ಚಿಕ್ಕಣ್ಣ ಈಗ ಉಪಾಧ್ಯಕ್ಷ! ಹೊಸ ಚಿತ್ರಕ್ಕೆ ಅವರೇ ಹೀರೋ…

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಅದ್ಧೂರಿ ಯಶಸ್ಸು ಕಂಡ ” ಅಧ್ಯಕ್ಷ ” ಚಿತ್ರದಲ್ಲಿ “ಉಪಾಧ್ಯಕ್ಷ” ನಾಗಿ ಜನಮನಸೂರೆಗೊಂಡಿದ್ದವರು ಚಿಕ್ಕಣ್ಣ. ಈಗ “ಉಪಾಧ್ಯಕ್ಷ” ಎಂಬ ಹೆಸರಿನಿಂದಲೇ ಸಿನಿಮಾ ಆರಂಭವಾಗಿದ್ದು, ಚಿಕ್ಕಣ್ಣ ನಾಯಕರಾಗಿ ನಟಿಸುತ್ತಿದ್ದಾರೆ. ಸ್ಮಿತಾ ಉಮಾಪತಿ ಹಾಗೂ ನಿರ್ಮಲ ಶ್ರೀನಿವಾಸ ನಿರ್ಮಿಸುತ್ತಿರುವ ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಪ್ರಸಿದ್ದ ಬನಶಂಕರಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ಸ್ಮಿತಾ ಉಮಾಪತಿ ಹಾಗೂ ನಾಯಕ ಚಿಕ್ಕಣ್ಣ ಅವರ ತಾಯಿ ಆರಂಭ ಫಲಕ ತೋರಿದರು. ಸಾಧುಕೋಕಿಲ ಕ್ಯಾಮರಾ ಚಾಲನೆ ಮಾಡಿದರು. ಚಿತ್ರರಂಗದ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಒಳ್ಳೆಯ ದಿನ ಬೆಳಗ್ಗಿನ ಸುಮುಹೂರ್ತದಲ್ಲಿ
ಬನಶಂಕರಿ ದೇವಸ್ಥಾನದಲ್ಲಿ ಚಿತ್ರ ಆರಂಭಿಸಿದ್ದೇವೆ. “ಉಪಾಧ್ಯಕ್ಷ”, “ಅಧ್ಯಕ್ಷ” ಚಿತ್ರದ ಮುಂದುವರಿದ ಭಾಗ ಎನ್ನಬಹುದು. ಆ ಚಿತ್ರದಲ್ಲಿ ಎಲ್ಲಿ ಕಥೆ ನಿಂತಿತ್ತೋ, ಅಲ್ಲಿಂದ ಈ ಚಿತ್ರದ ಕಥೆ ಆರಂಭವಾಗುತ್ತದೆ. ಮೊದಲ ಸನ್ನಿವೇಶದಿಂದ ಕ್ಲೈಮ್ಯಾಕ್ಸ್ ತನಕ‌ ಜನರನ್ನು ನಕ್ಕುನಲಿಸುವ ಸಿನಿಮಾ ಇದು. ಜೊತೆಗೆ ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಸಾಕಷ್ಟು ಹಿಟ್ ಚಿತ್ರಗಳ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು. ಚಿಕ್ಕಣ್ಣ ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕರಾಗಿದ್ದಾರೆ. ಮಲೈಕ ಈ ಚಿತ್ರದ ನಾಯಕಿ. ನಾಳೆಯಿಂದ ಮೈಸೂರಿನಲ್ಲಿ ನಿರ್ಮಿಸಲಾಗಿರುವ ಮನೆಯ ಸೆಟ್ ನಲ್ಲಿ ಮೂವತ್ತೆರಡು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

ಆನಂತರ ಬೆಂಗಳೂರು, ಮುಂತಾದ ಕಡೆ ಚಿತ್ರೀಕರಣ ಸಾಗಲಿದೆ. ಆಗಸ್ಟ್ ಕೊನೆಯಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ. “ಅಧ್ಯಕ್ಷ” ಚಿತ್ರದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿರುತ್ತಾರೆ. ಸಾಧುಕೋಕಿಲ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರು ನಿರ್ದೇಶಕ ಅನಿಲ್ ಕುಮಾರ್.

ನಾನು “ಹೆಬ್ಬುಲಿ”, ” ರಾಬರ್ಟ್ ” ಹಾಗೂ “ಮದಗಜ” ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ. ಆದರೆ ನನ್ನ ಹೆಂಡತಿ ಹೆಸರಿನಲ್ಲಿ “ಒಂದಲ್ಲಾ ಎರಡಲ್ಲಾ” ಚಿತ್ರ ನಿರ್ಮಾಣ ಮಾಡಿದೆ. ಆ ಚಿತ್ರಕ್ಕೆ ಸಾಕಷ್ಟು ಪ್ರಶಸ್ತಿಗಳು ಬಂತು. “ಉಪಾಧ್ಯಕ್ಷ” ಚಿತ್ರಕ್ಕೂ ನನ್ನ ಹೆಂಡತಿ ಸ್ಮಿತ ಅವರೆ ನಿರ್ಮಾಪಕರು. “ಉಪಾಧ್ಯಕ್ಷ” ಚಿತ್ರದ ಕಥೆ ಚೆನ್ನಾಗಿದೆ. ಗೆಲುತ್ತದೆ ಎಂಬ ವಿಶ್ವಾಸವಿದೆ. ನಿಮ್ಮೆಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್.

ನನಗೆ “ರಾಜಹುಲಿ”, ” ಅಧ್ಯಕ್ಷ ” ಚಿತ್ರಗಳ ನಂತರ ಹೀರೋ ಆಗಲು ಸಾಕಷ್ಟು ಅವಕಾಶಗಳು ಬಂತು. ಆದರೆ ನಾನು ಒಪ್ಪಿರಲಿಲ್ಲ. ಈ ಚಿತ್ರದ ಕೇಳಿ ಒಪ್ಪಿಕೊಂಡೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಒಬ್ಬ ಹಾಸ್ಯ ಕಲಾವಿದ ನಾಯಕನಾಗಿ ನಟಿಸುತ್ತಾನೆ ಎಂದರೆ, ಚಿಕ್ಕ ಬಜೆಟ್ ನಲ್ಲಿ ಮುಗಿಸುತ್ತಾರೆ. ಆದರೆ ನಮ್ಮ ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅವರಿಗೆ ಧನ್ಯವಾದ. ಅನಿಲ್ ಕುಮಾರ್ ಬಹಳ‌ ದಿನಗಳ ಪರಿಚಯ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಚಿತ್ರ ಗೆಲುವುದು ಖಂಡಿತಾ. ‌ಇಷ್ಟು ದಿನ ಬೇಕಾದಷ್ಟು ಪ್ರೋತ್ಸಾಹ ನೀಡಿದ್ದೀರಿ. ಮುಂದೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದರು ಚಿಕ್ಜಣ್ಣ.

ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನನಗೆ ಇದು ಮೊದಲ ಚಿತ್ರ. ಕಥೆ ಚೆನ್ನಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ಮಲೈಕ ತಿಳಿಸಿದರು.

ನಟ ಧರ್ಮಣ್ಣ ಹಾಗೂ ಛಾಯಾಗ್ರಾಹಕ ಶೇಖರ್ ಚಂದ್ರ “ಉಪಾಧ್ಯಕ್ಷ” ಚಿತ್ರದ ಬಗ್ಗೆ ಮಾತನಾಡಿದರು.

Related Posts

error: Content is protected !!