ಗೆಳೆತನ + ಪ್ರೀತಿ + ದೇಶಾಭಿಮಾನ = ಜೇಮ್ಸ್!

  • ವಿಜಯ್‌ ಭರಮಸಾಗರ

ಚಿತ್ರ ವಿಮರ್ಶೆ: ಜೇಮ್ಸ್‌

ನಿರ್ದೇಶನ: ಚೇತನ್‌ ಕುಮಾರ್‌
ನಿರ್ಮಾಣ: ಕಿಶೋರ್‌ ಪತ್ತಿಕೊಂಡ
ತಾರಾಗಣ : ಪುನೀತ್‌ ರಾಜಕುಮಾರ್‌, ಪ್ರಿಯಾ ಆನಂದ್‌, ಶ್ರೀಕಾಂತ್‌, ಶರತ್‌, ಅನುಪ್ರಭಾಕರ್‌,ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಅವಿನಾಶ್‌ ಇತರರು.

ವಿಲನ್:‌ “ನನ್‌ ಜೊತೆ ಕಾಂಪಿಟೇಟ್‌ ಮಾಡಿರೋರು ಯಾರೂ ಗೆದ್ದಿರೋ ರೆಕಾರ್ಡ್ಸೇ ಇಲ್ಲ…
ಹೀರೋ: ನನಗೆ ಮೊದಲಿನಿಂದಲೂ ರೆಕಾರ್ಡ್ಸ್‌ ಬ್ರೇಕ್ ಮಾಡಿ‌ ಅಭ್ಯಾಸ…

ಇದು ಜೇಮ್ಸ್‌ ಚಿತ್ರದಲ್ಲಿ ಬರೋ ಖಡಕ್ ಡೈಲಾಗ್.‌ ವಿಲನ್‌ ಹೇಳೋ ಡೈಲಾಗ್‌ಗೆ,‌ ಹೀರೋ ಕೌಂಟರ್‌ ಇದು. ಹೌದು, ಒಂದೇ ಮಾತಲ್ಲಿ ಹೇಳುವುದಾದರೆ ಜೇಮ್ಸ್‌ ಅದ್ಧೂರಿಯ ಜೊತೆಗೆ ಒಂದೊಳ್ಳೆಯ ಸಂದೇಶ ಇರುವ ಸಿನಿಮಾ. ಇಡೀ ಸಿನಿಮಾದ ಜೀವಾಳ ಪುನೀತ್.‌ ಸಿನಿಮಾ ನೋಡಿದವರಿಗೆ ಪುನೀತ್‌ ಹೊರತಾಗಿ ಬೇರೇನೂ ಅಲ್ಲಿ ಕಾಣಿಸೋದೇ ಇಲ್ಲ. ಅಷ್ಟರ ಮಟ್ಟಿಗೆ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಇಲ್ಲಿ ಏನಿದೆ ಅನ್ನುವುದಕ್ಕಿಂತ ಏನಿಲ್ಲ ಅಂತ ಕೇಳಬೇಕು! ಹೌದು, ಒಂದು ಭರಪೂರ ಭೋಜನ ಎಷ್ಟೊಂದು ಅದ್ಭುತ ಎನಿಸುತ್ತೋ ಅಷ್ಟೊಂದು ಕಲರ್‌ ಫುಲ್‌ ಸಿನಿಮಾ ಇದು ಅಂದರೆ ತಪ್ಪಿಲ್ಲ. ಇಲ್ಲಿ ಗೆಳೆತನವಿದೆ. ಪ್ರೀತಿ ಇದೆ. ದ್ವೇಷ, ಅಸೂಯೆ ಹೆಚ್ಚಾಗಿಯೇ ಇದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ದೇಶಾಭಿಮಾನದ ಕಿಚ್ಚು ಇದೆ. ನೋಡುಗರಿಗೆ ದೇಶಭಕ್ತಿ ಮತ್ತಷ್ಟು ಹೆಚ್ಚಿದರೂ ಅಚ್ಚರಿ ಇಲ್ಲ. ಅಷ್ಟರಮಟ್ಟಿಗೆ ಜೇಮ್ಸ್‌ ಹತ್ತಿರವಾಗುವ ಸಿನಿಮಾ.

ಪುನೀತ್‌ ಸಿನಿಮಾಗಳೆಂದರೆ ಅಲ್ಲಿ ಮನರಂಜನೆ ಹೇರಳವಾಗಿರುತ್ತೆ. ಅಂಥದ್ದೊಂದು ಅದ್ಭುತ ಮನರಂಜನೆಗೆ ಇಲ್ಲಿ ಮೋಸವಿಲ್ಲ. ಇದೊಂದು ಪಕ್ಕಾ ಆಕ್ಷನ್‌ ಪ್ಯಾಕ್ಡ್‌ ಸಿನಿಮಾ. ಮೊದಲರ್ಧ ಸಾಗುವುದೇ ಗೊತ್ತಾಗುವುದಿಲ್ಲ. ಅಪ್ಪು ಅವರ ಖದರ್‌ ಏನೆಂಬುದನ್ನು ಹಿಂದಿನ ಸಿನಿಮಾಗಳಲ್ಲಿ ನೋಡಿರುವ ಫ್ಯಾನ್ಸ್‌ ಇಲ್ಲಿ ಅವರ ಹೊಸ ರೂಪವನ್ನು ಕಾಣಬಹುದು. ಸಿನಿಮಾದುದ್ದಕ್ಕೂ ಚಾಲೆಂಜಿಂಗ್‌ ಎನಿಸುವ ಮತ್ತು ಅಷ್ಟೇ ರಿಸ್ಕ್‌ ಎನಿಸುವ ದೃಶ್ಯಗಳಿವೆ. ಇವೆಲ್ಲವೂ ನೋಡುಗರನ್ನು ಸೀಟಿನ ತುದಿಮೇಲೆ ಕೂರಿಸಿಬಿಡುತ್ತವೆ. ಸಿನಿಮಾದ ಹೈಲೈಟ್‌ ಅಂದರೆ, ಮತ್ತದೇ ಸ್ಟಂಟ್.‌ ಜೇಮ್ಸ್‌ ನೋಡುವಾಗ, ಹೊಸ ಫೀಲ್‌ ಸಿಗೋದು ಗ್ಯಾರಂಟಿ. ಆ ಸಿನಿಮಾದ ರಿಚ್‌ನೆಸ್‌ ಆಗಬಹುದು, ಗುಣಮಟ್ಟ ಇರಬಹುದು, ನೋಡುಗರ ಕಣ್ಣಿಗೆ ಹಬ್ಬ. ಮೊದಲಿಗೆ ಇಲ್ಲಿ ಒಂದೊಳ್ಳೆಯ ಕಥೆ ಇದೆ. ಅದನ್ನು ಅಷ್ಟೇ ಚೆನ್ನಾಗಿಯೇ ನಿರ್ದೇಶಕರು ನಿರೂಪಿಸಿದ್ದಾರೆ. ಚಿತ್ರಕಥೆ ಚಿತ್ರದ ವಿಶೇಷತೆಗಳಲ್ಲೊಂದು. ಇನ್ನು, ಸಿನಿಮಾದಲ್ಲಿ ಖಡಕ್‌ ಡೈಲಾಗ್‌ಗಳೂ ಇವೆ. ಕಚಗುಳಿ ಎನಿಸುವ ಮಾತುಗಳೂ ಇವೆ. ಅದರೊಟ್ಟಿಗೆ ಆಗಾಗ ಮನ ಮಿಡಿಯೋ ದೃಶ್ಯಗಳೂ ಇವೆ. ದೇಶಾಭಿಮಾನ ಹೆಚ್ಚಿಸುವಂತಹ ಸಂದರ್ಭದ ದೃಶ್ಯಗಳೂ ಇವೆ.

ಒಂದು ನೀಟ್‌ ಸಿನಿಮಾಗೆ ಏನೆಲ್ಲಾ ಇರಬೇಕೋ ಆ ಎಲ್ಲಾ ಕ್ವಾಲಿಟೀಸ್‌ ಜೇಮ್ಸ್‌ ಚಿತ್ರದಲ್ಲಿದೆ. ಮೊದಲಿಗೆ ಇಲ್ಲಿ ಮನಸ್ಸಿಗೆ ನಾಟೋದು ಸಿನಿಮಾದ ಆಶಯ. ಹಾಗೆಯೇ ಕಣ್ಣಿಗೆ ಕಾಣೋದು ಅದ್ಧೂರಿತನ ಮತ್ತು ಗುಣಮಟ್ಟ. ಚಿತ್ರದ ಪ್ರತಿ ಪಾತ್ರಗಳನ್ನು ಪೋಣಿಸಿರುವ ರೀತಿ. ಇವೆಲ್ಲದರ ಜೊತೆಗೆ ಮುಖ್ಯವಾಗಿ ಪದೇ ಪದೇ ಇಷ್ಟವಾಗೋದು ಸಿನಿಮಾದ ಸಂಗೀತ. ಇಲ್ಲಿ ಗುನುಗುವ ಹಾಡುಗಳೂ ಇವೆ. ಕಥೆಗೆ ಪೂರಕವಾಗಿರುವಂತಹ ಹಿನ್ನೆಲೆ ಸಂಗೀತವೂ ಇದೆ. ಇವು ಸಿನಿಮಾದ ವೇಗವನ್ನು ಮತ್ತಷ್ಟು ಹೆಚ್ಚಿಸಿವೆ. ಇನ್ನು, ಇಂತಹ ಚಿತ್ರಗಳಿಗೆ ಸಂಕಲನ ಕೂಡ ಮುಖ್ಯ. ಅದಿಲ್ಲಿ ಎದ್ದು ಕಾಣುತ್ತದೆ. ಪ್ರತಿ ಫ್ರೇಮ್‌ ಕೂಡ ಬ್ಯೂಟಿಫುಲ್‌ ಫ್ಲವರ್‌ನಂತಿವೆ. ಆಕ್ಷನ್‌ ಇದ್ದರೂ, ಚೆಂದದ ಗೆಳೆತನವೇ ಇಲ್ಲಿ ಕಾಡುತ್ತದೆ. ಸಿನಿಮಾ ನೋಡುವ ಮಂದಿ ಎಲ್ಲೋ ಒಂದು ಕಡೆ ಭಾವುಕರಾಗುತ್ತಾರೆ. ಅದಕ್ಕೆ ಕಾರಣ, ದೇಶಾಭಿಮಾನದ ಡೈಲಾಗ್‌ಗಳು ಮತ್ತು ನಾಯಕನ ಹೋರಾಟದ ಶ್ರಮ. ಇಲ್ಲಿ ಯಾವ ದೃಶ್ಯವೂ ವಿನಾಕಾರಣ ಎನ್ನುವಂತಿಲ್ಲ. ಕಣ್ಣಿಗೆ ಹಬ್ಬದಷ್ಟೇ ಅಂದವಾಗಿರುವ ಸಿನಿಮಾದಲ್ಲಿ ಯಾವುದನ್ನೂ ತೆಗಳುವಂಥದ್ದಿಲ್ಲ. ಒಟ್ಟಾರೆ ಜೇಮ್ಸ್‌ ಒಂದು ವರ್ಗಕ್ಕೆ ಸೀಮಿತವಾದ ಸಿನಿಮಾವಂತೂ ಅಲ್ಲ. ಎಲ್ಲರೂ ಪ್ರೀತಿಯಿಂದ “ಅಪ್ಪುʼವಂತಹ ಸಿನಿಮಾ ಅನ್ನುವುದಕ್ಕೆ ಇಲ್ಲಿ ನಾನಾ ಕಾರಣಗಳಿವೆ. ಅದನ್ನು ತಿಳಿಯುವುದಕ್ಕಾದರೂ ಒಂದೊಮ್ಮೆ ಜೇಮ್ಸ್‌ ನೋಡಿ ಜೈ ಅಂದು ಬಿಡಿ.

ಕಥೆ ಏನು?
ಚಿತ್ರದ ನಾಯಕ ಸಂತೋಷ್‌ (ಪುನೀತ್‌ ರಾಜಕುಮಾರ್)‌ ಒಬ್ಬ ಸೋಲ್ಜರ್.‌ ದೇಶ ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ವ್ಯಕ್ತಿತ್ವ. ಚಿಕ್ಕಂದಿನಲ್ಲೇ ಘಟನೆಯೊಂದರಲ್ಲಿ ಐದು ಫ್ಯಾಮಿಲಿಗಳನ್ನು ಕಳೆದುಕೊಳ್ಳುವ ಐವರು ಹುಡುಗರು ಅನಾಥರಾಗುತ್ತಾರೆ. ಅಲ್ಲೊಬ್ಬ ಮಿಲಿಟರಿ ಅಧಿಕಾರಿ ಅನಾಥರಾಗಿ ಅಳುವ ಆ ಹುಡುಗರ ಕಣ್ಣೀರು ಒರೆಸಿ, ಅವರ ಗೆಳೆತನಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿಂದ ಸಿನಿಮಾ ಇನ್ನೊಂದು ಘಟ್ಟಕ್ಕೆ ತಲುಪುತ್ತೆ. ಆ ಐವರು ಗೆಳೆಯರು ಚೆನ್ನಾಗಿ ಓದಿಕೊಂಡು ಉನ್ನತ ಹುದ್ದೆ ಅಲಂಕರಿಸುತ್ತಾರೆ. ಆ ಪೈಕಿ ಸಂತೋಷ್‌ ಮೇಜರ್‌ ಆಗಿ ದೇಶ ಸೇವೆಗೆ ನಿಲ್ಲುತ್ತಾರೆ. ಹೀಗಿರುವಾಗ, ಆ ಮೇಜರ್‌ ಸಂತೋಷ್‌ನ ನಾಲ್ವರು ಗೆಳೆಯರು ಹಾಗು ಕುಟುಂಬ, ಮಕ್ಕಳನ್ನು ಹತ್ಯೆ ಮಾಡಲಾಗುತ್ತೆ. ಯಾಕೆ ಅನ್ನುವುದಕ್ಕೆ ಒಂದು ಕಾರಣವೂ ಇದೆ. ಆ ಕಾರಣ ಹೇಳುವುದಕ್ಕಿಂತ ಅದನ್ನು ತೆರೆ ಮೇಲೆ ನೋಡಬೇಕು. ನಂತರದಲ್ಲಿ ಆ ಮೇಜರ್‌ ಯಾಕೆ ರೆಬೆಲ್‌ ಆಗ್ತಾನೆ ಅನ್ನೋದಕ್ಕೆ ಬಲವಾದ ಕಾರಣವೂ ಇದೆ. ಇಲ್ಲಿ ಒಬ್ಬಿಬ್ಬರು ವಿಲನ್‌ಗಳಿಲ್ಲ. ರಾಶಿ ರಾಶಿ ವಿಲನ್‌ಗಳಿದ್ದಾರೆ. ಅವರೆಲ್ಲರನ್ನೂ ಒಬ್ಬ ಸೋಲ್ಜರ್‌ ಬಗ್ಗು ಬಡಿಯುತ್ತಾನೆ. ಅಂಥದ್ದೊಂದು ದೊಡ್ಡ ಕ್ರೈಮ್‌ ಹಿನ್ನೆಲೆಯ ವಿಲನ್‌ಗಳಿಗೂ ಆ ಸೋಲ್ಜರ್‌ಗು ಏನು ನಂಟು ಎಂಬುದಕ್ಕೂ ಸಿನಿಮಾ ನೋಡಲೇಬೇಕು.

ತಾಂತ್ರಿಕತೆ ಹೇಗಿದೆ?
ಒಂದು ಸಿನಮಾಗೆ ಮುಖ್ಯವಾಗಿ ಬೇಕಿರೋದು ಕಥೆ. ಅದರ ಜೊತೆಗೆ ಗುಣಮಟ್ಟ. ಇಲ್ಲಿ ಛಾಯಾಗ್ರಹಣ ಅಲ್ಟಿಮೇಟ್‌ ಆಗಿದೆ. ಸಂಗೀತ ಕೂಡ ಖುಷಿ ಕೊಡುತ್ತದೆ. ಸಿನಿಮಾ ಸ್ಪೀಡ್‌ ಆಗಿ ಹೋಗುತ್ತೆ ಅಂದರೆ ಅದಕ್ಕೆ ಕತ್ತರಿ ಪ್ರಯೋಗವೂ ಕಾರಣ. ಇನ್ನು, ದೊಡ್ಡ ದೊಡ್ಡ ಸೆಟ್‌ಗಳು ಕೂಡ ಅದ್ಧೂರಿತನಕ್ಕೆ ಸಾಕ್ಷಿಯಾಗಿವೆ. ಪರಭಾಷೆ ಸಿನಿಮಾಗಳನ್ನು ನೋಡಿ ಹಾಗೆ, ಹೀಗೆ ಅನ್ನುವ ಮಂದಿಗೆ ಜೇಮ್ಸ್‌ ತಕ್ಕ ಉತ್ತರ ನೀಡಿದೆ. ಇಲ್ಲಿ ಎಲ್ಲವೂ ಹೈಫೈ. ಪ್ರತಿ ಪಾತ್ರಗಳನ್ನೂ ಸ್ಟೈಲಿಶ್‌ ಆಗಿಯೇ ತೋರಿಸಲಾಗಿದೆ. ಎಷ್ಟು ವೆಪನ್ಸ್‌ಗಳಿವೆಯೋ ಅಷ್ಟೇ ಪಾತ್ರಗಳೂ ಇಲ್ಲಿ ಬಂದು ಹೋಗುತ್ತವೆ. ಇಲ್ಲಿ ಮುಖ್ಯವಾಗಿ ಹೇಳಬೇಕಾದ್ದೆಂದರೆ, ಅದು ಸ್ಟಂಟ್ಸ್.‌ ಜೇಮ್ಸ್‌ ಅನ್ನುವ ಶೀರ್ಷಿಕೆಗೆ ತಕ್ಕಂತೆ ಕಥೆ, ಪಾತ್ರವಿದೆ. ಅದಕ್ಕೆ ತಕ್ಕಂತೆಯೇ ಆಕ್ಷನ್‌ ಸೀಕ್ವೆನ್ಸ್‌ ಕೂಡ ಇದೆ. ಒಂದೊಂದು ಫೈಟ್‌ ಕೂಡ ಅದ್ಧೂರಿಯಾಗಿವೆ. ಜೊತೆಗೆ ರಿಸ್ಕೀ ಸ್ಟಂಟ್‌ ಎಂಥವರನ್ನೂ ಅಬ್ಬಬ್ಬಾ ಅನಿಸುವಷ್ಟರ ಮಟ್ಟಿಗೆ ಸ್ಟಂಟ್‌ ಮಾಸ್ಟರ್‌ಗಳ ಕೆಲಸ ಎದ್ದು ಕಾಣುತ್ತದೆ. ಸ್ಟಂಟ್ಸ್‌ ಇಲ್ಲಿ ಎಕ್ಸಲೆಂಟ್‌ ಅನ್ನೋದೇ ವಿಶೇಷ. ಕಾಸ್ಟ್ಯೂಮ್ಸ್‌ ಬಗ್ಗೆ ಹೇಳಲೇಬೇಕು. ಪ್ರತಿ ಪಾತ್ರಗಳೂ ಇಲ್ಲಿ ರಿಚ್! ಒಟ್ಟಾರೆ, ಜೇಮ್ಸ್‌ ತಾಂತ್ರಿಕತೆಯಲ್ಲೂ ಶ್ರೀಮಂತ ಎಂಬುದನ್ನು ಸಾಬೀತುಪಡಿಸಿದೆ.

ಯಾರು ಹೇಗೆ?
ಇಲ್ಲಿ ಪುನೀತ್‌ ರಾಜಕುಮಾರ್‌ ಅವರು ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಒಬ್ಬ ಗೆಳೆಯನಾಗಿ, ಪ್ರೇಮಿಯಾಗಿ, ದೇಶ ಕಾಯುವ ಯೋಧನಾಗಿ ಇಷ್ಟವಾಗುತ್ತಾರೆ. ಡ್ಯಾನ್ಸ್‌ ಮತ್ತು ಫೈಟ್‌ನಲ್ಲಿ ಎಂದಿಗಿಂತಲೂ ಖುಷಿ ಕೊಡುತ್ತಾರೆ. ಇನ್ನು, ಅವರ ಖಡಕ್‌ ಮಾತುಗಳಿಗೆ ಶಿವರಾಜಕುಮಾರ್‌ ಧ್ವನಿಯಾಗಿದ್ದಾರೆ. ಎಲ್ಲೂ ಕೂಡ ಪುನೀತ್‌ ಧ್ವನಿ ಮಿಸ್ಸೇ ಇಲ್ಲ ಎಂಬಂತೆ ಆ ಧ್ವನಿ ಸೆಟ್‌ ಆಗಿರೋದು ಇನ್ನೊಂದು ವಿಶೇಷ. ಪ್ರಿಯಾ ಆನಂದ್‌ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಶರತ್‌ ಕುಮಾರ್‌, ಶ್ರೀಕಾಂತ್‌,ಮುಖೇಶ್‌ ರಿಷಿ, ಆದಿತ್ಯ ಮೆನನ್‌, ರಣಗಾಯಣ ರಘು, ಸಾಧುಕೋಕಿಲ, ಅವಿನಾಶ್‌, ಯಶ್‌ ಶೆಟ್ಟಿ, ವಜ್ರಾಂಗ್‌ ಶೆಟ್ಟಿ, ಶೈನ್‌ ಶೆಟ್ಟಿ, ತಿಲಕ್‌, ಚಿಕ್ಕಣ್ಣ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಶಿವರಾಜಕುಮಾರ್‌ ಕೂಡ ಇಲ್ಲಿ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ರಾಘವೇಂದ್ರ ರಾಜಕುಮಾರ್‌ ಪಾತ್ರ ಕೂಡ ಗಮನಸೆಳೆಯುತ್ತದೆ. ಯಾವ ಪಾತ್ರವೂ ಇಲ್ಲಿ ವೇಸ್ಟ್‌ ಎನಿಸದಂತೆ, ಎಲ್ಲವನ್ನೂ ಅಚ್ಚುಕಟ್ಟಾಗಿಯೇ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಕೊನೆ ಮಾತು: ಕಣ್ಣು, ಕಿವಿ ಮತ್ತು ಹೃದಯಕ್ಕೆ ಹತ್ತಿರವಾಗುವ ಸಿನಿಮಾ.

Related Posts

error: Content is protected !!