ಬಾರ್ ನಲ್ಲಿ ಸಂತಸಕ್ಕೂ ಬಂದು ಕುಡಿತಾರೆ. ದು:ಖ ಮರೆಯಬೇಕೆನ್ನುವವರೂ ಬರುತ್ತಾರೆ ಎನ್ನುವುದಷ್ಟೇ ನಮಗೆ ಗೊತ್ತು. ಆದರೆ ಅಲ್ಲಿಯೇ ತಮ್ಮ ಜೀವನ ಕಟ್ಟಿಕೊಂಡವರೂ ಇರುತ್ತಾರೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹಾಗೆ ಬಾರ್‌ನಲ್ಲಿ ತಮ್ಮ ಬದುಕು ಕಟ್ಟಿಕೊಂಡವರ ಕಥೆಯನ್ನು ಚಾಂದಿನಿ ಬಾರ್ ಎನ್ನುವ ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ರಾಘವೇಂದ್ರಕುಮಾರ್.
ಮೂಲತ: ಮೈಸೂರಿನವರಾದ ಇವರು ಬರಗೂರು ರಾಮಚಂದ್ರಪ್ಪ, ಮಂಜು ಸ್ವರಾಜ್
ಅವರ ಬಳಿ ಕೆಲಸ ಕಲಿತು ನಂತರ ಈ ಸಿನಿಮಾ ರೆಡಿ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಚಾಂದಿನಿಬಾರ್ ಚಿತ್ರದ ಟೈಟಲ್ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಚಿತ್ರದಲ್ಲಿ ರಾಘವೇಂದ್ರಕುಮಾರ್ ಅವರೇ ನಾಯಕನಾಗಿ ನಟಿಸಿದ್ದು, ಸುಕೃತಿ ನಾಯಕಿಪಾತ್ರ ನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರಾಘವೇಂದ್ರ ನಾನು ಮೂಲತ: ಹುಣಸೂರು ಬಳಿಯ ಹಳ್ಳಿಯವನು. ಸಿನಿಮಾ ಮಾಡಲೆಂದು ಕಥೆ ರೆಡಿ ಮಾಡಿಕೊಂಡೆ. ನಮ್ಮಂಥ ಹೊಸಬರನ್ನು ನಂಬಿ ಹಣ ಹೂಡಲು ಯಾರೂ
ಮುಂದೆ ಬರಲಿಲ್ಲ, ಕೊನೆಗೆ ನಾವೇ ಸ್ನೇಹಿತರೆಲ್ಲ ಸೇರಿ ಈ ಚಿತ್ರ ನಿರ್ಮಿಸಿದ್ದೇವೆ. ಚಾಂದಿನಿ ಬಾರ್‌ನಲ್ಲಿ ಒಂದಷ್ಟು ವ್ಯಕ್ತಿಗಳ ಲೈಫ್ ಜರ್ನಿಯನ್ನು ಹೇಳಿದ್ದೇವೆ. ಬಾರ್‌ನಲ್ಲಿ ಕೆಲಸ
ಮಾಡುವ ಸಪ್ಲೈಯರ್ ಆಗಿ ನಾನು ನಟಿಸಿದ್ದೇನೆ.
ಬಾರ್‌ನಲ್ಲಿ ಕೆಲಸ ಮಾಡೋ ಹುಡುಗನಲ್ಲಿ ಪ್ರೀತಿ ಹೇಗೆ ಹುಟ್ಟುತ್ತೆ, ಹೇಗೆ ಬ್ರೇಕ್ ಆಗುತ್ತೆ, ನಂತರ ಆತನ
ಜೀವನ ಹೇಗೆ ಸಾಗುತ್ತೆ ಎಂಬುದನ್ನು ಒಂದಷ್ಟು ತಿರುವುಗಳ ಮೂಲಕ ಹೇಳಿದ್ದೇವೆ. ಒಬ್ಬ ವೇಶ್ಯೆಯೂ ಇದರಲ್ಲಿ ಬರುತ್ತಾಳೆ. ಚಿಂಟು ಎಂಬ ಹುಡುಗನ ಕಥೆಯೂ ಇಲ್ಲಿದೆ. ಮೈಸೂರು ಸುತ್ತಮುತ್ತ ೪೩ ದಿನಗಳ ಕಾಲ ಶೂಟಿಂಗ್ ನಡೆಸಿದ್ದೇವೆ, ಮೈಸೂರಲ್ಲೇ ಚಾಂದಿನಿ ಬಾರ್‌ನ ಸೆಟ್ ಹಾಕಿದ್ದೆವು.ಸೆನ್ಸಾರ್ ನಿಂದ ನಮ್ಮ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ, ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡೋ ಯೋಜನೆಯಿದೆ ಎಂದರು.
ಈ ಚಿತ್ರದ 5 ಹಾಡುಗಳಿಗೆ ಸಹೋದರರಾದ ವಿಶಾಖ ನಾಗಲಾಪುರ ಹಾಗೂ ಕಾರ್ತೀಕ್ ನಾಗಲಾಪುರ ಸಂಗೀತ ಸಂಯೋಜನೆ ಮಾಡಿದ್ದಾರೆ. ರಿತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತವಿದ್ದು, ಚೇತನ್ ಶರ್ಮ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.