ಗುಳ್ಟು ಸಿನಿಮಾ ಖ್ಯಾತಿಯ ನವೀನ್ ಹಾಗೂ ಮುದ್ದು ಮುಖದ ಚೆಲುವೆ ಐಶಾನಿ ಶೆಟ್ಟಿ ಜೋಡಿಯಾಗಿ ನಟಿಸಿರುವ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ಟೀಸರ್ ಸ್ಯಾಂಡಲ್ ವುಡ್ ದಶ ದಿಕ್ಕುಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ತನ್ನೊಳಗೆ ಬಚ್ಚಿಟ್ಟುಗೊಂಡಿರುವ ಹರಿತವಾದ ಹಾಗೂ ವಿಭಿನ್ನ ಕಥಾನಕ ಸುಳಿವು ಟೀಸರ್ ಮೂಲಕ ಅನಾವರಣಗೊಂಡಿದೆ.

ಡ್ರಗ್ಸ್, ಕೊಲೆ, ಪ್ರೀತಿ, ಪ್ರೇಮ, ಕುಟುಂಬದ ಸುತ್ತ ಹೆಣೆದಿರುವ ಟೀಸರ್ ನೋಡುಗರ ನಿರೀಕ್ಷೆ ಹೆಚ್ಚಿಸಿದೆ. ಇದೊಂದು ಡಿಫರೆಂಟ್ ಕಥೆ ಎಂಬುದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಟೀಸರ್ ಯೂಟ್ಯೂಬ್ ಲೋಕದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಬೋಲ್ಡ್ ಲುಕ್ ನಲ್ಲಿ ಐಶಾನಿ ಶೆಟ್ಟಿ ಗಮನ ಸೆಳೆದರೆ, ನವೀನ್ ಹೀರೋ. ಇವರೊಂದಿಗೆ ಯಶ್ ಶೆಟ್ಟಿ , ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್ ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭಾವಿ ತಮ್ಮ ಪಾತ್ರಗಳ ಮೂಲಕ ಜೀವಿಸಿದ್ದಾರೆ.

ಟಾಲಿವುಡ್ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಅವರೊಂದಿಗೆ ಕೆಲಸ ಮಾಡಿರುವ ಅನುಭವ ಶ್ರೀಧರ್ ಶಿಕಾರಿಪುರ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ.

ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಈ ಚಿತ್ರವನ್ನು ಓಂಕಾರ್ ನಿರ್ಮಿಸಿದ್ದಾರೆ. ವೀರೇಂದ್ರ ಕಾಂಚನ್, ಕೆ ಗೌತಮಿ ರೆಡ್ಡಿ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಕೀರ್ತನ್ ಪೂಜಾರಿ ಕ್ಯಾಮೆರಾ, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಅವರ ಸಂಗೀತ ಉಜ್ವಲ್ ಚಂದ್ರ ಸಂಕಲನವಿದೆ.