ಬಾನಂಗಳ ಸೇರಿದ ದೀದಿ ; ಹಾಡುಗಳ ಮೂಲಕ ಎಂದಿಗೂ ಜೀವಂತ ಲತಾಜೀ ! ಗಾನ ಚತುರೆಯ ಒಂದು ನೆನಪು…

ಭಾರತೀಯ ಚಿತ್ರರಂಗ ಕಂಡ ಅಪರೂಪದ ಗಾಯಕಿ ಲತಾಜೀ. ಇವರ ಹಾಡುಗಳಿಗೆ ಮನಸೋತವರೇ ಇಲ್ಲ. ಬಹುತೇಕ ಭಾಷೆಗಳಲ್ಲಿ ಯಶಸ್ವಿ ಹಾಡುಗಳನ್ನು ಹಾಡಿರುವ ಸಕ್ಸಸ್‌ಫುಲ್‌ ಗಾಯಕಿ ಅವರು. ಅವರು ಈಗಿಲ್ಲ. ಆದರೆ, ಅವರ ನೂರಾರು ಹಿಟ್‌ ಸಾಂಗ್‌ಗಳು ಇಂದಿಗೂ ಜೀವಂತವಾಗಿವೆ. ಲತಾಜಿ ಅವರನ್ನು ದೀದಿ ಅಂತಾನೆ ಎಲ್ಲರು ಕರೆಯುತ್ತಿದ್ದರು. ದೀದಿ ಬಾಲಿವುಡ್‌ ಮಾತ್ರವಲ್ಲ, ಎಲ್ಲಾ ಚಿತ್ರರಂಗದಲ್ಲೂ ಹಾಡಿ ಸೈ ಎನಿಸಿಕೊಂಡವರು. ಕನ್ನಡದಲ್ಲೂ ಲತಾಜಿ ಹಾಡಿದ್ದಾರೆ. ಹಳೆಯ “ಸಂಗೊಳ್ಳಿ ರಾಯಣ್ಣ” ಸಿನಿಮಾದಲ್ಲಿ ಇವರ ಹಾಡಿದೆ. “ಬೆಳ್ಳನೆ ಬೆಳಗಾಯಿತು…” ಎಂಬ ಹಾಡು ಕೇಳಿದ್ದರೆ, ಅಲ್ಲಿರುವ ಧ್ವನಿ ಅದೇ ಲತಾಜಿ ಅವರದು. ಅವರು ಒಂದೇ ಭಾಷೆಗೆ ಸೀಮಿತವಾಗಲಿಲ್ಲ. ತಮಿಳು, ತೆಲುಗು, ಮಲಯಾಳಂ, ಮರಾಠಿ, ಗುಜರಾತಿ, ಬೆಂಗಾಲಿ, ಪಂಜಾಬ್‌ ಹೀಗೆ ಇನ್ನಿತೆ ಭಾಷೆಯ ಚಿತ್ರಗಳಲ್ಲೂ ತಮ್ಮ ಮಧುರ ಕಂಠ ನೀಡಿದ್ದಾರೆ. ಈಗ ಅವರ ಹಾಡುಗಳು ಜೀವಂತವಾಗಿವೆ. ಅವರು ಬಿಟ್ಟು ಹೋದಂತಹ ಆದರ್ಶಗಳಿವೆ. ಅವರ ಬಳಿ ಕಲಿತ ಅನೇಕ ಗಾಯಕರಿದ್ದಾರೆ. ಸಂಗೀತ ನೀರ್ದೇಶಕರಿದ್ದಾರೆ. ಅಂತಹ ನಿರ್ದೇಶಕರ ಪೈಕಿ ಕನ್ನಡದ ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರೂ ಸಹ ದೀದಿ ಅವರನ್ನು ಬಲು ಹತ್ತಿರದಿಂದ ಬಲ್ಲವರು. ಅಂತಹ ಲತಾಜಿ ಕುರಿತು ತಮ್ಮ ಹಳೆಯ ನೆನಪುಗಳನ್ನು “ಸಿನಿಲಹರಿ” ಜೊತೆ ಹಂಚಿಕೊಂಡಿದ್ದಾರೆ.

ಓವರ್‌ ಟು ಸುಧೀರ್‌ ಅತ್ತಾವರ್…
“ಒಮ್ಮೆ ಆಶಾಬೋಸ್ಲೆ ಅವರೊಂದಿಗೆ ಅವರ ಮನೆಯಲ್ಲೇ ಹಾಡಿನ ಬಗ್ಗೆ ಮಾತಾಡುತ್ತಿದ್ದ ಸಮಯವದು. ಲತಾ ದೀದಿ ತಂಗಿಗೆ ಫೋನ್ ಮಾಡಿ ನನ್ನ ಬಗ್ಗೆ ಒಂದಷ್ಟು ಹೇಳಿದ್ದರು. “ಹಾಂ ದೀದಿ… ಉಷಾ (ಸಣ್ಣ ತಂಗಿ)ದು ರೆಕಾರ್ಡಿಂಗ್ ಆಯ್ತು. ನಾನು ನಾಳೆ ಮಾಡುತ್ತೇನೆ. ನಿಮ್ಮ ಧ್ವನಿ ಕೂಡಾ ಸುಧೀರ್ ಬೇಕು ಅಂತ ಹೇಳುತ್ತಿದ್ದಾರೆ. ಬಹಳ ವರ್ಷಗಳ ನಂತರ ನಾವೆಲ್ಲ ಸೇರಿ ಒಂದು ಹಾಡು ಹಾಡಿದಂತಾಗುತ್ತದೆ ಅಂತ ಆಶಾ ದೀದಿ ಲತಾಜಿಗೆ ಹೇಳಿದರು. ನಾನು ಸುಧೀರ್ ಹತ್ರ ಮಾತನಾಡುತ್ತೇನೆ ಅಂದ್ರು ಲತಾಜಿ. ಐದು ದಿನಗಳ ನಂತರ ನಾನು ಬೆಂಗಳೂರಿನಲ್ಲಿದ್ದಾಗ ಲತಾ ದೀದಿಯ ಫೋನ್ ಬಂತು.

ಆಗ ನನ್ನ ಖುಷಿಗೆ ಪಾರವೇ ಇರಲಿಲ್ಲ.
ದೀದಿ ಅವರು ಮುಂಬಯಿಯಲ್ಲಿ ಫೆಡರ್ ರೋಡ್‌ನಲ್ಲಿರುವ ಪ್ರಭು ಕುಂಜ್ ನಿವಾಸಕ್ಕೆ ಬರಲು ಹೇಳಿದ್ದರು. ಆಶಾಜಿ, ಉಷಾಜಿ ಮತ್ತು ಝನೈ (ಆಶಾಜಿ ಮೊಮ್ಮಗಳು) ಅವರ ಎಲ್ಲರ ಸ್ವರಗಳನ್ನು ನಾನು ರೆಕಾರ್ಡ್‌ ಮಾಡಿದ್ದೆ. ನಿಜಕ್ಕೂ ಅದೊಂದು ಸಂತಸದ ಸಂದರ್ಭ. ಲತಾಜಿ ಅವರ ಧ್ವನಿ ಸೇರಿಸುವುದು ಮಾತ್ರ ಬಾಕಿ ಇತ್ತು. ಆದರೆ. ಮನೆಗೆ ಹೋದಾಗಲೂ ಅಷ್ಟೊಂದು ಲವ ಲವಿಕೆಯಿಂದ ಇರಲಿಲ್ಲ ದೀದಿ. ಆದರೆ, ಅವರು ನೀಲಿ ಸೀರೆ ಧರಿಸಿ ತುಂಬಾನೇ ಖುಷಿಯಿಂದ ನನ್ನನ್ನು ಮತ್ತು ತಂಡವನ್ನು ಅವರು ಬರ ಮಾಡಿಕೊಂಡರು. ಅವರ ಈವರೆಗಿನ ಸಿನಿಮಾ ಮತ್ತು ಗಾಯನ ಕುರಿತಂತೆ ಮಾತನಾಡಲು ಶುರು ಮಾಡಿದರು.

ನಿಜ ಹೇಳ್ತೀನಿ. ಅವರೊಬ್ಬ ಖ್ಯಾತ ಗಾಯಕಿ. ಹೇಗೆಲ್ಲಾ ಇರಬಹುದಿತ್ತು. ಆದರೆ, ಒಂಚೂರು ಗತ್ತು ಇಲ್ಲ… ಹಮ್ಮು ಬಿಮ್ಮುಗಳಿಲ್ಲ…! ನಮ್ಮ ಮನೆಯ ತಾಯಿಯಂತೆಯೇ ನಮ್ಮನ್ನು ಪ್ರೀತಿಯಿಂದ ಸತ್ಕರಿಸಿದರು, ಖುಷಿಯಿಂದಲೇ ಮಾತನಾಡಿದರು ಮತ್ತೆ ಹಾಡಿದರು ಕೂಡ! ಈಗ ರೆಕಾರ್ಡಿಂಗ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಇನ್ನೊಂದು ಸ್ವಲ್ಪ ದಿನದಲ್ಲಿ ಹುಷಾರಾಗುತ್ತೇನೆ. ಬಪ್ಪಿ ಲಹಿರಿ ಕೂಡಾ ಕಾಯ್ತಾ ಇದ್ದಾರೆ. ಒಟ್ಟಿಗೆ ಮುಗಿಸುತ್ತೇನೆ ಎಂದು ಆ ವೇಳೆ ಮಾತು ಕೊಟ್ಟರು. ಹುಷಾರಾದ ಮೇಲೆ ಹಾಡುತ್ತೇನೆ ಅಂದಿದ್ದರು ಅವರು.

ದೀದಿಗಾಗಿಯೇ ಕೊಡಲು ಗೆಳೆಯ ಸಂಕಲನಕಾರ ವಿದ್ಯಾಧರ್ ತಂದಿದ್ದ ಮೈಸೂರ್‌ ಪಾಕ್ ನೋಡಿ ಅವರ ಸಂತಸಪಟ್ಟರು. ನೀವು ಕನ್ನಡದಲ್ಲಿ “ಬೆಳ್ಳನೆ ಬೆಳಗಾಯ್ತು…” ಅಂತ ಒಂದು ಹಾಡು ಹಾಡಿದ್ದೀರಲ್ಲವೇ ದೀದಿ ಅಂತ ಮೆಲ್ಲನೆ ನಾನು ಕೇಳಿದೆ. ಆಗ ಅವರು ತಕ್ಷಣವೇ, ಒಂದಲ್ಲ ನಾಲ್ಕು ಹಾಡು ಹೇಳಿದ್ದೇನೆ ಅಂತ ಹೇಳಿ, ನಾಲ್ಕೂ ಹಾಡಿನ ಒಂದೊಂದು ತುಣುಕು ಹಾಡಿದರು. ಸುಮಾರು 55 ಸಾವಿರಕ್ಕೂ ಹೆಚ್ಚು, ಜಗತ್ತಿನ ನಾನಾ ಭಾಷೆಗಳಲ್ಲಿ ಹಾಡಿದ್ದ ಈ ಮಾತೆಯ ಕನ್ಬಡಾಭಿಮಾನ ಕಂಡು ನಿಜಕ್ಕೂ ನಾನು ದಂಗಾದೆ.

ನಾನು ಕನ್ನಡ ಮತ್ತು ಕನ್ನಡಿಗರನ್ಬು ಹೇಗೆ ಮರೆಯಲಿ…?
ನನ್ನನ್ಬು ಈ ಕ್ಷೇತ್ರಕ್ಕೆ ಪರಿಚಯಿಸಿದ ಮಾಸ್ಟರ್ ವಿನಾಯಕ್ ರವರು ಕನ್ನಡಿಗರೇ ಅಂತ ಅಂದಾಗ ನಾನು ತೀವ್ರ ಭಾವುಕನಾದೆ. ದೀದಿ ನಿಮ್ಮ ಮತ್ತು ಹಿರಿಯ ನಿರ್ದೇಶಕರಾದ ಎಂ.ಎಸ್. ಸತ್ಯು ಅವರ ಜೊತೆಗಿನ ಒಡನಾಟದ ಬಗ್ಗೆ ಹೇಳಿ ಅಂದಾಗ, ನಾನು ಎರಡು ಸಲ ಭೇಟಿ ಆಗಿದ್ದೆ. ನನಗಿಂತ ಒಂದು ವರ್ಷ ಚಿಕ್ಕವರು ಸತ್ಯು. ಆದರೆ, ದೊಡ್ಡ ಹೆಸರು ಮಾಡಿದ್ದಾರೆ.” ಅಂತ ಹೇಳುತ್ತಲೇ ಒಂದಷ್ಟು ಮಾತುಕತೆ ಮುಂದುವರೆದಿತ್ತು.

ಅವರು ಹಾಗೆ ಮಾತಾಡುವಾಗ, ನಾನು ಒಮ್ಮೆ ಮಂಗಳೂರಿಗೆ ಬರಬೇಕು ಅಂತಾನೂ ಹೇಳಿದ್ದರು. ಅದರೆ ಉಷಾಜಿ ಅವರನ್ನು ಮಂಗಳೂರಿಗೆ ಕರೆಸಿಕೊಂಡಾಗಲೂ ದೀದಿ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ನನ್ನ ಹಾಡಿಗೆ ಅವರು ಕೊಡಬೇಕಾಗಿದ್ದ ಧ್ವನಿ ಹಾಗೆಯೇ ಬಾಕಿ ಉಳಿದುಕೊಂಡಿತು ಎನ್ನುವ ಸುಧೀರ್‌ ಅತ್ತಾವರ್‌ , ದೀದಿ ಅವರ ಬಗೆಗಿನ ನೆನಪುಗಳನ್ನು ಈ ರೀತಿ ಹಂಚಿಕೊಳ್ಳುವ ಮೂಲಕ ಹಾಡು ಹಾಡಿಸಲು ಸಾಧ್ಯವಾಗದಿದ್ದಕ್ಕೆ ಈಗಲೂ ನನಗೆ ನೋವಿದೆ ಅನ್ನುತ್ತಾರೆ ಅವರು.

Related Posts

error: Content is protected !!