Categories
ಸಿನಿ ಸುದ್ದಿ

RRR ಆತ್ಮ ಪರಿಚಯಿಸಿದ ರಾಜಮೌಳಿ ! ಜಕ್ಕಣ್ಣನ ಕಲ್ಪನೆಯ ‘ಜನನಿ’ಗೆ ಕನ್ನಡಿಗರು ಉಘೇ ಉಘೇ !

ಬಾಹುಬಲಿ ದೃಶ್ಯಕಾವ್ಯದ ಸೃಷ್ಟಿಕರ್ತ.. ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಬೆಂಗಳೂರಿಗೆ ಆಗಮಿಸಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆರ್ ಆರ್ ಆರ್ ಚಿತ್ರದ ಬಹು ಮುಖ್ಯವಾದ ಜನನಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ನಗರದ ಮಾಲ್ ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನನಿ ಹಾಡನ್ನು ಬಿಡುಗಡೆ ಮಾಡಲಾಯಿತು.

ಹಾಡನ್ನು ಬಿಡುಗಡೆ ಮಾಡುವ ಮೊದಲೇ ಜಕ್ಕಣ್ಣಗಾರು, ಕನ್ನಡದಲ್ಲಿಯೇ ಮಾತು ಆರಂಭಿಸಿ, ಎರಡು ವಿಚಾರಗಳಿಗೆ ಕನ್ನಡಿಗರ ಕ್ಷಮೆ ಕೇಳುತ್ತೇನೆ. ನಾನು ಇಲ್ಲಿ ಹಾಡು ಬಿಡುಗಡೆ ಮಾಡಲು ಬಂದಿಲ್ಲ. ಈ ಕಾರ್ಯಕ್ರಮ ಸಿನಿಮಾದ ಪ್ರಚಾರನೂ ಅಲ್ಲ. ಜನನಿ ಹಾಡು ನಮ್ಮ ಆರ್ ಆರ್ ಆರ್ ಸಿನಿಮಾದ ಆತ್ಮ. ಆ ಆತ್ಮದೊಂದಿಗೆ ನಿಮ್ಮನ್ನು ಪರಿಚಯಿಸಲು ಬಂದಿದ್ದೇನೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಕೂಡ ಬರುತ್ತಾರೆ ಎಂದರು.

ಆರ್ ಆರ್ ಆರ್ ಸಿನಿಮಾ ಅನೌನ್ಸ್ ಆದಾಗಿನಿಂದ ನಿರೀಕ್ಷೆಯನ್ನು ದುಪ್ಪಟ್ಟು ಮಾಡುತ್ತಲೇ ಇದೆ. ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶಿಯಾ ಶರಣ್ ಸೇರಿದಂತೆ ದೊಡ್ಡ ತಾರಾಬಳಗ ನಟಿಸಿರುವ ಆರ್ ಆರ್ ಆರ್ ಸಿನಿಮಾದ ಎರಡು ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ದೋಸ್ತಿ ಹಾಗೂ ಹಳ್ಳಿ ನಾಟು ಹಾಡು ಭರ್ಜರಿ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ಜನನಿ ಹಾಡು ಸಿನಿಪ್ರೇಕ್ಷಕಕುಲದ ಮುಂದೆ ಅರ್ಪಿಸಿದ್ದಾರೆ.

ಅದ್ಭುತ ದೃಶ್ಯಕಾವ್ಯದ ಜನನಿ ಹಾಡಿನ ಪ್ರತಿ ಫ್ರೇಮ್ ಅತ್ಯದ್ಭುತವಾಗಿ ಮೂಡಿ ಬಂದಿದೆ. ಸಂಗೀತ ನಿರ್ದೇಶಕ ಎಂ,.ಎಂ.ಕೀರವಾಣಿ ಮ್ಯೂಸಿಕ್ ಗುಂಗು..ಪ್ರತಿ ಪದಗಳು ಅಮೋಘವಾಗಿವೆ. ಕ್ರೋಧ, ಭಯದ ನಡುವೆ ಮನಕಲುವ ದೃಶ್ಯಗಳು ನೋಡುಗರ ಕಣಂಚುಗಳು ಒದ್ದೆ ಮಾಡುತ್ತವೆ.

3 ನಿಮಿಷದ 10 ಸೆಕೆಂಡ್ ನ ಜನನಿ ಹಾಡು ಬೇರೆಯದ್ದೇ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಸೆಂಥಿಲ್ ಕುಮಾರ್ ಪ್ರತಿ ದೃಶ್ಯಗಳನ್ನು ಕ್ಯಾಮೆರಾ ಕಣ್ಣುಗಳಲ್ಲಿ ಅಚ್ಚುಕಟ್ಟಾಗಿ ಸೆರೆ ಹಿಡಿದಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಾಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿರುವ ಜನನಿ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ಜನವರಿ 7ಕ್ಕೆ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರ್ತಿದೆ.

Categories
ಸಿನಿ ಸುದ್ದಿ

ಬಾಹುಬಲಿ‌ ನಿರ್ದೇಶಕನ ರೇಂಜೇ ಬೇರೆ… ಸ್ಪೆಷಲ್ ಪ್ಲೈಟ್ ನಲ್ಲಿಯೇ ಬೆಂಗಳೂರಿಗೆ ಬಂದು ಹೋದರು ರಾಜ‌ಮೌಳಿ !

ಸ್ಟಾರ್ ನಿರ್ದೇಶಕ ಅಂದ್ರೆ ಇದು. ‘ ಬಾಹು ಬಲಿ’ ಖ್ಯಾತಿಯ ರಾಜಮೌಳಿ‌ ಅವರ ರೇಂಜ್ ಹೆಂಗೈತಿ ಅಂತ ಕೇಳಿದ್ರೆ ನೀವು ದಂಗಾಗಿ ಹೋಗ್ತಿರಾ. ಯಾಕಂದ್ರೆ ನಾವೆಲ್ಲ ಸ್ಟಾರ್ ನಟರ ಹೈ ಪೈ ನೋಡಿದವರಷ್ಟೇ. ಬದಲಿಗೆ ಸ್ಟಾರ್ ನಿರ್ದೇಶಕರ ಹೈ ಪೈ ರೇಂಜ್ ನೋಡಿಲ್ಲ. ಅಷ್ಟೇ ಯಾಕೆ, ಕನ್ನಡದಲ್ಲಿ ‌ನೂರಿನ್ನೂರು ಕೋಟಿ ಸಿನಿಮಾ ಮಾಡಿದ ನಿರ್ದೇಶಕರು ಕೂಡ ಯಾರು ಇಲ್ಲ. ಆದರೆ ನಿರ್ದೇಶಕ ರಾಜ ಮೌಳಿ ಹಾಗಲ್ಲ, ಇವತ್ತು ಅವರ ಸಿನಿಮಾಗಳ ಬಡ್ಜೆಟ್ ಏನೇ ಆದ್ರು 200 ಕೋಟಿ ಮೇಲೆಯೇ.

ಸದ್ಯಕ್ಕೆ ಭಾರೀ‌ ನಿರೀಕ್ಷೆಯೊಂದಿಗೆ ಸಖತ್ ಸೌಂಡ್ ಮಾಡುತ್ತಿರುವ ಆರ್ ಆರ್ ಆರ್ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ‌ಬ್ಯುಸಿಯಾಗಿರುವ ರಾಜಮೌಳಿ , ಶುಕ್ರವಾರ ಬೆಂಗಳೂರಿಗೆ ಸ್ಪೆಷಲ್ ವಿಮಾನದಲ್ಲಿ ಬಂದಿದ್ದರು ಅಂದ್ರೆ ಅವರ ರೇಂಜ್ ಏನು ಅಂತ ನೀವೇ ಊಹಿಸಿಕೊಳ್ಳಿ. ನಟರು ಬಿಡಿ, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅಮೀರ್ ಖಾನ್, ರಜನೀಕಾಂತ್, ಮುಮ್ಮುಟ್ಟಿ, ಮೊಹನ್ ಲಾಲ್, ಚಿರಂಜೀವಿ ಕುಟುಂಬವೂ ಸೇರಿದಂತೆ ಅನೇಕರು ತಮಗಿರುವ ಸ್ಟಾರ್ ವಾಲ್ಯೂ ಆಧರಿಸಿ ವಿಶೇಷ ವಿಮಾನಗಳಲ್ಲಿ ಯೇ ಓಡಾಡುವುದೇನು ವಿಶೇಷ ಅಲ್ಲ, ಆದರೆ ಒಬ್ಬ ನಿರ್ದೇಶಕ ನಾಗಿ ರಾಜಮೌಳಿ ಸ್ಪೆಷಲ್ ಪ್ಲೈಟ್ ನಲ್ಲಿ ಓಡಾಡುವ ಮೂಲಕ‌ ನಿರ್ದೇಶಕನ ಹುದ್ದೆಗೂ‌ ಒಂದು ಸ್ಟಾರ್ ವ್ಯಾಲೂ‌‌ ತಂದು ಕೊಟ್ಟಿದ್ದಾರೆಂದರೆ ನಿರ್ದೇಶಕ ರ ಬಳಗ ಹೆಮ್ಮೆ ಪಡಬೇಕು.


ಅಂತಹದೊಂದು ಘಟನೆಗೆ ಶುಕ್ರವಾರ ಬೆಂಗಳೂರಿನಲ್ಲಿ ಜರುಗಿದ ಆರ್ ಆರ್ ಆರ್ ಚಿತ್ರದ ಥೀಮ್ ಸಾಂಗ್ ಲಾಂಚ್ ಕಾರ್ಯಕ್ರಮ ಸಾಕ್ಷಿಯಾಯಿತು.

ಬಾಹುಬಲಿ ಸರಣಿಯ ನಂತರ ರಾಜ ಮೌಳಿ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ ಆರ್ ಅರ್ ಆರ್. ತೆಲುಗು , ಹಿಂದಿ, ಕನ್ನಡ , ತಮಿಳು ಸೇರಿದಂತೆ ಭಾರತದ ಅಷ್ಟು ಭಾಷೆ ಹಾಗೆಯೇ‌ ಜಗತ್ತಿನ ಇತರ ಭಾಷೆಗಳಿಗೂ ಡಬ್ ಆಗಿ ಬರುತ್ತಿದೆ ಈ ಚಿತ್ರ. ಸದ್ಯಕ್ಕೆ‌ ಕನ್ನಡದ‌ ಅದರ ಅವತರಣಿಕೆಯ ಹಕ್ಕುಗಳನ್ನು ಕೆವಿಎನ್ ಸಂಸ್ಥೆ ಪಡೆದುಕೊಂಡಿದೆ.

ಶುಕ್ರವಾರ ಅದೇ ಸಂಸ್ಥೆ ಆರ್ ಆರ್ ಆರ್ ಚಿತ್ರದ ಥೀಮ್ ಸಾಂಗ್ ಜನನಿ ವಿಡಿಯೋ ಸಾಂಗ್ ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ಅಂದು ಚೆನ್ನೈ ನಲ್ಲೂ ಇದೇ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜಮೌಳಿ, ಅಲ್ಲಿಂದ ಪತ್ನಿ ಸಮೇತ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಬೆಂಜ್ ಕಾರಿನಲ್ಲಿ ಒರಾಯನ್ ಮಾಲ್ ಗೆ ಬಂದಿದ್ದರು. ಇದು ಬಾಹುಬಲಿ ಚಿತ್ರದ ನಂತರ ಬದಲಾದ ರಾಜಮೌಳಿ‌ ಅವರ ಕಾಸ್ಟ್ಲಿ ಬದುಕಿನ ಒಂದು ಕಥೆ.

Categories
ಸಿನಿ ಸುದ್ದಿ

ಆರ್ ಆರ್ ಆರ್ ಪ್ರಮೋಷನ್ ಗೆ ಬೆಂಗಳೂರಿಗೆ ಬಂದು ಬಾಹುಬಲಿ ಜಕ್ಕಣ್ಣ ಕೊಟ್ಟಿದ್ದೆಂತಾ ಮಾಂಜ ?

ಬರೀ ತೆಲುಗು ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಆರ್‌ಆರ್‌ಆರ್‌. ರಾಜಮೌಳಿ ನಿರ್ದೇಶನ ಅನ್ನೋದಷ್ಟೇ ಅಲ್ಲ ಜೂನಿಯರ್‌ ಎನ್‌ಟಿಅರ್‌, ರಾಮ್‌ ಚರಣ್‌ ತೇಜ್‌, ಅಜಯ್‌ ದೇವಗನ್‌, ಆಲಿಯಾ ಭಟ್‌, ಶ್ರೇಯಾ ಶರಣ್‌ ಒಳಗೊಂಡಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಅದೇ ಕಾರಣಕ್ಕೆ ಬಾಲಿವುಡ್‌ ಸೇರಿದಂತೆ ಭಾರತೀಯ ಚಿತ್ರರಂಗವೇ ಚಾತಕ ಪಕ್ಷಿಯಂತೆ ಕಾಯುತ್ತಿರುವ ಈ ಚಿತ್ರ ಹೊಸ ವರ್ಷ ಜನವರಿಗೆ ವಿಶ್ವದಾದ್ಯಂತ ತೆರೆ ಬರಲಿದೆ. ಚಿತ್ರ ತಂಡವೇ ಹಾಗಂತ ಅಧಿಕೃತ ಮಾಹಿತಿ ರಿವೀಲ್‌ ಮಾಡಿದೆ.

ಸದ್ಯಕ್ಕೆ ಅದರ ಪ್ರಮೋಷನ್‌ ಚಟುವಟಿಕೆ ಶುರು ಮಾಡಿರುವ ಚಿತ್ರ ತಂಡ ಶುಕ್ರವಾರ ಚಿತ್ರದ ಥೀಮ್‌ ಸಾಂಗ್‌ ಜನನಿ ಹಾಡನ್ನು ರಿಲೀಸ್‌ ಮಾಡಿದೆ. ಸದ್ಯಕ್ಕೆ ಕನ್ನಡದ ವರ್ಷನ್‌ ನಲ್ಲಿ ಲಾಂಚ್‌ ಆಗಿರುವ ಈ ಹಾಡಿನ ಲಿರಿಕಲ್‌ ವಿಡಿಯೋ ನೋಡುಗ ಹಾಗೂ ಕೇಳುವ ಗುಂಡಿಗೆ ಒಂದು ಕ್ಷಣ ಎದೆ ಝೆಲ್‌ ಎನ್ನುವಂತೆ ಮಾಡುವುದು ಗ್ಯಾರಂಟಿ. ಸಾಂಗ್‌ ಲಾಂಚ್‌ ಕಾರ್ಯಕ್ರಮ ಶುಕ್ರವಾರ ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ನಡೆಯಿತು.

ಕೆವಿಎನ್‌ ಪ್ರೊಡಕ್ಷನ್ಸ್‌ ಹೌಸ್‌ ಆಯೋಜಿಸಿದ್ದ ಈವೆಂಟ್‌ ಗೆ ನಿರ್ದೇಶಕ ರಾಜಮೌಳಿ ಬಿಡುವು ಮಾಡಿಕೊಂಡು ದೂರದ ಹೈದ್ರಾಬಾದ್‌ ನಿಂದ ಬಂದಿದ್ದರು. ಬಹು ದಿನಗಳ ನಂತರ ಆಯೋಜಿಸಿದ್ದಲಾಗಿದ್ದ ಮೊದಲ ಕಾರ್ಯಕ್ರಮ ಆಗಿದ್ದರಿಂದ ನಿರ್ದೇಶಕ ರಾಜಮೌಳಿ ಅವರು ಸಾಂಗ್‌ ರಿಲೀಸ್‌ ನೆಪದಲ್ಲಿ ಅನೇಕ ಸಂಗತಿಗಳನ್ನು ಹಂಚಿಕೊಳ್ಳಬಹುದೆನ್ನುವ ನಿರೀಕ್ಷೆ ಮಾಧ್ಯಮದವರಲ್ಲಿತ್ತು. ಅದೇ ಕಾರಣಕ್ಕೆ ಸಾಟ್‌ ಲೈಟ್‌ ವಾಹಿನಿಯವರು, ಯುಟ್ಯೂಬರ್ಸ್‌ ಸೇರಿದಂತೆ ಅಲ್ಲಿಗೆ ಬಂದವರೆಲ್ಲ ತಮ್ಮ ಮೊಬೈಲ್‌ ತೆಗೆದು ಲೈವ್‌ ಮಾಡಲು ಸಿದ್ದರಾಗಿದ್ದರು.

ಆದರೆ ಅವರಿಗೆ ನಿರ್ದೇಶಕ ರಾಜಮೌಳಿ ದೊಡ್ಡ ಶಾಕ್‌ ಕೊಟ್ಟರು. ಇದು ಚಿತ್ರದ ಥೀಮ್‌ ಸಾಂಗ್‌ ಲಾಂಚ್.‌ ಅದೇ ಮಾತನಾಡಬೇಕಿದೆ, ನಾನು ಈಗ ಮಾತನಾಡೋದಿಲ್ಲ. ಮುಂದೆ ಅಂದ್ರೆ ಡಿಸೆಂಬರ್‌ ನಲ್ಲಿ ಬೆಂಗಳೂರಿನಲ್ಲಿ ದೊಡ್ಡ ಈವೆಂಟ್‌ ಮಾಡುವ ಪ್ಲಾನ್‌ ಇದೆ, ಅವತ್ತು ಜೂನಿಯರ್‌ ಎನ್‌ ಟಿಆರ್‌, ರಾಮ್‌ ಚರಣ್‌ ತೇಜ್‌ , ಆಲಿಯಾ ಭಟ್‌, ಶ್ರೇಯಾ ಶರಣ್‌ ಸೇರಿದಂತೆ ಇಡೀ ತಂಡವೇ ಇಲ್ಲಿರಲಿದೆ. ಅವತ್ತು ಮಾಧ್ಯಮದವರು ಕೇಳುವ ಪ್ರತಿ ಪ್ರಶ್ನೆಗೆ ಮುಖಾಮುಖಿಯಾಗಿ ಮಾತನಾಡಲಾಗುವುದು ಅಂದವರೇ ಮೈಕ್‌ ಇಟ್ಟು ಕುಳಿತು ಕೊಂಡರು. ಆನಂತರ ಚಿತ್ರದ ಥೀಮ್‌ ಸಾಂಗ್‌ ಜನನಿ ಲಿರಿಕಲ್‌ ವಿಡಿಯೋ ಪ್ರದರ್ಶಿಸಲಾಯಿತು.

ಅಂದ ಹಾಗೆ, ಬಹು ನಿರೀಕ್ಷಿತ ಆರ್‌ ಆರ್‌ ಆರ್‌ ಚಿತ್ರ ಹೊಸ ವರ್ಷ ಜನವರಿಗೆ ವಿಶ್ವದಾದ್ಯಂತ ಗ್ರಾಂಡ್‌ ರಿಲೀಸ್‌ ಆಗಲಿದೆ. ಇದು ಕನ್ನಡದ್ಲೂ ಡಬ್‌ ಆಗಿ ಬರುತ್ತಿದೆ. ಕರ್ನಾಟಕಕ್ಕೆ ಈ ಚಿತ್ರದ ವಿತರಣೆಯ ಹಕ್ಕನ್ನು ಕೆವಿಎನ್‌ ಸಂಸ್ಥೆ ಪಡೆದಿದೆ. ಸರಿ ಸುಮಾರು ೨೦ ಕೋಟಿ ಗೆ ಈ ಹಕ್ಕು ಪಡೆದುಕೊಂಡಿದೆ ಎನ್ನುತ್ತಿವೆ ಮೂಲಗಳು. ಒಟ್ಟಾರೆ ಆರ್‌ ಆರ್ ಆರ್‌ ಚಿತ್ರ ೩೦೦ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಡಿವಿವಿ ಸಂಸ್ಥೆ ಇದಕ್ಕೆ ಬಂಡವಾಳ ಹಾಕಿದೆ.

Categories
ಸಿನಿ ಸುದ್ದಿ

ಕಣ್ಣಿದ್ದು ಕುರುಡರಾಗಿ ಬದುಕೋರು`ಸಖತ್’ ಸಿನ್ಮಾ ಬಾಲು ಥರ ಬದುಕಿ !

ಚಿತ್ರ ವಿಮರ್ಶೆ: ಸಖತ್


ನಿರ್ದೇಶನ-ಸುನಿ
ನಿರ್ಮಾಣ-ನಿಶಾ ವೆಂಕಟ್ ಕೋಣಂಕಿ
ತಾರಾಗಣ- ಗಣೇಶ್-ಸುರಭಿ-ನಿಶ್ವಿಕಾ ನಾಯ್ಡು-ಮಾಳವಿಕಾ ಅವಿನಾಶ್-ರಂಗಾಯಣ ರಘು-ಸಾಧುಕೋಕಿಲ-ಕುರಿಪ್ರತಾಪ್- ರವಿಶಂಕರ್, ಶೋಭರಾಜ್-ರಘುರಾಮ್- ಧರ್ಮಣ್ಣ-ಗಿರಿ
ಇತರರು

  • ವಿಶಾಲಾಕ್ಷಿ

ಜಗವೇ ಒಂದು ನಾಟಕರಂಗ , ನಾವಿಲ್ಲಿ ಪಾತ್ರಧಾರಿಗಳು ಅಷ್ಟೇ. ಸೂತ್ರಧಾರನ ಅಣತಿಯಂತೆ ಬಣ್ಣ ಬಳಿದುಕೊಳ್ಳದೇ ನಟನೆ ಮಾಡುವವರು ಇದ್ದಾರೆ. ಸಾರಥಿ ಆಜ್ಞೆಯಂತೆ ಬಣ್ಣ ಹಚ್ಚಿಕೊಂಡು ಅಭಿನಯಿಸುವವರು ಇದ್ದಾರೆ. ತರಹೇವಾರಿ ಪಾತ್ರಕ್ಕಾಗಿ ಬಣ್ಣ ಹಚ್ಚಿ ಆಕ್ಟಿಂಗ್ ಮಾಡುವವರನ್ನು ಕಣ್ಮುಂಚಿಕೊಂಡು ನಂಬಬಹುದು. ಆದರೆ ಮುಖವಾಡ ಹಾಕಿಕೊಂಡು ಜಬರ್ದಸ್ತ್ ಪರ್ಫಾಮೆನ್ಸ್ ಕೊಡುವವರನ್ನು ಯಾವುದೇ ಕಾರಣಕ್ಕೂ ನಂಬೋದಕ್ಕೆ ಆಗೋದಿಲ್ಲ. ಅಂದ್ಹಾಗೇ, ಈ ಭೂಮಿ ಮೇಲೆ ದೇವರ ದಯದಿಂದ ಕಣ್ಣನ್ನು ವರವಾಗಿ ಪಡೆದು ಬದುಕುವವರು ಇದ್ದಾರೆ. ದೃಷ್ಟಿ ಕಳೆದುಕೊಂಡು ದೇವರ ಮಕ್ಕಳಾಗಿ ಜೀವಿಸುವವರು ಇದ್ದಾರೆ. ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸಖತ್'ಸಿನಿಮಾ ಗೋಲ್ಡನ್ ಗಣಿಯ ಬಹುನಿರೀಕ್ಷಿತ ‘ಸಖತ್’ ಚಿತ್ರ ಅದ್ದೂರಿಯಾಗಿ ತೆರೆಕಂಡಿದೆ. ಕಣ್ಣಿದ್ದು ಕುರುಡರಾಗಿ ಬದುಕುವವರು `ಸಖತ್’ ಸಿನಿಮಾದ ಬಾಲು ಥರ ಬದುಕಿದರೆ ಚೆಂದ ಎನ್ನುವ ಮೆಸೇಜ್ ಕೂಡ ಸಿಕ್ಕಿದೆ.

ಶುಭಶುಕ್ರವಾರ ರಾಜ್ಯಾದ್ಯಂತ ಮುಂಗಾರುಮಳೆ ಹುಡುಗನ ಬಹುನಿರೀಕ್ಷೆಯ ಸಖತ್' ಸಿನಿಮಾ ತೆರೆಕಂಡಿದೆ. 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗೋಲ್ಡನ್‌ಸ್ಟಾರ್ ಗಣೇಶ್ ಅಭಿನಯದ ‘ಸಖತ್’ ಬಿಡುಗಡೆಯಾಗಿದೆ. ರಿಲೀಸ್ ಆದಂತಹ ಎಲ್ಲಾ ಚಿತ್ರಮಂದಿರಗಳಲ್ಲೂ ‘ಸಖತ್'ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.ಫಸ್ಟ್ ಡೇ ಫಸ್ಟ್ ಶೋ ನೋಡಿ ಥಿಯೇಟರ್‌ನಿಂದ ಹೊರಬಂದ ಚಿತ್ರಪ್ರೇಮಿಗಳು ಮುಗುಳುನಗೆ ಬೀರಿದ್ದಾರೆ.ಎರಡು ವರ್ಷಗಳ ನಂತರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಗೋಲ್ಡನ್‌ಸ್ಟಾರ್ ಗಣೇಶ್ ಸಿನಿಮಾವನ್ನು ಪ್ರೇಕ್ಷಕ ಮಹಾಷಯರು ಅದ್ದೂರಿಯಾಗಿ ವೆಲ್‌ಕಮ್ ಮಾಡಿಕೊಂಡಿದ್ದಾರೆ.ಬಾಸ್ ಈಸ್ ಬ್ಯಾಕ್’ ಎನ್ನುತ್ತಾ ಅವರ ಫ್ಯಾನ್ಸ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಹಾಗಂತ, ಗೋಲ್ಡನ್ ಗಣಿಯ `ಸಖತ್’ ಸಿನಿಮಾ ಸಖತ್ತಾಗಿದೆ ಎಂದು ಒಂದೇ ಸಾಲಿನಲ್ಲಿ ಹೇಳಿ ಮುಗಿಸೋದಕ್ಕೆ ಆಗಲ್ಲ. ಆದರೆ. ಕಾಸು ಕೊಟ್ಟು ಚಿತ್ರಮಂದಿರಕ್ಕೆ ಬಂದಂತಹ ಸಿನಿಮಾ ಪ್ರೇಮಿಗಳಿಗೆ ಮೋಸ ಅಂತೂ ಆಗೋದಿಲ್ಲ.

ಹಾಗಾದ್ರೆ ‘ಸಖತ್'ಸಿನ್ಮಾ ಕಥೆ ಏನು? ಸಖತ್’ ಸಿನ್ಮಾವನ್ನು ಚಿತ್ರಮಂದಿರಕ್ಕೆ ಹೋಗಿ ಯಾಕ್ ನೋಡ್ಬೇಕು? ‘ಸಖತ್'ಸಿನ್ಮಾದ ವಿಶೇಷತೆಗಳೇನು? ಚಿತ್ರದಲ್ಲಿ ಹೊಸದೇನಿದೆ? ಮೆಸೇಜ್ ಏನಿದೆ? ಹೀಗೆ ಒಂದಿಷ್ಟು ಪ್ರಶ್ನೆಗಳು ಅಕೌಂಟ್‌ನಿಂದ 500 ಡ್ರಾ ಮಾಡ್ಕೊಂಡು ಮೂವೀ ನೋಡೋಕೆ ಹೋಗುವಾಗ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳು. ಖಜಾನೆಯಿಂದ ನಾಲ್ಕು ಕಾಸು ಖರ್ಚು ಮಾಡುವಾಗ ಇಂತಹ ಪ್ರಶ್ನೆಗಳು ಬರಬೇಕು ನಿಜ ಆದರೆ ಮನರಂಜನೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಅಲ್ಲವೇ? ಹೀಗಾಗಿ, ಮೈಂಡ್ ಫ್ರೀ ಆಗ್ಬೇಕು, ಕಣ್ಣಿಗೆ ಹೊಸ ಪ್ರಪಂಚ ತೋರಿಸ್ಬೇಕು, ಮನಸ್ಸು ಹಗುರಾಗಬೇಕು, ಹೊಟ್ಟೆ ಹುಣ್ಣಾಗದೇ ಇದ್ದರೂ ಪರವಾಗಿಲ್ಲ ನಕ್ಕು ಬಾಯಿ ನೋವು ಬರಬೇಕು ಎನ್ನುವ ಕಾರಣಕ್ಕಾದರೂ ನೀವು ಗೋಲ್ಡನ್ ಗಣಿ ಹಾಗೂ ಸಿಂಪಲ್ ಸುನಿಯ ಕಾಂಬಿನೇಷನ್‌ನಲ್ಲಿ ಬಂದಿರುವ ಎರಡನೇ ಸಿನಿಮಾ ‘ಸಖತ್’ನ ಥಿಯೇಟರ್‌ಗೆ ಹೋಗಿ ನೋಡ್ಲೆಬೇಕು.

ಸಖತ್'ಚಿತ್ರದಲ್ಲಿ ಗಣೇಶ್ ಅವ್ರದ್ದು ಅಂಧನ ಪಾತ್ರ ಅಂತೇಳಿ ಟೀಸರ್-ಟ್ರೇಲರ್ ಬಿಟ್ರೂ ಕೂಡ,ಸಿನಿಮಾ ಪ್ರೇಕ್ಷಕರಿಗೆ ಗಣಿ ಕಣ್ಣಿದ್ದು ಕುರುಡನಂತೆ ಡವ್ ಮಾಡಿರಬಹುದು ಎನ್ನುವ ಡೌಟ್ ಇತ್ತು.ಆ ಡೌಟ್ ನಿಜ ಕೂಡ.ಆದರೆ,ಸಖತ್’ ಸಿನಿಮಾದ ಬಾಲು ಪಾತ್ರಧಾರಿ ಗಣೇಶ್ ಅವರು ಕುರುಡನಂತೆ ವರ್ತಿಸಲಿಕ್ಕೂ ಒಂದು ಕಾರಣವಿದೆ. ಅದೇನು ಅನ್ನೋದನ್ನು ನೀವು ಥಿಯೇಟರ್‌ಗೆ ಹೋಗಿ ಕುಂತ್ಕೊಂಡು ನಿಮ್ಮ ಕಣ್ಣುಗಳನ್ನು ಅರಳಿಸಿಕೊಂಡೇ ನೋಡ್ಬೇಕು. ಅದರಂತೇ, ಜೂನಿಯರ್ ಬಾಲು ಪಾತ್ರದಲ್ಲಿ ಅಭಿನಯಿಸಿ ಚಿತ್ರಪ್ರೇಮಿಗಳಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಂಡಿರುವ ಗಣಿ ಮಗನನ್ನು ನೀವು ಬಿಗ್‌ಸ್ಕ್ರೀನ್‌ನಲ್ಲೇ ಕಣ್ತುಂಬಿಕೊಳ್ಳಬೇಕು.

ಎಸ್ ಪಿ ಬಾಲು ಆಗ್ಬೇಕು ಎಂಬುದು ಸಖತ್' ಸಿನಿಮಾದ ಬಾಲು ಕನಸು. ಬಾಲ್ಯದಿಂದಲೇ ಇಂತಹದ್ದೊಂದು ಕನಸು ಕಂಡಿದ್ದ ಬಾಲು ನನಗೆ ಕಣ್ಣು ಕಾಣಲ್ಲ ಅಂತ ಸಿಂಪತಿ ಗಿಟ್ಟಿಸಿಕೊಂಡು ‘ಅಂತ್ಯಾಕ್ಷರಿ’ ಸಿಂಗಿಂಗ್ ರಿಯಾಲಿಟಿ ಶೋಗೆ ಎಂಟ್ರಿಕೊಡ್ತಾನೆ. ಅಲ್ಲಿ ಆಂಕರ್ ಮಯೂರಿ (ಸುರಭಿ) ಮೇಲೆ ಬಾಲುಗೆ ಲವ್ವಾಗುತ್ತೆ. ಹೇಗಾದರೂ ಮಾಡಿ ಮಯೂರಿನಾ ಬಲೆಗೆ ಹಾಕಿಕೊಳ್ಳಬೇಕು ಅಂತ ಕುರುಡನಂತೆ ನಟಿಸುತ್ತಾನೆ. ಬಾಲು ಡವ್ ಡ್ರಾಮ ವರ್ಕೌಟ್ ಆಗುತ್ತಾ? ಬಾಲು ಪ್ರೀತಿಯನ್ನ ಮಯೂರಿ ಒಪ್ಪಿಕೊಳ್ತಾಳಾ? ಇವರಿಬ್ಬರ ಮಧ್ಯೆ ಅಂಧೆ (ನಕ್ಷತ್ರ) ನಿಶ್ವಿಕಾ ನಾಯ್ಡು ಎಂಟ್ರಿಯಿಂದ ಕಥೆಗೆ ಯಾವ್ ರೀತಿ ಟ್ವಿಸ್ಟ್ ಸಿಗಲಿದೆ? ಇದೆಲ್ಲದಕ್ಕಿಂತ ಹೆಚ್ಚಾಗಿ ಕಣ್ಣಿದ್ದರೂ ಕೂಡ ಕೆಲವೊಮ್ಮೆ ಕುರುಡನಂತೆ ವರ್ತಿಸೋದ್ರಿಂದ ಏನ್ ಲಾಭ ಇದೆ? ಸೊಸೈಟಿಗೆ ಯಾವ್ ರೀತಿಯ ಕೊಡುಗೆ ಕೊಡಬಹುದು. ಈ ಸೂಕ್ಷ್ಮ ಸಂದೇಶವನ್ನು ಹಾಸ್ಯದ ಜೊತೆಗೆ ನಿರ್ದೇಶಕ ಸಿಂಪಲ್ ಸುನಿ ಕಟ್ಟಿಕೊಟ್ಟಿದ್ದಾರೆ. ಗೋಲ್ಡನ್ ಗಣಿ ಜೀವತುಂಬಿ ಅಭಿನಯಿಸಿದ್ದಾರೆ. ಮಾಳವಿಕಾ ಅವಿನಾಶ್-ರಂಗಾಯಣ ರಘು-ಸಾಧುಕೋಕಿಲ-ಕುರಿಪ್ರತಾಪ್-ಶೋಭರಾಜ್-ರಘುರಾಮ್- ಧರ್ಮಣ್ಣ-ಗಿರಿ ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಚಮಕ್' ಕೊಟ್ಟು ಗೆದ್ದಿದ್ದ ಗಣಿ-ಸುನಿಸಖತ್’ ಸಿನಿಮಾದಲ್ಲಿ ಗಿಮಿಕ್ ಮಾಡಿ ಗೆದ್ದಿದ್ದಾರೆ. ಸಿಂಗಿಂಗ್ ರಿಯಾಲಿಟಿ ಶೋ ಸ್ಪರ್ಧೆ-ಕಾಂಪಿಟೇಷನ್-ಟಿಆರ್‌ಪಿ ಅಂತ ಅಣುಕು ಪ್ರದರ್ಶನ ಮಾಡಿದರಾದರೂ ಕೂಡ ಹಾಸ್ಯಕ್ಕೆ ಒತ್ತು ನೀಡಿ ಪ್ರೇಕ್ಷಕ ಮಹಾಷಯರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ‘ಸಖತ್'ಕಾಮಿಡಿ ಎಂಟರ್‌ಟೈನರ್ ಚಿತ್ರವಾಗಿರೋದ್ರಿಂದ ಕೋರ್ಟ್ ರೂಮ್ ಡ್ರಾಮದ ಕಥೆಗೆ ಸೀರಿಯಸ್ ಟಚ್ ಕೊಟ್ಟಿಲ್ಲ.ಆದರೆ,ಒಂದು ಸೀರಿಯಸ್ ಮ್ಯಾಟರ್‌ನ ತಗೊಂಡು ಸಮಾಜಕ್ಕೆ ಒಂದು ಸಂದೇಶ ಕೊಟ್ಟಿದ್ದಾರೆ.ಕಣ್ಣಿದ್ದು ಕುರುಡರಾಗಿ ಬದುಕೋರುಸಖತ್’ ಸಿನ್ಮಾ ಬಾಲು ಥರ ಬದುಕಿದರೆ ಚೆಂದ ಅನ್ನೋದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಮೊದಲ ಭಾರಿಗೆ ಅಂದನ ಪಾತ್ರ ಮಾಡಿ ಗಣಿ ಸೈ ಎನಿಸಿಕೊಂಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತದ ಪ್ರೀತಿಗೆ ಕಣ್ಣಿಲ್ಲ' ಸಾಂಗು ಎಲ್ಲರ ಮನಸ್ಸಲ್ಲಿ ಉಳಿಯುತ್ತೆ.ಸಂತೋಷ್ ರೈ ಪತಾಜೆ ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತೆ.ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ‘ಸಖತ್’ ಪ್ರೇಕ್ಷಕರಿಗೆ ಫುಲ್‌ಮೀಲ್ಸ್ ಕೊಟ್ಟಿದೆ ಅದು ಮಾತ್ರ ಸತ್ಯ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪ್ರೀತಿ ಸುತ್ತ ಅಮೃತ! ಅಪಾರ್ಟ್ಮೆಂಟ್ಸ್ ಒಳಗೊಂದು ಥ್ರಿಲ್ಲಿಂಗ್ ಸ್ಟೋರಿ!!

ಚಿತ್ರ ವಿಮರ್ಶೆ: ಅಮೃತ ಅಪಾರ್ಟ್ಮೆಂಟ್ಸ್

ನಿರ್ದೇಶನ , ನಿರ್ಮಾಣ: ಗುರುರಾಜ ಕುಲಕರ್ಣಿ
ತಾರಾಗಣ: ತಾರಕ್, ಊರ್ವಶಿ,ಸೀತಾಕೋಟಿ,ಬಾಲಾಜಿ ಮನೋಹರ್,ಮಾನಸ ಜೋಷಿ ಇತರರು.

ವಿಜಯ್ ಭರಮಸಾಗರ

ಅವಳು ಕೊಲ್ಕತ್ತಾ ಹುಡುಗಿ. ಅವನು ಮೈಸೂರು ಹುಡುಗ. ಇಬ್ಬರಲ್ಲೂ ಅಪಾರವಾದ ಆಸೆ-ಆಕಾಂಕ್ಷೆ. ತಮ್ಮ ಕನಸು ನನಸು ಮಾಡಿಕೊಳ್ಳಲು ಹೊರಟ ಮುದ್ದಾದ ಜೋಡಿಗೆ ನೂರಾರು ವಿಘ್ನ! ಆ ಎಲ್ಲಾ ವಿಘ್ನಗಳನ್ನು ದಾಟಿ ಹೊರಬರುತ್ತಾರೋ, ಇಲ್ಲವೋ ಅನ್ನೋದು ಒನ್ ಲೈನ್ ಸ್ಟೋರಿ.

ಮೊದಲೇ ಸ್ಪಷ್ಟಪಡಿಸುತ್ತೇವೆ. ಎಲ್ಲರಂತೆ ನಾವೂ ಚೆಂದದ ಬದುಕು ಕಟ್ಟಿಕೊಳ್ಳಬೇಕೆಂದು ಹಪಹಪಿಸುವ ಯುವ ಮನಸ್ಸುಗಳ ತಲ್ಲಣ, ತಳಮಳ, ಆತಂಕ, ಬದುಕಿನ ಧಾವಂತಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ಗುರುರಾಜ ಕುಲಕರ್ಣಿ ಯಶಸ್ವಿಯಾಗಿದ್ದಾರೆ.

ಇದು ನಿರ್ದೇಶಕರ ಚೊಚ್ಚಲ ಪ್ರಯತ್ನ. ಮೊದಲ ಬಾಲ್ ನಲ್ಲೇ ಸಿಕ್ಸರ್ ಬಾರಿಸಿರುವ ಅವರ ನಿರೂಪಣೆ ಶೈಲಿ ಚೆನ್ನಾಗಿದೆ. ಒಂದು ಕಥೆಯನ್ನು ಹೇಗೆ ಹೇಳಬೇಕು, ಹೇಗೆಲ್ಲಾ ತೋರಿಸಬೇಕು ಎಂಬುದನ್ನು ಅರಿತಿದ್ದಾರೆ. ಹಾಗಾಗಿ ಅಮೃತ ಅಪಾರ್ಟ್ಸ್ಮೆಂಟ್ಸ್ ರುಚಿಸುತ್ತದೆ.

ಸಿನಿಮಾದಲ್ಲಿ ನಿರ್ದೇಶಕರು ಬದುಕಿನ ಏರಿಳಿತಗಳು,
ಭಾವನೆಗಳು ಮತ್ತು ಭಾವನಾತ್ಮಕ ಸಂಬಂಧಗಳು,
ಆಸೆ ಮತ್ತು ದುರಾಸೆ, ಏಳು ಬೀಳು, ನೋವು-ನಲಿವುಗಳನ್ನು ಹೇಳುವ ಮೂಲಕ ‘ಅಮೃತ’ದ ನಿಜ ಚಿತ್ರಣವನ್ನು ಉಣಬಡಿಸಿದ್ದಾರೆ. ಮೊದಲರ್ಧ ಜಾಲಿಯಾಗಿ ಸಾಗುವ ಅಪಾರ್ಟ್ಮೆಂಟ್ಸ್ ಲ್ಲಿ, ದ್ವಿತಿಯಾರ್ಧ ಗಂಭೀರತೆಗೆ ಸಾಕ್ಷಿಯಾಗುತ್ತೆ. ಒಂದು ಸರಳ ಕಥೆಗೆ, ಇನ್ನಷ್ಟು ಬಿಗಿಯಾದ ಚಿತ್ರಕಥೆಯ ಅಗತ್ಯವಿತ್ತು. ಎಲ್ಲೋ ಒಂದು ಕಡೆ, ‘ಅಮೃತ’ದ ಕೆಲ ಅನಗತ್ಯ ದೃಶ್ಯಗಳ ಬಗ್ಗೆ ಮಾತಾಡಬೇಕೆನಿಸುತ್ತಿದ್ದಂತೆ, ಹಾಡುಗಳು ಕಾಣಿಸಿಕೊಂಡು ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ. ಸಿನಿಮಾ ಸಲೀಸಾಗಿ ಸಾಗಲು ಸಂಕಲನದ ಪಾತ್ರವಿಲ್ಲಿ ಪ್ರಮುಖವಾಗಿದೆ.

ಇದು ಕಥೆ

ಸೂಕ್ಷ್ಮ ಸಂವೇದನೆಯ ಅಂಶಗಳ ಜೊತೆ ಸಾಗುವ ಸಿನಿಮಾದಲ್ಲಿ, ಅನೇಕ ಟ್ವಿಸ್ಟ್ ಗಳಿವೆ. ಪ್ರೀತಿಸಿ ಮದುವೆಯಾಗುವ ಜೋಡಿಯೊಂದು, ಕನಸಿನ ಅಮೃತ್ ಅಪಾರ್ಟಮೆಂಟ್ಸ್’ನಲ್ಲಿ ಬದುಕು ರೂಪಿಸಿಕೊಳ್ಳಲು ರೆಡಿಯಾಗುತ್ತಾರೆ. ಪ್ರೀತಿಸಿ ಜೊತೆಯಾದ ಆ ಜೋಡಿ ಮಧ್ಯೆ ಸಣ್ಣದ್ದೊಂದು ಬಿರುಕು ಮೂಡುತ್ತೆ. ಆ ಅಪಾರ್ಟ್ಮೆಂಟ್ ಒಳಗೆ ನೂರೆಂಟು ಕಥೆಗಳು ಬಿಚ್ಚಿಕೊಳ್ಳುತ್ತವೆ. ಆ ಘಟನೆಗಳನ್ನು ಹೇಳುವುದಕ್ಕಿಂತ ನೀವೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಅಮೃತ್ ಅಪಾರ್ಟಮೆಂಟ್ಸ್ ನೋಡುಗರನ್ನು ಹಾಗೊಮ್ಮೆ ಮುದಗೊಳಿಸುತ್ತೆ. ಒಮ್ಮೊಮ್ಮೆ ಗಂಭೀರತೆಗೂ ದೂಡುತ್ತೆ.

ಮುಖ್ಯವಾಗಿ ಈ ಚಿತ್ರದಲ್ಲಿ ಗಮನಿಸಬೇಕಾದ ಅಂಶವೆಂದರೆ, ಬೆಂಗಳೂರೆಂ ಕಾಂಕ್ರೀಟ್ ನಾಡಲ್ಲಿ ಎತ್ತ ನೋಡಿದರತ್ತ ಮುಗಿಲೆತ್ತರಕ್ಕೆ ತಲೆ ಎತ್ತಿ ನಿಂತ ಬೃಹತ್ ಅಪಾರ್ಟಮೆಂಟ್ಸ್ ಗಳು, ಅಲ್ಲೆಲ್ಲೋ ನಮ್ಮದೂ ಒಂದಿರಲಿ ಅಂತ ಸೂರು ಕಾಣಬೇಕು ಅನ್ನೋ ಮನಸ್ಸುಗಳು, ಅತಿಯಾದ ಆಸೆ, ಆಕಾಂಕ್ಷೆ, ಇವುಗಳ ಜೊತೆ ನೂರಾರು ಸವಾಲುಗಳು, ಅದಕ್ಕೆೆ ಎದುರಾಗುವ ಸವಾಲುಗಳು, ಆಸೆಗಾಗಿಯೇ ಮೌಲ್ಯ ಕಳೆದುಕೊಳ್ಳುವ ಸಂಬಂಧಗಳು ನಾಟುತ್ತವೆ. ಒಟ್ಟಾರೆ ವಸ್ತುಸ್ಥಿತಿಯನ್ನು ಅಚ್ಚುಕಟ್ಟಾಗಿ ಹೇಳು ಪ್ರಯತ್ನ ಇಲ್ಲಾಗಿದೆ.

ನಗರವಾಸಿಗಳ ಒತ್ತಡ, ಅವರೊಳಗಿರುವ ನೋವು, ತಲ್ಲಣಗಳನ್ನು ನಿರ್ದೇಶಕರು ತೋರಿಸುವ ಮೂಲಕ ಈಗಿನ ವಾಸ್ತವ ಚಿತ್ರಣ ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಇನ್ನೂ ಒಂದು ಪ್ರಮುಖ ಅಂಶವಿದೆ. ನಿರ್ದೇಶಕರು, ನವಿರಾದ ಪ್ರೀತಿಯ ಹೂರಣದ ಜೊತೆ, ಭಾವುಕ ಅಂಶಗಳನ್ನಿಟ್ಟಿದ್ದಾರೆ. ಅಲ್ಲೊಂದು ಕ್ರೈಮ್ ಮತ್ತು ಥ್ರಿಲ್ ಎನಿಸೋ ಘಟನೆಗಳನ್ನೂ ಇಟ್ಟಿದ್ದಾರೆ. ಈ ಬಗ್ಗೆ ನೋಡುವ ಕುತೂಹಲವಿದ್ದರೆ, ಬಿಡುವು ಮಾಡಿಕೊಂಡು ಸಿನಿಮಾ ನೋಡಿ.

ಇನ್ನು ತೆರೆ ಮೇಲೆ ರಾರಾಜಿಸಿರುವ ತಾರಕ್ ಅಭಿನಯದಲ್ಲಿ ಹಿಂದೆ ಉಳಿದಿಲ್ಲ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಊರ್ವಶಿ ನಿರ್ದೇಶಕರು ಹೇಳಿದ್ದನ್ನು ಚಾಚು ತಪ್ಪದೆ ಮಾಡಿದ್ದಾರೆ. ಬಾಲಾಜಿ ಮನೋರ್ರ್, ಮಾನಸಿ ಜೋಷಿ, ಸಂಪತ್ ಕುಮಾರ, ಮಹಂತೇಶ್, ಸೀತಾಕೋಟಿ ಇತರರು ಗಮನಸೆಳೆಯುತ್ತಾರೆ.
ಎಸ್.ಡಿ.ಅರವಿಂದ ಅವರ ಸಂಗೀತ ಕಥೆಗೆ ಪೂರಕ.
‘ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಹಾಡು ಗುನುಗುವಂತಿದೆ. ಅಜಿತ್ ಆರ್ಯನ್ ಕ್ಯಾಮರಾ ಕೈಚಳಕ ಸಿನಿಮಾ ಅಂದವನ್ನು ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಈತ ಪೈಸಾ ವಸೂಲ್ ಗೋವಿಂದ…!

ಚಿತ್ರ ವಿಮರ್ಶೆ- ಗೋವಿಂದ ಗೋವಿಂದ
ನಿರ್ದೇಶಕ – ತಿಲಕ್
ತಾರಾಗಣ – ಸುಮನ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್, ಕವಿತಾ ಗೌಡ,ಮಜಾ‌ಟಾಕೀಶ್ ಪವನ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್
ಇತರರು

  • ದೇಶಾದ್ರಿ ಹೊಸ್ಮನೆ

ಸಿನಿಮಾ ನಿರ್ದೇಶಕನಾಗಲೇಬೇಕೆಂದು ಹೊರಟ ಕನಸು ಕಂಗಳ ಹುಡುಗ, ತಾಯಿಯಲ್ಲದೆ ತನ್ನನ್ನೇ ಅವಲಂಭಿಸಿರುವ ಮಗಳು ತನ್ನಿ ಚ್ಚೆಯಂತೆಯೇ ಇರಬೇಕೆಂದು‌ ಬಯಸುವ ಅಪ್ಪ, ಭರತ ನಾಟ್ಯ ದ ಮೇಲೆ ಬೆಟ್ಟದಷ್ಟು ಕನಸು‌ ಕಟ್ಟಿಕೊಂಡ ನಾಯಕಿ, ಆಕೆಯ‌ ಕನಸುಗಳ ಸಾಕಾರಕ್ಕೆ ನೆರವಾಗಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಮೂವರು ಗೆಳೆಯರು ಅವರ ಜತೆಗೆ ಮೂಡನಂಬಿಕೆಯ‌ ಮೇಲೆ ನಾಯಕಿಯನ್ನೇ ಕಿಡ್ನಾಪ್ ಮಾಡುವ ಕಿರಾತಕರ ಸುತ್ತಣದ ಸಂಕಟ, ಸಾಹಸ, ದುಸ್ಸಾಹದ ಸಮಿಶ್ರಣಗಳ ಹೂರಣದೊಂದಿಗೆ ನೋಡುಗರನ್ನು ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ತಕ್ಕಮಟ್ಟಿಗೆ ರಂಜಿಸಬಹುದಾದ ಸಿನಿಮಾ ಗೋವಿಂದ ಗೋವಿಂದ.

ನವ ಪ್ರತಿಭೆ ತಿಲಕ್ ನಿರ್ದೇಶನದ ಈ ಸಿನಿಮಾವು ಕಾಮಿಡಿ, ಥ್ರಿಲ್ಲರ್, ಎಮೋಷನಲ್ ಜಾನರ್ ಗೆ ಸೇರಿದ್ದು‌. ಇಷ್ಟಾಗಿಯೂ ಚಿತ್ರ ರಸಿಕರು ಬಯಸುವ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡ ಒಂದು ಸಿದ್ದ ಸೂತ್ರದ ಸಿನಿಮಾವೂ ಹೌದು. ಸಿನಿಮಾ ನಿರ್ದೇಶಕನಾಗಬೇಕೆಂದು ಹೊರಟ ಒಬ್ಬ ಯುವಕನ ಕಲ್ಪನೆಯೊಳಗೆ ಇನ್ನೊಂದು ಕಥೆಯನ್ನು ಪ್ರೇಕ್ಷಕರ ಮುಂದೆ ತಂದಿಡುವ ನಿರ್ದೇಶಕರು ಅಲ್ಲಿ ನ ಕಥೆ ಹಲವು ಕುತೂಹಲದ ಉಪ ಕಥೆಗಳನ್ನು ಬಿಡಿ ಬಿಡಿಯಾಗಿ ಬಿಚ್ಚಿಡುವ ಮೂಲಕ ಪ್ರೇಕ್ಷಕರ ನ್ನು ಕುರ್ಚಿಯ ತುದಿ ಮೇಲೆ ಕೂರಿಸುವ ಪ್ರಯತ್ನ ಮಾಡಿದ್ದೇ ಇಲ್ಲಿ ಜಾಣತನ ಅಂತಲೇ ಹೇಳಬಹುದು. ಅದರಾಚೆ ಹೊಸತನವಿಲ್ಲದ, ಒಂದು ಸಿದ್ದ ಸೂತ್ರದ ಸರಳ ಕಥೆ ಎನ್ನುವುದಷ್ಟೇ ಇದರ ವೀಕ್ನೇಸ್.

ಮೊದ ಮೊದಲು ಕಾಮಿಡಿ ಈ ಸಿನಿಮಾದ ಪ್ರಧಾನ ಅಂಶದಂತೆ ಕಂಡರೂ, ನೋಡುಗನ ಮನಸ್ಸಿಗೆ ತಟ್ಟುವಂತಹ ಎಮೋಷನಲ್ ಎಳೆಗಳ ಮೂಲಕ ಗಾಢವಾಗಿ ತಟ್ಟುತ್ತದೆ. ಆರಂಭದ ಅರ್ಧ ಗಂಟೆ ಸಿನಿಮಾ ಮನಸು ಚಂಚಲಗೊಳ್ಳುವಂತೆ ಮಾಡಿದರು, ಕಥೆ ವಿಜಯಪುರದಿಂದ ಬೆಂಗಳೂರು ಕಡೆ ಮುಖ‌ ಮಾಡುವ ಮೂಲಕ ರೋಚಕತೆ ಹುಟ್ಟಿಸುತ್ತದೆ. ಒಂದು ರಿಮೇಕ್ ಸಿನಿಮಾದ ಬಗ್ಗೆ ಪ್ರೇಕ್ಷಕನಲ್ಲಿ ಹುಟ್ಟುವ ಕಲ್ಪನೆಯೇ ಬೇರೆ. ಮೂಲ‌ ಸಿನಿಮಾಕ್ಕಿಂತ ಅದು ಇನ್ನಷ್ಟು ವಿಶೇಷ ಎನಿಸಿದಾಗಲೇ ಪ್ರೇಕ್ಷಕನಿಗೂ ಇಷ್ಟ. ಹಾಗಿಲ್ಲದೆ ಅದು ಯಥಾವತ್ತಾಗಿ ಕಾಣಿಸಿಕೊಂಡರೆ, ಪ್ರೇಕ್ಷಕ ಯಾಕೆ ದುಡ್ಡು ಕೊಟ್ಟು ಆ ಸಿನಿಮಾ ನೋಡ್ಬೇಕು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತೆ. ಗೋವಿಂದ ಗೋವಿಂದ ಕೂಡ ಒಂದು ರಿಮೇಕ್ ಸಿನಿಮಾ ಅಂದು ಕೊಂಡವರು ಕೂಡ ಒಂದ್ಸಲ ಈ ಸಿನಿಮಾ ನೋಡಿದರೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಆ ಮಟ್ಟಿಗೆ ಇದೊಂದು ಪೈಸಾ ವಸೂಲ್ ಸಿನಿಮಾ.

ಸುಮಂತ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್, ಕವಿತಾ ಗೌಡ, ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ಕೆ.ಮಂಜು, ಕಡ್ಡಿಪುಡಿ ಚಂದ್ರು ಸೇರಿದಂತೆ ದೊಡ್ಡ ತಾರಗಣವೇ ಈ ತೆರೆ ಮೇಲಿದೆ. ಹಾಗಂತ ಯಾವ ಪಾತ್ರವೂ ಅಷ್ಟಕಷ್ಟೆ ಎಂದೇನು ಜರಿಯುವಂತಿಲ್ಲ. ಅಷ್ಟು ಪಾತ್ರಗಳಿಗೂ ಅದರದ್ದೇ ಮಹತ್ವ ಸಿಕ್ಕಿದೆ. ಇದಕ್ಕೆ ಪ್ಲಸ್ ಆಗಿದ್ದು ಕಥೆ ನಿರೂಪಣೆ. ಒಂದು ಮರ, ಅದಕ್ಕೆ ಹಲವು ರೆಂಬೆ ಕೊಂಬೆ ‌ಎನ್ನುವಂತೆ, ಇಲ್ಲಿ ಒಂದು ಕಥೆ, ಅದರೊಳಗೊಂದು ಉಪಕಥೆ, ಆ ಉಪಕಥೆಗೆ ಇನ್ನಷ್ಟು ಕಿರು ಕಥೆಗಳ ರೆಂಬೆ ಕೊಂಬೆಗಳಿದ್ದರೂ, ಕ್ಲೈಮ್ಯಾಕ್ಸ್ ನಲ್ಲಿ ಅವೆಲ್ಲವೂ ಒಂದು ಕೋನದಲ್ಲಿ ಬಂದು ಸೇರುವ ರೀತಿಯೇ ವಿಶೇಷ.

ತೆರೆ ಮೇಲೆ ಇದುವರೆಗೂ ಲವರ್ ಬಾಯ್ ಆಗಿ, ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ‌ಯುವನಟ ಸುಮನ್ ಶೈಲೆಂದ್ರ ಇದೇ ಮೊದಲು ಒಂದು ಕಾಮಿಡಿ ಹೀರೋ ಆಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲ, ಕಾಲೇಜು ವಿದ್ಯಾರ್ಥಿ ಯಾಗಿ ಪ್ರೇಕ್ಷಕರನ್ನು ರಂಜಿಸುವುದು ಕೂಡ ವಿಶೇಷ. ಅವರಿಗೆ ಇಲ್ಲಿ ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರ್ ಸಖತ್ ಸಾಥ್ ನೀಡಿದ್ದಾರೆ. ಅವರಿಬ್ಬರ ಉತ್ತರ ಕರ್ನಾಟಕದ ಜವಾರಿ ಭಾಷೆಯ ಕಾಮಿಡಿ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಖ್ಯಾತಿಯ ಚಿನ್ನು ಅಲಿಯಾಸ್ ಕವಿತಾ ಗೌಡ ಇಲ್ಲಿ ಸಿನಿಮಾ ಒಳಗೆಯೇ ಬರುವ ಸಿನಿಮಾ ಕಥೆಯ ನಾಯಕಿ. ಸಿಕ್ಕ ಅವಕಾಶವನ್ನು ಸಮರ್ಥ ವಾಗಿ ಯೇ ಬಳಸಿಕೊಂಡಿ, ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಹಾಗೆ ನೋಡಿದರೆ ಸಿನಿಮಾ ಮುಖ್ಯ ಆಕರ್ಷಣೆ ನಟಿ‌ ಭಾವನಾ ಮನೆನ್ ಹಾಗೂ ಯುವ ನಟ ರೂಪೇಶ್ ಶೆಟ್ಟಿ. ಯಾಕಂದ್ರೆ ಕಥೆ ರಿವೀಲ್ ಆಗೋದೆ ಇವರಿಬ್ಬರ ಮುಖಾ ಮುಖಿಯೊಂದಿಗೆ.‌ ಮೇಕಿಂಗ್ ಅಂತ ಬಂದಾಗ ಕಥೆಯ ಅಗತ್ಯತೆಯನ್ನು ಪ್ರಾಮಾಣಿಕವಾಗಿ ಪೂರೈಸಿದ್ದಾರೆ ನಿರ್ಮಾಪಕರು. ಅದು ಅವರ ಅನುಭವದ ಜಾಣತನ. ಹಾಗೆಯೇ ಛಾಯಾಗ್ರಹಣ, ಸಂಗೀತ ಸೇರಿದಂತೆ ಸಿನಿಮಾ ಉಳಿದ ಕೆಲಸಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಮನರಂಜನೆ ನಗಬೇಕು, ಒಂದಷ್ಟು ಹಗುರಾಗಬೇಕು ಅಂತೆಲ್ಲ ಬಯಸುವರಿಗೆ ಇದು ಹೇಳಿ‌ಮಾಡಿಸಿದ ಸಿನಿಮಾ‌ .

Categories
ಸಿನಿ ಸುದ್ದಿ

ಪುನೀತ್-ಪ್ರಭುದೇವ್ ನಾಟ್ಯಕ್ಕೆ ಮುಹೂರ್ತ ಫಿಕ್ಸ್ ! ಡ್ಯಾನ್ಸ್ ಕಿಂಗ್ಸ್ ಗಳ ನೃತ್ಯಾರ್ಭಟಕ್ಕೆ ಕಣ್ಣರಳಿಸಿ ನಿಂತಾಯ್ತು ಫ್ಯಾನ್ಸ್ ಮತ್ತು ಬಿಗ್ ಸ್ಕ್ರೀನ್ಸ್ !

ಪವರ್ ಸ್ಟಾರ್ ಮತ್ತು ಪ್ರಭುದೇವ್ ಗಾರು ಫಾರ್ ದಿ ಫಸ್ಟ್ ಟೈಮ್ ಜೊತೆಯಾಗಿದ್ದಾರೆ. ಲಕ್ಕಿಮ್ಯಾನ್ ಚಿತ್ರದ ಹಾಡೊಂದಕ್ಕೆ ಇಬ್ಬರು ಸೇರಿ ಹೆಜ್ಜೆ ಹಾಕಿದ್ದಾರೆ ಎನ್ನುವ ಸುದ್ದಿಯನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡಿದ್ವಿ. ಪವರ್ ಹಾಗೂ ಪ್ರಭು ಡ್ಯಾನ್ಸಿಂಗ್ ಫ್ಲೋರ್ ನಲ್ಲಿ ನಿಂತಂತಹ ದೃಶ್ಯಾವಳಿಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ವಿ. ಇದೀಗ, ಅವರಿಬ್ಬರು ಒಟ್ಟಾಗಿ ಕುಣಿದು ಕುಪ್ಪಳಿಸಿದ ಹಾಡಿನ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಧಮಾ ಕೇ ದಾರ್ ಸಮಾಚಾರವನ್ನು ಹೊತ್ತು ತಂದಿದ್ದೇವೆ. ಅಚ್ಚರಿ ಅಂದರೆ, ಪವರ್ ಸ್ಟಾರ್ ಹಾಗೂ ಪ್ರಭುದೇವ್ ಗಾರು ಒಟ್ಟಾಗಿ ಕುಣಿದಿದ್ದು ವರನಟ ಡಾ. ರಾಜ್ ಕುಮಾರ್ ಮೇಲೆ ರಚಿಸಿರುವ ಹಾಡಿಗೆ.


ಇಂಡಿಯನ್ ಮೈಕಲ್ ಜಾಕ್ಸನ್ ಅಂತಾನೇ ಕರೆಸಿಕೊಳ್ಳುವ ಡ್ಯಾನ್ಸ್ ಕಿಂಗ್ ಪ್ರಭುದೇವ ಹಾಗೂ ಸ್ಯಾಂಡಲ್ ವುಡ್ ಡ್ಯಾನ್ಸ್ ಕಿಂಗ್ ಪುನೀತ್ ರಾಜ್ ಕುಮಾರ್ ಇಬ್ಬರು ಸ್ಕ್ರೀನ್ ಶೇಕ್ ಮಾಡಬೇಕು, ಹಾಗೆಯೇ ಲೆಗ್ ಶೇಕ್ ಮಾಡಿ ಧೂಳೆಬ್ಬಿಸೋದನ್ನು ಕಣ್ತುಂಬಾ ನೋಡಬೇಕು ಎಂಬುದು ಕೋಟ್ಯಾಂತರ ಅಭಿಮಾನಿಗಳ ಕನಸಾಗಿತ್ತು. ಆ ದಿವ್ಯ ಕನಸನ್ನು ಸಾಕಾರ ಮಾಡಲೆಂದೇ ಡ್ಯಾನ್ಸ್ ಕಿಂಗ್ ಗಳು ಇಬ್ಬರು ಒಂದಾಗಿದ್ದರು. ಒಟ್ಟಿಗೆ ಹೆಜ್ಜೆ ಹಾಕಿ ಫ್ಯಾನ್ಸ್ ಗೆ ಸಪ್ರೈಸ್ ಕೊಟ್ಟಿದ್ದರು. ಇನ್ನೇನು ಕೆಲವೇ ತಿಂಗಳುಗಳಲ್ಲಿ ಪವರ್ ಹಾಗೂ ಪ್ರಭು ಜೊತೆಯಾಗಿ ನರ್ತಿಸಿರುವ ಹಾಡು ಸಿನಿಮಾದ ಜೊತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿತ್ತು. ಅಷ್ಟರಲ್ಲಿ ಭಗವಂತ ನಮ್ಮ ಅಪ್ಪುನಾ ಕಿತ್ಕೊಂಡು ಬಿಟ್ಟ.

ಇಡೀ ಕರ್ನಾಟಕಕ್ಕೆ ಪ್ರಿಯವಾಗಿದ್ದ ಬೆಟ್ಟದ ಹೂ ವನ್ನು ಭಗವಂತ ಇಷ್ಟು ಬೇಗ ಕಿತ್ಕೊಳ್ತಾನೆ, ದೊಡ್ಮನೆಯನ್ನು ಅನಾಥ ಮಾಡುತ್ತಾನೆ, ಗಂಧದಗುಡಿಯ ಮಂದಿಯನ್ನು ಕಣ್ಣೀರಲ್ಲಿ ಕೈತೊಳೆಸುತ್ತಾನೆ, ಬೆಳ್ಳಿತೆರೆ ‘ಪವರ್’ ಕಳೆದುಕೊಳ್ಳುವಂತೆ ಮಾಡ್ತಾನೆ, ಅಭಿಮಾನಿ ದೇವರುಗಳು ಎದಿಹೊಡೆದುಕೊಂಡು ಸಾಯುವಂತೆ ಮಾಡ್ತಾನೆ,
ಅಪ್ಪು‌ ಇಲ್ಲದ ಹೊತ್ತಲ್ಲಿ ಪುನೀತ್ ಹಾಗೂ ಪ್ರಭು ಒಟ್ಟಿಗೆ ಹೆಜ್ಜೆ ಹಾಕಿರುವ ಸಿನಿಮಾ ನೋಡುವಂತ ಪರಿಸ್ಥಿತಿ ನಿರ್ಮಾಣ ಮಾಡುತ್ತಾನೆ ಅಂತ ಯಾರೊಬ್ಬರು ದುಸ್ವಪ್ನದಲ್ಲಿ ಯೋಚಿಸಿರಲಿಲ್ಲ ಬಿಡಿ. ಆದರೆ, ಧುರ್ವಿದಿಯ ಆಟ
ಎಲ್ಲವನ್ನೂ ತಲೆ ಕೆಳಗಾಗಿ ಮಾಡ್ತು, ಭಕ್ತ ಪ್ರಹ್ಲಾದನನ್ನೇ ಕಳೆದುಕೊಳ್ಳುವಂತಾಯ್ತು. ಅಪ್ಪು ದೈಹಿಕವಾಗಿ ನಮ್ಮೊಡನೆ ಇಲ್ಲದ ಈ ಹೊತ್ತಲ್ಲಿ ಭಾರತೀಯ ಚಿತ್ರರಂಗದ ಡ್ಯಾನ್ಸ್ ಕಿಂಗ್ ಜೊತೆ ಕುಣಿದು ಕುಪ್ಪಳಿಸಿದ
ಹಾಗೂ ವಿಶೇಷ ಪಾತ್ರದಲ್ಲಿ ಅಭಿನಯಿಸಿದ ಸಿನಿಮಾ ಲಕ್ಕಿಮ್ಯಾನ್ ತೆರೆಗೆ ಬರೋದಕ್ಕೆ ತಯ್ಯಾರಾಗ್ತಿದೆ.

ಲಕ್ಕಿಮ್ಯಾನ್ ಡ್ಯಾನ್ಸ್ ಕಿಂಗ್ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವಂತಹ ಚಿತ್ರ. ಡಾರ್ಲಿಂಗ್ ಕೃಷ್ಣ ನಾಯಕನಟರಾಗಿರೋ ಲಕ್ಕಿಮ್ಯಾನ್ ಗೆ ಪವರ್ ಸ್ಟಾರ್ ಹಾಗೂ ಪ್ರಭುದೇವ್
ಸಾಥ್ ಕೊಟ್ಟಿದ್ದರು. ಅಭಿಮಾನಿಗಳ ಕನಸನ್ನು ಈಡೇರಿಸಬೇಕು ಅಂತಾನೇ ಒಟ್ಟಿಗೆ ಕುಣಿಯೋದಕ್ಕೆ ಅಣ್ಣಾ ಬಾಂಡ್ ಅಪ್ಪು ಹಾಗೂ ಡ್ಯಾನ್ಸ್ ಬಾಂಡ್ ಪ್ರಭುದೇವ್ ಒಪ್ಪಿಕೊಂಡಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನ ಎಚ್ ಎಂ ಟಿ ಫ್ಯಾಕ್ಟ್ರಿ ಯ ಆವರಣದಲ್ಲಿ ಚಿತ್ರೀಕರಣ ನಡೆದಿತ್ತು. ಅದ್ದೂರಿ ಸೆಟ್ ನಲ್ಲಿ ಪವರ್ ಹಾಗೂ ಪ್ರಭು ನಾಟ್ಯನಟರಾಜ ಧರೆಗಿಳಿದು ಬರುವಂತೆ ನರ್ತಿಸಿದ್ದರು.

ಇವರಿಬ್ಬರು ಒಂದೇ ಸೆಟ್ ನಲ್ಲಿ ಕಾಣಿಸಿಕೊಂಡು ಧೂಳೆಬ್ಬಿಸಿದನ್ನು ನೋಡಿದ ಫ್ಯಾನ್ಸ್ ಆಗಲೇ ಹೋಗಿ ಅಣ್ಣಮ್ಮ ದೇವರ ಮುಂದೆ ಜೋಡುಗಾಯಿ ಹೊಡೆದು ಬಂದಿದ್ದರು. ಡ್ಯಾನ್ಸ್ ಕಿಂಗ್ಸ್ ಗಳಿಗೆ ಯಾರ ದೃಷ್ಟಿಯೂ ತಾಗದಿರಲೆಂದು ಬೇಡಿಕೊಂಡಿದ್ದರು. ಆದರೆ, ಕ್ರೂರಿ ವಿಧಿಗೆ ಬೇಡಿಕೆಯ ವ್ಯಾಲ್ಯೂ ಅರ್ಥವಾಗಲಿಲ್ಲ. ಬಹುಷಃ ಆ ವಿಧಿ ಈಗ ಪಶ್ಚಾತ್ತಾಪ ಪಡುತಿರುತ್ತಾನೆ.
ದೊಡ್ಮನೆಯ ನಂದಾದೀಪ, ಕೋಟ್ಯಾಂತರ ಜನರ ಪಾಲಿನ ದೇವರನ್ನು ಕಿತ್ಕೊಳ್ಳಬಾರದಿತ್ತೆಂದು ಮರುಕ ಪಡುತ್ತಿರುತ್ತಾನೆ.

ಹೌದು, ಯಮಧರ್ಮರಾಯನಿಗೆ ದೊಡ್ಮನೆ ರಾಜಕುಮಾರನ ಬೆಲೆ ಅಪ್ಪು ಪಾರ್ಥೀವ ಶರೀರರವನ್ನು ಸಾರ್ವಜನಿಕ ದರ್ಶನಕ್ಕೀಟ್ಟಾಗಲೇ ಗೊತ್ತಾಗಿರುತ್ತೆ. ಬಹುಷಃ ಕರುಣೆ ಇಲ್ಲದ ಕ್ರೂರಿ ವಿಧಿಯ ಕಣ್ಣಲ್ಲೂ ಕಣ್ಣೀರು ಬಂದಿರುತ್ತೆ. ಹಾಗಂತ ನಮ್ಮ ನಟಸಾರ್ವಭೌಮನನ್ನು ಕಿತ್ಕೊಂಡ ವಿಧಿ ಮೇಲೆ ಯಾವತ್ತಿಗೂ ಕರುಣೆ ಬರೋದಿಲ್ಲ‌ ಬಿಡಿ. ಕ್ಷಣ ಕ್ಷಣಕ್ಕೂ ವಿಧಿಗೆ ಶಾಪ ಹಾಕುತ್ತಾ, ರಾಜರತ್ನನನ್ನು ಜೀವಂತವಾಗಿಸುವ ಕೆಲಸ ಮಾಡೋಣ.

ಪವರ್ ಇಲ್ಲದ ದಿನಗಳಲ್ಲಿ ಬಿಡುಗಡೆಯಾಗ್ತಿರುವ, ಅಣ್ಣಾವ್ರ ಮೇಲೆ ರಚನೆಯಾಗಿರುವ ಲಕ್ಕಿಮ್ಯಾನ್ ಚಿತ್ರದ ಹಾಡನ್ನು ಹಾಗೂ ಸಿನಿಮಾವನ್ನು ಕೈಹಿಡಿಯೋಣ. ಲಕ್ಕಿಮ್ಯಾನ್ ಚಿತ್ರ
ಪರ್ಸಾ ಪಿಕ್ಚರ್ಸ್ ಲಾಂಛನದಲ್ಲಿ ಮೂಡಿಬಂದಿದೆ. ಸಾಧು ಕೋಕಿಲರ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.


ಡಾರ್ಲಿಂಗ್ ಕೃಷ್ಣ ಜೊತೆ ನಾಯಕಿಯಾಗಿ ಸಂಗೀತ ಶೃಂಗೇರಿ ಹಾಗೂ ರೋಶನಿ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಆರ್ಯ, ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್ ರಾಜ್, ರೋಶಿನಿ ಪ್ರಕಾಶ್, ಸುದಾ ಬೆಳವಾಡಿ, ಮಾಳವಿಕ. ಮುಂತಾದ ಕಲಾವಿದರು ನಟಿಸಿದ್ದಾರೆ.


ಪಿ.ಆರ್. ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ನಿರ್ಮಾಣದ ಈ ಚಿತ್ರಕ್ಕೆ ಜೀವಾ ಶಂಕರ್ ಛಾಯಾಗ್ರಹಣವಿದ್ದು, ಡಿಸೆಂಬರ್ ಅಥವಾ ಜನವರಿ ವೇಳೆಗೆ ಲಕ್ಕಿಮ್ಯಾನ್ ಚಿತ್ರವನ್ನು ತೆರೆಗೆ ತರುವ ಯೋಜನೆ ಚಿತ್ರ ತಂಡಕ್ಕಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

‌ಬೆಂಗಳೂರಲ್ಲಿ ಆರ್‌ಆರ್‌ಆರ್ ಚಿತ್ರತಂಡ! ಪ್ರಚಾರ ಕಾರ್ಯಕ್ಕೆ ಬರ್ತಾರೆ ರಾಜಮೌಳಿ ಅಂಡ್‌ ಟೀಮ್!!

ಸದ್ಯ ಭಾರತೀಯ ಚಿತ್ರರಂಗದಲ್ಲಿ ಆರ್‌ಆರ್‌ಆರ್‌ ಜೋರು ಸದ್ದು ಮಾಡುತ್ತಿರುವ ಚಿತ್ರ. ಇದಕ್ಕೆ ಕಾರಣ, ರಾಜಮೌಳಿ ನಿರ್ದೇಶನದ ಚಿತ್ರ. ಅಷ್ಟೇ ಅಲ್ಲ, ಜೂ.ಎನ್‌ಟಿಆರ್‌,ರಾಮ್‌ ಚರಣ್‌, ಅಜಯ್‌ ದೇವಗನ್‌ ಮತ್ತು ಆಲಿಯಾ ಭಟ್‌ ಸೇರಿದಂತೆ ಇತರೆ ಸ್ಟಾರ್‌ ನಟರು ನಟಿಸಿರೋದು. ಇದಷ್ಟೇ ಅಲ್ಲ, ಇದು ಕನ್ನಡದಲ್ಲೂ ರಿಲೀಸ್‌ ಆಗುತ್ತಿರುವುದು ಮತ್ತೊಂದು ವಿಶೇಷ. ಹೌದು, ಆರ್‌ಆರ್‌ಆರ್‌ ಬಹುನಿರೀಕ್ಷೆಯ ಸಿನಿಮಾ. ಜನರು ಸಿನಿಮಾ ನೋಡಲು ಕಾತುರದಲ್ಲಿದ್ದಾರೆ

. ಸಿನಿಮಾ ಬಿಡುಗಡೆ ಮುನ್ನವೇ ನಿರ್ದೇಶಕ ರಾಜಮೌಳಿ ಮುಂಬೈಗೆ ಹೋಗಿ, ಅಲ್ಲಿ ಸಲ್ಮಾನ್‌ ಖಾನ್‌ ಅವರನ್ನು ಭೇಟಿ ಮಾಡಿದ್ದರು. ಅದು ಸಾಕಷ್ಟು ಸುದ್ದಿಯಾಗಿತ್ತು. ರಾಜಮೌಳಿ ನಿರ್ದೇಶನವೆಂದರೆ, ಒಂದಷ್ಟು ಕುತೂಹಲ ಇದ್ದೇ ಇರುತ್ತದೆ. ಈ ಸಿನಿಮಾದ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಆರ್‌ಆರ್‌ಆರ್‌ ಸಿನಿಮಾದ ಪ್ರಚಾರ ಕಾರ್ಯ ಎಲ್ಲೆಡೆ ಹಬ್ಬಿದೆ. ಈಗ ಬೆಂಗಳೂರಿಗೂ ಚಿತ್ರತಂಡ ಭೇಟಿ ಕೊಡುತ್ತಿದೆ ಅನ್ನುವುದು ವಿಶೇಷತೆಗಳಲ್ಲೊಂದು. ನವೆಂಬರ್‌ 26ರಂದು ಬೆಂಗಳೂರಿಗೆ ಆರ್‌ಆರ್‌ಆರ್‌ ಸಿನಿಮಾ ತಂಡ ಆಗಮಿಸಲಿದ್ದು, ಚಿತ್ರದ ಪ್ರಚಾರ ಮಾಡಲಿದೆ.

ಆರ್‌ಆರ್‌ಆರ್‌ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂನಲ್ಲೂ ರಿಲೀಸ್‌ ಆಗುತ್ತಿದೆ. ಕನ್ನಡಕ್ಕೂ ಡಬ್ ಆಗಿ ಈ ಚಿತ್ರ ತೆರೆಗೆ ಬರುತ್ತಿರುವುದು ವಿಶೇಷ. ಹಾಗಾಗಿಯೇ ಚಿತ್ರತಂಡ ‘ಆರ್‌ಆರ್‌ಆರ್‌’ ಸಿನಿಮಾದ ಪ್ರಚಾರ ಕಾರ್ಯವನ್ನು ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ.
ಡಿಸೆಂಬರ್‌ ಮೊದಲ ವಾರದಲ್ಲಿ ಆರ್‌ಆರ್‌ಆರ್ ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ. ಈಗಾಗಲೇ ಚಿತ್ರದ ಟೀಸರ್‌ಗಳು ಮತ್ತು ಹಾಡುಗಳು ಜೋರಾಗಿಯೇ ಸೌಂಡು ಮಾಡಿವೆ. ಆರ್‌ಆರ್‌ಆರ್ ಟ್ರೇಲರ್‌ ಕನ್ನಡದಲ್ಲೂ ರಿಲೀಸ್ ಆಗಲಿದೆ. ಚಿತ್ರದ ಹಾಡುಗಳು ಕನ್ನಡದಲ್ಲಿ ರಿಲೀಸ್‌ ಆಗಿ ಮೆಚ್ಚುಗೆ ಪಡೆದಿವೆ.

Categories
ಸಿನಿ ಸುದ್ದಿ

ಪೊಲೀಸ್‌ ವಿಚಾರಣೆ ಎದುರಿಸಿ ಬಂದ ಹಂಸಲೇಖ- ಪೊಲೀಸ್‌ ಠಾಣೆ ಮುಂದೆ ಪರ-ವಿರೋಧದ ಪ್ರತಿಭಟನೆಯ ಬಿಸಿ

ನಾದಬ್ರಹ್ಮ ಹಂಸಲೇಖ ಗುರುವಾರ ಪೊಲೀಸ್‌ ವಿಚಾರಣೆ ಎದುರಿಸಿದರು. ಬೆಂಗಳೂರಿನ ಬಸವನಗುಡಿ ಪೊಲೀಸ್‌ ಠಾಣೆಗೆ ಮಧ್ಯಾಹ್ನ ೧೨ ಗಂಟೆಗೆ ಹಾಜರಾಗಿದ್ದರು. ಅವರೊಂದಿಗೆ ವಕೀಲ ಸಿ.ಎಸ್.‌ ದ್ವಾರಕಾನಾಥ್‌ ಹಾಗೂ ಲತಾ ಹಂಸಲೇಖ ಹಾಜರಿದ್ದರು. ಅಲ್ಲಿ ಇನ್ಸ್ ಪೆಕ್ಟರ್ ರಮೇಶ್‌ ನೇತೃತ್ವದ ತಂಡದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿ ಬಂದರು. ಅಂದ ಹಾಗೆ, ಅವರು ಇಷ್ಟಾಗಿಯೂ ಇವತ್ತು ಪೊಲೀಸ್‌ ವಿಚಾರಣೆಗೆ ಹಾಜರಾಗಿದ್ದು ಮೈಸೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮವೊದರಲ್ಲಿ ಅವರು ಆಡಿದ ಮಾತುಗಳ ವಿರುದ್ದ ದೂರು ದಾಖಲಾಗಿದ್ದ ಕಾರಣಕ್ಕೆ .

ಅಧಿಕೃತ ಮಾಹಿತಿ ಪ್ರಕಾರ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆದಿದೆ. ಪೊಲೀಸರು ಕೇಳಿದ ೨೫ ರಿಂದ ೩೦ ಪ್ರಶ್ನೆಗಳಿಗೆ ಉತ್ತರಿಸಿ ಬಂದಿದ್ದಾರೆ. ಹಂಸ ಲೇಖ ಪರ ವಕೀಲ ದ್ವಾರಕನಾಥ್‌ ವಿಚಾರಣೆ ವಿವರ ಹಂಚಿಕೊಂಡಿದ್ದು, ಇಂದಿನ ವಿಚಾರಣೆ ಮುಗಿದಿದ್ದು, ಮತ್ತೆ ವಿಚಾರಣೆಗೆ ಬರಬೇಕಾದರೆ ಬರುತ್ತೇವೆ. ಕಾನೂನಿನ ಮೇಲೆ ನಂಬಿಕೆ ಇದೆ. ಹೋರಾಟ ಮುಂದುವರೆಸುತ್ತೇವೆ ಎಂದರು. ಇದೇ ವೇಳೆ ವಿಚಾರಣೆ ಎದುರಿಸಿ ಪೊಲೀಸ್‌ ಠಾಣೆ ಯಿಂದ ಹೊರ ಬಂದ ನಾದ ಬ್ರಹ್ಮ ಹಂಸಲೇಖ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಆದರೆ ಹಂಸಲೇಖ ವಿಚಾರಣೆಗೆ ಬಂದ ವೇಳೆ ಅವರ ಪರ ವಿರೋಧ ನಡೆದ ಪ್ರತಿಭಟನೆ ಕುರಿತು ಡಿಸಿಪಿ ಹರೀಶ್‌ ಪಾಂಡೆ ಪ್ರತಿಕ್ರಿಯೆ ನೀಡಿದರು. ಠಾಣೆ ಮುಂದೆ ಹೈಡ್ರಾಮಾ ನಡೆದಿಲ್ಲ, ಪರ ವಿರೋಧ ಮಾಡುವವರು ಪ್ರತಿಭಟನೆ ಮಾಡಿದ್ದಾರಷ್ಟೇ. ನಾವು ಕೋರ್ಟ್‌ ಗೆ ಎಲ್ಲಾ ರೀತಿಯಲ್ಲೂ ಉತ್ತರ ನೀಡಬೇಕು. ಹೀಗಾಗಿ ಎಲ್ಲಾ ರೀತಿಯಿಂದಲೂ ತನಿಖೆ ಮಾಡುತ್ತೇವೆ ಎಂದರು. ಬೆಳಗ್ಗೆ ಹಂಸಲೇಖ ಅವರು ವಿಚಾರಣೆಗೆ ಅಂತ ವಕೀಲರ ಜತೆಗೆ ಪೊಲೀಸ್‌ ಠಾಣೆಗೆ ಬಂದ ಸಂದರ್ಭದಲ್ಲಿ ಅವರ ಪರವಾಗಿ ಕೆಲವು ಕನ್ನಡ ಸಂಘಟನೆಗಳು ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಬಜರಂಗದಳದ ಕಾರ್ಯಕರ್ತರು ಹಂಸಲೇಖ ವಿರುದ್ದ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲ ಕಾಲ ಪೊಲೀಸ್‌ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Categories
ಸಿನಿ ಸುದ್ದಿ

ಗೋಲ್ಡನ್‌ಸ್ಟಾರ್ ಪುತ್ರ ವಿಹಾನ್‌ಗೆ ಎಸ್‌ಪಿಬಿ’ ಆಗುವ ಕನಸು ! ಕ್ಯಾಮೆರಾ ಮುಂದೆ ಬಂದು ವಿಹಾನ್’ ಸಖತ್ತಾಗಿ ಹೇಳಿದ್ದಿಷ್ಟು !

ಗೋಲ್ಡನ್ ಸ್ಟಾರ್ ಗಣೇಶ್ ಸನ್ ವಿಹಾನ್‌ಗೆ ದಿವ್ಯ ಕನಸುಗಳಿವೆ. ಆದರೆ, ಎರಡೇ ಎರಡೇ ಕನಸುಗಳನ್ನು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾನೆ. ಅದರಲ್ಲಿ ಮೊದಲನೆಯ ಕನಸು ಸಂಗೀತ ಲೋಕದ ಸ್ವರ ಸಾಮ್ರಾಟ, ಗಾನ ಗಾರುಡಿಗ ಎಸ್‌ಪಿಬಿಯವರಂತಾಗಬೇಕು ಎನ್ನುವುದು. ಎರಡನೆಯದು ಇಳೆಯರಾಜ ಆಗ್ಬೇಕು ಎನ್ನುವ ಮಹದಾಸೆ. ಈ ದಿವ್ಯ ಕನಸು ಸದ್ಯಕ್ಕೆ ಸಖತ್' ಸಿನ್ಮಾದ ರೀಲ್‌ಗಷ್ಟೇ ಸೀಮಿತವಾಗಿರಬಹುದು. ಆದರೆ, ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ ಅಲ್ಲವೇ. ಅಷ್ಟಕ್ಕೂ, ವಿಹಾನ್ ನಾನ್ ಎಸ್.ಪಿ ಬಾಲು ಆಗ್ಬೇಕು, ಇಳೆಯರಾಜ ಆಗ್ಬೇಕು ಅಂತ ಹೇಳಿದ್ದುಸಖತ್’ ಸಿನಿಮಾಗಾಗಿ. ಹೌದು, `ಸಖತ್’ ಸಿನ್ಮಾ ಬಿಡುಗಡೆಗೆ ಸಜ್ಜಾಗಿದ್ದು ಜೂನಿಯರ್ ಬಾಲು ಪಾತ್ರದ ಟೀಸರ್ ಹೊರಬಿದ್ದಿದೆ. ಅದರಲ್ಲಿ ಎಸ್‌ಪಿಬಿ ಹಾಗೂ ಇಳೆಯರಾಜ ಆಗುವ ಸಂಭಾಷಣೆ ರಿವೀಲ್ ಆಗಿದೆ

ಸಖತ್' ಗೋಲ್ಡನ್‌ಸ್ಟಾರ್ ಗಣೇಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ. ಸಿಂಪಲ್ ಸುನಿ ಹಾಗೂ ಗಣಿ ಎರಡನೇ ಭಾರಿ ಒಂದಾಗಿ ಮಾಡಿರುವ ಸಿನಿಮಾ. ಬೆಳ್ಳಿತೆರೆ ಮೇಲೆ ಚಮಕ್ ಮಾಡಿ ಸಿನಿರಸಿಕರ ಹೃದಯ ಗೆದ್ದಿದ್ದ ಈ ಜೋಡಿ ಮತ್ತೆ ಒಂದಾಗಿ ಸಖತ್’ ಮಾಡಿರುವ ಕಾರಣಕ್ಕೆ ಚಿತ್ರದ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ. ಮಳೆ ಹುಡುಗನ ನಯಾ ಲುಕ್-ಗೆಟಪ್‌ನ ಜೊತೆಗೆ ಪಾತ್ರದ ಮೇಲೆ ಕೂತೂಹಲ ಗರಿಗೆದರಿದೆ. ಗಣಿ ನಿಜಕ್ಕೂ ಕುರುಡನ ಪಾತ್ರ ಮಾಡಿದ್ದಾರಾ? ಅಥವಾ ಟೀಸರ್‌ನಲ್ಲಿ ಕುರುಡನಂತೆ ಅಭಿನಯಿಸಿ ಸಿಲ್ವರ್‌ಸ್ಕ್ರೀನ್ ಮೇಲೆ ಬಂದಾಗ ಚಮಕ್ ಕೊಡ್ತಾರಾ ಎನ್ನುವ ಸಣ್ಣದೊಂದು ಸಂಶಯ ಎಲ್ಲರನ್ನೂ ಕೌತುಕದಿಂದ ಕಾಯುವಂತೆ ಮಾಡಿದೆ. ಈ ಮಧ್ಯೆ ಬಿಡುಗಡೆಗೊಂಡಿರುವ ಗೋಲ್ಡನ್ ಸನ್ ಟೀಸರ್ ನಿರೀಕ್ಷೆ ಹೆಚ್ಚಿಸಿದೆ. ಜೂನಿಯರ್ ಬಾಲು ಪಾತ್ರ ನೋಡುಗರ ಗಮನ ಸೆಳೆಯುತ್ತಿದೆ.

ಜೂನಿಯರ್ ಬಾಲು ಪಾತ್ರಕ್ಕೆ ವಿಹಾನ್ ಜೀವತುಂಬಿದ್ದಾನೆ. ಅಂದ್ಹಾಗೇ, ವಿಹಾನ್ ಗಂಧದಗುಡಿಯ ಗೋಲ್ಡನ್‌ಸ್ಟಾರ್ ಪುತ್ರ. ಚಿನ್ನದ ಸ್ಪೂನ್ ಬಾಯಲ್ಲಿಟ್ಟುಕೊಂಡೇ ಧರೆಗಿಳಿದಿರೋ ವಿಹಾನ್ ಸಿಕ್ಕಾಪಟ್ಟೆ ಚೂಟಿ ಅಷ್ಟೇ ಟ್ಯಾಲೆಂಟೆಡ್. ಅಪ್ಪ-ಅಮ್ಮನಂತೆ ಅದ್ಬುತ ಪ್ರತಿಭೆಯುಳ್ಳ ಹಾಗೂ ಹೈಪರ್ ಆಕ್ಟೀವ್ ಇರುವ ವಿಹಾನ್ ಬಾಲ್ಯದಿಂದಲೇ ಮುಖಕ್ಕೆ ಬಣ್ಣ ಹಚ್ಚಿಕೊಂಡು ಬಣ್ಣದ ಲೋಕದಲ್ಲಿ ಮೆರೆಯುತ್ತಿದ್ದಾರೆ. ತನ್ನಂತೆ ತನ್ನ ಮಗ ಮಾಯಲೋಕದಲ್ಲಿ ಮಿಂಚಬೇಕು ಎನ್ನುವ ಕನಸೊತ್ತಿರುವ ಗಣಿ ತನ್ನ ಅಭಿನಯದ ಸಿನಿಮಾಗಳ ಮೂಲಕ ಮಗನನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಜೂನಿಯರ್ ಗೋಲ್ಡನ್ ಸ್ಟಾರ್ ತಂದೆಯಂತೆ ಬಣ್ಣದ ಲೋಕದಲ್ಲಿ ಮಿಂಚೋದಕ್ಕೆ ಒಂದೊಂದು ಹೆಜ್ಜೆ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ.‌

ಹೌದು, ಅಪ್ಪನ ಗೀತಾ' ಚಿತ್ರದ ಮೂಲಕ ಬಿಗ್‌ಸ್ಕ್ರೀನ್‌ಗೆ ಲಗ್ಗೆ ಇಟ್ಟ ವಿಹಾನ್, ಜೂನಿಯರ್ ಗೋಲ್ಡನ್ ಸ್ಟಾರ್ ಆಗಿಗೀತಾ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಅಪ್ಪನ ಬಾಲ್ಯದ ಪಾತ್ರಕ್ಕೆ ಬಣ್ಣ ಹಚ್ಚಿದ ವಿಹಾನ್ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡಿಕೊಟ್ಟು ಅಪ್ಪನಿಂದ ಮಾತ್ರವಲ್ಲ ಪ್ರೇಕ್ಷಕ ಮಹಾಷಯರಿಂದ ಸೈ ಎನಿಸಿಕೊಂಡಿದ್ದ.

ಇದೀಗ ತಂದೆಯ ಬಹುನಿರೀಕ್ಷಿತ ಸಖತ್' ಚಿತ್ರದಲ್ಲಿ ಜೂನಿಯರ್ ಗಣಪನಾಗಿ ಅಬ್ಬರಿಸಿದ್ದಾನೆ. ಈ ಚಿತ್ರಕ್ಕೂ ವಿಹಾನ್ ಡಬ್ಬಿಂಗ್ ಮಾಡಿದ್ದು, ಮಗನ ಅಭಿನಯಕ್ಕೆ ಹಾಗೂ ಮಾತಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವ್ರೇ ಫಿದಾ ಆಗಿದ್ದಾರೆ. ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಕುಣಿಯುತ್ತಿರುವ ಟೀಸರ್ ನೋಡಿ ಗಣಿ ದಿಲ್ ಖುಷ್ ಆಗಿದ್ದಾರೆ. ಇನ್ನೇನಿದ್ರು ಅಭಿಮಾನಿ ದೇವರುಗಳು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಅಪ್ಪ-ಮಗನಸಖತ್’ ಸಿನಿಮಾ ಎಷ್ಟು ಸಖತ್ತಾಗಿದೆ ಅನ್ನೋದನ್ನು ತಿಳಿಸಬೇಕು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!