ಕನ್ನಡ ಚಿತ್ರರಂಗದಲ್ಲಿ ಭಕ್ತಿಗೀತೆಗಳು, ಜನಪದ ಗೀತೆಗಳು ಸಾಕಷ್ಟು ಬಂದಿವೆ. ಈಗ ಹೊಸತನ ಹಾಗೂ ವಿಶೇಷಗಳಿಂದ ಕೂಡಿರುವ ಮೈಲಾರ ಲಿಂಗೇಶ್ವರ ಸ್ವಾಮಿಯ ಭಕ್ತಿ ಪೂರ್ಣ ಗೀತೆ ಮೈಲಾರ ಆಲ್ಬಂ ಹಾಡು ಹೊರಹೊಮ್ಮಿದ್ದು, ನೋಡಿದವರೆಲ್ಲರೂ ನಿಂತಲ್ಲೇ ಉಘೇ ಉಘೇ ಮೈಲಾರ ಸ್ವಾಮಿ ಎನ್ನುತ್ತಿದ್ದಾರೆ.
ಜನಪದ ಹಿನ್ನಲೆ ಹಾಡುಗಳನ್ನು ಮಾಡಬೇಕೆಂಬ ಆತೀವ ಆಸಕ್ತಿ, ಶ್ರದ್ಧೆಯಿಂದ ಗಾಯಕ, ಸಂಗೀತ ನಿರ್ದೇಶಕ ಪ್ರದೀಪ್ ಚಂದ್ರ ಮೈಲಾರ ಆಲ್ಬಂ ಹಾಡು ತಯಾರಿಸಿದ್ದಾರೆ. ಮೈಸೂರು ಭಾಗದಲ್ಲಿ ಮಲೆ ಮಹದೇಶ್ವರ ಸ್ವಾಮಿ ಎಷ್ಟು ಪ್ರಸಿದ್ಧಿಯೂ ಅದೇ ರೀತಿ ಹಾವೇರಿ ಭಾಗದಲ್ಲಿ ಮೈಲಾರ ಲಿಂಗೇಶ್ವರ ಖ್ಯಾತಿ ಪಡೆದಿದೆ. ಹೀಗಾಗಿ ಮೈಲಾರ ಸ್ವಾಮಿಯ ಜಾತ್ರೆ ಸೊಬಗನ್ನು, ಅಲ್ಲಿ ಸಂಪ್ರದಾಯ, ಭವಿಷ್ಯ ನುಡಿಯುವ ಕಾರ್ಣಿಕ, ಅಲ್ಲಿನ ಪವಾಡಗಳನ್ನು ಮುಖ್ಯವಸ್ತುವನ್ನಾಗಿರಿಸಿಕೊಂಡು ಚೆಂದದ ಆಲ್ಬಂ ಸಾಂಗ್ ರೂಪಿಸಿದ್ದಾರೆ. ಇತ್ತೀಚೆಗೆ ನಟ ರಮೇಶ್ ಅರವಿಂದ್ ಸಾಂಗ್ ವೀಕ್ಷಿಸಿ ಮೆಚ್ಚುಗೆ ಪಟ್ಟು ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇಷ್ಟಪಟ್ಟು ನಟಿಸಿರುವ ಮೈಲಾರ ಹಾಡಿಗೆ ಸಂಜಯ್ ಕುಲಕರ್ಣಿ ನಿರ್ದೇಶನ ಮಾಡಿದ್ದು, ವಿಜಯ್ ಪ್ರಕಾಶ್ ಧ್ವನಿ ಕುಣಿಸಿರುವ, ಪ್ರದೀಪ್ ಚಂದ್ರ ಮ್ಯೂಸಿಕ್ ಹಾಗೂ ಸಾಹಿತ್ಯದ ಇಂಪು, ಚಂದ್ರು ಹಾಗೂ ರಾಜಶೇಖರ್ ಛಾಯಾಗ್ರಹಣ ತಂಪು ಹಾಡಿನ ಸೊಬಗನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.
ಕಮರ್ಷಿಯಲ್ ಹಾಡುಗಳಿಗಿಂತ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಆಲ್ಬಂ ಗೀತೆ ಸೃಷ್ಟಿಯ ಹಿಂದೆ ನೂರಾರು ಜನರ ಪರಿಶ್ರಮವಿದೆ. ಸರ್ಕಾರದಿಂದ ಅನುಮತಿ ಪಡೆದು ಇಡೀ ಹಾಡನ್ನು ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಅತ್ಯಂತ ವೈಭವದಿಂದ ನಡೆಯುವ ಜಾತ್ರೆಯನ್ನು ಇಡೀ ನಾಡಿಗೆ ಪರಿಚಯಿಸಲು ರೂಪಗೊಂಡಿರುವ ಮೈಲಾರ ಹಾಡಿನ ಹಿಂದಿನ ಸಾರಥಿ ನಿರ್ಮಾಪಕ ರಾಜಶೇಖರ್ ಮೇತ್ರಿ. ವೃತ್ತಿಯಲ್ಲಿ ವೈದ್ಯರಾಗಿರುವ ರಾಜಶೇಖರ್ ಹೊಸ ಪ್ರತಿಭೆ ಪ್ರದೀಪ್ ಚಂದ್ರ ಅವರನ್ನು ಪ್ರೋತ್ಸಾಹಿಸಿ ಕನ್ನಡ ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ.
ಸಾಕಷ್ಟು ಲೈವ್ ವಾದ್ಯಗಳಿಂದ, ಲಕ್ಷಾಂತರ ಜನರ ನಡುವೆ ಚಿತ್ರೀಕರಣವಾಗಿರುವ ಹಾಡಿನಲ್ಲಿ ಸಂಚಾರಿ ವಿಜಯ್ ಜೊತೆಗೆ ಪ್ರದೀಪ್ ಚಂದ್ರ ಹಾಗೂ ಯಶಸ್ವಿನಿ ನಟಿಸಿದ್ದಾರೆ. ಇಂತಹ ಅದ್ಬುತ ಆಲ್ಬಂ ಹಾಡು ನಿರ್ಮಾಣ ಮಾಡಲು ಸಾಹಸ ಮಾಡಿದ ನಿರ್ಮಾಪಕ ರಾಜಶೇಖರ್ ಹಾಗೂ ಇಡೀ ತಂಡಕ್ಕೊಂದು ಸಲಾಂ ಎಂಬುದು ನಿರ್ದೇಶಕ ಹಾಗು ಸಂಗೀತ ನಿರ್ದೇಶಕರ ಮಾತು.