ಹೊಸ ವೇಷದೊಂದಿಗೆ ಬಹುಕೃತ ವಿಷಯಂ! ಡಿಲೇರಿಯಂ ಫೋಬಿಯಾ ಸುತ್ತ ಹೀಗೊಂದು ಎಮೋಷನಲ್ ಸ್ಟೋರಿ

ಈ ಹಿಂದೆ ಗೌಡ್ರುಸೈಕಲ್ ಎಂಬ ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ ಮಾಡಿದ್ದ ತಂಡದ ಬಹುತೇಕರು ಸೇರಿ ಮತ್ತೊಂದು ಸಿನಿಮಾ ಮಾಡಿದ್ದಾರೆ. ಅದಕ್ಕೆ ಬಹುಕೃತ ವೇಷಂ ಎಂದು ಹೆಸರಿಡಲಾಗಿದೆ. ಅಂದಹಾಗೆ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಇಲ್ಲಿ ಬಿಗ್‌ ಬಾಸ್ ಖ್ಯಾತಿಯ ವೈಷ್ಣವಿಗೌಡ ಹಾಗೂ ಗೌಡ್ರು ಸೈಕಲ್ ನಾಯಕ ಶಶಿಕಾಂತ್ ಚಿತ್ರದ ಆಕರ್ಷಣೆ. ಈ ಚಿತ್ರವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ಗೌಡ್ರುಸೈಕಲ್ ಚಿತ್ರಕ್ಕೂ ನಿರ್ದೇಶಕರಾಗಿದ್ದರು.

ಇತ್ತೀಚೆಗೆ ಬಹುಕೃತ ವೇಷಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಈ ವೇಳೆ ನಾಯಕ ಶಶಿಕಾಂತ್ ಮಾತನಾಡಿ, “ನನ್ನದು 2 ಶೇಡ್ ಇರೊ ಪಾತ್ರ, ಡಿಲೇರಿಯಂ ಫೋಬಿಯಾ ಎನ್ನುವ ಖಾಯಿಲೆಯ ಮೇಲೆ ಮಾಡಿರುವ ಚಿತ್ರವಿದು, ನಾವು ಈ ಕಥೆ ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೊದಲು ಒಪ್ಪಲಿಲ್ಲ, ನಂತರ ನಮ್ಮ ಹಿಂದಿನ ಚಿತ್ರಕ್ಕೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ತಂದು ತೋರಿಸಿದಾಗ ಒಪ್ಪಿದರು. ಮಾದ್ಯಮಗಳ ಕಾರಣದಿಂದ ದೊಡ್ಡ ಚಿತ್ರವೊಂದು ಆರಂಭವಾಯಿತು ಎಂಬುದು ಅವರ ಮಾತು.

ನಿರ್ಮಾಪಕರು ಒಂದೊಳ್ಳೇ ಸಿನಿಮಾ ಮಾಡಿಕೊಡಿ ಎಂದು ಹೇಳಿ ಎಲ್ಲಾ ಜವಾಬ್ದಾಾರಿ ನಮಗೇ ವಹಿಸಿದ್ದರು. ಕಥೆ ಬರೆಯುವಾಗ ಈ ಪಾತ್ರಕ್ಕೆ ವೈಷ್ಣವಿಗೌಡ ಅವರೇ ಸೂಕ್ತ ಅಂದುಕೊಂಡಿದ್ದೆವು, ಅವರ ಬಳಿ ಹೋಗಿ ಕಥೆ ಹೇಳಿದಾಗ ಅವರೂ ಸಹ ಒಪ್ಪಿದರು. ಚಿತ್ರಕ್ಕೆ 70 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ, ವೈಷ್ಣವಿಗೌಡ ಅವರು ಸಿಂಗಲ್ ಶಾಟ್‌ನಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಎಂದರು.

ಚಿತ್ರದ ಕಥೆ, ಚಿತ್ರಕಥೆ ಬರೆದಿರುವ ಅಧ್ಯಾಯ ತೇಜ್, “ನನ್ನ ಸ್ನೇಹಿತನೊಬ್ಬನಿಗೆ ಈ ಥರದ ಖಾಯಿಲೆ ಇತ್ತು. ಪ್ರತಿದಿನ ಅವನ ಮೇಲೆ ಅವನೇ ಫೈಟ್ ಮಾಡುತ್ತಿರುತ್ತಾನೆ. ಇದನ್ನು ಸ್ನೇಹಿತ ಶಶಿಕಾಂತ್ ಬಳಿ ಹೇಳಿದೆ. ಆತನೂ ಸಿನಿಮಾ ಮಾಡಲು ಒಪ್ಪಿದ. ಕಂಟೆಂಟ್ ಸಿನಿಮಾವನ್ನು ಕಮರ್ಷಿಯಲ್‌ ಆಗಿ ಮಾಡಿದ್ದೇವೆ ಎಂದರು.
ಚಿತ್ರದ ಪ್ರೀ ಕ್ಲೈಮ್ಯಾಕ್ಸನಲ್ಲಿ ನಾಲ್ಕುವರೆ ನಿಮಿಷದ ಒಂದೇ ಶಾಟ್ ಇದೆ. ಅದರಲ್ಲಿ ವೈಷ್ಣವಿಗೌಡ ಅವರು ನಗು, ಅಳು ಸೇರಿಸಿ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ ಎಂಬುದು ಅವರ ಮಾತು.

ಹೆಚ್. ನಂದ ಹಾಗೂ ಡಿ. ಕೆ. ರವಿ ಚಿತ್ರ ನಿರ್ಮಾಣ‌ ಮಾಡಿದ್ದಾರೆ. ವೈಶಾಖ್ ವಿ.ಭಾರ್ಗವ್ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದರೆ, ಕಿರಣ್ ಕೃಷ್ಣಮೂರ್ತಿ ಅವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಹರ್ಷಕುಮಾರ್‌ಗೌಡ ಕ್ಯಾಮೆರಾ ಹಿಡಿದಿದ್ದಾರೆ. ಜ್ಞಾನೇಶ್ ಅವರ ಸಂಕಲನವಿದೆ.

Related Posts

error: Content is protected !!