ನಾನಾ ಊರುಗಳಿಂದ ನಾನಾ ಭಾಷೆಗಳನ್ನಾಡುವ ಜನ ಹಲವು ಕಾಲಗಳಿಂದ ಬೆಂಗಳೂರಿನಲ್ಲಿದ್ದಾರೆ. ಅಂತಹ ಬೆಂಗಳೂರಿನ ಕುರಿತಾಗಿ ಬರುತ್ತಿರುವ ಚಿತ್ರ “ಮೇಡ್ ಇನ್ ಬೆಂಗಳೂರು”.
ಈ ಚಿತ್ರದ ” ಬನ್ನಿರೆ ಬೆಂಗಳೂರಿಗೆ” ಎಂಬ ಹಾಡನ್ನು ಖ್ಯಾತ ನಿರ್ದೇಶಕ ಭಗವಾನ್ ಬಿಡುಗಡೆ ಮಾಡಿದರು. ಚಿತ್ರದ ಪೋಸ್ಟರ್ ಗೆ ಪಿ ಆರ್ ಓ ಸುಧೀಂದ್ರ ವೆಂಕಟೇಶ್ ಚಾಲನೆ ನೀಡಿದರು.
ಈ ಹಾಡನ್ನು ಹನ್ನೊಂದು ಭಾಷೆಗಳನ್ನು ಬಳಸಿ ರಚಿಸಲಾಗಿದೆ. ಜನಪ್ರಿಯ ಗಾಯಕರಾದ ಶ್ರೀಹರ್ಷ ಎಂ.ಆರ್, ಕಂಬದ ರಂಗಯ್ಯ, ರೋಹಿತ್ ಭಟ್, ಮದ್ವೇಶ್ ಭಾರದ್ವಾಜ್, ಮೇಘ ಕುಲಕರ್ಣಿ, ಪೂಜಾ ರಾವ್, ನಾರಾಯಣ ಶರ್ಮ, ಅದಮ್ಯ ರಮಾನಂದ್, ನಿಹಾಲ್ ವಿಜೇತ್, ಆದರ್ಶ ಶೆಣೈ, ಪ್ರವೀಣ್ ಶಣ್ಮುಗ, ಅಥರ್ವ ರಾವ್, ಅಪ್ಪಣ್ಣ, ಅಶ್ವಿನ್ ಪ್ರಭಾತ್, ರಾಕೇಶ್ ಪೂಜಾರಿ ಮುಂತಾದವರು ಈ ಹಾಡನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಅಶ್ವಿನ್ ಪಿ ಕುಮಾರ್ ಹಾಡಿನ ಬಗ್ಗೆ ವಿವರಣೆ ನೀಡಿದರು. ಅಶ್ವಿನ್ ಪಿ ಕುಮಾರ್ ಸಹ ಈ ಗೀತೆಗೆ ಧ್ವನಿಯಾಗಿದ್ದಾರೆ.
ನಾನು ರಾಘವೇಂದ್ರಸ್ವಾಮಿಗಳ ಪರಮಭಕ್ತ. ರಾಯರ ಭಕ್ತರಿಂದಲೇ ಈ ಹಾಡನ್ನು ಬಿಡುಗಡೆ ಮಾಡಿಸುವ ಆಸೆಯಿತ್ತು. ಹಾಗಾಗಿ “ಮಂತ್ರಾಲಯ ಮಹಾತ್ಮೆ” ಯಂತಹ ಅದ್ಭುತ ಚಿತ್ರದ ನಿರ್ಮಾಪಕರು ಹಾಗೂ ಖ್ಯಾತ ನಿರ್ದೇಶಕರೂ ಆಗಿರುವ ಭಗವಾನ್ ಅವರಿಂದ ಹಾಡು ಬಿಡುಗಡೆ ಮಾಡಿಸಿದ್ದೇವೆ. ನಲವತ್ತೆಂಟು ವರ್ಷಗಳ ಹಿಂದೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ರಾಯರ ಭಕ್ತರಾದ ಸುಧೀಂದ್ರ ಅವರು ಆರಂಭಿಸಿದ್ದರು. ಈಗ ಆ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಖ್ಯಾತ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಅವರಿಂದ ಪೋಸ್ಟರ್ ಬಿಡುಗಡೆ ಮಾಡಿಸಿದ್ದು ಖುಷಿಯಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ಬಾಲಕೃಷ್ಣ.
ಮಧ್ಯಮವರ್ಗದ ಹುಡುಗನೊಬ್ಬ ಐಟಿ ಕಂಪನಿ ಕೆಲಸ ಬಿಟ್ಟು, ಹೊಸ ಕಂಪನಿ ಆರಂಭಿಸುತ್ತಾನೆ. ಅದಕ್ಕಾಗಿ ಹೂಡಿಕೆದಾರರನ್ನು ಹುಡುಕುತ್ತಾನೆ. ಸಿಗದಿದ್ದಾಗ ಗ್ಯಾಂಗ್ ಸ್ಟರ್ ಬಳಿ ಹಣ ಪಡೆಯುತ್ತಾನೆ. ಮುಂದೇನಾಗುತ್ತದೆ ಎಂಬುದೆ ಚಿತ್ರದ ಕಥೆ ಎಂದು ನಿರ್ದೇಶಕ ಪ್ರದೀಪ್ ಶಾಸ್ತ್ರಿ ವಿವರಣೆ ನೀಡಿದರು.
ಚಿತ್ರದ ನಾಯಕ ಮಧುಸೂದನ್ ಗೋವಿಂದ್, ನಟರಾದ ಪುನೀತ್ ಮಾಂಜ ಹಾಗೂ ವಂಶಿಧರ್ ಸಹ ಈ ಚಿತ್ರದ ಕುರಿತು ಮಾತನಾಡಿದರು.
ನಾವು ಚಿತ್ರ ನಿರ್ಮಾಣ ಮಾಡಬೇಕಾದರೆ ಇಷ್ಟು ಸುಲಭವಿರಲಿಲ್ಲ. ಈಗ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಹೊಸಬರ ತಂಡದಿಂದ ಹೊಸಚಿತ್ರವೊಂದು ನಿರ್ಮಾಣವಾಗಿದೆ. ರಾಯರ ಭಕ್ತರು ನಿರ್ಮಾಣ ಮಾಡಿದ್ದಾರೆ. ಇಡೀ ತಂಡಕ್ಕೆ ರಾಯರ ಕೃಪೆಯಿರಲಿ ಎಂದು ಹಿರಿಯ ನಿರ್ದೇಶಕ ಭಗವಾನ್ ಹಾರೈಸಿದರು.
ಹಿರಿಯ ನಟರಾದ ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಮುಂತಾದ ಕಲಾವಿದರು “ಮೇಡ್ ಇನ್ ಬೆಂಗಳೂರು” ಚಿತ್ರದಲ್ಲಿ ನಟಿಸಿದ್ದಾರೆ.