ರಾಕಿಭಾಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್!‌ ಮಾರ್ಚ್ 21ಕ್ಕೆ ತೂಫಾನ್‌ ಸಾಂಗ್‌ ರಿಲೀಸ್…

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಅಂದಾಕ್ಷಣ ಸದ್ಯ ನೆನಪಾಗೋದೇ ಯಶ್‌ ಅಭಿನಯದ, ಪ್ರಶಾಂತ್‌ ನೀಲ್‌ ನಿರ್ದೇಶನದ ಮತ್ತು ವಿಜಯ್‌ ಕಿರಗಂದೂರು ನಿರ್ಮಾಣದ ಚಿತ್ರ ‘ಕೆಜಿಎಫ್ 2’. ಈ ಚಿತ್ರದ ಅಬ್ಬರ ಇನ್ನೇನು ಶುರುವಾಗಲಿದೆ. ಏಪ್ರಿಲ್ 14ಕ್ಕೆ ಬಹು ನಿರೀಕ್ಷಿತ “ಕೆಜಿಎಫ್‌ 2” ರಿಲೀಸ್ ಆಗಲಿದೆ. ಯಶ್‌ ಫ್ಯಾನ್ಸ್‌ ‌ ಚಿತ್ರ ಬಿಡುಗಡೆಯ ಎದುರು ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ, ಸಿನಿಮಾದ ಪ್ರಚಾರ ಕೆಲಸ ಕೂಡ ಜೋರಾಗಿಯೇ ನಡೆಯುತ್ತಿದೆ. ಈ ಚಿತ್ರದ ಬಿಡುಗಡೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಈಗಾಗಲೇ ಚಿತ್ರತಂಡ ಪ್ರಚಾರಕ್ಕೆ ಅಣಿಯಾಗಿದೆ. ಈವರೆಗೆ ಚಿತ್ರದ ಟೀಸರ್ ನೋಡಿ ಖುಷಿಗೊಂಡಿದ್ದ ಫ್ಯಾನ್ಸ್‌, ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳಿಗೆ ಕಾಯುತ್ತಿದ್ದರು. ಅಂತಹ ಫ್ಯಾನ್ಸ್‌ಗೆ ಒಂದು ಗುಡ್‌ ನ್ಯೂಸ್‌ ಕೊಟ್ಟಿದೆ ಹೊಂಬಾಳೆ ಫಿಲಂಸ್.‌‌

ಹೌದು, ‘ಕೆಜಿಎಫ್ 2’ನ ಒಂದೊಂದೇ ಕಂಟೆಂಟ್ ಬಿಡಲು ತಂಡ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ತಂಡ ತಯಾರಿ ನಡೆಸಿದೆ. ಈ ಕುರಿತು ಟ್ವೀಟ್‌ ಮಾಡಿರುವ ಹೊಂಬಾಳೆ ಫಿಲಂಸ್‌, ಚಿತ್ರದ ಮೊದಲ ಹಾಡು ಮಾರ್ಚ್ 21ಕ್ಕೆ ರಿಲೀಸ್‌ ಆಗಲಿದೆ ಎಂದು ಹೇಳಿಕೊಂಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿವೆ. ಈ ಬಗ್ಗೆ ಪೋಸ್ಟರ್ ಹಂಚಿಕೊಂಡು ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, ‘ಸಿದ್ಧರಾಗಿ ತೂಫಾನ್ ಬರ್ತಿದೆ. ಮಾರ್ಚ್‌ 21, 11.07ಕ್ಕೆ ತೂಫಾನ್ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ’ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕೆಜಿಎಫ್‌ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ ಚಿತ್ರದ ಮೊದಲ ಹಾಡು ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹಾಡಿನ ಪೋಸ್ಟರ್ ಕೂಡ 5 ಭಾಷೆಯಲ್ಲಿ ರಿಲೀಸ್ ಮಾಡಲಾಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ. ಹಾಡಿನ ಶೀರ್ಷಿಕೆ ತೂಫಾನ್, ಅಂದರೆ ಬಿರುಗಾಳಿ ಎಂದರ್ಥ. ಈ ಹಾಡು ನಾಯಕನ ಕುರಿತಾಗಿರಬಹುದೇ ಎಂಬ ಪ್ರಶ್ನೆಗಳಿವೆ. ಅದೇನೆ ಇರಲಿ, ಒಟ್ಟಲ್ಲಿ ಮೊದಲ ಹಾಡು ರಿಲೀಸ್‌ ಮಾಡುತ್ತಿದೆ. ಈ ಹಾಡಿನ ಬಿಡುಗಡೆ ಬಳಿಕ ಚಿತ್ರತಂಡ ಟ್ರೇಲರ್ ಕೂಡ ರಿಲೀಸ್ ಮಾಡಲಿದೆ. ಈಗಾಗಲೇ ಟ್ರೇಲರ್ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದ್ದು, ಮಾರ್ಚ್ 27ಕ್ಕೆ ಟ್ರೇಲರ್ ರಿಲೀಸ್ ಆಗಲಿದೆ. ಸದ್ಯ ಈ ಚಿತ್ರದ ಮೇಲೆ ಸಾಕಷ್ಟು ಕುತೂಹಲವಿದೆ.

Related Posts

error: Content is protected !!