ಹಠವಾದಿ ಕ್ರಿಯೇಷನ್ಸ್ ಮೂಲಕ ರಾಜಶೇಖರ್ ಚಂದ್ರಶೇಖರ್ ನಿರ್ಮಿಸಿದ ಸಿನಿಮಾ
ಇದು ನಿಮ್ಮೂರು ಅಂದ್ರೆ, ನಮ್ಮೂರು ಕೂಡ. ನಿಮ್ಮೂರು ಆಗಲಿ, ನಮ್ಮೂರು ಆಗಲಿ ಎರಡು ಹಳ್ಳಿ. ಆ ಹಳ್ಳಿಯೊಳಗೆ ಏನೀರಲ್ಲ ಹೇಳಿ? ಹಾಸ್ಯ, ರಾಜಕೀಯ, ವಿಡಂಬನೆ, ಗಲಾಟೆ, ಗೂಂಡಾಗಿರಿ, ತಮಾಷೆ ಎಲ್ಲವೂದರ ಮಿಕ್ಸರ್ ಹಳ್ಳಿ. ಆ ಹಳ್ಳಿಯೊಳಗಿನ ಹಾಸ್ಯ ಹೇಗಿರುತ್ತೆ ಅನ್ನೋದನ್ನೇ ಪ್ರಧಾನವಾಗಿಟ್ಟುಕೊಂಡು “ನಿಮ್ಮೂರು ʼ ಹೆಸರಲ್ಲೊಂದು ಸಿನಿಮಾ ರೆಡಿ ಆಗಿದೆ. ದಾವಣಗೆರೆ ಮೂಲದ ರಾಜಶೇಖರ್ ಚಂದ್ರಶೇಖರ್ ಇದರ ನಿರ್ಮಾಪಕರು. ಹಠವಾದಿ ಕ್ರಿಯೇಷನ್ಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ.
ವಿಜಯ್.ಎಸ್ ಈ ಚಿತ್ರದ ನಿರ್ದೇಶಕ. ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ತಲಕಾಡು, ಹಾಸನ, ಸಕಲೇಶಪುರ ಹಾಗೂ ರಾಣಿಬೆನ್ನೂರು ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ನಿರ್ದೇಶಕ ವಿಜಯ್ ಎಸ್. ಅವರ ಪ್ರಕಾರ ಇದೊಂದು ಹಳ್ಳಿ ಸೊಗಡಿನ ಕತೆ. ಗ್ರಾಮೀಣ ಭಾಗದ ಪ್ರೀತಿ, ಪ್ರೇಮದ ಎಳೆ ಕತೆಯ ಹೈಲೈಟ್ಸ್ ಅಂತೆ.
” ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಹಾಸ್ಯ ಪ್ರಜ್ನೆ ಹೇಗಿರುತ್ತೆ ಎನ್ನುವುದು ಚಿತ್ರದ ಪ್ರಮುಖ ಅಂಶ. ಜತೆಗೆ ಒಂದು ಉತ್ತಮ ಸಂದೇಶ ಚಿತ್ರದಲ್ಲಿದೆ. ಅಲ್ಲದೇ ಗ್ರಾಮೀಣ ಭಾಗದ ಜನರಿಗೆ ಇದು ತಿಳಿದುಕೊಳ್ಳಲೇಬೇಕಾದ ಸಂದೇಶʼ ಎನ್ನುತ್ತಾರೆ ನಿರ್ದೇಶಕ ವಿಜಯ್. ಸದ್ಯಕ್ಕೀಗ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ. ಹಾಗೆಯೇ ಚಿತ್ರದ ಫಸ್ಟ್ ಕಾಪಿ ಹೊರ ಬಂದಿದೆ. ಹಾಗೆಯೇ ಚಿತ್ರವನ್ನು ಶೀಘ್ರವೇ ತೆರೆಗೆ ತರುವ ಯೋಚನೆ ಚಿತ್ರ ತಂಡಕ್ಕಿದೆ.
ಚಿತ್ರದ ತಾರಾಗಣದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಇದ್ಧಾರೆ. ಲಕ್ಕಿರಾಮ್, ವೀಣಾ ಗಂಗಾರಾಮ್, ತ್ರಿವಿಕ್ರಮ್, ಸಿದ್ದು ಮಂಡ್ಯ, ಮಂಜುನಾಥ್, ಅಂಜಿನಪ್ಪ, ಸುಧಾ, ಶ್ರೀಕಾಂತ್ ಹೊನ್ನವಳ್ಳಿ ಮತ್ತಿತರರು ಚಿತ್ರದಲ್ಲಿದ್ದಾರೆ. ಹಾಗೆಯೇ ಚಿತ್ರಕ್ಕೆ ಪಳನಿವೇಲು ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಮಧು ಸುದಂಡಿ ಸಂಗೀತ ಸಂಯೋಜನೆ, ಹನುರಾಜ್ ಮಧುಗಿರಿ ಸಾಹಿತ್ಯ, ಚಂದ್ರು ಬಂಡೆ ಅವರ ಸಾಹಸವಿದೆ.
ಸದ್ಯಕ್ಕೆ ಫಸ್ಟ್ ಲುಕ್ ಮೂಲಕ ಸುದ್ದಿ ಮಾಡಿ ವಿಕ್ಕಿ ವರುಣ್ ಹೊಸ ಸಿನಿಮಾ
ಕೆಂಡ ಸಂಪಿಗೆಯ ಹುಡುಗ ವಿಕ್ಕಿ ವರುಣ್ ಮತ್ತೆ ಬಂದಿದ್ದಾರೆ. ‘ ಕಾಲೇಜ್ ಕುಮಾರ್ ‘ ಚಿತ್ರದ ಒಂದಷ್ಟು ಗ್ಯಾಪ್ ನಂತರವೀಗ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾದೊಂದಿಗೆ ಹೊಸ ಅವತಾರ ತಾಳಿದ್ದಾರೆ . ಅಂದ ಹಾಗೆ ಆ ಹೊಸ ಅವತಾರದ ಚಿತ್ರ ಕಾಲಾ ಪತ್ಥರ್. ಇಂದು ಅದರ ಫಸ್ಟ್ ಲುಕ್ ಹೊರ ಬಂದಿದೆ. ವಿಕ್ಕಿಯ ಹೊಸ ಅವತಾರದ ದರ್ಶನವಾಗಿರುವುದು ವಿಶೇಷ.
ಇನ್ನು ‘ಕಾಲ ಪತ್ಥರ್’ ಅಂದಾಕ್ಷಣ ಎಲ್ಲೋ ಕೇಳಿದ ನೆನಪು ಅಂತ ನಿಮಗನಿಸಿದರೂ ಅಚ್ಚರಿ ಇಲ್ಲ. ಯಾಕಂದ್ರೆ ಹಿಂದಿಯಲ್ಲಿ ಇದೇ ಹೆಸರಲ್ಲೊಂದು ಸಿನಿಮಾ ಬಂದಿತ್ತು. ಅದು ಯಶ್ ಚೋಪ್ರಾ ನಿರ್ದೇಶನದ ಚಿತ್ರ. ಶಶಿ ಕಪೂರ್, ಅಮಿತಾಬ್ ಬಚ್ಚನ್, ರಾಖೀ ಗುಲ್ಜಾರ್, ಶತ್ರುಘ್ನ ಸಿನ್ಹಾ ಸೇರಿದಂತೆ ದೊಡ್ಡ ತಾರಾಗಣ ಅಲ್ಲಿತ್ತು. ಸಹಜವಾಗಿ ಇದು ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಭರ್ಜರಿ ಗೆಲುವು ಕಂಡಿತು. ಅದೇ ಚಿತ್ರದ ಶೀರ್ಷಿಕೆ ಈಗ ಕನ್ನಡಕ್ಕೂಬಂದಿದೆ. ಹಾಗಂತ ಇದು ಆ ಚಿತ್ರದ ಮುಂದುವರೆದ ಕತೆಯಲ್ಲ.ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಅದು ಹಿಂದಿ ಕಾಲಾ ಪತ್ತರ್, ಇದು ಕನ್ನಡದ ಕಾಲಾಪತ್ಥರ್!
ವಿಕ್ಕಿಯ ಕಮರ್ಷಿಯಲ್ ಎಂಟ್ರಿಗೆ ಈ ಟೈಟಲ್ ಸಿಕ್ಕಿದ್ದೇ ವಿಶೇಷಾಗಿದೆ. ಯಾಕಂದ್ರೆ ‘ಕಾಲಾ ಪತ್ಥರ್’ ಎನ್ನುವ ಟೈಟಲ್ ನಲ್ಲೇ ಒಂದು ಪೋರ್ಸ್ ಇದೆ, ಗತ್ತು ಇದೆ.ಅದಕ್ಕೆ ತಕ್ಕಂತೆಯೇ ಅದರ ಫಸ್ಟ್ ಲುಕ್ ಕೂಡ ಹೊರ ಬಂದಿದೆ. ಲವರ್ ಬಾಯ್, ಕಾಲೇಜು ಹುಡುಗ ಎನ್ನುವ ಇದುವರೆಗಿನ ಅವರ ಕ್ಯಾರೆಕ್ಟರ್, ಔಟ್ ಲುಕ್ ಹಾಗೂ ಆ ಮ್ಯಾನರಿಸಂ ಆಚೆ, ಪಕ್ಕ ಮಾಸ್ ಹೀರೋ ಆಗಿ ಅಬ್ಬರಿಸುವುದು ಗ್ಯಾರಂಟಿ ಆಗಿದೆ. ಆ ದೃಷ್ಟಿಯಲ್ಲಿ ಯುವ ಕಲಾವಿದ ವಿಕ್ಕಿ ವರುಣ್ ಅವರಿಗೆ ಇದು ಬಹುದೊಡ್ಡ ನಿರೀಕ್ಷೆ ಯ ಚಿತ್ರ. ಉಳಿದಂತೆ ಎಸ್ ಅಂಡ್ ಎಸ್ ಎಂಟರ್ ಪ್ರೈಸ್ ಸ್ ಮೂಲಕ ನವೀನ್ ಎನ್ನುವವರು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕುತ್ತಿದ್ದು, ಚೇತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೆಯೇ ಚಿತ್ರದ ಸಾಹಿತ್ಯ ಕ್ಕೆ ಯೋಗರಾಜ್ ಭಟ್, ಹರಿ ಸಂತೋಷ್, ಜಯಂತ್ ಕಾಯ್ಕಿಣಿ ಸಾಥ್ ನೀಡಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡುತ್ತಿದ್ದಾರೆ.ಸದ್ಯಕ್ಕೆ ಇಷ್ಟು ಮಾಹಿತಿ ರಿವೀಲ್ ಆಗಿದೆ.
ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ಕೊರೊನೊ ಭಯ ದೂರವಾಗುತ್ತಿದ್ದಂತೆಯೇ ಅತ್ತ ಸಿನಿಮಾ ಮಂದಿಯ ಮೊಗದಲ್ಲಿ ಮಂದಹಾಸ ಮೂಡಿದೆ. ದಿನ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಿವೆ. ಒಂದಷ್ಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ಅದೇ ಉತ್ಸಾಹದಲ್ಲೇ ಸಿನಿ ಮಂದಿ ಅಖಾಡಕ್ಕಿಳಿದಿದ್ದಾರೆ.
ಈಗ ಅಂಥದ್ದೇ ಹೊಸ ಹುಮ್ಮಸ್ಸು, ಹುರುಪಿನೊಂದಿಗೆ ಚಿತ್ರತಂಡವೊಂದು ಸ್ಕ್ರಿಪ್ಟ್ ಪೂಜೆ ನೆರವೇರಿಸಿದೆ.
ಹೌದು, ಈ ಹಿಂದೆ “ಕಮರೊಟ್ಟು ಚೆಕ್ ಪೋಸ್ಟ್” ಎಂಬ ಯಶಸ್ಸಿನ ಸಿನಿಮಾ ಕೊಟ್ಟಿದ್ದ ನಿರ್ದೇಶಕ ಪರಮೇಶ್ ಈಗ ಹೊಸ ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.
ವಿಶೇಷವೆಂದರೆ, “ಕಮರೊಟ್ಟು ಚೆಕ್ ಪೋಸ್ಟ್” ಯಶಸ್ಸಿನ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಉತ್ಪಲ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತದೇ ಯಶಸ್ಸಿನ ಜೋಡಿ ಹೊಸ ಮೋಡಿ ಮಾಡಲು ಹೊರಟಿದೆ.
ಅಂದಹಾಗೆ, ಅವರ ಕನಸಿನ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. “ಕಮರೊಟ್ಟು ಚೆಕ್ ಪೋಸ್ಟ್” ಕೊಟ್ಟ ಗೆಲುವು ಪುನಃ ಈ ಚಿತ್ರ ಮಾಡೋಕೆ ಕಾರಣವಾಗಿದೆ.
ಈ ಬಾರಿ ನಿರ್ದೇಶಕ ಪರಮೇಶ್, ಒಂದೊಳ್ಳೆಯ ಕಥೆ ಹೆಣೆದು ಚಿತ್ರಕ್ಕೆ ಅಣಿಯಾಗಿದ್ದಾರೆ. ಸದ್ಯಕ್ಕೆ ತೀರ್ಥಹಳ್ಳಿಯಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ.
ಈ ಚಿತ್ರದ ತೆರೆಯ ಮೇಲೆ ಯಾರೆಲ್ಲ ಇದ್ದಾರೆ, ತೆರೆಯ ಹಿಂದೆ ಯಾರೆಲ್ಲ ಇರಲಿದ್ದಾರೆ ಎಂಬುದಕ್ಕೆ ಇನ್ನೂ ಮಾಹಿತಿ ಇಲ್ಲ. ಒಳ್ಳೆಯ ದಿನ ಸ್ಕ್ರಿಪ್ಟ್ ಪೂಜೆ ಮಾಡಿರುವ ಪರಮೇಶ್ ಮತ್ತು ಉತ್ಪಲ್ ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಸಿನಿಮಾ ಕಟ್ಟಿಕೊಡಲು ಉತ್ಸುಕರಾಗಿದ್ದಾರೆ.
ಅದೇನೆ ಇರಲಿ, ಒಂದು ಚಿತ್ರ ಆಗುತ್ತಿದ್ದಂತೆಯೇ, ನಿರ್ದೇಶಕ ಮತ್ತು ಹೀರೋ ಮಧ್ಯೆ ಮಾತುಕತೆಯೆ ನಿಂತು ಹೋಗುವ ಈ ಕಾಲದಲ್ಲಿ, ಪುನಃ ಒಟ್ಟಾಗಿ ಒಂದು ಹೊಸ ಸಿನಿಮಾ ಮಾಡಲು ಅಣಿಯಾಗುವುದು ನಿಜಕ್ಕೂ ಅವರಿಬ್ಬರ ನಡುವಿನ ಬಾಂಡಿಂಗ್ ಮುಖ್ಯ. ಇಲ್ಲಿ ಇಬ್ಬರು ಪರಸ್ಪರ ಇಟ್ಟುಕೊಂಡಿರುವ ನಂಬಿಕೆ ಇದಕ್ಕೆ ಬಲವಾದ ಕಾರಣ.
ಇದು ಕೂಡ ಮತ್ತೊಂದು ದೊಡ್ಡ ಗೆಲುವು ಕೊಡುವ ಸಿನಿಮಾ ಆಗಿ ಹೊರಬರಲಿ ಅನ್ನೋದೇ “ಸಿನಿಲಹರಿ” ಹಾರೈಕೆ.
ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕನ್ನಡದ ಖ್ಯಾತ ನಟ ಸುದೀಪ್ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಈ ಅಪರೂಪದ ಅವಕಾಶಕ್ಕೆ ಸಾಕ್ಷಿಯಾದ ಸುದೀಪ್, ಆ ಸಮಾರಂಭದ ವೇದಿಕೆಯಲ್ಲಿ ಕನ್ಮಡದಲ್ಲೇ ಮಾತು ಆರಂಭಿಸಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ.
ಪಣಜಿಯಲ್ಲಿ ನಡೆಯುತ್ತಿರುವ ಈ ಚಿತ್ರೋತ್ಸವ
ಜ.16ರಿಂದ ಜ.24ರವರೆಗೆ ನಡೆಯುತ್ತಿದೆ.
ಪ್ರತಿಷ್ಠಿತ ‘ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ (IFFI) 51ನೇ ಆವೃತ್ತಿಯು ಜ.16ರಿಂದ ಆರಂಭವಾಗಿದ್ದು, ಉದ್ಘಾಟನೆಗೆ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿರುವುದು ವಿಶೇಷ.
ಈ ಚಿತ್ರೋತ್ಸವದಲ್ಲಿ ಹಲವಾರು ವಿದೇಶಗಳಿಂದ ಸಿನಿಮಾ ಗಣ್ಯರು, ಸಿನಿ ಪ್ರೇಮಿಗಳು ಆಗಮಿಸಿದ್ದರು.
ಆ ಕಾರ್ಯಕ್ರಮದಲ್ಲಿ ಸುದೀಪ್ ಕನ್ನಡ ಮಾತನಾಡುವ ಅಲ್ಲಿ ನೆರೆದಿದ್ದವರ ಮನ ಗೆದ್ದಿದ್ದಾರೆ ಸುದೀಪ್.
‘ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಪರವಾಗಿ ಹಾಗೂ ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ’ ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ಸುದೀಪ್ ಮಾತು ಶುರು ಮಾಡಿ ಭಾಷೆ ಪ್ರೀತಿ ತೋರಿದ್ದಾರೆ.
‘ಸಿನಿಮಾ ಮತ್ತು ಕ್ರೀಡೆ ಎಂಬುದು ನಮ್ಮೆಲ್ಲರನ್ನೂ ಬೆಸೆದಿದೆ. ಆ ಕಾರಣಕ್ಕಾಗಿಯೇ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಸಿನಿಮಾ ಎಂಬುದು ಈ ಬಾರಿ ಎಲ್ಲೆಲ್ಲೂ ಹಬ್ಬಲಿ. ದೇಶ ಸುತ್ತು, ಕೋಶ ಓದು ಎಂಬ ಮಾತನ್ನು ನಾನು ಕೇಳಿದ್ದೇನೆ. ಈ ಎರಡನ್ನೂ ಸಿನಿಮಾ ಒದಗಿಸುತ್ತದೆ. ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ ಸುದೀಪ್.
ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಹೊಸಬರ “ರಮೇಶ್ ಸುರೇಶ್” ಸುದ್ದಿಯಲ್ಲಿದೆ. ಈ ಸುದ್ದಿಗೆ ಕಾರಣ, ಈ ಚಿತ್ರದ ಮೂಲಕ ಬಹುತೇಕ ಹೊಸಬರೇ ಗಾಂಧಿನಗರಕ್ಕೆ ಕಾಲಿಟ್ಟಿರುವುದು ಒಂದಾದರೆ, ರಂಗಭೂಮಿಯ ಗುಬ್ಬಿವೀರಣ್ಣ ಅವರ ಮರಿಮೊಮ್ಮಗ ಈ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿರುವುದು.
“ರಮೇಶ್ ಸುರೇಶ್” ಚಿತ್ರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹೆಸರಘಟ್ಟ ಸುತ್ತಮುತ್ತಲಿರುವ ಕಾಡಿನಲ್ಲಿ ಭರ್ಜರಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರತಂಡ ಚಿತ್ರಕ್ಕೆ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣ ಪೂರೈಸಿದೆ.
ಬಹುತೇಕ ಹೊಸ ಪ್ರತಿಭೆಗಳೇ ತುಬಿರುವ ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಇಬ್ಬರು ನಿರ್ದೇಶಕರಿದ್ದಾರೆ. ಇಬ್ಬರು ನಿರ್ಮಾಪಕರಿದ್ದಾರೆ. ಹೀರೋಗಳಿಗೆ ಒಬ್ಬರೇ ನಾಯಕಿ ಅನ್ನೋದಷ್ಟೇ ವಿಶೇಷ.
ಅಂದಹಾಗೆ, ಈ ಚಿತ್ರಕ್ಕೆ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶ್ ರಾಜ್ ನಾಯಕರು. ಇವರಿಗೆ ಚಂದನಾ ಸೇಗು ನಾಯಕಿ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ನಿರ್ದೇಶಕರು.
ಯಶ್ ರಾಜ್, ಚಂದನಾ, ಬೆನಕ
ಆರ್. ಕೆ. ಟಾಕೀಸ್ ಬ್ಯಾನರ್ ಮೂಲಕ ಕೃಷ್ಣ ಪಿ. ಹಾಗೂ ಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರೆಲ್ಲರಿಗೂ ಇದು ಮೊದಲ ಅನುಭವ. ಸದ್ಯಕ್ಕೆ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಮಾತಿನ ಭಾಗವನ್ನೂ ಬಹುತೇಕ ಮುಗಿಸಿದೆ. ಈ ಚಿತ್ರದ ಹೈಲೈಟ್ ಅಂದರೆ ಸಾಧುಕೋಕಿಲ ಮತ್ತು ತೆಲುಗಿನ ಖ್ಯಾತ ನಟ ಸತ್ಯ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೋಹನ್ ಜುನೇಜಾ ಮತ್ತು ಅನೇಕ ರಂಗಪ್ರತಿಭೆಗಳು ನಟಿಸಿದ್ದಾರೆ.
ಕೃಷ್ಣ, ಪಿ. ನಿರ್ಮಾಪಕರು
“ರಮೇಶ್ ಸುರೇಶ್” ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರದ ಶೀರ್ಷಿಕೆ ನೋಡಿದಾಕ್ಷಣ ಇದೊಂದು ಹಾಸ್ಯಮಯ ಚಿತ್ರ ಎಂಬುದನ್ನು ಸಾರುತ್ತದೆ. ಕಥೆ ಕೂಡ ಹಾಸ್ಯವಾಗಿಯೇ ಸಾಗಲಿದೆ ಎಂಬುದು ನಿರ್ದೇಶಕದ್ವಯರ ಮಾತು. ಚಿತ್ರದಲ್ಲಿ ಬೆನಕ ಹಾಗೂ ಯಶುರಾಜ್ ಸೋಮಾರಿ ಹುಡುಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸವಿಲ್ಲದ ಆಲೆಮಾರಿ ಹುಡುಗರಾಗಿ ಕಾಣಿಸಿಕೊಂಡಿರುವ ಅವರು, ‘ಇಲ್ಲಿ ಕಥೆಯೇ ಹೀರೋ’ ಎನ್ನುತ್ತಾರೆ.
ಮಾಸ್ಟರ್ ರಕ್ಷಿತ್ ಕೃಷ್ಣ
ಹಾಸ್ಯದ ಜೊತೆಗೆ ಎಮೋಶನ್ಸ್ ಕೂಡ ಚಿತ್ರದಲ್ಲಿದೆ. ಸಿನಿಮಾ ಅಪ್ಟಟ ಮನರಂಜನೆಯ ಜೊತೆಗೆ ಸಂದೇಶವನ್ನು ಕೊಡಲಿದೆ ಎಂಬುದು ಚಿತ್ರ ತಂಡದ ಮಾತು. ಇನ್ನು ನಾಯಕರಿಬ್ಬರಿಗೂ ಇದು ಚೊಚ್ಚಲ ಚಿತ್ರ. ಹೊಸಬರನ್ನು ನಂಬಿ ಅವರಿಗೆ ಉತ್ಸಾಹ ತುಂಬಿ ನಿರ್ಮಾಪಕದ್ವಯರಾದ ಕೃಷ್ಣ ಹಾಗೂ ಶಂಕರ್ ಅವರು ಅವಕಾಶ ಕೊಟ್ಟಿದ್ದಾರೆ. ಹೊಸ ಪ್ರತಿಭೆಗಳ ಮೇಲೆ ಭರವಸೆ ಇಟ್ಟು ನಿರ್ದೇಶಕರಾದ ನಾಗರಾಜ್ ಮತ್ತು ರಘರಾಜ್ ಗೌಡ ಕೂಡ ತಮ್ಮ ಕೆಲಸ ಮಾಡಿ ಮುಗಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಪ್ರಮೋದ್ ಮರವಂತೆ ಇತರರು ಹಾಡು ಬರೆದಿದ್ದಾರೆ. ವಿಶ್ವಜಿತ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.
ಈ ಚಿತ್ರದ ಮೂಲಕ ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಬೆನಕ ಚಿತ್ರರಂಗ ಪ್ರವೇಶಿಸಿದ್ದಾರೆ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗ ಸದಾಶಿವ ಅವರ ಪುತ್ರ. ರಂಗಭೂಮಿ ಕುಟುಂಬದ ಹಿನ್ನೆಲೆ ಇರುವ ಬೆನಕ ಗುಬ್ಬಿ ವೀರಣ್ಣ, ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮನ್ಮಥ ವಿಜಯ’,”ರೂಪಾಂತರ’ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಮಾವನ ಮನೆ ರೊಟ್ಟಿ’ ಸೇರಿದಂತೆ ಹಲವು ನಾಟಕಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ ಬೆನಕ ಗುಬ್ಬಿ ವೀರಣ್ಣ, ಈಗ “ರಮೇಶ್ ಸುರೇಶ್” ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದಾರೆ.
ಮತ್ತೊಬ್ಬ ಹೀರೋ ಯಶ್ ರಾಜ್ ಕೂಡ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಸದ್ಯ ತುಮಕೂರಿನಲ್ಲಿ ವಿಜೆಯಾಗಿರುವ ಯಶ್ ರಾಜ್, ಕಾರ್ಯಕ್ರಮಗಳ ಮೂಲಕ ಸಾಕಷ್ಟು ಮಾನವೀಯ ಕೆಲಸಗಳಿಗೂ ಕಾರಣರಾಗಿದ್ದಾರೆ. ಕಲೆಯನ್ನೇ ನಂಬಿರುವ ಯಶ್ ರಾಜ್ ಗಾಂಧಿನಗರದಲ್ಲಿ ಗಟ್ಟಿನೆಲೆ ಕಂಡುಕೊಳ್ಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಒಬ್ಬ ನಟನಿಗೆ ಏನೆಲ್ಲಾ ಅರ್ಹತೆ ಇರಬೇಕೋ ಎಲ್ಲವನ್ನೂ ಕರಗತ ಮಾಡಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ ಯಶ್‌ರಾಜ್.
ಸಾಮಾನ್ಯವಾಗಿ ಹೊಸಬರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಸಿಗೋದು ತುಬಾನೇ ಕಷ್ಟ. “ರಮೇಶ್ ಸುರೇಶ್” ಚಿತ್ರದ ನಿರ್ದೇಶಕರಾದ ನಾಗರಾಜ್ ಹಾಗೂ ರಘುರಾಜ್ ಗೌಡ ಮತ್ತು ಹೀರೋಗಳಾದ ಬೆನಕ ಮತ್ತು ಯಶ್ ರಾಜ್ ಅವರಲ್ಲಿರುವ ಪ್ರತಿಭೆ ಹಾಗೂ ಶ್ರದ್ಧೆ ನೋಡಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕಥಾಹಂದರದಲ್ಲಿರುವ ಗಟ್ಟಿತನ ನೋಡಿ ನಿರ್ಮಾಪಕರಾದ ಕೃಷ್ಣ ಮತ್ತು ಶಂಕರ್ ಅವಕಾಶ ನೀಡಿದ್ದಾರೆ.
ಈಗಾಗಲೇ ಚಿತ್ರದ ಕೆಲ ದೃಶ್ಯ ನೋಡಿ ಹಾಡು ಕೇಳಿರುವ ನಿರ್ಮಾಪಕರಿಗೆ ಕನ್ನಡದಲ್ಲಿ ಹೊಸ ಬಗೆಯ ಕಥೆ ಇರುವ ಚಿತ್ರ ಮಾಡಿರುವ ಖುಷಿ ಇದೆ. ಈಗಾಗಲೇ ಗಾಂಧಿನಗರದಲ್ಲಿ ಕೊಂಚ ಸುದ್ದಿಯಾಗಿರುವ “ರಮೇಶ್ ಸುರೇಶ್” ಚಿತ್ರ ಆದಷ್ಟು ಬೇಗ ರಿಲೀಸ್‌ಗೆ ರೆಡಿಯಾಗುತ್ತಿದೆ. ಇಷ್ಟರಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದೆ.
ಬಹುದಿನಗಳ ನಂತರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮತ್ತೆ ಸಿನಿಮಾ ಕಳೆಯ ರಂಗು ತುಂಬಿಕೊಂಡಿತು. ʼಗಾಜನೂರುʼ ಹೆಸರಿನ ಚಿತ್ರದ ಮುಹೂರ್ತ ಕಾರ್ಯಕ್ರಮ ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾ ರಂಗು ಕಳೆ ಗಟ್ಟುವಂತೆ ಮಾಡಿತು. ಚಿತ್ರೋದ್ಯಮದ ಹಲವು ಗಣ್ಯರು ಈ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದರು. ಅಂದ ಹಾಗೆ , “ಗಾಜನೂರುʼ ಹೊಸಬರ ಸಿನಿಮಾ. ನಿರ್ದೇಶಕ ನಂದಕಿಶೋರ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ವಿಜಯ್ ಇದೇ ಮೊದಲು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಹಾಗೆಯೇ ಕಲಬುರಗಿ ಮೂಲದ ಅವಿನಾಶ್ ಈ ಚಿತ್ರದ ನಿರ್ಮಾಪಕ. ಮೂಲತಃ ಉದ್ಯಮಿಯಾಗಿರುವ ಅವಿನಾಶ್ ಅವರಿಗೆ ಇದು ಚೊಚ್ಚಲ ಸಿನಿಮಾ. ಅವತಾರ್ ಹಾಗೂ ಸೋನಲ್ ಮಾಂತೆರೋ ಈ ಚಿತ್ರದ ನಾಯಕ-ನಾಯಕಿ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದ್ ಕಿಶೋರ್ ಅತಿಥಿಗಳಾಗಿ ಬಂದಿದ್ದರು.
ಧ್ರುವ ಸರ್ಜಾ ಕ್ಲಾಪ್ ಮಾಡಿದರೆ, ನಂದ್ ಕಿಶೋರ್ ಕ್ಯಾಮೆರಾ ಚಾಲನೆ ಮಾಡುವ ಮೂಲಕ ʼಗಾಜನೂರುʼಚಿತ್ರದ ಚಿತ್ರೀಕರಣಕ್ಕೆ ಹಸಿರು ನಿಶಾನೆ ತೋರಿಸಿದರು. ಸದ್ಯಕ್ಕೆ ಮುಹೂರ್ತ ಮುಗಿಸಿಕೊಂಡಿರುವ ಚಿತ್ರ ತಂಡ ಫೆಬ್ರವರಿ ಎರಡನೇ ವಾರದಿಂದ ಚಿತ್ರೀಕರಣ ಶುರುಮಾಡಲಿದೆಯಂತೆ. ಮಂಗಳೂರು, ಬೆಂಗಳೂರು , ಸಕಲೇಶಪುರ, ಕುಂದಾಪುರ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಮಾತಿನ ಭಾಗದ ಚಿತ್ರೀಕರಣಕ್ಕೆ ಪ್ಲಾನ್ ಹಾಕಿಕೊಂಡಿದೆ. ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲಾನ್ ಕೂಡ ಚಿತ್ರ ತಂಡದ್ದು. ಮುಹೂರ್ತದ ನಂತರ ಮಾಧ್ಯಮದ ಮುಂದೆ ಬಂದಿದ್ದ ಚಿತ್ರದ ನಿರ್ದೇಶಕ ವಿಜಯ್, ಚಿತ್ರ ತಂಡವನ್ನು ಪರಿಚಯಿಸುವ ಮೂಲಕ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು.
” ಗಾಜನೂರು ಅಂದಾಕ್ಷಣ ಕನ್ನಡದ ಮೇರು ನಟ ರಾಜ್ ಕುಮಾರ್ ಅವರ ಊರು ನೆನಪಾಗುವುದು ಸಹಜ. ಆದರೆ ಅದಕ್ಕೂ ಈ ಚಿತ್ರಕ್ಕೂ ಸಂಬಂಧ ಇಲ್ಲ. ಬದಲಿಗೆ ಈ ಕತೆ ನಡೆಯುವುದು ಶಿವಮೊಗ್ಗ ಜಿಲ್ಲೆ ಗಾಜನೂರು ಎಂಬಲ್ಲಿ. ಹಾಗಾಗಿಯೇ ಚಿತ್ರಕ್ಕೆ ಗಾಜನೂರು ಅಂತ ಹೆಸರಿಟ್ಟಿದ್ದೇವೆʼ ಅಂತ ಚಿತ್ರದ ಶೀರ್ಷಿಕೆಯ ಬಗೆಗಿನ ಕುತೂಹಲಕ್ಕೆ ವಿವರ ನೀಡಿದರು ನಿರ್ದೇಶಕ ವಿಜಯ್. ಇನ್ನು ಚಿತ್ರದ ಕತೆಯ ಬಗ್ಗೆಯೂ ಅವರು ವಿವರ ಕೊಟ್ಟರು.” ಇದೊಂದು ಥ್ರಿಲ್ಲರ್ ಕಥಾ ಹಂದರ ಕತೆ. ಸಾಮಾನ್ಯವಾಗಿ ಥ್ರಿಲ್ಲರ್ ಅಂದ್ರೆ ಅದೊಂದು ಮರ್ಡರ್ ಮಿಸ್ಟ್ರಿಯೇ ಆಗಿರಬೇಕು ಅಂತ ಅಂದುಕೊಳ್ಳುವುದು ಸಹಜ. ಆದರೆ ಇದು ಅದಕ್ಕೆ ಭಿನ್ನವಾದ ಸಿನಿಮಾ. ಅಲ್ಲಿನ ಪೊಲೀಸ್ ಠಾಣೆಯಲ್ಲಿ ಒಂದು ಮಿಸ್ಸಿಂಗ್ ಕೇಸು ದಾಖಲಾಗುತ್ತದೆ. ಅದರ ಸುತ್ತಮುತ್ತ ಈ ಕಥೆ ಸಾಗುತ್ತದೆʼ ಎನ್ನುವುದು ನಿರ್ದೇಶಕ ವಿಜಯ್ ಮಾತು. ಚಿತ್ರದ ಕಥೆಗೆ ಬರಹಗಾರ ಕೀರ್ತಿ ಸಾಥ್ ನೀಡಿದ್ದಾರೆ.
ಚಿತ್ರದ ನಾಯಕ ನಟ ಅದ್ವೈತ ತಮ್ಮ ಹೆಸರನ್ನು ಈಗ ಅವತಾರ್ ಅಂತ ಬದಲಾಯಿಸಿಕೊಂಡಿದ್ದಾರೆ. ಅದ್ಯಾಕೆ ಎನ್ನುವ ಪ್ರಶ್ನೆಗೆ ಅವರು ಕೊಟ್ಟಿದ್ದು, ಸುಮ್ನೆ ಅಂತ. ಆದರೆ ಚಿತ್ರದ ನಟ-ನಟಿಯರು ಹಾಗೆಲ್ಲ ಸುಮ್ನೆ ಹೆಸರು ಬದಲಾಯಿಸಿಕೊಳ್ಳುತ್ತಾರಾ? ಅವರಿಗೂ ಗೆಲುವು ಬೇಕು. ಹಾಗಾಗಿ ಇಂತಹ ಸರ್ಕಸ್ ನಡೆಯುತ್ತಲೇ ಇರುತ್ತವೆ. ಇನ್ನು ಅದ್ವೈತ ಚಿತ್ರರಂಗಕ್ಕೆ ಹೊಸಬರಲ್ಲ. ಈಗಾಗಲೇ ʼಹ್ಯಾಪಿ ಜರ್ನಿʼ, ʼಕುಮಾರಿ ೨೧ʼ ಸೇರದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಹೀರೋ ಆಗಿ ಇದು ಅವರ ಎರಡನೇ ಚಿತ್ರ. ಹಾಗೆಯೇ ತೆಲುಗಿನಲ್ಲೂ ಒಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಕನ್ನಡದಲ್ಲೀಗ ಅದೃಷ್ಟ ಪರೀಕ್ಷಿಸಿಕೊಳ್ಳಲು ಅವತಾರ್ ಎಂಬುದಾಗಿ ಹೊಸ ಅವತಾರ ತಾಳಿದ್ದಾರೆ. ಇವರಿಗೆ ಇಲ್ಲಿ ಜೋಡಿಯಾಗಿ ʼಬನಾರಸ್ʼಚೆಲುವೆ ಸೋನಲ್ ಮಾಂತೆರೂ ಇದ್ದಾರೆ. ಇದೇ ಮೊದಲು ಚಿತ್ರ ತಂಡ ಅವರ ಹೆಸರು ರಿವೀಲ್ ಮಾಡಿತು. ಹಾಗೆಯೇ ಅವರು ಕೂಡ ಮುಹೂರ್ತಕ್ಕೆ ಹಾಜರಿದ್ದು, ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರದ ಪೋಷಕ ಪಾತ್ರಗಳಲ್ಲಿ ರವಿಶಂಕರ್, ತಬಲ ನಾಣಿ, ಕುರಿ ಪ್ರತಾಪ್, ತರಂಗ ವಿಶ್ವ ದೊಡ್ಡ ತಾರಾಬಳಗವೇ ಇದೆ. ಶ್ರೀಧರ್ ವಿ. ಸಂಭ್ರಮ್, ಕ್ಯಾಮೆರಾ ತನ್ವಿಕ್ ಛಾಯಾಗ್ರಹಣ ಚಿತ್ರಕ್ಕಿದೆ.
ಕಲರ್ಸ್ ಕನ್ನಡದ “ಅನುಬಂಧ ಅವಾರ್ಡ್ಸ್ʼ 2020 ಕಾರ್ಯಕ್ರಮ ಕನ್ನಡ ಕಿರುತೆರೆಯ ಇತಿಹಾಸಕ್ಕೆ ಒಂದು ದಾಖಲೆ. ಕನ್ನಡದ ಅಷ್ಟು ಮನರಂಜನಾ ವಾಹಿನಿಗಳ ಅವಾರ್ಡ್ಸ್ ಕಾರ್ಯಕ್ರಮಗಳಲ್ಲಿ ಇದೊಂದು ವಿಭಿನ್ನ, ವಿಶೇಷ. ಅದಕ್ಕೆ ಕಾರಣವಾಗಿದ್ದು ಕನ್ನಡತಿಯಲ್ಲಿ ಕಂಡ ಕಂದ. ಅದು ಕಿರುತೆರೆಗೆ ಮೂಡಿಸಿತು ಅಂದ .ಕಲರ್ಸ್ ಕನ್ನಡದಲ್ಲೀಗ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ ಹೆಚ್ಚು ಜನಪ್ರಿಯತೆ ಪಡೆದಿದ್ದು ಕನ್ನಡತಿ ಧಾರಾವಾಹಿ. ಕತೆಯ ಆಚೆ, ಇದು ಕನ್ನಡದ ಭಾಷೆಯ ಜತೆಗೆ ಬೆಸೆದುಕೊಂಡ ಭಾವನಾತ್ಮಕ ಸಂಬಂಧವೇ ಅದರ ಯಶಸ್ಸಿನ ಗುಟ್ಟು.
ಶಾಲಾ ಉಪನ್ಯಾಸಕಿಯಾದ ಧಾರಾವಾಹಿಯ ಕಥಾ ನಾಯಕಿ, ತನ್ನ ಬದುಕಿನ ಕತೆ ಹೇಳುವುದರ ಜತೆಗೆ ಕನ್ನಡದ ಮೇಲಿನ ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಾ ಸಾಗುತ್ತಾಳೆ. ತನ್ನ ಪ್ರೀತಿ ವಿದ್ಯಾರ್ಥಿಗಳಿಗೆ ಕನ್ನಡದ ಹೊಸ ಹೊಸ ಪದಗಳನ್ನು ಪರಿಚಯಿಸುತ್ತಾಳೆ. ವೀಕ್ಷಕ ಸಮೂಹದಲ್ಲಿ ಇದು ಕನ್ನಡದ ಜತೆಗಿನ ಭಾವನಾತ್ಮಕ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರೇರಣೆ ನೀಡಿದೆ.ಗಡಿ ಭಾಗದಲ್ಲಂತೂ ಕನ್ನಡತಿ ಧಾರಾವಾಹಿ ಅಂದ್ರೆ ಜನರು ಕನ್ನಡವೇ ಎಂಬಂತೆ ಪ್ರೀತಿಸುತ್ತಾರಂತೆ. ಇದು ಅಲ್ಲಿನ ಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಹುಟ್ಟುವಂತೆ ಮಾಡಿದೆ. ಅದರ ಪ್ರಭಾವ ಈಗ ಅಲ್ಲಿನ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಅಥವಾ ಕನ್ನಡತಿ ಎಂಬುದಾಗಿ ನಾಮಕರಣ ಮಾಡಲು ಸ್ಪೂರ್ತಿ ನೀಡಿದೆ ಎನ್ನುವುದನ್ನು ಅಚ್ಚರಿ ಎನಿಸಿದರೂ ನಂಬಲೇಬೇಕು. ಯಾಕಂದ್ರೆ ಸಾಕ್ಷಿ ಕಣ್ಣೆದುರೇ ಇದೆ. ಅದನ್ನೇ ವೇದಿಕೆಗೆ ತಂದು ತೋರಿಸಿದ್ದು ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ.
ಕಲರ್ಸ್ ಕನ್ನಡದ “ಅನುಬಂಧ ಅವಾರ್ಡ್ಸ್ʼ ೨೦೨೦ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಎರಡು ದಿನ ಕಳೆದಿದೆ. ಭಾನುವಾರ(ಜ.17) ಕ್ಕೆ ಸಮಾರೋಪ ಸಮಾರಂಭ. ಕೊರೋನಾ ಕಾರಣಕ್ಕೆ ಅನೇಕ ನಿರ್ಬಂಧಗಳ ನಡುವೆ ನಡೆಯುತ್ತಿದ್ದರೂ, ಆದರ ತಾರಾ ಮೆರಗಿಗೇನು ಕಮ್ಮಿ ಆಗಿಲ್ಲ. ಕಲರ್ಸ್ ಕನ್ನಡದ ಅಷ್ಟು ಕುಟುಂಬವೇ ಜಮಾಯಿಸಿಕೊಂಡಿದ್ದನ್ನು ನೀವು ನೋಡಿದ್ದೀರಿ. ಎಂದಿನಂತೆ ಈ ವರ್ಷ ಕೂಡ ಅದು ಅನೇಕ ವಿಶೇಷತೆಗಳ ಮೂಲಕ ನಡೆಯುತ್ತಿದೆ. ಬಿಗ್ ಬಾಸ್ ನಿರೂಪಕರಾಗಿದ್ದರೂ , ಇದುವರೆಗೂ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಾರದೆ ಇದ್ದ ನಟ ಕಿಚ್ಚ ಸುದೀಪ್ ಇದೇ ಮೊದಲು ಈ ವೇದಿಕೆಗೆ ಬಂದಿದ್ದಾರೆ. ಹಾಗೆಯೇ ನಾದ ಬ್ರಹ್ಮ ಹಂಸಲೇಕ ಹಾಜಾರಾಗಿದ್ದಾರೆ. ಲವ್ ಮಾಕ್ಟೆಲ್ ಖ್ಯಾತಿಯ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಬಂದಿದ್ದಾರೆ. ಅವರೆಲ್ಲರ ಜತೆಗೆ ಕರ್ಲಸ್ ಕನ್ನಡದ ಬಳಗ ಇದೇ ಅಂದ್ರೆ ಮನರಂಜನೆ ಇರಲ್ವಾ? ಅದಕ್ಕೇನು ಇಲ್ಲಿಕೊರತೆ ಇಲ್ಲ. ಅದರೊಳಗಡೆಯೇ ನಡೆದಿದೆ ನಾಮಕರಣದ ವಿಶೇಷ.
ಶುಕ್ರವಾರ ಪ್ರಸಾರವಾದ ಎಪಿಸೋಡ್ ನಲ್ಲಿ ಇದೊಂದು ಅಚ್ಚರಿ ನಡೆದು ಹೋಯಿತು. ಗಡಿ ಜಿಲ್ಲೆ ಬೆಳಗಾವಿಯ ಅಥಣಿಯಿಂದ ಬಂದಿದ್ದ ಒಂದು ದಂಪತಿ ವೇದಿಕೆ ಮೇಲಿದ್ದರು. ಅವರು ಕನ್ನಡತಿ ಧಾರಾವಾಹಿಯ ಶುದ್ಧ ಅಭಿಮಾನಿಗಳು. ಅವರ ಡಿಮ್ಯಾಂಡ್ ಅಂದ್ರೆ, ತಮ್ಮ ಹಸುಗೂಸಿಗೆ ಇದೇ ವೇದಿಕೆಯಲ್ಲಿ ಕನ್ನಡ ಅಂತ ನಾಮಕರಣ ಮಾಡಬೇಕು ಎನ್ನುವುದು. ನಿಜಕ್ಕೂ ಇದೊಂದು ವಿಶೇಷ ಕಾರ್ಯಕ್ರಮ. ಕನ್ನಡದ ಭಾಷಾ ವಿಚಾರದಲ್ಲಿ ಚಿರಕಾಲ ನೆನಪಾಗಿ ಉಳಿಯುವಂತಹದು.ಆ ಪೋಷಕರ ಇಚ್ಚಾಶಕ್ತಿಯಂತೆ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲೇ ನಾಮಕರಣ ಕಾರ್ಯಕ್ರಮ ಆಯೋಜಿಸಿತ್ತು. ನಾಮಕರಣಕ್ಕೆ ನಾದಬ್ರಹ್ಮ ಹಂಸಲೇಖ ಮುಖ್ಯ ಅತಿಥಿ. ಅವರ ಜತೆಗೆ ಪಂಡಿತರಾದ ಹಿರೇಮಗಳೂರು ಕಣ್ಣನ್. ಪುಟ್ಟ ಮಗುವಿಗೆ ನಾದಬ್ರಹ್ಮ ಹಂಸಲೇಖ ಅವರು ಕನ್ನಡ ಅಂತ ನಾಮಕರಣ ಮಾಡಿದರು. ಭಾವುಕರಾಗಿ ಮಾತನಾಡುತ್ತಾ, ಇದು ನಮ್ಮನ್ನು ಆಳುವವರಿಗೆ ಇದು ಗೊತ್ತಾಗಬೇಕು. ಕನ್ನಡ ಅಂದ್ರೆ ಬರೀ ಮಾತು ಅಲ್ಲ ಬದುಕು ಅಂತ ಅವರಗೆ ತಿಳಿಯಬೇಕು ಅಂತ ಸೂಚ್ಯವಾಗಿ ಚುಚ್ಚಿದರು. ಇದು ಸಾಧ್ಯವಾಗಿದ್ದು ಒಂದು ಧಾರಾವಾಹಿ ಮೂಲಕ. ಕನ್ನಡ ಕಿರುತೆರೆಗೆ ಇದೊಂದು ದಾಖಲೆ. ಹಾಗೆಯೇ ಇದು ಕಲರ್ಸ್ ಕನ್ನಡದ ಹೆಗ್ಗಳಿಕೆ.
ಅವಕಾಶಗಳಿಗೆ ಹುಡುಕಿಕೊಂಡು ಹೋಗುವ ಸಂದರ್ಭ ಬಂದಿಲ್ವಂತೆ ಈ ನಟಿಗೆ…..!
ಗಾನವಿ ಲಕ್ಷ್ಮಣ್, ಕನ್ನಡದ ಕಿರುತೆರೆ ಲೋಕದಲ್ಲಿ ಮನೆಮಾತಾದ ಹೆಸರು. ಟಿ.ಎನ್. ಸೀತಾರಾಂ ನಿರ್ದೇಶನದ “ಮಗಳು ಜಾನಕಿʼ ಧಾರಾವಾಹಿ ನೋಡಿದವರಿಗೆಲ್ಲ ಅಚ್ಚು ಮೆಚ್ಚಿನ ನಟಿ ಇವರು. ನಟಿ ಎನ್ನುವುದಕ್ಕಿಂತ ಮಗಳು ಜಾನಕಿ. ಅದೇ ಜನಪ್ರಿಯತೆಯ ಮೂಲಕ ಅವರೀಗ ಸಿನಿಮಾ ಜಗತ್ತಿಗೂ ಕಾಲಿಟ್ಟಿದ್ದಾರೆ. ರಿಷಬ್ ಶೆಟ್ಟಿ ನಿರ್ಮಾಣ ಹಾಗೂ ಅಭಿನಯದ ʼಹೀರೋʼ ಚಿತ್ರದ ನಾಯಕಿ ಇವರೇ. ಈ ಚಿತ್ರವೀಗ ಚಿತ್ರೀಕರಣ ಮುಗಿಸಿ, ರಿಲೀಸ್ ಗೆ ರೆಡಿ ಆಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಸದ್ದು ಮಾಡಲು ಶುರು ಮಾಡಿದೆ. ಅದರ ಮೊದಲ ಹಂತದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಟ್ರೈಲರ್ ಹೊರ ಬಂದಿದೆ. ಟ್ರೈಲರ್ ಲಾಂಚ್ ಗೂ ಮುನ್ನ ದಿನ ಚಿತ್ರ ತಂಡ ಮಾಧ್ಯಮ ಮುಂದೆ ಹಾಜಾರಾಗಿತ್ತು. ಅಲ್ಲಿ ಚಿತ್ರದ ನಾಯಕಿ, “ಮಗಳು ಜಾನಕಿʼ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್, ಬಣ್ಣದ ಜಗತ್ತಿನ ಬಗೆಗಿನ ತಮ್ಮ ಕಲ್ಪನೆ, ಆನಂತರ ಅಲ್ಲಿಗೆ ಬಂದ ನಂತರದ ಜರ್ನಿ, ಹೀರೋ ಜತೆಗಿನ ಒಡನಾಟ, ಮುಂದಿನ ಪಯಣವೂ ಸೇರಿ ಒಂದಷ್ಟು ಸ್ವಾರಸ್ಯಕರ ಸಂಗತಿ ಹೇಳಿಕೊಂಡರು. ಅವೆಲ್ಲ ಇಲ್ಲಿವೆ. ಒವರ್ ಟು ಗಾನವಿ ಲಕ್ಷ್ಮಣ್…
ದೇವರೇ ಸೃಷ್ಟಿಸಿದ ಹೀರೋ..
” ಕಲಾವಿದರು ಕಲೆಯನ್ನು ಒಂದೊಂದು ದೃಷ್ಟಿಯಲ್ಲಿ ನೋಡ್ತಾರೆ, ಅನುಭವಿಸುತ್ತಾರೆ. ನಾನು ಕೂಡ ಕಲೆಯನ್ನು ನನ್ನದೇ ದೃಷ್ಟಿಯಲ್ಲಿ ನೋಡಿದೆ, ಅನುಭವಿಸಿದೆ. ಅದೊಂದು ಅಧ್ಯಾತ್ಮದ ಬಗೆಯಲ್ಲಿ. ನಾನು ಯಾವಾಗ ಕಲಾ ಲೋಕಕ್ಕೆ ಶರಣಾದೆನೋ ಅವತ್ತಿನಿಂದ ದೇವರು ಒಂದೊಂದು ವೇದಿಕೆಯನ್ನು ನನಗಾಗಿಯೇ ಸೃಷ್ಟಿಸುತ್ತಾ ಬಂದ. ಪ್ರತಿಯೊಂದು ಹೆಜ್ಜೆಯಲ್ಲೂ ಪಾಠ ಕಲಿಯುತ್ತಾ ಬಂದೆ. ಕಲೆಯನ್ನು ಹೇಗೆ ಗೌರವಿಸಬೇಕು, ಇಲ್ಲಿ ಹೇಗಿರಬೇಕು, ಹೇಗಿರಬಾರದು ಅಂತೆಲ್ಲ ಅದು ನನಗೆ ಕಲಿಸಿಕೊಟ್ಟಿದೆ. ಅದೇ ಜರ್ನಿಯಲ್ಲಿ ಮುಂದೇನು ಅಂತ ಯೋಚಿಸುತ್ತಿದ್ದಾ ದೇವರು, ನಂಗೊಂದು ಅದ್ಭುತವಾದ ವೇದಿಕೆ ಸೃಷ್ಟಿ ಮಾಡಿಟ್ಟಿದ್ದ. ಅದೇ “ಹೀರೋʼ ಚಿತ್ರ”
ನನ್ನನ್ನು ನಾನು ಕಂಡುಕೊಂಡೆ…
ಹೀರೋ ಅನ್ನೋದು ಅದ್ಭುತ ಲೋಕ. ನಾನಲ್ಲಿಗೆ ಪ್ರವೇಶಿಸುವ ಹೊತ್ತಿಗೆ ದೇವರು ಅಲ್ಲಿ ೨೩ ಚಂದದ ಸೋಲೋಗಳನ್ನಿಟ್ಟಿದ್ದ. ಅವೆಲ್ಲವೂ ನನ್ನನ್ನು ಅರ್ಥ ಮಾಡಿಕೊಳ್ಳಬಲ್ಲ ಪರಿಶುದ್ದ ಮನಸುಗಳು. ನನ್ನದೇ ಮನೆ ಎನ್ನುವ ವಾತಾವರಣ. ಅದೆಲ್ಲ ನೋಡಿದಾಗ ಮನಸ್ಸು ತುಂಬಿ ಬಂತು. ಇಷ್ಟು ದಿನ ನನ್ನದೇ ಕೆಲಸ. ಇನ್ನವುದೋ ಒತ್ತಡ ಅಂತೆಲ್ಲ ಕಳೆದು ಹೋಗಿದ್ದವಳು, ಒಂದು ಕ್ಷಣ ನನ್ನನ್ನು ನಾನು ಕಂಡುಕೊಳ್ಳುವಂತೆ ಆ ದೇವರೇ ಮಾಡಿದ.ಮಗುವನ್ನು ಕಳೆದುಕೊಂಡ ಒಬ್ಬ ತಾಯಿ, ಮತ್ತೆ ವಾಪಾಸ್ ಮಗು ಸಿಕ್ಕಾಗ ಆಗುವ ಸಂತೋಷ ಇರುತ್ತಾಲ್ವಾ ಅಂತ ಸಂತೋಷ ಕಂಡ ಕ್ಷಣ ಅದು.
ಕಲ್ಪನೆ ಅಲ್ಲ, ಅದು ವಾಸ್ತವ…
ಚಿಕ್ಕ ವಯಸ್ಸಿನಲ್ಲಿ ನಂಗೊಂದು ಅಚ್ಚರಿ ಇತ್ತು. ಟಿವಿ ನೋಡುವಾಗ ಈ ಕಲಾವಿದರೆಲ್ಲ ಹೇಗೆ ತಮ್ಮೆದುರಿನ ವೀಕ್ಷಕರ ಮನಸ್ಸು ತಟ್ಟುವಂತೆ ನಟಿಸುತ್ತಾರೆ? ಅಷ್ಟೊಂದು ಶ್ರದ್ಧೆ ಅವರಿಗೆ ಹೇಗೆ ಬರುತ್ತೆ? ಅವರನ್ನು ತೆರೆ ಮೇಲೆ ತೋರಿಸಲು ಪ್ರಯತ್ನಿಸುವ ತೆರೆಯ ಹಿಂದಿನ ಜನರ ಶ್ರಮ ಹೇಗಿರುತ್ತೆ ? ಅಂತೆಲ್ಲ ಯೋಚಿಸುತ್ತಿದ್ದೆ. ಆ ಬಗ್ಗೆ ನನ್ನದೇ ಒಂದು ಕಲ್ಪನೆ ಕಟ್ಟಿಕೊಂಡಿದ್ದೆ. ಜಸ್ಟ್ ಲೈಕ್, ನಾವೆಲ್ಲ ದೇವಾಲಯಕ್ಕೆ ಹೋಗುವಾಗ ಇರುವ ಶ್ರದ್ಧೆ, ಸೈಲೆನ್ಸ್ ಹೇಗಿರುತ್ತೋ ಹಾಗೆಯೇ ಒಂದು ಸಿನಿಮಾ ಅಥವಾ ಸೀರಿಯಲ್ ಚಿತ್ರೀಕರಣದ ಸೆಟ್ ನಲ್ಲೂ ಇರುತ್ತೆ ಅಂದುಕೊಂಡಿದ್ದೆ. ನಿಜಕ್ಕೂ ಅದು ವಾಸ್ತವವೇ ಎನಿಸಿದ್ದು ಹೀರೋ ಸೆಟ್ ಗೆ ಕಾಲಿಟ್ಟಾಗ. ದೇವರು ನಂಗಲ್ಲಿ ಅದನ್ನೇ ಸೃಷ್ಟಿಸಿದ್ದ, ನಾನು ಕಂಡಿದ್ದು ಕಲ್ಪನೆಯಲ್ಲ, ವಾಸ್ತವವೇ ಅಂತ ನನಗೆ ನಾನೇ ಅಚ್ಚರಿ ಪಟ್ಟೆ.
ಗಿವ್ ಆಂಡ್ ಟೇಕ್ ಇಂಪಾರ್ಟೆಂಟ್…
ಕಲಾವಿದರು ಎಷ್ಟೇ ಅನುಭವಿಗಳಾದರೂ ಒಂದು ಪಾತ್ರಕ್ಕೆ ಜೀವಂತಿಕೆ ಬರೋದು ನಿರ್ದೇಶಕರ ದೃಷ್ಟಿಯಿಂದ. ಹಾಗೆಯೇ ಛಾಯಾಗ್ರಾಹಕರ ಕಣ್ಣಿನಿಂದ. ಯಾಕಂದ್ರೆ ಕಲಾವಿದರಾಗಿ ನಾವು ಕ್ಯಾಮೆರಾ ಮುಂದೆ ನಿಂತಾಗ ನಮ್ಮೆದುರು ಕಾಣೋದು ಇಬ್ಬರೇ. ನಿರ್ದೆಶಕರು ಹಾಗೂ ಛಾಯಾಗ್ರಾಹಕರು . ಒಂದು ಕತೆಗೆ ಅಥವಾ ಪಾತ್ರಕ್ಕೆ ಏನೆಲ್ಲ ಬೇಕು ಅನ್ನೋದು ಅವರಿಗೆ ಗೊತ್ತಿರುತ್ತದೆ. ಅವರ ತುಡಿತ, ಏನರ್ಜಿ ನಮ್ಮೊಳಗೆ ಪಾಸ್ ಆದಾಗಲೇ , ಒಂದೊಳ್ಳೆಯ ಅಭಿನಯ ಬರಲು ಸಾಧ್ಯ. ಹಾಗಾಗಿ ನಿರ್ದೇಶಕರು , ಛಾಯಾಗ್ರಾಹಕರು ಮತ್ತು ಕಲಾವಿದರ ನಡುವೆ ಗಿವ್ ಆಂಡ್ ಟೇಕ್ ತುಂಬಾ ಇಂಪಾರ್ಟೆಂಟ್ . ಬೈ ಲಕ್ , ನಂಗೆ ಈ ತಂಡದಲ್ಲಿ ಅಂತಹ ಕೊಡುಕೊಳ್ಳುವಿಕೆ ಹೇರಳವಾಗಿ ಸಿಕ್ಕಿದೆ.
ಅಂತಹ ಸಂದರ್ಭ ನಂಗಿನ್ನು ಬಂದಿಲ್ಲ...
ಕಲಾಲೋಕಕ್ಕೆ ನನ್ನನ್ನು ನಾನು ಶರಣಾಗಿಸಿಕೊಂಡ ದಿನದಿಂದ ದೇವರೇ ಒಂದೊಂದು ವೇದಿಕೆ ಸೃಷ್ಟಿಸುತ್ತಾ ಬಂದ.’ ಮಗಳು ಜಾನಕಿ’ ನಂತರ ಮುಂದೇನು ಅಂದಾಗ ಹೀರೋ ದಂತಹ ಅದ್ಭುತ ವೇದಿಕೆ ಸಿಗುತ್ತೆ ಅಂತ ನಾನಂದುಕೊಂಡಿರಲಿಲ್ಲ. ಆದರೇ ಅದು ದೇವರ ಸೃಷ್ಟಿ. ಮುಂದೆ ಹೇಗೋ ನಂಗೆ ಗೊತ್ತಿಲ್ಲ. ಆದರೆ ಅವಕಾಶಗಳಿಗೆ ಹುಡುಕಿಕೊಂಡು ಹೋಗುವಂತಹ ಸಂದರ್ಭವನ್ನು ದೇವರು ನಂಗಿನ್ನುಕೊಟ್ಟಿಲ್ಲ. ಅವಕಾಶಗಳಿಗೆ ನಾನು ಕಾಯಬೇಕು ಎನ್ನುವುದಕ್ಕಿಂತ ಅಂತಹ ಅವಕಾಶ ದೇವರೇ ಸೃಷ್ಟಿಸುತ್ತಿದ್ದಾನೆ. ಹಾಗಾಗಿ ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
….. ಇದಿಷ್ಟು’ ಮಗಳು ಜಾನಕಿ’ ಮಾತು. ‘ಹೀರೋ’ ಮೂಲಕ ಇದೇ ಮೊದಲು ಮಾಧ್ಯಮದಮುಂದೆ ಬಂದಿದ್ದ ನಟಿ ಗಾನವಿ ಲಕ್ಣ್ಮಣ್ ಸುದೀರ್ಘವಾಗಿ ಹೀಗೆ ಮಾತನಾಡಿದರು.ಮೊದಲ ಮಾತು ಅಲ್ವಾ, ಸಿನಿಮಾ, ಪಾತ್ರ ಎನ್ನುವುದಕ್ಕಿಂತ ಅಧ್ಯಾತ್ಮದೊಳಗಿನ ಕಲಾ ಸರಸ್ವತಿಯ ಬಗ್ಗೆ ಹೇಳಿಕೊಂಡರು. ಇದೇ ಮಾತುಗಳು ಮುಂದಿನ ಸಲವೂ ಪುನಾರವರ್ತನೆಯಾದರೆ, ಕೇಳುಗರಿಗೂ ಬೋರ್ ಆದೀತು. ಆದರೆ ಟಿ.ಎನ್. ಸೀತಾರಾಂ ಗರಡಿಯಲ್ಲಿ ಪಳಗಿರುವ ಗಾನವಿ ಅವರಿಗೆ ಅದೆಲ್ಲ ಸೆನ್ಸ್ ಇದ್ದೇ ಇದೆ ಎನ್ನುವುದು ಕೂಡ ಅಷ್ಟೇ ಸತ್ಯ.
ಸಿನಿಮಾ ಅನ್ನೋದು ಒಂದು ತಪಸ್ಸು. ಇಲ್ಲಿ ಅದೆಷ್ಟೇ ತಪಸ್ಸು ಮಾಡಿದರೂ ಯಶಸ್ಸು ಅನ್ನೋದು ತುಸು ಕಷ್ಟವೇ. ತಪಸ್ಸಿನ ಜೊತೆ ಇಲ್ಲಿ ಪ್ರತಿಭೆ, ಅದೃಷ್ಟ ಇರಲೇಬೇಕು. ಹಣವಿದ್ದಾಕ್ಷಣ, ಸಾಧಿಸಬಹುದು ಅನ್ನುವುದು ಕೇವಲ ಭ್ರಮೆ. ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ, ಭಕ್ತಿ ಮತ್ತು ಕಲೆಯ ಮೇಲೆ ಅತೀವ ಗೌರವ ಇದ್ದವರಿಗೆ ಮಾತ್ರ ಕಲಾದೇವಿ ಒಲಿಯುತ್ತಾಳೆ. ಬಣ್ಣದ ಲೋಕದಲ್ಲಿ ಮಿಂದೇಳುವುದು ಸುಲಭದ ಮಾತಲ್ಲ. ಕಲಾದೇವಿ ಎಲ್ಲರಿಗೂ ಒಲಿಯೋದಿಲ್ಲ. ಅಪಾರ ಪರಿಶ್ರಮ ಕೂಡ ಬೇಕು. ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ, ಭಕ್ತಿ ಮತ್ತು ಗೌರವ ಇಟ್ಟುಕೊಂಡಿದ್ದರಿಂದಲೇ ಇಂದು ನಟ, ನಿರ್ಮಾಪಕ ಕಮ್ ನಿರ್ದೇಶಕ ಶಶಿಧರ್ ಕೆ.ಎಂ. ಸ್ಯಾಂಡಲ್‌ವುಡ್‌ನಲ್ಲೊಂದು ಛಾಪು ಮೂಡಿಸಲು ಸಾಧ್ಯವಾಗಿದೆ.
ಇಷ್ಟಕ್ಕೂ ಶಶಿಧರ್ ಕೆ.ಎಂ. ಅಂದಾಕ್ಷಣ ಬಹಳಷ್ಟು ಮಂದಿಗೆ ಕೊಂಚ ಗೊಂದಲವಾಗಬಹುದು. ಅದೇ, “ಡಾಟರ್ ಆಫ್ ಪಾರ್ವತಮ್ಮ” ಸಿನಿಮಾದ ನಿರ್ಮಾಪಕ, “ವೀರಂ” ಚಿತ್ರದ ಮೇನ್ ಸ್ಟ್ರೆಂಥ್, “ಶುಗರ್‌ಲೆಸ್” ಚಿತ್ರದ ನಿರ್ದೇಶಕ ಅಂದಾಗ ಮಾತ್ರ, ಶಶಿಧರ್ ಥಟ್ಟನೆ ನೆನಪಾಗುತ್ತಾರೆ. ಹೌದು, ಅದೇ ಶಶಿಧರ್ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ. ಇಷ್ಟಕ್ಕೂ ಶಶಿಧರ್ ಕುರಿತು ಇಲ್ಲೇಕೆ ಇಷ್ಟೊಂದು ಪೀಠಿಕೆ ಅಂದರೆ, ಶಶಿಧರ್ ಇಂಡಸ್ಟ್ರಿಗೆ ಬಂದಿದ್ದು, ತಾನೊಬ್ಬ ಕಲಾವಿದ ಎನಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ. ಆದರೆ, ಅವರು ಕಲಾವಿದನಾಗುವುದರ ಜೊತೆಗೆ ತಾನೊಬ್ಬ ನಿರ್ಮಾಪಕರಾಗಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಾಗಿದೆ.
ರಚಿತಾ, ಪ್ರಜ್ವಲ್- ವೀರಂ
ನಿರ್ಮಾಣ, ನಿರ್ದೇಶನದಲ್ಲೂ ಸೈ
ನಿಜ, ಶಶಿಧರ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಕೇವಲ ಮೂರು ವರ್ಷಗಳಷ್ಟೇ ಕಳೆದಿವೆ. ಅವರು ಇಲ್ಲಿಗೆ ಬಂದಿದ್ದೇ, ತಾನೊಬ್ಬ ಕಲಾವಿದ ಆಗಬೇಕು ಅಂತ. ಈವರೆಗೆ ಅವರು ಸುಮಾರು ಹದಿನೈದು ಚಿತ್ರಗಳಲ್ಲಿ ತರಹೇವಾರಿ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಬೆಳ್ಳಿತೆರೆಯ ಜೊತೆ ಜೊತೆಯಲ್ಲಿ ಕಿರುತೆರೆಯನ್ನೂ ಸ್ಪರ್ಶಿಸಿದ್ದಾರೆ. ಕಿರುತೆರೆಯಲ್ಲೂ ಆರು ಧಾರಾವಾಹಿಗಳಲಿ ಬಣ್ಣ ಹಚ್ಚಿಕೊಂಡಿದ್ದುಂಟು. ಅದರಾಚೆಗೆ ಶಶಿಧರ್ ಧೈರ್ಯ ಮಾಡಿ, ನಿರ್ಮಾಣಕ್ಕೂ ಜೈ ಅಂದರು. ತಮ್ಮ ದಿಶಾ ಎಂಟರ್‌ಟೈನರ್ಸ್ ಬ್ಯಾನರ್‌ನಲ್ಲಿ ಮೊದಲು ಹರಿಪ್ರಿಯಾ ಅಭಿನಯದ “ಡಾಟರ್ ಆಫ್ ಪಾರ್ವತಮ್ಮ” ಸಿನಿಮಾ ನಿರ್ಮಾಣ ಮಾಡಿದರು. ಇವರೊಂದಿಗೆ ಹಲವು ಗೆಳೆಯರು ಕೈ ಜೋಡಿಸಿದರು.
ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಕೂಡ ನಟಿಸಿದ್ದು ವಿಶೇಷ. ಚೊಚ್ಚಲ ನಿರ್ಮಾಣ ಸಿನಿಮಾ ಮೂಲಕ ಶಶಿಧರ್ ಗಾಂಧಿನಗರಿಗರ ಕಣ್ಣಿಗೆ ಬಿದ್ದದ್ದು ನಿಜ. ಅಲ್ಲಿಂದ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟ ಶಶಿಧರ್, ನಿರ್ದೇಶನಕ್ಕೂ ಅಣಿಯಾದರು. “ಶುಗರ್‌ಲೆಸ್” ಎಂಬ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ತಾನೊಬ್ಬ ನಿರ್ದೇಶಕ ಅನ್ನುವುದನ್ನೂ ಸಾಬೀತುಪಡಿಸಿದರು. ಇದರ ಜೊತೆ ಜೊತೆಯಲ್ಲೇ ಅವರು ಪ್ರಜ್ವಲ್ ದೇವರಾಜ್ ಹಾಗೂ ರಚಿತಾರಾಮ್ ಅಭಿನಯದ “ವೀರಂ” ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಅದ್ಧೂರಿ ಬಜೆಟ್ ಚಿತ್ರವಾಗಿದ್ದು, ಸದ್ಯ ಚಿತ್ರೀಕರಣದಲ್ಲಿದೆ.
ಸಿನ್ಮಾ ಪ್ರೀತಿಯೇ ಇದಕ್ಕೆಲ್ಲಾ ಕಾರಣ…
ಒಬ್ಬ ಕಲಾವಿದ ನಿರ್ಮಾಣ ಮಾಡುವುದು ಅಂದರೆ ಅದು ಸುಲಭದ ಮಾತಲ್ಲ. ಇಲ್ಲಿ ಧೈರ್ಯ ಇರಬೇಕು, ಜೊತೆಗೆ ನಾನು ಮಾಡಬಲ್ಲೆ ಎಂಬ ಭರವಸೆ ಹೊಂದಿರಬೇಕು. ಇವೆರೆಡು ಇದ್ದುದರಿಂದಲೇ ಶಶಿಧರ್ ಇಂದು ಎರಡು ಸಿನಿಮಾ ನಿರ್ಮಾಣ ಮಾಡಿ, ಒಂದು ಚಿತ್ರ ನಿರ್ದೇಶನ ಮಾಡಿರೋದು. ಕನ್ನಡ ಸಿನಿಮಾರಂಗ ಈಗ ಇನ್ನಷ್ಟು ಶೈನ್ ಆಗುತ್ತಿದೆ. ಕೊರೊನಾ ಸಮಯದಲ್ಲೂ ಅದೇ ಧೈರ್ಯ ಇಟ್ಟುಕೊಂಡು ನಿರ್ಮಾಣ ಮಾಡುವುದೆಂದರೆ ನಿಜಕ್ಕೂ ಅದು ಸಿನಿಮಾ ಮೇಲಿರುವ ಕಾಳಜಿ, ಪ್ರೀತಿಯನ್ನು ಎತ್ತಿತೋರಿಸುತ್ತದೆ. ಶಶಿಧರ್ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಇದನ್ನೆಲ್ಲಾ ಎಷ್ಟೇ ಕಷ್ಟ ಬಂದರೂ ಮಾಡಲೇಬೇಕು ಎನ್ನುವಷ್ಟರ ಮಟ್ಟಿಗೆ ಸಜ್ಜಾಗಿ, ಪ್ರೊಫೆಷನಲ್ ಆಗಿಯೇ ಮಾಡುತ್ತಿದ್ದಾರೆ.
ಒಳ್ಳೇ ಸಿನ್ಮಾ ಕೊಡುವ ಗುರಿ
ತಮ್ಮ ಸಿನಿ ಜರ್ನಿ ಕುರಿತು ಹೇಳುವ ಶಶೀಧರ್, “ನಾನು ಇಲ್ಲಿಗೆ ಬಂದದ್ದು ಆಕಸ್ಮಿಕ. ನಟನಾಗಬೇಕು ಅಂತ ಬಂದೆ. ನಿರ್ಮಾಪಕನಾದೆ, ನಿರ್ದೇಶಕನೂ ಆಗಿದ್ದೇನೆ. ಅದರಲ್ಲೂ ನಾನು ದೊಡ್ಡ ನಿರ್ಮಾಪಕ ಆಗಬೇಕು ಅಂತಾಗಲಿ, ನಿರ್ದೇಶಕ ಎನಿಸಿಕೊಳ್ಳಬೇಕು ಅಂತಾಗಲಿ ಇಲ್ಲ. ಕನ್ನಡಕ್ಕೆ ಸದಭಿರುಚಿಯ ಚಿತ್ರಗಳನ್ನು ಕೊಡಬೇಕು. ಕನ್ನಡ ಚಿತ್ರರಂಗಕ್ಕೆ ನಮ್ಮ ದಿಶಾ ಎಂಟರ್‌ಟೈನರ್ಸ್ ಬ್ಯಾನರ್ ಒಳ್ಳೆಯ ಕೊಡುಗೆ ಕೊಡಬೇಕು ಅನ್ನುವುದಷ್ಟೇ ನನ್ನ ಉದ್ದೇಶ. ಆ ನಿಟ್ಟಿನಲ್ಲಿ ಮೊದಲು ಮಹಿಳಾ ಪ್ರಧಾನವುಳ್ಳ “ಡಾಟರ್ ಆಫ್ ಪಾರ್ವತಮ್ಮ” ಸಿನಿಮಾ ಮಾಡಿದೆ. ಆ ನಂತರ ಸಾಮಾಜಿಕ ಕಳಕಳಿ ಇರುವ, ಒಳ್ಳೆಯ ಸಂದೇಶ ಸಾರುವ “ಶುಗರ್ಲೆಸ್” ಸಿನಿಮಾ ನಿರ್ದೇಶಿಸಿದೆ. ಈಗ “ವೀರಂ” ಎಂಬ ಪಕ್ಕಾ ಮಾಸ್ ಚಿತ್ರ ಮಾಡುತ್ತಿದ್ದೇನೆ.
ಇಷ್ಟೆಲ್ಲಾ ಸಾಧ್ಯವಾಗಿರೋದು, ಸಿನಿಮಾ ಮೇಲಿರುವ ಪ್ರೀತಿಗಾಗಿ. “ವೀರಂ” ದೊಡ್ಡ ಸ್ಕೇಲ್‌ನಲ್ಲಿ ತಯಾರಾಗುತ್ತಿದೆ. ದಿಶಾ ಎಂಟರ್‌ಟೈನರ್ಸ್ ಬ್ಯಾನರ್ ಮೂಲಕ ಯಾವುದೇ ಚಿತ್ರ ಹೊರಬಂದರೂ ಗುಣಮಟ್ಟದಲ್ಲಿ ರಾಜಿ ಆಗುವುದಿಲ್ಲ. ಒಳ್ಳೆಯ ಸಿನಿಮಾಗಳೇ ಮೂಡಿಬರಲಿವೆ. ಸದ್ಯಕ್ಕೆ “ಶುಗರ್‌ಲೆಸ್” ಮೇಲೆ ಅತಿಯಾದ ಭರವಸೆ ಇದೆ. ನಾನು ನಿರ್ದೇಶನ ಮಾಡಿದ್ದೇನೆ ಎಂಬ ಕಾರಣಕ್ಕೆ ಅಲ್ಲ. ಅದೊಂದು ಒಳ್ಳೆಯ ಕಂಟೆಂಟ್ ಇರುವ ಚಿತ್ರ. ಈ ಸಿನಿಮಾವನ್ನು ನಾನು ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದೇನೆ. ಈ ಮೂಲಕ ಡಯಾಬಿಟಿಸ್ ಕುರಿತ ಕಥೆ ಹೇಳಿದ್ದೇನೆ.
ಪೃಥ್ವಿ ಅಂಬರ್ – ಶುಗರ್‌ಲೆಸ್
ಕಥೆ ಜೊತೆ ಒಂದು ಬ್ಲಾಕ್ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಮುಂದಾಗಿದ್ದೇನೆ. ಇಂದು ಡಯಾಬಿಟಿಕ್ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ ಎಂಬ ವಿಷಯ ಇಲ್ಲಿ ಹೈಲೈಟ್”. ಯಾವ ಭಾಷೆಯಲ್ಲೂ ಈ ರೀತಿಯ ಕಂಟೆಂಟ್ ಇರದ ಕಾರಣ, ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದೇನೆ” ಎನ್ನುತ್ತಾರೆ ಶಶಿಧರ್.
ಸದ್ಯಕ್ಕೆ ಶಶಿಧರ್ ಅವರೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಸ್ಟಾರ್ ಒಬ್ಬರಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದಾಗಲೇ ಆ ಸ್ಟಾರ್ ನಟರಿಗೆ ಅಡ್ವಾನ್ಸ್ ಕೂಡ ಕೊಟ್ಟಿದ್ದಾರಂತೆ. “ವೀರಂ” ಚಿತ್ರ ಮುಕ್ತಾಯಗೊಂಡ ನಂತರ ಆ ಸ್ಟಾರ್ ನಟರ ಜೊತೆಗಿನ ಚಿತ್ರವನ್ನು ಅನೌನ್ಸ್ ಮಾಡುವ ಉದ್ದೇಶ ಶಶಿಧರ್ ಅವರಿಗಿದೆ. ಇನ್ನೊಂದು ಖುಷಿಯ ವಿಷಯವೆಂದರೆ, ಅವರ ನಿರ್ಮಾಣದ “ವೀರಂ” ಚಿತ್ರಕ್ಕೆ ವಾಹಿನಿಯೊಂದರಿಂದ ಸ್ಯಾಟಲೆಟ್ ಬೇಡಿಕೆ ಬಂದಿದ್ದು, ಆ ಕುರಿತಂತೆ ಮಾತುಕತೆ ನಡೆಯುತ್ತಿದೆಯಂತೆ.
ಕನ್ನಡ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ” ಕೆಜಿಎಫ್ 2 ‘ ಚಿತ್ರದ ಟೀಸರ್ ಜಾಗತಿಕ ಮಟ್ಟದಲ್ಲೇ ದೊಡ್ಡ ಹವಾ ಸೃಷ್ಟಿಸುತ್ತಿದೆ. ಟೀಸರ್ ಲಾಂಚ್ ಇಲ್ಲಿಗೆ ಒಂದು ವಾರ ಕಳೆದಿದೆ. ಈ ಹೊತ್ತಿಗೆ ಸೋಷಲ್ ಮೀಡಿಯಾದಲ್ಲಿ ಟೀಸರ್ ವೀಕ್ಷಿಸಿದವರ ಸಂಖ್ಯೆ 15 ಕೋಟಿ ಗೂ ಹೆಚ್ಚಿದೆ. ಅತೀ ಕಡಿಮೆ ಅವದಿಯಲ್ಲಿ ಇಷ್ಟು ಪ್ರಮಾಣದಲ್ಲಿ ವೀಕ್ಷಣೆ ಮಾಡಿದ ದಾಖಲೆ ಯಾವುದೇ ಚಿತ್ರಕ್ಕಿಲ್ಲ. ಅದೀಗ ಕೆಜಿಎಫ್ 2 ಚಿತ್ರಕ್ಕೆ ದಕ್ಕಿದೆ. ಈಗಾಗಲೇ ಇದ್ದ ಹಲವು ದಾಖಲೆಗಳನ್ನು ಅದು ಬ್ರೇಕ್ ಮಾಡಿದ್ದು, ಚಿತ್ರ ರಂಗದ ಗಣ್ಯರಿಂದ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಶುಕ್ರವಾರ ʼಕೆಜಿಎಫ್ ೨ʼ ಚಿತ್ರದ ಟೀಸರ್ ಮೆಚ್ಚಿಕೊಂಡು ಭಾರತೀಯ ಚಿತ್ರ ರಂಗ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಪಡೆದ ರಾಮ್ ಗೋಪಾಲ್ ವರ್ಮ್ ಕೂಡ ಟ್ವಿಟ್ ಮಾಡಿದ್ದಾರೆ.
ವರ್ಮ ಟ್ವಿಟ್ ಮಾಡಿರುವ ರೀತಿಯೇ ವಿಚಿತ್ರವಾಗಿದೆ. ಯಾರನ್ನು ಹೊಗಳುವ ನೆಪದಲ್ಲಿ ಇನ್ನಾರನ್ನೋ ತೆಗಳಿದರೂ ಎನ್ನುವ ಹಾಗೆ ಆರ್‌ಜಿವಿ ಟ್ವಿಟ್ ಮಾಡಿದ್ದಾರೆ. ” ಬಾಹುಬಲಿ 2 ‘ ಚಿತ್ರದ ಟ್ರೈಲರ್ 11 ಕೋಟಿ ವೀಕ್ಷಣೆ ರೀಚ್ ಆಗುವುದಕ್ಕೆ ಮೂರು ವರ್ಷ ತೆಗೆದುಕೊಂಡಿತು. ಆರ್ ಆರ್ ಆರ್ ಚಿತ್ರದ ಟೀಸರ್ 3.5 ಕೋಟಿ ವೀಕ್ಷಣೆ ಪಡೆಯುವುದಕ್ಕೆ ಮೂರು ತಿಂಗಳು ಬೇಕಾಯಿತು. ಆದರೆ ‘ಕೆಜಿಎಫ್ 2 ‘ ಚಿತ್ರದ ಟೀಸರ್ ಮೂರು ದಿವಸದಲ್ಲಿ 14 ಕೋಟಿ ವೀಕ್ಷಣೆ ಪಡೆದಿದೆ. ಎಲ್ಲಾ ಕನ್ನಡಿಗರ ಪರವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇತರೆ ಭಾಷೆಯ ಚಿತ್ರರಂಗಕ್ಕೆ ಕೊಟ್ಟ ಸ್ಟಮಕ್ ಪಂಚ್ ಇದುʼ ಅಂತ ವರ್ಮ ಟ್ವಿಟ್ ಮಾಡಿದ್ದಾರೆ.