Categories
ಸಿನಿ ಸುದ್ದಿ

ಜಾಲಿ ಲೈಫಲ್ಲಿ ಸಾಧು ಕಿಲಕಿಲ! ಕಾಲೇಜ್‌ ಸ್ಟೋರಿಗೆ ಕೋಕಿಲ ಮಾಡಲಿದ್ದಾರೆ ನಿರ್ದೇಶನ

ಸಾಧುಕೋಕಿಲ ಈಗ ಏನ್‌ ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ಅವರೀಗ ಹೊಸ ಚಿತ್ರವೊಂದರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಹೌದು, ನಟ, ಗಾಯಕ ಕಮ್‌ ಸಂಗೀತ ನಿರ್ದೇಶಕರಾಗಿ ಜನರನ್ನು ರಂಜಿಸಿರುವ ಸಾಧುಕೋಕಿಲ, ನಿರ್ದೇಶನದಲ್ಲೂ ಸೈ ಎನಿಸಿಕಕೊಂಡವರು. ಈಗ ಅವರೊಂದು ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ “ಜಾಲಿ ಲೈಫ್‌” ಎಂದು ನಾಮಕರಣ ಮಾಡಲಾಗಿದೆ.


ಈ ಹಿಂದೆ “ತ್ರಿಕೋನ” ಚಿತ್ರ‌ ನಿರ್ಮಿಸಿದ್ದ ರಾಜಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಪೊಲೀಸ್ ಪ್ರಕ್ಕಿ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ರಾಜ್‌ಶೇಖರ್‌ ಅವರೇ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದಾರೆ.
ತಮ್ಮ ಸಂಸ್ಥೆ ಮೂಲಕ ಈ ವರ್ಷ ನಾಲ್ಕು ಚಿತ್ರಗಳನ್ನು ನಿರ್ಮಿಸುವುದಾಗಿ ನಿರ್ಮಾಪಕ ರಾಜಶೇಖರ್ ತಿಳಿಸಿದ್ದಾರೆ.‌ ಇನ್ನು, ಮಾರ್ಚ್‌ನಲ್ಲೇ ಚಿತ್ರೀಕರಣ ಶುರುವಾಗಲಿದೆ.


ಈಗಾಗಲೇ ಚಿತ್ರದ ತಾರಾಬಳಗ ಆಯ್ಕೆಗಾಗಿ ನಟ ಸುಚೀಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ವಿಭಿನ್ನವಾಗಿ ಆಡಿಶನ್ ನಡೆಸಲಾಗಿದೆ.
ರಂಗಾಯಣ, ನೀನಾಸಂ ಹಾಗೂ ಟೆಂಟ್ ಸಿನಿಮಾ ಮೂಲಕ ಸುಮಾರು 500 ರಿಂದ 600 ಪ್ರತಿಭಾವಂತರು ಆಡಿಶನ್ ಗೆ ಆಗಮಿಸಿದ್ದು, ಸದ್ಯಕ್ಕೆ 18 ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಚಿತ್ರದಲ್ಲಿ ಐದು ಹಾಡುಗಳಿದ್ದು, ಸಾಧುಕೋಕಿಲ ಅವರೇ ಸಂಗೀತ ನೀಡುತ್ತಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಈ ಚಿತ್ರದಲ್ಲಿ ಸುಚೀಂದ್ರ ಪ್ರಸಾದ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

Categories
ಸಿನಿ ಸುದ್ದಿ

ದರ್ಶನ್‌ – ತರುಣ್‌ ಸುಧೀರ್‌ ಜೋಡಿಯ ʼ ರಾಬರ್ಟ್‌ʼ ಇಷ್ಟರಲ್ಲೇಬರಲೇಬೇಕಿತ್ತು….ಯಾಕೆ ಗೊತ್ತಾ ?

ನಟ ದರ್ಶನ್‌ ಅಭಿಮಾನಿಗಳು ಹಬ್ಬ ಆಚರಿಸಲು ರೆಡಿಯಾಗಿದ್ದಾರೆ. ನಿರೀಕ್ಷೆಯಂತೆಯೇ ಮಾರ್ಚ್‌ ಕ್ಕೆ11 ಕನ್ನಡ ಚಿತ್ರರಂಗ ದೊಡ್ಡದೊಂದು ಸಿನಿಮಾ ಜಾತ್ರೆಗೆ ಸಾಕ್ಷಿಯಾಗುವುದು ಗ್ಯಾರಂಟಿ ಆಗಿದೆ. ದರ್ಶನ್‌ ಫ್ಯಾನ್ಸ್‌ ಮಾತ್ರ ಕಣ್ಣಿಗೆ ಎಣ್ಣೆ ಬಿಟ್ಟು ಕೊಂಡು ಆ ದಿನಕ್ಕೆ ಕಾಯುತ್ತಿದ್ದಾರೆ. ಆ ದಿನ ತಮ್ಮ ನೆಚ್ಚಿನ ನಟ ದಾಸ ತೆರೆ ಮೇಲೆ ಬರ್ತಾನೆ, ತಮ್ಮನ್ನೆಲ್ಲ ಭರಪೂರ ರಂಜಿಸುತ್ತಾನೆ ಅನ್ನೋದು ಅವರ ಅಭಿಮಾನಿಗಳ ನಿರೀಕ್ಷೆ.

ಅಷ್ಟು ಮಾತ್ರವಲ್ಲ, ರಾಜ್ಯದ ಇಡೀ ಸಿನಿಮಾ ಪ್ರೇಕ್ಷಕ ವರ್ಗವೂ ಕೂಡ ಆ ಕ್ಷಣವನ್ನೇ ಎದುರು ನೋಡುತ್ತಿದೆ. ಅದಕ್ಕೆ ಕಾರಣ ಹಲವು ಇವೆ. ಕೊರೋನಾದಿಂದಾಗಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗದೆ ಬೇಸತ್ತಿದ್ದಾರೆ. ಅವರಿಗೆಲ್ಲ ಈಗ ಮನರಂಜನೆ ಬೇಕಿದೆ. ಚಿತ್ರರಂಗಕ್ಕೂ ಅದನ್ನೇ ನಿರೀಕ್ಷೆ ಮಾಡುತ್ತಿದೆ. ʼರಾಬರ್ಟ್‌ʼ ಮೂಲಕ ನಾಡಿನ ಚಿತ್ರಮಂದಿರಗಳಲ್ಲಿ ಅಂತಹದೊಂದು ಜಾತ್ರೆ ಶುರುವಾದರೆ, ಚಿತ್ರರಂಗಕ್ಕೂ ಹೊಸ ಟಾನಿಕ್‌ ಅನ್ನೋದು ಚಿತ್ರೋದ್ಯಮದ ಬಯಕೆ.

ಕುತೂಹಲ ಇರೋದು ರಾಬರ್ಟ್‌ ಮೂಲಕ ಅದೆಲ್ಲ ಸಾಧ್ಯವಾಗುತ್ತಾ ಅನ್ನೋದು. ಖಂಡಿತಾ ಅದು ನಿಜವೂ ಅಗಲಿದೆ. ಯಾಕಂದ್ರೆ, ʼಒಡೆಯʼ ಚಿತ್ರದ ನಂತರ ನಟ ದರ್ಶನ್‌ ತೆರೆ ಮೇಲೆ ಬಂದಿಲ್ಲ. ಅದು ಬಂದು ಹೋಗಿಯೇ ಹೆಚ್ಚು ಕಡಿಮೆ ಇಲ್ಲಿಗೆ ಒಂದೂವರೆ ವರ್ಷ. ʼಯಜಮಾನʼ ಚಿತ್ರದ ನಂತರ ಬಂದ ಸಿನಿಮಾ ಅದು. ದರ್ಶನ್‌ ಅಂದ್ರೆ ಅಭಿಮಾನಿಗಳು ಏನೆಲ್ಲ ಇರಬೇಕೆಂದು ಬಯಸುತ್ತಾರೋ, ಅದೆಲ್ಲ ಅಲ್ಲಿತ್ತು ಅನ್ನೋದು ಬಿಟ್ಟರೆ, ಆ ಸಿನಿಮಾದಲ್ಲಿ ಹೊಸತನ ಕಾಣಲಿಲ್ಲ. ಹಾಗಾಗಿ ʼ ಒಡೆಯʼ ನಿರೀಕ್ಷೆಯಷ್ಟು ಅಭಿಮಾನಿಗಳನ್ನು ರಂಜಿಸಲಿಲ್ಲ. ಅದೊಂದು ಬೇಸರದಲ್ಲೀಗ ʼರಾಬರ್ಟ್‌ʼ ಚಿತ್ರದ ಮೇಲೆ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ ದರ್ಶನ್‌ ಫ್ಯಾನ್ಸ್‌ ಹಾಗೂ ಸಿನಿಮಾ ಪ್ರೇಕ್ಷಕ ವರ್ಗ. ಹೆಚ್ಚು ಕಡಿಮೆ ಒಂದೂವರೆ ವರ್ಷದ ಆ ಕಾತರಕ್ಕೆ ಮಾರ್ಚ್‌ 11 ರಂದು ತೆರೆ ಬೀಳುತ್ತಿದೆ. ಅಂದುಕೊಂಡಂತೆ ʼರಾಬರ್ಟ್‌ʼ ಹೊಸ ದಾಖಲೆ ಬರೆಯುತ್ತಾ ? ಎನ್ನುವುದಷ್ಟೇ ಬಾಕಿ ಇದೆ.

ಸೋಲು-ಗೆಲುವಿನ ಲೆಕ್ಕಚಾರದಾಚೆಯೂ ಈ ಸಿನಿಮಾ ಈ ಹೊತ್ತಿಗೆ ಬರಲೇಬೇಕಿತ್ತು. ಕಾರಣ ಚಿತ್ರರಂಗಕ್ಕೊಂದು ಫೋರ್ಸ್‌ ಬೇಕಿತ್ತು. ಹಾಗಂತ ಇಲ್ಲಿ ತನಕ ಯಾರ ಸಿನಿಮಾ ಬಂದಿಲ್ಲವೇ? ಲಾಕ್‌ ಡೌನ್‌ ತೆರೆವಾದ ನಂತರ ಇಲ್ಲಿ ತನಕ ಸಾಕಷ್ಟು ಕನ್ನಡ ಸಿನಿಮಾ ಬಿಡುಗಡೆ ಆಗಿವೆ. ಇದರಲ್ಲಿ ನಿರೀಕ್ಷಿತ ಸಿನಿಮಾಗಳು ಕೂಡ ಇದ್ದವು. ಅನೇಕ ಕಾರಣಗಳಿಗೆ ಈ ಸಿನಿಮಾಗಳಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಕೋರೋನಾ ಭಯ ದೂರವಾಗದಿರುವುದು ಅದಕ್ಕೆ ಕಾರಣ. ಹಾಗೆ ನೋಡಿದರೆ ಅದನ್ನು ಕೊಂಚ ದೂರ ಮಾಡಿದ್ದು ʼಪೊಗರುʼ ಹವಾ. ಸ್ಟಾರ್‌ ಸಿನಿಮಾಗಳ ಪೈಕಿ ಮೊದಲು ಬಂದ ಸಿನಿಮಾ ಇದು. ಜನರಿಲ್ಲದೆ ಬಣಗುಡುತ್ತಿದ್ದ ಚಿತ್ರಮಂದಿರಗಳಲ್ಲಿ ಜನ ಕಂಡರು. ಅಂತೂ ಚಿತ್ರರಂಗ ಚೇತರಿಸಿಕೊಂಡಿತು ಎನ್ನುವ ಆಶಾಭಾವ ಮೂಡಿತು. ಆದರೂ ಇನ್ನೇನೋ ಬೇಕಿದೆ ಎನ್ನುವ ಕೊರಗು ಚಿತ್ರೋದ್ಯಮಕ್ಕೆ ಕಾಡುತ್ತಲೇ ಇತ್ತು. ಹಾಗಾಗಿ ರಾಬರ್ಟ್‌ ಬರಲೇಬೇಕಿತ್ತು ಎನ್ನುವ ಕೇಳಿ ಬಂದಿದ್ದು ಸುಳ್ಳಲ್ಲ.

” ರಾಬರ್ಟ್‌ʼ ಬಂದ್ರೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಕೊರೋನಾ ಭಯದ ಮೈ ಚಳಿ ಬಿಡುತ್ತೆ. ದರ್ಶನ್‌ ಅಭಿಮಾನಕ್ಕೆ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ತಾರೆ. ಬಂದ್‌ ಆಗಿ ಧೂಳು ಹಿಡಿದ ಚಿತ್ರಮಂದಿರಗಳಲ್ಲಿ ಕುರ್ಚಿಗಳು ಭರ್ತಿ ಆಗುತ್ತವೆ. ಮತ್ತೆ ಚಿತ್ರ ರಂಗದಲ್ಲಿ ಹಳೇ ವೈಭವ ಕಾಣಲಿದೆ ಅಂತ ಉದ್ಯಮದ ಕನವರಿಕೆ ಕೂಡ ʼ ರಾಬರ್ಟ್‌ʼ ಮೇಲಿದೆ. ಒಂದೂವರೆ ವರ್ಷದಿಂದ ಅವರ ಫ್ಯಾನ್ಸ್‌ ಸಿನಿಮಾ ಇಲ್ಲದೆ ಹಸಿದಿದ್ದಾರೆ. ರಾಬರ್ಟ್‌ ರಿಲೀಸ್‌ ಗೆ ಅಂತಲೇ ತುದಿಗಾಲ ಮೇಲೆ ನಿಂತಿದ್ದಾರೆ. ಫಸ್ಟ್‌ ಡೇ ಫಸ್ಟ್‌ ಶೋ ನಲ್ಲಿ ʼರಾಬರ್ಟ್‌ʼ ನೋಡಿ ಕಣ್ತುಂಬಿಕೊಳ್ಳಲೇಬೇಕೆಂದು ಹಠ ತೊಡ್ಡವರದ್ದು ದೊಡ್ಡ ಸಂಖ್ಯೆ ಇದೆ. ಹೀಗಾಗಿ ಆರಂಭದಲ್ಲೇ ರಾಬರ್ಟ್‌ ಚಿತ್ರ ಬಿಗ್‌ ಎಂಟ್ರಿ ಪಡೆಯುವುದು ನೂರರಷ್ಟು ಗ್ಯಾರಂಟಿ ಎನ್ನುತ್ತಿವೆ ಚಿತ್ರೋದ್ಯಮದ ಮೂಲಗಳು.

Categories
ಸಿನಿ ಸುದ್ದಿ

ಮತ್ತೆ ತಾಜ್‌ ಮಹಲ್! ಮುಕ್ತಾಯ ಹಂತದಲ್ಲಿ ಹೊಸಬರ ಸಿನಿಮಾ

“ತಾಜ್‌ ಮಹಲ್”…‌ ಕನ್ನಡದಲ್ಲಿ ಯಶಸ್ವಿಗೊಂಡ ಚಿತ್ರವಿದು. ಅಜೇಯ್‌ರಾವ್‌ ಅವರಿಗೆ ದೊಡ್ಡ ಬ್ರೇಕ್‌ ಕೊಟ್ಟಿದ್ದ ಸಿನಿಮಾ. ಈಗಾಗಲೇ ಇದೇ ಹೆಸರಲ್ಲಿ ಚಿತ್ರವೊಂದು ಮೂಡಿ ಬಂದಿದ್ದು, ಇಷ್ಟರಲ್ಲೇ ಸಿನಿಮಾ ಮುಕ್ತಾಯಗೊಳ್ಳಲಿದೆ. ಹೌದು, “ತಾಜ್‌ ಮಹಲ್‌ ೨” ಚಿತ್ರ ಈಗಾಗಲೇ ಚಿತ್ರೀಕರಣಗೊಂಡಿದ್ದು, ಮಾರ್ಚ್‌ ೧೫ರಿಂದ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ.

ಶ್ರೀಗಂಗಾಂಭಿಕಾ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ದೇವರಾಜ ಕುಮಾರ್ ನಿರ್ದೇಶನ ಮಾಡಿದ್ದಾರೆ. ದೇವರಾಜ್‌ ಕುಮಾರ್‌ ಅವರೇ ಇಲ್ಲಿ ಹೀರೋ ಆಗಿದ್ದಾರೆ. ಅವರಿಗೆ ಸಮೃದ್ಧಿ ನಾಯಕಿಯಾಗಿದ್ದಾರೆ. ಇನನು, ದೇವರಾಜ್‌ ಕುಮಾರ್‌ ಅವರ ಕಥೆ, ಚಿತ್ರಕಥೆ ಚಿತ್ರಕ್ಕಿದೆ. ವೀನಸ್‌ ಮೂರ್ತಿ ಅವರು ಕ್ಯಾಮೆರಾ ಹಿಡಿದಿದ್ದಾರೆ. ಬೆಂಗಳೂರಿನ ಹೆಚ್ಎಂಟಿ ಲೇಔಟ್‌ನಲ್ಲಿ ಆರು ದಿನಗಳ‌ ಕಾಲ ಸಾಹಸ ಸನ್ನಿವೇಶ ಹಾಗೂ ಹಾಡಿನ‌ ಚಿತ್ರೀಕರಣ ನಡೆಯಲಿದ್ದು, ಈ ಮೂಲಕ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ.‌

ಎಲ್ಲವೂ ಅಂದುಕೊಂಡಂತೆ ನಡೆದರೆ ಬರುವ ಮೇ ತಿಂಗಳಲ್ಲಿ ಟೀಸರ್‌ ಬಿಡುಗಡೆಯಾಗಲಿದ್ದು, ನಂತರ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಮನ್ವರ್ಷಿ ನವಲಗುಂದ ಸಂಭಾಷಣೆಯ ಜೊತೆಗೆ ಹಾಡುಗಳನ್ನೂ ಬರೆದಿದ್ದಾರೆ. ವಿಕ್ರಮ್ ಸೆಲ್ವ ಸಂಗೀತವಿದೆ.

ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡಿದರೆ, ಧನಂಜಯ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಜಯ್ ಅವರ ಸಂಕಲನವಿದೆ. ನೈಜ ಪ್ರೇಮಕಥೆ ಆಧರಿಸಿದ ಈ ಚಿತ್ರದಲ್ಲಿ ಜಿಮ್ ರವಿ, ಶೋಭರಾಜ್, ಶಿವರಾಂ, ತಬಲ ನಾಣಿ, ಕಡ್ಡಿ ಪುಡಿ ಚಂದ್ರು, ಕಾಕ್ರೋಜ್ ಸುಧಿ ಇತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ದರ್ಶನ್‌ ಅವರ “ರಾಬರ್ಟ್‌ʼ ಚಿತ್ರಕ್ಕೂ, ಪ್ರಧಾನಿಗೂ ಎಲ್ಲಿಂದೆಲ್ಲಿಯ ನಂಟು ? ಜಗದೀಶ್‌ ಶೆಟ್ಟರ್‌ ಆ ಕತೆ ಹೇಳ್ತಾರೆ ಕೇಳಿ….

ಸಿನಿಮಾಗಳ ಪ್ರೀ ರಿಲೀಸ್‌ ಈವೆಂಟ್‌ಗಳಿಗೂ ಈಗ ರಾಜಕೀಯ ಮೆರಗು ಸಿಗುತ್ತಿದೆ. ದಾವಣಗೆರೆಯಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ” ಪೊಗರುʼ ಚಿತ್ರದ ಆಡಿಯೋ ರಿಲೀಸ್‌ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು. ಭಾರೀ ಜನಸಾಗರವೇ ಸೇರಿದ್ದ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಚಿತ್ರದ ನಾಯಕ ಧ್ರುವ ಸರ್ಜಾ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಆ ಸರದಿ ʼರಾಬರ್ಟ್‌ʼ ಚಿತ್ರದ್ದು.

ಭಾನುವಾರ ( ಫೆ. 28) ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ “ರಾಬರ್ಟ್‌ʼ ಚಿತ್ರದ ಪ್ರೀ ರಿಲೀಸ್ಈ‌ವೆಂಟ್‌ ಕಾರ್ಯಕ್ರಮ ನಡೆಯಿತು.ಮಾಜಿ ಸಿಎಂ ಹಾಗೂ ಹಾಲಿ ಸಚಿವ ಜಗದೀಶ್‌ ಶೆಟ್ಟರ್‌ ಅಲ್ಲಿಗೆ ಮುಖ್ಯ ಅತಿಥಿಗಳಾಗಿ ಬಂದಿದ್ದರು.ಭಾರೀ ಜನಸಾಗರವೇ ನೆರೆದಿದ್ದ ವರ್ಣರಂಜಿತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಗದೀಶ್‌ ಶೆಟ್ಟರ್‌, ತಾವು ದರ್ಶನ್‌ ಅಭಿಮಾನಿ ಅಂತ ದರ್ಶನ್‌ ಅವರನ್ನು ಗುಣಗಾನ ಮಾಡಿದರು. ” ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ಸಿಗುವುದಾದರೆ ಅದು ಉತ್ತರ ಕರ್ನಾಟಕದಿಂದಲೇ ಸಾಧ್ಯ. ಹುಬ್ಬಳ್ಳಿ ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನೆಲ. ಇಲ್ಲಿಗೆ ನಿಮ್ಮೆಲ್ಲರ ನೆಚ್ಚಿನ ನಟ ದರ್ಶನ್‌ ಬಂದಿದ್ದಾರೆ. ಅವರಿಗೆ ನಿಮ್ಮಲ್ಲೆರ ಬೆಂಬಲ ಬೇಕುʼ ಎಂದರು.

ಕಳೆದ ಒಂದು ವರ್ಷದಿಂದ ಕೊರೋನಾದಿಂದ ಇಡೀ ದೇಶ ಸಾಕಷ್ಟು ಅನಾನುಕೂಲ ಅನುಭವಿಸಿತು. ಹಾಗೆಯೇ ಚಿತ್ರೋದ್ಯಮ ಕೂಡ ಸಾಕಷ್ಟು ತೊಂದರೆ ಅನುಭವಿಸಿತು. ಈಗ ಚೇತರಿಕೆ ಕಾಣುತ್ತಿರುವುದು ಸಂತೋಷದ ಸಂಗತಿ. ಇದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಭಾರತಕ್ಕೆ ಮಾತ್ರವಲ್ಲ ಬೇರೆ ಬೇರೆ ದೇಶಗಳಿಗೂ ಕೊರೋನಾ ಲಸಿಕೆ ಕೊಡುವ ನಿಟ್ಟಿನಲ್ಲಿ ಪ್ರಧಾನಿ ದಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಹಾಗಾಗಿಯೇ ನಾವೆಲ್ಲ ಇಂದು ಇಲ್ಲಿ ಸೇರುವುದಕ್ಕೆ ಸಾಧ್ಯವಾಗಿದೆ. ಪ್ರಧಾನಿ ಅವರ ಪ್ರಯತ್ನ ಫಲವೇ ʼರಾಬರ್ಟ್‌ʼ ಚಿತ್ರಕ್ಕೂ ವರವಾಗಿದೆ. ಚಿತ್ರಕ್ಕೆ ಯಶಸ್ಸು ಸಿಗಲಿ ಅಂತ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದರು.

Categories
ಸಿನಿ ಸುದ್ದಿ

ಹೀರೋ ಚಿತ್ರದ ಚಿತ್ರೀಕರಣದ ವೇಳೆ ಪೆಟ್ರೋಲ್‌ ಬಾಂಬ್‌ ಸ್ಪೋಟಗೊಂಡಿದ್ದು ನಿಜವಾ ? ಇದು ನಡೆದಿದ್ದಾರೂ ಯಾವಾಗ ?

ಹೌದು, ಇಂತಹದೊಂದು ಪ್ರಶ್ನೆ ಇಲ್ಲಿ ಮೂಡುವುದಕ್ಕೂ ಕಾರಣವಿದೆ. ಈಗಾಗಲೇ ಮಾಹಿತಿ ಇರುವ ಹಾಗೆ ರಿಷಬ್‌ ಶೆಟ್ಟಿ ಅಭಿನಯದ ʼಹೀರೋʼ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಮಾರ್ಚ್‌ 5 ರಂದೇ “ಹೀರೋʼ ಚಿತ್ರ ತೆರೆಗೆ ಬರುತ್ತಿದೆ ಅಂತ ಚಿತ್ರ ತಂಡವೇ ಅನೌನ್ಸ್‌ ಮಾಡಿದೆ. ಅದಕ್ಕೆ ಪೂರಕವಾಗಿಯೇ ಚಿತ್ರತಂಡ ಕೂಡ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದೆ. ಸದ್ಯಕ್ಕೆ ಅದರದ್ದೇ ಕೆಲಸದಲ್ಲಿ ಚಿತ್ರ ತಂಡ ಬ್ಯುಸಿ ಆಗಿದೆ. ಈ ನಡುವೆಯೇ “ಹೀರೋʼ ಚಿತ್ರದ ಆಕ್ಷನ್‌ ಸನ್ನಿವೇಶಗಳ ಚಿತ್ರೀಕರಣಕ್ಕೆ ಹಾಸನದ ಬೇಲೂರಿಗೆ ಹೋಗಿದ್ದಾಗ ಪೆಟ್ರೋಲ್‌ ಬಾಂಬ್‌ ಸ್ಪೋಟಗೊಂಡಿದ್ದು, ನಾಯಕ ರಿಷಬ್‌ ಶೆಟ್ಟಿ ಹಾಗೂ ನಾಯಕಿ ಗಾನವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನುವ ಸುದ್ದಿ ಸೋಮವಾರ ರಿವೀಲ್‌ ಆಗಿದೆ.

ರಾಜ್ಯದ ಪ್ರತಿಷ್ಟಿತ ಟಿವಿ ವಾಹಿನಿಗಳು ಹಾಗೂ ವೆಬ್‌ ಪೋರ್ಟಲ್‌ನಲ್ಲೂ ಪ್ರಕಟವಾಗಿದೆ. ಹಾಸನ ಸಮೀಪದ ಬೇಲೂರು ಸಮೀಪದ ಕಾಫಿ ಎಸ್ಟೇಟ್‌ ವೊಂದರಲ್ಲಿ ” ಹೀರೋʼ ಚಿತ್ರದ ಆಕ್ಷನ್‌ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ಈ ಅವಘಡ ನಡೆದಿದ್ದು, ಅದೃಷ್ಟವಶಾತ್‌ ಚಿತ್ರದ ನಾಯಕ ನಟ ರಿಷಬ್‌ ಶೆಟ್ಟಿ ಹಾಗೂ ನಾಯಕಿ ಗಾನವಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ಚಿತ್ರ ತಂಡದ ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಪ್ರಶ್ನೆ ಇರೋದು” ಹೀರೋʼ ಚಿತ್ರದ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು ಯಾವಾಗ? ನಿಜಕ್ಕೂ ಇದು ನಿನ್ನೆ ಮೊನ್ನೆ ನಡೆದ ಘಟನೆಯಾ ? ಸೆನ್ಸಾರ್‌ ಮುಗಿಸಿ ರಿಲೀಸ್‌ ಗೆ ರೆಡಿಯಾಗಿರುವ ಚಿತ್ರಕ್ಕೆ ಮತ್ತೆ ಚಿತ್ರೀಕರಣ ನಡೆಸಲು ಸಾಧ್ಯವೇ?

ಒಂದು ಚಿತ್ರ ಸೆನ್ಸಾರ್‌ ಮುಗಿಸಿ, ರಿಲೀಸ್‌ ಗೆ ರೆಡಿಯಾಗಿರುವ ಹೊತ್ತಿನಲ್ಲಿ ಆ ಚಿತ್ರಕ್ಕೆ ಮತ್ತೆ ಚಿತ್ರೀಕರಣ ನಡೆಸಲು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಮತ್ತೆ ಚಿತ್ರೀಕರಣ ಮಾಡಬೇಕಾದರೆ, ಮತ್ತೆ ಸೆನ್ಸಾರ್‌ಗೆ ಹೋಗಬೇಕು. ಅದರಲ್ಲೂ ಹೀರೋ ಚಿತ್ರ ಇನ್ನೇನು ರಿಲೀಸ್‌ ಆಗಲು ಮೂರೇ ದಿನ ಬಾಕಿಯಿದೆ. ಈ ಸಮಯದಲ್ಲಿ ಹೀರೋ ಚಿತ್ರದ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿ, ಚಿತ್ರದ ನಾಯಕ ರಿಷಬ್‌ ಶೆಟ್ಟಿ ಹಾಗೂ ನಾಯಕಿ ಗಾನವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನು ಸುದ್ದಿ ಹೊಸತಂತೂ ಅಲ್ಲ. ಅದು ಹಳೇಯದೇ ಆಗಿರುತ್ತದೆ. ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಚಿತ್ರತಂಡ ಈಗ ಪ್ರಚಾರ ಗಿಮಿಕ್‌ ಗೆ ಈಗ ಬಳಸಿಕೊಂಡಿರುವುದಕ್ಕೂ ಸಾಧ್ಯತೆಯಿದೆ.

Categories
ಸಿನಿ ಸುದ್ದಿ

ಅನಘ ಎಂಬ ಭಯಪಡಿಸೋ ಸಿನಿಮಾ ಸಸ್ಪೆನ್ಸ್‌-ಕಾಮಿಡಿ ಕಥಾಹಂದರ ಮೂಲಕ ಹೊಸಬರ ಆಗಮನ

ಕನ್ನಡದಲ್ಲಿ ಸಾಕಷ್ಟು ಹಾರರ್‌ ಸಿನಿಮಾಗಳು ಬಂದಿವೆ. ಆ ಸಾಲಿಗೆ ಹೊಸಬರ “ಅನಘ” ಚಿತ್ರವೂ ಸೇರಿದೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಇಷ್ಟರಲ್ಲೇ ಬಿಡುಗಡೆಯಾಗಲು ತಯಾರಿ ನಡೆಸುತ್ತಿದೆ. ಈ ಚಿತ್ರವನ್ನು ರಾಜು ನಿರ್ದೇಶನ ಮಾಡಿದ್ದಾರೆ. ಡಿ.ಪಿ.ಮಂಜುಳ ನಿರ್ಮಾಣ ಮಾಡಿದ್ದಾರೆ. ಇಲ್ಲಿ ನಾಯಕ, ನಾಯಕಿ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿವೆ. ಇದೊಂದು ಸಸ್ಪೆನ್ಸ್, ಹಾರರ್, ಕಾಮಿಡಿ ಅಂಶಗಳನ್ನು ಹೊಂದಿದೆ.

ಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗುತ್ತಿರುವ ಸಿನಿಮಾ, ಈಗಾಗಲೇ ಬಿಡುಗಡೆ ಕೆಲಸದತ್ತ ಚಿತ್ರತಂಡ ಚಿತ್ತ ಹರಿಸಿದೆ. ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ನಳೀನ್ ಕುಮಾರ್ ಮತ್ತು ಪವನ್ ಪುತ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ “ಸಿಲ್ಲಿ ಲಲ್ಲಿ” ಖ್ಯಾತಿಯ ಶ್ರೀನಿವಾಸ್ ಗೌಡ್ರು, ಕಿರಣ ತೇಜ, ಕಿರಣ್ ರಾಜ್, ಕರಣ್ ಆರ್ಯನ್, ದೀಪ, ಖುಷಿ, ರಶ್ಮಿ ನಟಿಸಿದ್ದಾರೆ.

ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ ರಂಗಭೂಮಿ ಮತ್ತು ಹಾಸ್ಯ ಪಾತ್ರದಲ್ಲಿ ಮೋಟು ರವಿ, ಅಭಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರಾಜು ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಬೆಂಗಳೂರು ಮತ್ತು ದೇವರಾಯನ ದುಗ೯ ಸುತ್ತ ಮುತ್ತ ಚಿತ್ರಿಕರಿಸಲಾಗಿದೆ. ಈ ಚಿತ್ರಕ್ಕೆ ಶಂಕರ್ ಅವರು ಕ್ಯಾಮೆರಾ ಹಿಡಿದರೆ, ಅವಿನಾಶ್ ಸಂಗೀತ ನೀಡಿದ್ದಾರೆ, ವೆಂಕಿ ಸಂಕಲನ ಮಾಡಿದ್ದಾರೆ. ಕೌರವ ವೆಂಕಟೇಶ್ ಸಾಹಸವಿದೆ. ಬಿಡುಗಡೆಗೆ ಜೋರು ಕೆಲಸ ನಡೆಯುತಿದ್ದು, ಇಷ್ಟರಲ್ಲೇ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ನಾನು ಸದಾ ಚಿರಋಣಿ- ಹುಬ್ಬಳ್ಳಿ ಜನತೆಗೆ ಧನ್ಯವಾದ ಹೇಳಿದ ದಾಸ

ನಟ ದರ್ಶನ್‌ ಹುಬ್ಬಳ್ಳಿ ಜತೆಗೆ ಧನ್ಯವಾದ ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಬಂದು ದೊಡ್ಡ ಮಟ್ಟದ ಬೆಂಬಲ ನೀಡಿದ್ದಕ್ಕೆ ನಾನು ಸದಾ ಚಿರಋಣಿ ಅಂದಿದ್ದಾರೆ.

ಗಂಡುಮೆಟ್ಟಿದ ನಾಡು ಹುಬ್ಬಳ್ಳಿ ನಗರಿ ಭಾನುವಾರ (ಫೆ. 28) ದೊಡ್ಡ ಸಿನಿಮಾ ಸಂಭ್ರಮಕ್ಕೆ ಸಾಕ್ಷಿ ಆಯಿತು. ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ “ರಾಬರ್ಟ್‌ʼ ಫ್ರೀ ರಿಲೀಸ್‌ ಪ್ರಚಾರ ಕಾರ್ಯಕ್ರಮದ ಭಾಗವಾಗಿಯೇ ನಡೆದ ಟ್ರೇಲರ್‌ ಹಾಗೂ ಆಡಿಯೋ ಲಾಂಚ್‌ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿಯೇ ಸಕ್ಸಸ್‌ ಕಂಡಿತು. ಚಿತ್ರ ತಂಡದ ನಿರೀಕ್ಷೆಗೂ ಮೀರಿ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ, ರಾಬರ್ಟ್‌ ಬಿಡುಗಡೆಯ ಕ್ಷಣವನ್ನೇ ಎದುರು ನೋಡುತ್ತಿರುವುದಕ್ಕೆ ಸಾಕ್ಷಿ ಆಯಿತು. ಕನ್ನಡ ಚಿತ್ರರಂಗದ ಮಟ್ಟಿಗೆ ಈಗ ಅತೀ ಹೆಚ್ಚು ಅಭಿಮಾನಿ ಗಳನ್ನು ಹೊಂದಿರುವ ಖ್ಯಾತಿ ದರ್ಶನ್‌ ಅವರಿಗಿದ್ದು, ಅದು ಕೂಡ ನಿನ್ನೆ ಮತ್ತೊಮ್ಮೆ ಸಾಬೀತು ಆಯಿತು.

ವರ್ಣರಂಜಿತ ಕಾರ್ಯಕ್ರಮದ ವೇದಿಕೆ ದರ್ಶನ್‌ ಬಂದಾಗ, ಅವರು ಚಿತ್ರದ ಕುರಿತು ಮಾತನಾಡಲು ಶುರು ಮಾಡಿದಾಗ ಅಭಿಮಾನಿಗಳ ಸಿಳ್ಳೆ, ಕೇಕೆ ಮುಗಿಲು ಮುಟ್ಟಿದ್ದು ವಿಶೇಷ. ಹೈದ್ರಾಬಾದ್‌ ಈವೆಂಟ್‌ ನಲ್ಲಿ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಅಂತ ಬಣ್ಣಿಸಿದ್ದ ನಟ ದರ್ಶನ್‌, ಹುಬ್ಬಳ್ಳಿಯ ವೇದಿಕೆ ಮೇಲೂ ಅದನ್ನೇ ಪುನರಾವರ್ತನೆ ಮಾಡಿದರಲ್ಲದೆ, ಮಾತಿನ ಮಧ್ಯೆ ಸಿಳ್ಳೆ-ಕೇಕೆ ಹಾಕುತ್ತಿದ್ದ ಫ್ಯಾನ್ಸ್‌ ಗೆ ” ಇರು ಚಿನ್ನ, ಇರು ಮಾನೆ… ಸ್ವಲ್ಪ ಸುಮ್ನಿರಿ ಮಾನೆ ಅಂತೆಲ್ಲ ತಾಳ್ಮೆ ಯಿಂದಲೇ ಹೇಳುತ್ತಿದ್ದರಾದರೂ, ಕೂಗಾಟ ಜಾಸ್ತಿ ಆದಾಗ, ಎಯ್‌ … ಇರಪ್ಪಾ ಸುಮ್ನೆ… ಅಂತ ಗಟ್ಟಿಯಾಗಿಯೇ ಸಿಟ್ಟಾದರು. ತಕ್ಷಣವೇ ಫ್ಯಾನ್ಸ್‌ ಸುಮ್ಮನಾದಾಗ ನೀವೆಲ್ಲ ಇರುವರೆಗೂ ನನ್ನ ೫೩ ಸಿನಿಮಾಗಳಲ್ಲಿನ ಖರಾಬು ಡ್ಯಾನ್ಸ್‌ ನೋಡಿಯೂ ನನ್ನನ್ನು ಸಹಿಸಿಕೊಂಡವರು… ನಿಮ್ಮದೇ ಋಣ ನನ್ನ ಮೇಲಿದೆ. ತೀರಿಸುವೆ ಅಂತ ಭಾವುಕರಾಗಿ ಅಭಿಮಾನಗಳ ಮನ ಗೆದ್ದರು.

ಉತ್ತರ ಕರ್ನಾಟಕದ ಜತೆಗಿನ ನಂಟನ್ನು ಎರಡು ಕಾರಣಗಳ ಮೂಲಕ ನೆನಪಿಸಿಕೊಂಡ ದರ್ಶನ್‌, ” ಕ್ರಾಂತಿವೀರ ಸಂಗೊಳ್ಳಿ ರಾಯಣ್ಣʼ ಚಿತ್ರದ ಪ್ರಚಾರಕ್ಕೆ ಅಂತ ನಾವ್‌ ಹೊರಟಾಗ ಇಲ್ಲಿ ಸಿಕ್ಕ ಪ್ರತಿಕ್ರಿಯೆ ಅದ್ಬುತವಾಗಿತ್ತು. ನಾವು ರಸ್ತೆಗಳಲ್ಲಿ ಹೊರಟಾಗ ಇಲ್ಲಿನ ಮಹಿಳೆಯರು, ಮಕ್ಕಳು ಚಪ್ಪಲಿ ತೆಗೆದು ನಿಂತು ನಮಗೆ ಸ್ವಾಗತ ಕೋರಿದ್ದರು. ಅದೇ ಕಾರಣಕ್ಕೆ ನಾನಿವತ್ತು ಚಪ್ಪಲಿ ತೆಗೆದು ಈ ವೇದಿಕೆ ಏರಿದ್ದೇನೆ. ಹಾಗೆಯೇ ನನ್ನಪ್ಪ ಒಂದು ಕಾಲದಲ್ಲಿ ಸಿನಿಮಾದಲ್ಲಿ ಅವಕಾಶ ಇಲ್ಲದೆ ಇದ್ದಾಗ ದಿವ್ಯ ದರ್ಶನ ಕಲಾವೃಂದ ಅಂತ ಒಂದು ನಾಟಕ ಕಂಪನಿ ಮೂಲಕ ಉತ್ತರ ಕರ್ನಾಟಕ ಪ್ರವಾಸ ಹೊರಟರು. ಆಗ ಇಲ್ಲಿನ ಜನ ಅವರಿಗೆ ಅದ್ಭುತ ಬೆಂಬಲ ಕೊಟ್ಟರು. ಆಗ ದುಡಿದ ಹಣದಿಂದಲೇ ನನ್ನಪ್ಪ ಮನೆ ಕಟ್ಟಿಸಿದ್ದರು. ಆ ಮನೆ ಇವತ್ತಿಗೂ ನಾವಿರುವ ಮನೆ. ಇದು ಉತ್ತರ ಕರ್ನಾಟಕದ ಜನತೆಗೂ ನನಗೂ ಇರುವ ನಂಟು ಎನ್ನುವ ಹುಬ್ಬಳ್ಳಿ ಜನ ಜೋರಾಗಿ ಕೂಗಿ ಸ್ವಾಗತಿಸಿದರು. ʼರಾಬರ್ಟ್‌ʼ ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಸಿಕ್ಕ ಇಂತಹದೊಂದು ದೊಡ್ಡ ಬೆಂಬಲಕ್ಕೆ ಸೋಮವಾರ ಧನ್ಯವಾದ ಹೇಳಿರುವ ನಟ ದರ್ಶನ್‌, ನಿಮ್ಮಗಳ ಪ್ರೀತಿ-ಅಭಿಮಾನಕ್ಕೆ ನಾನು ಸದಾ ಚಿರಋಣಿ ಅಂತ ಟ್ವೀಟ್‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾ ಕಣ್ಣಿಗೆ ಸಂದ ಅತ್ಯುತ್ತಮ ಪ್ರಶಸ್ತಿ ವರ್ಣಪಟಲ ಚಿತ್ರದ ಛಾಯಾಗ್ರಹಣಕ್ಕೆ ಗಣೇಶ್‌ ಹೆಗ್ಡೆಗೆ ಸಿಕ್ತು ವರ್ಲ್ಡ್‌ ಪ್ರೀಮಿಯರ್‌ ಫಿಲ್ಮ್‌ ಅವಾರ್ಡ್ಸ್

‌ಸಾಮಾನ್ಯವಾಗಿ ತೆರೆಮೇಲೆ ಇರುವ ಸ್ಟಾರ್‌ಗಳಷ್ಟೇ ಜನರಿಗೆ ಹತ್ತಿರವಾಗುತ್ತಾರೆ. ಅವರೆಲ್ಲರೂ ಜೋರು ಸುದ್ದಿ ಕೂಡ ಆಗುತ್ತಾರೆ. ಆದರೆ, ಅವರ ಸ್ಟಾರ್‌ಗಿರಿಗೆ ತೆರೆ ಹಿಂದೆ ಕೆಲಸ ಮಾಡಿದವರ ಶ್ರಮವೂ ಇರುತ್ತೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇರಲಿ, ಇಲ್ಲೀಗ ಒಂದು ಖುಷಿಯ ವಿಷಯ ಹೇಳಲೇಬೇಕು. ಸಿನಿಮಾದ ಕಣ್ಣು ಅಂದರೆ ಅದು ಛಾಯಾಗ್ರಾಹಕ. ಸುಂದರವಾಗಿ ಸೆರೆ ಹಿಡಿದು, ಕಣ್‌ ತಂಪು ಮಾಡುವ ಕಲೆ ಛಾಯಾಗ್ರಾಹಕರಿಗೆ ಇದ್ದೇ ಇರುತ್ತೆ. ಈಗ ಅಂತಹ ಛಾಯಾಗ್ರಾಹಕರೊಬ್ಬರಿಗೆ ೨೦೨೦ನೇ ಸಾಲಿನ ವರ್ಲ್ಡ್‌ ಪ್ರೀಮಿಯರ್‌ ಫಿಲ್ಮ್‌ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಹೌದು, ಛಾಯಾಗ್ರಾಹಕ ಗಣೇಶ್ ಹೆಗ್ಡೆ‌ ಅವರಿಗೆ ಈ ಪ್ರಶಸ್ತಿ ಸಂದಿದೆ. ಅಂದಹಾಗೆ, ಅವರಿಗೆ ಈ ಪ್ರಶಸ್ತಿ ಬಂದಿರೋದು, “ವರ್ಣಪಟಲ” ಚಿತ್ರದ ಛಾಯಾಗ್ರಹಣಕ್ಕೆ. ಈ ಸಿನಿಮಾಗೆ ಚೇತನ್‌ ಮುಂಡಾಡಿ ನಿರ್ದೇಶಕರು. ಈ ಚಿತ್ರಕ್ಕೆ ಹಲವು ಪ್ರಶಸ್ತಿಗಳೂ ಸಂದಿವೆ.


ಛಾಯಾಗ್ರಾಹಕ ಗಣೇಶ್‌ ಹೆಗ್ಡೆ ಅವರ ಕುರಿತು ಹೇಳುವುದಾದರೆ, ತಮ್ಮ ಕೆಲಸವನ್ನು ಅಪಾರವಾಗಿ ಪ್ರೀತಿಸುವ ವ್ಯಕ್ತಿ. ಅವರು ಛಾಯಾಗ್ರಾಹಕರಾಗಿ ಮೊದಲ ಸಲ ಕೆಲಸ ಮಾಡಿದ “ಮದಿಪು” ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಚೇತನ್ ಮುಂಡಾಡಿ ನಿರ್ದೇಶನ ಮಾಡಿದ್ದರು.“ಮದಿಪು” ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಗಣೇಶ್ ಹೆಗ್ಡೆ ಅವರ ಪಾತ್ರ ಕೂಡ ಪ್ರಮುಖವಾಗಿತ್ತು. ಪುನಃ ಚೇತನ್ ಮುಂಡಾಡಿ ನಿರ್ದೇಶನದಲ್ಲೇ ಸಜ್ಜಾದ ‘ಆಟಿಸಂ’ ಕಥಾ ಹಂದರವುಳ್ಳ “ವರ್ಣಪಟಲ” ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಅವರ ಕೆಲಸ ದೇಶ-ವಿದೇಶಗಳ ಚಿತ್ರ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಬುಡಕಟ್ಟು ಜನರ ನೈಜ ಕಥೆಯುಳ್ಳ “ಕನ್ನೇರಿ” ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ.

ಚೇತನ್ ಮುಂಡಾಡಿ ನಿರ್ದೇಶನದಲ್ಲೇ ಸಜ್ಜಾದ ‘ಆಟಿಸಂ’ ಕಥಾ ಹಂದರವುಳ್ಳ “ವರ್ಣಪಟಲ” ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಅವರ ಕೆಲಸ ದೇಶ-ವಿದೇಶಗಳ ಚಿತ್ರ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಬುಡಕಟ್ಟು ಜನರ ನೈಜ ಕಥೆಯುಳ್ಳ “ಕನ್ನೇರಿ” ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ

ಕರ್ನಾಟಕದ ಬುಡಕಟ್ಟು ಜನರ ಜೀವನ ಶೈಲಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಅವರು, ಚಿತ್ರ ವಿಮರ್ಶಕರ ಅತ್ಯುತ್ತಮ ಪ್ರಶಂಸೆಗೂ ಪಾತ್ರರಾಗಿದ್ದರು. ಇತ್ತೀಚೆಗೆ ಚಿತ್ರೀಕರಣಗೊಂಡಿರುವ “ಎಸ್ಐಟಿ”, “ಪ್ರೀತಿ ಕಿತಾಬು”, “ಮಾರೀಚ” ಚಿತ್ರಗಳಿಗೂ ಇವರ ಕ್ಯಾಮೆರಾ ಕೈ ಚಳಕವಿದೆ. ಇದರೊಂದಿಗೆ ಕನ್ನಡದ ಹಲವು ಜನಪ್ರಿಯ ಧಾರಾವಾಹಿಗಳಾದ “ಕುಂಕುಮ ಭಾಗ್ಯ”, “ಕಾದಂಬರಿ”, “ರಾಧಾ ಕಲ್ಯಾಣ”, “ಅರಮನೆ”, “ಹೆಳವನಕಟ್ಟೆ ಗಿರಿಯಮ್ಮ”, “ಕೆಳದಿ ಚನ್ನಮ್ಮ” ಧಾರಾವಾಹಿಗಳಿಗೂ ಇವರ ಛಾಯಾಗ್ರಹಣವಿದೆ.


ಇನ್ನು, ಕುಂಚ ಹಿಡಿದು ಪ್ರಕೃತಿ ಮಡಿಲಲ್ಲಿ ಚಿತ್ರಿಸುತ್ತಿದ್ದ, ಬಣ್ಣದ ಜೊತೆ ಸದಾ ಆಟವಾಡುತ್ತಿದ್ದ ಗಣೇಶ್‌ ಹೆಗ್ಡೆ ಮೂಲತಃ ಶಿರಸಿಯವರು. “ನಮ್ಮೂರ ಮಂದಾರ ಹೂವೆ” ಚಿತ್ರದ ಚಿತ್ರೀಕರಣ ನಡೆದದ್ದು ಶಿರಸಿ ಸುತ್ತಮುತ್ತ. ಅಷ್ಟೇ ಅಲ್ಲ, ಆ ಚಿತ್ರದಲ್ಲಿರುವ ಮನೆ ಗಣೇಶ್ ಹೆಗ್ಡೆ ಅವರದು. ಆ ಮನೆಯಲ್ಲೇ ಗಣೇಶ್‌ ಹೆಗ್ಡೆ ಹುಟ್ಟಿ ಬೆಳೆದದ್ದು. ಚಿತ್ರೀಕರಣದ ವೇಳೆ ಕ್ಯಾಮರಾ ಬಗ್ಗೆ ಕುತುಹಲ ಬೆಳೆಸಿಕೊಂಡು ಚಿತ್ರರಂಗದ ಕಡೆ ಹೊರಟ ಗಣೇಶ್ ಹೆಗ್ಡೆ, ಅನೇಕ ಸಾಕ್ಷ್ಯಚಿತ್ರಗಳು, ಜಾಹಿರಾತುಗಳು, ಧಾರಾವಾಹಿಗಳಲ್ಲಿ ಕೆಲಸ ಮಾಡಿದರು.

ಚಿತ್ರಕಲೆಯಲ್ಲಿ ಪದವಿ ಪಡೆದ ಗಣೇಶ್‌ ಹೆಗ್ಡೆ, ನಂತರದ ದಿನಗಳಲ್ಲಿ ಛಾಯಾಗ್ರಹಣವನ್ನು ಆಯ್ಕೆ ಮಾಡಿಕೊಂಡು, ಮೊದಲ ಸಲ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರಕ್ಕೆ ಪೋಸ್ಟರ್ ವಿನ್ಯಾಸ ಮಾಡುವ ಮೂಲಕ, ನಂತರ ಮೆಲ್ಲನೆ, ಛಾಯಾಗ್ರಾಹಕರಾದ ವೇಣು, ಎಂ.ಕುಮಾರ್, ಕೃಷ್ಣಕುಮಾರ್ ಸೇರಿದಂತೆ ಹಲವರ ಗರಡಿಯಲ್ಲಿ ಗಣೇಶ್ ಹೆಗ್ಡೆ ಪಳಗಿದ್ದಾರೆ. ಸದ್ಯ ಚೇತನ್‌ ಮುಂಡಾಡಿ ಅವರ ನಿರ್ದೇಶನದ “ವರ್ಣಪಟಲ” ಚಿತ್ರದ ಛಾಯಾಗ್ರಹಣಕ್ಕೆ ಗಣೇಶ್‌ ಹೆಗ್ಡೆ ಅವರಿಗೆ 2020ನೇ ಸಾಲಿನ ವರ್ಲ್ಡ್ ಪ್ರೀಮಿಯರ್ ಫಿಲ್ಮ್ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದ್ಯ ಅವರು ಕೆಲಸ ಮಾಡಿರುವ ಸುಧೀರ್ ಶಾನುಭೋಗ ನಿರ್ದೇಶನದ “ಮಾರೀಚ” ಹಾಗೂ “ಎಸ್ಐಟಿ” ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ.

Categories
ಸಿನಿ ಸುದ್ದಿ

ಕಡ್ಡಿ ಅಲ್ಲಾಡಿಸುವ ” ಚಡ್ಡಿ‌ದೋಸ್ತ್ ʼಗಳ ಜತೆಗೆ ಸೊಂಟ ಅಲ್ಲಾಡಿಸಿದ ಹಾಟ್‌ ಬೆಡಗಿ ಹರ್ಷಿತಾ !

ನಿರ್ದೇಶಕ ಆಸ್ಕರ್‌ ಕೃಷ್ಣ ಇದೇ ಮೊದಲು ನಾಯಕರಾಗಿ ಅಭಿನಯಿಸಿರುವ ” ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡುಸ್ಬುಟʼ ಚಿತ್ರ ರಿಲೀಸ್‌ ಗೆ ರೆಡಿ ಆಗಿದೆ. ಇಷ್ಟರಲ್ಲಿಯೇ ತೆರೆಗೆ ಬರಲು ಸಿದ್ಧತೆ ನಡೆಸಿರುವ ಚಿತ್ರ ತಂಡ ಈಗ ಚಿತ್ರದ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಮನುಷ್ಯನಾಗಿ ಹುಟ್ಟಿದ್ಮೇಲೆ ಏನ್‌ ಮಾಡ್ಬೇಕು… ಎನ್ನುವ ಸ್ಪೆಷಲ್‌ ಸಾಂಗ್‌ ನಲ್ಲಿ ಕನ್ನಡದ ಪ್ರತಿಭಾನ್ವಿತ ನಟಿ ಹರ್ಷಿತಾ ಕಲ್ಲಿಂಗಲ್‌ ಸಖತ್‌ ಆಗಿಯೇ ಕುಣಿದಿದ್ದು, ಪಡ್ಡೆ ಗಳಿಗಾಗಿಯೇ ಚಿತ್ರ ತಂಡ ಈ ಹಾಡು ಚಿತ್ರೀಕರಿಸಿದಷ್ಟು ಮಾದಕವಾಗಿದೆ.


ಐಟಂ ಮಾದರಿಯ ಈ ಹಾಡಿನಲ್ಲಿ ಹೆಜ್ಜೆ ಹಾಕಿರುವ ನಟಿ ಹರ್ಷಿತಾ ಕಲ್ಲಿಂಗಲ್ ಮೂಲತಃ ಬೆಂಗಳೂರಿನ ಹುಡುಗಿ. ಎಲ್ಲಕ್ಕಿಂತ ಹೆಚ್ಚಾಗಿ ಇವರು ಅಪ್ಪಟ ಕನ್ನಡತಿ ಎನ್ನುವುದು ವಿಶೇಷ. ಈಗಾಗಲೇ ಮಲಯಾಳಂ, ತೆಲುಗು, ತಮಿಳು ಹಾಗೂ ಇತರೇ ಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹರ್ಷಿತಾ ಕಲ್ಲಿಂಗಲ್ ಈಗ ಕನ್ನಡದತ್ತ ಮುಖ ಮಾಡಿದ್ದಾರೆ. ಇದೇ ಮೊದಲು ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡುಸ್ಬುಟ ಚಿತ್ರದಲ್ಲಿನ ವಿಶೇಷ ಹಾಡಿನ ಮೂಲಕ ಕನ್ನಡಕ್ಕೆ ಎಂಟ್ರಿ ಆಗಿದ್ದಾರೆ. ಇಲ್ಲಿ ಅವರನ್ನು ತಮ್ಮ ಚಿತ್ರಕ್ಕೆ ತಂದು ಕುಣಿಸಿದ್ದು ನಿರ್ದೇಶಕ ಆಸ್ಕರ್‌ ಕೃಷ್ಣ.


ಮನುಷ್ಯನಾಗಿ ಹುಟ್ಟಿದ್ಮೇಲೆ ಏನ್‌ ಮಾಡ್ಬೇಕು ಹಾಡನ್ನು ಚಿತ್ರದಲ್ಲಿ ತರಬೇಕು ಅಂದಾಗ ಅದಕ್ಕೆ ಸೂಕ್ತ ನಟಿಯನ್ನೇ ತರಬೇಕೆಂದು ಹುಡುಕಾಟದಲ್ಲಿದ್ದೇವು. ಆಗ ನಮಗೆ ಪರಿಚಯದವರ ಮೂಲಕ ಸಿಕ್ಕವರು ನಟಿ ಹರ್ಷಿಕಾ ಕಲ್ಲಿಂಗಲ್.‌ ಈ ವೇಳೆಗಾಗಲೇ ಅವರು ಕನ್ನಡದಾಚೆ ತೆಲುಗು, ತಮಿಳು ಹಾಗೂ ಮಲಯಾಳಂ ನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದರು. ಕನ್ನಡದವರೇ ಆಗಿದ್ದರು, ಅವರು ಮೊದಲು ಅಲ್ಲಿ ಗುರುತಿಸಿಕೊಂಡಿದ್ದರು. ಅವರನ್ನೇ ಯಾಕೆ ನಮ್ಮ ಸಿನಿಮಾದ ಮೂಲಕ ಪರಿಚಯಿಸಬಾರದು ಅಂತ ನಾವು ಹರ್ಷಿತಾ ಅವರನ್ನೇ ಆಯ್ಕೆ ಮಾಡಿಕೊಂಡೆವು ಎನ್ನುತ್ತಾರೆ ನಟ ಆಸ್ಕರ್‌ ಕೃಷ್ಣ. ಇತ್ತೀಚೆಗಷ್ಟೇ ಯುಟ್ಯೂಬ್‌ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಭಾರೀ ಮೆಚ್ಚುಗೆ ಸಿಕ್ಕಿದೆಯಂತೆ.

ರೆಡ್ ಅಂಡ್ ವೈಟ್ ಬ್ಯಾನರ್ ಅಡಿಯಲ್ಲಿ, ‘ಆಸ್ಕರ್’ ಕೃಷ್ಣರವರೇ ನಿರ್ಮಿಸಿ, ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ಚಿತ್ರವಿದು. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅನಂತ್ ಆರ್ಯನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಮಾರ್ಚ್ ಕೊನೆಯ ವಾರ ಈ ಚಿತ್ರವು ತೆರೆಗೆ ಬರಲಿದೆಯಂತೆ.

Categories
ಸಿನಿ ಸುದ್ದಿ

ಜೈರಾಜ್ ಪುತ್ರ ಅಜಿತ್ ಜೈರಾಜ್ ಈಗ ಪೊಲೀಸ್ ಅಧಿಕಾರಿ !


ಬದುಕೇ ಹಾಗೆ ಎಲ್ಲವೂ ನಾವಂದುಕೊಂಡಂತೆ ಅಲ್ಲ. ಯಾವುದನ್ನು ವಿರೋಧಿಸುತ್ತೇವೋ, ಒಂದೊಮ್ಮೆ ಅದನ್ನು ಅಪ್ಪಿಕೊಳ್ಳುವ ಸಂದರ್ಭವೂ ಬರುತ್ತೆ‌. ಅದಕ್ಕೆ ಡಾನ್ ಜೈರಾಜ್ ಅವರ ವಂಶ ಕೂಡ ಹೊರತಲ್ಲ. ಒಂದು ಕಾಲದ ಡಾನ್ ಜೈರಾಜ್ ಗೆ ಪೊಲೀಸರೇ ಮೊದಲ ಶತ್ರು ಆಗಿದ್ರಂತೆ. ಖಾಕಿ ಕಂಡ್ರೆ ಕೆಂಡ ಕಾರುತ್ತಿದ್ರಂತೆ. ಪೊಲೀಸರನ್ನು ನಾಯಿಗಳು ಅಂತ ಹಿಯಾಳಿಸಿದ್ರಂತೆ. ಅಂದ್ರೆ ಇವತ್ತು‌ ಅವರ ಪುತ್ರ ಅಜಿತ್ ಜೈರಾಜ್ ಪೊಲೀಸ್ ಅಧಿಕಾರಿ !

ಹೌದು, ಹೊಸಬರೇ ನಿರ್ಮಿಸಿ, ನಿರ್ದೇಶಿಸಿರುವ “ರೈಮ್ಸ್’ ಹೆಸರಿನ ಚಿತ್ರದಲ್ಲಿ ಜೈರಾಜ್ ಪುತ್ರ ಅಜಿತ್ ಜೈರಾಜ್ ಈಗ ಖಾಕಿ ತೊಟ್ಟಿದ್ದಾರೆ. ಕ್ರೈಮ್‌ ಪ್ರಕರಣ ಭೇದಿಸಲು ಪೊಲೀಸ್ ಅಧಿಕಾರಿಯಾಗಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಈಗಾಗಲೇ ಮೂರ್ನಾಲ್ಕು ಚಿತ್ರಗಳಲ್ಲಿ ಸಹ‌ನಟರಾಗಿ ಅಭಿನಯಿಸಿದ್ದ್ ಅಜಿತ್ ಜೈರಾಜ್, ಇದೇ ಮೊದಲು ” ರೈಮ್ಸ್’ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. ಈ ಚಿತ್ರದಲ್ಲಿ ಅವರದು ಪೊಲೀಸ್ ಅಧಿಕಾರಿ ಪಾತ್ರ ಎನ್ನುವುದೇ ವಿಶೇಷ.

ಯುವ ಪ್ರತಿಭೆ ಅಜಿತ್ ಕುಮಾರ್ ನಿರ್ದೇಶನ ದ ” ರೈಮ್ಸ್ʼ ಕಳೆದ ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿತ್ತು‌. ಇದೀಗ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡು ರಿಲೀಸ್‌ ಗೆ ರೆಡಿ ಆಗಿದೆ. ಏಪ್ರಿಲ್ ನಲ್ಲಿ ಚಿತ್ರವನ್ನು ತೆರೆಗೆ ತರಲು ಮುಂದಾಗಿರುವ ಚಿತ್ರ ತಂಡವು, ಈಗ ಚಿತ್ರದ ಪೋಸ್ಟರ್ ಲಾಂಚ್ ‌ಮೂಲಕ‌ ಸದ್ದು ಮಾಡಿದೆ. ಆ ದಿನ’ ರೈಮ್ಸ್’ ಪೋಸ್ಟರ್ ಲಾಂಚ್‌ ಗೆ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಖ್ಯಾತಿಯ ಅಶೋಕ್ ಕುಮಾರ್ ಬಂದಿದ್ದರು.

ನಾಯಕ ನಟ ಅಜಿತ್ ಜೈರಾಜ್, ನಿರ್ದೇಶಕ ಅಜಿತ್ ಕುಮಾರ್, ಮಿಮಿಕ್ರಿ ಗೋಪಿ, ಬಾಲ ನಟಿ ಬಾಸ್ಮತಿ, ನಿರ್ಮಾಪಕರಾದ ಜ್ನಾನಶೇಖರ್‌ ಸಿದ್ದಯ್ಯ, ರವಿಕುಮಾರ್‌, ಗಿರೀಶ್‌ ಗೌಡ, ರಮೇಶ್‌ ಆರ್ಯ ಹಾಜರಿದ್ದರು. ಪೋಸ್ಟರ್ ಲಾಂಚ್ ನಂತರ ಮಾತಾನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್, ನಾನು ವೃತ್ತಿಯಲ್ಲಿದ್ದಾಗ ಜೈರಾಜ್ ಮತ್ತು ನನ್ನ ನಡುವೆ ದೊಡ್ಡ ಕಾದಾಟ ನಡೆದಿತ್ತು. ಆಗಾಗ ಅವರಿಗಾಗಿ ನಾವು ಹುಡುಕುತ್ತಾ ಹೊರಟರೆ, ಜೈರಾಜ್‌ ತಪ್ಪಿಸಿಕೊಂಡು ಹೊಗುತ್ತಿದ್ದರು. ಹೀಗೆಯೇ ಇತ್ತು ಕಳ್ಳ-ಪೊಲೀಸ್‌ ಆಟ ಎನ್ನುತ್ತಾ ಜೈರಾಜ್‌ ಜತೆಗಿನ ತಮ್ಮ ಸಂಬಂಧವನ್ನು ವಿಭಿನ್ನವಾಗಿ ವಿವರಿಸಿದರು ಟೈಗರ್‌ ಅಶೋಕ್‌ ಕುಮಾರ್

ಅಜಿತ್‌ ಜೈರಾಜ್‌ ತಮ್ಮ ಪಾತ್ರ ಬಗ್ಗೆ ಮಾತನಾಡುತ್ತಾ, ʼ ಇದೊಂದು ಕಂಪ್ಲೀಟ್ ಸೈಕಲಾಜಿಕಲ್‌ ಕ್ರೈಂ ಥ್ರಿಲ್ಲರ್‌ ಚಿತ್ರ. ಇಲ್ಲಿ ನಾನೊಂದು ಕೊಲೆ ಪ್ರಕರಣ ಭೇದಿಸಲು ಹೊರಡುವ ಪೊಲೀಸ್‌ ಅಧಿಕಾರಿ. ಪಾತ್ರ ತುಂಬಾ ಚೆನ್ನಾಗಿದೆ. ಅಭಿನಯದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳಲು ಬಹಳಷ್ಟು ಅವಕಾಶ ಸಿಕ್ಕಿದೆʼ ಎಂದರು. ಅಜಿತ್‌ ಪಾತ್ರ ಬಗ್ಗೆ ಚಿತ್ರ ತಂಡವೂ ಕೂಡ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿತು.

error: Content is protected !!