ಗಾಯಕ ಕಮ್ ಸಂಗೀತ ನಿರ್ದೇಶಕ ನವೀನ್ ಸಜ್ಜು ಅವರು ಹೀರೋ ಆಗಿರುವ ವಿಷಯ ಗೊತ್ತೇ ಇದೆ. ಅವರ ಹೊಸ ಚಿತ್ರಕ್ಕೆ ವಿಭಿನ್ನ ಶೀರ್ಷಿಕೆ ಇಡಲಾಗಿದೆ. ಅಷ್ಟಕ್ಕೂ ನವೀನ್ ಸಜ್ಜು ಅವರ ಸಿನಿಮಾ ಹೆಸರೇನು? ಅದಕ್ಕೆ ಉತ್ತರ, “ಮ್ಯಾನ್ಷನ್ ಹೌಸ್ ಮುತ್ತು” ಈ ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ನೆನಪಾಗೋದೇ ಎಣ್ಣೆ! ಹೌದು, ಈಗಾಗಲೇ ನವೀನ್ ಸಜ್ಜು ಅವರು “ಎಣ್ಣೆ ನಮ್ದು ಊಟ ನಿಮ್ದು” ಎಂದು ಹಾಡಿ ಕುಣಿದಿದ್ದಾರೆ. ಈಗ ಅವರೇ “ಮ್ಯಾನ್ಷನ್ ಹೌಸ್ ಮುತ್ತು” ಎಂಬ ಚಿತ್ರಕ್ಕೆ ಹೀರೋ ಆಗಿದ್ದಾರೆ. ಇದೊಂದು ಕಾಮಿಡಿ ಕಮ್ ಮೆಲೊ ಡ್ರಾಮ ಸಿನಿಮಾ. ಈ ಸಿನಿಮಾಗೆ ಕುಮಾರ್ ನಿರ್ದೇಶಕರು. ಈ ಹಿಂದೆ ಇವರು “ಕೆಮಿಸ್ಟ್ರಿ ಆಫ್ ಕರಿಯಪ್ಪ” ಮಾಡಿದ್ದರು. ಅವರ ಎರಡನೇ ಸಿನಿಮಾ “ಕ್ರಿಟಿಕಲ್ ಕೀರ್ತನೆಗಳು” ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಏಪ್ರಿಲ್ ವೇಳೆಗೆ ಬರಲಿದೆ. ಈಗ ನವೀನ್ ಸಜ್ಜು ಅವರಿಗಾಗಿ “ಮ್ಯಾನ್ಷನ್ ಹೌಸ್ ಮುತ್ತು” ಎಂಬ ಸಿನಿಮಾ ಮಾಡುತ್ತಿದ್ದಾರೆ. ಇವರಿಗೆ ಕೇಸರಿ ಫಿಲ್ಮ್ ಕ್ಯಾಪ್ಚರ್ ನಿರ್ಮಾಣ ಸಂಸ್ಥೆ ಸಾಥ್ ನೀಡಿದ್ದು, ಚಿತ್ರವನ್ನು ನಿರ್ಮಿಸುತ್ತಿದೆ.
ತಮ್ಮ ಸಿನಿಮಾ ಕುರಿತು ಹೇಳುವ ನಿರ್ದೇಶಕ ಕುಮಾರ್, “ಮ್ಯಾನ್ಷನ್ ಹೌಸ್ ಮುತ್ತು” ಚಿತ್ರದ ಚಿತ್ರೀಕರಣ ಬಹುತೇಕ ಮಡಿಕೇರಿ ಸುತ್ತಮುತ್ತ ನಡೆದಿದೆ. ನನ್ನ ಈ ಹಿಂದಿನ ಸಿನಿಮಾ “ಕೆಮಿಸ್ಟ್ರಿ ಆಫ್ ಕರಿಯಪ್ಪ” ಬೇರೆ ಜಾನರ್ ಸಿನಿಮಾ ಆಗಿತ್ತು. ಇನ್ನು,ಮ “ಕ್ರಿಟಿಕಲ್ ಕೀರ್ತನೆಗಳು” ಕೂಡ ಹೊಸ ಬಗೆಯ ಕಥೆ ಇರುವ ಸಿನಿಮಾ. “ಮ್ಯಾನ್ಷನ್ ಹೌಸ್ ಮುತ್ತು” ಕೂಡ ಈಗಿನ ಟ್ರೆಂಡ್‌ಗೆ ಇರುವ ಚಿತ್ರ. ಇದೊಂದು ರೀತಿ ಪ್ರಕೃತಿ ಜೊತೆ ಸಾಗುವ ಮತ್ತು ಪ್ರಕೃತಿಯನ್ನು ಅನುಭವಿಸುವ ಚಿತ್ರ. ಹೊಸದೊಂದು ರೆವಿಲ್ಯೂಷನ್ ವಿಷಯ ಇಲ್ಲಿದೆ. ಇನ್ನು ಯಥಾ ಪ್ರಕಾರ ನನ್ನ ಸಿನಿಮಾದಲ್ಲಿ ಮಾತುಗಳಿಗೆ ಹೆಚ್ಚು ಆದ್ಯತೆ ಇರುತ್ತದೆ. ಇಲ್ಲೂ ಅದು ಮುಂದುವರೆದಿದೆ.
ನವೀನ್ ಸಜ್ಜು ಅವರು ಪಾತ್ರಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನೂ ನೀಡಿದ್ದಾರೆ. ಒಂದು ರೀತಿ ಇಡೀ ಸಿನಿಮಾದ ಮುಖ್ಯ ಆಕರ್ಷಣೆ ಅವರು ಎನ್ನುವ ನಿರ್ದೇಶಕ ಕುಮಾರ್, ಚಿತ್ರಕ್ಕೆ ನವೀನ್‌ಕುಮಾರ್ ಚೆಲ್ಲ ಛಾಯಾಗ್ರಹಣ ಮಾಡಿದರೆ, ನವೀನ್ ಸಜ್ಜುಅವರೇ ಇಲ್ಲಿ ಸಂಗೀತ ನೀಡಲಿದ್ದಾರೆ. ವೆಂಕಟೇಶ್ ಯುಡಿ ಸಂಕಲನವಿದೆ. ಉಳಿದಂತೆ ಚಿತ್ರದಲ್ಲಿ ಬೆಲ್ ಬಾಟಂ ಸತೀಶ್, ಗಿರೀಶ್, ಸಮೀಕ್ಷಾ, ವಿಜೇತ್ ಸೇರಿದಂತೆ ಹಲವು ಕಲಾವಿದರು ಇದ್ದಾರೆ. “ಮ್ಯಾನ್ಷನ್ ಹೌಸ್ ಮುತ್ತು” ಒಂದೊಳ್ಳೆಯ ಥ್ರಿಲ್ಲರ್ ಕಾಮಿಡಿ ಸಿನಿಮಾ. ಹಾಸ್ಯದ ಜೊತೆಗೆ ಒಂದಷ್ಟು ಸಂದೇಶ ಸಾರುವ ಅಂಶಗಳೂ ಇವೆ ಎನ್ನುತ್ತಾರೆ ಕುಮಾರ್.