ಡಾಲಿ ಸಿನಿಮಾ ನಂತರ ನಿರ್ದೇಶಕ ಪ್ರಭು ಶ್ರೀನಿವಾಸ ನಿರ್ದೇಶನ ಮಾಡಬೇಕಿದ್ದ ತಮಿಳು ಸಿನಿಮಾ ಈಗ ಕನ್ನಡದಲ್ಲಿ ತಯಾರಿಯಾಗಿದೆ. ವಿಜಯ್ ಸೇತುಪತಿ ನಟಿಸಬೇಕಾಗಿದ್ದ ಸಿನಿಮಾಗೆ ಮೊಗ್ಗಿನ ಮನಸು ಖ್ಯಾತಿಯ ಮನೋಜ್ ಬಣ್ಣ ಹಚ್ಚಿದ್ದಾರೆ.
ಡಾಲಿ ಸಿನಿಮಾ ಕೋವಿಡ್ ನಂತರ ಮತ್ತೆ ಆರಂಭ ಆಗಬೇಕಿದ್ದು, ಅದರ ಮಧ್ಯೆ ಪ್ರಭು ಶ್ರೀನಿವಾಸ ಅವರು ಬಾಡಿಗಾಡ್ ಚಿತ್ರವನ್ನು ನಿರ್ಮಾಣ ಕೂಡ ಮಾಡಿ ಪೂರ್ಣಗೊಳಿಸಿದ್ದಾರೆ.
ಮುಖ್ಯ ಪಾತ್ರದಲ್ಲಿ ಗುರುಪ್ರಸಾದ್, ಪದ್ಮಜಾ ರಾವ್ ಹಾಗೂ ದೀಪಿಕಾ ನಟಿಸಿದ್ದಾರೆ. ಚಿತ್ರ ಏಪ್ರಿಲ್ 1 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಅಂದಾಕ್ಷಣ ಸದ್ಯ ನೆನಪಾಗೋದೇ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ‘ಕೆಜಿಎಫ್ 2’. ಈ ಚಿತ್ರದ ಅಬ್ಬರ ಇನ್ನೇನು ಶುರುವಾಗಲಿದೆ. ಏಪ್ರಿಲ್ 14ಕ್ಕೆ ಬಹು ನಿರೀಕ್ಷಿತ “ಕೆಜಿಎಫ್ 2” ರಿಲೀಸ್ ಆಗಲಿದೆ. ಯಶ್ ಫ್ಯಾನ್ಸ್ ಚಿತ್ರ ಬಿಡುಗಡೆಯ ಎದುರು ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ, ಸಿನಿಮಾದ ಪ್ರಚಾರ ಕೆಲಸ ಕೂಡ ಜೋರಾಗಿಯೇ ನಡೆಯುತ್ತಿದೆ. ಈ ಚಿತ್ರದ ಬಿಡುಗಡೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಈಗಾಗಲೇ ಚಿತ್ರತಂಡ ಪ್ರಚಾರಕ್ಕೆ ಅಣಿಯಾಗಿದೆ. ಈವರೆಗೆ ಚಿತ್ರದ ಟೀಸರ್ ನೋಡಿ ಖುಷಿಗೊಂಡಿದ್ದ ಫ್ಯಾನ್ಸ್, ಸಿನಿಮಾದ ಟ್ರೇಲರ್ ಮತ್ತು ಹಾಡುಗಳಿಗೆ ಕಾಯುತ್ತಿದ್ದರು. ಅಂತಹ ಫ್ಯಾನ್ಸ್‌ಗೆ ಒಂದು ಗುಡ್ ನ್ಯೂಸ್ ಕೊಟ್ಟಿದೆ ಹೊಂಬಾಳೆ ಫಿಲಂಸ್.
ಹೌದು, ‘ಕೆಜಿಎಫ್ 2’ನ ಒಂದೊಂದೇ ಕಂಟೆಂಟ್ ಬಿಡಲು ತಂಡ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ತಂಡ ತಯಾರಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ ಫಿಲಂಸ್, ಚಿತ್ರದ ಮೊದಲ ಹಾಡು ಮಾರ್ಚ್ 21ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಿಕೊಂಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿವೆ. ಈ ಬಗ್ಗೆ ಪೋಸ್ಟರ್ ಹಂಚಿಕೊಂಡು ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, ‘ಸಿದ್ಧರಾಗಿ ತೂಫಾನ್ ಬರ್ತಿದೆ. ಮಾರ್ಚ್ 21, 11.07ಕ್ಕೆ ತೂಫಾನ್ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ’ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕೆಜಿಎಫ್ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ ಚಿತ್ರದ ಮೊದಲ ಹಾಡು ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹಾಡಿನ ಪೋಸ್ಟರ್ ಕೂಡ 5 ಭಾಷೆಯಲ್ಲಿ ರಿಲೀಸ್ ಮಾಡಲಾಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ. ಹಾಡಿನ ಶೀರ್ಷಿಕೆ ತೂಫಾನ್, ಅಂದರೆ ಬಿರುಗಾಳಿ ಎಂದರ್ಥ. ಈ ಹಾಡು ನಾಯಕನ ಕುರಿತಾಗಿರಬಹುದೇ ಎಂಬ ಪ್ರಶ್ನೆಗಳಿವೆ. ಅದೇನೆ ಇರಲಿ, ಒಟ್ಟಲ್ಲಿ ಮೊದಲ ಹಾಡು ರಿಲೀಸ್ ಮಾಡುತ್ತಿದೆ. ಈ ಹಾಡಿನ ಬಿಡುಗಡೆ ಬಳಿಕ ಚಿತ್ರತಂಡ ಟ್ರೇಲರ್ ಕೂಡ ರಿಲೀಸ್ ಮಾಡಲಿದೆ. ಈಗಾಗಲೇ ಟ್ರೇಲರ್ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದ್ದು, ಮಾರ್ಚ್ 27ಕ್ಕೆ ಟ್ರೇಲರ್ ರಿಲೀಸ್ ಆಗಲಿದೆ. ಸದ್ಯ ಈ ಚಿತ್ರದ ಮೇಲೆ ಸಾಕಷ್ಟು ಕುತೂಹಲವಿದೆ.
ಡಾ.ಪುನೀತ್ ರಾಜಕುಮಾರ್ ಅಂದರೆ ಹಾಗೆ, ಅದೊಂದು ಗೌರವ, ಪ್ರೀತಿ ಮತ್ತು ಹೆಮ್ಮೆ. ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಆದರ್ಶಗಳು ಜೀವಂತ. ಅವರು ನಮ್ಮೊಂದಿಗಿಲ್ಲ ಎಂಬ ಭಾವನೆ ಯಾರಲ್ಲೂ ಇಲ್ಲ. ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಅವರು ಜೀವಂತವಾಗಿಯೇ ಇದ್ದಾರೆ. ಅದೇ ಖುಷಿಯಲ್ಲಿ ಅಭಿಮಾನಿಗಳು ಅಪ್ಪು ಅವರನ್ನು ಹೃದಯದಲ್ಲಿಟ್ಟು ಪೂಜಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಅಭಿಮಾನಿಗಳ ಸಂಖ್ಯೆ ಲೆಕ್ಕವಿಲ್ಲ.
ಅದರ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಯಾಕೆಂದರೆ, ಇಡೀ ಕರುನಾಡೇ ಪುನೀತ್ ಅವರನ್ನು ಪ್ರೀತಿಸುತ್ತಿದೆ. ಅವರ ಅಭಿಮಾನಿಗಳಂತೂ ಜೇಮ್ಸ್ ಬಿಡುಗಡೆ ಮುನ್ನ ದಿನ ಮಾಡದ ಪೂಜೆಗಳಿಲ್ಲ, ಹರಕೆಗಳಿಲ್ಲ. ಅವರ ಕಟೌಟ್‌ಗಳಿಗೆ ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದು ಗೊತ್ತೇ ಇದೆ. ಹಾಗೆಯೇ ಇಲ್ಲೊಬ್ಬ ಅಪ್ಪಟ ಪುನೀತ್ ರಾಜಕುಮಾರ್ ಅವರ ಅಭಿಮಾನಿ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದು, ಪುನೀತ್ ರಾಜಕುಮಾರ್ ಅವರ ಪುಸ್ತಕವೊಂದನ್ನು ರಾಯರ ಬೃಂದಾವನದಲ್ಲಿಟ್ಟು ಪೂಜಿಸಿದ್ದಾರೆ.
ಹೌದು, ಕನ್ನಡ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದಲೂ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಹೀರೋ ಕೂಡ ಆಗಿರುವ ಮಧು ಮಂದಗೆರೆ ಅವರು ಪುನೀತ್ ಅವರ ಮೇಲಿನ ಪ್ರೀತಿ, ಗೌರವದಿಂದಲೇ ಮಂತ್ರಾಲಯಕ್ಕೆ ಹೋಗಿ ರಾಯರ ಸನ್ನಿಧಿಯಲ್ಲಿ ಪುನೀತ್ ಅವರ ಜೇಮ್ಸ್ ಚಿತ್ರಕ್ಕೆ ಯಾವ ಅಡೆತಡೆ ಆಗಬಾರದು, ಪುನೀತ್ ಅವರು ಸದಾ ನಗುಮೊಗದಲ್ಲೇ ಅಭಿಮಾನಿಗಳ ಜೊತೆ ಇರಬೇಕು ಅಂದುಕೊಂಡು ಪೂಜಿಸಿದ್ದಾರೆ.
ಅಂದಹಾಗೆ, ಭದ್ರಾವತಿ ರಾಮಾಚಾರಿ ಬರೆದ “ಅಪ್ಪು ಅಮರ” ಒಂದು ಅವಲೋಕನ ಪುಸ್ತಕ ಬಿಡುಗಡೆಯಾಗಿದ್ದು, ಆ ಪುಸ್ತಕವನ್ನು ಮಂತ್ರಾಲಯಕ್ಕೆ ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಅಪ್ಪು ಅವರ ಜೇಮ್ಸ್ ಸಿನಿಮಾ ಕೂಡ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನು, ಜೇಮ್ಸ್ ಬಿಡುಗಡೆ ದಿನ ಮಧು ಮಂದಗೆರೆ ಅವರು, ಯೋಧರ ಸಮವಸ್ತ್ರ ಧರಿಸಿಯೇ ಸಿನಿಮಾ ವೀಕ್ಷಿಸಿ ಪ್ರೀತಿ ಮೆರೆದಿದ್ದಾರೆ. ಎಲ್ಲರೂ ಜೇಮ್ಸ್ ಸಿನಿಮಾ ನೋಡಲೇಬೇಕು ಎಂದು ಹೇಳಿದ್ದಾರೆ.
ಡಾ.ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರಕ್ಕ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯಾವ ಕನ್ನಡ ಸಿನಿಮಾಗಳಿಗೂ ಸಿಗದಂತಹ ಅದ್ಭುತ ಓಪನಿಂಗ ಜೇಮ್ಸ್ ಚಿತ್ರಕ್ಕೆ ಸಿಕ್ಕಿದೆ. ಬೆಂಗಳೂರಲ್ಲೇ ರಿಲೀಸ್ ಮುನ್ನ ಸುಮಾರು ಒಂದು ಕೋಟಿ ರೂ. ಮೌಲ್ಯದ ಟೆಕೆಟ್ ಸೇಲ್ ಆಗಿತ್ತು ಅನ್ನೋದು ವಿಶೇಷ. ಬೆಂಗಳೂರು ಮಾತ್ರವಲ್ಲ, ರಾಜ್ಯಾದ್ಯಂತ ಕೂಡ ಚಿತ್ರ ಅದ್ಧೂರಿಯಾಗಿಯೇ ಓಪನಿಂಗ್ ಕಂಡಿದೆ. ಜೇಮ್ಸ್ ಗಳಿಕೆಯಲ್ಲಿ ಕನ್ನಡದ ಎಲ್ಲಾ ಸಿನಿಮಾಗಳ ದಾಖಲೆ ಮುರಿಯುತ್ತದೆ ಎಂಬ ಲೆಕ್ಕಾಚಾರವನ್ನುಗಾಂಧಿನಗರ ಮಂದಿ ಹಾಕಿದ್ದರು. ಮೊದಲ ದಿನ ಶೇ.೯೦ಕ್ಕೂ ಹೆಚ್ಚ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಪರ ರಾಜ್ಯ ಮತ್ತು ವಿದೇಶಗಳಲ್ಲೂ ಜೇಮ್ಸ್ ಚಿತ್ರಕ್ಕೆ ಅದ್ಭುತ ಓಪನಿಂಗ್ ಸಿಕ್ಕಿದೆ.
ಹಾಗಾದರೆ, ಜೇಮ್ಸ್ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು? ಈ ಪ್ರಶ್ನೆ ಸಹಜವಾಗಿಯೇ ಹರಿದಾಡುತ್ತಿದೆ. ಜೇಮ್ಸ್ ಸಿನಿಮಾ ಮೊದಲ ದಿನ ಸುಮಾರು 33 ಕೋಟಿ ರೂ.ಗೂ ಹೆಚ್ಚು ಮೊತ್ತದ ಗಳಿಕೆ ಪಡೆದಿದೆ ಎಂದು ಹೇಳಲಾಗುತ್ತಿದೆ. ಇದು ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಅನ್ನುವ ಕಾರಣಕ್ಕೆ ಎಲ್ಲೆಡೆಯಿಂದಲೂ ಅಭಿಮಾನಿಗಳು ಚಿತ್ರ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 33 ಕೋಟಿ ಕೋಟಿ ಗಳಿಕೆಯಾಗಿದ್ದು, ಹೊರ ರಾಜ್ಯ ಹಾಗು ವಿದೇಶಗಳಲ್ಲೂ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಅವೆಲ್ಲದರ ಗಳಿಕೆಯನ್ನು ಸೇರಿಸಿ ಅಂದಾಜಿಸಿದರೆ ಮೊದಲ ದಿನದ ಗಳಿಕೆ ಸುಮಾರು 45 ಕೋಟಿಯಷ್ಟು ಆಗಬಹುದು.
ಮೊದಲ ದಿನ ಕರ್ನಾಟಕದಲ್ಲಿ 33 ಕೋಟಿಯಷ್ಟು ಗಳಿಕೆ ಕಂಡಿರುವ ‘ಜೇಮ್ಸ್’ ಈ ವಾರ ಮತ್ತಷ್ಟು ಗಳಿಕೆ ಮಾಡಲಿದೆ. ಹಾಗೆ ನೋಡಿದರೆ ಮುಂದಿನ ಮೂರು ದಿನಗಳಲ್ಲಿ ಸುಮಾರು 70 ಕೋಟಿ ಗಳಿಕೆ ದಾಟಬಹುದು ಎಂದು ಅಂದಾಜಿಸಲಾಗುತ್ತಿದೆ. ‘ಜೇಮ್ಸ್’ ಚಿತ್ರ ಬಿಡುಗಡೆ ಆಗಿದ್ದರಿಂದ ಯಾವೊಂದು ಸಿನಿಮಾ ಕೂಡ ಸ್ಪರ್ಧೆಗೆ ಬಂದಿಲ್ಲ. ಹಾಗಾಗಿ ಗಳಿಕೆಯಲ್ಲಿ ಹೊಸ ದಾಖಲೆ ಬರೆಯಬಹುದು ಎನ್ನಲಾಗುತ್ತಿದೆ. ಆದಷ್ಟು ಬೇಗ ಜೇಮ್ಸ್ ನೂರು ಕೋಟಿ ಕ್ಲಬ್ ಸೇರಿದರೂ ಅಚ್ಚರಿಯಿಲ್ಲ. ಅದೇನೆ ಇರಲಿ, ಜೇಮ್ಸ್ ಕನ್ನಡದಲ್ಲಿ ಗ್ರಾಂಡ್ ಓಪನಿಂಗ್ ಪಡೆದಿದೆ. ನಿಜಕ್ಕೂ ಅದೊಂದು ದೊಡ್ಡ ದಾಖಲೆಯೇ ಸರಿ. ಇತ್ತೀಚಿನ ವರ್ಷಗಳಲ್ಲಿ ಯಾವ ಸಿನಿಮಾಗಳು ಸಹ ಈ ಮೊಟ್ಟದ ಓಪನಿಂಗ್ ಪಡೆದುಕೊಂಡಿರಲಿಲ್ಲ.
ವಿಲನ್: “ನನ್ ಜೊತೆ ಕಾಂಪಿಟೇಟ್ ಮಾಡಿರೋರು ಯಾರೂ ಗೆದ್ದಿರೋ ರೆಕಾರ್ಡ್ಸೇ ಇಲ್ಲ… ಹೀರೋ: ನನಗೆ ಮೊದಲಿನಿಂದಲೂ ರೆಕಾರ್ಡ್ಸ್ ಬ್ರೇಕ್ ಮಾಡಿ ಅಭ್ಯಾಸ…
ಇದು ಜೇಮ್ಸ್ ಚಿತ್ರದಲ್ಲಿ ಬರೋ ಖಡಕ್ ಡೈಲಾಗ್. ವಿಲನ್ ಹೇಳೋ ಡೈಲಾಗ್‌ಗೆ, ಹೀರೋ ಕೌಂಟರ್ ಇದು. ಹೌದು, ಒಂದೇ ಮಾತಲ್ಲಿ ಹೇಳುವುದಾದರೆ ಜೇಮ್ಸ್ ಅದ್ಧೂರಿಯ ಜೊತೆಗೆ ಒಂದೊಳ್ಳೆಯ ಸಂದೇಶ ಇರುವ ಸಿನಿಮಾ. ಇಡೀ ಸಿನಿಮಾದ ಜೀವಾಳ ಪುನೀತ್. ಸಿನಿಮಾ ನೋಡಿದವರಿಗೆ ಪುನೀತ್ ಹೊರತಾಗಿ ಬೇರೇನೂ ಅಲ್ಲಿ ಕಾಣಿಸೋದೇ ಇಲ್ಲ. ಅಷ್ಟರ ಮಟ್ಟಿಗೆ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಇಲ್ಲಿ ಏನಿದೆ ಅನ್ನುವುದಕ್ಕಿಂತ ಏನಿಲ್ಲ ಅಂತ ಕೇಳಬೇಕು! ಹೌದು, ಒಂದು ಭರಪೂರ ಭೋಜನ ಎಷ್ಟೊಂದು ಅದ್ಭುತ ಎನಿಸುತ್ತೋ ಅಷ್ಟೊಂದು ಕಲರ್ ಫುಲ್ ಸಿನಿಮಾ ಇದು ಅಂದರೆ ತಪ್ಪಿಲ್ಲ. ಇಲ್ಲಿ ಗೆಳೆತನವಿದೆ. ಪ್ರೀತಿ ಇದೆ. ದ್ವೇಷ, ಅಸೂಯೆ ಹೆಚ್ಚಾಗಿಯೇ ಇದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ದೇಶಾಭಿಮಾನದ ಕಿಚ್ಚು ಇದೆ. ನೋಡುಗರಿಗೆ ದೇಶಭಕ್ತಿ ಮತ್ತಷ್ಟು ಹೆಚ್ಚಿದರೂ ಅಚ್ಚರಿ ಇಲ್ಲ. ಅಷ್ಟರಮಟ್ಟಿಗೆ ಜೇಮ್ಸ್ ಹತ್ತಿರವಾಗುವ ಸಿನಿಮಾ.
ಪುನೀತ್ ಸಿನಿಮಾಗಳೆಂದರೆ ಅಲ್ಲಿ ಮನರಂಜನೆ ಹೇರಳವಾಗಿರುತ್ತೆ. ಅಂಥದ್ದೊಂದು ಅದ್ಭುತ ಮನರಂಜನೆಗೆ ಇಲ್ಲಿ ಮೋಸವಿಲ್ಲ. ಇದೊಂದು ಪಕ್ಕಾ ಆಕ್ಷನ್ ಪ್ಯಾಕ್ಡ್ ಸಿನಿಮಾ. ಮೊದಲರ್ಧ ಸಾಗುವುದೇ ಗೊತ್ತಾಗುವುದಿಲ್ಲ. ಅಪ್ಪು ಅವರ ಖದರ್ ಏನೆಂಬುದನ್ನು ಹಿಂದಿನ ಸಿನಿಮಾಗಳಲ್ಲಿ ನೋಡಿರುವ ಫ್ಯಾನ್ಸ್ ಇಲ್ಲಿ ಅವರ ಹೊಸ ರೂಪವನ್ನು ಕಾಣಬಹುದು. ಸಿನಿಮಾದುದ್ದಕ್ಕೂ ಚಾಲೆಂಜಿಂಗ್ ಎನಿಸುವ ಮತ್ತು ಅಷ್ಟೇ ರಿಸ್ಕ್ ಎನಿಸುವ ದೃಶ್ಯಗಳಿವೆ. ಇವೆಲ್ಲವೂ ನೋಡುಗರನ್ನು ಸೀಟಿನ ತುದಿಮೇಲೆ ಕೂರಿಸಿಬಿಡುತ್ತವೆ. ಸಿನಿಮಾದ ಹೈಲೈಟ್ ಅಂದರೆ, ಮತ್ತದೇ ಸ್ಟಂಟ್. ಜೇಮ್ಸ್ ನೋಡುವಾಗ, ಹೊಸ ಫೀಲ್ ಸಿಗೋದು ಗ್ಯಾರಂಟಿ. ಆ ಸಿನಿಮಾದ ರಿಚ್‌ನೆಸ್ ಆಗಬಹುದು, ಗುಣಮಟ್ಟ ಇರಬಹುದು, ನೋಡುಗರ ಕಣ್ಣಿಗೆ ಹಬ್ಬ. ಮೊದಲಿಗೆ ಇಲ್ಲಿ ಒಂದೊಳ್ಳೆಯ ಕಥೆ ಇದೆ. ಅದನ್ನು ಅಷ್ಟೇ ಚೆನ್ನಾಗಿಯೇ ನಿರ್ದೇಶಕರು ನಿರೂಪಿಸಿದ್ದಾರೆ. ಚಿತ್ರಕಥೆ ಚಿತ್ರದ ವಿಶೇಷತೆಗಳಲ್ಲೊಂದು. ಇನ್ನು, ಸಿನಿಮಾದಲ್ಲಿ ಖಡಕ್ ಡೈಲಾಗ್‌ಗಳೂ ಇವೆ. ಕಚಗುಳಿ ಎನಿಸುವ ಮಾತುಗಳೂ ಇವೆ. ಅದರೊಟ್ಟಿಗೆ ಆಗಾಗ ಮನ ಮಿಡಿಯೋ ದೃಶ್ಯಗಳೂ ಇವೆ. ದೇಶಾಭಿಮಾನ ಹೆಚ್ಚಿಸುವಂತಹ ಸಂದರ್ಭದ ದೃಶ್ಯಗಳೂ ಇವೆ.
ಒಂದು ನೀಟ್ ಸಿನಿಮಾಗೆ ಏನೆಲ್ಲಾ ಇರಬೇಕೋ ಆ ಎಲ್ಲಾ ಕ್ವಾಲಿಟೀಸ್ ಜೇಮ್ಸ್ ಚಿತ್ರದಲ್ಲಿದೆ. ಮೊದಲಿಗೆ ಇಲ್ಲಿ ಮನಸ್ಸಿಗೆ ನಾಟೋದು ಸಿನಿಮಾದ ಆಶಯ. ಹಾಗೆಯೇ ಕಣ್ಣಿಗೆ ಕಾಣೋದು ಅದ್ಧೂರಿತನ ಮತ್ತು ಗುಣಮಟ್ಟ. ಚಿತ್ರದ ಪ್ರತಿ ಪಾತ್ರಗಳನ್ನು ಪೋಣಿಸಿರುವ ರೀತಿ. ಇವೆಲ್ಲದರ ಜೊತೆಗೆ ಮುಖ್ಯವಾಗಿ ಪದೇ ಪದೇ ಇಷ್ಟವಾಗೋದು ಸಿನಿಮಾದ ಸಂಗೀತ. ಇಲ್ಲಿ ಗುನುಗುವ ಹಾಡುಗಳೂ ಇವೆ. ಕಥೆಗೆ ಪೂರಕವಾಗಿರುವಂತಹ ಹಿನ್ನೆಲೆ ಸಂಗೀತವೂ ಇದೆ. ಇವು ಸಿನಿಮಾದ ವೇಗವನ್ನು ಮತ್ತಷ್ಟು ಹೆಚ್ಚಿಸಿವೆ. ಇನ್ನು, ಇಂತಹ ಚಿತ್ರಗಳಿಗೆ ಸಂಕಲನ ಕೂಡ ಮುಖ್ಯ. ಅದಿಲ್ಲಿ ಎದ್ದು ಕಾಣುತ್ತದೆ. ಪ್ರತಿ ಫ್ರೇಮ್ ಕೂಡ ಬ್ಯೂಟಿಫುಲ್ ಫ್ಲವರ್‌ನಂತಿವೆ. ಆಕ್ಷನ್ ಇದ್ದರೂ, ಚೆಂದದ ಗೆಳೆತನವೇ ಇಲ್ಲಿ ಕಾಡುತ್ತದೆ. ಸಿನಿಮಾ ನೋಡುವ ಮಂದಿ ಎಲ್ಲೋ ಒಂದು ಕಡೆ ಭಾವುಕರಾಗುತ್ತಾರೆ. ಅದಕ್ಕೆ ಕಾರಣ, ದೇಶಾಭಿಮಾನದ ಡೈಲಾಗ್‌ಗಳು ಮತ್ತು ನಾಯಕನ ಹೋರಾಟದ ಶ್ರಮ. ಇಲ್ಲಿ ಯಾವ ದೃಶ್ಯವೂ ವಿನಾಕಾರಣ ಎನ್ನುವಂತಿಲ್ಲ. ಕಣ್ಣಿಗೆ ಹಬ್ಬದಷ್ಟೇ ಅಂದವಾಗಿರುವ ಸಿನಿಮಾದಲ್ಲಿ ಯಾವುದನ್ನೂ ತೆಗಳುವಂಥದ್ದಿಲ್ಲ. ಒಟ್ಟಾರೆ ಜೇಮ್ಸ್ ಒಂದು ವರ್ಗಕ್ಕೆ ಸೀಮಿತವಾದ ಸಿನಿಮಾವಂತೂ ಅಲ್ಲ. ಎಲ್ಲರೂ ಪ್ರೀತಿಯಿಂದ “ಅಪ್ಪುʼವಂತಹ ಸಿನಿಮಾ ಅನ್ನುವುದಕ್ಕೆ ಇಲ್ಲಿ ನಾನಾ ಕಾರಣಗಳಿವೆ. ಅದನ್ನು ತಿಳಿಯುವುದಕ್ಕಾದರೂ ಒಂದೊಮ್ಮೆ ಜೇಮ್ಸ್ ನೋಡಿ ಜೈ ಅಂದು ಬಿಡಿ.
ಕಥೆ ಏನು? ಚಿತ್ರದ ನಾಯಕ ಸಂತೋಷ್ (ಪುನೀತ್ ರಾಜಕುಮಾರ್) ಒಬ್ಬ ಸೋಲ್ಜರ್. ದೇಶ ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ವ್ಯಕ್ತಿತ್ವ. ಚಿಕ್ಕಂದಿನಲ್ಲೇ ಘಟನೆಯೊಂದರಲ್ಲಿ ಐದು ಫ್ಯಾಮಿಲಿಗಳನ್ನು ಕಳೆದುಕೊಳ್ಳುವ ಐವರು ಹುಡುಗರು ಅನಾಥರಾಗುತ್ತಾರೆ. ಅಲ್ಲೊಬ್ಬ ಮಿಲಿಟರಿ ಅಧಿಕಾರಿ ಅನಾಥರಾಗಿ ಅಳುವ ಆ ಹುಡುಗರ ಕಣ್ಣೀರು ಒರೆಸಿ, ಅವರ ಗೆಳೆತನಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿಂದ ಸಿನಿಮಾ ಇನ್ನೊಂದು ಘಟ್ಟಕ್ಕೆ ತಲುಪುತ್ತೆ. ಆ ಐವರು ಗೆಳೆಯರು ಚೆನ್ನಾಗಿ ಓದಿಕೊಂಡು ಉನ್ನತ ಹುದ್ದೆ ಅಲಂಕರಿಸುತ್ತಾರೆ. ಆ ಪೈಕಿ ಸಂತೋಷ್ ಮೇಜರ್ ಆಗಿ ದೇಶ ಸೇವೆಗೆ ನಿಲ್ಲುತ್ತಾರೆ. ಹೀಗಿರುವಾಗ, ಆ ಮೇಜರ್ ಸಂತೋಷ್‌ನ ನಾಲ್ವರು ಗೆಳೆಯರು ಹಾಗು ಕುಟುಂಬ, ಮಕ್ಕಳನ್ನು ಹತ್ಯೆ ಮಾಡಲಾಗುತ್ತೆ. ಯಾಕೆ ಅನ್ನುವುದಕ್ಕೆ ಒಂದು ಕಾರಣವೂ ಇದೆ. ಆ ಕಾರಣ ಹೇಳುವುದಕ್ಕಿಂತ ಅದನ್ನು ತೆರೆ ಮೇಲೆ ನೋಡಬೇಕು. ನಂತರದಲ್ಲಿ ಆ ಮೇಜರ್ ಯಾಕೆ ರೆಬೆಲ್ ಆಗ್ತಾನೆ ಅನ್ನೋದಕ್ಕೆ ಬಲವಾದ ಕಾರಣವೂ ಇದೆ. ಇಲ್ಲಿ ಒಬ್ಬಿಬ್ಬರು ವಿಲನ್‌ಗಳಿಲ್ಲ. ರಾಶಿ ರಾಶಿ ವಿಲನ್‌ಗಳಿದ್ದಾರೆ. ಅವರೆಲ್ಲರನ್ನೂ ಒಬ್ಬ ಸೋಲ್ಜರ್ ಬಗ್ಗು ಬಡಿಯುತ್ತಾನೆ. ಅಂಥದ್ದೊಂದು ದೊಡ್ಡ ಕ್ರೈಮ್ ಹಿನ್ನೆಲೆಯ ವಿಲನ್‌ಗಳಿಗೂ ಆ ಸೋಲ್ಜರ್‌ಗು ಏನು ನಂಟು ಎಂಬುದಕ್ಕೂ ಸಿನಿಮಾ ನೋಡಲೇಬೇಕು.
ತಾಂತ್ರಿಕತೆ ಹೇಗಿದೆ? ಒಂದು ಸಿನಮಾಗೆ ಮುಖ್ಯವಾಗಿ ಬೇಕಿರೋದು ಕಥೆ. ಅದರ ಜೊತೆಗೆ ಗುಣಮಟ್ಟ. ಇಲ್ಲಿ ಛಾಯಾಗ್ರಹಣ ಅಲ್ಟಿಮೇಟ್ ಆಗಿದೆ. ಸಂಗೀತ ಕೂಡ ಖುಷಿ ಕೊಡುತ್ತದೆ. ಸಿನಿಮಾ ಸ್ಪೀಡ್ ಆಗಿ ಹೋಗುತ್ತೆ ಅಂದರೆ ಅದಕ್ಕೆ ಕತ್ತರಿ ಪ್ರಯೋಗವೂ ಕಾರಣ. ಇನ್ನು, ದೊಡ್ಡ ದೊಡ್ಡ ಸೆಟ್‌ಗಳು ಕೂಡ ಅದ್ಧೂರಿತನಕ್ಕೆ ಸಾಕ್ಷಿಯಾಗಿವೆ. ಪರಭಾಷೆ ಸಿನಿಮಾಗಳನ್ನು ನೋಡಿ ಹಾಗೆ, ಹೀಗೆ ಅನ್ನುವ ಮಂದಿಗೆ ಜೇಮ್ಸ್ ತಕ್ಕ ಉತ್ತರ ನೀಡಿದೆ. ಇಲ್ಲಿ ಎಲ್ಲವೂ ಹೈಫೈ. ಪ್ರತಿ ಪಾತ್ರಗಳನ್ನೂ ಸ್ಟೈಲಿಶ್ ಆಗಿಯೇ ತೋರಿಸಲಾಗಿದೆ. ಎಷ್ಟು ವೆಪನ್ಸ್‌ಗಳಿವೆಯೋ ಅಷ್ಟೇ ಪಾತ್ರಗಳೂ ಇಲ್ಲಿ ಬಂದು ಹೋಗುತ್ತವೆ. ಇಲ್ಲಿ ಮುಖ್ಯವಾಗಿ ಹೇಳಬೇಕಾದ್ದೆಂದರೆ, ಅದು ಸ್ಟಂಟ್ಸ್. ಜೇಮ್ಸ್ ಅನ್ನುವ ಶೀರ್ಷಿಕೆಗೆ ತಕ್ಕಂತೆ ಕಥೆ, ಪಾತ್ರವಿದೆ. ಅದಕ್ಕೆ ತಕ್ಕಂತೆಯೇ ಆಕ್ಷನ್ ಸೀಕ್ವೆನ್ಸ್ ಕೂಡ ಇದೆ. ಒಂದೊಂದು ಫೈಟ್ ಕೂಡ ಅದ್ಧೂರಿಯಾಗಿವೆ. ಜೊತೆಗೆ ರಿಸ್ಕೀ ಸ್ಟಂಟ್ ಎಂಥವರನ್ನೂ ಅಬ್ಬಬ್ಬಾ ಅನಿಸುವಷ್ಟರ ಮಟ್ಟಿಗೆ ಸ್ಟಂಟ್ ಮಾಸ್ಟರ್‌ಗಳ ಕೆಲಸ ಎದ್ದು ಕಾಣುತ್ತದೆ. ಸ್ಟಂಟ್ಸ್ ಇಲ್ಲಿ ಎಕ್ಸಲೆಂಟ್ ಅನ್ನೋದೇ ವಿಶೇಷ. ಕಾಸ್ಟ್ಯೂಮ್ಸ್ ಬಗ್ಗೆ ಹೇಳಲೇಬೇಕು. ಪ್ರತಿ ಪಾತ್ರಗಳೂ ಇಲ್ಲಿ ರಿಚ್! ಒಟ್ಟಾರೆ, ಜೇಮ್ಸ್ ತಾಂತ್ರಿಕತೆಯಲ್ಲೂ ಶ್ರೀಮಂತ ಎಂಬುದನ್ನು ಸಾಬೀತುಪಡಿಸಿದೆ.
ಯಾರು ಹೇಗೆ? ಇಲ್ಲಿ ಪುನೀತ್ ರಾಜಕುಮಾರ್ ಅವರು ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಒಬ್ಬ ಗೆಳೆಯನಾಗಿ, ಪ್ರೇಮಿಯಾಗಿ, ದೇಶ ಕಾಯುವ ಯೋಧನಾಗಿ ಇಷ್ಟವಾಗುತ್ತಾರೆ. ಡ್ಯಾನ್ಸ್ ಮತ್ತು ಫೈಟ್‌ನಲ್ಲಿ ಎಂದಿಗಿಂತಲೂ ಖುಷಿ ಕೊಡುತ್ತಾರೆ. ಇನ್ನು, ಅವರ ಖಡಕ್ ಮಾತುಗಳಿಗೆ ಶಿವರಾಜಕುಮಾರ್ ಧ್ವನಿಯಾಗಿದ್ದಾರೆ. ಎಲ್ಲೂ ಕೂಡ ಪುನೀತ್ ಧ್ವನಿ ಮಿಸ್ಸೇ ಇಲ್ಲ ಎಂಬಂತೆ ಆ ಧ್ವನಿ ಸೆಟ್ ಆಗಿರೋದು ಇನ್ನೊಂದು ವಿಶೇಷ. ಪ್ರಿಯಾ ಆನಂದ್ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಶರತ್ ಕುಮಾರ್, ಶ್ರೀಕಾಂತ್,ಮುಖೇಶ್ ರಿಷಿ, ಆದಿತ್ಯ ಮೆನನ್, ರಣಗಾಯಣ ರಘು, ಸಾಧುಕೋಕಿಲ, ಅವಿನಾಶ್, ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ, ಶೈನ್ ಶೆಟ್ಟಿ, ತಿಲಕ್, ಚಿಕ್ಕಣ್ಣ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಶಿವರಾಜಕುಮಾರ್ ಕೂಡ ಇಲ್ಲಿ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ರಾಘವೇಂದ್ರ ರಾಜಕುಮಾರ್ ಪಾತ್ರ ಕೂಡ ಗಮನಸೆಳೆಯುತ್ತದೆ. ಯಾವ ಪಾತ್ರವೂ ಇಲ್ಲಿ ವೇಸ್ಟ್ ಎನಿಸದಂತೆ, ಎಲ್ಲವನ್ನೂ ಅಚ್ಚುಕಟ್ಟಾಗಿಯೇ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಕೊನೆ ಮಾತು:ಕಣ್ಣು, ಕಿವಿ ಮತ್ತು ಹೃದಯಕ್ಕೆ ಹತ್ತಿರವಾಗುವ ಸಿನಿಮಾ.
ಗಾಯಕ ಕಮ್ ಸಂಗೀತ ನಿರ್ದೇಶಕ ನವೀನ್ ಸಜ್ಜು ಅವರು ಹೀರೋ ಆಗಿರುವ ವಿಷಯ ಗೊತ್ತೇ ಇದೆ. ಅವರ ಹೊಸ ಚಿತ್ರಕ್ಕೆ ವಿಭಿನ್ನ ಶೀರ್ಷಿಕೆ ಇಡಲಾಗಿದೆ. ಅಷ್ಟಕ್ಕೂ ನವೀನ್ ಸಜ್ಜು ಅವರ ಸಿನಿಮಾ ಹೆಸರೇನು? ಅದಕ್ಕೆ ಉತ್ತರ, “ಮ್ಯಾನ್ಷನ್ ಹೌಸ್ ಮುತ್ತು” ಈ ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ನೆನಪಾಗೋದೇ ಎಣ್ಣೆ! ಹೌದು, ಈಗಾಗಲೇ ನವೀನ್ ಸಜ್ಜು ಅವರು “ಎಣ್ಣೆ ನಮ್ದು ಊಟ ನಿಮ್ದು” ಎಂದು ಹಾಡಿ ಕುಣಿದಿದ್ದಾರೆ. ಈಗ ಅವರೇ “ಮ್ಯಾನ್ಷನ್ ಹೌಸ್ ಮುತ್ತು” ಎಂಬ ಚಿತ್ರಕ್ಕೆ ಹೀರೋ ಆಗಿದ್ದಾರೆ. ಇದೊಂದು ಕಾಮಿಡಿ ಕಮ್ ಮೆಲೊ ಡ್ರಾಮ ಸಿನಿಮಾ. ಈ ಸಿನಿಮಾಗೆ ಕುಮಾರ್ ನಿರ್ದೇಶಕರು. ಈ ಹಿಂದೆ ಇವರು “ಕೆಮಿಸ್ಟ್ರಿ ಆಫ್ ಕರಿಯಪ್ಪ” ಮಾಡಿದ್ದರು. ಅವರ ಎರಡನೇ ಸಿನಿಮಾ “ಕ್ರಿಟಿಕಲ್ ಕೀರ್ತನೆಗಳು” ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಏಪ್ರಿಲ್ ವೇಳೆಗೆ ಬರಲಿದೆ. ಈಗ ನವೀನ್ ಸಜ್ಜು ಅವರಿಗಾಗಿ “ಮ್ಯಾನ್ಷನ್ ಹೌಸ್ ಮುತ್ತು” ಎಂಬ ಸಿನಿಮಾ ಮಾಡುತ್ತಿದ್ದಾರೆ. ಇವರಿಗೆ ಕೇಸರಿ ಫಿಲ್ಮ್ ಕ್ಯಾಪ್ಚರ್ ನಿರ್ಮಾಣ ಸಂಸ್ಥೆ ಸಾಥ್ ನೀಡಿದ್ದು, ಚಿತ್ರವನ್ನು ನಿರ್ಮಿಸುತ್ತಿದೆ.
ತಮ್ಮ ಸಿನಿಮಾ ಕುರಿತು ಹೇಳುವ ನಿರ್ದೇಶಕ ಕುಮಾರ್, “ಮ್ಯಾನ್ಷನ್ ಹೌಸ್ ಮುತ್ತು” ಚಿತ್ರದ ಚಿತ್ರೀಕರಣ ಬಹುತೇಕ ಮಡಿಕೇರಿ ಸುತ್ತಮುತ್ತ ನಡೆದಿದೆ. ನನ್ನ ಈ ಹಿಂದಿನ ಸಿನಿಮಾ “ಕೆಮಿಸ್ಟ್ರಿ ಆಫ್ ಕರಿಯಪ್ಪ” ಬೇರೆ ಜಾನರ್ ಸಿನಿಮಾ ಆಗಿತ್ತು. ಇನ್ನು,ಮ “ಕ್ರಿಟಿಕಲ್ ಕೀರ್ತನೆಗಳು” ಕೂಡ ಹೊಸ ಬಗೆಯ ಕಥೆ ಇರುವ ಸಿನಿಮಾ. “ಮ್ಯಾನ್ಷನ್ ಹೌಸ್ ಮುತ್ತು” ಕೂಡ ಈಗಿನ ಟ್ರೆಂಡ್‌ಗೆ ಇರುವ ಚಿತ್ರ. ಇದೊಂದು ರೀತಿ ಪ್ರಕೃತಿ ಜೊತೆ ಸಾಗುವ ಮತ್ತು ಪ್ರಕೃತಿಯನ್ನು ಅನುಭವಿಸುವ ಚಿತ್ರ. ಹೊಸದೊಂದು ರೆವಿಲ್ಯೂಷನ್ ವಿಷಯ ಇಲ್ಲಿದೆ. ಇನ್ನು ಯಥಾ ಪ್ರಕಾರ ನನ್ನ ಸಿನಿಮಾದಲ್ಲಿ ಮಾತುಗಳಿಗೆ ಹೆಚ್ಚು ಆದ್ಯತೆ ಇರುತ್ತದೆ. ಇಲ್ಲೂ ಅದು ಮುಂದುವರೆದಿದೆ.
ನವೀನ್ ಸಜ್ಜು ಅವರು ಪಾತ್ರಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನೂ ನೀಡಿದ್ದಾರೆ. ಒಂದು ರೀತಿ ಇಡೀ ಸಿನಿಮಾದ ಮುಖ್ಯ ಆಕರ್ಷಣೆ ಅವರು ಎನ್ನುವ ನಿರ್ದೇಶಕ ಕುಮಾರ್, ಚಿತ್ರಕ್ಕೆ ನವೀನ್‌ಕುಮಾರ್ ಚೆಲ್ಲ ಛಾಯಾಗ್ರಹಣ ಮಾಡಿದರೆ, ನವೀನ್ ಸಜ್ಜುಅವರೇ ಇಲ್ಲಿ ಸಂಗೀತ ನೀಡಲಿದ್ದಾರೆ. ವೆಂಕಟೇಶ್ ಯುಡಿ ಸಂಕಲನವಿದೆ. ಉಳಿದಂತೆ ಚಿತ್ರದಲ್ಲಿ ಬೆಲ್ ಬಾಟಂ ಸತೀಶ್, ಗಿರೀಶ್, ಸಮೀಕ್ಷಾ, ವಿಜೇತ್ ಸೇರಿದಂತೆ ಹಲವು ಕಲಾವಿದರು ಇದ್ದಾರೆ. “ಮ್ಯಾನ್ಷನ್ ಹೌಸ್ ಮುತ್ತು” ಒಂದೊಳ್ಳೆಯ ಥ್ರಿಲ್ಲರ್ ಕಾಮಿಡಿ ಸಿನಿಮಾ. ಹಾಸ್ಯದ ಜೊತೆಗೆ ಒಂದಷ್ಟು ಸಂದೇಶ ಸಾರುವ ಅಂಶಗಳೂ ಇವೆ ಎನ್ನುತ್ತಾರೆ ಕುಮಾರ್.
ಎ.ಪಿ. ಅರ್ಜುನ್ ನಿರ್ದೇಶನದ ಅದ್ಧೂರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಧ್ರುವ ಸರ್ಜಾ, ಮತ್ತೊಮ್ಮೆ ಅದೇ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದಾರೆ. ಅದು ಮಾರ್ಟಿನ್. ವಾಸವಿ ಎಂಟರ್ ಪ್ರೈಸಸ್ ಮೂಲಕ ಉದಯ್ ಕೆ.ಮೆಹ್ತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಚಿತ್ರೀಕರಣ ಈಗ ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ಒಂದು ವಾರದಿಂದ ನಡೆಯುತ್ತಿದೆ.
ಕಳೆದ 8 ದಿನಗಳಿಂದ ಕಾಶ್ಮೀರದಲ್ಲಿ ಮೈನಸ್ 7 ಡಿಗ್ರಿ ತಾಪಮಾನ ಇರುವ ಲೊಕೇಶನ್ ಗಳಲ್ಲಿ ಚಿತ್ರತಂಡ ಶೂಟಿಂಗ್ ನಡೆಸುತ್ತಿದೆ. ಕಾಶ್ಮೀರದ ಐಸ್ ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್ ಗಳನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಚಿತ್ರೀಕರಣದಲ್ಲಿ ನಾಯಕ ಧೃವಸರ್ಜಾ, ನಾಯಕಿ ವೈಭವಿ ಶಾಂಡಿಲ್ಯ, ಚಿಕ್ಕಣ್ಣ ಹಾಗೂ ಸಹ ಕಲಾವಿದರುಗಳು ಭಾಗವಹಿಸಿದ್ದಾರೆ. ಆಕ್ಷನ್ ಸೀನ್ ಜೊತೆಗೆ ಮಾತಿನಭಾಗ ಸೇರಿದಂತೆ ಚಿತ್ರದ ಪ್ರಮಖವಾದ ದೃಶ್ಯಗಳನ್ನು ಅಲ್ಲಿ ಸೆರೆ ಹಿಡಿಯಲಾಗುತ್ತಿದೆ.
ಇನ್ನೂ 8 ದಿನಗಳ ಕಾಲ ಅಲ್ಲೇ ಶೂಟಿಂಗ್ ನಡೆಸಲಿರುವ ಮಾರ್ಟಿನ್ ಚಿತ್ರತಂಡ ಒಟ್ಟು 16 ದಿನಗಳ ಶೂಟಿಂಗ್ ಶೆಡ್ಯೂಲ್ ಹಾಕಿಕೊಂಡಿದೆ. ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಅವರು ಹೊಸ ಮಾದರಿಯ ಮೇಕಿಂಗ್ ಟ್ರೈ ಮಾಡಿದ್ದಾರೆ.
ಎಲ್ಲಾ ಭಾಗಕ್ಕೂ ಸಲ್ಲುವ ಕಥೆ ಇದಾಗಿರುವುದರಿಂದ, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಾರ್ಟಿನ್ ಚಿತ್ರ ನಿರ್ಮಾಣವಾಗುತ್ತಿದೆ. ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿರುವ ಮಣಿಶರ್ಮಾ ಅವರು ಸಂಗೀತ ನೀಡುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣವಿದೆ. ಮಹೇಶ್ ರೆಡ್ಡಿ ಸಂಕಲನವಿದೆ.
ದೇವರಾಜ್ ಕುಮಾರ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ “ತಾಜ್ ಮಹಲ್ 2” ಚಿತ್ರದ ಹಾಡುಗಳನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
“ನೀನು ಎಷ್ಟು ಕಷ್ಟಪಟ್ಟೆ ಎಂಬುದು ಮುಖ್ಯವಲ್ಲ. ತೆರೆ ಮೇಲೆ ನೀನು ಪ್ರೇಕ್ಷಕರಿಗೆ ಏನು ತೋರಿಸಿ, ಅವರ ಮನ ಗೆಲ್ಲುತ್ತೀಯಾ ಎನ್ನುವುದು ಮುಖ್ಯ ಎಂದು ಶ್ರೀಮುರಳಿ ಅವರು ಹಿಂದೊಮ್ಮೆ ಹೇಳಿದ್ದರು. ಆ ಮಾತೇ ನನಗೆ ಸ್ಪೂರ್ತಿ. ನಾಯಕಿಯಾಗಿ ಸಮೃದ್ಧಿ ಶುಕ್ಲ ಅಭಿನಯಿಸಿದ್ದಾರೆ. ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ. ಮನ್ವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದಾರೆ ಹಾಗೂ ತಮ್ಮದೇ ಹೊಸ ಸಂಸ್ಥೆಯ ಮೂಲಕ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ವಿಕ್ರಮ್ ಸೆಲ್ವ ಸಂಗೀತವಿದೆ. ಜೂನ್ ನಲ್ಲಿ ಚಿತ್ರ ಬಿಡುಗಡೆ ಮಾಡು ವುದಾಗಿ ನಿರ್ದೇಶಕ ಕಮ್ ನಾಯಕ ದೇವರಾಜ್ ಕುಮಾರ್ ಹೇಳಿದರು.
ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ, ಭಾ.ಮ.ಹರೀಶ್ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ವಿಜಯ್ ಸಿಂಹ, ವಿಕ್ಟರಿ ವಾಸು, ಭಾ.ಮ.ಗಿರೀಶ್, ಸುನೀಲ್ ಇತರರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಹಾಡುಗಳನ್ನು ಬರೆದಿರುವ ಮನ್ವರ್ಷಿ ನವಲಗುಂದ ಹಾಡುಗಳ ಹಾಗೂ ಹಾಡಿದವರ ಬಗ್ಗೆ ಮಾಹಿತಿ ನೀಡಿದರು.
ಚಿತ್ರ : ಡಿಯರ್ ಸತ್ಯ ನಿರ್ದೇಶಕ : ಶಿವಗಣೇಶ್ ನಿರ್ಮಾಣ : ಪರ್ಪಲ್ ರಾಕ್ ಎಂಟರ್ ಟೈನರ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋ ತಾರಾಗಣ : ಆರ್ಯನ್ ಸಂತೋಷ್, ಅರ್ಚನಾ ಕೊಟ್ಟಿಗೆ, ಅರುಣಾ ಬಾಲರಾಜ್ , ಅಶ್ವಿನ್ ರಾವ್ , ರಂಗಿತರಂಗ ಅರವಿಂದ್ ಇತರರು.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮರ್ಡರ್ ಮಿಸ್ಟ್ರಿ ಸಿನಿಮಾಗಳು ಬಂದಿವೆ. ಆ ಸಾಲಿಗೆ ಡಿಯರ್ ಸತ್ಯ ಕೂಡ ಒಂದು. ಆದರೆ, ಇದೊಂದು ವಿಭಿನ್ನ ಕಥಾಹಂದರದ ಸಿನಿಮಾ. ಇಲ್ಲಿ ನವಿರಾದ ಪ್ರೀತಿ ಇದೆ, ಅಪ್ಪುಗೆಯ ಗೆಳೆತನವಿದೆ. ತಾಯಿಯ ಮಮಕಾರವಿದೆ. ಒಂದಷ್ಟು ದ್ವೇಷ, ಅಸೂಯೆ ಕೂಡ ಇಲ್ಲಿದೆ. ಒಟ್ಟಾರೆ ಒಂದೇ ಮಾತಲ್ಲಿ ಹೇಳುವುದಾದರೆ, ಡಿಯರ್ ಸತ್ಯ ಹೊಸದೊಂದು ಫೀಲ್ ಕೊಡುವ ಸಿನಿಮಾ. ಒಂದಷ್ಟು ಭಾವುಕತೆಯ ಜೊತೆಯಲ್ಲೇ ಸಾಗುವ ಚಿತ್ರ ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡಿಬಿಡುತ್ತದೆ.
ಕಥೆ ತುಂಬಾನೇ ಸರಳ. ಆದರೆ, ನಿರ್ದೇಶಕ ಶಿವಗಣೇಶ್ ಅವರ ನಿರೂಪಣೆ ಇಲ್ಲಿ ಹೈಲೈಟ್. ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿವೆ. ಅದಕ್ಕೆ ಕಾರಣ, ಮತ್ತದೇ ಸ್ಕ್ರೀನ್ ಪ್ಲೇ. ಚಿತ್ರದ ಹೀರೋ ತಾನು ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುತ್ತಾನೆ. ಆದರೆ, ಆತ ಮಾಡಿದ ತಪ್ಪಾದರೂ ಏನು? ಈ ಪ್ರಶ್ನೆಗೆ ಉತ್ತರ ಒಂದೊಮ್ಮೆ ಸಿನಿಮಾ ನೋಡಲೇಬೇಕು. ಸಿನಿಮಾ ರಿವರ್ಸ್ ಸ್ಕ್ರೀನ್ ಪ್ಲೇನಲ್ಲಿ ಸಾಗುತ್ತ ಹೋಗುತ್ತೆ. ಆಗಾಗ ಫ್ಲ್ಯಾಷ್ ಬ್ಯಾಕ್ ಸ್ಟೋರಿ ಚಿತ್ರದ ವೇಗಕ್ಕೊಂದು ಕಾರಣವಾಗುತ್ತದೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಹಾಗಂತ, ಹೊಡಿ ಬಡಿ ಕಡಿ ಇದ್ದರೂ, ಇಲ್ಲೊಂದು ನಿಷ್ಕಲ್ಮಷ ಪ್ರೀತಿ ಇದೆ. ಆಪ್ತವೆನಿಸೋ ಗೆಳೆತನವಿದೆ. ಮಧ್ಯಮವರ್ಗದ ತಾಯಿ ಮಗನ ಬಾಂಧವ್ಯದ ಬೆಸುಗೆಯೂ ಇದೆ. ಹೀರೋ ಇಲ್ಲಿ ಫುಡ್ ಡೆಲಿವರಿ ಬಾಯ್ ಕೆಲಸ ಮಾಡುತ್ತಲೇ ತನ್ನ ಸುಂದರ ಬದುಕು ಕಟ್ಟಿಕೊಂಡಾತ. ಅವನಿಗೆ ಅರಿವಿಲ್ಲದೆಯೇ ಹುಡುಗಿಯೊಬ್ಬಳ ಮೊದಲ ನೋಟಕ್ಕೆ ಪ್ರೀತಿ ಹುಟ್ಟಿಸಿಕೊಳ್ಳುತ್ತಾನೆ. ತನ್ನ ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂಬ ಕನಸು ಕಾಣುವ ಹೀರೋ, ತನ್ನ ಪ್ರೀತಿಯನ್ನೂ ಸಹ ಕಾಪಾಡಿಕೊಂಡು, ಅವಳನ್ನು ಕೈ ಹಿಡಿದು ಬದುಕಬೇಕೆಂದು ಆಸೆಪಡುವ ಹೀರೋಗೆ ಅದು ಸಾಧ್ಯವಾಗುವುದಿಲ್ಲ. ಯಾಕೆ ಅನ್ನೋದು ಸಸ್ಪೆನ್ಸ್.
ತಾನು ಪ್ರೀತಿಸುವ ಹುಡುಗಿಯನ್ನು ಇನ್ನೇನು ತನ್ನ ತಾಯಿಗೆ ಪರಿಚಯಿಸಿ, ಮದುವೆ ಆಗಬೇಕು ಅಂದುಕೊಳ್ಳುವ ನಾಯಕನ ಬದುಕಲ್ಲಿ ಒಂದು ಘೋರ ಘಟನೆ ನಡೆದು ಹೋಗುತ್ತದೆ. ಅದೇ ಇಡೀ ಚಿತ್ರದ ಹೈಲೈಟ್. ಆ ಘಟನೆ ಬಳಿಕ ಏನೆಲ್ಲಾ ನಡೆಯುತ್ತೆ ಅನ್ನೋದೇ ಸಿನಿಮಾದ ವಿಶೇಷ. ಸಿನಿಮಾದಲ್ಲೊಂದು ಕೊಲೆಯಾಗುತ್ತೆ. ಆ ಕೊಲೆ ನಾಯಕನ ಮೇಲೆ ಹೋಗುತ್ತೆ. ಅಲ್ಲಿಂದ ಹೊರಬಂದು, ಆ ಕೊಲೆಗಾರರು ಯಾರು ಅನ್ನುವುದನ್ನು ಹೀರೋ ಕಂಡು ಹಿಡಿಯುತ್ತಾನೆ. ಆ ಬಳಿಕ ಏನೆಲ್ಲಾ ನಡೆದು ಹೋಗುತ್ತೆ ಎಂಬ ಕುತೂಹಲ ಇದ್ದರೆ, ಸಿನಿಮಾ ನೋಡಬಹುದು. ಇಷ್ಟಕ್ಕೂ ಆ ಕೊಲೆ ಯಾರದ್ದು? ಯಾರು ಮಾಡುತ್ತಾರೆ? ನಾಯಕ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತಾನೋ ಇಲ್ಲವೋ ಅನ್ನೋದು ಕಥೆ.
ಇನ್ನು, ಚಿತ್ರದ ಟೆಕ್ನಿಕಲ್ ವಿಷಯಕ್ಕೆ ಬರುವುದಾದರೆ, ಚಿತ್ರದ ಕ್ಯಾಮೆರಾ ಕೆಲಸ ಸೊಗಸಾಗಿದೆ. ಶ್ರೀಧರ್ ವಿ.ಸಂಭ್ರಮ್ ಅವರ ಸಂಗೀತ ಇಲ್ಲಿ ಮಾತಾಡುವಂತಿದೆ. ಎರಡು ಹಾಡುಗಳು ಗುನುಗುವಂತಿವೆ. ಇನ್ನು, ಚಿತ್ರದ ಸಂಕಲನ ಕೆಲಸ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ. ನಾಯಕ ಆರ್ಯನ್ ಸಂತೋಷ್ ಈ ಚಿತ್ರದ ಮೂಲಕ ಎಂದಿಗಿಂತಲೂ ಲುಕ್ ಆಗಿ ಕಾಣುತ್ತಾರೆ. ಅಷ್ಟೇ ಆ್ಯಂಗ್ರಿ ಯಂಗ್ ಮ್ಯಾನ್ ಆಗಿಯೂ ಕಾಣಿಸಿಕೊಂಡಿದ್ದಾರೆ. ತಮಗೆ ಸಿಕ್ಕ ಪಾತ್ರವನ್ನು ಲವ್ಲಿಯಾಗಿಯೇ ನಿರ್ವಹಿಸಿದ್ದಾರೆ. ಡ್ಯಾನ್ಸ್ ಮತ್ತು ಫೈಟ್ ವಿಚಾರದಲ್ಲಿ ಇಷ್ಟವಾಗುತ್ತಾರೆ. ಇನ್ನು, ನಾಯಕಿ ಅರ್ಚನಾ ಕೊಟ್ಟಿಗೆ ಅವರು ಸಹ ಸ್ಕ್ರೀನ್ ಮೇಲೆ ಮುದ್ದಾಗಿ ಕಾಣುತ್ತಾರೆ. ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ. ಕೆಲವು ಕಡೆ ಇನ್ನಷ್ಟು ಎಫರ್ಟ್ ಬೇಕಿತ್ತು ಎನಿಸುತ್ತದೆ. ತಾಯಿಯಾಗಿ ಅರುಣಾ ಬಾಲರಾಜ್ ಇರುವಷ್ಟು ಹೊತ್ತು ಇಷ್ಟವಾಗುತ್ತಾರೆ. ಗುರುರಾಜ್ ಹೊಸಕೋಟೆ , ಪಾಪಣ್ಣ, ಸೇರಿದಂತೆ ಒಂದಷ್ಟು ಹೊಸ ಬಗೆಯ ಪಾತ್ರಗಳಿಲ್ಲಿ ಗಮನಸೆಳೆಯುತ್ತವೆ.
ಆಸ್ಕರ್ ಕೃಷ್ಣ ನಟಿಸಿ, ನಿರ್ದೇಶಿಸಿ, ಗೌತಮ್ ರಾಮಚಂದ್ರ ಅವರೊಡನೆ ಸೇರಿ ನಿರ್ಮಿಸುತ್ತಿರುವ ಹೊಸ ಚಿತ್ರ “ಕೃತ್ಯ” ಶೀರ್ಷಿಕೆಯನ್ನು ರೋರಿಂಗ್ ಸ್ಟಾರ್ “ಶ್ರೀಮುರಳಿ” ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರತಂಡದೊಂದಿಗೆ ಹಿರಿಯ ನಿರ್ಮಾಪಕರಾದ, ಭಾ.ಮ ಹರೀಶ್, ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕರುಗಳಾದ ಭಾ.ಮ ಗಿರೀಶ್, ನರಸಿಂಹರಾಜು ಜೊತೆಯಲ್ಲಿದ್ದರು.
ಸುನಿಲ್ ಕುಮಾರ್, ವಿಜಯ ಕುಮಾರ್ ಸಿಂಹ, ಟಿಪ್ಪುವರ್ಧನ್ ಇನ್ನಿತರರು ಉಪಸ್ಥಿತರಿದ್ದರು. ಚಿತ್ರದ ಉಳಿದ ವಿವರಗಳನ್ನು ಹಂತ ಹಂತವಾಗಿ ವಿವರಿಸುವುದಾಗಿ ನಿರ್ದೇಶಕ ಆಸ್ಕರ್ ಕೃಷ್ಣ ತಿಳಿಸಿದ್ದಾರೆ.