ರಾಯರ ಸನ್ನಿಧಿಯಲ್ಲಿ ಅಪ್ಪುಗೆ ಪೂಜೆ ಮಾಡಿಸಿದ ಪ್ರೀತಿಯ ಅಭಿಮಾನಿ…

ಡಾ.ಪುನೀತ್‌ ರಾಜಕುಮಾರ್‌ ಅಂದರೆ ಹಾಗೆ, ಅದೊಂದು ಗೌರವ, ಪ್ರೀತಿ ಮತ್ತು ಹೆಮ್ಮೆ. ಪುನೀತ್‌ ರಾಜಕುಮಾರ್‌ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಆದರ್ಶಗಳು ಜೀವಂತ. ಅವರು ನಮ್ಮೊಂದಿಗಿಲ್ಲ ಎಂಬ ಭಾವನೆ ಯಾರಲ್ಲೂ ಇಲ್ಲ. ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಅವರು ಜೀವಂತವಾಗಿಯೇ ಇದ್ದಾರೆ. ಅದೇ ಖುಷಿಯಲ್ಲಿ ಅಭಿಮಾನಿಗಳು ಅಪ್ಪು ಅವರನ್ನು ಹೃದಯದಲ್ಲಿಟ್ಟು ಪೂಜಿಸುತ್ತಿದ್ದಾರೆ. ಪುನೀತ್‌ ರಾಜಕುಮಾರ್‌ ಅವರಿಗೆ ಅಭಿಮಾನಿಗಳ ಸಂಖ್ಯೆ ಲೆಕ್ಕವಿಲ್ಲ.

ಅದರ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಯಾಕೆಂದರೆ, ಇಡೀ ಕರುನಾಡೇ ಪುನೀತ್‌ ಅವರನ್ನು ಪ್ರೀತಿಸುತ್ತಿದೆ. ಅವರ ಅಭಿಮಾನಿಗಳಂತೂ ಜೇಮ್ಸ್‌ ಬಿಡುಗಡೆ ಮುನ್ನ ದಿನ ಮಾಡದ ಪೂಜೆಗಳಿಲ್ಲ, ಹರಕೆಗಳಿಲ್ಲ. ಅವರ ಕಟೌಟ್‌ಗಳಿಗೆ ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದು ಗೊತ್ತೇ ಇದೆ. ಹಾಗೆಯೇ ಇಲ್ಲೊಬ್ಬ ಅಪ್ಪಟ ಪುನೀತ್‌ ರಾಜಕುಮಾರ್‌ ಅವರ ಅಭಿಮಾನಿ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದು, ಪುನೀತ್‌ ರಾಜಕುಮಾರ್‌ ಅವರ ಪುಸ್ತಕವೊಂದನ್ನು ರಾಯರ ಬೃಂದಾವನದಲ್ಲಿಟ್ಟು ಪೂಜಿಸಿದ್ದಾರೆ.

ಹೌದು, ಕನ್ನಡ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದಲೂ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಹೀರೋ ಕೂಡ ಆಗಿರುವ ಮಧು ಮಂದಗೆರೆ ಅವರು ಪುನೀತ್‌ ಅವರ ಮೇಲಿನ ಪ್ರೀತಿ, ಗೌರವದಿಂದಲೇ ಮಂತ್ರಾಲಯಕ್ಕೆ ಹೋಗಿ ರಾಯರ ಸನ್ನಿಧಿಯಲ್ಲಿ ಪುನೀತ್‌ ಅವರ ಜೇಮ್ಸ್‌ ಚಿತ್ರಕ್ಕೆ ಯಾವ ಅಡೆತಡೆ ಆಗಬಾರದು, ಪುನೀತ್‌ ಅವರು ಸದಾ ನಗುಮೊಗದಲ್ಲೇ ಅಭಿಮಾನಿಗಳ ಜೊತೆ ಇರಬೇಕು ಅಂದುಕೊಂಡು ಪೂಜಿಸಿದ್ದಾರೆ.

ಅಂದಹಾಗೆ, ಭದ್ರಾವತಿ ರಾಮಾಚಾರಿ ಬರೆದ “ಅಪ್ಪು ಅಮರ” ಒಂದು ಅವಲೋಕನ ಪುಸ್ತಕ ಬಿಡುಗಡೆಯಾಗಿದ್ದು, ಆ ಪುಸ್ತಕವನ್ನು ಮಂತ್ರಾಲಯಕ್ಕೆ ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಅಪ್ಪು ಅವರ ಜೇಮ್ಸ್‌ ಸಿನಿಮಾ ಕೂಡ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನು, ಜೇಮ್ಸ್‌ ಬಿಡುಗಡೆ ದಿನ ಮಧು ಮಂದಗೆರೆ ಅವರು, ಯೋಧರ ಸಮವಸ್ತ್ರ ಧರಿಸಿಯೇ ಸಿನಿಮಾ ವೀಕ್ಷಿಸಿ ಪ್ರೀತಿ ಮೆರೆದಿದ್ದಾರೆ. ಎಲ್ಲರೂ ಜೇಮ್ಸ್‌ ಸಿನಿಮಾ ನೋಡಲೇಬೇಕು ಎಂದು ಹೇಳಿದ್ದಾರೆ.

Related Posts

error: Content is protected !!