Categories
ಸಿನಿ ಸುದ್ದಿ

ನಟ ಚೇತನ್‌ , ಆ 100 ಕೋಟಿ ರೂ. ಹಿಂದೆ ಬಿದ್ದಿದಾದರೂ ಯಾಕೆ? ಕುತೂಹಲಕಾರಿ ಆಗಿದೆ ಹಂಡ್ರೆಡ್‌ ಕ್ರೋರ್ಸ್ ಕತೆ !

ನಟ ಚೇತನ್‌ ಅಹಿಂಸಾ ಬದಲಾಗಿದ್ದಾರೆ. ಸಾಮಾಜಿಕ ಹೋರಾಟಗಳ ಜತೆಗೆಯೇ ಈಗವರು ನಟನಾಗಿಯೂ ಬ್ಯುಸಿ ಆಗುತ್ತಿದ್ದಾರೆ. ಹಾಗೆಯೇ ವಿಶೇಷ ಕಥಾಹಂದರದ ಚಿತ್ರಗಳಿಗೂ ಬಣ್ಣ ಹಚ್ಚುತ್ತಿದ್ದಾರೆ. ಅಂತಹದೇ ಒಂದು ವಿಭಿನ್ನ ಕಥಾ ಹಂದರದ ” 100 ಕ್ರೋರ್ಸ್‌ ʼ ಹೆಸರಿನ ಚಿತ್ರವೀಗ ಫಸ್ಟ್‌ ಲುಕ್‌ ಲಾಂಚ್‌ ಮೂಲಕ ಸೌಂಡ್‌ ಮಾಡಿದೆ. ಡಿಫೆರೆಂಟ್‌ ಟೈಟಲ್‌ ಹೊಂದಿರುವ ʼ100 ಕ್ರೋರ್ಸ್‌ʼ ಚಿತ್ರ ಜನವರಿಯಲ್ಲೇ ಸುದ್ದಿ ಆಗಿತ್ತು. ಈಗ ಹೈದ್ರಾಬಾದ್‌, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರ ತಂಡವು ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮಾಡಿದೆ.


ಹರೀಶ್‌ ಶಂಕರ್‌ ನಿರ್ದೇಶನದ ಈ ಚಿತ್ರದಲ್ಲಿ ಚೇತನ್‌ ಅವರದ್ದು ಪೊಲೀಸ್‌ ಅಧಿಕಾರಿ ಪಾತ್ರ. ಹಾಗೆಯೇ ರಗಡ್‌ ಲುಕ್.‌ ಅದೇ ಈಗ ಫಸ್ಟ್‌ ಲುಕ್‌ ಪೋಸ್ಟರ್‌ ನಲ್ಲಿ ಅನಾವರಣಗೊಂಡಿದೆ. ʼಆ ದಿನಗಳುʼ, ʼಮೈನಾʼ ಸೇರಿದಂತೆ ಈಗಾಗಲೇ ಹಲವು ಚಿತ್ರಗಳಲ್ಲಿ ಕಾಣಸಿಕೊಂಡಿರುವ ನಟ ಚೇತನ್‌, ಇದುವರೆಗೂ ಪೊಲೀಸ್‌ ಗೆಟಪ್‌ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಫಸ್ಟ್‌ ಟೈಮ್‌ ಈಗ ಪೊಲೀಸ್‌ ಅಧಿಕಾರಿಯಾಗಿಯೂ ತೆರೆ ಮೇಲೆ ಬರುತ್ತಿದ್ದಾರೆ. ಕನ್ನಡದ ಜತೆಗೆ ಈ ಚಿತ್ರ ತೆಲುಗಿನಲ್ಲೂ ನಿರ್ಮಾಣವಾಗಿದೆ. ಎರಡು ಕಡೆ ಚೇತನ್‌ ಅವರೇ ಹೀರೋ ಎನ್ನುವುದು ಈ ಚಿತ್ರದ ಮತ್ತೊಂದು ವಿಶೇಷ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಹಣದ ಹಿಂದಿನ ಕತೆ. ನೂರು ಕೋಟಿಯ ಹಿಂದೆ ಹೋಗುವ ಪೊಲೀಸ್‌ ಆಧಿಕಾರಿಯ ಕಲರ್‌ ಫುಲ್‌ ಕತೆ ಎನ್ನುವುದು ಚಿತ್ರ ತಂಡ ಮಾತು.

ಎಸ್​ಎಸ್​ ಸ್ಟುಡಿಯೋಸ್ ಮತ್ತು ವಿಷನ್​ ಸಿನಿಮಾಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ನಿರ್ದೇಶನಕ ಸಿಂಪಲ್‌ ಸುನಿ ಬಿಡುಗಡೆ ಮಾಡಿದರು. ಟಾಲಿವುಡ್‌ ನಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ನೀಡುವುದರ ಜತೆಗೆ ನಿರ್ಮಾಪಕರಾಗಿಯೂ ಬಂಡವಾಳ ಹೂಡಿದ್ದಾರೆ. ವಿರಾಟ್‌ ಚಕ್ರವರ್ತಿ ಈ ಚಿತ್ರದ ನಿರ್ದೇಶಕ. ಅವರ ಪ್ರಕಾರ ಇದೊಂದು ಪಕ್ಕಾ ಆಕ್ಷನ್‌ ಕಮ್‌ ಲವ್‌ ಆಧರಿಸಿದ ಸಿನಿಮಾ. ಚೇತನ್‌ ಅವರ ಪಾತ್ರವೇ ತುಂಬಾ ಡಿಫೆರೆಂಟ್‌ ಅಂತೆ.

ಈ ಪಾತ್ರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ನಟ ಚೇತನ್‌, ದುಡ್ಡಿಗೋಸ್ಕರ ಏನು ಬೇಕಾದ್ರೂ ಮಾಡುವ ಪಾತ್ರ ನನ್ನದು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಏಕಕಾಲದಲ್ಲಿ ಎರಡೂ ಅವತರಣಿಕೆಯ ಶೂಟಿಂಗ್​ ಮಾಡಿದ್ದೇವೆ. ಕನ್ನಡದ ಜತೆಗೆ ತೆಲುಗು ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಒಂದೊಳ್ಳೆ ಹೊಸ ಅನುಭವ. ಅಷ್ಟೇ ಸಾಹಸ ದೃಶ್ಯಗಳೂ ಸಿನಿಮಾದ ಹೈಲೈಟ್ ಎಂದರು.

ಚಿತ್ರದಲ್ಲಿ ಎರಡೇ ಹಾಡುಗಳಿವೆಯಂತೆ. ಕರ್ನಾಟಕ ಸೇರಿ ಹೈದರಾಬಾದ್​ನಲ್ಲಿ ಚಿತ್ರದ ಶೂಟಿಂಗ್​ ನಡೆದಿದೆ. ಚೇತನ್ ಮತ್ತು ʼಹ್ಯಾಪಿಡೇಸ್ʼ ಸಿನಿಮಾ ಖ್ಯಾತಿಯ ಟೈಸನ್ ರಾಹುಲ್ ಮುಖ್ಯಭೂಮಿಕೆಯಲ್ಲಿದ್ದರೆ, ಸಾಕ್ಷಿ ಚೌಧರಿ, ಎಮಿ ಎಲಿ ಮತ್ತು ಐಶ್ವರ್ಯಾ ರಾಜ್​ ಈ ಚಿತ್ರದ ನಾಯಕಿಯರು. ಉಳಿದಂತೆ ಇಂತುರಿ ವಾಸು, ಶರತ್ ಲೋಹಿತಾಶ್ವ, ಶೇಕಿಂಗ್ ಶೇಷು, ಭದ್ರಂ, ಅನ್ನಪೂರ್ಣಮ್ಮ, ಸಮೀರ್ ಪೋಷಕ ಪಾತ್ರದಲ್ಲಿದ್ದಾರೆ. ನಾಗಂ ತಿರುಪತಿ ರೆಡ್ಡಿ ಈ ಚಿತ್ರಕ್ಕೆ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಶ್ರೀಕಾಂತ್ ದೀಪಾಲ್ ಸಹ ನಿರ್ಮಾಪಕರಾಗಿದ್ದಾರೆ. ಏಪ್ರಿಲ್‌ ತಿಂಗಳಿನಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Categories
ಸಿನಿ ಸುದ್ದಿ

ಶೂಟಿಂಗ್‌ ವೇಳೆ ನಟ ಜಾನ್ ಅಬ್ರಾಹಂಗೆ ಗಾಯ- ಅಟ್ಯಾಕ್‌ ಸಿನಿಮಾದಲ್ಲಿ ಅವಘಡ

ಸಿನಿಮಾ ಅಂದಮೇಲೆ ರಿಸ್ಕ್‌ ಇದ್ದೇ ಇರುತ್ತೆ. ಅದರಲ್ಲೂ ಈ ಸ್ಟಂಟ್‌ ವಿಚಾರಕ್ಕೆ ಬಂದರೆ, ಸಾಕಷ್ಟು ಎಚ್ಚರದಿಂದ ಇರಲೇಬೇಕು. ಎಷ್ಟೇ ಎಚ್ಚರವಹಿಸಿದರೂ, ಒಂದಷ್ಟು ಸಮಸ್ಯೆಗಳು ಸಹಜ. ಸಣ್ಣಪುಟ್ಟ ಗಾಯಗಳ ಜೊತೆಗೆ ಅದೆಷ್ಟೋ ಫೈಟರ್ಸ್‌, ಮಾಸ್ಟರ್ಸ್‌ ಕೂಡ ನೋವು ಅನುಭವಿಸಿರುವುದುಂಟು. ಇಲ್ಲೀಗ ಹೇಳಹೊರಟಿರುವ ವಿಷಯ, ಬಾಲಿವುಡ್‌ ನಟ ಜಾನ್‌ ಅಬ್ರಾಹಂ ಕುರಿತು. ಹೌದು, ಜಾನ್‌ ಅಬ್ರಾಹಂ ಅವರು ಶೂಟಿಂಗ್‌ ಟೈಮ್‌ನಲ್ಲಿ ಫೈಟ್‌ ಸೀನ್‌ ಮಾಡುವಾಗ ಗಾಯಗೊಂಡಿದ್ದಾರೆ.

“ಅಟ್ಯಾಕ್‌” ಎನ್ನುವ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಫೈಟ್‌ ಸೀನ್‌ ವೇಳೆ ಟ್ಯೂಬ್‌ಲೈಟ್‌ನಿಂದ ಡಾನ್‌ಗಳು ನಟ ಜಾನ್‌ ಅಬ್ರಾಹಂ ಅವರ ಮೇಲೆ ಹಲ್ಲೆ ಮಾಡುವ ದೃಶ್ಯವದು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಬ್ರಾಹಂ ಅವರಿಗೆ ಪೆಟ್ಟಾಗಿದೆ. ತಕ್ಷಣವೇ ಶೂಟಿಂಗ್‌ ನಿಲ್ಲಿಸಿದ ಚಿತ್ರತಂಡ ಅವರ ಆರೋಗ್ಯ ವಿಚಾರಿಸಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಾನ್ ಅಬ್ರಾಹಂ, “ನನಗೆ ಗಂಭೀರ ಗಾಯವಾಗಿಲ್ಲ. ಯಾರೂ ಕೂಡ ಭಯಪಡಬೇಕಿಲ್ಲ” ಎಂದು ಹೇಳಿದ್ದಾರೆ.

Categories
ಸಿನಿ ಸುದ್ದಿ

ಬಾಲಿವುಡ್ ನಟ ಸಂದೀಪ್ ನಹರ್‌ ಆತ್ಮಹತ್ಯೆ

ಅಕ್ಷಯ್ ಕುಮಾರ್ ನಟನೆಯ ‘ಕೇಸರಿ’, ‘ಧೋನಿ’ ಬಯೋಪಿಕ್‌ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟ ಸಂದೀಪ್ ನಹರ್ ನಿನ್ನೆ ಮುಂಬೈನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ‘ಕೆಹ್ನೆ ಕೋ ಹಮ್‌ಸಫರ್ ಹೈ’ ಸೇರಿದಂತೆ ಕೆಲವು ಹಿಂದಿ ಸರಣಿಗಳ ನಟನಾಗಿಯೂ ಅವರು ಚಿರಪರಿಚಿತರು. ಆತ್ಮಹತ್ಯೆಗೂ ಮುನ್ನ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಅವರು ಸೂಸೈಡ್ ನೋಟ್ ಬರೆದಿದ್ದು, ತಮ್ಮ ನಿರ್ಧಾರಕ್ಕೆ ಪತ್ನಿ ಮತ್ತು ಅತ್ತೆಯ ಕಿರುಕುಳ ಕಾರಣ ಎಂದಿದ್ದಾರೆ.

ಸಂಗೀಪ್ ನಹರ್ ಎರಡು ವರ್ಷಗಳ ಹಿಂದೆ ಕಂಚನ್ ಅವರನ್ನು ವರಿಸಿದ್ದರು. ಇವರ ದಾಂಪತ್ಯದಲ್ಲಿ ವಿರಸ ತಲೆದೋರಿದ್ದು, ದಂಪತಿ ಮಧ್ಯೆ ಮನಸ್ತಾಪವಿತ್ತು ಎನ್ನಲಾಗಿದೆ. “ಆತ್ಮಹತ್ಯೆ ನಿರ್ಧಾರದ ಬಗ್ಗೆ ನನಗೆ ಖೇದವಿದೆ. ಇಂಥದ್ದೊಂದು ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಾನು ದಾಂಪತ್ಯ ಬದುಕು ಸರಿಪಡಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಕೊನೆಗೂ ನನಗೆ ಒಳಿತಾಗಲಿಲ್ಲ. ಜೀವನದಲ್ಲಿ ನಾನು ನರಕವನ್ನೇ ನೋಡಿದ್ದೇನೆ. ಹಾಗಾಗಿ ಸಂತೋಷದಿಂದ ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ” ಎಂದು ಸೂಯಿಸೈಡ್‌ ನೋಟ್‌ ಅಲ್ಲಿ ಬರೆದುಕೊಂಡಿದ್ದಾರೆ ಸಂದೀಪ್‌.

ವೈಯಕ್ತಿ ಕಾರಣಗಳಲ್ಲದೆ ಬಾಲಿವುಡ್‌ನಲ್ಲಿ ರಾಜಕೀಯದ ಬಗ್ಗೆಯೂ ಅವರು ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ನಟನಾಗಿ ಅಲ್ಲಿ ತಾವು ಹೇಗೆ ಕಿರುಕುಳ ಅನುಭವಿಸಬೇಕಾಯ್ತು ಎನ್ನುವ ವಿವರಣೆ ಅಲ್ಲಿದೆ. “ಚಿಕ್ಕ ನಟರಿಗೆ ಬಾಲಿವುಡ್‌ನಲ್ಲಿ ತುಂಬಾ ಕಷ್ಟವಿದೆ. ಕೊನೆಯ ಹಂತದಲ್ಲಿ ನಮ್ಮ ಅವಕಾಶಗಳನ್ನು ಬೇರೆಯವರು ಕಸಿದುಬಿಡುತ್ತಾರೆ. ಇದು ಕಲಾವಿದರನ್ನು ಹತಾಶೆಗೆ ದೂಡುತ್ತದೆ” ಎಂದು ಬರೆದಿದ್ದಾರೆ ಸಂದೀಪ್‌.

Categories
ಸಿನಿ ಸುದ್ದಿ

ಖಾತೆಯಲ್ಲಿ ಹಣವಿಲ್ಲದಿದ್ದರೂ ಡಬ್ಬಿಂಗ್‌ ಜೋರು! ತಮ್ಮ ಪಾತ್ರಕ್ಕೆ ಉಮಾಶ್ರೀ ಮಾತು

ದಿಗಂತ್‌ ಹಾಗೂ ಐಂದ್ರಿತಾ ರೇ ಅಭಿನಯದ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೀಗ ಡಬ್ಬಿಂಗ್‌ ಕೆಲಸದಲ್ಲಿ ನಿರತವಾಗಿದೆ. ಚಿತ್ರಕ್ಕೆ ಪ್ರಜ್ವಲ್ ಪೈ ಅವರ‌ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಕೆಲಸ ನಡೆಯುತ್ತಿದ್ದು, ಇತ್ತೀಚೆಗೆ ಹಿರಿಯ ನಟಿ ಉಮಾಶ್ರೀ ಅವರು ತಮ್ಮ ಪಾತ್ರಕ್ಕೆ ಡಬ್‌ ಮಾಡಿದ್ದಾರೆ. ಸಾಗರ, ಸಿಗಂಧೂರು ಹಾಗೂ ಬೆಂಗಳೂರಿನ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಉಪ್ಪಿ ಎಂಟರ್ ಟೈನರ್ ಬ್ಯಾನರ್‌ನಲ್ಲಿ ಸಿಲ್ಕ್ ಮಂಜು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವಿನಾಯಕ ಕೋಡ್ಸರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.‌ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವ ಇರುವ ವಿನಾಯಕ ಕೋಡ್ಸರ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಔಿನಾಯಕ ಕೋಡ್ಸರ ಅವರದೇ ಕಥೆ, ಚಿತ್ರಕಥೆ ಇದಕ್ಕಿದೆ. ವೇಣು ಹಸ್ರಾಳಿ ಅವರು ಚಿತ್ರಕಥೆ ಜೊತೆಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಚಿತ್ರಕ್ಕೆ ಪ್ರಜ್ವಲ್ ಪೈ ಅವರ ಸಂಗೀತವಿದೆ. ರವೀಂದ್ರ ಜೋಶಿ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದು, ನಂದ ಕಿಶೋರ್ ಎನ್.ರಾವ್ ಅವರ ಛಾಯಾಗ್ರಹಣವಿದೆ.

ರಾಹುಲ್ ವಸಿಷ್ಠ ಅವರ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಶ್ವಜಿತ್‌ ರಾವ್ ಹಾಗೂ ತ್ರಿಲೋಕ್ ತ್ರಿವಿಕ್ರಂ ಸಾಹಿತ್ಯವಿದೆ. ಸಂಪೂರ್ಣ ಹಾಸ್ಯಮಯ ಕಥಾಹಂದರ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ರಂಜನಿ ರಾಘವನ್ ನಾಯಕಿಯಾಗಿದ್ದಾರೆ. ಕಾಸರಾಗೋಡು ಚಿನ್ನ, ಪಿ.ಡಿ.ಸತೀಶ್‌ ಹಾಗೂ ನೀನಾಸಂನ ಹಲವು ಪ್ರತಿಭಾವಂತರು ಇಲ್ಲಿದ್ದಾರೆ.

Categories
ಸಿನಿ ಸುದ್ದಿ

ನನ್ನ ಫೋಕಸ್‌ ಆಕ್ಟಿಂಗ್‌ ಕಡೆಗೆ ಮಾತ್ರ- ಮಾನ್ವಿತಾ ಕಾಮತ್‌, ʼಸಿನಿಲಹರಿʼ ಕಚೇರಿಗೆ ಭೇಟಿ ಕೊಟ್ಟು ಮನಬಿಚ್ಚಿ ಮಾತನಾಡಿದ ಟಗರು ಪುಟ್ಟಿ !

ಸದ್ಯಕ್ಕೆ ನನ್ನ ಫೋಕಸ್‌ ಆಕ್ಟಿಂಗ್‌ ಕಡೆಗೆ ಮಾತ್ರ. ಮುಂದಿನದ್ದು ನಾನು ಈಗಲೇ ಏನನ್ನು ಹೇಳೋದಿಲ್ಲ… ಇದು ʼಟಗರು ಪುಟ್ಟಿʼ ಖ್ಯಾತಿಯ ನಟಿ ಮಾನ್ವಿತಾ ಕಾಮತ್‌ ಕೊಟ್ಟ ಸ್ಪಷ್ಟನೆ. ಇತ್ತೀಚೆಗಷ್ಟೆ ” ಸಿನಿ ಲಹರಿʼ ಕಚೇರಿಗೆ ಔಪಚಾರಿಕವಾಗಿ ಭೇಟಿ ಕೊಟ್ಟಿದ್ದ ಅವರು, ತಮ್ಮ ಸಿನಿಜರ್ನಿ ಕುರಿತು ಸುದೀರ್ಘವಾಗಿ ಮಾತನಾಡಿದರು. ಅದೇ ವೇಳೆ, ನಟಿ ಮಾನ್ವಿತಾ ಕಾಮತ್ ಸಿನಿಮಾ ನಿರ್ದೇಶನಕ್ಕೆ ಕೈ ಹಾಕುತ್ತಿದ್ದಾರೆಂದು ಈ ಹಿಂದೆ ಕೇಳಿ ಬಂದ ಸುದ್ದಿಗೂ ಸ್ಪಷ್ಟನೆ ಕೊಟ್ಟರು.

” ನಾನು ನಟಿಯಾಗಿ ಸಿನಿಮಾ ರಂಗಕ್ಕೆ ಬಂದವಳು. ಸದ್ಯಕ್ಕೆ ನನ್ನ ಫೋಕಸ್‌ ಆಕ್ಟಿಂಗ್‌ ಕಡೆಗೆ ಮಾತ್ರ. ನಾಯಕಿಯಾಗಿ ಇನ್ನು ಬೇರೆ ಬೇರೆ ಪ್ರಯೋಗಾತ್ಮಕ ಪಾತ್ರಗಳಲ್ಲೂ ಅಭಿನಯಿಸುವ ಆಸೆ ಇದೆ. ಹೊಸ ಬಗೆಯ ಕಥೆಗಳಲ್ಲೂ ಕಾಣಿಸಿಕೊಳ್ಳುವ ಆಸೆ ಇದೆ. ಜತೆಗೆ ನನಗೆ ಇಷ್ಟವಾಗುವ ಪಾತ್ರಗಳು ಸಿಗುತ್ತಿವೆ. ಇಂತಹ ಸಮಯದಲ್ಲಿ ನಾನು ಇನ್ನೇನೋ ಮಾಡಲು ಹೊರಟಿದ್ದೇನೆಂದು ಹಬ್ಬಿರುವ ಗಾಸಿಪ್‌ ನಂಬಬೇಡಿ. ಸದ್ಯಕ್ಕೆ ಅಂತಹ ಆಲೋಚನೆ ನನ್ನಲ್ಲಿಲ್ಲ. ಈಗೇನಿದ್ದರೂ ನಾನು ನಟಿ ಮಾತ್ರʼ ಎನ್ನುವ ಮಾತುಗಳನ್ನು ಒತ್ತು ಕೊಟ್ಟು ಹೇಳಿದರು ʼಕೆಂಡ ಸಂಪಿಗೆʼಯ ಚೆಲುವೆ ಮಾನ್ವಿತಾ ಕಾಮತ್.‌ʼ

” ನನಗೆ ಪುಸ್ತಕ ಓದುವ ಅಭ್ಯಾಸ ಇದೆ. ಸಿನಿಮಾ ಶೂಟಿಂಗ್‌ ಟೈಮ್‌ ನಲ್ಲಿ ಸಮಯ ಸಿಕ್ಕಾಗೆಲ್ಲ ಪುಸ್ತಕ ಓದುತ್ತಿರುತ್ತೇನೆ. ಜತೆಗೆ ಬರವಣಿಗೆ ಕೂಡ ನನ್ನ ಅಭ್ಯಾಸ. ಆ ಬಗ್ಗೆ ಆಪ್ತರಲ್ಲಿ ಹೇಳಿಕೊಂಡಿದ್ದೆ. ಅದೇ ಇನ್ನೇನೋ ಅರ್ಥ ಬರುವ ಹಾಗಾಯಿತು. ನಟನೆ ಬಿಟ್ಟು ನಿರ್ದೇಶನಕ್ಕೆ ಹೋಗ್ತಾರಂತೆ ಮಾನ್ವಿತಾ ಅಂತೆಲ್ಲ ಸುದ್ದಿ ಆಯಿತು. ಇನ್ನು ಮುಂದೆ ಅದು ಹಾಗೋದಿಲ್ಲ. ಮುಂದಿನದ್ದು ಈಗಲೇ ಏನನ್ನು ಹೇಳೋದಿಲ್ಲ. ಬದಲಿಗೆ ನನಗೀಗ ನಟನೆಯೇ ಮುಖ್ಯ. ಒಳ್ಳೆಯ ಕತೆಗಳು ಬಂದರೆ ಒಪ್ಪಿಕೊಳ್ಳುವೆ. ಸಿನಿಮಾ‌ ಕ್ಷೇತ್ರದಲ್ಲಿ ಕಲಿಯುವುದು ಸಾಕಷ್ಟಿದೆ. ಎಷ್ಟು ಕಲಿತರೂ ಇನ್ನೂ ಕಲಿಯುವ ಹಂಬಲ ಇದೆʼ ಎನ್ನುವುದು ಮಾನ್ವಿತಾ ಮಾತು.

‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದ ನಂತರದ ಒಂದಷ್ಟು ಗ್ಯಾಪ್‌ ಬಳಿಕ ನಟಿ ಮಾನ್ವಿತಾ ಕಾಮತ್‌ ʼಶಿವ 143ʼ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಇದು ಜಯಣ್ಣ -ಭೋಗೇಂದ್ರ ನಿರ್ಮಾಣದ ಅದ್ಧೂರಿ ವೆಚ್ಚದ ಚಿತ್ರ. ವರನಟ ರಾಜ್‌ ಕುಮಾರ್‌ ಮೊಮ್ಮಗ, ನಟ ರಾಮ್‌ ಕುಮಾರ್‌ ಪುತ್ರ ಧಿರೇನ್‌ ರಾಮ್‌ಕುಮಾರ್‌ ಅಭಿನಯದ ಚೊಚ್ಚಲ ಚಿತ್ರ. ಈ ಚಿತ್ರದಲ್ಲಿ ವಿಭಿನ್ನ ಬಗೆಯ ಪಾತ್ರದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿರುವ ಮಾನ್ವಿತಾ, ಆ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು ಹೌದು.


” ನಿಜ, ನಂಗಿದು ತುಂಬಾ ಸ್ಪೆಷಲ್‌ ಸಿನಿಮಾ. ಅದಕ್ಕೆ ಕಾರಣ ಹಲವು. ಮೊದಲಿಗೆ ಇದೊಂದು ಅದ್ದೂರಿ ವೆಚ್ಚದ ಸಿನಿಮಾ ಎನ್ನುವುದು. ಅದರ ಜತೆಗೆ ನಿರ್ದೇಶಕ ರವಿಕುಮಾರ್‌ ಅವರ ಸಿನಿಮಾ ಮೇಕಿಂಗ್‌ ಶೈಲಿ. ಹಾಗೆಯೇ ಡಾ, ರಾಜ್‌ ಕುಮಾರ್‌ ಅವರ ಮೊಮ್ಮಗ ಧಿರೇನ್‌ ಅಭಿನಯದ ಚೊಚ್ಚಲ ಸಿನಿಮಾ. ಇವಿಷ್ಟು ವಿಶೇಷತೆಗಳಿರುವ ಸಿನಿಮಾದಲ್ಲಿ ನಾನಿದ್ದೇನೆ ಎನ್ನುವ ಖುಷಿಯಿದೆ. ದೊಡ್ಡ ಮಟ್ಟದಲ್ಲಿ ಅದರು ಸದ್ದು ಮಾಡಲು ರೆಡಿಯಾಗಿದೆ. ಸದ್ಯಕ್ಕೆ ನಾವೀಗ ಅದರ ಪ್ರಮೋಷನ್‌ ಕಾರ್ಯಕ್ರಮದಲ್ಲೇ ಬ್ಯುಸಿ ಆಗಿದ್ದೇವೆʼ ಎನ್ನುತ್ತಾರೆ ಟಗರು ಪುಟ್ಟಿ.

Categories
ಸಿನಿ ಸುದ್ದಿ

ತಾಪ್ಸಿ ‘ಲೂಪ್‌ ಲಪೇಟಾ’ ರಿಲೀಸ್‌ಗೆ ರೆಡಿ!

 ವಿಶ್ಲೇಷಕರು ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಜರ್ಮನ್ ಸಿನಿಮಾ ‘ರನ್‌ ಲೋಲಾ ರನ್‌’ ರೀಮೇಕ್‌ ‘ಲೂಪ್ ಲಪೇಟಾ’. ತಾಪ್ಸಿ ಪನ್ನು ಮತ್ತು ತಾಹಿರ್ ರಾಜ್ ನಟನೆಯ ಈ ಹಿಂದಿ ಸಿನಿಮಾ ಈಗ ತೆರೆಗೆ ಸಿದ್ಧವಾಗಿದೆ. ಬಾಲಿವುಡ್‌ನಲ್ಲಿ ಈ ಜರ್ಮನ್ ರೀಮೇಕ್‌ ಬಗ್ಗೆ ದೊಡ್ಡ ನಿರೀಕ್ಷೆ ಇರುವುದಂತೂ ಹೌದು. ಆಕಾಶ್ ಭಾಟಿಯಾ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರದ ಬಗ್ಗೆ ನಟಿ ತಾಪ್ಸಿ ಅಪಾರ ಭರವಸೆ ಹೊಂದಿದ್ದಾರೆ.


ಈ ಚಿತ್ರದ ಸ್ಕ್ರಿಪ್ಟ್ ಕೇಳಿದಾಗ ಮೊದಲು ತಾಪ್ಸಿ ಒಲ್ಲೆ ಎಂದಿದ್ದರಂತೆ. ಅದರೆ ಅದನ್ನು ನಿರ್ದೇಶಕರು ಸಾವಧಾನವಾಗಿ ನಿರೂಪಿಸಿದಾಗ ಕೂಡಲೇ ಒಪ್ಪಿಗೆ ಕೊಟ್ಟಿದ್ದಾರೆ. “ಕೆಲವು ಬಾರಿ ನಾನಾಗಿಯೇ ಸಿನಿಮಾಗಳ ಹಿಂದೆ ಹೋಗುತ್ತೇನೆ. ಇನ್ನು ಕೆಲವು ತಾನಾಗಿಯೇ ನನ್ನ ಪಾಲಿಗೆ ಒದಗಿಬರುತ್ತವೆ. ಈ ಲೂಪ್‌ ಲಪೇಟಾ ಅಂಥ ಚಿತ್ರಗಳಲ್ಲೊಂದು. ಇಂಥದ್ದೊಂದು ಅವಕಾಶಕ್ಕೆ ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ ತಾಪ್ಸಿ.


‘ರನ್ ಲೋಲಾ ರನ್‌’ ಜರ್ಮನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಫ್ರಾಂಕಾ ಪೊಟೆಂಟ್‌ ಮತ್ತು ಮಾರಿಟ್ಝ್‌ ಬ್ಲೀಬ್‌ಟ್ರೂ ನಟಿಸಿದ್ದಾರೆ. ಫ್ರಾಂಕಾ ಪಾತ್ರದಲ್ಲಿ ತಾಪ್ಸಿ ಕಾಣಿಸಿಕೊಂಡಿದ್ದು, ಹಿಂದಿ ಅವತರಣಿಕೆಯಲ್ಲಿ ಅವರ ಹೆಸರು ‘ಸವಿ’. ಚಿತ್ರದ ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.

Categories
ಸಿನಿ ಸುದ್ದಿ

ಹೀರೋ ಆಗಿ ಜಿಮ್ ರವಿ – ಅವರೀಗ ಪುರುಷೋತ್ತಮ

ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಎ.ವಿ.ರವಿ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ‌ ಗುರುತಿಸಿಕೊಂಡಿದ್ದ ರವಿ ಅವರನ್ನು ಅಭಿಮಾನದಿಂದ ಜಿಮ್‌ರವಿ ಎಂದೇ ಕರೆಯುವುದುಂಟು. ರವಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ‌ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಈವರೆಗೆ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ಅವರು, ’ರವಿ ಜಿಮ್’ ತರಬೇತಿ ಶಾಲೆ ಶುರು ಮಾಡಿ ಕಳೆದ ಮೂರು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.

ಈವರೆಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ರವಿ ಈಗ ಪೂರ್ಣ ಪ್ರಮಾಣದ ಹೀರೋ ಆಗಿದ್ದಾರೆ. ಹೌದು ರವಿ ಈಗ, ’ಪುರುಷೋತ್ತಮ’ ಚಿತ್ರಕ್ಕೆ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು, ರವಿಸ್ ಜಿಮ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರೇಮಿಗಳ ದಿನದಂದು ಅದ್ದೂರಿಯಾಗಿ ಚಿತ್ರದ ಮಹೂರ್ತ ನಡೆಯಿತು. ಕಲಾಸಾಮ್ರಾಟ್ ಎಸ್.ನಾರಾಯಣ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ಜೈಜಗದೀಶ್, ವಿಜಯಲಕ್ಷೀಸಿಂಗ್, ತುರುವೆಕೆರೆ ಶಾಸಕ ಮಸಾಲೆಜಯರಾಂ ಮುಂತಾದವರು ಶುಭ ಹಾರೈಸಿದ್ದಾರೆ.
ಚಿತ್ರಕ್ಕೆ ಎಸ್.ವಿ.ಅಮರನಾಥ್ ನಿರ್ದೇಶಕರು. ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಜವಬ್ದಾರಿ ಕೂಡ ಅವರದೇ.

ತಮ್ಮ ಸಿನಿಮಾ ಕುರಿತು ಹೇಳಿಕೊಂಡ ನಿರ್ದೇಶ ಎಸ್.ವಿ.ಅಮರನಾಥ್‌, ರವಿ ಅವರನ್ನು ಈವರೆಗೆ ಕ್ರೀಡಾಪಟು, ಕಲಾವಿದರನ್ನಾಗಿ ನೋಡಿದ್ದೀರಾ. ಈಗ ಅವರಲ್ಲಿರುವ ಹೊಸ ಪ್ರತಿಭೆಯನ್ನು ಬೇರೆ ರೀತಿ ಪರದೆ ಮೇಲೆ ತೋರಿಸವ ಪ್ರಯತ್ನ ಇಲ್ಲಿ ಮಾಡಲಾಗುತ್ತಿದೆ. ಹಾಗಂತ ಇಲ್ಲಿ ಕ್ರೀಡೆ, ಆಕ್ಷನ್ ದೃಶ್ಯಗಳು ಇರುವುದಿಲ್ಲ. ಪೂರ್ಣ ಪ್ರಮಾಣದ ಹಾಸ್ಯದ ಎಳೆಯಲ್ಲೇ ಕಥೆ ಸಾಗುತ್ತದೆ. ಮಧ್ಯಮ ವರ್ಗದ ಕುಟುಂಬದವರು ಪ್ರತಿ ನಿತ್ಯ ಏನಾದರೂ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಆ ರೀತಿಯ ದೊಡ್ಡ ಚಾಲೆಂಜ್ ಇವರ ಬದುಕಲ್ಲಿ ಬಂದಾಗ, ಅದನ್ನು ಹೇಗೆ ನಿಭಾಯಿಸುತ್ತಾರೆ. ಇಲ್ಲಿ ನಾಯಕ ದೇಹ ಶಕ್ತಿಯನ್ನು ಪ್ರದರ್ಶಿಸದೆ, ಕೇವಲ ಬುದ್ದಿ ಶಕ್ತಿಯಿಂದ ಹೇಗೆಲ್ಲಾ ಅವಘಡಗಳನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಸಾರಾಂಶ.

ಬೆಂಗಳೂರು, ಮೈಸೂರು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ನಿರ್ಮಾಪಕರು ಕಥೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಇಲ್ಲಿ ವ್ಯವಸ್ಥೆಗೊಳಿಸಿದ್ದಾರೆ. ನಾಯಕಿ ಸೇರಿದಂತೆ ಇತರೆ ಆಯ್ಕೆ ಪ್ರಕ್ರಿಯೆ ಇಷ್ಟರಲ್ಲೇ ಆಗಬೇಕಿದೆ ಎನ್ನುತ್ತಾರೆ ಅವರು.
ಮೊದಲ ಸಲ ತೆರೆ ಮೇಲೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ರವಿ, ಡಾ.ರಾಜ್‌ಕುಮಾರ್ ಅಭಿಮಾನಿಯಾಗಿ, ಅಣ್ಣಾವ್ರು ಹೇಳಿದ ಒಂದು ಮಾತನ್ನು ಇಂದಿಗೂ ಉಳಿಸಿಕೊಂಡಿದ್ದೇನೆ. ನಾಯಕನಿಂದ ಒದೆ ತಿನ್ನಿಸಿಕೊಳ್ಳುತ್ತಿರುವ ದೃಶ್ಯಗಳನ್ನು ನೋಡಿತ್ತಿದ್ದ ಹಿತೈಷಿಗಳು, ನೀವು ಯಾವಾಗ ಹೀರೋ ಆಗೋದು ಅಂತ ಕೇಳುತ್ತಲೇ ಇದ್ದರು.

ಅದಕ್ಕೆ ಈಗ ಕಾಲ ಕೂಡಿಬಂದಿದೆ. ನಿರ್ದೇಶಕರು ಯಾವುದೇ ಪಾತ್ರ ಕೊಟ್ಟರೂ ಶ್ರದ್ಧೆಯಿಂದ ಮಾಡುತ್ತಿದ್ದೆ. ನಾನು ಹಣದ ಹಿಂದೆ ಯಾವತ್ತು ಹೋಗಿರಲಿಲ್ಲ. ಈ ಚಿತ್ರದ ಪಾತ್ರಕ್ಕಾಗಿ ಹದಿನೆಂಟು ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ” ಎಂದು ಮನವಿ ಮಾಡಿಕೊಂಡರು. ಆನಂದ್‌ ಪ್ರಿಯಾ, ಪ್ರಮೋದ್‌ ಮರವಂತೆ ಸಾಹಿತ್ಯವಿದೆ. ಶ್ರೀಧರ್.ವಿ.ಸಂಭ್ರಮ್ ಸಂಗೀತವಿದೆ. ಅರ್ಜುನ್ ಕಿಟ್ಟು ಸಂಕಲನವಿದೆ. ಬೇಬಿ ಅಂಕಿತಮೂರ್ತಿ ಇತರರು ಇದ್ದರು.

Categories
ಸಿನಿ ಸುದ್ದಿ

ಸಖತ್‌ ಸೌಂಡ್‌ ಮಾಡಿದ ಶುಗರ್ ಫ್ಯಾಕ್ಟರಿ ಫಸ್ಟ್‌ ಲುಕ್‌ ಪೋಸ್ಟರ್‌ !

ನಟ ಡಾರ್ಲಿಂಗ್‌ ಕೃಷ್ಣ ಹಾಗೂ ಸೊನಾಲ್‌ ಮಾಂಟೆರೊ ಅಭಿನಯದ ʼಶುಗರಿ ಫ್ಯಾಕ್ಟರಿʼ ಸೌಂಡ್‌ ಮಾಡುತ್ತಿದೆ. ಚಿತ್ರಕ್ಕೆ ಈಗ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಬೆಂಗಳೂರು ಸುತ್ತ ಮುತ್ತ  12 ದಿನಗಳ ಕಾಲ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ನಡೆಸಿದೆ ಚಿತ್ರ ತಂಡ. ಡಾರ್ಲಿಂಗ್‌ ಕೃಷ್ಣ, ಸೊನಾಲ್‌ ಮಾಂಟೆರೊ ಜತೆಗೆ ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ, ರಂಗಾಯಣ ರಘು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಸೂರಜ್ ಮತ್ತಿತರರು ಚಿತ್ರದಲ್ಲಿದ್ದು, ಪಕ್ಕ ಲವ್‌ ಸ್ಟೋರಿಯ ಮೂಲಕ ಈ ಚಿತ್ರ ಕುತೂಹಲ ಮೂಡಿಸಿದೆ.


ಈ ಮಧ್ಯೆ ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಫೆ. 14 ರಂದು  ಚಿತ್ರ ತಂಡ ಲಾಂಚ್‌ ಮಾಡಿದ್ದ ಚಿತ್ರದ ಫಸ್ಟ್‌ ಲುಕ್‌ ಭರ್ಜರಿ ಸದ್ದು ಮಾಡಿದೆ. ಸಿನಿಮಾ ಅಭಿಮಾನಿಗಳಿಂದ ಈ ಪೋಸ್ಟರ್‌ ಗೆ ಸಖತ್‌ ಮೆಚ್ಚುಗೆ ಸಿಕ್ಕಿದ್ದು ಚಿತ್ರ ತಂಡಕ್ಕೂ ಖುಷಿ ಕೊಟ್ಟಿದೆ. ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿರ್ದೇಶನ ಈ ಚಿತ್ರಕ್ಕೆ ಮಾರ್ಚ್‌ ಎರಡನೇ ವಾರ ಗೋವಾದಲ್ಲಿ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆಯಂತೆ. ಸದ್ಯಕ್ಕೆ ಚಿತ್ರ ತಂಡ ಅದರ ಸಿದ್ಧತೆಯಲ್ಲಿ ಬ್ಯುಸಿ ಆಗಿದೆ. ಬಾಲ ಮಣಿ ಪ್ರೊಡಕ್ಷನ್‌ ಲಾಂಛನದಲ್ಲಿ ಆರ್.‌ ಗಿರೀಶ್‌ ಈ ಚಿತ್ರ ನಿರ್ಮಿಸುತ್ತಿದ್ದು, ಸಂತೋಷ್‌ ರೆ ಪಾತಾಜೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆಯುತ್ತಿದ್ದಾರೆ.

Categories
ಸಿನಿ ಸುದ್ದಿ

ರಿತೇಷ್‌-ಜೆನಿಲಿಯಾ ದಂಪತಿಗೆ ಸುದೀಪ್‌ ಪಾರ್ಟಿ! ಮುಂಬೈಯಲ್ಲಿ ಕಿಚ್ಚ!

ಸಿನಿಮಾ ಬದುಕಿನ ಇಪ್ಪತ್ತೈದು ವರ್ಷ ಪೂರೈಸಿದ ಸಂಭ್ರಮದಲ್ಲಿರುವ ನಟ ಕಿಚ್ಚ ಸುದೀಪ್ ಇದೀಗ ಮುಂಬಯಿಯಲ್ಲಿದ್ದಾರೆ. ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಅವರಿಗೆ ಬಾಲಿವುಡ್‌ನಲ್ಲಿ ಹಲವು ಆಪ್ತ ಗೆಳೆಯರಿದ್ದಾರೆ. ಆಗಿಂದಾಗ್ಗೆ ಕಾಣಿಸುವ ಬಾಲಿವುಡ್ ನಟ-ನಟಿಯರೊಂದಿಗಿನ ಸುದೀಪ್ ಫೋಟೋಗಳು ಇದನ್ನು ಸಾರಿ ಹೇಳುತ್ತವೆ. ರಿತೇಷ್ ದೇಶ್‌ಮುಖ್ ಮತ್ತು ಜೆನಿಲಿಯಾ ತಾರಾದಂಪತಿಗೆ ನಿನ್ನೆ ಸುದೀಪ್‌ ಔತಣಕೂಟ ಏರ್ಪಡಿಸಿದ್ದಾರೆ. ನಟಿ ಜೆನಿಲಿಯಾ ಟ್ವಿಟರ್‌ನಲ್ಲಿ ಪಾರ್ಟಿ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

“ನಾವು ಕಂಡ ಅಪರೂಪದ ವ್ಯಕ್ತಿತ್ವದ ಸುದೀಪ್‌ ಜೊತೆಗಿನ ಔತಣಕೂಟ ಸೂಪರ್ ಆಗಿತ್ತು. ನಾವು ಸಾಕಷ್ಟು ನೆನಪುಗಳನ್ನು ಮೆಲುಕು ಹಾಕಿದೆವು. ನಿಜಕ್ಕೂ ಸುದೀಪ್ ಪತ್ನಿ ಪ್ರಿಯಾ ಮತ್ತು ಪುತ್ರಿ ಸಾನ್ವಿಯನ್ನು ಮಿಸ್ ಮಾಡಿಕೊಂಡೆವು” ಎಂದು ಜೆನಿಲಿಯಾ ಫೊಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುದೀಪ್‌, “ನೀವಿಬ್ಬರೂ ಇದ್ದೆಡೆ ಸಾಕಷ್ಟು ಎನರ್ಜಿ ಇರುತ್ತದೆ. ಲವ್ ಯೂ!” ಎಂದು ಟ್ವೀಟಿಸಿದ್ದಾರೆ. ಸದ್ಯ ಸುದೀಪ್ ತಮ್ಮ ಮಹತ್ವಾಕಾಂಕ್ಷೆಯ ‘ವಿಕ್ರಾಂತ್ ರೋಣಾ’ ಚಿತ್ರದ ಪ್ರೊಮೋಷನ್ ಮೂಡ್‌ನಲ್ಲಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ನಟಿಸಿದ್ದಾರೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ರಾಧೆ ಶ್ಯಾಮ್ ಟೀಸರ್ ಔಟ್ – ಅಭಿಮಾನಿಗಳಿಗೆ ಇದು ವ್ಯಾಲೆಂಟೇನ್ ಗಿಫ್ಟ್


ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್’ ಟೀಸರ್ ಪ್ರೇಮಿಗಳ ದಿನವಾದ ಇಂದು ಬಿಡುಗಡೆಯಾಗಿದೆ. ರಾಧಾಕೃಷ್ಣ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ರೊಮ್ಯಾಂಟಿಕ್ ಸಿನಿಮಾ ತೆಲುಗು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಕನ್ನಡ, ತಮಿಳು ಮತ್ತು ಮಲಯಾಳಂ ಡಬ್ಬಿಂಗ್ ಅವತರಣಿಕೆಗಳು ತೆರೆಕಾಣಲಿವೆ. ಸದ್ಯ ಈಗ ತೆಲುಗು ಟೀಸರ್ ಬಿಡುಗಡೆಯಾಗಿದ್ದು, ‘ಬಾಹುಬಲಿ’ಯ ಆಕ್ಷನ್ ಹೀರೋ ಪ್ರಭಾಸ್ ಇಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಅನುಭೂತಿ ನೀಡುವ ಹಿನ್ನೆಲೆ, ವಿದೇಶದ ಆಕರ್ಷಕ ರೈಲ್ವೆ ನಿಲ್ದಾಣವೊಂದರ ಸನ್ನಿವೇಶ ಟೀಸರ್ ನಲ್ಲಿದೆ. ನಾಯಕ ತುಂಟುತನದಿಂದ ಕೂಗುತ್ತಾ ನಾಯಕಿಯನ್ನು ಒಲೈಸುವ ಈ ಪುಟ್ಟ ಸೀನ್ ಇದೊಂದು ರೊಮ್ಯಾಂಟಿಕ್ ಸಿನಿಮಾ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತದೆ. “ನೀನು ರೋಮಿಯೋ ಎಂದುಕೊಂಡಿದ್ದೀಯಾ?” ಎನ್ನುವ ನಾಯಕಿಯ ಪ್ರಶ್ನೆಗೆ ನಾಯಕ,

“ನಾನು ಅವನಂತೆ ಅಲ್ಲ. ಅವನು ಪ್ರೀತಿಗಾಗಿ ಸಾಯುತ್ತಾನೆ. ಆದರೆ ನಾನು ಹಾಗಲ್ಲ!” ಎನ್ನುತ್ತಾನೆ.
‘ರಾಧೆ ಶ್ಯಾಮ್’ ಚಿತ್ರದ ಶೂಟಿಂಗ್ ಕೋವಿಡ್‌ನಿಂದಾಗಿ ಕಳೆದ ಮಾರ್ಚ್‌ನಲ್ಲಿ ಸ್ಥಗಿತಗೊಂಡಿತ್ತು. ಡಿಸೆಂಬರ್‌ನಲ್ಲಿ ಮತ್ತೆ ಚಿತ್ರೀಕರಣ ಆರಂಭವಾಗಿ ಇನ್ನೇನು ಮುಗಿಯುವ ಹಂತದಲ್ಲಿದೆ.

ಚಿತ್ರದ ಇತರೆ ತಾರಾಬಳಗದಲ್ಲಿ ಸತ್ಯರಾಜ್, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಜಗಪತಿ ಬಾಬು, ಜಯರಾಂ ನಟಿಸುತ್ತಿದ್ದಾರೆ. ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ತೆಲುಗು ಅವತರಣಿಕೆಗೆ ಜಸ್ಟಿನ್ ಪ್ರಭಾಕರ್ ಸಂಗೀತ ಸಂಯೋಜಿಸಿದ್ದರೆ ಹಿಂದಿಗೆ ಮಿಥುನ್ ಮತ್ತು ಮನನ್ ಭಾರದ್ವಾಜ್ ಸಂಗೀತ ನೀಡಿದ್ದಾರೆ.

error: Content is protected !!