ಗುಬ್ಬಿ ಟೆಂಟ್ ಬ್ಯಾನರ್ ನಲ್ಲಿ ಆನಂದಬಾಬು ಹಾಗೂ ಡಾ.ನಿಶ್ಚಿತ ನಿರ್ಮಿಸಿರುವ ಹಾಗೂ ಮಧು ಡಕಣಾಚಾರ್ ನಿರ್ದೇಶನದ ಗುಬ್ಬಿಮರಿ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಿರ್ದೇಶಕ ಹಾಗೂ ನಿರ್ಮಾಪಕರ ಅಮ್ಮಂದಿರು ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಕೆಲವರಿಗೆ ಹೆಣ್ಣು ತಾಯಿಯಾಗಿ ಬೇಕು, ಹೆಂಡತಿಯಾಗಿ ಬೇಕು ಆದರೆ ಮಗಳಾಗಿ ಮಾತ್ರ ಬೇಡ. ಕಾಲ ಎಷ್ಟು ಮುಂದುವರೆದಿದ್ದರೂ, ಇನ್ನೂ ಕೆಲವು ವಿಕೃತ ಮನಸ್ಸಿನವರು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಅಂತಹವರಿಗೆ ಈ ಸಿನಿಮಾ ಮೂಲಕ ಇದು ತಪ್ಪು ಎಂದು ಅರಿವು ಮೂಡಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲರೂ ಕುಟುಂಬ ಸಮೇತ ನೋಡಬಹುದಾದ ಚಿತ್ರ ನಮ್ಮದು. ನಾನು ಈ ಹಿಂದೆ ಕೆಲವು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿದ್ದೆ. ಇದು ಮೊದಲ ಚಿತ್ರ. ನಾನು ಕಥೆಯನ್ನು ಆನಂದಬಾಬು ಅವರಿಗೆ ಹೇಳಿದೆ. ಅವರು ನಿರ್ಮಾಣಕ್ಕೆ ಮುಂದಾದರು. ಅವರ ಮೂಲಕ ಡಾ. ನಿಶ್ಚಿತ ಪರಿಚಿತರಾದರು. ಇಬ್ಬರೂ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಹದೇವಸ್ವಾಮಿ ರಿಲೀಸ್ ಈ ಚಿತ್ರದ ಪಾರ್ಟನರ್ ಆಗಿದ್ದಾರೆ.
ಸುಂದರ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ದೀಪು – ಸಿದ್ದು ಛಾಯಾಗ್ರಹಣ, ಎ.ಟಿ.ರವೀಶ್ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕುಣಿಗಲ್ ಸಂಕಲನ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ಮಧು ಡಕಣಾಚಾರ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ನಿರ್ಮಾಪಕರಾದ ಆನಂದಬಾಬು ಹಾಗೂ ಡಾ. ನಿಶ್ಚಿತ ಚಿತ್ರದ ಕುರಿತು ಮಾತನಾಡಿದರು.
ಇದು ಮಕ್ಕಳ ಚಿತ್ರವಲ್ಲ. ಮಕ್ಕಳ ಜೊತೆಗೆ ಹಿರಿಯರು ನೋಡಬೇಕಾದ ಚಿತ್ರ. ನಿರ್ದೇಶಕರು ಒಳ್ಳೆಯ ಚಿತ್ರ ಮಾಡಿದ್ದಾರೆ. ನೋಡಿ ಹಾರೈಸಿ ಎಂದರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಸುಂದರ್.
ಚಿತ್ರದಲ್ಲಿ ಅಭಿನಯಿಸಿರುವ ಮಾಸ್ಟರ್ ಚಿನ್ಮಯ್, ಮಾಸ್ಟರ್ ಸಂಜಯ್, ಸಿಂಧು, ಕಾಮಿಡಿ ಕಿಲಾಡಿಗಳು ಸಂತು, ಕಾಮಿಡಿ ಕಿಲಾಡಿಗಳು ಚಂದ್ರು, ಆಶಾ, ಪ್ರಿಯಾಂಕ (ಮಂಗಳಮುಖಿ) ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು.