ಸೆಪ್ಟೆಂಬರ್ ವೇಳೆಗೆ ಕಾಟನ್ ಪೇಟೆ ಗೇಟ್ ಓಪನ್! ಹೊಸಬರ ಚಿತ್ರ ರಿಲೀಸ್ ಗೆ ರೆಡಿ…

ಕನ್ನಡ ಚಿತ್ರರಂಗಕ್ಕೆ “ಯುವರಾಜ” ಸೇರಿದಂತೆ ಅನೇಕ ಅದ್ದೂರಿ ಚಿತ್ರಗಳನ್ನು ನೀಡಿರುವ ಆರ್.ಎಸ್ ಶ್ರೀನಿವಾಸ್ ನಿರ್ಮಾಣದ “ಕಾಟನ್ ಪೇಟೆ ಗೇಟ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 9 ರಂದು ತೆರೆಗೆ ಬರುವ ಸಾಧ್ಯತೆಯಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ – ಹಾಡುಗಳು ಬಿಡುಗಡೆಯಾಗಿವೆ.

ನಮ್ಮ ಆರ್ ಎಸ್ ಪ್ರೊಡಕ್ಷನ್ಸ್ ಮೂಲಕ ಶಿವರಾಜಕುಮಾರ್ ಅಭಿನಯದ “ಯುವರಾಜ” ಚಿತ್ರ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇವೆ‌. ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ “ಯುವರಾಜ” ಚಿತ್ರ ನಿರ್ದೇಶನ ಮಾಡಿದ್ದರು. ಈಗ ಅವರ ಬಳಿ ಕೆಲಸ ಮಾಡಿರುವ ವೈ ರಾಜಕುಮಾರ್ ನಿರ್ದೇಶನದಲ್ಲಿ “ಕಾಟನ್ ಪೇಟೆ ಗೇಟ್” ಚಿತ್ರ ನಿರ್ಮಾಣ ಮಾಡಿದ್ದೇನೆ. ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸೆಪ್ಟೆಂಬರ್ 9 ರಂದು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಆರ್ ಎಸ್ ಶ್ರೀನಿವಾಸ್.

ಅವಕಾಶ ನೀಡಿರುವ ನಿರ್ಮಾಪಕರಿಗೆ ಧನ್ಯವಾದ. “ಕಾಟನ್ ಪೇಟೆ ಗೇಟ್” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ ಅಂದರೆ ಅದಕ್ಕೆ ನಾನೊಬ್ಬ ಕಾರಣ ಅಲ್ಲ ನನ್ನ ಇಡೀ ಚಿತ್ರತಂಡದ ಶ್ರಮ ಎಂದರು ನಿರ್ದೇಶಕ ವೈ ರಾಜಕುಮಾರ್.

ಈ ಚಿತ್ರ ಮೂರು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಆದರೆ ಮೊದಲು ಆರಂಭವಾಗಿದ್ದು ಕನ್ನಡದಲ್ಲಿ . ಇಲ್ಲಿನ ಅರಣ್ಯ ಪ್ರದೇಶ, ಸುಂದರವಾದ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಇದೊಂದು ಆಕ್ಷನ್, ಕಾಮಿಡಿ, ಸಸ್ಪೆನ್ಸ್, ಸೆಂಟಿಮೆಂಟ್ ಎಲ್ಲಾ ಅಂಶಗಳಿರುವ ಕಮರ್ಷಿಯಲ್ ಚಿತ್ರ. ರಾಜಕುಮಾರ್ ಬಹಳ ಚೆನ್ನಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಲು ನನಗೆ ತುಂಬಾ ಖುಷಿಯಾಗಿದೆ ಎನ್ನುತ್ತಾರೆ ನಾಯಕ ವೇಣುಗೋಪಾಲ್.

ಸಂಗೀತ ನಿರ್ದೇಶಕ ಪ್ರಸು, ಛಾಯಾಗ್ರಹಕ ಯೋಗಿ ರೆಡ್ಡಿ, ಚಿತ್ರದಲ್ಲಿ ನಟಿಸಿರುವ 8pm ಸಾಯಿಕುಮಾರ್, ಕಟ್ಟಪ್ಪ, ರಘು ಮುಂತಾದ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್, ಗೌರವ ಕಾರ್ಯದರ್ಶಿ ಸುಂದರರಾಜ್, ಮಮತಾ ದೇವರಾಜ್, ನಿರ್ದೇಶಕ ವಿ.ಸಮುದ್ರ ಹಾಗೂ ನಟ ಜೈ ಸಿದ್ಧಾರ್ಥ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

Related Posts

error: Content is protected !!