ದರ್ಶನ್‌ ಹುಟ್ಟುಹಬ್ಬಕ್ಕೆ ಮೆಜೆಸ್ಟಿಕ್‌‌ ಮರು ಬಿಡುಗಡೆ! ಸೂಪರ್‌ ಹಿಟ್‌ ಚಿತ್ರಕ್ಕೆ ಈಗ ಎರಡು ದಶಕ; ಹೊಸ ರೂಪದಲ್ಲಿ ಫ್ಯಾನ್ಸ್‌ ಮುಂದೆ…

ಫೆಬ್ರವರಿ 8, 2002 … ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ದಿನವನ್ನು ನೆನಪಿಡಲೆಬೇಕು. ಕಾರಣ, ಈ ದಿನದಂದೇ ಕನ್ನಡಕ್ಕೊಬ್ಬ ಸೂಪರ್‌ ಸ್ಟಾರ್‌ ಹುಟ್ಟುಕೊಂಡಿದ್ದು. ಹೌದು, ಫೆ. 8, 2002 ರಲ್ಲಿ ದರ್ಶನ್‌ ಅಭಿನಯದ ಮೆಜೆಸ್ಟಿಕ್‌ ಸಿನಿಮಾ ರಿಲೀಸ್‌ ಆಗಿತ್ತು. ಈ ಸಿನಿಮಾ ಬಿಡುಗಡೆಯಾಗಿದ್ದೇ ತಡ, ಕನ್ನಡಕ್ಕೊಬ್ಬ ಮಾಸ್‌ ಹೀರೋ ಸಿಕ್ಕಿಬಿಟ್ಟರು ಅನ್ನೋ ಉದ್ಘಾರ ಎಲ್ಲರಿಂದಲೂ ಬಂದಿದ್ದು ಸುಳ್ಳಲ್ಲ. ಪಿ.ಎನ್.‌ ಸತ್ಯ ನಿರ್ದೇಶನದಲ್ಲಿ ದರ್ಶನ್‌ ಮೊದಲ ಸಲ ಹೀರೋ ಆಗಿ ಮಿಂಚಿದ ಸಿನಿಮಾ ಇದು. ಮೊದಲ ಬಾಲ್‌ನಲ್ಲೇ ಸಿಕ್ಸರ್‌ ಬಾರಿಸಿದಂತೆ, ಮೊದಲ ಸಿನಿಮಾವೇ ಸೂಪರ್‌ ಡೂಪರ್‌ ಹಿಟ್‌ ಆಯ್ತು. ದರ್ಶನ್‌ ಅವರ ಈ ಮೆಜೆಸ್ಟಿಕ್‌ ಸಿನಿಮಾ ಇಂದಿಗೆ ಬಿಡುಗಡೆಯಾಗಿ ಬರೋಬ್ಬರಿ ಎರಡು ದಶಕಗಳು ಕಳೆದಿವೆ.


ನಿಜ, ಫೆಬ್ರವರಿ 8, 2002 ರಲ್ಲಿ ಈ ಚಿತ್ರ ಬಿಡುಗಡೆಯಾಗಿ ಇಲ್ಲಿಗೆ ಇಪ್ಪತ್ತು ವರ್ಷಗಳನ್ನು ಪೂರೈಸಿದೆ. ಆ ನೆನಪಿಗೆ ಇದೀಗ ನಿರ್ಮಾಪಕರಾದ ಎಂ.ಜಿ.ರಾಮಮೂರ್ತಿ ಅವರು ಮೆಜೆಸ್ಟಿಕ್‌ ಅನ್ನು ಮತ್ತಷ್ಟು ಕಲರ್‌ಫುಲ್‌ ಆಗಿಡುವ ಪ್ರಯತ್ನ ಮಾಡಿದ್ದಾರೆ. ಫೆ.16ರಂದು ದರ್ಶನ್‌ ಅವರ ಹುಟ್ಟುಹಬ್ಬ. ಆ ನೆನಪಿಗೆ ಮತ್ತು ಮೆಜೆಸ್ಟಿಕ್‌ ಸಿನಿಮಾ ರಿಲೀಸ್‌ ಆಗಿ ಇಪ್ಪತ್ತು ವರ್ಷಗಳನ್ನು ಪೂರೈಸಿರುವ ಸಂಭ್ರಮಕ್ಕೆ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

ದರ್ಶನ್‌ ಅವರ ಬರ್ತ್‌ಡೇ ನೆನಪಿಗಾಗಿಯೇ ಮೆಜೆಸ್ಟಿಕ್‌ ಸಿನಿಮಾವನ್ನು ಮತ್ತಷ್ಟು ರಂಗಾಗಿಸಲು ಹೊರಟಿದ್ದಾರೆ. ಅಂದರೆ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತಹ ಮೆಜೆಸ್ಟಿಕ್‌ ಚಿತ್ರಕ್ಕೆ ಈಗಿನ ಜನರೇಷನ್‌ಗೆ ತಕ್ಕಂತೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡಲು ಹೊರಟಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಡಿಐ ಗ್ರಾಫಿಕ್ಸ್‌, ಮ್ಯೂಸಿಕ್‌ ಎಫೆಕ್ಟ್‌, ಸೌಂಡ್‌ ಎಫೆಕ್ಟ್ಸ್‌ ಸಿ.ಜಿ ವರ್ಕ್‌ ಸೇರಿದಂತೆ ಇನ್ನಿತರೆ ತಾಂತ್ರಿಕತೆಯನ್ನು ಬಳಸಿ ಮೆಜೆಸ್ಟಿಕ್‌ ಅಂದವನ್ನು ಹೆಚ್ಚಿಸಲಾಗಿದೆ. ಸಾಧುಕೋಕಿಲ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ಈಗ ಸಾಧುಕೋಕಿಲ ಅವರ ಸ್ಟುಡಿಯೋದಲ್ಲೇ ಮೆಜೆಸ್ಟಿಕ್‌ ಚಿತ್ರವನ್ನು ಮತ್ತಷ್ಟು ಅಂದಗೊಳಿಸಲಾಗಿದೆ.

ಫೆ.8 ರಂದು ನಿರ್ಮಾಪಕರು ಸಣ್ಣದ್ದೊಂದು ಸೆಲೆಬ್ರೇಷನ್‌ ಕೂಡ ಇಟ್ಟುಕೊಂಡಿದ್ದಾರೆ. ದರ್ಶನ್‌ ಅವರ ನೇತೃತ್ವದಲ್ಲಿ ಆ ಸಂಭ್ರಮ ನಡೆಯಲಿದೆ. ಅದೇನೆ ಇರಲಿ, ಡಿ ಬಾಸ್‌ ಹುಟ್ಟು ಹಬ್ಬಕ್ಕೆ ದಚ್ಚು ಫ್ಯಾನ್ಸ್‌ಗೆ ಮೆಜೆಸ್ಟಿಕ್‌ ಚಿತ್ರವನ್ನು ಕೊಡುಗೆಯಾಗಿ ಕೊಡಲು ನಿರ್ಮಾಪಕರು ಸಜ್ಜಾಗಿದ್ದಾರೆ. ಮೆಜೆಸ್ಟಿಕ್‌ ಈಗ ಎಂದಿಗಿಂತಲೂ ಕಂಗೊಳಿಸಲಿದೆ ಅನ್ನೋದೇ ಈ ಹೊತ್ತಿನ ವಿಶೇಷ.

ಈ ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ ಕಳೆದಿದೆ. ಇದೇ ಫೆ. 16 ರಂದು ದರ್ಶನ್ ಅವರ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಹೊಸ ತಂತ್ರಜ್ಞಾನದೊಂದಿಗೆ “ಮೆಜೆಸ್ಟಿಕ್” ಚಿತ್ರ ಮರು ಬಿಡುಗಡೆಯಾಗಲಿದೆ
ಎಂದು ನಿರ್ಮಾಪಕ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ.

Related Posts

error: Content is protected !!