Categories
ಸಿನಿ ಸುದ್ದಿ

ಮಿಥ್ಯ ಎಂಬ ಬಾಲಕನ ಕಥೆ: ಪರಂವಃ ಸ್ಟುಡಿಯೋಸ್ ಸಿನಿಮಾ

ಚಿತ್ರರಂಗ ಎಂದರೆ ಎಲ್ಲ ರೀತಿಯ ಸಿನಿಮಾಗಳನ್ನೂ ಮಾಡಬೇಕು. ಹೊಸ ಶೈಲಿಯ ಕಥೆಗಳನ್ನು, ಹೊಸ ಆಲೋಚನೆಗಳನ್ನು ಬರಮಾಡಿಕೊಳ್ಳಬೇಕು. ಹೊಸ ಯೋಚನೆಗಳಿರುವ ಕಥೆಗಾರರನ್ನು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪರಂವಃ ಸ್ಟುಡಿಯೋಸ್​ ಹೆಜ್ಜೆ ಇಟ್ಟಿದ್ದು, ‘ಮಿಥ್ಯ’ ಅಂಥದ್ದೊಂದು ವಿನೂತನ ಪ್ರಯತ್ನವಾಗಲಿದೆ.


‘ಮಿಥ್ಯ’, ರಕ್ಷಿತ್​ ಶೆಟ್ಟಿ ನಿರ್ಮಾಣದ ಹೊಸ ಚಿತ್ರ. ಈ ಚಿತ್ರದ ಮೂಲಕ ಸುಮಂತ್​ ಭಟ್​ ಸ್ವತಂತ್ರ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 11 ವರ್ಷದ ಬಾಲಕನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಅವನ ನೋವು ಮತ್ತು ವಿಮೋಚನೆಯ ಕಥೆಯನ್ನು ಹೇಳವ ಪ್ರಯತ್ನ ಮಾಡುತ್ತಿದ್ದಾರೆ.
ತಂದೆ-ತಾಯಿಯ ನಿಧನದ ನಂತರ, ಅವರ ನೆನಪುಗಳಿಂದ ಹೊರಬರಲಾರದ ಪುಟ್ಟ ಬಾಲಕನೊಬ್ಬ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ‘ಮಿಥ್ಯ’.

ಮೂಲತಃ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ಸುಮಂತ್​ ಭಟ್​ಗೆ ಸಿನಿಮಾ ಎನ್ನುವುದು ಪ್ಯಾಶನ್​. ಇದಕ್ಕೂ ಮುನ್ನ ಪರಂವಃ ಸ್ಟುಡಿಯೋಸ್​ ನಿರ್ಮಾಣದ ‘ಏಕಂ’ ಎಂಬ ವೆಬ್​ಸೀರೀಸ್​ನ ಏಳು ಕಂತುಗಳಲ್ಲಿ, ನಾಲ್ಕು ಕಂತುಗಳನ್ನು ಬರೆದು ನಿರ್ದೇಶಿಸಿದವರು ಅವರು. ಜತೆಗೆ ಪರಂವಃ ಕಥಾತಂಡದ ಸಕ್ರಿಯರಾಗಿ ಗುರುತಿಸಿಕೊಂಡವರು. ಈಗ ಅವರು ಸ್ವತಂತ್ರ ನಿರ್ದೇಶಕರಾಗಿ ‘ಮಿಥ್ಯ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಮತ್ತು ‘ವಿಕ್ರಾಂತ್​ ರೋಣ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್​ ಶೆಟ್ಟಿ, ಇಲ್ಲಿ ಮಿಥುನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅವನೊಂದಿಗೆ ಪ್ರಕಾಶ್​ ತುಮ್ಮಿನಾಡು, ರೂಪಾ ವರ್ಕಾಡಿ ಮುಂತಾದವರು ನಟಿಸುತ್ತಿದ್ದಾರೆ.

‘ಮಿಥ್ಯ’ ಚಿತ್ರಕ್ಕೆ ಉದಿತ್​ ಖುರಾನ ಅವರ ಛಾಯಾಗ್ರಹಣವಿದ್ದು, ಮಿಥುನ್​ ಮುಕುಂದನ್​ ಅವರ ಸಂಗೀತವಿದೆ. ಭುವನೇಶ್​ ಮಣಿವಣ್ಣನ್​ ಸಂಕಲನಕಾರರಾಗಿ, ಶ್ರೇಯಾಂಕ್​ ನಂಜಪ್ಪ ಸೌಂಡ್​ ಡಿಸೈನರ್​ ಆಗಿ ಕಾರ್ಯನಿರ್ವಹಿಸಲಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.

Categories
ಸಿನಿ ಸುದ್ದಿ

ಇದು ಮೇಡ್ ಇನ್ ಬೆಂಗಳೂರು ಸಾಂಗ್



ನಾನಾ ಊರುಗಳಿಂದ ನಾನಾ ಭಾಷೆಗಳನ್ನಾಡುವ ಜನ ಹಲವು ಕಾಲಗಳಿಂದ ಬೆಂಗಳೂರಿನಲ್ಲಿದ್ದಾರೆ. ಅಂತಹ ಬೆಂಗಳೂರಿನ ಕುರಿತಾಗಿ ಬರುತ್ತಿರುವ ಚಿತ್ರ “ಮೇಡ್ ಇನ್ ಬೆಂಗಳೂರು”.

ಈ ಚಿತ್ರದ ” ಬನ್ನಿರೆ ಬೆಂಗಳೂರಿಗೆ” ಎಂಬ ಹಾಡನ್ನು ಖ್ಯಾತ ನಿರ್ದೇಶಕ ಭಗವಾನ್ ಬಿಡುಗಡೆ ಮಾಡಿದರು. ಚಿತ್ರದ ಪೋಸ್ಟರ್ ಗೆ ಪಿ ಆರ್ ಓ ಸುಧೀಂದ್ರ ವೆಂಕಟೇಶ್ ಚಾಲನೆ ನೀಡಿದರು.

ಈ ಹಾಡನ್ನು ಹನ್ನೊಂದು ಭಾಷೆಗಳನ್ನು ಬಳಸಿ ರಚಿಸಲಾಗಿದೆ. ಜನಪ್ರಿಯ ಗಾಯಕರಾದ ಶ್ರೀಹರ್ಷ ಎಂ.ಆರ್, ಕಂಬದ ರಂಗಯ್ಯ, ರೋಹಿತ್ ಭಟ್, ಮದ್ವೇಶ್ ಭಾರದ್ವಾಜ್, ಮೇಘ ಕುಲಕರ್ಣಿ, ಪೂಜಾ ರಾವ್, ನಾರಾಯಣ ಶರ್ಮ, ಅದಮ್ಯ ರಮಾನಂದ್, ನಿಹಾಲ್ ವಿಜೇತ್, ಆದರ್ಶ ಶೆಣೈ, ಪ್ರವೀಣ್ ಶಣ್ಮುಗ, ಅಥರ್ವ ರಾವ್, ಅಪ್ಪಣ್ಣ, ಅಶ್ವಿನ್ ಪ್ರಭಾತ್, ರಾಕೇಶ್ ಪೂಜಾರಿ ಮುಂತಾದವರು ಈ ಹಾಡನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಅಶ್ವಿನ್ ಪಿ ಕುಮಾರ್ ಹಾಡಿನ ಬಗ್ಗೆ ವಿವರಣೆ ನೀಡಿದರು. ಅಶ್ವಿನ್ ಪಿ ಕುಮಾರ್ ಸಹ ಈ ಗೀತೆಗೆ ಧ್ವನಿಯಾಗಿದ್ದಾರೆ.

ನಾನು ರಾಘವೇಂದ್ರಸ್ವಾಮಿಗಳ ಪರಮಭಕ್ತ. ರಾಯರ ಭಕ್ತರಿಂದಲೇ ಈ ಹಾಡನ್ನು ಬಿಡುಗಡೆ ಮಾಡಿಸುವ ಆಸೆಯಿತ್ತು. ಹಾಗಾಗಿ “ಮಂತ್ರಾಲಯ ಮಹಾತ್ಮೆ” ಯಂತಹ ಅದ್ಭುತ ಚಿತ್ರದ ನಿರ್ಮಾಪಕರು ಹಾಗೂ ಖ್ಯಾತ ನಿರ್ದೇಶಕರೂ ಆಗಿರುವ ಭಗವಾನ್ ಅವರಿಂದ ಹಾಡು ಬಿಡುಗಡೆ ಮಾಡಿಸಿದ್ದೇವೆ. ನಲವತ್ತೆಂಟು ವರ್ಷಗಳ ಹಿಂದೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ರಾಯರ ಭಕ್ತರಾದ ಸುಧೀಂದ್ರ ಅವರು ಆರಂಭಿಸಿದ್ದರು. ಈಗ ಆ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಖ್ಯಾತ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಅವರಿಂದ ಪೋಸ್ಟರ್ ಬಿಡುಗಡೆ ಮಾಡಿಸಿದ್ದು ಖುಷಿಯಾಗಿದೆ. ಚಿತ್ರ‌ ತೆರೆಗೆ ಬರಲು ಸಿದ್ದವಾಗಿದೆ. ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ಬಾಲಕೃಷ್ಣ.

ಮಧ್ಯಮವರ್ಗದ ಹುಡುಗನೊಬ್ಬ ಐಟಿ ಕಂಪನಿ ಕೆಲಸ ಬಿಟ್ಟು, ಹೊಸ ಕಂಪನಿ ಆರಂಭಿಸುತ್ತಾನೆ. ಅದಕ್ಕಾಗಿ ಹೂಡಿಕೆದಾರರನ್ನು ಹುಡುಕುತ್ತಾನೆ. ಸಿಗದಿದ್ದಾಗ ಗ್ಯಾಂಗ್ ಸ್ಟರ್ ಬಳಿ ಹಣ ಪಡೆಯುತ್ತಾನೆ. ಮುಂದೇನಾಗುತ್ತದೆ ಎಂಬುದೆ ಚಿತ್ರದ ಕಥೆ ಎಂದು ನಿರ್ದೇಶಕ ಪ್ರದೀಪ್ ಶಾಸ್ತ್ರಿ ವಿವರಣೆ ನೀಡಿದರು.

ಚಿತ್ರದ ನಾಯಕ ಮಧುಸೂದನ್ ಗೋವಿಂದ್, ನಟರಾದ ಪುನೀತ್ ಮಾಂಜ ಹಾಗೂ ವಂಶಿಧರ್ ಸಹ ಈ ಚಿತ್ರದ ಕುರಿತು ಮಾತನಾಡಿದರು.

ನಾವು ಚಿತ್ರ ನಿರ್ಮಾಣ ಮಾಡಬೇಕಾದರೆ ಇಷ್ಟು ಸುಲಭವಿರಲಿಲ್ಲ. ಈಗ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಹೊಸಬರ ತಂಡದಿಂದ ಹೊಸಚಿತ್ರವೊಂದು ನಿರ್ಮಾಣವಾಗಿದೆ. ರಾಯರ ಭಕ್ತರು ನಿರ್ಮಾಣ ಮಾಡಿದ್ದಾರೆ. ಇಡೀ ತಂಡಕ್ಕೆ ರಾಯರ ಕೃಪೆಯಿರಲಿ ಎಂದು ಹಿರಿಯ ನಿರ್ದೇಶಕ ಭಗವಾನ್ ಹಾರೈಸಿದರು.

ಹಿರಿಯ ನಟರಾದ ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಮುಂತಾದ ಕಲಾವಿದರು “ಮೇಡ್ ಇನ್ ಬೆಂಗಳೂರು” ಚಿತ್ರದಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ರಾಜ ರಾಣಿ ರೋರರ್ ರಾಕೆಟ್ ಹಾರಲು ರೆಡಿ: ಡ್ಯಾನ್ಸ್ ಮಾಸ್ಟರ್ ಈಗ ಹೀರೋ…

ಜನಪ್ರಿಯ “ಚುಟು ಚುಟು ಅಂತೈತಿ” ಹಾಡಿಗೆ ನೃತ್ಯ ನಿರ್ದೇಶನ ಮಾಡಿ, ಖ್ಯಾತರಾಗಿರುವ ನೃತ್ಯ ನಿರ್ದೇಶಕ ಭೂಷಣ್, ಆನಂತರ “ನಟಸಾರ್ವಭೌಮ”, ” ಬೆಲ್ ಬಾಟಮ್”, “ರಾಬರ್ಟ್” ಮುಂತಾದ ಸೂಪರ್ ಹಿಟ್ ಚಿತ್ರಗಳಿಗೂ‌ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

“ರಾಜ ರಾಣಿ ರೋರರ್ ರಾಕೆಟ್” ಚಿತ್ರದ ಮೂಲಕ ಭೂಷಣ್ ನಾಯಕರಾಗಿ ಮತ್ತೊಂದು ಮೆಟ್ಟಿಲು ಏರುವ ಉತ್ಸಾಹದಲ್ಲಿದ್ದಾರೆ . ಪ್ರಸ್ತುತ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಸೆಪ್ಟೆಂಬರ್ ನಲ್ಲಿ ತೆರೆ ಕಾಣಲಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕೆಂಪೇಗೌಡ ಮಾಗಡಿ ನಿರ್ದೇಶಿಸಿದ್ದಾರೆ. ನಾಗರಾಜ್ ವಿ ಅಜ್ಜಂಪುರ ನಿರ್ಮಾಣ ಮಾಡಿದ್ದಾರೆ. ಹುಲಿಯೂರು ದುರ್ಗದಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ.

ಮುಂದಿನ ತಿಂಗಳು ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರತಂಡ ವಿನೂತನ ಪ್ರಚಾರಕ್ಕೆ ಮುಂದಾಗಿದೆ. ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕಾರ್ಯಕ್ಕೆ ಚಾಲನೆ ನೀಡಲಾಯಿತು. ಚಿತ್ರದ ಪಾಸ್(ಟಿಕೆಟ್) ಗಳನ್ನು ಈಗಲೇ ನೃತ್ಯಗಾರರಿಗೆ ವಿತರಿಸಲಾಗುತ್ತಿದೆ, ಆ ಕಾರ್ಯಕ್ಕೆ ಕೆಜಿಎಫ್ ಖ್ಯಾತಿಯ ನೃತ್ಯ ನಿರ್ದೇಶಕ ಮೋಹನ್ , ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ರುದ್ರ, ಹಾಗೂ ಮತ್ತಿತರ ನೃತ್ಯಗಾರರು ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ನಾಯಕ ಭೂಷಣ್.

ಇತ್ತೀಚೆಗೆ ಸಂಚಿತ್ ಹೆಗಡೆ ಹಾಡಿರುವ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ‌ಪ್ರಭು ಎಸ್ ಆರ್, ಸಂಗೀತ ನೀಡಿದ್ದಾರೆ.

ಭೂಷಣ್ ಅವರಿಗೆ ನಾಯಕಿಯಾಗಿ ಮಾನ್ಯ ಅಭಿನಯಿಸಿದ್ದಾರೆ. ರಣಧೀರ್, ಸಂತೋಷ್ ಇದ್ದಾರೆ. ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಸೆಪ್ಟೆಂಬರ್ ವೇಳೆಗೆ ಕಾಟನ್ ಪೇಟೆ ಗೇಟ್ ಓಪನ್! ಹೊಸಬರ ಚಿತ್ರ ರಿಲೀಸ್ ಗೆ ರೆಡಿ…

ಕನ್ನಡ ಚಿತ್ರರಂಗಕ್ಕೆ “ಯುವರಾಜ” ಸೇರಿದಂತೆ ಅನೇಕ ಅದ್ದೂರಿ ಚಿತ್ರಗಳನ್ನು ನೀಡಿರುವ ಆರ್.ಎಸ್ ಶ್ರೀನಿವಾಸ್ ನಿರ್ಮಾಣದ “ಕಾಟನ್ ಪೇಟೆ ಗೇಟ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 9 ರಂದು ತೆರೆಗೆ ಬರುವ ಸಾಧ್ಯತೆಯಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ – ಹಾಡುಗಳು ಬಿಡುಗಡೆಯಾಗಿವೆ.

ನಮ್ಮ ಆರ್ ಎಸ್ ಪ್ರೊಡಕ್ಷನ್ಸ್ ಮೂಲಕ ಶಿವರಾಜಕುಮಾರ್ ಅಭಿನಯದ “ಯುವರಾಜ” ಚಿತ್ರ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇವೆ‌. ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ “ಯುವರಾಜ” ಚಿತ್ರ ನಿರ್ದೇಶನ ಮಾಡಿದ್ದರು. ಈಗ ಅವರ ಬಳಿ ಕೆಲಸ ಮಾಡಿರುವ ವೈ ರಾಜಕುಮಾರ್ ನಿರ್ದೇಶನದಲ್ಲಿ “ಕಾಟನ್ ಪೇಟೆ ಗೇಟ್” ಚಿತ್ರ ನಿರ್ಮಾಣ ಮಾಡಿದ್ದೇನೆ. ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸೆಪ್ಟೆಂಬರ್ 9 ರಂದು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಆರ್ ಎಸ್ ಶ್ರೀನಿವಾಸ್.

ಅವಕಾಶ ನೀಡಿರುವ ನಿರ್ಮಾಪಕರಿಗೆ ಧನ್ಯವಾದ. “ಕಾಟನ್ ಪೇಟೆ ಗೇಟ್” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ ಅಂದರೆ ಅದಕ್ಕೆ ನಾನೊಬ್ಬ ಕಾರಣ ಅಲ್ಲ ನನ್ನ ಇಡೀ ಚಿತ್ರತಂಡದ ಶ್ರಮ ಎಂದರು ನಿರ್ದೇಶಕ ವೈ ರಾಜಕುಮಾರ್.

ಈ ಚಿತ್ರ ಮೂರು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಆದರೆ ಮೊದಲು ಆರಂಭವಾಗಿದ್ದು ಕನ್ನಡದಲ್ಲಿ . ಇಲ್ಲಿನ ಅರಣ್ಯ ಪ್ರದೇಶ, ಸುಂದರವಾದ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಇದೊಂದು ಆಕ್ಷನ್, ಕಾಮಿಡಿ, ಸಸ್ಪೆನ್ಸ್, ಸೆಂಟಿಮೆಂಟ್ ಎಲ್ಲಾ ಅಂಶಗಳಿರುವ ಕಮರ್ಷಿಯಲ್ ಚಿತ್ರ. ರಾಜಕುಮಾರ್ ಬಹಳ ಚೆನ್ನಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಲು ನನಗೆ ತುಂಬಾ ಖುಷಿಯಾಗಿದೆ ಎನ್ನುತ್ತಾರೆ ನಾಯಕ ವೇಣುಗೋಪಾಲ್.

ಸಂಗೀತ ನಿರ್ದೇಶಕ ಪ್ರಸು, ಛಾಯಾಗ್ರಹಕ ಯೋಗಿ ರೆಡ್ಡಿ, ಚಿತ್ರದಲ್ಲಿ ನಟಿಸಿರುವ 8pm ಸಾಯಿಕುಮಾರ್, ಕಟ್ಟಪ್ಪ, ರಘು ಮುಂತಾದ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್, ಗೌರವ ಕಾರ್ಯದರ್ಶಿ ಸುಂದರರಾಜ್, ಮಮತಾ ದೇವರಾಜ್, ನಿರ್ದೇಶಕ ವಿ.ಸಮುದ್ರ ಹಾಗೂ ನಟ ಜೈ ಸಿದ್ಧಾರ್ಥ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

Categories
ಸಿನಿ ಸುದ್ದಿ

ಡಿ56 ಇದು ದಚ್ಚು ಚಿತ್ರ! ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾಗೆ ಚಾಲನೆ: ಮಾಲಾಶ್ರೀ ಮಗಳು ಎಅಧನಾ ರಾಮ್ ನಾಯಕಿ…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ “ಡಿ56” ಚಿತ್ರಕ್ಕೆ ವರಮಹಾಲಕ್ಷ್ಮೀ ಹಬ್ಬದಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರ ಪ್ರಾರಂಭವಾಗಿದೆ. ದೇವರ ಮೇಲೆ ಸೆರೆಹಿಡಿದ ಮೊದಲ ದೃಶ್ಯಕ್ಕೆ ರಾಕ್ ಲೈನ್ ವೆಂಕಟೇಶ್ ಪತ್ನಿ ಪುಷ್ಪ ಕುಮಾರಿ ಕ್ಲಾಪ್ ಮಾಡಿದರೆ, ಶ್ರೀ ರವಿಶಂಕರ್ ಗುರೂಜಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
ಡಿ56 ಚಿತ್ರವನ್ನು ‘ರಾಬರ್ಟ್’ ಖ್ಯಾತಿಯ ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ಕಥೆ-ಚಿತ್ರಕಥೆ ಸಹ ಅವರದ್ದೇ. ‘ರಾಬರ್ಟ್’ ಚಿತ್ರದಲ್ಲಿ ಕೆಲಸ ಮಾಡಿದ್ದ ಬಹುತೇಕರು ಇಲ್ಲೂ ಮುಂದುವರೆಯುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ರಾಮು ಮತ್ತು ಮಾಲಾಶ್ರೀ ದಂಪತಿಯ ಮಗಳು ರಾಧನಾ ರಾಮ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.


ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ‘ಒಳ್ಳೆಯ ಕಥೆ ಸಿಗುವವರೆಗೂ ಯಾರಿಗೂ ಚಿತ್ರ ಮಾಡುವುದಿಲ್ಲ. ತರುಣ್ ಒಂದೊಳ್ಳೆಯ ಕಥೆ ಹೇಳಿದರು. ದರ್ಶನ್ ಅವರಿಗೆ ಇಷ್ಟು ಚಿತ್ರಗಳಲ್ಲಿ ಈ ತರಹದ ಚಿತ್ರ ಮತ್ತು ಪಾತ್ರ ಎರಡೂ ಹೊಸದು. ಆಗಸ್ಟ್ 16ರಂದು ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದರು.

ವರಮಹಾಲಕ್ಷ್ಮೀಯ ಹಬ್ಬದ ಶುಭಾಶಯಗಳನ್ನು ಕೋರುತ್ತಲೇ ಮಾತು ಪ್ರಾರಂಭಿಸಿದ ದರ್ಶನ್. ‘ಇವತ್ತಿನಿಂದ ಡಿ56 ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿದೆ. ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಘೋಷಿಸಲಾಗುತ್ತಿದೆ. ರಾಬರ್ಟ್ ತಂಡದ ಬಹಳಷ್ಟು ಜನ ಇಲ್ಲಿ ಮುಂದುವರೆಯುತ್ತಿದ್ದಾರೆ. ಈ ಚಿತ್ರದ ಹೆಚ್ಚಿನ ವಿಷಯವನ್ನು ಸದ್ಯದಲ್ಲೇ ತಿಳಿಸುತ್ತೇವೆ’ ಎಂದರು.

ಈ ಚಿತ್ರ ನೋಡಿದವರಿಗೆ ಹೆಮ್ಮೆ ಆಗುವುದು ಖಂಡಿತಾ ಎನ್ನುವ ನಿರ್ದೇಶಕ ತರುಣ್ ಸುಧೀರ್, ‘ಚಿಕ್ಕವಯಸ್ಸಿನಲ್ಲಿ ಪೋಸ್ಟರ್ ಗಳಲ್ಲಿ ರಾಕ್ ಲೈನ್ ಪ್ರೊಡಕ್ಷನ್ಸ್ ಅಂತ ನೋಡಿಯೇ ಎಷ್ಟೋ ಚಿತ್ರಗಳಿಗೆ ಹೋಗಿದ್ದೇನೆ. ಆ ಬ್ಯಾನರ್ನ ಚಿತ್ರಗಳು ಚೆನ್ನಾಗಿರುತ್ತದೆ ಎಂಬ ನಂಬಿಕೆಯ ಮೇಲೆ ಚಿತ್ರಗಳಿಗೆ ಹೋಗುತ್ತಿದ್ದೆವು. ಈಗ ಅದೇ ಸಂಸ್ಥೆಯಲ್ಲಿ ಚಿತ್ರ ನಿರ್ದೇಶಿಸುತ್ತಿರುವುದು ದೊಡ್ಡ ಜವಾಬ್ದಾರಿ. ಹಾಗಾಗಿ, ತುಂಬಾ ಮುತುವರ್ಜಿ ವಹಿಸಿ, ಬೇರೆ ತರಹದ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ದರ್ಶನ್ ಅವರ ಪಾತ್ರ, ಚಿತ್ರದ ಹಿನ್ನೆಲೆ ಎಲ್ಲವೂ ವಿಭಿನ್ನವಾಗಿರುತ್ತದೆ. ಚಿತ್ರ ನೋಡಿದವರಿಗೆ ಹೆಮ್ಮೆ ಆಗುವುದು ಖಂಡಿತಾ’ ಎಂದರು.

ಮೊದಲ ಚಿತ್ರದಲ್ಲೇ ದರ್ಶನ್ ರಂತಹ ಸ್ಟಾರ್ ನಟರ ಜೊತೆಗೆ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ರಾಧನಾ, ‘ನನಗೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಬಹಳ ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿತು. ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಇನ್ನೂ ಅರಗಿಸಿಕೊಳ್ಳುವುದಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲ. ನನಗೆ ನಟಿಸುವ ಆಸೆ ಚಿಕ್ಕಂದಿನಿಂದಲೂ ಇತ್ತು. ಎರಡು ವರ್ಷಗಳ ಕಾಲ ಸಾಕಷ್ಟು ತರಬೇತಿ ಪಡೆದು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೇನೆ. ಚಿತ್ರಕ್ಕೆ ಸಂಬಂಧಿಸಿದ ವರ್ಕ್ ಶಾಪ್ ನಲ್ಲೂ ಭಾಗವಹಿಸುತ್ತಿದ್ದೇನೆ’ ಎಂದರು.

ರಾಧಾನಾ ಎಂಟ್ರಿ ಕುರಿತು ಮಾತನಾಡುವ ಅವರ ತಾಯಿ ಮಾಲಾಶ್ರೀ, ‘ನನಗೆ ಬದುಕು ಕೊಟ್ಟ ಚಿತ್ರರಂಗಕ್ಕೆ ಈಗ ನನ್ನ ಮಗಳು ಸಹ ಕಾಲಿಡುತ್ತಿದ್ದಾಳೆ. ನನಗೆ ಎಷ್ಟು ಪ್ರೀತಿ ತೋರಿಸಿದ್ದೀರೋ, ನನ್ನ ಮಗಳಿಗೆ ಅದಕ್ಕಿಂತ ಹೆಚ್ಚು ಪ್ರೀತಿ ತೋರಿಸಿ ಎಂದು ಕೇಳಿಕೊಳ್ಳುತ್ತೇನೆ. ರಾಕ್ ಲೈನ್ ವೆಂಕಟೇಶ್ ಅವರು ನನ್ನ ಸಿನಿಮಾ ಮೂಲಕ ಚಿತ್ರ ನಿರ್ಮಾಣ ಶುರು ಮಾಡಿದರು. ಈಗ ನನ್ನ ಮಗಳು ಅವರ ನಿರ್ಮಾಣದ ಚಿತ್ರದ ಮೂಲಕ ಚಿತ್ರರಂಗಕ್ಕೆ ಚಿತ್ರ ಜೀವನ ಪ್ರಾರಂಭಿಸುತ್ತಿದ್ದಾಳೆ. ಒಂದೊಳ್ಳೆಯ ತಂಡದಿಂದ ಅವಳು ಚಿತ್ರರಂಗಕ್ಕೆ ಬರುತ್ತಿದ್ದಾಳೆ ಎಂಬ ಖುಷಿ ಇದೆ. ಅವಳು 14ನೇ ವಯಸ್ಸಿನಲ್ಲಿದ್ದಾಗಲೇ ಚಿತ್ರರಂಗಕ್ಕೆ ಬರಬೇಕು, ಅಭಿನಯಿಸಬೇಕು ಎಂದು ಆಸೆ ಪಟ್ಟಿದ್ದಳು. ಮುಂಬೈನಲ್ಲಿ ನಟನೆ, ಡ್ಯಾನ್ಸ್ ತರಬೇತಿ ಪಡೆದಿದ್ದಾಳೆ. ನಾಳೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ, ಪ್ರೇಕ್ಷಕರು ನನ್ನ ಮತ್ತು ಅವಳ ನಡುವೆ ಹೋಲಿಕೆ ಮಾಡುವುದು ಸಹಜ. ಆದರೆ, ಅವಳು ತನ್ನ ಹೆಸರಿನಿಂದ ಗುರುತಿಸಿಕೊಳ್ಳಬೇಕೇ ಹೊರತು, ನನ್ನ ಹೆಸರಿನಿಂದ ಗುರುತಿಸಿಕೊಳ್ಳಬಾರದು ಎಂಬುದು ನನ್ನ ಆಸೆ’ ಎಂದರು ಮಾಲಾಶ್ರೀ.

ಡಿ56 ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ಮಾಸ್ತಿ ಅವರ ಸಂಭಾಷಣೆ ಇದೆ. ಚಿತ್ರದ ಬಹುತೇಕ ಚಿತ್ರೀಕರಣ ಸೆಟ್ ನಲ್ಲೇ ನಡೆಯಲಿದ್ದು, ಬೆಂಗಳೂರಿನಲ್ಲೇ ಚಿತ್ರೀಕರಣ ಮುಂದುವರೆಯಲಿದೆ.

Categories
ಸಿನಿ ಸುದ್ದಿ

ಎಲ್ರ ಕಾಲೆಳೆಯುತ್ತೆ ಕಾಲ ಫಸ್ಟ್ ಸಾಂಗ್ ರಿಲೀಸ್…

ಉಷಾ ಗೋವಿಂದರಾಜು ನಿರ್ಮಾಣದ “ಎಲ್ರ ಕಾಲೆಳೆಯತ್ತೆ ಕಾಲ” ಚಿತ್ರದ ಹಾಡು ಹೊರಬಂದಿದೆ. ನಟ, ನಿರ್ದೇಶಕ ಸುಜಯ್ ಶಾಸ್ತ್ರಿ, ನಾಯಕ ಚಂದನ್ ಶೆಟಿ, ನಾಯಕಿ ಅರ್ಚನಾ ಕೊಟ್ಟಿಗೆ, ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ರಾಜಗುರು ಹೊಸಕೋಟೆ, ಸಂಗೀತ ನಿರ್ದೇಶಕರಾದ ಪ್ರವೀಣ್-ಪ್ರದೀಪ್, ಬಿಗ್ ಬಾಸ್ ವಿಜೇತ ಮಂಜು ಪಾವಗಡ ಮುಂತಾದವರ‌ ಸಮ್ಮುಖದಲ್ಲಿ ಹಾಡು ಹೊರ ಬಂದಿದೆ.

ಶೂಟಿಂಗ್ ಸಂಪೂರ್ಣವಾಗಿದೆ. ಸದ್ಯದಲ್ಲೇ ಮೊದಲ ಪ್ರತಿ ಬರಲಿದೆ. ಚಿತ್ರದ ಮೊದಲ ಹಾಡು (ಗೋಲ್ಡ್ ಫ್ಯಾಕ್ಟರಿ)
ಬಿಡುಗಡೆಯಾಗಿದೆ. ಅದೊಂದು ಮದುವೆಯ ಆರತಕ್ಷತೆಯ ಹಾಡು. ಇದೇ ಕಲ್ಯಾಣ ಮಂಟಪದಲ್ಲಿ ಆ ಹಾಡಿನ ಚಿತ್ರೀಕರಣ ನಡೆದಿದ್ದರಿಂದ, ಅದರ ನೆನಪಿನಲ್ಲಿ ಇಲ್ಲೇ ರಿಲೀಸ್ ಮಾಡುತ್ತಿದ್ದೇವೆ. ರಾಜಗುರು ಹೊಸಕೋಟೆ ಬರೆದಿರುವ ಈ ಹಾಡನ್ನು ಗುರುರಾಜ ಹೊಸಕೋಟೆ, ಪ್ರವೀಣ್ – ಪ್ರದೀಪ್ ಹಾಡಿದ್ದಾರೆ. ಇಂದಿನಿಂದ ಐದು ಅಥವಾ 10 ದಿನಗಳಿಗೊಮ್ಮೆ ಚಿತ್ರದ ಹಾಡು ಅಥವಾ ಕಂಟೆಂಟ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರವನ್ನು ಮುಂದುವರೆಸುತ್ತೇವೆ.

ಇದೊಂದು 80ರ ದಶಕದ ಕಥೆ. ಒಂದು ಘಟನೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವ ತರಹದ ಪಾತ್ರ ವಹಿಸುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದೇವೆ. ಕಾಲ ಯಾರನ್ನೂ ಬಿಡುವುದಿಲ್ಲ, ಎಲ್ಲರ ಕಾಲನ್ನೂ ಎಳೆಯುತ್ತದೆ ಎಂದು ಈ ಚಿತ್ರದ ಮೂಲಕ ತೋರಿಸುವುದಕ್ಕೆ ಹೊರಟಿದ್ದೇವೆ. ಇಲ್ಲಿ ಚಂದನ್ ಮತ್ತು ಅರ್ಚನಾ ಅವರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಅವರು ನಟಿಸಬಾರದು. ಸಹಜವಾಗಿ ವರ್ತಿಸಬೇಕು ಎಂಬುದು ನನ್ನ ಆಸೆ ಆಗಿತ್ತು. ಹಾಗಾಗಿ, ವರ್ಕ್ ಶಾಪ್ ಮಾಡಿದೆ. ಇಬ್ಬರೂ ಬಹಳ ಸಹಜವಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರ ವಿಭಿನ್ನವಾಗಿ ಮತ್ತು ನಾವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕರು ಮತ್ತು ಚಿತ್ರತಂಡದವರ ಸಹಕಾರವಿಲ್ಲದಿದ್ದರೆ, ಈ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ನಾನು ಚಿರ ಋಣಿ ಎಂದರು ನಿರ್ದೇಶಕ ಸುಜಯ್ ಶಾಸ್ತ್ರಿ.

ಇಂದು ನಮ್ಮ ಚಿತ್ರದ ಗೋಲ್ಡ್ ಫ್ಯಾಕ್ಟರಿ ಎಂಬ ಮೊದಲ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ನಾನು ತುಂಬಾ ಸಿಟ್ಟಾಗಿರುತ್ತೇನೆ. ಅದಕ್ಕೊಂದು ಕಾರಣವೂ ಇರುತ್ತದೆ. ಹಾಡು, ಚಿತ್ರ ಎರಡೂ ಬಹಳ ಚೆನ್ನಾಗಿ ಮೂಡಿ ಬಂದಿದೆ. ಇದೊಂದು ವಿಭಿನ್ನವಾದ ಚಿತ್ರ. ಸುಜಯ್ ಶಾಸ್ತ್ರಿ ಅವರಿಂದ ತುಂಬಾ ಕಲಿತೆ. ಅವರು ನನ್ನನ್ನು ಚೆನ್ನಾಗಿ ಮೌಲ್ಡ್ ಮಾಡಿದ್ದಾರೆ ಎಂದರು ನಾಯಕ ಚಂದನ್ ಶೆಟ್ಟಿ.

ನಟಿಯಾಗಿ ಒಂದು ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಬಹಳ ಆಸೆ ಇತ್ತು. ಆ ಆಸೆ ಈ ಚಿತ್ರದ ಮೂಲಕ ಈಡೇರಿದೆ. ಚಿತ್ರದಲ್ಲಿ ಅದ್ಭುತವಾದ ತಾರಾಗಣವಿದೆ. ತಾರಾ, ದತ್ತಣ್ಣ, ಮಂಡ್ಯ ರಮೇಶ್, ಮಂಜು ಪಾವಗಡ, ರಜನಿಕಾಂತ್ ಮುಂತಾದವರು ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಗುಬ್ಬಿಮರಿಯ ಹೋರಾಟ!

ಗುಬ್ಬಿ ಟೆಂಟ್ ಬ್ಯಾನರ್ ನಲ್ಲಿ ಆನಂದಬಾಬು ಹಾಗೂ ಡಾ.ನಿಶ್ಚಿತ ನಿರ್ಮಿಸಿರುವ ಹಾಗೂ ಮಧು ಡಕಣಾಚಾರ್ ನಿರ್ದೇಶನದ ಗುಬ್ಬಿಮರಿ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಿರ್ದೇಶಕ ಹಾಗೂ ನಿರ್ಮಾಪಕರ ಅಮ್ಮಂದಿರು ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಕೆಲವರಿಗೆ ಹೆಣ್ಣು ತಾಯಿಯಾಗಿ ಬೇಕು, ಹೆಂಡತಿಯಾಗಿ ಬೇಕು ಆದರೆ ಮಗಳಾಗಿ ಮಾತ್ರ ಬೇಡ. ಕಾಲ ಎಷ್ಟು ಮುಂದುವರೆದಿದ್ದರೂ, ಇನ್ನೂ ಕೆಲವು ವಿಕೃತ ಮನಸ್ಸಿನವರು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಅಂತಹವರಿಗೆ ಈ ಸಿನಿಮಾ ಮೂಲಕ ಇದು ತಪ್ಪು ಎಂದು ಅರಿವು ಮೂಡಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲರೂ ಕುಟುಂಬ ಸಮೇತ ನೋಡಬಹುದಾದ ಚಿತ್ರ ನಮ್ಮದು. ನಾನು ಈ ಹಿಂದೆ ಕೆಲವು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿದ್ದೆ. ಇದು ಮೊದಲ ಚಿತ್ರ. ನಾನು ಕಥೆಯನ್ನು ಆನಂದಬಾಬು ಅವರಿಗೆ ಹೇಳಿದೆ. ಅವರು ನಿರ್ಮಾಣಕ್ಕೆ ಮುಂದಾದರು. ಅವರ ಮೂಲಕ ಡಾ. ನಿಶ್ಚಿತ ಪರಿಚಿತರಾದರು. ಇಬ್ಬರೂ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಹದೇವಸ್ವಾಮಿ ರಿಲೀಸ್ ಈ ಚಿತ್ರದ ಪಾರ್ಟನರ್ ಆಗಿದ್ದಾರೆ.


ಸುಂದರ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ದೀಪು – ಸಿದ್ದು ಛಾಯಾಗ್ರಹಣ, ಎ.ಟಿ.ರವೀಶ್ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕುಣಿಗಲ್ ಸಂಕಲನ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ಮಧು ಡಕಣಾಚಾರ್ ಚಿತ್ರದ ಬಗ್ಗೆ ‌ಮಾಹಿತಿ ನೀಡಿದರು.

ನಿರ್ಮಾಪಕರಾದ ಆನಂದಬಾಬು ಹಾಗೂ ಡಾ. ನಿಶ್ಚಿತ ಚಿತ್ರದ ಕುರಿತು ಮಾತನಾಡಿದರು.

ಇದು ಮಕ್ಕಳ ಚಿತ್ರವಲ್ಲ. ಮಕ್ಕಳ ಜೊತೆಗೆ ಹಿರಿಯರು ನೋಡಬೇಕಾದ ಚಿತ್ರ. ನಿರ್ದೇಶಕರು ಒಳ್ಳೆಯ ಚಿತ್ರ ಮಾಡಿದ್ದಾರೆ. ನೋಡಿ ಹಾರೈಸಿ ಎಂದರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಸುಂದರ್.

ಚಿತ್ರದಲ್ಲಿ ಅಭಿನಯಿಸಿರುವ ಮಾಸ್ಟರ್ ಚಿನ್ಮಯ್, ಮಾಸ್ಟರ್ ಸಂಜಯ್, ಸಿಂಧು, ಕಾಮಿಡಿ ಕಿಲಾಡಿಗಳು ಸಂತು, ಕಾಮಿಡಿ ಕಿಲಾಡಿಗಳು ಚಂದ್ರು, ಆಶಾ, ಪ್ರಿಯಾಂಕ (ಮಂಗಳಮುಖಿ) ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು.

Categories
ಸಿನಿ ಸುದ್ದಿ

ಇದು ಕನ್ನಡದ ಆಶಿಕಿ! ಹಾಡಿನ ಮೆರವಣಿಗೆಗೆ ದಿನಗಣನೆ…

‘ಕ್ವಾಟ್ಲೆ’ ಸಿನಿಮಾ ನಿರ್ದೇಶಕಿ ಜೆ ಚಂದ್ರಕಲ ಅವರ ನಿರ್ದೇಶನದ ‘ಆಶಿಕಿ’ ಸಿನಿಮಾ ಬಿಡುಗಡೆಗೂ ಮುನ್ನ ಹಾಡುಗಳ ಮೂಲಕ ಎಲ್ಲರ ಮನಸೂರೆಗೊಳ್ಳಲು ಸಜ್ಜಾಗಿದೆ. ಚಿತ್ರದ ‘ಯಾರಾ ಯಾರಾ’ ಹಾಡಿನ ವೀಡಿಯೋ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೂ ಮುನ್ನುಡಿ ಬರೆದಿದೆ ಚಿತ್ರತಂಡ.

ಲಿಯೋ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸ್ವತಃ ಚಿತ್ರದ ನಿರ್ದೇಶಕಿ ಜೆ ಚಂದ್ರಕಲ ಸಾಹಿತ್ಯ ಬರೆದಿದ್ದು ಅಶ್ವಿನ್ ಶರ್ಮಾ ದನಿಯಾಗಿದ್ದಾರೆ.

ಮ್ಯೂಸಿಕಲ್ ಲವ್ ಸ್ಟೋರಿ ಹಾಗೂ ತ್ರಿಕೋನ ಪ್ರೇಮಕಥೆ ಹೊತ್ತ ‘ಆಶಿಕಿ’ ಚಿತ್ರದಲ್ಲಿ ಸಾಕಷ್ಟು ವರ್ಷ ಮಾಧ್ಯಮ ರಂಗದಲ್ಲಿ ಸಿನಿಮಾ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಸಂದೀಪ್ ಕುಮಾರ್ ನಾಯಕರಾಗಿ ಅಭಿನಯಿಸಿದ್ದು ನಾಯಕಿಯಾಗಿ ಐಶ್ವರ್ಯ ಸಿಂಧೋಗಿ, ಹಾಗೂ ಇನ್ನೊಬ್ಬ ನಾಯಕನ ಪಾತ್ರದಲ್ಲಿ ಪ್ರದೀಪ್ ಕುಮಾರ್ ನಟಿಸಿದ್ದು ಗುರುಪ್ರಸಾದ್, ಸುಚೇಂದ್ರ ಪ್ರಸಾದ್, ತುಳಸಿ ಶಿವಮಣಿ, ಪ್ರಮೋದಿನಿ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇತ್ತಿಚೆಗಷ್ಟೆ ಸೆನ್ಸಾರ್ ಮಗಿಸಿರುವ ಆಶಿಕಿ ದಸರಾದಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು ಇದೇ ತಿಂಗಳಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಪ್ರತಿ ಹಾಡುಗಳು ಡಿಫ್ರೆಂಟ್ ಆಗಿ ಮೂಡಿ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕಿ ಜೆ. ಚಂದ್ರಕಲಾ.

ಕುಲು ಮನಾಲಿ, ಕೇರಳ, ಆಂಧ್ರಪ್ರದೇಶ, ಪಂಜಾಬ್, ಚಂಡೀಗಡ, ಚಿಕ್ಕಮಗಳೂರು, ಆಗ್ರಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಶ್ರೀ ಲಕ್ಷ್ಮೀ ನರಸಿಂಹ ಮೂವೀನ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಜಿ. ಚಂದ್ರಶೇಖರ್ ಬಂಡವಾಳ ಹೂಡಿದ್ದು, ರಾಜರತ್ನ, ನಿತಿನ್ ಅಪ್ಪಿ ಛಾಯಾಗ್ರಾಹಣ, ನಾಗೇಂದ್ರ ಅರಸ್ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ನಗುವಿನ ಹೂಗಳ ಮೇಲೆ ಚಿತ್ರಕ್ಕೆ ಲಂಡನ್ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ…

ಆಮ್ಲೆಟ್, ಕೆಂಪಿರ್ವೆ ಖ್ಯಾತಿಯ ನಿರ್ದೇಶಕ ವೆಂಕಟ್ ಭಾರದ್ವಾಜ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ‘ನಗುವಿನ ಹೂಗಳ ಮೇಲೆ’. ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿ ಸಿನಿಮಾವನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ ವೆಂಕಟ್ ಭಾರದ್ವಾಜ್.

ಬಿಡುಗಡೆಯ ಸನಿಹದಲ್ಲಿರುವ ಚಿತ್ರತಂಡ ಸದ್ಯ ಹಿನ್ನೆಲೆ ಸಂಗೀತ ಯಶಸ್ವಿಯಾಗಿ ಮುಗಿಸಿದ ಸಂಭ್ರಮದಲ್ಲಿದೆ.

ಚಿತ್ರದ ಸಂಗೀತ ನಿರ್ದೇಶಕ ಲವ್ ಪ್ರಾನ್ ಮೆಹತಾ ಲಂಡನ್ ನ Mellifluous ಸ್ಟುಡಿಯೋ ನಲ್ಲಿ ಚಿತ್ರದ ಹಿನ್ನೆಲೆ ಸಂಗೀತ, ಎಫೆಕ್ಟ್ಸ್, ಫೈನಲ್ ಮಿಕ್ಸಿಂಗ್ ಮುಗಿಸಿದ್ದು 7.1 ಫೈನಲ್ ಔಟ್ ಪುಟ್ ದೊರೆತಿದೆ. ಔಟ್ ಪುಟ್ ಕಂಡು ನಿರ್ದೇಶಕ ವೆಂಕಟ್ ಭಾರದ್ವಾಜ್ ಹರುಷಗೊಂಡಿದ್ದು, ಸಂತಸ ಹಂಚಿಕೊಂಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯವನ್ನು ಭರ್ಜರಿಯಾಗಿ ನಡೆಸುತ್ತಿದೆ. ಇದೀಗ ಚಿತ್ರದ ಬ್ಯಾಗ್ರೌಂಡ್ ಸ್ಕೋರ್ ಅಂದುಕೊಂಡಂತೆ ಯಶಸ್ವಿಯಾಗಿರೋದು ಚಿತ್ರತಂಡದ ಸಂಭ್ರಮ ಹೆಚ್ಚಿಸಿದೆ.

ನಾಯಕ ಅಭಿಷೇಕ್ ರಾಮದಾಸ್, ನಾಯಕಿ ಶರಣ್ಯಾ ಶೆಟ್ಟಿ ಚಿತ್ರದ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ನಡೆಸುತ್ತಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಲ ರಾಜವಾಡಿ, ಗಿರೀಶ್, ಆಶಾ ಸುಜಯ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತಾ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ರೋಮ್ಯಾಂಟಿಕ್ ಜೊತೆಗೆ ಆಕ್ಷನ್ ಕಥಾಹಂದರ ಒಳಗೊಂಡ ಈ ಚಿತ್ರವನ್ನು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ತೆಲುಗಿನ ಕೆ.ಕೆ ರಾಧಾ ಮೋಹನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮೊದಲ ಕನ್ನಡ ಸಿನಿಮಾವಾಗಿದೆ.

ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಟೈಗರ್ ಶಿವು ಸಾಹಸ ಚಿತ್ರಕ್ಕಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ಮೊದಲ ವಾರ ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

Categories
ಸಿನಿ ಸುದ್ದಿ

ಆಪರೇಷನ್ ಲಂಡನ್ ಕೆಫೆ ಪೋಸ್ಟರ್ ಬಂತು: ಇದು ಮೇಘಾಶೆಟ್ಟಿ ಬರ್ತ್ ಡೇ ಗಿಫ್ಟ್…

ಕನ್ನಡದ ಹುಡುಗಿ ಮೇಘಾ ಶೆಟ್ಟಿ ‘ಆಪರೇಷನ್ ಲಂಡನ್ ಕೆಫೆ’ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತು. ಇದೀಗ ಮಲ್ಲಿಗೆ ಮುಡಿದು ಮುದ್ದಾಗಿ ಕಾಣಿಸುವ ಮೇಘಾ ಶೆಟ್ಟಿಯ ಕಲರ್ಫುಲ್ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಅವರ ಹುಟ್ಟು ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಿ ಚಿತ್ರತಂಡ ಶುಭಾಶಯ ಕೋರಿದೆ.

ಇತ್ತೀಚೆಗಷ್ಟೇ ನಾಯಕ ಕವೀಶ್ ಶೆಟ್ಟಿಯ ಔಟ್ ಆಂಡ್ ಔಟ್ ಮಾಸ್ ಆಂಡ್ ಕಮರ್ಷಿಯಲ್ ಪೋಸ್ಟರ್ ಜೊತೆ ಚಿತ್ರದ ಟೈಟಲ್ ಬಿಡುಗಡೆಗೊಳಿಸಿದ ನಿರ್ದೇಶಕ ಸಡಗರ ರಾಘವೇಂದ್ರ ಈಗ ಈ ಪೋಸ್ಟರ್ ಮೂಲಕ ಚಿತ್ರಕ್ಕೆ ಇನ್ನೊಂದು ಸುಂದರವಾದ ಆಯಾಮ ಕೂಡ ಇದೆ ಎನ್ನುವ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಚಿತ್ರದ ಕಥೆ ಮತ್ತು ಮೇಘಾ ಶೆಟ್ಟಿಯ ಪಾತ್ರದ ಬಗ್ಗೆ ಕೇಳಿದಾಗ ಅದಕ್ಕಿನ್ನೂ ಸಮಯವಿದೆ ಈಗಲೇ ಬೇಡ ಎನ್ನುತ್ತಾ ಮುಗುಳ್ನಕ್ಕು ಸುಮ್ಮನಾಗುವ ನಿರ್ದೇಶಕರು ಸದ್ಯದಲ್ಲೇ ಕೊನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ ಬಗ್ಗೆ ತಿಳಿಸಿದ್ದಾರೆ.

ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ ಮತ್ತು ಮರಾಠಿಯ ದೀಪಕ್ ರಾಣೆ ನಿರ್ಮಾಣ ಮಾಡುತ್ತಿರುವ ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್ ಲಾಂಛನದಡಿಯಲ್ಲಿ ಸಿದ್ಧವಾಗುತ್ತಿರುವ ಈ ಅದ್ಧೂರಿ ಬಜೆಟ್ಟಿನ ಬಹುಭಾಷಾ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ತೆರೆ ಕಾಣುವ ಎಲ್ಲಾ ನಿರೀಕ್ಷೆಯಿದೆ.

error: Content is protected !!