ಶಶಿ ಕಣ್ಣಲ್ಲಿ ಸಿನಿಮಾ ಬೆಳಕು – ನಟಿಸಲು ಬಂದು ನಿರ್ಮಾಣ, ನಿರ್ದೇಶನಕ್ಕೂ ಇಳಿದ ಕನಸುಗಾರ

ಗುಣಮಟ್ಟ-ಸದಭಿರುಚಿಯ ಚಿತ್ರ ಕೊಡೋದೇ ನನ್ನ ಗುರಿ

ಶಶಿಧರ್‌, ನಿರ್ಮಾಪಕ, ನಿರ್ದೇಶಕ

ಸಿನಿಮಾ ಅನ್ನೋದು ಒಂದು ತಪಸ್ಸು. ಇಲ್ಲಿ ಅದೆಷ್ಟೇ ತಪಸ್ಸು ಮಾಡಿದರೂ ಯಶಸ್ಸು ಅನ್ನೋದು ತುಸು ಕಷ್ಟವೇ. ತಪಸ್ಸಿನ ಜೊತೆ ಇಲ್ಲಿ ಪ್ರತಿಭೆ, ಅದೃಷ್ಟ ಇರಲೇಬೇಕು. ಹಣವಿದ್ದಾಕ್ಷಣ, ಸಾಧಿಸಬಹುದು ಅನ್ನುವುದು ಕೇವಲ ಭ್ರಮೆ. ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ, ಭಕ್ತಿ ಮತ್ತು ಕಲೆಯ ಮೇಲೆ ಅತೀವ ಗೌರವ ಇದ್ದವರಿಗೆ ಮಾತ್ರ ಕಲಾದೇವಿ ಒಲಿಯುತ್ತಾಳೆ. ಬಣ್ಣದ ಲೋಕದಲ್ಲಿ ಮಿಂದೇಳುವುದು ಸುಲಭದ ಮಾತಲ್ಲ. ಕಲಾದೇವಿ ಎಲ್ಲರಿಗೂ ಒಲಿಯೋದಿಲ್ಲ. ಅಪಾರ ಪರಿಶ್ರಮ ಕೂಡ ಬೇಕು. ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ, ಭಕ್ತಿ ಮತ್ತು ಗೌರವ ಇಟ್ಟುಕೊಂಡಿದ್ದರಿಂದಲೇ ಇಂದು ನಟ, ನಿರ್ಮಾಪಕ ಕಮ್‌ ನಿರ್ದೇಶಕ ಶಶಿಧರ್‌ ಕೆ.ಎಂ. ಸ್ಯಾಂಡಲ್‌ವುಡ್‌ನಲ್ಲೊಂದು ಛಾಪು ಮೂಡಿಸಲು ಸಾಧ್ಯವಾಗಿದೆ.


ಇಷ್ಟಕ್ಕೂ ಶಶಿಧರ್‌ ಕೆ.ಎಂ. ಅಂದಾಕ್ಷಣ ಬಹಳಷ್ಟು ಮಂದಿಗೆ ಕೊಂಚ ಗೊಂದಲವಾಗಬಹುದು. ಅದೇ, “ಡಾಟರ್‌ ಆಫ್‌ ಪಾರ್ವತಮ್ಮ” ಸಿನಿಮಾದ ನಿರ್ಮಾಪಕ, “ವೀರಂ” ಚಿತ್ರದ ಮೇನ್‌ ಸ್ಟ್ರೆಂಥ್‌, “ಶುಗರ್‌ಲೆಸ್‌” ಚಿತ್ರದ ನಿರ್ದೇಶಕ ಅಂದಾಗ ಮಾತ್ರ, ಶಶಿಧರ್‌ ಥಟ್ಟನೆ ನೆನಪಾಗುತ್ತಾರೆ. ಹೌದು, ಅದೇ ಶಶಿಧರ್‌ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ. ಇಷ್ಟಕ್ಕೂ ಶಶಿಧರ್‌ ಕುರಿತು ಇಲ್ಲೇಕೆ ಇಷ್ಟೊಂದು ಪೀಠಿಕೆ ಅಂದರೆ, ಶಶಿಧರ್‌ ಇಂಡಸ್ಟ್ರಿಗೆ ಬಂದಿದ್ದು, ತಾನೊಬ್ಬ ಕಲಾವಿದ ಎನಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ. ಆದರೆ, ಅವರು ಕಲಾವಿದನಾಗುವುದರ ಜೊತೆಗೆ ತಾನೊಬ್ಬ ನಿರ್ಮಾಪಕರಾಗಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಾಗಿದೆ.

ರಚಿತಾ, ಪ್ರಜ್ವಲ್-‌ ವೀರಂ

ನಿರ್ಮಾಣ, ನಿರ್ದೇಶನದಲ್ಲೂ ಸೈ

ನಿಜ, ಶಶಿಧರ್‌ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಕೇವಲ ಮೂರು ವರ್ಷಗಳಷ್ಟೇ ಕಳೆದಿವೆ. ಅವರು ಇಲ್ಲಿಗೆ ಬಂದಿದ್ದೇ, ತಾನೊಬ್ಬ ಕಲಾವಿದ ಆಗಬೇಕು ಅಂತ. ಈವರೆಗೆ ಅವರು ಸುಮಾರು ಹದಿನೈದು ಚಿತ್ರಗಳಲ್ಲಿ ತರಹೇವಾರಿ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಬೆಳ್ಳಿತೆರೆಯ ಜೊತೆ ಜೊತೆಯಲ್ಲಿ ಕಿರುತೆರೆಯನ್ನೂ ಸ್ಪರ್ಶಿಸಿದ್ದಾರೆ. ಕಿರುತೆರೆಯಲ್ಲೂ ಆರು ಧಾರಾವಾಹಿಗಳಲಿ ಬಣ್ಣ ಹಚ್ಚಿಕೊಂಡಿದ್ದುಂಟು. ಅದರಾಚೆಗೆ ಶಶಿಧರ್‌ ಧೈರ್ಯ ಮಾಡಿ, ನಿರ್ಮಾಣಕ್ಕೂ ಜೈ ಅಂದರು. ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಮೊದಲು ಹರಿಪ್ರಿಯಾ ಅಭಿನಯದ “ಡಾಟರ್‌ ಆಫ್‌ ಪಾರ್ವತಮ್ಮ” ಸಿನಿಮಾ ನಿರ್ಮಾಣ ಮಾಡಿದರು. ಇವರೊಂದಿಗೆ ಹಲವು ಗೆಳೆಯರು ಕೈ ಜೋಡಿಸಿದರು.

ಈ ಚಿತ್ರದಲ್ಲಿ ಸುಮಲತಾ ಅಂಬರೀಶ್‌ ಕೂಡ ನಟಿಸಿದ್ದು ವಿಶೇಷ. ಚೊಚ್ಚಲ ನಿರ್ಮಾಣ ಸಿನಿಮಾ ಮೂಲಕ ಶಶಿಧರ್‌ ಗಾಂಧಿನಗರಿಗರ ಕಣ್ಣಿಗೆ ಬಿದ್ದದ್ದು ನಿಜ. ಅಲ್ಲಿಂದ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟ ಶಶಿಧರ್‌, ನಿರ್ದೇಶನಕ್ಕೂ ಅಣಿಯಾದರು. “ಶುಗರ್‌ಲೆಸ್‌” ಎಂಬ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ತಾನೊಬ್ಬ ನಿರ್ದೇಶಕ ಅನ್ನುವುದನ್ನೂ ಸಾಬೀತುಪಡಿಸಿದರು. ಇದರ ಜೊತೆ ಜೊತೆಯಲ್ಲೇ ಅವರು ಪ್ರಜ್ವಲ್‌ ದೇವರಾಜ್‌ ಹಾಗೂ ರಚಿತಾರಾಮ್‌ ಅಭಿನಯದ “ವೀರಂ” ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಅದ್ಧೂರಿ ಬಜೆಟ್‌ ಚಿತ್ರವಾಗಿದ್ದು, ಸದ್ಯ ಚಿತ್ರೀಕರಣದಲ್ಲಿದೆ.

 

ಸಿನ್ಮಾ ಪ್ರೀತಿಯೇ ಇದಕ್ಕೆಲ್ಲಾ ಕಾರಣ…

ಒಬ್ಬ ಕಲಾವಿದ ನಿರ್ಮಾಣ ಮಾಡುವುದು ಅಂದರೆ ಅದು ಸುಲಭದ ಮಾತಲ್ಲ. ಇಲ್ಲಿ ಧೈರ್ಯ ಇರಬೇಕು, ಜೊತೆಗೆ ನಾನು ಮಾಡಬಲ್ಲೆ ಎಂಬ ಭರವಸೆ ಹೊಂದಿರಬೇಕು. ಇವೆರೆಡು ಇದ್ದುದರಿಂದಲೇ ಶಶಿಧರ್‌ ಇಂದು ಎರಡು ಸಿನಿಮಾ ನಿರ್ಮಾಣ ಮಾಡಿ, ಒಂದು ಚಿತ್ರ ನಿರ್ದೇಶನ ಮಾಡಿರೋದು. ಕನ್ನಡ ಸಿನಿಮಾರಂಗ ಈಗ ಇನ್ನಷ್ಟು ಶೈನ್‌ ಆಗುತ್ತಿದೆ. ಕೊರೊನಾ ಸಮಯದಲ್ಲೂ ಅದೇ ಧೈರ್ಯ ಇಟ್ಟುಕೊಂಡು ನಿರ್ಮಾಣ ಮಾಡುವುದೆಂದರೆ ನಿಜಕ್ಕೂ ಅದು ಸಿನಿಮಾ ಮೇಲಿರುವ ಕಾಳಜಿ, ಪ್ರೀತಿಯನ್ನು ಎತ್ತಿತೋರಿಸುತ್ತದೆ. ಶಶಿಧರ್‌ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಇದನ್ನೆಲ್ಲಾ ಎಷ್ಟೇ ಕಷ್ಟ ಬಂದರೂ ಮಾಡಲೇಬೇಕು ಎನ್ನುವಷ್ಟರ ಮಟ್ಟಿಗೆ ಸಜ್ಜಾಗಿ, ಪ್ರೊಫೆಷನಲ್‌ ಆಗಿಯೇ ಮಾಡುತ್ತಿದ್ದಾರೆ.

ಒಳ್ಳೇ ಸಿನ್ಮಾ ಕೊಡುವ ಗುರಿ 

ತಮ್ಮ ಸಿನಿ ಜರ್ನಿ ಕುರಿತು ಹೇಳುವ ಶಶೀಧರ್‌, “ನಾನು ಇಲ್ಲಿಗೆ ಬಂದದ್ದು ಆಕಸ್ಮಿಕ. ನಟನಾಗಬೇಕು ಅಂತ ಬಂದೆ. ನಿರ್ಮಾಪಕನಾದೆ, ನಿರ್ದೇಶಕನೂ ಆಗಿದ್ದೇನೆ. ಅದರಲ್ಲೂ ನಾನು ದೊಡ್ಡ ನಿರ್ಮಾಪಕ ಆಗಬೇಕು ಅಂತಾಗಲಿ, ನಿರ್ದೇಶಕ ಎನಿಸಿಕೊಳ್ಳಬೇಕು ಅಂತಾಗಲಿ ಇಲ್ಲ. ಕನ್ನಡಕ್ಕೆ ಸದಭಿರುಚಿಯ ಚಿತ್ರಗಳನ್ನು ಕೊಡಬೇಕು. ಕನ್ನಡ ಚಿತ್ರರಂಗಕ್ಕೆ ನಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ ಒಳ್ಳೆಯ ಕೊಡುಗೆ ಕೊಡಬೇಕು ಅನ್ನುವುದಷ್ಟೇ ನನ್ನ ಉದ್ದೇಶ. ಆ ನಿಟ್ಟಿನಲ್ಲಿ ಮೊದಲು ಮಹಿಳಾ ಪ್ರಧಾನವುಳ್ಳ “ಡಾಟರ್‌ ಆಫ್‌ ಪಾರ್ವತಮ್ಮ” ಸಿನಿಮಾ ಮಾಡಿದೆ. ಆ ನಂತರ ಸಾಮಾಜಿಕ ಕಳಕಳಿ ಇರುವ, ಒಳ್ಳೆಯ ಸಂದೇಶ ಸಾರುವ “ಶುಗರ್ಲೆಸ್‌” ಸಿನಿಮಾ ನಿರ್ದೇಶಿಸಿದೆ. ಈಗ “ವೀರಂ” ಎಂಬ ಪಕ್ಕಾ ಮಾಸ್‌ ಚಿತ್ರ ಮಾಡುತ್ತಿದ್ದೇನೆ.

ಇಷ್ಟೆಲ್ಲಾ ಸಾಧ್ಯವಾಗಿರೋದು, ಸಿನಿಮಾ ಮೇಲಿರುವ ಪ್ರೀತಿಗಾಗಿ. “ವೀರಂ” ದೊಡ್ಡ ಸ್ಕೇಲ್‌ನಲ್ಲಿ ತಯಾರಾಗುತ್ತಿದೆ. ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ ಮೂಲಕ ಯಾವುದೇ ಚಿತ್ರ ಹೊರಬಂದರೂ ಗುಣಮಟ್ಟದಲ್ಲಿ ರಾಜಿ ಆಗುವುದಿಲ್ಲ. ಒಳ್ಳೆಯ ಸಿನಿಮಾಗಳೇ ಮೂಡಿಬರಲಿವೆ. ಸದ್ಯಕ್ಕೆ “ಶುಗರ್‌ಲೆಸ್”‌ ಮೇಲೆ ಅತಿಯಾದ ಭರವಸೆ ಇದೆ. ನಾನು ನಿರ್ದೇಶನ ಮಾಡಿದ್ದೇನೆ ಎಂಬ ಕಾರಣಕ್ಕೆ ಅಲ್ಲ. ಅದೊಂದು ಒಳ್ಳೆಯ ಕಂಟೆಂಟ್‌ ಇರುವ ಚಿತ್ರ. ಈ ಸಿನಿಮಾವನ್ನು ನಾನು ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದೇನೆ. ಈ ಮೂಲಕ ಡಯಾಬಿಟಿಸ್‌ ಕುರಿತ ಕಥೆ ಹೇಳಿದ್ದೇನೆ.

ಪೃಥ್ವಿ ಅಂಬರ್‌ – ಶುಗರ್‌ಲೆಸ್

ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಮುಂದಾಗಿದ್ದೇನೆ. ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ ಎಂಬ ವಿಷಯ ಇಲ್ಲಿ ಹೈಲೈಟ್”. ಯಾವ ಭಾಷೆಯಲ್ಲೂ ಈ ರೀತಿಯ ಕಂಟೆಂಟ್‌ ಇರದ ಕಾರಣ, ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದೇನೆ” ಎನ್ನುತ್ತಾರೆ ಶಶಿಧರ್.‌


ಸದ್ಯಕ್ಕೆ ಶಶಿಧರ್‌ ಅವರೀಗ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಸ್ಟಾರ್‌ ಒಬ್ಬರಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದಾಗಲೇ ಆ ಸ್ಟಾರ್‌ ನಟರಿಗೆ ಅಡ್ವಾನ್ಸ್‌ ಕೂಡ ಕೊಟ್ಟಿದ್ದಾರಂತೆ. “ವೀರಂ” ಚಿತ್ರ ಮುಕ್ತಾಯಗೊಂಡ ನಂತರ ಆ ಸ್ಟಾರ್‌ ನಟರ ಜೊತೆಗಿನ ಚಿತ್ರವನ್ನು ಅನೌನ್ಸ್‌ ಮಾಡುವ ಉದ್ದೇಶ ಶಶಿಧರ್‌ ಅವರಿಗಿದೆ. ಇನ್ನೊಂದು ಖುಷಿಯ ವಿಷಯವೆಂದರೆ, ಅವರ ನಿರ್ಮಾಣದ “ವೀರಂ” ಚಿತ್ರಕ್ಕೆ ವಾಹಿನಿಯೊಂದರಿಂದ ಸ್ಯಾಟಲೆಟ್ ಬೇಡಿಕೆ ಬಂದಿದ್ದು, ಆ ಕುರಿತಂತೆ ಮಾತುಕತೆ ನಡೆಯುತ್ತಿದೆಯಂತೆ.

 

Related Posts

error: Content is protected !!