ಡಿಯರ್‌ ಸತ್ಯನ ಮರ್ಡರ್‌ ಸ್ಟೋರಿ!

ಚಿತ್ರ ವಿಮರ್ಶೆ

ರೇಟಿಂಗ್ : /45

ಚಿತ್ರ : ಡಿಯರ್ ಸತ್ಯ
ನಿರ್ದೇಶಕ : ಶಿವಗಣೇಶ್
ನಿರ್ಮಾಣ : ಪರ್ಪಲ್ ರಾಕ್ ಎಂಟರ್ ಟೈನರ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋ
ತಾರಾಗಣ : ಆರ್ಯನ್ ಸಂತೋಷ್, ಅರ್ಚನಾ ಕೊಟ್ಟಿಗೆ, ಅರುಣಾ ಬಾಲರಾಜ್ , ಅಶ್ವಿನ್ ರಾವ್ , ರಂಗಿತರಂಗ ಅರವಿಂದ್ ಇತರರು.

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮರ್ಡರ್‌ ಮಿಸ್ಟ್ರಿ ಸಿನಿಮಾಗಳು ಬಂದಿವೆ. ಆ ಸಾಲಿಗೆ ಡಿಯರ್‌ ಸತ್ಯ ಕೂಡ ಒಂದು. ಆದರೆ, ಇದೊಂದು ವಿಭಿನ್ನ ಕಥಾಹಂದರದ ಸಿನಿಮಾ. ಇಲ್ಲಿ ನವಿರಾದ ಪ್ರೀತಿ ಇದೆ, ಅಪ್ಪುಗೆಯ ಗೆಳೆತನವಿದೆ. ತಾಯಿಯ ಮಮಕಾರವಿದೆ. ಒಂದಷ್ಟು ದ್ವೇಷ, ಅಸೂಯೆ ಕೂಡ ಇಲ್ಲಿದೆ. ಒಟ್ಟಾರೆ ಒಂದೇ ಮಾತಲ್ಲಿ ಹೇಳುವುದಾದರೆ, ಡಿಯರ್‌ ಸತ್ಯ ಹೊಸದೊಂದು ಫೀಲ್‌ ಕೊಡುವ ಸಿನಿಮಾ. ಒಂದಷ್ಟು ಭಾವುಕತೆಯ ಜೊತೆಯಲ್ಲೇ ಸಾಗುವ ಚಿತ್ರ ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡಿಬಿಡುತ್ತದೆ.


ಕಥೆ ತುಂಬಾನೇ ಸರಳ. ಆದರೆ, ನಿರ್ದೇಶಕ ಶಿವಗಣೇಶ್‌ ಅವರ ನಿರೂಪಣೆ ಇಲ್ಲಿ ಹೈಲೈಟ್.‌ ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿವೆ. ಅದಕ್ಕೆ ಕಾರಣ, ಮತ್ತದೇ ಸ್ಕ್ರೀನ್‌ ಪ್ಲೇ. ಚಿತ್ರದ ಹೀರೋ ತಾನು ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುತ್ತಾನೆ. ಆದರೆ, ಆತ ಮಾಡಿದ ತಪ್ಪಾದರೂ ಏನು? ಈ ಪ್ರಶ್ನೆಗೆ ಉತ್ತರ ಒಂದೊಮ್ಮೆ ಸಿನಿಮಾ ನೋಡಲೇಬೇಕು. ಸಿನಿಮಾ ರಿವರ್ಸ್‌ ಸ್ಕ್ರೀನ್‌ ಪ್ಲೇನಲ್ಲಿ ಸಾಗುತ್ತ ಹೋಗುತ್ತೆ. ಆಗಾಗ ಫ್ಲ್ಯಾಷ್ ಬ್ಯಾಕ್ ಸ್ಟೋರಿ ಚಿತ್ರದ ವೇಗಕ್ಕೊಂದು ಕಾರಣವಾಗುತ್ತದೆ. ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರ. ಹಾಗಂತ, ಹೊಡಿ ಬಡಿ ಕಡಿ ಇದ್ದರೂ, ಇಲ್ಲೊಂದು ನಿಷ್ಕಲ್ಮಷ ಪ್ರೀತಿ ಇದೆ. ಆಪ್ತವೆನಿಸೋ ಗೆಳೆತನವಿದೆ. ಮಧ್ಯಮವರ್ಗದ ತಾಯಿ ಮಗನ ಬಾಂಧವ್ಯದ ಬೆಸುಗೆಯೂ ಇದೆ. ಹೀರೋ ಇಲ್ಲಿ ಫುಡ್‌ ಡೆಲಿವರಿ ಬಾಯ್ ಕೆಲಸ ಮಾಡುತ್ತಲೇ ತನ್ನ ಸುಂದರ ಬದುಕು ಕಟ್ಟಿಕೊಂಡಾತ. ಅವನಿಗೆ ಅರಿವಿಲ್ಲದೆಯೇ ಹುಡುಗಿಯೊಬ್ಬಳ ಮೊದಲ ನೋಟಕ್ಕೆ ಪ್ರೀತಿ ಹುಟ್ಟಿಸಿಕೊಳ್ಳುತ್ತಾನೆ. ತನ್ನ ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂಬ ಕನಸು ಕಾಣುವ ಹೀರೋ, ತನ್ನ ಪ್ರೀತಿಯನ್ನೂ ಸಹ ಕಾಪಾಡಿಕೊಂಡು, ಅವಳನ್ನು ಕೈ ಹಿಡಿದು ಬದುಕಬೇಕೆಂದು ಆಸೆಪಡುವ ಹೀರೋಗೆ ಅದು ಸಾಧ್ಯವಾಗುವುದಿಲ್ಲ. ಯಾಕೆ ಅನ್ನೋದು ಸಸ್ಪೆನ್ಸ್.‌

ತಾನು ಪ್ರೀತಿಸುವ ಹುಡುಗಿಯನ್ನು ಇನ್ನೇನು ತನ್ನ ತಾಯಿಗೆ ಪರಿಚಯಿಸಿ, ಮದುವೆ ಆಗಬೇಕು ಅಂದುಕೊಳ್ಳುವ ನಾಯಕನ ಬದುಕಲ್ಲಿ ಒಂದು ಘೋರ ಘಟನೆ ನಡೆದು ಹೋಗುತ್ತದೆ. ಅದೇ ಇಡೀ ಚಿತ್ರದ ಹೈಲೈಟ್.‌ ಆ ಘಟನೆ ಬಳಿಕ ಏನೆಲ್ಲಾ ನಡೆಯುತ್ತೆ ಅನ್ನೋದೇ ಸಿನಿಮಾದ ವಿಶೇಷ. ಸಿನಿಮಾದಲ್ಲೊಂದು ಕೊಲೆಯಾಗುತ್ತೆ. ಆ ಕೊಲೆ ನಾಯಕನ ಮೇಲೆ ಹೋಗುತ್ತೆ. ಅಲ್ಲಿಂದ ಹೊರಬಂದು, ಆ ಕೊಲೆಗಾರರು ಯಾರು ಅನ್ನುವುದನ್ನು ಹೀರೋ ಕಂಡು ಹಿಡಿಯುತ್ತಾನೆ. ಆ ಬಳಿಕ ಏನೆಲ್ಲಾ ನಡೆದು ಹೋಗುತ್ತೆ ಎಂಬ ಕುತೂಹಲ ಇದ್ದರೆ, ಸಿನಿಮಾ ನೋಡಬಹುದು. ಇಷ್ಟಕ್ಕೂ ಆ ಕೊಲೆ ಯಾರದ್ದು? ಯಾರು ಮಾಡುತ್ತಾರೆ? ನಾಯಕ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತಾನೋ ಇಲ್ಲವೋ ಅನ್ನೋದು ಕಥೆ.

ಇನ್ನು, ಚಿತ್ರದ ಟೆಕ್ನಿಕಲ್‌ ವಿಷಯಕ್ಕೆ ಬರುವುದಾದರೆ, ಚಿತ್ರದ ಕ್ಯಾಮೆರಾ ಕೆಲಸ ಸೊಗಸಾಗಿದೆ. ಶ್ರೀಧರ್‌ ವಿ.ಸಂಭ್ರಮ್‌ ಅವರ ಸಂಗೀತ ಇಲ್ಲಿ ಮಾತಾಡುವಂತಿದೆ. ಎರಡು ಹಾಡುಗಳು ಗುನುಗುವಂತಿವೆ. ಇನ್ನು, ಚಿತ್ರದ ಸಂಕಲನ ಕೆಲಸ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ. ನಾಯಕ ಆರ್ಯನ್ ಸಂತೋಷ್ ಈ ಚಿತ್ರದ ಮೂಲಕ ಎಂದಿಗಿಂತಲೂ ಲುಕ್‌ ಆಗಿ ಕಾಣುತ್ತಾರೆ. ಅಷ್ಟೇ ಆ್ಯಂಗ್ರಿ ಯಂಗ್ ಮ್ಯಾನ್ ಆಗಿಯೂ ಕಾಣಿಸಿಕೊಂಡಿದ್ದಾರೆ. ತಮಗೆ ಸಿಕ್ಕ ಪಾತ್ರವನ್ನು ಲವ್ಲಿಯಾಗಿಯೇ ನಿರ್ವಹಿಸಿದ್ದಾರೆ. ಡ್ಯಾನ್ಸ್‌ ಮತ್ತು ಫೈಟ್‌ ವಿಚಾರದಲ್ಲಿ ಇಷ್ಟವಾಗುತ್ತಾರೆ. ಇನ್ನು, ನಾಯಕಿ ಅರ್ಚನಾ ಕೊಟ್ಟಿಗೆ ಅವರು ಸಹ ಸ್ಕ್ರೀನ್‌ ಮೇಲೆ ಮುದ್ದಾಗಿ ಕಾಣುತ್ತಾರೆ. ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ. ಕೆಲವು ಕಡೆ ಇನ್ನಷ್ಟು ಎಫರ್ಟ್‌ ಬೇಕಿತ್ತು ಎನಿಸುತ್ತದೆ. ತಾಯಿಯಾಗಿ ಅರುಣಾ ಬಾಲರಾಜ್ ಇರುವಷ್ಟು ಹೊತ್ತು ಇಷ್ಟವಾಗುತ್ತಾರೆ. ಗುರುರಾಜ್ ಹೊಸಕೋಟೆ , ಪಾಪಣ್ಣ, ಸೇರಿದಂತೆ ಒಂದಷ್ಟು ಹೊಸ ಬಗೆಯ ಪಾತ್ರಗಳಿಲ್ಲಿ ಗಮನಸೆಳೆಯುತ್ತವೆ.

Related Posts

error: Content is protected !!