ದರ್ಶನ್‌ – ತರುಣ್‌ ಸುಧೀರ್‌ ಜೋಡಿಯ ʼ ರಾಬರ್ಟ್‌ʼ ಇಷ್ಟರಲ್ಲೇಬರಲೇಬೇಕಿತ್ತು….ಯಾಕೆ ಗೊತ್ತಾ ?

ನಟ ದರ್ಶನ್‌ ಅಭಿಮಾನಿಗಳು ಹಬ್ಬ ಆಚರಿಸಲು ರೆಡಿಯಾಗಿದ್ದಾರೆ. ನಿರೀಕ್ಷೆಯಂತೆಯೇ ಮಾರ್ಚ್‌ ಕ್ಕೆ11 ಕನ್ನಡ ಚಿತ್ರರಂಗ ದೊಡ್ಡದೊಂದು ಸಿನಿಮಾ ಜಾತ್ರೆಗೆ ಸಾಕ್ಷಿಯಾಗುವುದು ಗ್ಯಾರಂಟಿ ಆಗಿದೆ. ದರ್ಶನ್‌ ಫ್ಯಾನ್ಸ್‌ ಮಾತ್ರ ಕಣ್ಣಿಗೆ ಎಣ್ಣೆ ಬಿಟ್ಟು ಕೊಂಡು ಆ ದಿನಕ್ಕೆ ಕಾಯುತ್ತಿದ್ದಾರೆ. ಆ ದಿನ ತಮ್ಮ ನೆಚ್ಚಿನ ನಟ ದಾಸ ತೆರೆ ಮೇಲೆ ಬರ್ತಾನೆ, ತಮ್ಮನ್ನೆಲ್ಲ ಭರಪೂರ ರಂಜಿಸುತ್ತಾನೆ ಅನ್ನೋದು ಅವರ ಅಭಿಮಾನಿಗಳ ನಿರೀಕ್ಷೆ.

ಅಷ್ಟು ಮಾತ್ರವಲ್ಲ, ರಾಜ್ಯದ ಇಡೀ ಸಿನಿಮಾ ಪ್ರೇಕ್ಷಕ ವರ್ಗವೂ ಕೂಡ ಆ ಕ್ಷಣವನ್ನೇ ಎದುರು ನೋಡುತ್ತಿದೆ. ಅದಕ್ಕೆ ಕಾರಣ ಹಲವು ಇವೆ. ಕೊರೋನಾದಿಂದಾಗಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗದೆ ಬೇಸತ್ತಿದ್ದಾರೆ. ಅವರಿಗೆಲ್ಲ ಈಗ ಮನರಂಜನೆ ಬೇಕಿದೆ. ಚಿತ್ರರಂಗಕ್ಕೂ ಅದನ್ನೇ ನಿರೀಕ್ಷೆ ಮಾಡುತ್ತಿದೆ. ʼರಾಬರ್ಟ್‌ʼ ಮೂಲಕ ನಾಡಿನ ಚಿತ್ರಮಂದಿರಗಳಲ್ಲಿ ಅಂತಹದೊಂದು ಜಾತ್ರೆ ಶುರುವಾದರೆ, ಚಿತ್ರರಂಗಕ್ಕೂ ಹೊಸ ಟಾನಿಕ್‌ ಅನ್ನೋದು ಚಿತ್ರೋದ್ಯಮದ ಬಯಕೆ.

ಕುತೂಹಲ ಇರೋದು ರಾಬರ್ಟ್‌ ಮೂಲಕ ಅದೆಲ್ಲ ಸಾಧ್ಯವಾಗುತ್ತಾ ಅನ್ನೋದು. ಖಂಡಿತಾ ಅದು ನಿಜವೂ ಅಗಲಿದೆ. ಯಾಕಂದ್ರೆ, ʼಒಡೆಯʼ ಚಿತ್ರದ ನಂತರ ನಟ ದರ್ಶನ್‌ ತೆರೆ ಮೇಲೆ ಬಂದಿಲ್ಲ. ಅದು ಬಂದು ಹೋಗಿಯೇ ಹೆಚ್ಚು ಕಡಿಮೆ ಇಲ್ಲಿಗೆ ಒಂದೂವರೆ ವರ್ಷ. ʼಯಜಮಾನʼ ಚಿತ್ರದ ನಂತರ ಬಂದ ಸಿನಿಮಾ ಅದು. ದರ್ಶನ್‌ ಅಂದ್ರೆ ಅಭಿಮಾನಿಗಳು ಏನೆಲ್ಲ ಇರಬೇಕೆಂದು ಬಯಸುತ್ತಾರೋ, ಅದೆಲ್ಲ ಅಲ್ಲಿತ್ತು ಅನ್ನೋದು ಬಿಟ್ಟರೆ, ಆ ಸಿನಿಮಾದಲ್ಲಿ ಹೊಸತನ ಕಾಣಲಿಲ್ಲ. ಹಾಗಾಗಿ ʼ ಒಡೆಯʼ ನಿರೀಕ್ಷೆಯಷ್ಟು ಅಭಿಮಾನಿಗಳನ್ನು ರಂಜಿಸಲಿಲ್ಲ. ಅದೊಂದು ಬೇಸರದಲ್ಲೀಗ ʼರಾಬರ್ಟ್‌ʼ ಚಿತ್ರದ ಮೇಲೆ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ ದರ್ಶನ್‌ ಫ್ಯಾನ್ಸ್‌ ಹಾಗೂ ಸಿನಿಮಾ ಪ್ರೇಕ್ಷಕ ವರ್ಗ. ಹೆಚ್ಚು ಕಡಿಮೆ ಒಂದೂವರೆ ವರ್ಷದ ಆ ಕಾತರಕ್ಕೆ ಮಾರ್ಚ್‌ 11 ರಂದು ತೆರೆ ಬೀಳುತ್ತಿದೆ. ಅಂದುಕೊಂಡಂತೆ ʼರಾಬರ್ಟ್‌ʼ ಹೊಸ ದಾಖಲೆ ಬರೆಯುತ್ತಾ ? ಎನ್ನುವುದಷ್ಟೇ ಬಾಕಿ ಇದೆ.

ಸೋಲು-ಗೆಲುವಿನ ಲೆಕ್ಕಚಾರದಾಚೆಯೂ ಈ ಸಿನಿಮಾ ಈ ಹೊತ್ತಿಗೆ ಬರಲೇಬೇಕಿತ್ತು. ಕಾರಣ ಚಿತ್ರರಂಗಕ್ಕೊಂದು ಫೋರ್ಸ್‌ ಬೇಕಿತ್ತು. ಹಾಗಂತ ಇಲ್ಲಿ ತನಕ ಯಾರ ಸಿನಿಮಾ ಬಂದಿಲ್ಲವೇ? ಲಾಕ್‌ ಡೌನ್‌ ತೆರೆವಾದ ನಂತರ ಇಲ್ಲಿ ತನಕ ಸಾಕಷ್ಟು ಕನ್ನಡ ಸಿನಿಮಾ ಬಿಡುಗಡೆ ಆಗಿವೆ. ಇದರಲ್ಲಿ ನಿರೀಕ್ಷಿತ ಸಿನಿಮಾಗಳು ಕೂಡ ಇದ್ದವು. ಅನೇಕ ಕಾರಣಗಳಿಗೆ ಈ ಸಿನಿಮಾಗಳಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಕೋರೋನಾ ಭಯ ದೂರವಾಗದಿರುವುದು ಅದಕ್ಕೆ ಕಾರಣ. ಹಾಗೆ ನೋಡಿದರೆ ಅದನ್ನು ಕೊಂಚ ದೂರ ಮಾಡಿದ್ದು ʼಪೊಗರುʼ ಹವಾ. ಸ್ಟಾರ್‌ ಸಿನಿಮಾಗಳ ಪೈಕಿ ಮೊದಲು ಬಂದ ಸಿನಿಮಾ ಇದು. ಜನರಿಲ್ಲದೆ ಬಣಗುಡುತ್ತಿದ್ದ ಚಿತ್ರಮಂದಿರಗಳಲ್ಲಿ ಜನ ಕಂಡರು. ಅಂತೂ ಚಿತ್ರರಂಗ ಚೇತರಿಸಿಕೊಂಡಿತು ಎನ್ನುವ ಆಶಾಭಾವ ಮೂಡಿತು. ಆದರೂ ಇನ್ನೇನೋ ಬೇಕಿದೆ ಎನ್ನುವ ಕೊರಗು ಚಿತ್ರೋದ್ಯಮಕ್ಕೆ ಕಾಡುತ್ತಲೇ ಇತ್ತು. ಹಾಗಾಗಿ ರಾಬರ್ಟ್‌ ಬರಲೇಬೇಕಿತ್ತು ಎನ್ನುವ ಕೇಳಿ ಬಂದಿದ್ದು ಸುಳ್ಳಲ್ಲ.

” ರಾಬರ್ಟ್‌ʼ ಬಂದ್ರೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಕೊರೋನಾ ಭಯದ ಮೈ ಚಳಿ ಬಿಡುತ್ತೆ. ದರ್ಶನ್‌ ಅಭಿಮಾನಕ್ಕೆ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ತಾರೆ. ಬಂದ್‌ ಆಗಿ ಧೂಳು ಹಿಡಿದ ಚಿತ್ರಮಂದಿರಗಳಲ್ಲಿ ಕುರ್ಚಿಗಳು ಭರ್ತಿ ಆಗುತ್ತವೆ. ಮತ್ತೆ ಚಿತ್ರ ರಂಗದಲ್ಲಿ ಹಳೇ ವೈಭವ ಕಾಣಲಿದೆ ಅಂತ ಉದ್ಯಮದ ಕನವರಿಕೆ ಕೂಡ ʼ ರಾಬರ್ಟ್‌ʼ ಮೇಲಿದೆ. ಒಂದೂವರೆ ವರ್ಷದಿಂದ ಅವರ ಫ್ಯಾನ್ಸ್‌ ಸಿನಿಮಾ ಇಲ್ಲದೆ ಹಸಿದಿದ್ದಾರೆ. ರಾಬರ್ಟ್‌ ರಿಲೀಸ್‌ ಗೆ ಅಂತಲೇ ತುದಿಗಾಲ ಮೇಲೆ ನಿಂತಿದ್ದಾರೆ. ಫಸ್ಟ್‌ ಡೇ ಫಸ್ಟ್‌ ಶೋ ನಲ್ಲಿ ʼರಾಬರ್ಟ್‌ʼ ನೋಡಿ ಕಣ್ತುಂಬಿಕೊಳ್ಳಲೇಬೇಕೆಂದು ಹಠ ತೊಡ್ಡವರದ್ದು ದೊಡ್ಡ ಸಂಖ್ಯೆ ಇದೆ. ಹೀಗಾಗಿ ಆರಂಭದಲ್ಲೇ ರಾಬರ್ಟ್‌ ಚಿತ್ರ ಬಿಗ್‌ ಎಂಟ್ರಿ ಪಡೆಯುವುದು ನೂರರಷ್ಟು ಗ್ಯಾರಂಟಿ ಎನ್ನುತ್ತಿವೆ ಚಿತ್ರೋದ್ಯಮದ ಮೂಲಗಳು.

Related Posts

error: Content is protected !!