Categories
ಸಿನಿ ಸುದ್ದಿ

ಗಿರ್ಕಿ ಲವ್ ಹಾಡಿಗೆ ಲವ್ ಬರ್ಡ್ಸ್ ಸಾಥ್…

ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್
ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ “ಗಿರ್ಕಿ” ಚಿತ್ರವನ್ನು ಯೋಗರಾಜ್ ಭಟ್ ಅವರ ಶಿಷ್ಯ
ವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ‌.
ವೀರೇಶ್ ಅವರಿಗೆ ಇದು ಮೊದಲ ಚಿತ್ರ.

ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ “ಕದಿಯಲೇನು” ಎಂಬ ಹಾಡನ್ನು ಕನ್ನಡ ಚಿತ್ರರಂಗದ ತಾರಾ ಜೋಡಿ, “ಲವ್ ಬರ್ಡ್ಸ್” ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಎ2 ಮ್ಯೂಸಿಕ್ ಮೂಲಕ ಹಾಡು ಬಿಡುಗಡೆಯಾಗಿದೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿರುವ ಈ ಹಾಡಿಗೆ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿನ್ಮಯ್ ಶ್ರೀಪಾದ ಹಾಡಿದ್ದಾರೆ. ವಿಲೋಕ್ ರಾಜ್ ಹಾಗೂ ದಿವ್ಯ ಉರುಡುಗಅಭಿನಯಿಸಿದ್ದಾರೆ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ.

ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಛಾಯಾಗ್ರಾಹಕ ನವೀನ್ ಕುಮಾರ್ ಛಲ್ಲ ಅವರ ಛಾಯಾಗ್ರಹಣಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ಮೋಹನ್ ಅವರ ನೃತ್ಯ ನಿರ್ದೇಶನ ಕೂಡ ನೋಡುಗರ ಗಮನ ಸೆಳೆಯುತ್ತಿದೆ. ವೀರ್ ಸಮರ್ಥ್ ಅವರ ಸುಮಧುರ ಸಂಗೀತ ಕೇಳುಗರ ಮನಗೆದ್ದಿದೆ.

ಈ ಹಿಂದೆ ಯೋಗರಾಜ್ ಭಟ್ ಅವರು ಬರೆದಿರುವ ಎಣ್ಣೆ ಸಾಂಗ್ ಕೂಡ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಚಿತ್ರದ ಲವ್ ಸಾಂಗ್ ಬಿಡುಗಡೆಯಾಗಿದ್ದು, ಜುಲೈ 8 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ವಾಸುಕಿ ಭುವನ್ ಅವರ ಸಹ ನಿರ್ಮಾಣವಿದೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ಮಧು ತುಂಬಕೆರೆ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ.

ಹಾಸ್ಯ ಕಲಾವಿದರಾಗಿ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.

ಈ ಚಿತ್ರದ ಮೂಲಕ ವಿಲೋಕ್ ರಾಜ್ ನಾಯಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ತುಣುಕನ್ನು ವೀಕ್ಷಿಸಿರುವ ಸಿನಿರಸಿಕರು ವಿಲೋಕ್ ರಾಜ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ.

Categories
ಸಿನಿ ಸುದ್ದಿ

ಏಳುಕೋಟಿ ಮೈಲಾರನ ಗಾನಲಹರಿ ಬಿಡುಗಡೆ: ಭಕ್ತಿ ಭಾವದಿಂದ ಕುಣಿದಿದ್ದರು ಸಂಚಾರಿ ವಿಜಯ್- ನೀವೊಮ್ಮೆ ಕಣ್ತುಂಬಿಕೊಳ್ಳಿ ಮೈಲಾರ ಜಾತ್ರೆ…

ಕನ್ನಡ ಚಿತ್ರರಂಗದಲ್ಲಿ ಭಕ್ತಿಗೀತೆಗಳು, ಜನಪದ ಗೀತೆಗಳು ಸಾಕಷ್ಟು ಬಂದಿವೆ. ಈಗ ಹೊಸತನ ಹಾಗೂ ವಿಶೇಷಗಳಿಂದ ಕೂಡಿರುವ ಮೈಲಾರ ಲಿಂಗೇಶ್ವರ ಸ್ವಾಮಿಯ ಭಕ್ತಿ ಪೂರ್ಣ ಗೀತೆ ಮೈಲಾರ ಆಲ್ಬಂ ಹಾಡು ಹೊರಹೊಮ್ಮಿದ್ದು, ನೋಡಿದವರೆಲ್ಲರೂ ನಿಂತಲ್ಲೇ ಉಘೇ ಉಘೇ ಮೈಲಾರ ಸ್ವಾಮಿ ಎನ್ನುತ್ತಿದ್ದಾರೆ.

ಜನಪದ ಹಿನ್ನಲೆ ಹಾಡುಗಳನ್ನು ಮಾಡಬೇಕೆಂಬ ಆತೀವ ಆಸಕ್ತಿ, ಶ್ರದ್ಧೆಯಿಂದ ಗಾಯಕ, ಸಂಗೀತ ನಿರ್ದೇಶಕ ಪ್ರದೀಪ್ ಚಂದ್ರ ಮೈಲಾರ ಆಲ್ಬಂ ಹಾಡು ತಯಾರಿಸಿದ್ದಾರೆ. ಮೈಸೂರು ಭಾಗದಲ್ಲಿ ಮಲೆ ಮಹದೇಶ್ವರ ಸ್ವಾಮಿ ಎಷ್ಟು ಪ್ರಸಿದ್ಧಿಯೂ ಅದೇ ರೀತಿ ಹಾವೇರಿ ಭಾಗದಲ್ಲಿ ಮೈಲಾರ ಲಿಂಗೇಶ್ವರ ಖ್ಯಾತಿ ಪಡೆದಿದೆ. ಹೀಗಾಗಿ ಮೈಲಾರ ಸ್ವಾಮಿಯ ಜಾತ್ರೆ ಸೊಬಗನ್ನು, ಅಲ್ಲಿ ಸಂಪ್ರದಾಯ, ಭವಿಷ್ಯ ನುಡಿಯುವ ಕಾರ್ಣಿಕ, ಅಲ್ಲಿನ ಪವಾಡಗಳನ್ನು ಮುಖ್ಯವಸ್ತುವನ್ನಾಗಿರಿಸಿಕೊಂಡು ಚೆಂದದ ಆಲ್ಬಂ ಸಾಂಗ್ ರೂಪಿಸಿದ್ದಾರೆ. ಇತ್ತೀಚೆಗೆ ನಟ ರಮೇಶ್ ಅರವಿಂದ್ ಸಾಂಗ್ ವೀಕ್ಷಿಸಿ ಮೆಚ್ಚುಗೆ ಪಟ್ಟು ಬಿಡುಗಡೆ ಮಾಡಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇಷ್ಟಪಟ್ಟು ನಟಿಸಿರುವ ಮೈಲಾರ ಹಾಡಿಗೆ ಸಂಜಯ್ ಕುಲಕರ್ಣಿ ನಿರ್ದೇಶನ ಮಾಡಿದ್ದು, ವಿಜಯ್ ಪ್ರಕಾಶ್ ಧ್ವನಿ ಕುಣಿಸಿರುವ, ಪ್ರದೀಪ್ ಚಂದ್ರ ಮ್ಯೂಸಿಕ್ ಹಾಗೂ ಸಾಹಿತ್ಯದ ಇಂಪು, ಚಂದ್ರು ಹಾಗೂ ರಾಜಶೇಖರ್ ಛಾಯಾಗ್ರಹಣ ತಂಪು ಹಾಡಿನ ಸೊಬಗನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.

ಕಮರ್ಷಿಯಲ್ ಹಾಡುಗಳಿಗಿಂತ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಆಲ್ಬಂ ಗೀತೆ ಸೃಷ್ಟಿಯ ಹಿಂದೆ ನೂರಾರು ಜನರ ಪರಿಶ್ರಮವಿದೆ. ಸರ್ಕಾರದಿಂದ ಅನುಮತಿ ಪಡೆದು ಇಡೀ ಹಾಡನ್ನು ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಅತ್ಯಂತ ವೈಭವದಿಂದ ನಡೆಯುವ ಜಾತ್ರೆಯನ್ನು ಇಡೀ ನಾಡಿಗೆ ಪರಿಚಯಿಸಲು ರೂಪಗೊಂಡಿರುವ ಮೈಲಾರ ಹಾಡಿನ ಹಿಂದಿನ ಸಾರಥಿ ನಿರ್ಮಾಪಕ ರಾಜಶೇಖರ್ ಮೇತ್ರಿ. ವೃತ್ತಿಯಲ್ಲಿ ವೈದ್ಯರಾಗಿರುವ ರಾಜಶೇಖರ್ ಹೊಸ ಪ್ರತಿಭೆ ಪ್ರದೀಪ್ ಚಂದ್ರ ಅವರನ್ನು ಪ್ರೋತ್ಸಾಹಿಸಿ ಕನ್ನಡ ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ.

ಸಾಕಷ್ಟು ಲೈವ್ ವಾದ್ಯಗಳಿಂದ, ಲಕ್ಷಾಂತರ ಜನರ ನಡುವೆ ಚಿತ್ರೀಕರಣವಾಗಿರುವ ಹಾಡಿನಲ್ಲಿ ಸಂಚಾರಿ ವಿಜಯ್ ಜೊತೆಗೆ ಪ್ರದೀಪ್ ಚಂದ್ರ ಹಾಗೂ ಯಶಸ್ವಿನಿ ನಟಿಸಿದ್ದಾರೆ. ಇಂತಹ ಅದ್ಬುತ ಆಲ್ಬಂ ಹಾಡು ನಿರ್ಮಾಣ ಮಾಡಲು ಸಾಹಸ ಮಾಡಿದ ನಿರ್ಮಾಪಕ ರಾಜಶೇಖರ್ ಹಾಗೂ ಇಡೀ ತಂಡಕ್ಕೊಂದು ಸಲಾಂ ಎಂಬುದು ನಿರ್ದೇಶಕ ಹಾಗು ಸಂಗೀತ ನಿರ್ದೇಶಕರ ಮಾತು.

Categories
ಸಿನಿ ಸುದ್ದಿ

ಚಿಕ್ಕಣ್ಣ ಈಗ ಉಪಾಧ್ಯಕ್ಷ! ಹೊಸ ಚಿತ್ರಕ್ಕೆ ಅವರೇ ಹೀರೋ…

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಅದ್ಧೂರಿ ಯಶಸ್ಸು ಕಂಡ ” ಅಧ್ಯಕ್ಷ ” ಚಿತ್ರದಲ್ಲಿ “ಉಪಾಧ್ಯಕ್ಷ” ನಾಗಿ ಜನಮನಸೂರೆಗೊಂಡಿದ್ದವರು ಚಿಕ್ಕಣ್ಣ. ಈಗ “ಉಪಾಧ್ಯಕ್ಷ” ಎಂಬ ಹೆಸರಿನಿಂದಲೇ ಸಿನಿಮಾ ಆರಂಭವಾಗಿದ್ದು, ಚಿಕ್ಕಣ್ಣ ನಾಯಕರಾಗಿ ನಟಿಸುತ್ತಿದ್ದಾರೆ. ಸ್ಮಿತಾ ಉಮಾಪತಿ ಹಾಗೂ ನಿರ್ಮಲ ಶ್ರೀನಿವಾಸ ನಿರ್ಮಿಸುತ್ತಿರುವ ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಪ್ರಸಿದ್ದ ಬನಶಂಕರಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ಸ್ಮಿತಾ ಉಮಾಪತಿ ಹಾಗೂ ನಾಯಕ ಚಿಕ್ಕಣ್ಣ ಅವರ ತಾಯಿ ಆರಂಭ ಫಲಕ ತೋರಿದರು. ಸಾಧುಕೋಕಿಲ ಕ್ಯಾಮರಾ ಚಾಲನೆ ಮಾಡಿದರು. ಚಿತ್ರರಂಗದ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಒಳ್ಳೆಯ ದಿನ ಬೆಳಗ್ಗಿನ ಸುಮುಹೂರ್ತದಲ್ಲಿ
ಬನಶಂಕರಿ ದೇವಸ್ಥಾನದಲ್ಲಿ ಚಿತ್ರ ಆರಂಭಿಸಿದ್ದೇವೆ. “ಉಪಾಧ್ಯಕ್ಷ”, “ಅಧ್ಯಕ್ಷ” ಚಿತ್ರದ ಮುಂದುವರಿದ ಭಾಗ ಎನ್ನಬಹುದು. ಆ ಚಿತ್ರದಲ್ಲಿ ಎಲ್ಲಿ ಕಥೆ ನಿಂತಿತ್ತೋ, ಅಲ್ಲಿಂದ ಈ ಚಿತ್ರದ ಕಥೆ ಆರಂಭವಾಗುತ್ತದೆ. ಮೊದಲ ಸನ್ನಿವೇಶದಿಂದ ಕ್ಲೈಮ್ಯಾಕ್ಸ್ ತನಕ‌ ಜನರನ್ನು ನಕ್ಕುನಲಿಸುವ ಸಿನಿಮಾ ಇದು. ಜೊತೆಗೆ ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಸಾಕಷ್ಟು ಹಿಟ್ ಚಿತ್ರಗಳ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು. ಚಿಕ್ಕಣ್ಣ ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕರಾಗಿದ್ದಾರೆ. ಮಲೈಕ ಈ ಚಿತ್ರದ ನಾಯಕಿ. ನಾಳೆಯಿಂದ ಮೈಸೂರಿನಲ್ಲಿ ನಿರ್ಮಿಸಲಾಗಿರುವ ಮನೆಯ ಸೆಟ್ ನಲ್ಲಿ ಮೂವತ್ತೆರಡು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

ಆನಂತರ ಬೆಂಗಳೂರು, ಮುಂತಾದ ಕಡೆ ಚಿತ್ರೀಕರಣ ಸಾಗಲಿದೆ. ಆಗಸ್ಟ್ ಕೊನೆಯಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ. “ಅಧ್ಯಕ್ಷ” ಚಿತ್ರದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿರುತ್ತಾರೆ. ಸಾಧುಕೋಕಿಲ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರು ನಿರ್ದೇಶಕ ಅನಿಲ್ ಕುಮಾರ್.

ನಾನು “ಹೆಬ್ಬುಲಿ”, ” ರಾಬರ್ಟ್ ” ಹಾಗೂ “ಮದಗಜ” ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ. ಆದರೆ ನನ್ನ ಹೆಂಡತಿ ಹೆಸರಿನಲ್ಲಿ “ಒಂದಲ್ಲಾ ಎರಡಲ್ಲಾ” ಚಿತ್ರ ನಿರ್ಮಾಣ ಮಾಡಿದೆ. ಆ ಚಿತ್ರಕ್ಕೆ ಸಾಕಷ್ಟು ಪ್ರಶಸ್ತಿಗಳು ಬಂತು. “ಉಪಾಧ್ಯಕ್ಷ” ಚಿತ್ರಕ್ಕೂ ನನ್ನ ಹೆಂಡತಿ ಸ್ಮಿತ ಅವರೆ ನಿರ್ಮಾಪಕರು. “ಉಪಾಧ್ಯಕ್ಷ” ಚಿತ್ರದ ಕಥೆ ಚೆನ್ನಾಗಿದೆ. ಗೆಲುತ್ತದೆ ಎಂಬ ವಿಶ್ವಾಸವಿದೆ. ನಿಮ್ಮೆಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್.

ನನಗೆ “ರಾಜಹುಲಿ”, ” ಅಧ್ಯಕ್ಷ ” ಚಿತ್ರಗಳ ನಂತರ ಹೀರೋ ಆಗಲು ಸಾಕಷ್ಟು ಅವಕಾಶಗಳು ಬಂತು. ಆದರೆ ನಾನು ಒಪ್ಪಿರಲಿಲ್ಲ. ಈ ಚಿತ್ರದ ಕೇಳಿ ಒಪ್ಪಿಕೊಂಡೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಒಬ್ಬ ಹಾಸ್ಯ ಕಲಾವಿದ ನಾಯಕನಾಗಿ ನಟಿಸುತ್ತಾನೆ ಎಂದರೆ, ಚಿಕ್ಕ ಬಜೆಟ್ ನಲ್ಲಿ ಮುಗಿಸುತ್ತಾರೆ. ಆದರೆ ನಮ್ಮ ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅವರಿಗೆ ಧನ್ಯವಾದ. ಅನಿಲ್ ಕುಮಾರ್ ಬಹಳ‌ ದಿನಗಳ ಪರಿಚಯ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಚಿತ್ರ ಗೆಲುವುದು ಖಂಡಿತಾ. ‌ಇಷ್ಟು ದಿನ ಬೇಕಾದಷ್ಟು ಪ್ರೋತ್ಸಾಹ ನೀಡಿದ್ದೀರಿ. ಮುಂದೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದರು ಚಿಕ್ಜಣ್ಣ.

ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನನಗೆ ಇದು ಮೊದಲ ಚಿತ್ರ. ಕಥೆ ಚೆನ್ನಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ಮಲೈಕ ತಿಳಿಸಿದರು.

ನಟ ಧರ್ಮಣ್ಣ ಹಾಗೂ ಛಾಯಾಗ್ರಾಹಕ ಶೇಖರ್ ಚಂದ್ರ “ಉಪಾಧ್ಯಕ್ಷ” ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಜುಲೈ 8ಕ್ಕೆ ವೆಡ್ಡಿಂಗ್ ಗಿಫ್ಟ್!

ಗಂಡ-ಹೆಂಡತಿ ಸಂಬಂಧ ಜನುಮ ಜನುಮಗಳ ಅನುಬಂಧ ಎಂಬ ನಂಬಿಕೆ ನಮ್ಮ ದೇಶದಲ್ಲಿದೆ. ಮದುವೆಯಾದ ಹೊಸತರಲ್ಲೇ ಈ ಸಂಬಂಧದಲ್ಲಿ ಬಿರುಕು ಬಂದರೆ ಏನಾಗುತ್ತದೆ? ಎಂಬ ಕಥಾವಸ್ತುವಿನೊಂದಿಗೆ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ನಿರ್ದೇಶಕ ವಿಕ್ರಂಪ್ರಭು.‌

ನಿಶಾಂತ್ – ಸೋನುಗೌಡ ನಾಯಕ, ನಾಯಕಿಯಾಗಿ ನಟಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಪ್ರೇಮ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ನಾನು ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್” ಚಿತ್ರದಲ್ಲಿ ಕೆಲಸ ಮಾಡಿದ್ದೆ. ನಂತರ ಪುಣೆಯಲ್ಲಿ ವಾಸ. ಕೆಲವು ವರ್ಷಗಳ ನಂತರ “ವೆಡ್ಡಿಂಗ್ ಗಿಫ್ಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಕೂಡ ಮಾಡಿದ್ದೇನೆ. ಕಳೆದ ವರ್ಷ ಜುಲೈನಲ್ಲಿ ನಮ್ಮ ಸಿನಿಮಾ ಮುಹೂರ್ತ ನೆರವೇರಿತ್ತು. ಈ ಜುಲೈನಲ್ಲಿ ತೆರೆ ಕಾಣುತ್ತಿದೆ. ನಿಗದಿಯಂತೆ ನಡೆಯಲು ಚಿತ್ರತಂಡದ ಸಹಕಾರ ಅಪಾರ. ಸಮಾಜಕ್ಕೆ ಉತ್ತಮ ಸಂದೇಶವುಳ್ಳ ಚಿತ್ರ ನೀಡುತ್ತಿದ್ದೇನೆ. ನೋಡಿ ಹಾರೈಸಿ ಎಂದರು ವಿಕ್ರಂಪ್ರಭು.

ನಾನು ಸಾಮಾನ್ಯವಾಗಿ ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ವಿಕ್ರಂಪ್ರಭು ಅವರು ಕಥೆ ಹೇಳಿದ ತಕ್ಷಣ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಅಂತಹ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ನಾನು ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಟಿ ಪ್ರೇಮ.

ಇದೊಂದು ಭಾವನಾತ್ಮಕ ಚಿತ್ರ. ಯಾರು ಈ ಕಷ್ಟಗಳನೆಲ್ಲಾ ಅನುಭವಿಸಿರುತ್ತಾರೊ, ಅವರಿಗೆ ಈ ಚಿತ್ರ ಹತ್ತಿರವಾಗಲಿದೆ. ಈ ಪಾತ್ರ ಮಾಡುವಾಗ ನನಗಂತು‌ ನಿಜವಾಗಲೂ ಕಷ್ಟವಾಯಿತು. ಇಂತಹವರು ಇರುತ್ತಾರಾ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಒಬ್ಬ ನಟಿಯಾಗಿ ಎಲ್ಲಾ ಪಾತ್ರಗಳನ್ನು ಮಾಡಬೇಕು. ಪಾಸಿಟಿವ್ ಹಾಗೂ ನೆಗಟಿವ್ ಎರಡು ಪಾತ್ರಗಳಲ್ಲೂ ಅಭಿನಯಿಸಿದ್ದೇನೆ. ಹಾಗೊಂದು ವೇಳೆ ನೆಗಟಿವ್ ಪಾತ್ರ ನೋಡುಗರಿಗೆ ಹಿಡಿಸಿತೆಂದರೆ, ಅದು ನನ್ನ ನಿಜವಾದ ಗೆಲುವು ಎನ್ನುತ್ತಾರೆ ನಟಿ ಸೋನು ಗೌಡ.

ಜುಲೈ 8 ರಂದು ಸುಮಾರು 50ರಿಂದ 75ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಮಾಡಲಿದ್ದೇವೆ. ಹೆಚ್ಚಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದರು ವಿತರಕ ಶ್ರೀಧರ್.

ಛಾಯಾಗ್ರಾಹಕ ಉದಯಲೀಲ ಹಾಗೂ ಸಂಕಲನಕಾರ ವಿಜೇತ್ ಚಂದ್ರ ಸಹ “ವೆಡ್ಡಿಂಗ್ ಗಿಫ್ಟ್” ಮಾತನಾಡಿದರು.

ನಿಶಾಂತ್, ಸೋನು ಗೌಡ, ಪ್ರೇಮ, ಅಚ್ಯುತಕುಮಾರ್, ಪವಿತ್ರಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಜುಲೈನಲ್ಲಿ ಡೊಳ್ಳು ಕುಣಿತ!

ಕನ್ನಡದಲ್ಲಿ ಕಮರ್ಷಿಯಲ್, ಹೊಡಿಬಡಿ, ಪ್ರೀತಿ-ಪ್ರೇಮ ಸಿನಿಮಾಗಳ ಮಧ್ಯೆ ಪ್ರಯೋಗಾತ್ಮಕ ಸಿನಿಮಾಗಳು ಪ್ರೇಕ್ಷಕರನ್ನು ಗಮನ ಸೆಳೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ತಯಾರಾಗಿರವ ಸಿನಿಮಾ ಡೊಳ್ಳು. ಗ್ರಾಮೀಣ ಭಾಗದಲ್ಲಿ ಹಾಸು ಹೊಕ್ಕಾಗಿರುವ ಜನಪದ ಕಲೆ ಡೊಳ್ಳಿನ ಮಹತ್ವ ಸಾರುವ ಕಥಾ ಹೂರಣ ಡೊಳ್ಳು ಚಿತ್ರದ ಮೊದಲ ಝಲಕ್ ಚಿತ್ರ ಪ್ರೇಮಿಗಳ ಮಡಿಲು ಸೇರಿದೆ.

ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನ ಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂಬ ಸಾರಂಶದೊಂದಿಗೆ ಹಳ್ಳಿಯಲ್ಲಿ ತೆರೆದುಕೊಳ್ಳುವ ಟೀಸರ್ ನಲ್ಲಿ ಡೊಳ್ಳಿನ ಮಹತ್ವದ ಬಗ್ಗೆ ತಿಳಿಸಲಾಗಿದೆ. ಕೈಲಾಸದಲ್ಲಿ ಕುಳಿತಿರುವ ಶಿವಪ್ಪನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಕೂಡ ಡೊಳ್ಳು ಅಂತಾ ನಂಬಿರುವ ಹಳ್ಳಿ ಮಂದಿ ಸುತ್ತಾ, ಜನಪದ ಕಲೆ ಡೊಳ್ಳಿನ ಸುತ್ತಾ ಟೀಸರ್ ನ್ನು ಕಟ್ಟಿಕೊಡಲಾಗಿದೆ.

ಡೊಳ್ಳು ಕುಣಿತ ಕಂಟೆಂಟ್ ಹೊಂದಿರುವ ಈ ಸಿನ್ಮಾ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಲ್ಲದೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದೆ. ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವಿಸ್’ ನಿರ್ಮಾಣ ಸಂಸ್ಥೆಯಡಿ ಡೊಳ್ಳು ಚಿತ್ರ ನಿರ್ಮಾಣ ಮಾಡಿದ್ದಾರೆ.

ಮಹಾನ್ ಹುತಾತ್ಮ ಕಿರುಚಿತ್ರದ ಸಾರಥಿ ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಡೊಳ್ಳು ಸಿನಿಮಾದಲ್ಲಿ . ಕಿರುತೆರೆ ನಟ ಕಾರ್ತಿಕ್ ಮಹೇಶ್ ನಾಯಕನಾಗಿ, ನಿಧಿ ಹೆಗ್ಡೆ ನಾಯಕಿ ಪಾತ್ರ ನಿರ್ವಹಿಸಲಿದ್ದಾರೆ. ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶ್ರೀನಿಧಿ ಡಿಎಸ್ ಚಿತ್ರಕಥೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಸ್ ಕಲಾಥಿ ಛಾಯಾಗ್ರಹಣ, ಬಿಎಸ್ ಕೆಂಪರಾಜು ಸಂಕಲನವಿರುವ ಡೊಳ್ಳು ಸಿನಿಮಾ ಜುಲೈನಲ್ಲಿ ಥಿಯೇಟರ್ ಗೆ ಆಗಮನವಾಗಲಿದೆ.

Categories
ಸಿನಿ ಸುದ್ದಿ

ಧರಣಿಯಲ್ಲೊಂದು ರೋಚಕ ಟೀಸರ್: ಹಲವು ತಿರುವುಗಳ ಮಧ್ಯೆ ಕೆಂಡ ಮಂಡಲ ಕಥೆ…!

ಗುಳ್ಟು ಸಿನಿಮಾ ಖ್ಯಾತಿಯ ನವೀನ್ ಹಾಗೂ ಮುದ್ದು ಮುಖದ ಚೆಲುವೆ ಐಶಾನಿ ಶೆಟ್ಟಿ ಜೋಡಿಯಾಗಿ ನಟಿಸಿರುವ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ಟೀಸರ್ ಸ್ಯಾಂಡಲ್ ವುಡ್ ದಶ ದಿಕ್ಕುಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ತನ್ನೊಳಗೆ ಬಚ್ಚಿಟ್ಟುಗೊಂಡಿರುವ ಹರಿತವಾದ ಹಾಗೂ ವಿಭಿನ್ನ ಕಥಾನಕ ಸುಳಿವು ಟೀಸರ್ ಮೂಲಕ ಅನಾವರಣಗೊಂಡಿದೆ.

ಡ್ರಗ್ಸ್, ಕೊಲೆ, ಪ್ರೀತಿ, ಪ್ರೇಮ, ಕುಟುಂಬದ ಸುತ್ತ ಹೆಣೆದಿರುವ ಟೀಸರ್ ನೋಡುಗರ ನಿರೀಕ್ಷೆ ಹೆಚ್ಚಿಸಿದೆ. ಇದೊಂದು ಡಿಫರೆಂಟ್ ಕಥೆ ಎಂಬುದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಟೀಸರ್ ಯೂಟ್ಯೂಬ್ ಲೋಕದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಬೋಲ್ಡ್ ಲುಕ್ ನಲ್ಲಿ ಐಶಾನಿ ಶೆಟ್ಟಿ ಗಮನ ಸೆಳೆದರೆ, ನವೀನ್ ಹೀರೋ. ಇವರೊಂದಿಗೆ ಯಶ್ ಶೆಟ್ಟಿ , ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್ ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭಾವಿ ತಮ್ಮ ಪಾತ್ರಗಳ ಮೂಲಕ ಜೀವಿಸಿದ್ದಾರೆ.

ಟಾಲಿವುಡ್ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಅವರೊಂದಿಗೆ ಕೆಲಸ ಮಾಡಿರುವ ಅನುಭವ ಶ್ರೀಧರ್ ಶಿಕಾರಿಪುರ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ.

ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಈ ಚಿತ್ರವನ್ನು ಓಂಕಾರ್‌ ನಿರ್ಮಿಸಿದ್ದಾರೆ. ವೀರೇಂದ್ರ ಕಾಂಚನ್‌, ಕೆ ಗೌತಮಿ ರೆಡ್ಡಿ ನಿರ್ಮಾಣಕ್ಕೆ ಸಾಥ್‌ ನೀಡಿದ್ದಾರೆ. ಕೀರ್ತನ್‌ ಪೂಜಾರಿ ಕ್ಯಾಮೆರಾ, ರೋಣದ ಬಕ್ಕೇಶ್‌, ಕಾರ್ತಿಕ್‌ ಚೆನ್ನೋಜಿರಾವ್‌ ಅವರ ಸಂಗೀತ ಉಜ್ವಲ್ ಚಂದ್ರ ಸಂಕಲನವಿದೆ.

Categories
ಸಿನಿ ಸುದ್ದಿ

ಚಾಂದಿನಿ ಬಾರ್ ನಲ್ಲೇ ಇವರ ಬದುಕು-ಬವಣೆ…

ಬಾರ್ ನಲ್ಲಿ ಸಂತಸಕ್ಕೂ ಬಂದು ಕುಡಿತಾರೆ. ದು:ಖ ಮರೆಯಬೇಕೆನ್ನುವವರೂ ಬರುತ್ತಾರೆ ಎನ್ನುವುದಷ್ಟೇ ನಮಗೆ ಗೊತ್ತು. ಆದರೆ ಅಲ್ಲಿಯೇ ತಮ್ಮ ಜೀವನ ಕಟ್ಟಿಕೊಂಡವರೂ ಇರುತ್ತಾರೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹಾಗೆ ಬಾರ್‌ನಲ್ಲಿ ತಮ್ಮ ಬದುಕು ಕಟ್ಟಿಕೊಂಡವರ ಕಥೆಯನ್ನು ಚಾಂದಿನಿ ಬಾರ್ ಎನ್ನುವ ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ರಾಘವೇಂದ್ರಕುಮಾರ್.


ಮೂಲತ: ಮೈಸೂರಿನವರಾದ ಇವರು ಬರಗೂರು ರಾಮಚಂದ್ರಪ್ಪ, ಮಂಜು ಸ್ವರಾಜ್
ಅವರ ಬಳಿ ಕೆಲಸ ಕಲಿತು ನಂತರ ಈ ಸಿನಿಮಾ ರೆಡಿ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಚಾಂದಿನಿಬಾರ್ ಚಿತ್ರದ ಟೈಟಲ್ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಚಿತ್ರದಲ್ಲಿ ರಾಘವೇಂದ್ರಕುಮಾರ್ ಅವರೇ ನಾಯಕನಾಗಿ ನಟಿಸಿದ್ದು, ಸುಕೃತಿ ನಾಯಕಿಪಾತ್ರ ನಿರ್ವಹಿಸಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರಾಘವೇಂದ್ರ ನಾನು ಮೂಲತ: ಹುಣಸೂರು ಬಳಿಯ ಹಳ್ಳಿಯವನು. ಸಿನಿಮಾ ಮಾಡಲೆಂದು ಕಥೆ ರೆಡಿ ಮಾಡಿಕೊಂಡೆ. ನಮ್ಮಂಥ ಹೊಸಬರನ್ನು ನಂಬಿ ಹಣ ಹೂಡಲು ಯಾರೂ
ಮುಂದೆ ಬರಲಿಲ್ಲ, ಕೊನೆಗೆ ನಾವೇ ಸ್ನೇಹಿತರೆಲ್ಲ ಸೇರಿ ಈ ಚಿತ್ರ ನಿರ್ಮಿಸಿದ್ದೇವೆ. ಚಾಂದಿನಿ ಬಾರ್‌ನಲ್ಲಿ ಒಂದಷ್ಟು ವ್ಯಕ್ತಿಗಳ ಲೈಫ್‌ ಜರ್ನಿಯನ್ನು ಹೇಳಿದ್ದೇವೆ. ಬಾರ್‌ನಲ್ಲಿ ಕೆಲಸ
ಮಾಡುವ ಸಪ್ಲೈಯರ್ ಆಗಿ ನಾನು ನಟಿಸಿದ್ದೇನೆ.

ಬಾರ್‌ನಲ್ಲಿ ಕೆಲಸ ಮಾಡೋ ಹುಡುಗನಲ್ಲಿ ಪ್ರೀತಿ ಹೇಗೆ ಹುಟ್ಟುತ್ತೆ, ಹೇಗೆ ಬ್ರೇಕ್ ಆಗುತ್ತೆ, ನಂತರ ಆತನ
ಜೀವನ ಹೇಗೆ ಸಾಗುತ್ತೆ ಎಂಬುದನ್ನು ಒಂದಷ್ಟು ತಿರುವುಗಳ ಮೂಲಕ ಹೇಳಿದ್ದೇವೆ. ಒಬ್ಬ ವೇಶ್ಯೆಯೂ ಇದರಲ್ಲಿ ಬರುತ್ತಾಳೆ. ಚಿಂಟು ಎಂಬ ಹುಡುಗನ ಕಥೆಯೂ ಇಲ್ಲಿದೆ. ಮೈಸೂರು ಸುತ್ತಮುತ್ತ ೪೩ ದಿನಗಳ ಕಾಲ ಶೂಟಿಂಗ್ ನಡೆಸಿದ್ದೇವೆ, ಮೈಸೂರಲ್ಲೇ ಚಾಂದಿನಿ ಬಾರ್‌ನ ಸೆಟ್ ಹಾಕಿದ್ದೆವು.ಸೆನ್ಸಾರ್ ನಿಂದ ನಮ್ಮ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ, ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡೋ ಯೋಜನೆಯಿದೆ ಎಂದರು.

ಈ ಚಿತ್ರದ 5 ಹಾಡುಗಳಿಗೆ ಸಹೋದರರಾದ ವಿಶಾಖ ನಾಗಲಾಪುರ ಹಾಗೂ ಕಾರ್ತೀಕ್ ನಾಗಲಾಪುರ ಸಂಗೀತ ಸಂಯೋಜನೆ ಮಾಡಿದ್ದಾರೆ. ರಿತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತವಿದ್ದು, ಚೇತನ್ ಶರ್ಮ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.

Categories
ಸಿನಿ ಸುದ್ದಿ

ಬಹುಭಾಷಾ ಚಿತ್ರ ಸರೋಜಿನಿಯಲ್ಲಿ ನಿಸರ್ಗ ಗೌಡ ನಟನೆ…

ವಿಸಿಕಾ ಫಿಲ್ಮ್ಸ್ ಪ್ರೈವೆಟ್ ಲಿ. ​​​​ನ ಚರಣ್ ಸುವರ್ಣ, ಹನಿ ಚೌಧರಿ ನಿರ್ಮಾಣದಲ್ಲಿ ನಿರ್ಮಿಸುತ್ತಿರುವ, ವಿಶ್ವ ವಿಖ್ಯಾತ ಶ್ರೀ ಸರೋಜಿನಿ ನಾಯ್ಡು ಅವರ ಜೀವನ ಕಥೆ ಆಧಾರಿತ ಚಿತ್ರ ಸರೋಜಿನಿ ಚಿತ್ರದಲ್ಲಿ ಭಾರತದ ಚಿತ್ರರಂಗದ ದೊಡ್ಡ ಕಲಾವಿದರ ದಂಡೆ ಕೆಲಸ ಮಾಡುತ್ತಿದೆ.


ನಿರ್ದೇಶಕ ವಿನಯ ಚಂದ್ರ ಹೇಳುವಂತೆ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಿಸರ್ಗಾ ಗೌಡ ಅವರು ನಟಿಸುತ್ತಿದ್ದಾರೆ.. ನಿಸರ್ಗಗೌಡ ಅವರು ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಿಸರ್ಗ ಗೌಡ ಸರೋಜಿನಿ ಚಿತ್ರದಲ್ಲಿ ಅವರ ಪಾತ್ರಕ್ಕೆ ತುಂಬಾನೆ ಖುಷಿಯಾಗಿದ್ದು ಪಾತ್ರ ಹಳೆ ಕಾಲ ಘಟ್ಟದ್ದು ಆಗಿರುವುದರಿಂದ ನಿಸರ್ಗ ಗೌಡ ಅವರು ಈ ಪಾತ್ರ ಚಾಲೆಂಜಿಂಗ್ ಆಗಿದೆ ಎಂದಿದ್ದಾರೆ. ಇನ್ನೂ ಇಂತಹ ಹಲವು ಅವಕಾಶಗಳು ಈ ಸಿನಿಮಾದ ಮೂಲಕ ದೊರಕಲಿವೆ ಎಂಬ ಭರವಸೆಯಲ್ಲಿದ್ದಾರೆ ಅವರು.

Categories
ಸಿನಿ ಸುದ್ದಿ

ತುರ್ತು ನಿರ್ಗಮನ ಟ್ರೇಲರ್ ಸದ್ದು ಜೋರು: ಜೂನ್ 24ಕ್ಕೆ ಸಿನಿಮಾ ರಿಲೀಸ್

“ಎಕ್ಸ್ ಕ್ಯೂಸ್ ಮಿ” ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ನಟ ಸುನೀಲ್ ರಾವ್. “ಓಲ್ಡ್ ಮಾಂಕ್” ಸೇರಿದಂತೆ ಕೆಲವು ಚಿತ್ರಗಳಲ್ಲಿ ಆತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಮೂಲಕ ಸುನೀಲ್ ರಾವ್ ಹೀರೋ ಆಗಿ ಮರುಪ್ರವೇಶ ಮಾಡುತ್ತಿದ್ದಾರೆ. ಹೇಮಂತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಜನಮನಸೂರೆಗೊಂಡಿದೆ. ಚಿತ್ರ ಜೂನ್ 24ರಂದು ಬಿಡುಗಡೆಯಾಗಲಿದೆ.

ನಮ್ಮ ಚಿತ್ರದ ಟ್ರೇಲರ್ ಗೆ ಬರುತ್ತಿರುವ ಮೆಚ್ಚುಗೆ ನೋಡಿ ಮನ ತುಂಬಿ ಬಂದಿದೆ. ಇದೇ ಇಪ್ಪತ್ತನಾಲ್ಕು ಬಿಡುಗಡೆಯಾಗುತ್ತಿದೆ. ಒಳ್ಳೆಯ ಪ್ರಯತ್ನ ಮಾಡಿದ್ದೇವೆ. ನೋಡಿ ಹಾರೈಸಿ ಎಂದರು ಚಿತ್ರದ ನಿರ್ಮಾಪಕರು ಆಗಿರುವ ನಿರ್ದೇಶಕ‌ ಹೇಮಂತ್ ಕುಮಾರ್.

ನಾನು ನಾಯಕನಾಗಿ ನಟಿಸಿ ಬಹಳ ವರ್ಷಗಳೇ ಆಗಿತ್ತು. ಈ ಚಿತ್ರದ ‌ಮೂಲಕ ನಾಯಕನಾಗಿ‌ ಮರುಪ್ರವೇಶ ಮಾಡುತ್ತಿದ್ದೇನೆ. ಟ್ರೇಲರ್ ನೋಡಿದ್ದ ಅನೇಕ ಗೆಳೆಯರು ಅಭಿನಂದಿಸುತ್ತಿದ್ದಾರೆ. ಈ ಪ್ರಶಂಸೆಗೆ ಮನತುಂಬಿ ಬಂದಿದೆ. ನಿರ್ದೇಶಕ ಹೇಮಂತ್ ಕುಮಾರ್‌ ಪ್ರತಿಭಾವಂತ ನಿರ್ದೇಶಕ ಅವರು ಕಥೆ ಹೇಳಿ, ಅರ್ಧ ಗಂಟೆಗೆ ನಾನು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಉತ್ತಮ ತಂತ್ರಜ್ಞರು ಹಾಗೂ ಕಲಾವಿದರಿಂದ ಕೂಡಿದ ತಂಡವಿದು. ಟ್ರೇಲರ್ ಗೆ ಸಿಕ್ಕಿರುವ ಪ್ರಶಂಸೆ ಸಿನಿಮಾಗೂ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು ಸುನೀಲ್ ರಾವ್.

ನಾನು ಕ್ಯಾಬ್ ಡ್ರೈವರ್ ಪಾತ್ರ ಮಾಡಿದ್ದೀನಿ. ಕಾರ್ ಡ್ರೈವಿಂಗ್ ಬರುತ್ತಿರಲಿಲ್ಲ. ನನಗೆ ಡ್ರೈವಿಂಗ್ ಹೇಳಿಕೊಟ್ಟ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಈಗ ಮಂಗಳೂರಿನಿಂದ ನಾನೇ ಕಾರ್ ಓಡಿಸಿಕೊಂಡು ಬರುತ್ತೇನೆ ಎಂದರು ರಾಜ್ ಬಿ ಶೆಟ್ಟಿ.

ನಾನು ಇಷ್ಟು ವರ್ಷಗಳಿಂದ ಅನೇಕ ಚಿತ್ರಗಳಲ್ಲಿ ಅನೇಕ ಪಾತ್ರಗಳನ್ನು ಮಾಡಿದ್ದೀನಿ. ಆದರೆ ಇಂತಹ ಪಾತ್ರ ಮಾಡಿಲ್ಲ. ಅವಕಾಶ ಕೊಟ್ಟ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು ನಟಿ ಸುಧಾರಾಣಿ.

ಈ ಚಿತ್ರವನ್ನು ಓಟಿಟಿಯಲ್ಲಿ ನೋಡುವುದಕ್ಕಿಂತ ಚಿತ್ರಮಂದಿರದಲ್ಲಿ ನೋಡಬೇಕು. ಅಂತಹ ಅದ್ಭುತ‌ ಗ್ರಾಫಿಕ್ ನಮ್ಮ ಚಿತ್ರದಲ್ಲಿದೆ. ನಾನು ಕ್ರಿಕೆಟ್ ಕೋಚ್ ಪಾತ್ರ ನಿರ್ವಹಣೆ ಮಾಡಿದ್ದೇನೆ ಎಂದರು ಸಂಯುಕ್ತ ಹೆಗಡೆ.

ಉತ್ತಮ ಚಿತ್ರದಲ್ಲಿ ನಟಿಸಿರುವ ಖುಷಿ ಯಿದೆ. ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ ಎಂದರು ಹಿತ ಚಂದ್ರಶೇಖರ್.

ಸಂಗೀತ ನಿರ್ದೇಶಕ ಧೀರೇಂದ್ರ ದಾಸ್ ಮೂಡ್ ಹಾಗೂ ಛಾಯಾಗ್ರಾಹಕ ಪ್ರಯಾಗ್ ಕೂಡ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಕಾಶ್ಮೀರಿ ಹಿಂದೂಗಳಿಗೆ ಕನ್ನಡಿಗರು ಅರ್ಪಿಸಿದ ಹಾಡು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದ್ರಿ, ಈಗ ದಿ ಕಾಶ್ಮೀರ್ ಸಾಂಗ್ ಕೇಳಿ…

ನಮ್ಮ ದೇಶದ ಮುಕುಟ ಪ್ರಾಯವಾಗಿರುವ ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ನಡೆದಿದ್ದ ಲಕ್ಷಾಂತರ ಕಾಶ್ಮೀರ ಪಂಡಿತರ ಹತ್ಯೆ, ಮಾನವ ಕ್ರೌರ್ಯದ ಪರಮಾವಧಿ, ಭೀಭತ್ಸ ಹಾಗೂ ಅಸಹ್ಯವನ್ನು‌ ಬಿಚ್ಚಿಟ್ಟಿದ ಸಿನಿಮಾ ದಿ ಕಾಶ್ಮೀರ್ ಫೈಲ್ಸ್. ಅಂದಿನ ಘನಘೋರ ಪರಿಸ್ಥಿತಿಯನ್ನು ಮನಮುಟ್ಟುವಂತೆ ಮಾತ್ರವಲ್ಲ, ಮನಸು ಘಾಸಿಗೊಳ್ಳುವಂತೆ ಸಿನಿಮಾದಲ್ಲಿ ಕಟ್ಟಿಕೊಡಲಾಗಿತ್ತು. ಇದೀಗ ಅದೇ ಕಾಶ್ಮೀರದ ಕರಾಳತೆ ಬಿಚ್ಚಿಡುವ ದಿ ಕಾಶ್ಮೀರ ಸಾಂಗ್ ಬಿಡುಗಡೆಗೆ ಸಜ್ಜಾಗಿದೆ. ಇದೇ ಶನಿವಾರ ಹಾಡು ಸಂಗೀತ ಪ್ರಿಯರ ಮಡಿಲು ಸೇರಲಿದೆ

ಕಾಶ್ಮೀರ್ ಫೈಲ್ಸ್ ದೇಶ ಮಾತ್ರವಲ್ಲ, ವಿದೇಶದಲ್ಲೂ ಸುದ್ದಿ ಮಾಡಿದ ಸಿನಿಮಾ. ಇದು ಪರ- ವಿರೋಧಗಳ ಚರ್ಚೆಗೂ ಕಾರಣವಾದ ಚಿತ್ರ. ಬಹುತೇಕ ಮಂದಿ ಸಿನಿಮಾ ಪರ ಮಾತಾಡಿದ್ದೇ ಹೆಚ್ಚು. ಈಗ ಅಂಥದ್ದೇ ಮಾತುಗಳಿಗೆ ಕಾರಣವಾಗಿದೆ ದಿ ಕಾಶ್ಮೀರ್ ಸಾಂಗ್. ಇದರ ವಿಶೇಷತೆ ಅಂದರೆ, ಇದೊಂದು ಹಿಂದಿ ವಿಡಿಯೋ ಆಲ್ಬಂ. ನಿರ್ದೇಶಕ ಕ್ರಿಶ್ ಜೋಶಿ ಅವರ ಪರಿಪೂರ್ಣ ಕಲ್ಪನೆಯಲ್ಲಿ ಮೂಡಿ ಬಂದ ಚಿತ್ರ. ಖ್ಯಾತ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ರಾಗ ಸಂಯೋಜನೆಯಲ್ಲಿ ತಯಾರಾದ ಗೀತೆ. ಈ ಕುರಿತು ದಿ ಕಾಶ್ಮೀರ್ ಸಾಂಗ್ ತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ಈ ಅಪರೂಪದ ವಿಡಿಯೋ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿರೋದು ನಟ ಕೋವಿದ್ ಮಿತ್ತಲ್. ಅವರು ಹೇಳಿದ್ದಿಷ್ಟು. ಪ್ರತಿಯೊಬ್ಬರಿಗೂ ಈ ಹಾಡು ಇಷ್ಟವಾಗುತ್ತದೆ. ಕಾಶ್ಮೀರ ಹಿಂದೂಗಳಿಗೆ ಸಮರ್ಪಣೆ ಸಲ್ಲಿಸುವ ಹಾಡು ಇದಾಗಿದೆ. ಈ ಹಾಡಲ್ಲಿ ಅಲ್ಲಿ ನಡೆದ ಸನ್ನಿವೇಶಗಳನ್ನು ಕಟ್ಟಿಕೊಡುವ ಪ್ರಯತ್ನವಾಗಿದೆ. ನಾನು ಈ ಹಾಡು ನಿರ್ಮಿಸಿ, ನಟಿಸೋಕೆ ಕಾರಣ ವೀರ್ ಸಮರ್ಥ್ ಅವರು ಸಂಯೋಜಿಸಿದ ರಾಗ. ಅದರಲ್ಲೂ ಶೇಖರ್ ಅಸ್ತಿತ್ವ ಅವರ ಸಾಹಿತ್ಯ. ಹಾಡು ಕೇಳಿದ ಮೇಲೆ ವಿಡಿಯೋ ಆಲ್ಬಂ ಮಾಡಬೇಕೆನಿಸಿ ಚಿತ್ರೀಕರಿಸಿದ್ದೇವೆ. ಈ ಹಾಡು ಕಾಶ್ಮೀರದ ಹಿಂದೂಗಳಿಗೆ ಅರ್ಪಣೆ ಎಂದರು.

ನಿರ್ದೇಶಕ ಕ್ರಿಷ್ ಜೋಷಿ, ಅವರಿಗೆ ವೀರ್ ಮಾಡಿದ ಟ್ಯೂನ್ ಇಷ್ಟವಾಗಿ ಇದನ್ನು ಯಾಕೆ ಸಾಂಗ್ ಮಾಡಬಾರದು ಅಂತ ನಿರ್ಧರಿಸಿ, ಹಿಂದಿ ಗೀತೆಗೆ ಯಾರಿಂದ ಸಾಹಿತ್ಯ ಬರೆಸುವುದು ಅಂತ ಯೋಚಿಸುತ್ತಿದ್ದಾಗ, ಬಾಲಿವುಡ್ ನ ಖ್ಯಾತ ಗೀತರಚನೆಕಾರ ಶೇಖರ್ ಅಸ್ತಿತ್ವ ಅವರ ನೆನಪಾಯಿತು. ತಕ್ಷಣ ಸಂಪರ್ಕಿಸಿದೆವು. ಅವರು ಕೇವಲ ಎರಡು ದಿನದಲ್ಲಿ ಅದ್ಭುತ ಸಾಹಿತ್ಯ ಬರೆದುಕೊಟ್ಟರು. ಸಾಂಗ್ ಕೈಗೆ ಸಿಕ್ಕಮೇಲೆ ಜೋಶ್ ಹೆಚ್ಚಾಯ್ತು. ಮನಾಲಿಯಲ್ಲಿ ಶೂಟ್ ಮಾಡಬೇಕು ಎಂಬ ಯೋಚನೆ ಇತ್ತು. ಆದ್ರೆ ಆಗಲಿಲ್ಲ. ಕಂಪ್ಲೀಟ್ ಎಮೋಷನ್ ಕಥೆ ಬಿಲ್ಡ್ ಮಾಡುವುದು ಕಷ್ಟವಾಯ್ತು. ಲೇಟ್ ಆಗಿ ಕಾಸ್ಟ್ಯೂಮ್ ಸಿಕ್ತು. ಫೈನಲಿ ಎಲ್ಲಾ ಕಷ್ಟ ಇಷ್ಟದೊಂದಿಗೆ ಸಾಂಗ್ ಕಂಪ್ಲೀಟ್ ಆಗಿದೆ ಎಂದರು.

ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರಿಗೆ ಇಂಥದ್ದೊಂದು ಹಾಡು ಹುಟ್ಟೋಕೆ ಕಾರಣ ಒಂದೊಳ್ಳೆಯ ರಾಗವಂತೆ. ಅದು ಕೊನೆಗೆ ಕಾಶ್ಮೀರ್ ಸಾಂಗ್ ಆಗಿದೆ. ಇನ್ನು ಮೊದಲ ಸಲ ನಾನೂ ಕೂಡ ತೆರೆಯ ಮೇಲೆ ಕಾಣಿಸಿಕೊಂಡಿದ್ದೇನೆ. ಒಂದೊಳ್ಳೆಯ ಹಾಡು ಕಟ್ಟಲು ಒಳ್ಳೆಯ ತಂಡ ಕಾರಣವಾಗಿದೆ. ಹಾಡಿಗೆ ತಕ್ಕಂತೆ ಚಿತ್ರೀಕರಣ ಮಾಡಲಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ. ಈ ಹಾಡು ತಲುಪಿಸಲು ಮಾಧ್ಯಮ ಮುಖ್ಯ ಪಾತ್ರವಹಿಸಬೇಕು ಎಂದರು.

ಶೇಖರ್ ಅಸ್ತಿತ್ವ ಸಾಹಿತ್ಯದ ದಿ ಕಾಶ್ಮೀರ್ ಹಾಡಿಗೆ ವೀರ್ ಸಮರ್ಥ್ ಸಂಗೀತ ನೀಡುವುದರ ಜೊತೆಗೆ ಧ್ವನಿಯಾಗಿದ್ದಾರೆ. ಕ್ರಿಶ್ ಜೋಷಿ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು ಇಲ್ಲಿ ವಿಶೇಷ. ಮನು ಛಾಯಾಗ್ರಹಣ ಮಾಡಿದರೆ, ದೀಪಕ್ ಕೆ. ರಾಜು ಸಂಕಲನ ಮಾಡಿದ್ದಾರೆ. ಕೆ.ಎಂ. ಮೀಡಿಯಾ ಮತ್ತು ಪ್ರೊಡಕ್ಷನ್ ನಡಿ ನಿರ್ಮಾಣವಾದ ಹಾಡಿಗೆ ಸಾಗರ್ ಬರರ್ದಾಪುರೆ ನಿರ್ವಹಣೆ ಇದೆ.

ಹಾಡಿನ ಸಾರಾಂಶವಿದು…

ಆದಿತ್ಯ 25 ವರ್ಷದ ನಂತರ ತನ್ನ ತಾಯ್ನಾಡು ಕಾಶ್ಮೀರಕ್ಕೆ ಬಂದಾಗ ಹಳೆ ನೆನೆಪುಗಳನ್ನು ಮೆಲುಕು ಹಾಕುತ್ತಾ ಸಾಗುವ ಕಾಶ್ಮೀರದ ಕರಾಳತೆಯನ್ನು ವಿವರಿಸುವ ಹಾಡಿನಲ್ಲಿ ಕೋವಿದ್ ಮಿತ್ತಲ್ ಹಾಗೂ ವೀರ್ ಸಮರ್ಥ್ ನಟಿಸಿದ್ದು, ಈ ಅಲ್ಬಮ್ ಸಾಂಗ್ Get High on Music” ಎಂಬದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಆಯ್ತು ಬರ್ತಿದೆ ದಿ ಕಾಶ್ಮೀರ್ ಸಾಂಗ್ ಜೂನ್ 18ರಂದು ಬಿಡುಗಡೆಯಾಗುತ್ತಿದೆ.

error: Content is protected !!