ಹೌದು, ಇಂತಹದೊಂದು ಪ್ರಶ್ನೆ ಇಲ್ಲಿ ಮೂಡುವುದಕ್ಕೂ ಕಾರಣವಿದೆ. ಈಗಾಗಲೇ ಮಾಹಿತಿ ಇರುವ ಹಾಗೆ ರಿಷಬ್ ಶೆಟ್ಟಿ ಅಭಿನಯದ ʼಹೀರೋʼ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಮಾರ್ಚ್ 5 ರಂದೇ “ಹೀರೋʼ ಚಿತ್ರ ತೆರೆಗೆ ಬರುತ್ತಿದೆ ಅಂತ ಚಿತ್ರ ತಂಡವೇ ಅನೌನ್ಸ್ ಮಾಡಿದೆ. ಅದಕ್ಕೆ ಪೂರಕವಾಗಿಯೇ ಚಿತ್ರತಂಡ ಕೂಡ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದೆ. ಸದ್ಯಕ್ಕೆ ಅದರದ್ದೇ ಕೆಲಸದಲ್ಲಿ ಚಿತ್ರ ತಂಡ ಬ್ಯುಸಿ ಆಗಿದೆ. ಈ ನಡುವೆಯೇ “ಹೀರೋʼ ಚಿತ್ರದ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣಕ್ಕೆ ಹಾಸನದ ಬೇಲೂರಿಗೆ ಹೋಗಿದ್ದಾಗ ಪೆಟ್ರೋಲ್ ಬಾಂಬ್ ಸ್ಪೋಟಗೊಂಡಿದ್ದು, ನಾಯಕ ರಿಷಬ್ ಶೆಟ್ಟಿ ಹಾಗೂ ನಾಯಕಿ ಗಾನವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನುವ ಸುದ್ದಿ ಸೋಮವಾರ ರಿವೀಲ್ ಆಗಿದೆ.
ರಾಜ್ಯದ ಪ್ರತಿಷ್ಟಿತ ಟಿವಿ ವಾಹಿನಿಗಳು ಹಾಗೂ ವೆಬ್ ಪೋರ್ಟಲ್‌ನಲ್ಲೂ ಪ್ರಕಟವಾಗಿದೆ. ಹಾಸನ ಸಮೀಪದ ಬೇಲೂರು ಸಮೀಪದ ಕಾಫಿ ಎಸ್ಟೇಟ್ ವೊಂದರಲ್ಲಿ ” ಹೀರೋʼ ಚಿತ್ರದ ಆಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ಈ ಅವಘಡ ನಡೆದಿದ್ದು, ಅದೃಷ್ಟವಶಾತ್ ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ ಹಾಗೂ ನಾಯಕಿ ಗಾನವಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ಚಿತ್ರ ತಂಡದ ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.
ಪ್ರಶ್ನೆ ಇರೋದು” ಹೀರೋʼ ಚಿತ್ರದ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು ಯಾವಾಗ? ನಿಜಕ್ಕೂ ಇದು ನಿನ್ನೆ ಮೊನ್ನೆ ನಡೆದ ಘಟನೆಯಾ ? ಸೆನ್ಸಾರ್ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ಚಿತ್ರಕ್ಕೆ ಮತ್ತೆ ಚಿತ್ರೀಕರಣ ನಡೆಸಲು ಸಾಧ್ಯವೇ?
ಒಂದು ಚಿತ್ರ ಸೆನ್ಸಾರ್ ಮುಗಿಸಿ, ರಿಲೀಸ್ ಗೆ ರೆಡಿಯಾಗಿರುವ ಹೊತ್ತಿನಲ್ಲಿ ಆ ಚಿತ್ರಕ್ಕೆ ಮತ್ತೆ ಚಿತ್ರೀಕರಣ ನಡೆಸಲು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಮತ್ತೆ ಚಿತ್ರೀಕರಣ ಮಾಡಬೇಕಾದರೆ, ಮತ್ತೆ ಸೆನ್ಸಾರ್‌ಗೆ ಹೋಗಬೇಕು. ಅದರಲ್ಲೂ ಹೀರೋ ಚಿತ್ರ ಇನ್ನೇನು ರಿಲೀಸ್ ಆಗಲು ಮೂರೇ ದಿನ ಬಾಕಿಯಿದೆ. ಈ ಸಮಯದಲ್ಲಿ ಹೀರೋ ಚಿತ್ರದ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿ, ಚಿತ್ರದ ನಾಯಕ ರಿಷಬ್ ಶೆಟ್ಟಿ ಹಾಗೂ ನಾಯಕಿ ಗಾನವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನು ಸುದ್ದಿ ಹೊಸತಂತೂ ಅಲ್ಲ. ಅದು ಹಳೇಯದೇ ಆಗಿರುತ್ತದೆ. ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಚಿತ್ರತಂಡ ಈಗ ಪ್ರಚಾರ ಗಿಮಿಕ್ ಗೆ ಈಗ ಬಳಸಿಕೊಂಡಿರುವುದಕ್ಕೂ ಸಾಧ್ಯತೆಯಿದೆ.