ಕನ್ನಡದ ಹುಡುಗಿ ಮೇಘಾ ಶೆಟ್ಟಿ ‘ಆಪರೇಷನ್ ಲಂಡನ್ ಕೆಫೆ’ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತು. ಇದೀಗ ಮಲ್ಲಿಗೆ ಮುಡಿದು ಮುದ್ದಾಗಿ ಕಾಣಿಸುವ ಮೇಘಾ ಶೆಟ್ಟಿಯ ಕಲರ್ಫುಲ್ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಅವರ ಹುಟ್ಟು ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಿ ಚಿತ್ರತಂಡ ಶುಭಾಶಯ ಕೋರಿದೆ.
ಇತ್ತೀಚೆಗಷ್ಟೇ ನಾಯಕ ಕವೀಶ್ ಶೆಟ್ಟಿಯ ಔಟ್ ಆಂಡ್ ಔಟ್ ಮಾಸ್ ಆಂಡ್ ಕಮರ್ಷಿಯಲ್ ಪೋಸ್ಟರ್ ಜೊತೆ ಚಿತ್ರದ ಟೈಟಲ್ ಬಿಡುಗಡೆಗೊಳಿಸಿದ ನಿರ್ದೇಶಕ ಸಡಗರ ರಾಘವೇಂದ್ರ ಈಗ ಈ ಪೋಸ್ಟರ್ ಮೂಲಕ ಚಿತ್ರಕ್ಕೆ ಇನ್ನೊಂದು ಸುಂದರವಾದ ಆಯಾಮ ಕೂಡ ಇದೆ ಎನ್ನುವ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಚಿತ್ರದ ಕಥೆ ಮತ್ತು ಮೇಘಾ ಶೆಟ್ಟಿಯ ಪಾತ್ರದ ಬಗ್ಗೆ ಕೇಳಿದಾಗ ಅದಕ್ಕಿನ್ನೂ ಸಮಯವಿದೆ ಈಗಲೇ ಬೇಡ ಎನ್ನುತ್ತಾ ಮುಗುಳ್ನಕ್ಕು ಸುಮ್ಮನಾಗುವ ನಿರ್ದೇಶಕರು ಸದ್ಯದಲ್ಲೇ ಕೊನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ ಬಗ್ಗೆ ತಿಳಿಸಿದ್ದಾರೆ.
ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ ಮತ್ತು ಮರಾಠಿಯ ದೀಪಕ್ ರಾಣೆ ನಿರ್ಮಾಣ ಮಾಡುತ್ತಿರುವ ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್ ಲಾಂಛನದಡಿಯಲ್ಲಿ ಸಿದ್ಧವಾಗುತ್ತಿರುವ ಈ ಅದ್ಧೂರಿ ಬಜೆಟ್ಟಿನ ಬಹುಭಾಷಾ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ತೆರೆ ಕಾಣುವ ಎಲ್ಲಾ ನಿರೀಕ್ಷೆಯಿದೆ.