ ಮೂಲಕ ಹೊಸದೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಅವರದು.
ಅಂದಹಾಗೆ, ಸ್ಟೋರಿಟೆಲ್‌ ಕನ್ನಡ ಸರಣಿಯಲ್ಲಿ ರಮೇಶ್‌ ಅರವಿಂದ್‌ ಅವರು, “ಮಾಸದ ಮಾತುಗಳು” ವಿತ್‌ ರಮೇಶ್‌ ಹೆಸರಲ್ಲಿ ಕೇಳುಗರಿಗೆ ಬದುಕಲ್ಲಿ ನೆರವಾಗಬಲ್ಲಂತಹ ಅನೇಕ ವಿಷಯಗಳಿರಲಿವೆ. ಆ ಸರಣಿ 2022r 12 ತಿಂಗಳ ಅವಧಿಯಲ್ಲಿ ಕಂತುಗಳ ರೂಪದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.

“ಮಾಸದ ಮಾತುಗಳು ವಿತ್‌ ರಮೇಶ್” ‌ ಸರಣಿಯ ಎಲ್ಲಾ ೧೨ ಕಂತುಗಳು ಜನವರಿ ೨ರಂದು ಬಿಡುಗಡೆಯಾಗಲಿದೆ. ರಮೇಶ್‌ ಅರವಿಂದ್‌ ಅವರು ಬರೆದಿರುವ ಈ ಸರಣಿ ವಿಶೇಷವಾಗಿ ಸ್ಟೋರಿಟೆಲ್‌ನಲ್ಲಿ ಮಾತ್ರ ಸಿಗಲಿದೆ. ರಮೇಶ್‌ ಅವರು ತಮ್ಮ ಅನುಭವಗಳು, ಬದುಕಿನಿಂದ ಕಲಿತ ಪಾಠಗಳು ಮತ್ತು ಜೀವನ ಮೌಲ್ಯಗಳನ್ನು ಬರಹಗಳ ರೂಪದಲ್ಲಿ ಹೆಣೆಯಲಾಗಿದೆ. ನಿತ್ಯ ಬದುಕಿನ ಸೊಬಗಿನ ಬಗ್ಗೆ ಅವರು ಮಾತಾಡಿದ್ದಾರೆ. ಎಲ್ಲಾ ವಯಸ್ಸಿನ ಓದುಗರಿಗೂ ಇದು ಇಷ್ಟವಾಗಲಿದ್ದು, ಲೈಫಲ್ಲಿ ಪ್ರೇರಣೆ ಸಿಗುವಂತಹ ಸರಣಿ ಇದಾಗಲಿದೆ ಎಂಬುದು ಸ್ಟೋರಿಟೆಲ್‌ ಸಂಸ್ಥೆಯ ಮಾತು.

ರಮೇಶ್‌ ಅರವಿಂದ್‌ ತಮ್ಮ ವಿಶೇಷ ಮಾತಿನ ಮೂಲಕ ಅವರ ಸ್ನೇಹಪರ ವ್ಯಕ್ತಿತ್ವ ಎದ್ದು ಕಾಣಲಿದೆ. ಅವರು ನೇರ ನಮ್ಮ ಜೊತೆಯಲ್ಲೇ ಮಾತಾಡುತ್ತಿದ್ದಾರೇನೋ ಎಂದೆನಿಸುವುದು ನಿಜ. ಇತ್ತೀಚಿನ ದಿನಗಳಲ್ಲಿ ಅವರು ಒಬ್ಬ ಪ್ರೇರಣಾದಾಯಕರಾಗಿ, ವಾಗ್ಮಿಯಾಗಿದ್ದು, ಬದುಕನ್ನು ಎಲ್ಲಾ ದೃಷ್ಟಿಕೋನದಿಂದ ನೋಡುವಂತೆ ತಮ್ಮ ಕೇಳುಗರನ್ನು ಪ್ರೋತ್ಸಾಹಿಸುತ್ತದ ಬಂದಿದ್ದಾರೆ. ಶಿಕ್ಷಣ, ವೃತ್ತಿ, ಉದ್ಯಮ ಹೀಗೆ ಇತರೆ ರಂಗಗಳ ಕುರಿತು ಮಾತಾಡಿದ್ದಾರೆ.

ಸ್ಟೋರಿಟೆಲ್‌ ಎಲ್ಲಾ ಬಗೆಯ ಚಿಂತನೆಗಳಿರುವ ಓದುಗರಿಗೆ, ವಿಭಿನ್ನ ಪ್ರಾಕಾರಗಳ ಪುಸ್ತಕ ಓದುವ ಓದುಗರಿಗೂ ಇಷ್ಟವಾಗಲಿದೆ. ಕನ್ನಡದಲ್ಲೂ ಇದು ನೆಲದ ಕಥೆಗಳಿಗೆ ಹತ್ತಿರವಾಗಿಸುವ ಸಲುವಾಗಿಯೇ ಸ್ಟೋರಿಟೆಲ್‌ ಇಂಡಿಯಾ ಪ್ರಾದೇಶಿಕ ಭಾಷೆಗಳಲ್ಲೂ ಆಡಿಯೋ ಪುಸ್ತಕ ಪ್ರಕಟಿಸಲು ಶ್ರಮಿಸುತ್ತಿದೆ. ಈ ಮೂಲಕ ಅನೇಕ ಖ್ಯಾತ ಲೇಖಕರ ಕೃತಿಗಳ ಆಡಿಯೋ ಬುಕ್‌ಗಳನ್ನಿಲ್ಲಿ ಪ್ರಕಟಿಸಲಾಗುತ್ತಿದೆ. ಈಗಾಗಲೇ ಗಿರೀಶ್‌ ಕಾರ್ನಾಡ್‌, ಯು.ಆರ್. ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ವೈದೈಹಿ, ಅನುಪಮಾ ನಿರಂಜನ, ವಿವೇಕ ಶಾನಭಾಗ, ವಸುಧೇಂದ್ರ ಸೇರಿದಂತೆ ಅನೇಕ ಲೇಖಕರ ಕೃತಿಗಳನ್ನು ಒಳಗೊಂಡಿದೆ. ಚಂದ್ರಶೇಖರ ಕಂಬಾರ, ಆರ್.ಕೆ.ನಾರಾಯಣ್‌, ಶಾಂತಿನಾಥ ದೇಸಾಯಿ, ಎಚ್.ಎಸ್.ಶಿವಪ್ರಕಾಶ್‌ ಲೇಖಕರು ಹಾಗು ಸಮಕಾಲೀನ ಲೇಖಕರ ಕೃತಿಗಳು ಕೂಡ ಶೀಘ್ರದಲ್ಲೇ ಸ್ಟೋರಿಟೆಲ್‌ನಲ್ಲಿ ಸಿಗಲಿವೆ.

ವಿಶೇಷವೆಂದರೆ, ಕಲಾವಿದರಾದ ಬಿ.ಜಯಶ್ರೀ, ಬಿ.ಸುರೇಶ, ಮಂಡ್ಯ ರಮೇಶ, ಶರತ್‌ ಲೋಹಿತಾಶ್ವ, ಬಾಲಾಜಿ ಮನೋಹರ್‌, ಅರವಿಂದ್‌ ಕುಪ್ಳೀಕರ್‌, ರವಿಭಟ್‌,ರಘು ಶಿವಮೊಗ್ಗ, ಬಿ.ಎಂ.ಗಿರಿರಾಜ, ಶೃಂಗ, ಪ್ರಶಾಂತ್‌ ಸಿದ್ಧಿ, ಕಿರಣ್‌ ನಾಯಕ್‌, ಚಿತ್ಕಲಾ ಬಿರಾದಾರ್‌, ರಂಜನಿ ರಾಘವನ್‌, ಪಿ.ಡಿ.ಸತೀಶ್‌ ಇತರರು ಸ್ಟೋರಿಟೆಲ್‌ ಕನ್ನಡಕ್ಕೆ ಧ್ವನಿ ನೀಡಿದ್ದಾರೆ.

Categories
ಸಿನಿ ಸುದ್ದಿ

10 ರುಪಾಯಿಗೆ ಸ್ವರ್ಗ ತೋರಿಸ್ತಾರಂತೆ ರಚಿತಾರಾಮ್!‌ ಇದು ಲಕಲಕ ಲ್ಯಾಂಬರ್ಗಿನಿ ಆಲ್ಬಂ ಸಾಂಗ್ ವಿಷಯ ಗುರು…

ಚಂದನ್‌ ಶೆಟ್ಟಿ ಹೊಸ ವರ್ಷಕ್ಕೆ ಹೊಸ ಸಾಂಗ್‌ ರಿಲೀಸ್‌ ಮಾಡೋದು ಎಲ್ಲರಿಗೂ ಗೊತ್ತೇ ಇದೆ. ಆ ಸಾಲಿಗೆ ಈ ವರ್ಷವೂ ಸಹ ಹೊಸದೊಂದು ವಿಡಿಯೋ ಆಲ್ಬಂ ರಿಲೀಸ್‌ ಮಾಡಿದ್ದಾರೆ. ಹೌದು ಬಿಂದ್ಯಾ ಮೂವೀಸ್ ಮೂಲಕ ಅವರು “ಲಕಲಕ ಲ್ಯಾಂಬರ್ಗಿನಿ” ಎಂಬ ವಿಡಿಯೋ ಆಲ್ಬಂ ರಿಲೀಸ್‌ ಮಾಡಿದ್ದಾರೆ. ವಿಶೇಷವೆಂದರೆ, ಈ ಆಲ್ಬಂ ಸಾಂಗ್‌ನಲ್ಲಿ ಚಂದನ್‌ ಶೆಟ್ಟಿ ಜೊತೆ ನಟಿ ರಚಿತಾರಾಮ್‌ ಕೂಡ ಹೆಜ್ಜೆ ಹಾಕಿದ್ದಾರೆ.

ಕನ್ನಡದಲ್ಲಿ ತಮ್ಮದೇ ಗಾಯನದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡಿ, ಅಭಿನಯಿಸಿರುವ “ಲಕ ಲಕ ಲ್ಯಾಂಬರ್ಗಿನಿ” ಹಾಡು ಬಿಡುಗಡೆಯಾಗಿದೆ.
ಬಿಂದ್ಯಾ ಮೂವೀಸ್ ಬ್ಯಾನರ್‌ನಲ್ಲಿ ಆರ್. ಕೇಶವ್ ಈ ಹಾಡಿನ ನಿರ್ಮಾಪಕರು. ನಂದಕಿಶೋರ್ ಇದರ ನಿರ್ದೇಶಕರು. ನಟಿ ರಚಿತಾರಾಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಕೆ.ಮಂಜು ಹಾಡು ಬಿಡುಗಡೆ ಮಾಡಿ ಶುಭ ಕೋರಿದರು.

ಹೊಸವರ್ಷದ ಆರಂಭದಲ್ಲಿ ಹೊಸ ಗೀತೆ ಬಿಡುಗಡೆ ಮಾಡುವುದು ವಾಡಿಕೆ. ಕಳೆದ ನಾಲ್ಕು ವರ್ಷಗಳಿಂದ ಹೊಸವರ್ಷಕ್ಕೆ ಟಕೀಲ, ಬ್ಯಾಡ್ ಬಾಯ್, ತ್ರಿ ಪೇಗ್ಈ ಈಗ “ಲಕಲಕ ಲ್ಯಾಂಬರ್ಗಿನಿ” ಎಂಬ ಆಲ್ಬಂ ಸಾಂಗ್‌ ರಿಲೀಸ್‌ ಮಾಡಲಾಗಿದೆ. ಮೂಲತಃ ರೈತರಾಗಿರುವ ಕೇಶವ್ ಅವರು ತಮ್ಮ ಪುತ್ರಿ ಬಿಂದ್ಯಾ ಹುಟ್ಟುಹಬ್ಬದ ನೆನಪಿಗಾಗಿ ಈ ಹಾಡನ್ನು ನಿರ್ಮಿಸಿದ್ದಾರೆ. ಹಾಗೆ ನೋಡಿದರೆ ಈ ಹಾಡು ಜುಲೈ ತಿಂಗಳಲ್ಲಿ ಆರಂಭವಾಗಬೇಕಿತ್ತು. ದುಬೈನಲ್ಲಿ ಚಿತ್ರೀಕರಣ ಮಾಡುವ ಯೋಚನೆ ತಂಡಕ್ಕಿತ್ತು. ಆದರೆ, ಕೊರೊನಾ ಅಡ್ಡಿಯಾಯಿತು. ಕಾಕತಾಳೀಯ ಎಂಬಂತೆ ಹೊಸವರ್ಷಕ್ಕೆ ಈ ಹಾಡು ಬಿಡುಗಡೆಯಾಗಿದೆ. ಹಾಡಿನಲ್ಲಿ ಅಭಿನಯಿಸಿರುವ ರಚಿತಾರಾಂ ಅವರಿಗೆ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ತಂತ್ರಜ್ಞರಿಗೆ, ಹೆಚ್ಚಾಗಿ ನಾನು ಇಲ್ಲಿಯವರೆಗೂ ಮಾಡಿರುವ ಸಾಂಗ್ ನಲ್ಲೇ ಅಪಾರ ವೆಚ್ಚದ ಈ ಹಾಡನ್ನು ನಿರ್ಮಿಸಿದ ನಿರ್ಮಾಪಕರಿಗೆ ನನ್ನ ಧನ್ಯವಾದ. ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಡನ್ನು ನೋಡುವ ಮೂಲಕ ನಮಗೆ ಪ್ರೋತ್ಸಾಹ ನೀಡಿ ಎಂದರು ಚಂದನ್ ಶೆಟ್ಟಿ.

ನಿರ್ಮಾಪಕ ಕೇಶವ್‌ ಅವರಿಗೆ ಈ ಹಾಡು ಮಾಡಿದ್ದು ಖುಷಿ ಕೊಟ್ಟಿದೆಯಂತೆ. ನನ್ನ ಆಲೋಚನೆಯಲ್ಲಿ ಇದು ಇರಲ್ಲಿಲ್ಲ.
ನನ್ನ ಮಗಳು ಬಿಂದ್ಯಾಳನ್ನು ಹುಟ್ಟು ಹಬ್ಬಕ್ಕೆ ಏನು ಬೇಕು ಎಂದು ಕೇಳಿದಾಗ, ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಬೇಕು ಎಂದು ಆಸೆಪಟ್ಟಳು. ನಂತರ ಕೆ.ಮಂಜು ಅವರ ಮುಂದೆ ಹೇಳಿದೆ. ಅವರ ಮೂಲಕ ಎಲ್ಲರನ್ನು ಸಂಪರ್ಕಿಸಿ, ಈ ಹಾಡು ನಿರ್ಮಾಣವಾಗಿದೆ. ಇದಕ್ಕೆ ನನ್ನ ಮಗಳು ಬಿಂದ್ಯಾ ಕಾರಣ‌.
ಚಂದನ್ ಶೆಟ್ಟಿ , ರಚಿತಾರಾಂ ಜೊತೆ ನನ್ನ ಮಗಳು ಬಿಂದ್ಯಾ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾಳೆ ಎಂದು ಸಂತಸ ಪಟ್ಟರು ನಿರ್ಮಾಪಕ ಕೇಶವ್.

ಇನ್ನು ಈ ಹಾಡಿಗೆ ನಂದಕಿಶೋರ್‌ ನಿರ್ದೇಶಕರು. “ನಾನು ಎಷ್ಟೋ ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ. ಆಲ್ಬಂ ಸಾಂಗ್ ಇದೇ ಮೊದಲು ನಿರ್ದೇಶನ ಮಾಡಿದ್ದೀನಿ.
ನಿಜಕ್ಕೂ ಮಕ್ಕಳು ಹುಟ್ಟುಹಬ್ಬಕ್ಕೆ ಚಾಕೊಲೇಟ್, ಬಿಸ್ಕೇಟ್ ‌ ಕೇಳುತ್ತಾರೆ. ಆದರೆ ಈ ಹುಡುಗಿ ಅವರ ಅಪ್ಪನ ಬಳಿ ಆಲ್ಬಂ ಸಾಂಗ್ ಮಾಡಲು ಕೇಳಿ, ನೂರಾರು ಜನಕ್ಕೆ ಅನ್ನ ನೀಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಇಂತಹ ಗುಣ ಇರುವುದು ನಿಜಕ್ಕೂ ಶ್ಲಾಘನೀಯ ಎಂದರು ನಿರ್ದೇಶಕ ನಂದ ಕಿಶೋರ್.

ಶೇಖರ್ ಚಂದ್ರ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ , ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಹಾಡಿಗಿದೆ. ಈ ವೇಳೆ ನಿವೇದಿತಾ, ನಿರ್ಮಾಪಕ ಕೇಶವ್ ಅವರ ಪತ್ನಿ ಇಂದಿರಾ ಇದ್ದರು.

Categories
ಸಿನಿ ಸುದ್ದಿ

ರಾಜಮೌಳಿ ಸಿನಿಮಾ ಮುಂದೆ ಹೋಗಲ್ಲ; ಅಂದುಕೊಂಡ ದಿನವೇ ಆರ್ ಆರ್ ಆರ್ ರಿಲೀಸ್

ಎಸ್.ಎಸ್.ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಜನವರಿ 7ರಂದು ಸಿನಿಮಾ ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಯುತ್ತಿರುವ ಜಕ್ಕಣ್ಣಗಾರು ಟೀಂ, ಕೇರಳದಲ್ಲಿ ಅದ್ಧೂರಿ ಇವೆಂಟ್ ಗೆ ಪ್ಲಾನ್ ಮಾಡಿಕೊಂಡಿದೆ. ಈ ನಡುವೆ ದೇಶದಲ್ಲಿ ಕೊರೋನಾ ಕೇಸ್ ಗಳು ಹೆಚ್ಚುತ್ತಿರುವುದರಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತದೆಯೇ ಅನ್ನೋ ಟಾಕ್ ಸಿನಿ ಜಗತ್ತಿನಲ್ಲಿ ಓಡಾಡ್ತಿದೆ.

ದೇಶದಲ್ಲಿ ಕೊರೋನಾ ರೂಪಾಂತರಿ ಪ್ರಕರಣಗಳು ಹೆಚ್ಚಾಗ್ತಿವೆ. ಜನವರಿಯಲ್ಲಿ ಕೋವಿಡ್ ಪ್ರಕರಣ ಮತ್ತಷ್ಟು ಹೆಚ್ಚಾಗಲಿವೆ ಎನ್ನಲಾಗ್ತಿದೆ. ಹೀಗಾಗಿ, ದೇಶದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ದೆಹಲಿಯಲ್ಲಿ ಥಿಯೇಟರ್ ಬಂದ್ ಮಾಡಲಾಗಿದೆ. ಇದರಿಂದ ಶಾಹಿದ್ ಕಪೂರ್ ಅಭಿನಯದ ಸಿನಿಮಾ ‘ಜೆರ್ಸಿ’ ರಿಲೀಸ್ ದಿನಾಂಕವನ್ನು ಪೋಸ್ಟ್ ಪೋನ್ ಮಾಡಿದೆ. ಡಿಸೆಂಬರ್ 31ರಂದು ತೆರೆಗೆ ಬರಬೇಕಿದ್ದ ಜೆರ್ಸಿ ತನ್ನ ಮಾರ್ಗ ಬದಲಾಯಿಸಿದೆ. ಹೀಗಾಗಿ ಆರ್ ಆರ್ ಆರ್ ತಂಡ ಕೂಡ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ ಆರ್ ಆರ್ ಆರ್ ಸಿನಿಮಾ ಮುಂದಕ್ಕೆ ಹೋಗುವ ಚಾನ್ಸ್ ಇಲ್ಲ. ಯಾಕಂದ್ರೆ ಈಗಾಗ್ಲೇ ಸೆನ್ಸಾರ್ ಮುಗಿಸಿ ಥಿಯೇಟರ್ ಗೆ ಬರೋದಿಕ್ಕೆ ಸಕಲ ರೀತಿಯಿಂದಲೂ ಸಿನಿಮಾ ತಂಡ ತಯಾರಾಗಿದೆ. ಇದು ಸುಳ್ಳು ಸುದ್ದಿ ಅಂತ ಚಿತ್ರತಂಡ ಸ್ಪಷ್ಟಪಡಿಸಿದೆ.

ಜನವರಿ 7ರಂದೇ ಸಿನಿಮಾ ಥಿಯೇಟರ್ ಗೆ ಬರುತ್ತೇ ಅನ್ನೋ ಒಂದಷ್ಟು ಟ್ರೆಂಡ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಯಾವುದೇ ಕಾರಣಕ್ಕೂ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡೋದಿಲ್ಲ. ಅಂದುಕೊಂಡ ದಿನವೇ ಬರುತ್ತೇವೆ ಅಂತಾ ರಾಜಮೌಳಿ ಭರವಸೆ ನೀಡಿದ್ದಾರೆ. ಜ.7ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಸೌತ್ ಸಿನಿ ದುನಿಯಾದ ಇಬ್ಬರು ಘಟಾನುಘಟಿ ನಾಯಕರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿಆರ್ ನಟಿಸಿದ್ದು, ಬಾಲಿವುಡ್ ನ ಅಜಯ್ ದೇವಗನ್, ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ.

ಟ್ರೇಲರ್ ಹಾಗೂ ಹಾಡುಗಳ ಮೂಲಕ ಕಿಚ್ಚು ಹಚ್ಚಿರುವ ರಾಜಮೌಳಿ ಸಿನಿಮಾ ಪಂಚ ಭಾಷೆಯಲ್ಲಿ ತೆರೆಗೆ ಬರ್ತಿದೆ. ಕನ್ನಡದಲ್ಲಿ ಈ ಸಿನಿಮಾವನ್ನು, ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ರಾಜ್ಯಾದ್ಯಂತ ತೆರೆಗೆ ತರುವ ಜವಾಬ್ದಾರಿ ಹೊತ್ತುಕೊಂಡಿದೆ. ಈಗಾಗ್ಲೇ ಹಲವು ಸ್ಟಾರ್ ನಟರಿಗೆ ಸಿನಿಮಾ ಮಾಡ್ತಿರುವ ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ಕನ್ನಡದಲ್ಲಿ ತರುತ್ತಿದ್ದು, ಇದೇ ಜನವರಿ 7ಕ್ಕೆ ವರ್ಲ್ಡ್ ವೈಡ್ ರೌದ್ರ ರಣ ರುಧೀರನ ಆರ್ಭಟ ಶುರುವಾಗಲಿದೆ.

Categories
ಸಿನಿ ಸುದ್ದಿ

ಶಕುನಿ ನಿಂತಿದ್ದು ಯಾಕೆ, ಮಲ್ಲ ಶುರುವಾಗಿದ್ದು ಹೇಗೆ? ಇದು ರವಿಚಂದ್ರನ್‌ ಹೇಳಿದ ಕಥೆ…

ನಿರ್ಮಾಪಕ ರಾಮು ಅವರು ರವಿಚಂದ್ರನ್‌ ಅವರಿಗೆ “ಮಲ್ಲ” ಸಿನಿಮಾ ಮಾಡಿದ್ದು ಯಾಕೆ ಗೊತ್ತಾ? ಆ ಸಿನಿಮಾ ಆಗೋಕೆ ಕಾರಣ ಯಾರು? ಈ ಪ್ರಶ್ನೆಗೆ ರವಿಚಂದ್ರನ್‌ ಉತ್ತರ ಕೊಟ್ಟಿದ್ದಾರೆ. ಹೌದು, “ಮಲ್ಲ” ಸಿನಿಮಾ ಆಗೋಕೆ ಕಾರಣವನ್ನು ಸ್ವತಃ ರವಿಚಂದ್ರನ್‌ ಬಿಡಿಸಿ ಹೇಳಿದ್ದಾರೆ.

ವಿಷಯ ಏನೆಂದರೆ, ಈ ಹಿಂದೆ ರವಿಚಂದ್ರನ್‌ ಅವರಿಗೆ “ಶಕುನಿ” ಸಿನಿಮಾ ಶುರುಮಾಡಿದ್ದರು ರಾಮು. ಆ ಸಿನಿಮಾ ಅದಾಗಲೇ ಶೇ.೪೦ರಷ್ಟು ಚಿತ್ರೀಕರಣ ಕೂಡ ನಡೆದಿತ್ತು. ಒಂದು ಇದ್ದಕ್ಕಿದ್ದಂತೆಯೇ ಏನಾಯ್ತೋ ಏನೋ ರಾಮು ಅವರು ರವಿಚಂದ್ರನ್‌ ಮನೆಗೆ ಹೋಗಿ, ಶಕುನಿ ಗೆಟಪ್‌ ಇಷ್ಟವಿಲ್ಲ ಅಂದಿದ್ದಾರೆ. ಅರೆ, ಈಗಾಗಲೇ ಶೇ.೪೦ರಷ್ಟು ಚಿತ್ರೀಕರಣವಾಗಿದೆ. ಈಗ ನೋಡಿದರೆ, ಗೆಟಪ್‌ ಚೆನ್ನಾಗಿಲ್ಲ ಅಂದರೆ ಹೇಗೆ? ಅಂದಿದ್ದಾರೆ ರವಿಚಂದ್ರನ್.‌

ಆಗ ರಾಮು ಅವರು, ನೀವು ಹೀಗೆ ಉದ್ದ ಕೂದಲು ಬಿಟ್ಟುಕೊಂಡಿರುವುದು ಇಷ್ಟ ಕಾಣುತ್ತಿಲ್ಲ ಅಂದಿದ್ದಾರೆ ರಾಮು. ಸರಿ, ಶಕುನಿನ ಪಕ್ಕಕ್ಕಿಟ್ಟು, ನಾನೊಂದು ಸಿನಿಮಾ ಮಾಡಿಕೊಡ್ತೀನಿ. ನನ್ನ ಇಷ್ಟಕ್ಕೆ ಬಿಟ್ಟು ಬಿಡು ಅಂತ ಹೇಳಿದರಂತೆ ರವಿಚಂದ್ರನ್.‌ ಆಗ ಶುರುವಾಗಿದ್ದೇ, “ಮಲ್ಲ” ಸಿನಿಮಾವಂತೆ. ಶಕುನಿ ನಿಂತು ಹೋಗಿದ್ದಕ್ಕೆ ಕಾರಣ ಕೊಡುತ್ತಲೇ, ಮಲ್ಲ ಶುರುವಾದ ಬಗೆಯನ್ನೂ ರವಿಚಂದ್ರನ್‌ ಹೇಳಿಕೊಂಡಿದ್ದಾರೆ. ಅಂದಹಾಗೆ, ರವಿಚಂದ್ರನ್‌ ಈ ವಿಷಯ ಹಂಚಿಕೊಂಡಿದ್ದು, “ಅರ್ಜುನ್‌ ಗೌಡ” ಸಿನಿಮಾದ ಪ್ರೀ‌ ರಿಲೀಸ್ ಇವೆಂಟ್‌ನಲ್ಲಿ.

Categories
ಸಿನಿ ಸುದ್ದಿ

ಅಪ್ಪು ಇಲ್ಲದ ಎರಡು ತಿಂಗಳು; ಸಮಾಧಿಗೆ ಕುಟುಂಬ ಪೂಜೆ

ಪುನೀತ್‌ ರಾಜಕುಮಾರ್‌ ಇಲ್ಲದೆ ಇಂದಿಗೆ ಎರಡು ತಿಂಗಳು ಕಳೆದಿವೆ. ಅಪ್ಪು ಅಗಲಿ ಎರಡು ತಿಂಗಳು ಕಳೆದಿದ್ದರಿಂದ ಅವರ ಕುಟುಂಬ ವರ್ಗ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾಘವೇಂದ್ರ ರಾಜ್‌ಕುಮಾರ್ ಮತ್ತು ಅವರ ಕುಟುಂಬ ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿತು. ಪೂಜೆ ನಂತರ ರಾಘವೇಂದ್ರ ರಾಜ್‌ಕುಮಾರ್ ಮತ್ತು ನಾರಾಯಣ ನೇತ್ರಾಲಯದ ಹಿರಿಯ ನೇತ್ರತಜ್ಞ ಭುಜಂಗ ಶೆಟ್ಟಿ ಅವರು ಈ ವೇಳೆ ನೇತ್ರದಾನದ ಸಹಾಯವಾಣಿ ಲೋಕಾರ್ಪಣೆ ಮಾಡಿದರು.


ಅಲ್ಲೇ ಇದ್ದ ಮಾಧ್ಯಮ ಜೊತೆ ಮಾತಿಗಿಳಿದ ರಾಘವೇಂದ್ರ ರಾಜ್‌ಕುಮಾರ್, “ಇಂದು ಅಪ್ಪು ಬಿಟ್ಟು ಹೋದ ಎರಡು ಕಣ್ಣುಗಳಿಂದ ನಾಲ್ಕು ಜನ ಪ್ರಪಂಚ ನೋಡುತ್ತಿದ್ದಾರೆ. ಇದು ನಿಜಕ್ಕೂ ಸಂತೋಷದ ವಿಷಯ. ಹಾಗೆಯೇ ಅಪ್ಪು ಹಾಕಿಕೊಟ್ಟಿರುವ ಈ ಹಾದಿಯಲ್ಲಿ ನಾವು ಸಾಗಬೇಕು ಜಗತ್ತಿನಿಂದ ಅಂಧತ್ವ ನಿವಾರಣೆ ಮಾಡಬೇಕು” ಎಂದರು.
‘ಅಪ್ಪು ನಿಧನದ ಬಳಿಕ ಕಣ್ಣು ದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲ ಕಣ್ಣು ದಾನ ಮಾಡಿದವರು ತೀರಿ ಹೋದಾಗ ಕರೆ ಮಾಡಿ ಕಣ್ಣು ಸಂಗ್ರಹಿಸಲು ಹೇಳುವಷ್ಟು ಜಾಗೃತಿ ಮೂಡಿದೆ.

ಈ ರೀತಿಯ ನೇತ್ರದಾನದ ಕ್ರಾಂತಿ ಎಲ್ಲೂ ಆಗಿಲ್ಲ. ನಾವು ಅಂಧತ್ವ ತೊಲಗಿಸಬೇಕು. ಇನ್ನು, ” 8884018800 ಸಂಖ್ಯೆಗೆ ಸ್ ಕಾಲ್ ಕೊಟ್ಟರೆ ನೇತ್ರದಾನ ಮಾಡುವ ಫಾರಂ ಸಿಗುತ್ತದೆ ಅದನ್ನು ಅಲ್ಲಿಯೇ ತುಂಬಿ ಸಲ್ಲಿಸಬಹುದು. ನೇತ್ರದಾನ ಮಾಡಿದ್ದಕ್ಕೆ ನಿಮಗೆ ಸರ್ಟಿಫಿಕೇಟ್ ಸಹ ಸಿಗುತ್ತದೆ. ಕೇವಲ ನೇತ್ರದಾನ ಮಾಡಿ ಸುಮ್ಮನಾಗುವಂತಿಲ್ಲ. ಕಾಲವಾದಾಗ ಕಣ್ಣು ದಾನ ಕಡ್ಡಾಯವಾಗಿ ಮಾಡುವಂತೆ ಸುತ್ತಲಿನವರಿಗೆ ಹೇಳಿಟ್ಟಿರಬೇಕು. ನಾನು ನನ್ನ ನೇತ್ರದಾನದ ಸರ್ಟಿಫಿಕೇಟ್ ಅನ್ನು ಫ್ರೇಮ್ ಹಾಕಿಸಿ ಮನೆಯಲ್ಲಿಟ್ಟಿದ್ದೀನಿ. ನಮ್ಮವರಿಗೆ ಸದಾ ಗೊತ್ತಾಗುತ್ತಿರಬೇಕು ‘ಆ ದಿನ’ ಬಂದಾಗ ನೇತ್ರದಾನದ ಪ್ರಕ್ರಿಯೆ ಪೂರ್ಣ ಮಾಡಬೇಕು. ಅಪ್ಪಾಜಿ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಮತ್ತು ನನ್ನ ಅಣ್ಣ ದೇಹದಾನ ಮಾಡಿದ್ದೇವೆ” ಎಂದರು ರಾಘವೇಂದ್ರ ರಾಜಕುಮಾರ್.


”ಇಂತಹ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ನಾವು ಹೆಸರು ಮಾಡಿಕೊಂಡು ಬಿಡುತ್ತೇವೆ. ಆದರೆ ಇದರ ಹಿಂದೆ ನಿಜವಾಗಿಯೂ ಇರುವುದು ವೈದ್ಯರು. ಈ ನೇತ್ರದಾನದ ಕೆಲಸ ಅವರದ್ದು, ಕೊರೊನಾ ಸಮಯದಲ್ಲಿ ಎಲ್ಲರೂ ಆಸ್ಪತ್ರೆಗಳಿಗೆ ಬಂದು, ಕೇಂದ್ರಗಳಿಗೆ ಬಂದು ನೇತ್ರದಾನ ಮಾಡಲು ಆಗುವುದಿಲ್ಲ. ಹಾಗಾಗಿ ಕುಳಿತ ಜಾಗದಿಂದಲೇ ನೇತ್ರದಾನ ಮಾಡಲು ಅನುಕೂಲ ಆಗಲೆಂದು ವೈದ್ಯರ ತಂಡ ಹೀಗೊಂದು ಪ್ರಯತ್ನ ಮಾಡಿದೆ. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದಿದ್ದಾರೆ.

Categories
ಸಿನಿ ಸುದ್ದಿ

ಜೈಹೋ ಕನ್ನಡಿಗ ; ಅಪ್ಪು ನೆನಪಲ್ಲಿ ಹಾಡೊಂದು ಹೊರಬಂತು…

ಪುನೀತ್‌ ರಾಜಕುಮಾರ್‌ ಅವರಿಲ್ಲ. ಆದರೆ, ಅವರು ತಮ್ಮ ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಜೀವಂತ. ಅವರ ನೆನಪಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಆ ಸಾಲಿಗೆ ʼಜೈ ಹೋ ಕನ್ನಡಿಗʼ ಎಂಬ ಹಾಡು ಕೂಡ ಹೊರಬಂದಿದೆ. ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾದರೆ, ಜೆ.ಆರ್.ಶಿವ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ…

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ “ಒರಟ ಐ ಲವ್ ಯು” ಚಿತ್ರಕ್ಕೆ ಜಿ.ಆರ್.ಶಂಕರ್ ಅವರೊಡನೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ, ಶಿವ ನಂತರ “ಈ ಸಂಜೆ” ಚಿತ್ರದಲ್ಲೂ ಕೆಲಸ ಮಾಡಿದ್ದರು.
ಕೆಲವು ವರ್ಷಗಳ ಬಳಿಕ ಅವರೀಗ “ಜೈಹೋ ಕನ್ನಡಿಗ” ಎಂಬ ಹಾಡು ಬರೆದು ಸಂಗೀತ ನೀಡಿದ್ದಾರೆ. ಈ ಹಾಡನ್ನು ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಣೆ ಮಾಡಿದ್ದಾರೆ. ಈ ಹಾಡಲ್ಲಿ ಜೆ.ಆರ್. ಶಿವ, ಹಂಸಲೇಖ, ವಿ.ಮನೋಹರ್, ಸಿ.ಆರ್.ಮನೋಹರ್, ವಿ.ನಾಗೇಂದ್ರ ಪ್ರಸಾದ್, ದೊಡ್ಡರಂಗೇಗೌಡ, ಸಾಲುಮರದ ತಿಮ್ಮಕ್ಕ, ಕೆ.ಮಂಜು, ಅನಿರುದ್ಧ್, ಶ್ರೀಧರ್ ವಿ ಸಂಭ್ರಮ್, ಮಾಸ್ಟರ್ ಆನಂದ್, ಧರ್ಮ ಕೀರ್ತಿರಾಜ್, ಧರ್ಮ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರಿದ್ದಾರೆ.

ಅದ್ದೂರಿಯಾಗಿ ಮೂಡಿಬಂದಿರುವ ಈ ಗೀತೆಯನ್ನು ಪದ್ಮಶ್ರೀ ದೊಡ್ಡರಂಗೇಗೌಡ, ಸಿ.ಆರ್.ಮನೋಹರ್, ಗಂಡಸಿ ಸದಾನಂದ ಸ್ವಾಮಿ, ಪಿ.ಆರ್.ಓ ಸುಧೀಂದ್ರ ವೆಂಕಟೇಶ್, ನಟಿ ಲಲಿತಮ್ಮ, ಮಹಾಲಕ್ಷ್ಮಿ ಸ್ವೀಟ್ಸ್ ನ ಹರಣ್ ರಾಜ್ , ಅರುಣ್ ಸೇರಿದಂತೆ ಮುಂತಾದ ಗಣ್ಯರು ಬಿಡುಗಡೆ ಮಾಡಿದರು.

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಶಿವ, ಈ ಹಾಡಿನ ಮೂಲಕ ಏಳುಕೋಟಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಎಷ್ಟೋ ಅನುಭವವಿರುವವರು ಸಾಹಿತಿ ಬರೆದ ಹಾಗಿದೆ ಈ ಹಾಡು. ಶಿವ ಅವರಿಗೆ ಒಳಿತಾಗಲಿ ಎಂದು ಹಾರೈಸಿದರು ಹಿರಿಯ ಸಾಹಿತಿ ದೊಡ್ಡರಂಗೇಗೌಡ.

ನಾನು “ಒರಟ ಐ ಲವ್ ಯು “ಚಿತ್ರ ಮಾಡಿದಾಗಿನಿಂದಲೂ ಶಿವ ನನಗೆ ಪರಿಚಯ. ಕನ್ನಡದ ಹಿರಿಮೆ ಸಾರುವ ಈ ಹಾಡು ತುಂಬಾ ಚೆನ್ನಾಗಿದೆ. ಇಂತಹ ಇನ್ನೂ ಸಾಕಷ್ಟು ಹಾಡುಗಳು ಶಿವ ಅವರು ರಚಿಸಲಿ. ಅವರಿಗೆ ಬೇಕಾದ ಸಹಕಾರ ನೀಡಿತ್ತೇ‌ನೆ ಅನ್ನೋದು ನಿರ್ಮಾಪಕ ಸಿ.ಆರ್.ಮನೋಹರ್ ಮಾತು.

ಇದು ನನ್ನೊಬ್ಬನಿಂದ ಆಗಿಲ್ಲ. ನನ್ನ ಹಿಂದೆ ಸಾಕಷ್ಟು ಜನರಿದ್ದಾರೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ಹಾಗೂ ಹಾಡನ್ನು ಬಿಡುಗಡೆ ಮಾಡಲು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ. ವಿಜಯ್ ಪ್ರಕಾಶ್ ಹಾಡಿರುವ ಈ ಹಾಡನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಮೂರು ಜ‌ನ ಗಾಡ್ ಫಾದರ್ . ಒಬ್ಬರು ನನ್ನ ತಂದೆ. ಇನ್ನೊಬ್ಬರು ಅಪ್ಪು ಹಾಗೂ ಮತ್ತೊಬ್ಬರು ಸಿ.ಆರ್.ಮನೋಹರ್.
ಸಿ.ಆರ್.ಮನೋಹರ್ ಅವರು ಏಕೆಂದರೆ, ಖಾಯಿಲೆಯಿಂದ ಚಿಕ್ಕ ವಯಸ್ಸಿಗೆ ನನ್ನ ಗೆಳೆಯ ಅಸುನೀಗಿದ. ನಂತರ ಆ ಕುಟುಂಬಕ್ಕೆ ಸಿ.ಆರ್.ಮನೋಹರ್ ಮಾಡಿರುವ ಉಪಕಾರ ಮರೆಯುವಂತಿಲ್ಲ. ಹಾಗಾಗಿ ಅವರು ನನಗೆ ಗಾಡ್ ಫಾದರ್ ಎಂದು ಶಿವ ಭಾವುಕರಾದರು.

Categories
ಸಿನಿ ಸುದ್ದಿ

ಸೀತಮ್ಮನ ಮಗ ಶೂಟಿಂಗ್ ನಲ್ಲಿ ನಡೆದೇ ಹೋಯ್ತು ನಟ ಯತಿರಾಜ್ ಮದ್ವೆ!

ನಟ ಕಮ್ ನಿರ್ದೇಶಕ ಯತಿರಾಜ್ ಮದ್ವೆಯಾಗಿದ್ದಾರೆ. ಈಗಾಗಲೇ ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಯತಿರಾಜು, ದಿಢೀರ್ ಮದ್ವೆ ಆಗಿದ್ದಾರೆ! ಅದೂ ಸೀತಮ್ಮನ ಮಗ ಚಿತ್ರದ ಶೂಟಿಂಗ್ ವೇಳೆ…

ಸೋನು ಫಿಲಂಸ್ ಬ್ಯಾನರ್ ನಲ್ಲಿ ಕೆ‌.ಮಂಜುನಾಥ್ ನಾಯಕ್ ನಿರ್ಮಾಣದ, ಯತಿರಾಜ್ ನಿರ್ದೇಶಿಸುತ್ತಿರುವ “ಸೀತಮ್ಮನ ಮಗ” ಚಿತ್ರಕ್ಕೆ ಚಿತ್ರದುರ್ಗದ ಪಂಡರಹಳ್ಳಿಯಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.


ಕಳೆದ ಹದಿನೈದು ದಿನಗಳಿಂದ ಅಲ್ಲಿನ ಮನೆ, ಶಾಲೆ ಹಾಗೂ ಸುಂದರ ಪರಿಸರದಲ್ಲಿ ಅನೇಕ ಕಲಾವಿದರ ಪಾಲ್ಗೊಳ್ಳುವಿಕೆಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.

ಯತಿರಾಜ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ‌ ಮತ್ತು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಚೈತ್ರಾ ಶ್ರೀನಿವಾಸ್, ಚರಣ್ ಕಾಸಲ, ಸೋನು ಸಾಗರ, ಬುಲೆಟ್ ರಾಜು, ಬಸವರಾಜ್, ಜೀವನ್ ರಾಜ್, ಮಂಜುನಾಥ್ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿನು ಮನಸು ಸಂಗೀತ ‌ನಿರ್ದೇಶನವಿರುವ ಈ ಚಿತ್ರಕ್ಕೆ ಜೀವನ್ ರಾಜ್ ಛಾಯಾಗ್ರಹಣ ಹಾಗೂ ಶಶಿಕುಮಾರ್ ಅವರ ಸಹ ನಿರ್ದೇಶನವಿದೆ. ಅಂದಹಾಗೆ, ನಟ ಕಮ್ ನಿರ್ದೇಶಕ ಯತಿರಾಜ್ ಅವರು ಮದ್ವೆ ಆಗಿರೋದು ನಿಜ. ಹಾಗಂತ ಅದು ರಿಯಲ್ ಮದ್ವೆ ಅಲ್ಲ,

ರೀಲ್ ಮದ್ವೆ. ಸೀತಮ್ಮನ ಮಗ ಚಿತ್ರದ ಚಿತ್ರೀಕರಣದ ದೃಶ್ಯ ಒಂದರಲ್ಲಿ ಯತಿರಾಜ್ ಮದುವೆ ನಡೆದಿದೆ. ಅದು ಯಾಕೆ ಅನ್ನೋ ಕುತೂಹಲಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು.

error: Content is protected !!