ನಗುವಿನ ಹೂಗಳ ಮೇಲೆ ಚಿತ್ರಕ್ಕೆ ಲಂಡನ್ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ…

ಆಮ್ಲೆಟ್, ಕೆಂಪಿರ್ವೆ ಖ್ಯಾತಿಯ ನಿರ್ದೇಶಕ ವೆಂಕಟ್ ಭಾರದ್ವಾಜ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ‘ನಗುವಿನ ಹೂಗಳ ಮೇಲೆ’. ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿ ಸಿನಿಮಾವನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ ವೆಂಕಟ್ ಭಾರದ್ವಾಜ್.

ಬಿಡುಗಡೆಯ ಸನಿಹದಲ್ಲಿರುವ ಚಿತ್ರತಂಡ ಸದ್ಯ ಹಿನ್ನೆಲೆ ಸಂಗೀತ ಯಶಸ್ವಿಯಾಗಿ ಮುಗಿಸಿದ ಸಂಭ್ರಮದಲ್ಲಿದೆ.

ಚಿತ್ರದ ಸಂಗೀತ ನಿರ್ದೇಶಕ ಲವ್ ಪ್ರಾನ್ ಮೆಹತಾ ಲಂಡನ್ ನ Mellifluous ಸ್ಟುಡಿಯೋ ನಲ್ಲಿ ಚಿತ್ರದ ಹಿನ್ನೆಲೆ ಸಂಗೀತ, ಎಫೆಕ್ಟ್ಸ್, ಫೈನಲ್ ಮಿಕ್ಸಿಂಗ್ ಮುಗಿಸಿದ್ದು 7.1 ಫೈನಲ್ ಔಟ್ ಪುಟ್ ದೊರೆತಿದೆ. ಔಟ್ ಪುಟ್ ಕಂಡು ನಿರ್ದೇಶಕ ವೆಂಕಟ್ ಭಾರದ್ವಾಜ್ ಹರುಷಗೊಂಡಿದ್ದು, ಸಂತಸ ಹಂಚಿಕೊಂಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯವನ್ನು ಭರ್ಜರಿಯಾಗಿ ನಡೆಸುತ್ತಿದೆ. ಇದೀಗ ಚಿತ್ರದ ಬ್ಯಾಗ್ರೌಂಡ್ ಸ್ಕೋರ್ ಅಂದುಕೊಂಡಂತೆ ಯಶಸ್ವಿಯಾಗಿರೋದು ಚಿತ್ರತಂಡದ ಸಂಭ್ರಮ ಹೆಚ್ಚಿಸಿದೆ.

ನಾಯಕ ಅಭಿಷೇಕ್ ರಾಮದಾಸ್, ನಾಯಕಿ ಶರಣ್ಯಾ ಶೆಟ್ಟಿ ಚಿತ್ರದ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ನಡೆಸುತ್ತಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಲ ರಾಜವಾಡಿ, ಗಿರೀಶ್, ಆಶಾ ಸುಜಯ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತಾ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ರೋಮ್ಯಾಂಟಿಕ್ ಜೊತೆಗೆ ಆಕ್ಷನ್ ಕಥಾಹಂದರ ಒಳಗೊಂಡ ಈ ಚಿತ್ರವನ್ನು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ತೆಲುಗಿನ ಕೆ.ಕೆ ರಾಧಾ ಮೋಹನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮೊದಲ ಕನ್ನಡ ಸಿನಿಮಾವಾಗಿದೆ.

ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಟೈಗರ್ ಶಿವು ಸಾಹಸ ಚಿತ್ರಕ್ಕಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ಮೊದಲ ವಾರ ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

Related Posts

error: Content is protected !!