ಜುಲೈ 8ಕ್ಕೆ ವೆಡ್ಡಿಂಗ್ ಗಿಫ್ಟ್!

ಗಂಡ-ಹೆಂಡತಿ ಸಂಬಂಧ ಜನುಮ ಜನುಮಗಳ ಅನುಬಂಧ ಎಂಬ ನಂಬಿಕೆ ನಮ್ಮ ದೇಶದಲ್ಲಿದೆ. ಮದುವೆಯಾದ ಹೊಸತರಲ್ಲೇ ಈ ಸಂಬಂಧದಲ್ಲಿ ಬಿರುಕು ಬಂದರೆ ಏನಾಗುತ್ತದೆ? ಎಂಬ ಕಥಾವಸ್ತುವಿನೊಂದಿಗೆ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ನಿರ್ದೇಶಕ ವಿಕ್ರಂಪ್ರಭು.‌

ನಿಶಾಂತ್ – ಸೋನುಗೌಡ ನಾಯಕ, ನಾಯಕಿಯಾಗಿ ನಟಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಪ್ರೇಮ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ನಾನು ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್” ಚಿತ್ರದಲ್ಲಿ ಕೆಲಸ ಮಾಡಿದ್ದೆ. ನಂತರ ಪುಣೆಯಲ್ಲಿ ವಾಸ. ಕೆಲವು ವರ್ಷಗಳ ನಂತರ “ವೆಡ್ಡಿಂಗ್ ಗಿಫ್ಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಕೂಡ ಮಾಡಿದ್ದೇನೆ. ಕಳೆದ ವರ್ಷ ಜುಲೈನಲ್ಲಿ ನಮ್ಮ ಸಿನಿಮಾ ಮುಹೂರ್ತ ನೆರವೇರಿತ್ತು. ಈ ಜುಲೈನಲ್ಲಿ ತೆರೆ ಕಾಣುತ್ತಿದೆ. ನಿಗದಿಯಂತೆ ನಡೆಯಲು ಚಿತ್ರತಂಡದ ಸಹಕಾರ ಅಪಾರ. ಸಮಾಜಕ್ಕೆ ಉತ್ತಮ ಸಂದೇಶವುಳ್ಳ ಚಿತ್ರ ನೀಡುತ್ತಿದ್ದೇನೆ. ನೋಡಿ ಹಾರೈಸಿ ಎಂದರು ವಿಕ್ರಂಪ್ರಭು.

ನಾನು ಸಾಮಾನ್ಯವಾಗಿ ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ವಿಕ್ರಂಪ್ರಭು ಅವರು ಕಥೆ ಹೇಳಿದ ತಕ್ಷಣ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಅಂತಹ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ನಾನು ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಟಿ ಪ್ರೇಮ.

ಇದೊಂದು ಭಾವನಾತ್ಮಕ ಚಿತ್ರ. ಯಾರು ಈ ಕಷ್ಟಗಳನೆಲ್ಲಾ ಅನುಭವಿಸಿರುತ್ತಾರೊ, ಅವರಿಗೆ ಈ ಚಿತ್ರ ಹತ್ತಿರವಾಗಲಿದೆ. ಈ ಪಾತ್ರ ಮಾಡುವಾಗ ನನಗಂತು‌ ನಿಜವಾಗಲೂ ಕಷ್ಟವಾಯಿತು. ಇಂತಹವರು ಇರುತ್ತಾರಾ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಒಬ್ಬ ನಟಿಯಾಗಿ ಎಲ್ಲಾ ಪಾತ್ರಗಳನ್ನು ಮಾಡಬೇಕು. ಪಾಸಿಟಿವ್ ಹಾಗೂ ನೆಗಟಿವ್ ಎರಡು ಪಾತ್ರಗಳಲ್ಲೂ ಅಭಿನಯಿಸಿದ್ದೇನೆ. ಹಾಗೊಂದು ವೇಳೆ ನೆಗಟಿವ್ ಪಾತ್ರ ನೋಡುಗರಿಗೆ ಹಿಡಿಸಿತೆಂದರೆ, ಅದು ನನ್ನ ನಿಜವಾದ ಗೆಲುವು ಎನ್ನುತ್ತಾರೆ ನಟಿ ಸೋನು ಗೌಡ.

ಜುಲೈ 8 ರಂದು ಸುಮಾರು 50ರಿಂದ 75ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಮಾಡಲಿದ್ದೇವೆ. ಹೆಚ್ಚಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದರು ವಿತರಕ ಶ್ರೀಧರ್.

ಛಾಯಾಗ್ರಾಹಕ ಉದಯಲೀಲ ಹಾಗೂ ಸಂಕಲನಕಾರ ವಿಜೇತ್ ಚಂದ್ರ ಸಹ “ವೆಡ್ಡಿಂಗ್ ಗಿಫ್ಟ್” ಮಾತನಾಡಿದರು.

ನಿಶಾಂತ್, ಸೋನು ಗೌಡ, ಪ್ರೇಮ, ಅಚ್ಯುತಕುಮಾರ್, ಪವಿತ್ರಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related Posts

error: Content is protected !!