ರಮೇಶ್‌ ಸುರೇಶ್‌ ಚಿತ್ರಕ್ಕೆ ಕುಂಬಳಕಾಯಿ – ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ ಚಿತ್ರತಂಡ

ಸಂಭ್ರಮದಲ್ಲಿ ಮಿಂದೆದ್ದ ರಮೇಶ್‌ ಸುರೇಶ್‌ ತಂಡ

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಹೊಸಬರ “ರಮೇಶ್‌ ಸುರೇಶ್”‌ ಸುದ್ದಿಯಲ್ಲಿದೆ. ಈ ಸುದ್ದಿಗೆ ಕಾರಣ, ಈ ಚಿತ್ರದ ಮೂಲಕ ಬಹುತೇಕ ಹೊಸಬರೇ ಗಾಂಧಿನಗರಕ್ಕೆ ಕಾಲಿಟ್ಟಿರುವುದು ಒಂದಾದರೆ, ರಂಗಭೂಮಿಯ ಗುಬ್ಬಿವೀರಣ್ಣ ಅವರ ಮರಿಮೊಮ್ಮಗ ಈ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿರುವುದು.

“ರಮೇಶ್‌ ಸುರೇಶ್‌” ಚಿತ್ರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹೆಸರಘಟ್ಟ ಸುತ್ತಮುತ್ತಲಿರುವ ಕಾಡಿನಲ್ಲಿ ಭರ್ಜರಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರತಂಡ ಚಿತ್ರಕ್ಕೆ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣ ಪೂರೈಸಿದೆ.

ಬಹುತೇಕ ಹೊಸ ಪ್ರತಿಭೆಗಳೇ ತುಬಿರುವ‌ ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಇಬ್ಬರು ನಿರ್ದೇಶಕರಿದ್ದಾರೆ. ಇಬ್ಬರು ನಿರ್ಮಾಪಕರಿದ್ದಾರೆ. ಹೀರೋಗಳಿಗೆ ಒಬ್ಬರೇ ನಾಯಕಿ ಅನ್ನೋದಷ್ಟೇ ವಿಶೇಷ.

ಅಂದಹಾಗೆ, ಈ ಚಿತ್ರಕ್ಕೆ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶ್ ರಾಜ್ ನಾಯಕರು. ಇವರಿಗೆ ಚಂದನಾ ಸೇಗು ನಾಯಕಿ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ನಿರ್ದೇಶಕರು.

ಯಶ್ ರಾಜ್, ಚಂದನಾ, ಬೆನಕ

ಆರ್. ಕೆ. ಟಾಕೀಸ್ ಬ್ಯಾನರ್ ಮೂಲಕ ಕೃಷ್ಣ ಪಿ. ಹಾಗೂ ಶಂಕರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರೆಲ್ಲರಿಗೂ ಇದು ಮೊದಲ ಅನುಭವ. ಸದ್ಯಕ್ಕೆ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಮಾತಿನ ಭಾಗವನ್ನೂ ಬಹುತೇಕ ಮುಗಿಸಿದೆ. ಈ ಚಿತ್ರದ ಹೈಲೈಟ್ ಅಂದರೆ ಸಾಧುಕೋಕಿಲ ಮತ್ತು ತೆಲುಗಿನ‌ ಖ್ಯಾತ ನಟ ಸತ್ಯ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೋಹನ್ ಜುನೇಜಾ ಮತ್ತು ಅನೇಕ ರಂಗಪ್ರತಿಭೆಗಳು ನಟಿಸಿದ್ದಾರೆ.

ಕೃಷ್ಣ, ಪಿ. ನಿರ್ಮಾಪಕರು

“ರಮೇಶ್‌ ಸುರೇಶ್‌” ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರದ ಶೀರ್ಷಿಕೆ ನೋಡಿದಾಕ್ಷಣ ಇದೊಂದು ಹಾಸ್ಯಮಯ ಚಿತ್ರ ಎಂಬುದನ್ನು ಸಾರುತ್ತದೆ. ಕಥೆ ಕೂಡ‌ ಹಾಸ್ಯವಾಗಿಯೇ ಸಾಗಲಿದೆ ಎಂಬುದು ನಿರ್ದೇಶಕದ್ವಯರ ಮಾತು. ಚಿತ್ರದಲ್ಲಿ ಬೆನಕ ಹಾಗೂ ಯಶುರಾಜ್ ಸೋಮಾರಿ ಹುಡುಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸವಿಲ್ಲದ ಆಲೆಮಾರಿ ಹುಡುಗರಾಗಿ ಕಾಣಿಸಿಕೊಂಡಿರುವ ಅವರು, ‘ಇಲ್ಲಿ ಕಥೆಯೇ ಹೀರೋ’ ಎನ್ನುತ್ತಾರೆ.

ಮಾಸ್ಟರ್ ರಕ್ಷಿತ್ ಕೃಷ್ಣ

ಹಾಸ್ಯದ ಜೊತೆಗೆ ಎಮೋಶನ್ಸ್‌ ಕೂಡ ಚಿತ್ರದಲ್ಲಿದೆ. ಸಿನಿಮಾ‌ ಅಪ್ಟಟ‌ ಮನರಂಜನೆಯ ಜೊತೆಗೆ ಸಂದೇಶವನ್ನು ಕೊಡಲಿದೆ ಎಂಬುದು ಚಿತ್ರ ತಂಡದ ಮಾತು. ಇನ್ನು ನಾಯಕರಿಬ್ಬರಿಗೂ ಇದು ಚೊಚ್ಚಲ ಚಿತ್ರ. ಹೊಸಬರನ್ನು ನಂಬಿ ಅವರಿಗೆ ಉತ್ಸಾಹ ತುಂಬಿ ನಿರ್ಮಾಪಕದ್ವಯರಾದ ಕೃಷ್ಣ ಹಾಗೂ ಶಂಕರ್ ಅವರು ಅವಕಾಶ ಕೊಟ್ಟಿದ್ದಾರೆ. ಹೊಸ ಪ್ರತಿಭೆಗಳ‌ ಮೇಲೆ ಭರವಸೆ ಇಟ್ಟು ನಿರ್ದೇಶಕರಾದ ನಾಗರಾಜ್‌ ಮತ್ತು ರಘರಾಜ್‌ ಗೌಡ ಕೂಡ ತಮ್ಮ ಕೆಲಸ ಮಾಡಿ ಮುಗಿಸಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಪ್ರಮೋದ್‌ ಮರವಂತೆ ಇತರರು ಹಾಡು ಬರೆದಿದ್ದಾರೆ. ವಿಶ್ವಜಿತ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.
ಈ ಚಿತ್ರದ ಮೂಲಕ ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಬೆನಕ ಚಿತ್ರರಂಗ ಪ್ರವೇಶಿಸಿದ್ದಾರೆ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗ ಸದಾಶಿವ ಅವರ ಪುತ್ರ. ರಂಗಭೂಮಿ ಕುಟುಂಬದ ಹಿನ್ನೆಲೆ ಇರುವ ಬೆನಕ ಗುಬ್ಬಿ ವೀರಣ್ಣ, ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮನ್ಮಥ ವಿಜಯ’,”ರೂಪಾಂತರ’ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಮಾವನ ಮನೆ ರೊಟ್ಟಿ’ ಸೇರಿದಂತೆ ಹಲವು ನಾಟಕಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ ಬೆನಕ ಗುಬ್ಬಿ ವೀರಣ್ಣ, ಈಗ “ರಮೇಶ್ ಸುರೇಶ್” ಚಿತ್ರದ ಮೂಲಕ ಬಣ್ಣದ ಲೋಕಕ್ಕೆ‌ ಎಂಟ್ರಿಯಾಗಿದ್ದಾರೆ.

ಮತ್ತೊಬ್ಬ ಹೀರೋ ಯಶ್ ರಾಜ್ ಕೂಡ ರಂಗಭೂಮಿ‌ ಹಿನ್ನೆಲೆಯಿಂದ ಬಂದವರು. ಸದ್ಯ ತುಮಕೂರಿನಲ್ಲಿ‌ ವಿಜೆಯಾಗಿರುವ ಯಶ್ ರಾಜ್, ಕಾರ್ಯಕ್ರಮಗಳ‌ ಮೂಲಕ ಸಾಕಷ್ಟು ಮಾನವೀಯ ಕೆಲಸಗಳಿಗೂ ಕಾರಣರಾಗಿದ್ದಾರೆ. ಕಲೆಯನ್ನೇ ನಂಬಿರುವ ಯಶ್ ರಾಜ್ ಗಾಂಧಿನಗರದಲ್ಲಿ ಗಟ್ಟಿ‌ನೆಲೆ ಕಂಡುಕೊಳ್ಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಒಬ್ಬ ನಟನಿಗೆ ಏನೆಲ್ಲಾ ಅರ್ಹತೆ ಇರಬೇಕೋ ಎಲ್ಲವನ್ನೂ ಕರಗತ ಮಾಡಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ ಯಶ್‌ರಾಜ್.
ಸಾಮಾನ್ಯವಾಗಿ ಹೊಸಬರಿಗೆ ಸಿನಿಮಾ‌ ಇಂಡಸ್ಟ್ರಿಯಲ್ಲಿ ಅವಕಾಶ‌ ಸಿಗೋದು ತುಬಾನೇ ಕಷ್ಟ. “ರಮೇಶ್ ಸುರೇಶ್” ಚಿತ್ರದ ನಿರ್ದೇಶಕರಾದ ನಾಗರಾಜ್ ಹಾಗೂ ರಘುರಾಜ್ ಗೌಡ ಮತ್ತು ಹೀರೋಗಳಾದ ಬೆನಕ ಮತ್ತು ಯಶ್ ರಾಜ್ ಅವರಲ್ಲಿರುವ ಪ್ರತಿಭೆ ಹಾಗೂ ಶ್ರದ್ಧೆ ನೋಡಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕಥಾಹಂದರದಲ್ಲಿರುವ ಗಟ್ಟಿತನ‌ ನೋಡಿ ನಿರ್ಮಾಪಕರಾದ ಕೃಷ್ಣ ಮತ್ತು ಶಂಕರ್ ಅವಕಾಶ ನೀಡಿದ್ದಾರೆ.

ಈಗಾಗಲೇ ಚಿತ್ರದ ಕೆಲ ದೃಶ್ಯ ನೋಡಿ ಹಾಡು ಕೇಳಿರುವ ನಿರ್ಮಾಪಕರಿಗೆ ಕನ್ನಡದಲ್ಲಿ ಹೊಸ ಬಗೆಯ ಕಥೆ ಇರುವ ಚಿತ್ರ ಮಾಡಿರುವ ಖುಷಿ ಇದೆ. ಈಗಾಗಲೇ ಗಾಂಧಿನಗರದಲ್ಲಿ ಕೊಂಚ ಸುದ್ದಿಯಾಗಿರುವ “ರಮೇಶ್ ಸುರೇಶ್” ಚಿತ್ರ ಆದಷ್ಟು ಬೇಗ ರಿಲೀಸ್‌ಗೆ ರೆಡಿಯಾಗುತ್ತಿದೆ. ಇಷ್ಟರಲ್ಲೇ ಚಿತ್ರದ ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದೆ.

Related Posts

error: Content is protected !!