ಬಹುನಿರೀಕ್ಷಿತ ‘ರಾಬರ್ಟ್ ‘ ಚಿತ್ರದ ಬಿಡುಗಡೆಯ ಭರ್ಜರಿ ಕುತೂಹಲದ ನಡುವೆಯೇ ನಟ ದರ್ಶನ್ ರಾಜ್ಯ ಕೃಷಿ ಇಲಾಖೆಯ ಪ್ರಚಾರ ರಾಯಭಾರಿಯಾಗಿ ನೇಮಕ ಗೊಂಡಿದ್ದು, ನಾಳೆ ಅಧಿಕೃತ ವಾಗಿ ಅವರು ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ಈ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಾಳೆ ವಿಕಾಸ ಸೌಧದಲ್ಲಿ ನಡೆಯುತ್ತಿದೆ. ಕೃಷಿಸಚಿವ ಬಿ.ಸಿ. ಪಾಟೀಲ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
ದರ್ಶನ್ ಪಾಲಿಗೆ ಇದು ಸಿನಿಮಾದಷ್ಟು ಕಲರ್ ಫುಲ್ ವೇದಿಕೆ ಅಲ್ಲ. ಆದರೆ ಸಿನಿಮಾದಾಚೆ ದೊಡ್ಡ ಅವಕಾಶ. ರಾಜ್ಯದ ಕೃಷಿ ವಲಯಕ್ಕೆ ಬ್ರಾಂಡ್ ಆಗಿ ಗುರುತಿಸಿಕೊಳ್ಳುವ ಸದಾವಕಾಶ. ಹಾಗಂತ ಅವರಿಗೇನು ಕೃಷಿ ಬದುಕು ಹೊಸದಲ್ಲ. ನಟನೆಯ ಜತೆಗೆಯೇ ಅವರೊಬ್ಬ ಪ್ರಾಣಿಪ್ರಿಯ, ವನ್ಯಜೀವಿ ಛಾಯಾಗ್ರಾಹಕ, ಹಾಗೆಯೇ ತಮ್ಮದೇ ಫಾರ್ಮ್ ಹೊಂದಿ ಕೃಷಿ ಮಾಡಿದ್ದು ಎಲ್ಲರಿಗೂ ಗೊತ್ತು. ಅದೇ ಹಾದಿಯಲ್ಲೀಗ ಇನ್ನೊಂದು ಸದಾವಕಾಶ. ಕೃಷಿ ಇಲಾಖೆಯ ಬ್ರಾಂಡ್ ಅಂಬಾಸಿಡರ್. ಸದ್ಯಕ್ಕೆ ಅವರು ಕೃಷಿ ಇಲಾಖೆಯ ಬ್ರಾಂಡ್ ಅಂಬಾಸಡರ್ ಅಂತಷ್ಟೇ ಇಲಾಖೆ ಪ್ರಕಟಿಸಿದೆ. ಅವರ ಮೂಲಕ ಕೃಷಿ ಇಲಾಖೆ ಕಾರ್ಯಕ್ರಮ ಗಳನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬಲ್ಲದು, ಅದಕ್ಕೆ ದರ್ಶನ್ ಹೇಗೆ ಸಹಕರಿಸುತ್ತಾರೆಂಬುದು ಮಾತ್ರ ಇನ್ನು ಬಾಕಿ ಇದೆ.