ಕೆವಿಎನ್ ಪ್ರೊಡಕ್ಷನ್ ನಡಿ ನಿಶಾ ವೆಂಕಟ್ ಕೊನಂಕಿ ನಿರ್ಮಾಣ ಮಾಡಿರುವ “ಬೈ ಟು ಲವ್” ಸಿನಿಮಾದ ಹೊಸ ಟ್ರಾಕ್ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. “ನೀನೇ ನೀನೇ…” ಎಂಬ ಮೆಲೋಡಿ ಟ್ರಾಕ್ ನಲ್ಲಿ ಲೀಲು-ಬಾಲು ಮುದ್ದಾದ ಮಗುವಿನೊಟ್ಟಿಗೆ ಆಡುವ ತುಂಟಾಟಗಳನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ. ಈ ಹಿಂದೆ ಹಸೆಮಣೆಯಲ್ಲಿ ಕುಳಿತಿರುವ ಜೋಡಿಗಳ ತೊಡೆಯ ಮೇಲೊಂದು ಮಗು ಇರುವ ವಿಶೇಷ ಪೋಸ್ಟರ್ ಬಿಟ್ಟಿದ್ದ ನಿರ್ದೇಶಕ ಹರಿ ಸಂತು, ಈಗ ಹಾಡಿನಲ್ಲಿ ಮಗುವಿನೊಟ್ಟಿಗೆ ಶ್ರೀಲೀಲಾ ಹಾಗೂ ಧನ್ವೀರ್ ಎಂಜಾಯ್ ಮಾಡ್ತಿರುವ ಕಥೆಯೊಂದನ್ನು ಹೇಳಿ ತಲೆಗೆ ಹುಳ ಬಿಟ್ಟಿದ್ದಾರೆ.
ನಾಗೇಂದ್ರ ಪ್ರಸಾದ್ ಬರೆದ “ನೀನೇ ನೀನೆ” ಎಂಬ ಹಾಡಿಗೆ ಅಜನೀಶ್ ಲೋಕನಾಥ್ ಅಷ್ಟೇ ಇಂಪಾದ ಸಂಗೀತ ನೀಡಿದ್ದು, ಕಾರ್ತಿಕ್ ಈ ಹಾಡಿಗೆ ಧನ್ವಿಯಾಗಿದ್ದಾರೆ. ಇನ್ನು ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ಸಖತ್ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಫೆಬ್ರವರಿ 18ಕ್ಕೆ ಸಿನಿಮಾ ತೆರೆಗೆ!
ಧನ್ವೀರ್ ಹಾಗೂ ಶ್ರೀಲೀಲಾ ಜೋಡಿಯ ಬೈ ಟು ಲವ್ ಪ್ರೇಮ್ ಕಹಾನಿ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಇದೇ 18ರಂದು ರಾಜ್ಯಾದ್ಯಂತ ಬೈ ಟು ಲವ್ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರತಂಡ ಅದ್ಧೂರಿ ಪ್ರಮೋಷನ್ ಶುರು ಮಾಡಿದೆ. ಈ ಹಿಂದೆ ಮಾಸ್ ಲುಕ್‌ನಲ್ಲಿ ಮಿಂಚಿದ್ದ ಧನ್ವೀರ್, ಈಗ “ಬೈ ಟು ಲವ್’ನಲ್ಲಿ ಲವರ್ ಬಾಯ್ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಲೀಲಾ ಮಲೆನಾಡ ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ.
ಅಲೆಮಾರಿ, ಡವ್, ಕಾಲೇಜ್ ಕುಮಾರ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ಹರಿ ಸಂತೋಷ್ ಬೈ ಟು ಲವ್ ಸಿನಿಮಾಗೆ ನಿರ್ದೇಶನ ಮಾಡಿದ್ದು, ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಯೋಗಾನಂದ್ ಸಂಭಾಷಣೆ ಚಿತ್ರಕ್ಕಿದೆ.