ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ “ಡಿ56” ಚಿತ್ರಕ್ಕೆ ವರಮಹಾಲಕ್ಷ್ಮೀ ಹಬ್ಬದಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರ ಪ್ರಾರಂಭವಾಗಿದೆ. ದೇವರ ಮೇಲೆ ಸೆರೆಹಿಡಿದ ಮೊದಲ ದೃಶ್ಯಕ್ಕೆ ರಾಕ್ ಲೈನ್ ವೆಂಕಟೇಶ್ ಪತ್ನಿ ಪುಷ್ಪ ಕುಮಾರಿ ಕ್ಲಾಪ್ ಮಾಡಿದರೆ, ಶ್ರೀ ರವಿಶಂಕರ್ ಗುರೂಜಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
ಡಿ56 ಚಿತ್ರವನ್ನು ‘ರಾಬರ್ಟ್’ ಖ್ಯಾತಿಯ ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ಕಥೆ-ಚಿತ್ರಕಥೆ ಸಹ ಅವರದ್ದೇ. ‘ರಾಬರ್ಟ್’ ಚಿತ್ರದಲ್ಲಿ ಕೆಲಸ ಮಾಡಿದ್ದ ಬಹುತೇಕರು ಇಲ್ಲೂ ಮುಂದುವರೆಯುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ರಾಮು ಮತ್ತು ಮಾಲಾಶ್ರೀ ದಂಪತಿಯ ಮಗಳು ರಾಧನಾ ರಾಮ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ‘ಒಳ್ಳೆಯ ಕಥೆ ಸಿಗುವವರೆಗೂ ಯಾರಿಗೂ ಚಿತ್ರ ಮಾಡುವುದಿಲ್ಲ. ತರುಣ್ ಒಂದೊಳ್ಳೆಯ ಕಥೆ ಹೇಳಿದರು. ದರ್ಶನ್ ಅವರಿಗೆ ಇಷ್ಟು ಚಿತ್ರಗಳಲ್ಲಿ ಈ ತರಹದ ಚಿತ್ರ ಮತ್ತು ಪಾತ್ರ ಎರಡೂ ಹೊಸದು. ಆಗಸ್ಟ್ 16ರಂದು ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದರು.
ವರಮಹಾಲಕ್ಷ್ಮೀಯ ಹಬ್ಬದ ಶುಭಾಶಯಗಳನ್ನು ಕೋರುತ್ತಲೇ ಮಾತು ಪ್ರಾರಂಭಿಸಿದ ದರ್ಶನ್. ‘ಇವತ್ತಿನಿಂದ ಡಿ56 ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿದೆ. ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಘೋಷಿಸಲಾಗುತ್ತಿದೆ. ರಾಬರ್ಟ್ ತಂಡದ ಬಹಳಷ್ಟು ಜನ ಇಲ್ಲಿ ಮುಂದುವರೆಯುತ್ತಿದ್ದಾರೆ. ಈ ಚಿತ್ರದ ಹೆಚ್ಚಿನ ವಿಷಯವನ್ನು ಸದ್ಯದಲ್ಲೇ ತಿಳಿಸುತ್ತೇವೆ’ ಎಂದರು.
ಈ ಚಿತ್ರ ನೋಡಿದವರಿಗೆ ಹೆಮ್ಮೆ ಆಗುವುದು ಖಂಡಿತಾ ಎನ್ನುವ ನಿರ್ದೇಶಕ ತರುಣ್ ಸುಧೀರ್, ‘ಚಿಕ್ಕವಯಸ್ಸಿನಲ್ಲಿ ಪೋಸ್ಟರ್ ಗಳಲ್ಲಿ ರಾಕ್ ಲೈನ್ ಪ್ರೊಡಕ್ಷನ್ಸ್ ಅಂತ ನೋಡಿಯೇ ಎಷ್ಟೋ ಚಿತ್ರಗಳಿಗೆ ಹೋಗಿದ್ದೇನೆ. ಆ ಬ್ಯಾನರ್ನ ಚಿತ್ರಗಳು ಚೆನ್ನಾಗಿರುತ್ತದೆ ಎಂಬ ನಂಬಿಕೆಯ ಮೇಲೆ ಚಿತ್ರಗಳಿಗೆ ಹೋಗುತ್ತಿದ್ದೆವು. ಈಗ ಅದೇ ಸಂಸ್ಥೆಯಲ್ಲಿ ಚಿತ್ರ ನಿರ್ದೇಶಿಸುತ್ತಿರುವುದು ದೊಡ್ಡ ಜವಾಬ್ದಾರಿ. ಹಾಗಾಗಿ, ತುಂಬಾ ಮುತುವರ್ಜಿ ವಹಿಸಿ, ಬೇರೆ ತರಹದ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ದರ್ಶನ್ ಅವರ ಪಾತ್ರ, ಚಿತ್ರದ ಹಿನ್ನೆಲೆ ಎಲ್ಲವೂ ವಿಭಿನ್ನವಾಗಿರುತ್ತದೆ. ಚಿತ್ರ ನೋಡಿದವರಿಗೆ ಹೆಮ್ಮೆ ಆಗುವುದು ಖಂಡಿತಾ’ ಎಂದರು.
ಮೊದಲ ಚಿತ್ರದಲ್ಲೇ ದರ್ಶನ್ ರಂತಹ ಸ್ಟಾರ್ ನಟರ ಜೊತೆಗೆ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ರಾಧನಾ, ‘ನನಗೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಬಹಳ ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿತು. ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಇನ್ನೂ ಅರಗಿಸಿಕೊಳ್ಳುವುದಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲ. ನನಗೆ ನಟಿಸುವ ಆಸೆ ಚಿಕ್ಕಂದಿನಿಂದಲೂ ಇತ್ತು. ಎರಡು ವರ್ಷಗಳ ಕಾಲ ಸಾಕಷ್ಟು ತರಬೇತಿ ಪಡೆದು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೇನೆ. ಚಿತ್ರಕ್ಕೆ ಸಂಬಂಧಿಸಿದ ವರ್ಕ್ ಶಾಪ್ ನಲ್ಲೂ ಭಾಗವಹಿಸುತ್ತಿದ್ದೇನೆ’ ಎಂದರು.
ರಾಧಾನಾ ಎಂಟ್ರಿ ಕುರಿತು ಮಾತನಾಡುವ ಅವರ ತಾಯಿ ಮಾಲಾಶ್ರೀ, ‘ನನಗೆ ಬದುಕು ಕೊಟ್ಟ ಚಿತ್ರರಂಗಕ್ಕೆ ಈಗ ನನ್ನ ಮಗಳು ಸಹ ಕಾಲಿಡುತ್ತಿದ್ದಾಳೆ. ನನಗೆ ಎಷ್ಟು ಪ್ರೀತಿ ತೋರಿಸಿದ್ದೀರೋ, ನನ್ನ ಮಗಳಿಗೆ ಅದಕ್ಕಿಂತ ಹೆಚ್ಚು ಪ್ರೀತಿ ತೋರಿಸಿ ಎಂದು ಕೇಳಿಕೊಳ್ಳುತ್ತೇನೆ. ರಾಕ್ ಲೈನ್ ವೆಂಕಟೇಶ್ ಅವರು ನನ್ನ ಸಿನಿಮಾ ಮೂಲಕ ಚಿತ್ರ ನಿರ್ಮಾಣ ಶುರು ಮಾಡಿದರು. ಈಗ ನನ್ನ ಮಗಳು ಅವರ ನಿರ್ಮಾಣದ ಚಿತ್ರದ ಮೂಲಕ ಚಿತ್ರರಂಗಕ್ಕೆ ಚಿತ್ರ ಜೀವನ ಪ್ರಾರಂಭಿಸುತ್ತಿದ್ದಾಳೆ. ಒಂದೊಳ್ಳೆಯ ತಂಡದಿಂದ ಅವಳು ಚಿತ್ರರಂಗಕ್ಕೆ ಬರುತ್ತಿದ್ದಾಳೆ ಎಂಬ ಖುಷಿ ಇದೆ. ಅವಳು 14ನೇ ವಯಸ್ಸಿನಲ್ಲಿದ್ದಾಗಲೇ ಚಿತ್ರರಂಗಕ್ಕೆ ಬರಬೇಕು, ಅಭಿನಯಿಸಬೇಕು ಎಂದು ಆಸೆ ಪಟ್ಟಿದ್ದಳು. ಮುಂಬೈನಲ್ಲಿ ನಟನೆ, ಡ್ಯಾನ್ಸ್ ತರಬೇತಿ ಪಡೆದಿದ್ದಾಳೆ. ನಾಳೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ, ಪ್ರೇಕ್ಷಕರು ನನ್ನ ಮತ್ತು ಅವಳ ನಡುವೆ ಹೋಲಿಕೆ ಮಾಡುವುದು ಸಹಜ. ಆದರೆ, ಅವಳು ತನ್ನ ಹೆಸರಿನಿಂದ ಗುರುತಿಸಿಕೊಳ್ಳಬೇಕೇ ಹೊರತು, ನನ್ನ ಹೆಸರಿನಿಂದ ಗುರುತಿಸಿಕೊಳ್ಳಬಾರದು ಎಂಬುದು ನನ್ನ ಆಸೆ’ ಎಂದರು ಮಾಲಾಶ್ರೀ.
ಡಿ56 ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ಮಾಸ್ತಿ ಅವರ ಸಂಭಾಷಣೆ ಇದೆ. ಚಿತ್ರದ ಬಹುತೇಕ ಚಿತ್ರೀಕರಣ ಸೆಟ್ ನಲ್ಲೇ ನಡೆಯಲಿದ್ದು, ಬೆಂಗಳೂರಿನಲ್ಲೇ ಚಿತ್ರೀಕರಣ ಮುಂದುವರೆಯಲಿದೆ.