ಮಗಳು ಜಾನಕಿಗೆ ದೇವರೇ ಸೃಷ್ಟಿಸಿದ ಹೀರೋ ಈತ !!

ಅವಕಾಶಗಳಿಗೆ ಹುಡುಕಿಕೊಂಡು ಹೋಗುವ ಸಂದರ್ಭ ಬಂದಿಲ್ವಂತೆ ಈ ನಟಿಗೆ…..!

ಗಾನವಿ ಲಕ್ಷ್ಮಣ್‌, ಕನ್ನಡದ ಕಿರುತೆರೆ ಲೋಕದಲ್ಲಿ ಮನೆಮಾತಾದ ಹೆಸರು. ಟಿ.ಎನ್. ಸೀತಾರಾಂ ನಿರ್ದೇಶನದ “ಮಗಳು ಜಾನಕಿʼ ಧಾರಾವಾಹಿ ನೋಡಿದವರಿಗೆಲ್ಲ ಅಚ್ಚು ಮೆಚ್ಚಿನ ನಟಿ ಇವರು. ನಟಿ ಎನ್ನುವುದಕ್ಕಿಂತ ಮಗಳು ಜಾನಕಿ. ಅದೇ ಜನಪ್ರಿಯತೆಯ ಮೂಲಕ ಅವರೀಗ ಸಿನಿಮಾ ಜಗತ್ತಿಗೂ ಕಾಲಿಟ್ಟಿದ್ದಾರೆ. ರಿಷಬ್‌ ಶೆಟ್ಟಿ ನಿರ್ಮಾಣ ಹಾಗೂ ಅಭಿನಯದ ʼಹೀರೋʼ ಚಿತ್ರದ ನಾಯಕಿ ಇವರೇ. ಈ ಚಿತ್ರವೀಗ ಚಿತ್ರೀಕರಣ ಮುಗಿಸಿ, ರಿಲೀಸ್‌ ಗೆ ರೆಡಿ ಆಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಸದ್ದು ಮಾಡಲು ಶುರು ಮಾಡಿದೆ. ಅದರ ಮೊದಲ ಹಂತದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಟ್ರೈಲರ್‌ ಹೊರ ಬಂದಿದೆ. ಟ್ರೈಲರ್‌ ಲಾಂಚ್‌ ಗೂ ಮುನ್ನ ದಿನ ಚಿತ್ರ ತಂಡ ಮಾಧ್ಯಮ ಮುಂದೆ ಹಾಜಾರಾಗಿತ್ತು. ಅಲ್ಲಿ ಚಿತ್ರದ ನಾಯಕಿ, “ಮಗಳು ಜಾನಕಿʼ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್‌, ಬಣ್ಣದ ಜಗತ್ತಿನ ಬಗೆಗಿನ ತಮ್ಮ ಕಲ್ಪನೆ, ಆನಂತರ ಅಲ್ಲಿಗೆ ಬಂದ ನಂತರದ ಜರ್ನಿ, ಹೀರೋ ಜತೆಗಿನ ಒಡನಾಟ, ಮುಂದಿನ ಪಯಣವೂ ಸೇರಿ ಒಂದಷ್ಟು ಸ್ವಾರಸ್ಯಕರ ಸಂಗತಿ ಹೇಳಿಕೊಂಡರು. ಅವೆಲ್ಲ ಇಲ್ಲಿವೆ. ಒವರ್‌ ಟು ಗಾನವಿ ಲಕ್ಷ್ಮಣ್…

ದೇವರೇ ಸೃಷ್ಟಿಸಿದ ಹೀರೋ..

” ಕಲಾವಿದರು ಕಲೆಯನ್ನು ಒಂದೊಂದು ದೃಷ್ಟಿಯಲ್ಲಿ ನೋಡ್ತಾರೆ, ಅನುಭವಿಸುತ್ತಾರೆ. ನಾನು ಕೂಡ ಕಲೆಯನ್ನು ನನ್ನದೇ ದೃಷ್ಟಿಯಲ್ಲಿ ನೋಡಿದೆ, ಅನುಭವಿಸಿದೆ. ಅದೊಂದು ಅಧ್ಯಾತ್ಮದ ಬಗೆಯಲ್ಲಿ. ನಾನು ಯಾವಾಗ ಕಲಾ ಲೋಕಕ್ಕೆ ಶರಣಾದೆನೋ ಅವತ್ತಿನಿಂದ ದೇವರು ಒಂದೊಂದು ವೇದಿಕೆಯನ್ನು ನನಗಾಗಿಯೇ ಸೃಷ್ಟಿಸುತ್ತಾ ಬಂದ. ಪ್ರತಿಯೊಂದು ಹೆಜ್ಜೆಯಲ್ಲೂ ಪಾಠ ಕಲಿಯುತ್ತಾ ಬಂದೆ. ಕಲೆಯನ್ನು ಹೇಗೆ ಗೌರವಿಸಬೇಕು, ಇಲ್ಲಿ ಹೇಗಿರಬೇಕು, ಹೇಗಿರಬಾರದು ಅಂತೆಲ್ಲ ಅದು ನನಗೆ ಕಲಿಸಿಕೊಟ್ಟಿದೆ. ಅದೇ ಜರ್ನಿಯಲ್ಲಿ ಮುಂದೇನು ಅಂತ ಯೋಚಿಸುತ್ತಿದ್ದಾ ದೇವರು, ನಂಗೊಂದು ಅದ್ಭುತವಾದ ವೇದಿಕೆ ಸೃಷ್ಟಿ ಮಾಡಿಟ್ಟಿದ್ದ. ಅದೇ “ಹೀರೋʼ ಚಿತ್ರ”

ನನ್ನನ್ನು ನಾನು ಕಂಡುಕೊಂಡೆ…

ಹೀರೋ ಅನ್ನೋದು ಅದ್ಭುತ ಲೋಕ. ನಾನಲ್ಲಿಗೆ ಪ್ರವೇಶಿಸುವ ಹೊತ್ತಿಗೆ ದೇವರು ಅಲ್ಲಿ ೨೩ ಚಂದದ ಸೋಲೋಗಳನ್ನಿಟ್ಟಿದ್ದ. ಅವೆಲ್ಲವೂ ನನ್ನನ್ನು ಅರ್ಥ ಮಾಡಿಕೊಳ್ಳಬಲ್ಲ ಪರಿಶುದ್ದ ಮನಸುಗಳು. ನನ್ನದೇ ಮನೆ ಎನ್ನುವ ವಾತಾವರಣ. ಅದೆಲ್ಲ ನೋಡಿದಾಗ ಮನಸ್ಸು ತುಂಬಿ ಬಂತು. ಇಷ್ಟು ದಿನ ನನ್ನದೇ ಕೆಲಸ. ಇನ್ನವುದೋ ಒತ್ತಡ ಅಂತೆಲ್ಲ ಕಳೆದು ಹೋಗಿದ್ದವಳು, ಒಂದು ಕ್ಷಣ ನನ್ನನ್ನು ನಾನು ಕಂಡುಕೊಳ್ಳುವಂತೆ ಆ ದೇವರೇ ಮಾಡಿದ.ಮಗುವನ್ನು ಕಳೆದುಕೊಂಡ ಒಬ್ಬ ತಾಯಿ, ಮತ್ತೆ ವಾಪಾಸ್ ಮಗು ಸಿಕ್ಕಾಗ ಆಗುವ ಸಂತೋಷ ಇರುತ್ತಾಲ್ವಾ ಅಂತ ಸಂತೋಷ ಕಂಡ ಕ್ಷಣ ಅದು‌.

ಕಲ್ಪನೆ‌ ಅಲ್ಲ, ಅದು ವಾಸ್ತವ…

ಚಿಕ್ಕ ವಯಸ್ಸಿನಲ್ಲಿ ನಂಗೊಂದು ಅಚ್ಚರಿ ಇತ್ತು. ಟಿವಿ ನೋಡುವಾಗ ಈ ಕಲಾವಿದರೆಲ್ಲ ಹೇಗೆ ತಮ್ಮೆದುರಿನ ವೀಕ್ಷಕರ ಮನಸ್ಸು ತಟ್ಟುವಂತೆ ನಟಿಸುತ್ತಾರೆ? ಅಷ್ಟೊಂದು ಶ್ರದ್ಧೆ ಅವರಿಗೆ ಹೇಗೆ ಬರುತ್ತೆ? ಅವರನ್ನು ತೆರೆ ಮೇಲೆ ತೋರಿಸಲು ಪ್ರಯತ್ನಿಸುವ ತೆರೆಯ ಹಿಂದಿನ ಜನರ ಶ್ರಮ ಹೇಗಿರುತ್ತೆ ? ಅಂತೆಲ್ಲ ಯೋಚಿಸುತ್ತಿದ್ದೆ. ಆ ಬಗ್ಗೆ ನನ್ನದೇ ಒಂದು ಕಲ್ಪನೆ ಕಟ್ಟಿಕೊಂಡಿದ್ದೆ. ಜಸ್ಟ್ ಲೈಕ್, ನಾವೆಲ್ಲ ದೇವಾಲಯಕ್ಕೆ ಹೋಗುವಾಗ ಇರುವ ಶ್ರದ್ಧೆ, ಸೈಲೆನ್ಸ್ ಹೇಗಿರುತ್ತೋ ಹಾಗೆಯೇ ಒಂದು ಸಿನಿಮಾ ಅಥವಾ ಸೀರಿಯಲ್ ಚಿತ್ರೀಕರಣದ ಸೆಟ್ ನಲ್ಲೂ ಇರುತ್ತೆ ಅಂದುಕೊಂಡಿದ್ದೆ. ನಿಜಕ್ಕೂ ಅದು ವಾಸ್ತವವೇ ಎನಿಸಿದ್ದು ಹೀರೋ ಸೆಟ್ ಗೆ ಕಾಲಿಟ್ಟಾಗ. ದೇವರು ನಂಗಲ್ಲಿ ಅದನ್ನೇ ಸೃಷ್ಟಿಸಿದ್ದ, ನಾನು ಕಂಡಿದ್ದು ಕಲ್ಪನೆಯಲ್ಲ, ವಾಸ್ತವವೇ ಅಂತ ನನಗೆ ನಾನೇ ಅಚ್ಚರಿ ಪಟ್ಟೆ.

ಗಿವ್‌ ಆಂಡ್‌ ಟೇಕ್‌ ಇಂಪಾರ್ಟೆಂಟ್…

ಕಲಾವಿದರು ಎಷ್ಟೇ ಅನುಭವಿಗಳಾದರೂ ಒಂದು ಪಾತ್ರಕ್ಕೆ ಜೀವಂತಿಕೆ‌ ಬರೋದು‌‌ ನಿರ್ದೇಶಕರ ದೃಷ್ಟಿಯಿಂದ. ‌ಹಾಗೆಯೇ ಛಾಯಾಗ್ರಾಹಕರ ಕಣ್ಣಿನಿಂದ‌. ಯಾಕಂದ್ರೆ ಕಲಾವಿದರಾಗಿ ನಾವು ಕ್ಯಾಮೆರಾ ಮುಂದೆ ನಿಂತಾಗ ನಮ್ಮೆದುರು ಕಾಣೋದು ಇಬ್ಬರೇ. ನಿರ್ದೆಶಕರು ಹಾಗೂ ಛಾಯಾಗ್ರಾಹಕರು‌‌ . ಒಂದು ಕತೆಗೆ ಅಥವಾ ಪಾತ್ರಕ್ಕೆ ಏನೆಲ್ಲ ಬೇಕು ಅನ್ನೋದು ಅವರಿಗೆ ಗೊತ್ತಿರುತ್ತದೆ. ಅವರ ತುಡಿತ, ಏನರ್ಜಿ ನಮ್ಮೊಳಗೆ ಪಾಸ್ ಆದಾಗಲೇ , ಒಂದೊಳ್ಳೆಯ ಅಭಿನಯ ಬರಲು ಸಾಧ್ಯ. ಹಾಗಾಗಿ ನಿರ್ದೇಶಕರು , ಛಾಯಾಗ್ರಾಹಕರು ಮತ್ತು ಕಲಾವಿದರ ನಡುವೆ ಗಿವ್ ಆಂಡ್ ಟೇಕ್ ತುಂಬಾ ಇಂಪಾರ್ಟೆಂಟ್ . ಬೈ ಲಕ್ , ನಂಗೆ ಈ ತಂಡದಲ್ಲಿ ಅಂತಹ
ಕೊಡುಕೊಳ್ಳುವಿಕೆ ಹೇರಳವಾಗಿ ಸಿಕ್ಕಿದೆ.

ಅಂತಹ‌ ಸಂದರ್ಭ ನಂಗಿನ್ನು ಬಂದಿಲ್ಲ.‌..‌

ಕಲಾಲೋಕಕ್ಕೆ ನನ್ನನ್ನು ನಾನು ಶರಣಾಗಿಸಿಕೊಂಡ ದಿನದಿಂದ ದೇವರೇ ಒಂದೊಂದು ವೇದಿಕೆ ಸೃಷ್ಟಿಸುತ್ತಾ ಬಂದ.’ ಮಗಳು ಜಾನಕಿ‌’ ನಂತರ ಮುಂದೇನು ಅಂದಾಗ ಹೀರೋ ದಂತಹ ಅದ್ಭುತ ವೇದಿಕೆ ಸಿಗುತ್ತೆ ಅಂತ ನಾನಂದುಕೊಂಡಿರಲಿಲ್ಲ‌. ಆದರೇ ಅದು ದೇವರ ಸೃಷ್ಟಿ. ಮುಂದೆ ಹೇಗೋ ನಂಗೆ‌ ಗೊತ್ತಿಲ್ಲ. ಆದರೆ ಅವಕಾಶಗಳಿಗೆ ಹುಡುಕಿಕೊಂಡು ಹೋಗುವಂತಹ ಸಂದರ್ಭವನ್ನು ದೇವರು ನಂಗಿನ್ನು‌ಕೊಟ್ಟಿಲ್ಲ. ಅವಕಾಶಗಳಿಗೆ ನಾನು‌ ಕಾಯಬೇಕು ಎನ್ನುವುದಕ್ಕಿಂತ ಅಂತಹ ಅವಕಾಶ ದೇವರೇ ಸೃಷ್ಟಿಸುತ್ತಿದ್ದಾನೆ. ಹಾಗಾಗಿ ನಾನು ಆ ಬಗ್ಗೆ‌ ತಲೆಕೆಡಿಸಿಕೊಳ್ಳುವುದಿಲ್ಲ.

….. ಇದಿಷ್ಟು‌’ ಮಗಳು ಜಾನಕಿ‌’ ಮಾತು. ‘ಹೀರೋ’ ಮೂಲಕ ಇದೇ ಮೊದಲು ಮಾಧ್ಯಮದ‌ಮುಂದೆ ಬಂದಿದ್ದ ನಟಿ ಗಾನವಿ ಲಕ್ಣ್ಮಣ್ ಸುದೀರ್ಘವಾಗಿ ಹೀಗೆ ಮಾತನಾಡಿದರು.ಮೊದಲ ಮಾತು‌ ಅಲ್ವಾ, ಸಿನಿಮಾ, ಪಾತ್ರ ಎನ್ನುವುದಕ್ಕಿಂತ ಅಧ್ಯಾತ್ಮದೊಳಗಿನ ಕಲಾ ಸರಸ್ವತಿಯ ಬಗ್ಗೆ ಹೇಳಿಕೊಂಡರು. ಇದೇ ಮಾತುಗಳು‌ ಮುಂದಿನ ಸಲವೂ ಪುನಾರವರ್ತನೆಯಾದರೆ, ಕೇಳುಗರಿಗೂ ಬೋರ್ ಆದೀತು. ಆದರೆ ಟಿ.ಎನ್. ಸೀತಾರಾಂ ಗರಡಿಯಲ್ಲಿ ಪಳಗಿರುವ ಗಾನವಿ ಅವರಿಗೆ ಅದೆಲ್ಲ ಸೆನ್ಸ್ ಇದ್ದೇ ಇದೆ ಎನ್ನುವುದು ಕೂಡ ಅಷ್ಟೇ ಸತ್ಯ.

Related Posts

error: Content is protected !!