Categories
ಸಿನಿ ಸುದ್ದಿ

ಕಿರುತೆರೆಯಲ್ಲಿ ಇನ್ನುಂದೆ ಸೀರಿಯಲ್‌ಗಳದ್ದು ರಿಪೀಟ್‌ ಕಥೆಯಷ್ಟೇ..! ಇದು ಶೂಟಿಂಗ್ ಸ್ಥಗಿತದ ಎಫೆಕ್ಟ್..!!

ಸಿನಿಮಾ ನಂತರ ಈಗ ಸೀರಿಯಲ್‌ ಜತೆಗೆ ರಿಯಾಲಿಟಿ ಶೋಗಳಿಗೂ ಚಿತ್ರೀಕರಣ ಇಲ್ಲ. ಲಾಕ್‌ಡೌನ್‌ ಮಾರ್ಗಸೂಚಿಯ ಅನ್ವಯ ನಾಳೆಯಿಂದಲೇ ಕನ್ನಡದ ಎಲ್ಲಾ ಕಿರುತೆರೆಯ ಸೀರಿಯಲ್‌ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳ್ಳುತ್ತಿದೆ. ಹಾಗಂತ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಅನೌನ್ಸ್‌ಮಾಡಿದೆ.

ಅಷ್ಟೇ ಅಲ್ಲ, ಅಸೋಷಿಯೇಷನ್‌ ಕರೆಗೂ ಬೆಲೆ ಕೊಡದೆ ಯಾವುದಾದರೂ ಸೀರಿಯಲ್‌ ಅಥವಾ ರಿಯಾಲಿಟಿ ಶೋ ಗೆ ಚಿತ್ರೀಕರಣ ನಡೆದಿದ್ದಾದಲ್ಲಿ ಅದಕ್ಕೆ ಅದೇ ತಂಡದವರೇ ಹೊಣೆಗಾರರು. ಕೋವಿಡ್‌ಮಾರ್ಗಸೂಚಿ ಅನ್ವಯ ಮುಂದೆ ಪೊಲೀಸರು ಕೈಗೊಳ್ಳುವ ಕ್ರಮಗಳಿಗೆ ತಾವು ಜವಾಬ್ದಾರಿ ಅಲ್ಲ ಅಂತಲೂ ಅಸೋಷಿಯೇಷನ್‌ ಅಧ್ಯಕ್ಷ ಶಿವಕುಮಾರ್‌ ಎಚ್ಚರಿಸಿದ್ದಾರೆ. ಅಲ್ಲಿಗೆ ನಾಳೆಯಿಂದ ಎಲ್ಲಾ ಸೀರಿಯಲ್‌ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಟಾಪ್‌ ಆಗುವುದಂತೂ ಖಚಿತ. ಹಾಗಾದರೆ, ಕನ್ನಡದ ಎಲ್ಲಾ ಸೀರಿಯಲ್‌ಹಾಗೂ ರಿಯಾಲಿಟಿ ಶೋಗಳ ಕಥೆ ಏನು?

ಸದ್ಯಕ್ಕೆ ಇದು ಕನ್ನಡದ ಎಲ್ಲಾ ಕಿರುತೆರೆ ವೀಕ್ಷಕರ ಮುಂದಿರುವ ಪ್ರಶ್ನೆ. ಅದಕ್ಕೆ ಇರುವುದೊಂದೆ ಉತ್ತರ ರಿಪೀಟ್ ಪ್ರಸಾರ. ಅಂದರೆ, ಈಗಾಗಲೇ ಪ್ರಸಾರವಾದ ಎಪಿಸೋಡ್‌ಗಳ ಪುನಾರಾವರ್ತನೆ. ಸದ್ಯಕ್ಕೆ ಕನ್ನಡದ ಅಷ್ಟು ಮಜರಂಜನಾ ವಾಹಿನಿಗಳಲ್ಲೂ ಮುಂದೆ ರಿಪೀಟ್ ಕಥೆಯಂತೂ ಗ್ಯಾರಂಟಿ. ಕನ್ನಡದಲ್ಲೀಗ ಉದಯ, ಸ್ಟಾರ್‌ ಸುವರ್ಣ, ಜೀ ಕನ್ನಡ, ಕಲರ್ಸ್‌ ಕನ್ನಡ, ಕಸ್ತೂರಿ, ದಂಗಲ್‌ ಕನ್ನಡ ವಾಹಿನಿಗಳಲ್ಲಿ ಸೀರಿಯಲ್‌ ಹಾಗೂ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ. ವಿಶೇಷವಾಗಿ ಕಲರ್ಸ್‌ ಕನ್ನಡ, ಸ್ಟಾರ್‌ ಸುವರ್ಣ ಹಾಗೂ ಉದಯ ಚಾನೆಲ್‌ನ ಕೆಲವು ಧಾರಾವಾಹಿಗಳು ಬಹು ಜನಪ್ರಿಯತೆ ಪಡೆದಿರುವುದು ನಿಮಗೂ ಗೊತ್ತು.

ಅದರಲ್ಲೂ ಜೀ ಕನ್ನಡದ ಮಹಾ ನಾಯಕ, ಜೊತೆ ಜೊತೆಯಲಿ, ಸತ್ಯ, ಗಟ್ಟಿಮೇಳ ಧಾರಾವಾಹಿಗಳು ಮನೆ ಮಾತಾಗಿವೆ. ಅದೇ ಕಾರಣಕ್ಕೆ ಸೀರಿಯಲ್‌ ಜಗತ್ತಿನಲ್ಲಿ ಝೀ ಕನ್ನಡ ನಂಬರ್‌ ಒನ್‌ ಟಿಆರ್‌ಪಿ ಪಡೆದಿರುವುದು ಕೂಡ ಹಳೇ ಸುದ್ದಿಯೇ. ಇವಿಷ್ಟು ಧಾರಾವಾಹಿಗಳ ಪೈಕಿ ಮಹಾ ನಾಯಕ ಧಾರವಾಹಿಯೂ ಹಿಂದಿಯಿಂದ ಡಬ್‌ ಆಗಿ ಕನ್ನಡಕ್ಕೆ ಬರುತ್ತಿದೆ. ಚಿತ್ರೀಕರಣ ನಿಲ್ಲುವುದರಿಂದ ಅದಕ್ಕೇನು ತೊಂದರೆ ಆಗದು. ಉಳಿದ ಸೀರಿಯಲ್‌ಗಳೆಲ್ಲ ಇಲ್ಲಿಯೇ ಚಿತ್ರೀಕರಣಗೊಳ್ಳುತ್ತಿವೆ. ಸದ್ಯಕ್ಕೆ ಅವೆಲ್ಲವೂ ಒಂದಷ್ಟು ದಿನಗಳ ಮಟ್ಟಿಗೆ ಫ್ರೆಶ್ ಎಪಿಸೋಡ್ಸ್‌ಗಳ ಮೂಲಕ ವೀಕ್ಷಕರ ಮುಂದೆ ಬರಬಹುದು. ಮುಂದೆ ರಿಪೀಟ್‌ ಎಪಿಸೋಡ್ಸ್‌ಗಳನ್ನೇ ಜನರ ನೋಡಬೇಕಾಗುವುದು ಅನಿವಾರ್ಯ.


ಮತ್ತೊಂದೆಡೆ, ಕಲರ್ಸ್‌ ಕನ್ನಡದ ಸಾಕಷ್ಟು ಧಾರಾವಾಹಿಗಳಿಗೂ ಬಾರೀ ಬೇಡಿಕೆ ಇದೆ. ಸದ್ಯ ಕನ್ನಡತಿ ಮನೆ ಮಾತಾಗಿದೆ. ಹಾಗೆಯೇ ʼನಮ್ಮನೆ ಯುವರಾಣಿ,ʼ ನನ್ನರಸಿ ರಾಧೆʼ, ʼಮಂಗಳ ಗೌರಿʼ ಧಾರಾವಾಹಿಗಳ ಪ್ರಸಾರಕ್ಕಾಗಿಯೇ ದಿನ ನಿತ್ಯ ಸಂಜೆ ವೀಕ್ಷಕರು ಕಾದು ಕುಳಿತಿರುತ್ತಾರೆನ್ನುವುದು ನಿಮಗೂ ಗೊತ್ತು. ಈಗ ಇವೆಲ್ಲ ಧಾರವಾಹಿಗಳಿಗೂ ಟೆಲಿವಿಷನ್‌ ಅಸೋಸಿಯೇಷನ್‌ ನಿರ್ಧಾರ ಪೆಟ್ಟು ನೀಡುವುದು ಖಚಿತವಾಗಿದೆ. ಇವುಗಳಿಗೂ ರಿಪೀಟ್‌ ಎಪಿಸೋಡ್ಸ್‌ ಹಾಕುವುದು ಅನಿವಾರ್ಯ. ಇನ್ನು ಕಲರ್ಸ್‌ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ಬಿಗ ಬಾಸ್‌ ಇದೇ ಕಾರಣಕ್ಕೆ ನಿಂತು ಹೋಗಿದೆ.
ಸ್ಟಾರ್ ಸುವರ್ಣ ದಲ್ಲೂ ಹಲವು ಜನಪ್ರಿಯ ಧಾರಾವಾಹಿಗಳಿವೆ. ಸದ್ಯಕ್ಕೆ ಅಲ್ಲೂ ಕೆಲವು ಡಬ್ ಆದ ಧಾರಾವಾಹಿಗಳೇ ಬರುತ್ತಿವೆ. ಅವುಗಳಿಗೇನು ಚಿತ್ರೀಕರಣದ ಸ್ಥಗಿತದ ನಿರ್ಧಾರದಿಂದ ಯಾವುದೇ ತೊಂದರೆ ಅಗದು.

ಆದರೆ ಚಿತ್ರೀಕರಣಗೊಳ್ಳುವ ಧಾರಾವಾಹಿಗಳದ್ದು ಇನ್ನೇನು ರಿಪೀಟ್ ಎಪಿಸೋಡ್ ಪ್ರಸಾರ ಮಾಡುವುದಷ್ಟೇ ಅನಿವಾರ್ಯ. ಉಳಿದಂತೆ ರಿಯಾಲಿಟಿ ಶೋಗಳನ್ನು ಇದೇ ಹಣೆಬರಹ.

Categories
ಸಿನಿ ಸುದ್ದಿ

ಶೂಟಿಂಗ್‌ ನಿಂತರೆ ಬಿಗ್‌ ಬಾಸ್‌ ಶೋ ಕಥೆ ಏನು?

ಕಲರ್ಸ್‌ ಕನ್ನಡದ ಬಿಗ್‌ ಬಾಸ್‌ ಸೀಸನ್‌ 8 ರಿಯಾಲಿಟಿ ಶೋ ಗೆ ಕಂಟಕ ಎದುರಾಗಿದೆ. ಈಗಾಗಲೇ ಅಲ್ಲಿನ ಒಬ್ಬ ಕಂಟೆಸ್ಟೆಂಟ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬಂದಾಗಿದೆ. ಬಿಗ್‌ ಬಾಸ್‌ ರಿಯಾಲಿಟಿ ಶೋ ಇತಿಹಾಸದಲ್ಲೇ ಇದೇ ಮೊದಲು ಅಂತಹದೊಂದು ಘಟನೆ ನಡೆದಿದೆ. ಅವರು ಮತ್ತೆ ಮನೆಗೆ ವಾಪಾಸ್‌ ಹೋಗುವ ಬಗ್ಗೆ ಅನುಮಾನ ಇದೆ. ಅದರ ನಡುವೆಯೇ ಬಿಗ್‌ ಬಾಸ್‌ ಚಿತ್ರೀಕರಣದ ಕಥೆ ಏನು ಎನ್ನುವ ಪ್ರಶ್ನೆ ಎದುರಾಗಿದೆ. ಕೋರೋನಾ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದ ಲಾಕ್‌ ಡೌನ್‌ ಮಾರ್ಗಸೂಚಿಗೆ ಬೆಂಬಲಿಸಿ ಕರ್ನಾಟಕ ಟೆಲಿವಿಷನ್‌ ಅಸೋಷಿಯೇಷನ್‌ ಮೇ 10 ರಿಂದ ಮೇ 24ರವರೆಗೂ ಕನ್ನಡ ಕಿರುತೆರೆಯ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಚಿತ್ರೀಕರಣ ಸ್ಥಗಿತಗೊಳಿಸಲು ತೀರ್ಮಾನಿಸಿದೆ.

ಸಹಜವಾಗಿಯೇ ಈ ನಿಯಮವೂ ಕಲರ್ಸ್‌ ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋ ಗೂ ಅನ್ವಯಿಸುತ್ತದೆ. ಹಾಗಾಗಿ ಬಿಗ್‌ ಬಾಸ್‌ ಕಥೆ ಮುಂದೆ ಹೇಗೆ ಎನ್ನುವ ಪ್ರಶ್ನೆ ಸಹಜವಾಗಿಯೇ ಶುರುವಾಗಿದೆ. ಧಾರಾವಾಹಿಗಳ ಹಾಗೆ ಬಿಗ್‌ ಬಾಸ್‌ ಎಪಿಸೋಡ್‌ ಗಳನ್ನು ಮೊದಲೇ ಶೂಟ್‌ ಮಾಡಿ ಇಟ್ಟುಕೊಳ್ಳುವಂತಿಲ್ಲ. ಹಿಂದಿನ ದಿನ ಏನೆಲ್ಲ ಅಲ್ಲಿ ಬೆಳವಣಿಗೆ ಆಗುತ್ತವೆಯೋ ಅದನ್ನು ಅವತ್ತೇ ಹಿಡಿದಿಟ್ಟುಕೊಂಡ ಕ್ಯಾಮೆರಾ ಪುಟೇಜ್ ಸಂಗ್ರಹಿಸಿ, ಎಡಿಟ್‌ ಮಾಡಿ ಅದನ್ನು ಮರು ದಿವಸ ಜನರಿಗೆ ತೋರಿಸಲಾಗುತ್ತಿದೆ. ಟಿವಿಗಳಲ್ಲಿ ಅದು ಸಂಜೆ ಬಂದರೆ, ವೂಟ್‌ ಆಪ್‌ ನಲ್ಲಿ ಅದು ಬೆಳಗ್ಗೆಯಿಂದಲೇ ಲಭ್ಯವಿರುತ್ತದೆ. ಆದರೆ ಈಗ ಚಿತ್ರೀಕರಣವೇ ಸ್ಟಾಪ್‌ ಆದರೆ ಎಡಿಟ್‌ ಕಥೆ ಎನ್ನುವ ಪ್ರಶ್ನೆಯೂ ಇದೆ. ಹಾಗೆ ನೋಡಿದರೆ ಬಿಗ್‌ ಬಾಸ್‌ ಗೆ ಇದು ಯಾವುದೇ ತೊಂದರೆ ಆಗದು. ಅಲ್ಲಿ ಫಿಕ್ಸ್‌ ಕ್ಯಾಮೆರಾಗಳೇ ಆಗಿರುವುದರಿಂದ ಪ್ರತಿ ದಿನದ ಪ್ರಸಾರದ ಸರುಕಿಗೆ ಯಾವುದೇ ಅಡಚಣೆ ಇಲ್ಲ. ಆದರೆ ವಾರದ ಕೊನೆಯ ಚಿತ್ರೀಕರಣಕ್ಕೆ ಮಾತ್ರ ಸ್ವಲ್ಪ ತೊಂದರೆ ಆಗಲಿದೆ. ಅದನ್ನು ಕೂಡ ಹ್ಯಾಗೋ ಮ್ಯಾನೇಜ್‌ ಮಾಡಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.

Categories
ಸಿನಿ ಸುದ್ದಿ

ಮೇ 10 ರಿಂದ ಸೀರಿಯಲ್‌ ಹಾಗೂ ರಿಯಾಲಿಟಿ ಶೋ ಚಿತ್ರೀಕರಣ ಬಂದ್‌ ಆಗದಿದ್ದರೆ ಕಠಿಣ ಶಿಕ್ಷೆ !

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮೇ 10 ರಿಂದಲೇ ಕನ್ನಡ ಕಿರುತೆರೆಯ ಎಲ್ಲಾ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಲು ಕರ್ನಾಟಕ ಟೆಲಿವಿಷನ್‌ ಅಸೋಷಿಯೇಷನ್‌ ತೀರ್ಮಾನ ಕೈಗೊಂಡಿದೆ. ಸರ್ಕಾರ ಲಾಕ್‌ ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮೇ 10 ರಿಂದ ಮೇ 24 ರವರೆಗೂ ಚಿತ್ರೀಕರಣ ಬಂದ್‌ ಆಗಲಿದೆ ಅಂತ ಅಸೋಷಿಯೇಷನ್‌ ಅಧ್ಯಕ್ಷ ಎಸ್.ವಿ. ಶಿವಕುಮಾರ್‌ ತಿಳಿಸಿದ್ದಾರೆ.

ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟುವ ಸಂಬಂಧ ಸರ್ಕಾರ ಲಾಕ್‌ ಡೌನ್‌ ಘೋಷಿಸಿದೆ. ಇದಕ್ಕೆ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಎಲ್ಲಾ ರೀತಿಯ ಬೆಂಬಲ ನೀಡಲು ಒಮ್ಮತದ ತೀರ್ಮಾನ ತೆಗೆದುಕೊಂಡಿದೆ. ಅಂತೆಯೇ ಮೇ 10 ರಿಂದ ಮೇ 24 ರವರೆಗೆ ಕನ್ನಡದ ಎಲ್ಲಾ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಗಳ ಚಿತ್ರೀಕರಣ ಸ್ಥಗಿತಗೊಳ್ಳಲಿದೆ. ಸರ್ಕಾರದ ಮಾರ್ಗಸೂಚಿ ಅನುಸಾರ ರೆಸಾರ್ಟ್‌, ಪ್ರವಾಸಿ ತಾಣ, ಬೆಂಗಳೂರಿನ ಹೊರವಲಯ ಅಥವಾ ಮನೆ ಇಲ್ಲೇಯೇ ಚಿತ್ರೀಕರಣ ನಡೆಯುವಂತಿಲ್ಲ ಎಂದು ಶಿವಕುಮಾರ್‌ ತಿಳಿಸಿದ್ದಾರೆ. ಹಾಗೊಂದು ವೇಳೆ ಸರ್ಕಾರದ ಕೋವಿಡ್‌ ನಿಯಮ ಮೀರಿಯೂ ಯಾರಾದರೂ ಚಿತ್ರೀಕರಣ ಮಾಡಿದ್ದಲ್ಲಿ ಅವರ ವಿರುದ್ಧ ಕಠಿಣ ಶಿಕ್ಷೆ ಆಗಲಿದೆ. ಮುಂದೆ ಆಗುವ ಅನಾಹುತಗಳಿಗೆ ತಾವು ಜವಾಬ್ದಾರಿ ಆಗುವುದಿಲ್ಲ ಅಂತಲೂ ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾ ಚಟುವಟಿಕೆಗಳಿಗಿರುವ ನಿರ್ಬಂಧ ಇವರಿಗೇಕೆ ಇಲ್ಲ… !! ಮನರಂಜನಾ ವಾಹಿನಿಗಳ ಧೋರಣೆ ವಿರುದ್ಧ ಭುಗಿಲೆದ್ದ ಜನರ ಆಕ್ರೋಶ

ನಿಮಗೆಲ್ಲ ಗೊತ್ತೇ ಇದೆ. ಲಾಕ್‌ಡೌನ್‌ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್‌ ಹಾಕಿದೆ. ಚಿತ್ರೋದ್ಯಮವೂ ಅದರಿಂದ ಹೊರತಾಗುಳಿದಿಲ್ಲ. ರಾಜ್ಯದಲ್ಲಿ ಜನತಾ ಕರ್ಪ್ಯೋ ಜಾರಿ ಆದ ದಿನದಿಂದಲೇ ಶೂಟಿಂಗ್‌ ಸೇರಿದಂತೆ ಸಿನಿಮಾ ಚಟುವಟಿಕೆಗಳೆಲ್ಲವೂ ಬಂದ್‌ ಆಗಿವೆ. ಇಷ್ಟಾಗಿಯೂ ಸೀರಿಯಲ್‌ ಹಾಗೂ ರಿಯಾಲಿಟಿ ಶೋ ಗಳ ಚಿತ್ರೀಕರಣ ಮಾತ್ರ ನಿಂತಿಲ್ಲ. ಲಾಕ್‌ ಡೌನ್‌ ಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಸೀರಿಯಲ್‌ ಚಿತ್ರೀಕರಣಗಳು ಶೂಟಿಂಗ್‌ ಮನೆಗಳಲ್ಲಿ ಸದ್ದಿಲ್ಲದೆ ನಡೆಯುತ್ತಿರುವುದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರೀಕರಣ ನಡೆಯುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿಲ್ಲವಾದರೂ, ಅಲ್ಲಿ ಚಿತ್ರೀಕರಣದಲ್ಲಿ ಭಾಗಿಯಾದವರಿಗೆ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡು ಉಳಿದವರೆಲ್ಲರೂ ಭಯದಲ್ಲಿದ್ದರೂ, ಚಾನೆಲ್‌ ನವರು ಮಾತ್ರ ಇದ್ಯಾವುದನ್ನು ಲೆಕ್ಕಿಸದೇ ಚಿತ್ರೀಕರಣ ಮಾಡುತ್ತಿರುದ್ದಾರೆನ್ನುವ ಆರೋಪಗಳು ಕೇಳಿಬಂದಿವೆ. ಅದಕ್ಕೆ ಕೆಲವು ಕಹಿ ಘಟನೆಗಳು ಸಾಕ್ಷಿ ಆಗಿವೆ.

ಕನ್ನಡದ ಖಾಸಗಿ ಟಿವಿಯೊಂದರಲ್ಲಿ ಪ್ರಸಾರವಾಗುವ “ಸುಂದರಿʼ ಸೀರಿಯಲ್‌ ಚಿತ್ರೀಕರಣ ನಗರದ ರೆಸಾರ್ಟ್‌ ವೊಂದರಲ್ಲಿ ನಡೆಯುತ್ತಿದ್ದು, ಅಲ್ಲಿನ ಕಲಾವಿದರೊಬ್ಬರಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಹಾಗಾಗಿ ಕಲಾವಿದರು ಭಯದಿಂದಲೇ ಅದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಾಗಿ ಬಂದಿದೆ. ಇದೊಂಥರ ತಮ್ಮಲ್ಲಿ ಭಯ ಹುಟ್ಟಿಸಿದೆ ಅಂತ ಕಲಾವಿದರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹಾಗೆಯೇ ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಕಂಟೆಂಸ್ಟ್‌ ವೊಬ್ಬರು ಅನಾರೋಗ್ಯಕ್ಕೆ ಒಳಗಾಗಿರುವುದು ತೀವ್ರ ಆತಂಕಕ್ಕೆ ದೂಡಿದೆ. ಇಷ್ಟಾಗಿಯೂ ಕನ್ನಡದ ಅನೇಕ ಧಾರಾವಾಹಿಗಳಿಗೆ ಈಗಲೂ ಕದ್ದು ಮುಚ್ಚಿ ಚಿತ್ರೀಕರಣ ನಡೆಯುತ್ತಲೇ ಇದ್ದು, ಮನರಂಜನಾ ವಾಹಿನಿಗಳ ಜನರ ಸಾವು-ನೋವುಗಳ ನಡುವೆಯೂ ಹಣ ಮಾಡುವ ದಂಧೆಗೆ ನಿಂತಿವೆ ಅಂತಲೂ ಪ್ರೇಕ್ಷಕರೊಬ್ಬರು ದೂರಿದ್ದಾರೆ.

ಅಷ್ಟೇ ಅಲ್ಲ, ಈ ಮನರಂಜನಾ ವಾಹಿನಿಗಳಿಗೆ ಜನರ ಬಗ್ಗೆ ಕಿಂಚತ್ತು ಕಾಳಜಿಯೇ ಇಲ್ಲ. ಈಗ ನ್ಯೂಸ್‌ ಚಾನೆಲ್‌ ನೋಡುವುದಕ್ಕಿಂತ ಹೆಚ್ಚಾಗಿ ಜನರು ಮನರಂಜನಾ ವಾಹಿನಗಳನ್ನೇ ಹೆಚ್ಚಾಗಿ ನೋಡುತ್ತಿದ್ದಾರೆ. ಸೀರಿಯಲ್‌, ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಗೆ ಜನರು ಕಾಯುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಮನರಂಜನಾ ವಾಹಿನಿಗಳು ತಮ್ಮ ಕಾರ್ಯಕ್ರಮ ಪ್ರಸಾರ ಮಾಡುವ ಸಂದರ್ಭದಲ್ಲೇ ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಸಣ್ಣ ಪುಟ್ಟ ಕಿರುಚಿತ್ರಗಳನ್ನು, ಇಲ್ಲವೇ ಸೆಲಿಬ್ರಿಟಿಗಳ ಹೇಳಿಕೆಗಳನ್ನು ಪ್ರಸಾರ ಮಾಡಬಹುದು. ಇಲ್ಲಿ ತನಕ ಒಂದೇ ಒಂದು ಮನರಂಜನೆ ಚಾನೆಲ್‌ ಕೂಡ ಈ ಕೆಲಸ ಮಾಡಿಲ್ಲ.

ಬದಲಿಗೆ ಜನರನ್ನು ಕಿತ್ತುಹೋದ ಅರ್ಥ ಹೀನ ಮನೆಹಾಳು ಕತೆಗಳ ಧಾರಾವಾಹಿಗಳ ಮೂಲಕ ಜನರನ್ನು ಹಾಳು ಮಾಡುವುದರ ಜತೆಗೆ ತಮ್ಮ ಟಿಆರ್‌ ಪಿ ಹೆಚ್ಚಿಸಿಕೊಳ್ಳುವುದಕ್ಕಷ್ಟೇ ತಮ್ಮನ್ನು ತಾವು ಮೀಸಲಿರಿಸಿಕೊಂಡಿದ್ದಾರೆ. ಸರ್ಕಾರ ಇವುಗಳಿಗೂ ಕಡಿವಾಣ ಹಾಕಬೇಕಿದೆ ಅಂತ ವೀಕ್ಷಕರೇ ಆಗ್ರಹಿಸಿದ್ದಾರೆ.

Categories
ಸಿನಿ ಸುದ್ದಿ

ಸುಂದರಿ ಸೀರಿಯಲ್‌ ಕಲಾವಿದನಿಗೆ ಪಾಸಿಟಿವ್‌ – ಆದರೂ ಶೂಟಿಂಗ್‌ ನಡೆಯುತ್ತಿದೆ ಎನ್ನುವ ಆರೋಪ! ಇದು ನಿಜಾನಾ?

ಕನ್ನಡದ ಜನಪ್ರಿಯ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರ ವಾಗುವ “ಸುಂದರಿ” ಸೀರಿಯಲ್‌ ಕಲಾವಿದನಿಗೆ ಕೊರೊನಾ ಪಾಸಿಟಿವ್‌ ದೃಡಪಟ್ಟಿದ್ದು, ಆದರೂ ಶನಿವಾರ ಶಕ್ತಿ ರೆಸಾರ್ಟ್‌ ನಲ್ಲಿ ಶೂಟಿಂಗ್‌ ನಡೆಯುತ್ತಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಧಾರಾವಾಹಿಯ ಮೂಲಗಳೇ ಈ ಬಗ್ಗೆ ಮಾಹಿತಿ ರವಾನಿಸಿದ್ದು, ಕಲಾವಿದರ ಬಗ್ಗೆ ಸೀರಿಯಲ್‌ ನಿರ್ಮಾಣ ಸಂಸ್ಥೆ ಹಾಗೂ ಖಾಸಗಿ ಮನರಂಜನಾ ವಾಹಿನಿಗೆ ಕಾಳಜಿಯೇ ಇಲ್ಲ ಎಂದು ದೂರಿದ್ದಾರೆ.

ಸರ್ಕಾರ ಮಾರ್ಗ ಸೂಚಿ ಅನುಸಾರ ಈಗ ಒಂದು ಶೂಟಿಂಗ್‌ ಅಥವಾ ಡಬ್ಬಿಂಗ್‌ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಜನರು ಸೇರುವಂತಿಲ್ಲ. ಕೊರೊನಾ ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದು, ಜನ ಸೇರುವುದರಿಂದ ಹೆಚ್ಚು ಅಪಾಯ ಇದೆ. ಹಾಗಾಗಿ ಎಲ್ಲಿಯೂ ಗುಂಪು ಸೇರುವುದರ ಮೇಲೆ ಸರ್ಕಾರ ನಿರ್ಬಂಧ ಹೇರಿದೆ. ಅದೇ ಕಾರಣಕ್ಕೆ ಈಗ ಸಿನಿಮಾ ಹಾಗೂ ಸೀರಿಯಲ್‌ ಔಡ್‌ ಡೋರ್‌ ಚಿತ್ರೀಕರಣ ಗಳು ಬಂದ್‌ ಆಗಿವೆ. ಆದರೂ ಕನ್ನಡದ ಮನರಂಜನಾ ವಾಹಿನಿಗಳು ಮಾತ್ರ ಕದ್ದು ಮುಚ್ಚಿ ಚಿತ್ರೀಕರಣ ಮಾಡುತ್ತಿದ್ದು, ಈಗ ಅಲ್ಲಿ ಆಪಾಯಗಳು ಘಟಿಸುತ್ತಿಗೆ ಎನ್ನುವುದಕ್ಕೆ ಕೆಲವು ರಿಯಾಲಿಟಿ ಶೋಗಳು ಸಾಕ್ಷಿ ಆಗಿದ್ದವು. ಈಗ ಅಂತಹದೇ ಘಟನೆ ಸೀರಿಯಲ್‌ ಯೂನಿಟ್‌ ನಲ್ಲೂ ಅಗಿದೆ ಎನ್ನುವುದಕ್ಕೆ ಸುಂದರಿ ಸೀರಿಯಲ್‌ ಪ್ರಕರಣ ಸಾಕ್ಷಿ ಆಗಿದೆ. ಚಾನೆಲ್‌ ನ ಪ್ರೋಗ್ರಾಮ್‌ ಹೆಡ್‌ ಶಿಲ್ಪಾ ಎನ್ನುವವರೇ ಮುಂದೆ ನಿಂತು ಈ ಚಿತ್ರೀಕರಣ ಮಾಡಿಸುತ್ತಿದ್ದಾರಂತೆ. ಕಲಾವಿದರು ಭಯ ಪಟ್ಟರೂ ಕೂಡ , ಚಿತ್ರೀಕರಣ ಅನಿವಾರ್ಯ, ಆಗಲೇ ಬೇಕು, ನಿಮಗೆ ಸೂಕ್ತ ರಕ್ಷಣೆ ಕೊಡುತ್ತೇವೆ ಎಂದು ಹೇಳಿ ಕರೆಸಿಕೊಂಡು ಚಿತ್ರೀಕರಣ ಮಾಡುವಾಗ ಇದೆಲ್ಲ ಬೆಳಕಿಗೆ ಬಂದಿದೆ. ಈಗ ಸೀರಿಯಲ್‌ ನಲ್ಲಿರುವ ಎಲ್ಲರಗೂ ಜೀವ ಭಯ ಶುರುವಾಗಿದೆ ಎನ್ನುವ ಮಾತನ್ನು ಧಾರಾವಾಹಿ ಕಡೆಯವರೇ ಬಹಿರಂಗ ಪಡಿಸಿದ್ದಾರೆ ಎನ್ನುವ ಮಾತುಗಳನ್ನು ಮೂಲಗಳು ತಿಳಿಸಿವೆ. ಆದರೆ, ಇದು ನಿಜಾನಾ ಅಥವಾ ಇಲ್ಲವೋ ಎಂಬುದನ್ನು ಸಂಬಂಧಿಸಿದವರು ಸ್ಪಷ್ಟಪಡಿಸಬೇಕಿದೆ.

Categories
ಸಿನಿ ಸುದ್ದಿ

ಬೆಟ್ಟದ ಹೂವು ಖ್ಯಾತಿಯ ನಟ ಶಂಖನಾದ ಅರವಿಂದ್ ನಿಧನ‌; ಜೀವ ಪಡೆದ ಕೊರೊನಾ

“ಬೆಟ್ಟದ ಹೂವು” ಖ್ಯಾತಿಯ ನಟ “ಶಂಖನಾದ” ಅರವಿಂದ್‌ ನಿಧನರಾಗಿದ್ದಾರೆ. ಕೊರೊನಾ ಸೋಂಕು ತಗುಲಿ, ಕಳೆದ ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು‌ ( ಮೇ.7) ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಕೊನೆಯುಸಿರೆಳೆದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ‌.

ಅವರಿಗೆ 70 ವರ್ಷ ವಯಸ್ಸು ಆಗಿತ್ತು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಆಗಲಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಇವರ ಮಡದಿ ರಮಾ ಅರವಿಂದ್ ಅವರೂ ಅನಾರೋಗ್ಯದಿಂದ ವಿಧಿವಶರಾಗಿದ್ದರು. ರಮಾ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು.

ಸುಮಾರು 250ಕ್ಕೂ ಹೆಚ್ಚು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ “ಶಂಖನಾದ” ಅರವಿಂದ್ ನಟಿಸಿದ್ದರು. 70-80ರ ದಶಕದಲ್ಲಿ ಅರವಿಂದ್ ಬಹು ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು ಅವರು, ಕಾಶಿನಾಥ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಚಿರಪರಿಚಿತರಾಗಿದ್ದರು. ಇತ್ತೀಚಿಗೆ ಕನ್ನಡದ ಕೆಲವೊಂದು ಧಾರಾವಾಹಿಗಳಲ್ಲಿಯೂ ಅವರು ಅಭಿನಯಿಸಿದ್ದರು. 

“ಶಂಖನಾದ” ಅರವಿಂದ್ ಅವರ ಬಗ್ಗೆ ಬಹುತೇಕ ಗೊತ್ತಿರುವುದು ಒಬ್ಬ ಹಾಸ್ಯ ನಟನಾಗಿ. ಆದರೆ ಅವರು ಚಿತ್ರರಂಗಕ್ಕೆ ಬಂದಿದ್ದು ಒಬ್ಬ ಹೀರೊ ಆಗಿ. ಅದಕ್ಕೆ ಸಾಕ್ಷಿಯೇ “ಶಂಖನಾದ” ಚಿತ್ರ. ಮೊದಲ ಬಾರಿಗೆ ಅರವಿ‌ಂದ್ ಅವರು, ಹೀರೋ ಆಗಿ ಅಭಿನಯಿಸಿದ ಚಿತ್ರವದು.
“ಶಂಖನಾದ” ಚಿತ್ರವನ್ನು ಸಂಪಿಗೆ ಹಳ್ಳಿಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆ ಚಿತ್ರದಲ್ಲಿ ಅವರೇ ಹೈಲೈಟ್. ಆ ಕಾಲದಲ್ಲಿ ಅದು ಜನಪ್ರಿಯವಾದ ಚಿತ್ರ ವದು. ಆರಂಭದಲ್ಲಿ ಈ ಚಿತ್ರಕ್ಕೆ ಅಷ್ಟಾಗಿ ಜನ ಮನ್ನಣೆ ಸಿಗಲಿಲ್ಲ. ಆನಂತರ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು.‌ಅಲ್ಲಿ‌ಂದ ಅವರ ಹೆಸರಿಗೆ “ಶಂಖನಾದ” ಎಂಬ ಹೆಸರೂ ಸೇರಿಕೊಂಡಿತು.

Categories
ಸಿನಿ ಸುದ್ದಿ

ರಾಜ್‌ ಅಭಿನಯದ ಮೊದಲ ಚಿತ್ರಕ್ಕೆ ಈಗ 67 ವರ್ಷ! ಬೇಡರ ಕಣ್ಣಪ್ಪ ಕನ್ನಡದ ಅಮೂಲ್ಯ ಕೊಡುಗೆ ; ಗುಬ್ಬಿ ವೀರಣ್ಣ ನಿರ್ಮಾಣದ ಅಪರೂಪದ ಚಿತ್ರವಿದು

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವು ವಿಶೇಷತೆಗಳಿವೆ. ಅಂತಹ ವಿಶೇಷತೆಗಳಲ್ಲಿ ಡಾ.ರಾಜ್‌ಕುಮಾರ್‌ ಅಭಿನಯದ ಮೊದಲ ಸಿನಿಮಾ “ಬೇಡರ ಕಣ್ಣಪ್ಪ” ಚಿತ್ರವೂ ಒಂದು. ಆ ಚಿತ್ರದ ಬಗ್ಗೆ ಈಗ ಇಲ್ಲೇಕೆ ಪ್ರಸ್ತಾಪ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ, ಮೇ. 7. ಹೌದು, ಈ ದಿನ ಡಾ.ರಾಜ್‌ ಅಭಿನಯದ ಮೊದಲ ಸಿನಿಮಾ “ಬೇಡರ ಕಣ್ಣಪ್ಪ” ಬಿಡುಗಡೆಯಾದ ದಿನ. ಮೇ.7, 1954ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಈಗ 67 ವರ್ಷ.

ಕನ್ನಡ ಚಿತ್ರರಂಗಕ್ಕೆ ರಾಜ್‌ಕುಮಾರ್‌ ಅವರ “ಬೇಡರ ಕಣ್ಣಪ್ಪ” ಅಮೂಲ್ಯ ಕೊಡುಗೆ. ಆಗಷ್ಟೇ ಕನ್ನಡ ಚಿತ್ರರಂಗ ಮೆಲ್ಲನೆ ಗರಿಗೆದರುತ್ತಿದ್ದ ಸಂದರ್ಭ. ಅದಾಗಲೇ ಒಂದಷ್ಟು ಕಲಾವಿದರು ಬೆಳ್ಳಿತೆರೆಗೆ ಅಪ್ಪಳಿಸಿದ್ದರು. ಅಷ್ಟೇ ಅಲ್ಲ, ಭಕ್ತಿ ಪ್ರಧಾನ ಸಿನಿಮಾಗಳು, ಸಾಮಾಜಿಕ ಚಿತ್ರಗಳು, ಐತಿಹಾಸಿಕ ಚಿತ್ರಗಳು ಆಗಷ್ಟೇ ಬರುತ್ತಿದ್ದ ಕಾಲಘಟ್ಟವದು.

ಅಂತಹ ಸಮಯದಲ್ಲೇ “ಬೇಡರ ಕಣ್ಣಪ್ಪ” ಚಿತ್ರವೂ ಬಿಡುಗಡೆಯಾಗಿತ್ತು. ಈ ಮೊದಲ ಸಾಮಾಜಿಕ ಚಿತ್ರವನ್ನು ತೆರೆಗೆ ಪರಿಚಯಿಸಿದ್ದು, ಕನ್ನಡ ರಂಗಭೂಮಿಯ ಪಿತಾಮಹರಲ್ಲಿ ಒಬ್ಬರಾದ ಗುಬ್ಬಿ ವೀರಣ್ಣ. ಹೌದು, ಈ ಚಿತ್ರ ಅವರ ನಿರ್ಮಾಣ ಸಂಸ್ಥೆಯಿಂದ ಮೂಡಿಬಂದಿದ್ದು. ಗುಬ್ಬಿ ವೀರಣ್ಣ ಕರ್ನಾಟಕ ಪ್ರೊಡಕ್ಷನ್ಸ್ ನಲ್ಲಿ ತಯಾರಾದ ಚಿತ್ರವದು. ಅಷ್ಟೇ ಅಲ್ಲ, ಅದು ಅವರದೇ ಸಾಗರ್ ಚಿತ್ರಮಂದಿರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಎಚ್‌.ಎಲ್.ಎನ್.‌ ಸಿಂಹ ನಿರ್ದೇಶಿಸಿದ್ದಾರೆ. ಹಾಡುಗಳಿಗೆ ಲಾವಣಿ ವಿಧ್ವಾನ್‌ ಎಸ್.ನಂಜಪ್ಪ ಅವರ ಸಾಹಿತ್ಯವಿದೆ. ಚಿದಂಬರಂ ಎಸ್.ಜಯರಾಮನ್‌ , ಎಂ.ಎಲ್.ವಸಂತ ಕುಮಾರಿ, ಟಿ.ಎಸ್.ಭಗವತಿ ಮೋತಿ ಅವರ ಧ್ವನಿ ಹಾಡುಗಳಿಗಿದೆ. ಎಸ್.ಮಾರುತಿರಾವ್‌ ಅವರ ಛಾಯಾಗ್ರಹಣವಿದೆ. ಆರ್.ಸುದರ್ಶನಂ ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ಹಾಡೊಂದರ ಬಗ್ಗೆ ಇಲ್ಲಿ ಹೇಳಲೇಬೇಕು. “ನಲಿಯುವ ಬಾ ಇನಿಯ” ಎನ್ನುವ ಹಾಡು ಡಾ.ರಾಜಕುಮಾರ್‌ ಹಾಗೂ ನಟಿ ಪಂಡರಿಬಾಯಿ ಅವರ ಮೊದಲ ಗೀತೆ ಅನ್ನೋದು ವಿಶೇಷ. ಈ ಚಿತ್ರದ ಮೊದಲ ದೃಶ್ಯದಲ್ಲಿ ರಾಜ್ ಕುಮಾರ್ ರವರ ಎಂಟ್ರಿಯಾಗುತ್ತೆ. ಇನ್ನು, ಕಥೆ ಬಗ್ಗೆ ಹೇಳೋದಾದರೆ, ಗಂಧರ್ವರ ಲೋಕದ ಮಣಿಮಂತ ಹಾಗೂ ಶರ್ಮಿಷ್ಠಾ ಜೋಡಿಯಿಂದ ಆಗುವ ಒಂದು ಅಚಾನಕ್ ತಪ್ಪಿನ ಸಲುವಾಗಿ ಶಪಿತಗೊಂಡ ಮಣಿಮಂತ ಮತ್ತು ಶರ್ಮಿಷ್ಠಾ ದುಃಖಿಸುತ್ತಿರುವಾಗ ಪರಮೇಶ್ವರ ಹೇಳುವ ಸಂಭಾಷಣೆ ಹೀಗಿದೆ.

“ಅದೊಂದು ಕೆಟ್ಟ ಘಳಿಗೆ ಎಂದು ವ್ಯಥೆ ಪಡದೆ, ಅದೊಂದು ಮಹಾ ಘಳಿಗೆ ಎಂದು ನೀನೇಕೆ ಸಂತೋಷ ಚಿತ್ತನಾಗಿರಬಾರದು” ಇಂತಹ ಅರ್ಥಗರ್ಭಿತ ಸಂಭಾಷಣೆ ಜೊತೆ ಕನ್ನಡದ ಹೆಮ್ಮೆಯ ಕಲಾವಿದ ಬೆಳ್ಳಿ ತೆರೆಯನ್ನು ಬೆಳಗಲು ಆರಂಭಿಸಿದ ಮಹಾನ್ ಘಳಿಗೆ ಅದಾಗಿತ್ತು ಅನ್ನೋದೇ ವಿಶೇಷ.

ಮುಂಬರುವ ದಿನಗಳಲ್ಲಿ ಈ ಚಿತ್ರ ತೆಲುಗಿನಲ್ಲಿಯೂ ತೆರೆಗೆ ಬರುತ್ತೆ. ಅಲ್ಲಿ “ಕಾಳಹಸ್ತಿ ಮಹಿಮೆ” ಹೆಸರಲ್ಲಿ ಸಿನಿಮಾ ರೆಡಿಯಾಗುತ್ತೆ. ಅಲ್ಲೂ ರಾಜ್ ಕುಮಾರ್ ಅಭಿನಯಿಸಿದರು. ವಿಶೇಷವೆಂದರೆ, ರಾಜಕುಮಾರ್‌ ಅವರೇ ಪಾತ್ರಕ್ಕೆ ತೆಲುಗಲ್ಲಿ ಡಬ್‌ ಮಾಡುತ್ತಾರೆ. ನಂತರದ ದಿನಗಳಲ್ಲಿ ಈ ಸಿನಿಮಾ ಹಿಂದಿಯಲ್ಲೂ ತೆರೆಕಾಣುತ್ತೆ. ವಿಶೇಷವೆಂದರೆ, ಮತ್ತೆ ಮೂರು ದಶಕಗಳ ಬಳಿಕ ಶಿವರಾಜ್ ಕುಮಾರ್ ಅಭಿನಯದಲ್ಲಿ”ಶಿವ ಮೆಚ್ಚಿದ ಕಣ್ಣಪ್ಪ” ಸಿನಿಮಾ ಕೂಡ ಬಂತು.

ಈ ಸಿನಿಮಾ ಕೂಡ ರಾಜ್ ಸಂಸ್ಥೆಯಿಂದ ನಿರ್ಮಾಣವಾಯ್ತು. ಈ ಸಿನಿಮಾ ಮಾಡುವ ಮೊದಲು, “ಬೇಡರ ಕಣ್ಣಪ್ಪ” ಸಿನಿಮಾ ಹೆಸರಿಟ್ಟುಕೊಂಡೇ ನಟ,ನಿರ್ಮಾಪಕ ನಿರ್ದೇಶಕ ದ್ವಾರಕೀಶ್‌ ಅವರು ಮಾಡಲು ತೀರ್ಮಾನಿಸಿದ್ದರು. ಅವರು “ಕೃಷ್ಣ ನೀ ಕುಣಿದಾಗ” ಸಿನಿಮಾ ಬಿಝಿಯಲ್ಲಿದ್ದರು. ಅಷ್ಟೊತ್ತಿಗೆ ರಾಜ್‌ ಸಂಸ್ಥೆಯಿಂದ “ಶಿವ ಮೆಚ್ಚಿದ ಕಣ್ಣಪ್ಪ” ಸಿನಿಮಾ ರೆಡಿಯಾಗಿ ಬಿಡುಗಡೆಯಾಗುತ್ತೆ.


ಅದೇನೆ ಇರಲಿ, ರಾಜಕುಮಾರ್‌ ಅಭಿನಯದ ಮೊದಲ ಚಿತ್ರ ಬೇಡರ ಕಣ್ಣಪ್ಪ ಚಿತ್ರ ಬಿಡುಗಡೆಯಾಗಿ ಇಂದಿಗೆ 67 ವರ್ಷಗಳು ಅನ್ನೋದೇ ಈ ಹೊತ್ತಿನ ವಿಶೇಷ.

Categories
ಸಿನಿ ಸುದ್ದಿ

ಸೋಂಕಿತರ ಸೇವೆಗೆ ಶೂಟಿಂಗ್ ಹೌಸ್ ಕೊಡಲು ನಟಿ ನಿರ್ಧಾರ: ಸರ್ಕಾರ ಮನೆ ಬಳಕೆಗೆ ಸಾತ್ವಿಕ ಮನವಿ

ಸದ್ಯ ಬೆಂಗಳೂರಿನ ಪರಿಸ್ಥಿತಿ ನೋಡಿದಾಗ ಭಯವಾಗುತ್ತಿದೆ. ಎಷ್ಟೋ ಜನ ಆಕ್ಸಿಜನ್, ಬೆಡ್ ಇಲ್ಲದೆ ನರಳುತ್ತಿದ್ದಾರೆ. ಹೀಗಾಗಿ ನಾನು ನನ್ನ ಶೂಟಿಂಗ್ ಹೌಸ್ ವೊಂದನ್ನು ಕೋವಿಡ್ ರೋಗಿಗಳ ಸೇವೆಗೆ ನೀಡಲು ಬಯಸಿದ್ದೇನೆ. ಈ ಮೂಲಕ ಜಾಗದ ಅಭಾವ ಕಡಿಮೆ ಮಾಡುವ ಸಣ್ಣ ಪ್ರಯತ್ನ ನನ್ನದು

ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಲೆಕ್ಕವಿಲ್ಲದಷ್ಟು ಮಂದಿ ಜೀವ ಬಿಡುತ್ತಿದ್ದಾರೆ. ಸರ್ಕಾರ ಮಾಡುವಷ್ಟು ಮಾಡಿದರೂ ಕೊರೊನಾ ಹಾವಳಿ ನಿಂತಿಲ್ಲ. ಸಮರೋಪಾದಿಯಲ್ಲಿ ಸೇವೆಗಳು ನಿರಂತರವಾಗಿದ್ದರೂ ನಿಯಂತ್ರಣಕ್ಕೆ ಬರದೆ, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಇಲ್ಲಿ ಪರ, ವಿರೋಧಗಳ ಚರ್ಚೆಯೂ ನಡೆಯುತ್ತಿದೆ. ಈಗ ಆ ಬಗ್ಗೆ ಮಾತನಾಡುವ ಸಂದರ್ಭವಲ್ಲ. ಮನುಷ್ಯತ್ವ ರೂಪಿಸಿಕೊಂಡಿರುವ ಮಂದಿ ತಮ್ಮ ಕೈಲಾದ ಸೇವೆಗೆ ಮುಂದಾಗಿದ್ದಾರೆ.

ಇದಕ್ಕೆ ಸಿನಿಮಾ ರಂಗದ ಹಲವರೂ ಕೈ ಜೋಡಿಸಿದ್ದಾರೆ. ಈಗಾಗಲೇ ನಟ ಸುದೀಪ್ ಅವರು, ಆಕ್ಸಿಜನ್ ಕೊರತೆ ನೀಗಿಸಲು ಮುಂದಾಗಿದ್ದು ಗೊತ್ತೇ ಇದೆ. ಹಾಗೆಯೇ, ಗೀತ ಸಾಹಿತಿ ಕವಿರಾಜ್ ಕೂಡ ಒಂದು‌ ಸಮಾನ‌ ಮನಸ್ಕರ ತಂಡ ಕಟ್ಟಿಕೊಂಡು ಕೊರೊನಾ ಸೋಂಕಿತರ ನೆರವಿಗೆ ಧಾವಿಸಲು ರೂಪುರೇಷೆ ನಡೆಸುತ್ತಿದ್ದಾರೆ. ಅದಕ್ಕೆ ಸಿನಿಮಾದ ಒಂದಷ್ಟು ಜನ ಸಾಥ್ ಕೊಡುವ ಭರವಸೆಯನ್ನೂ ನೀಡಿದ್ದಾರೆ. ಇಲ್ಲೀಗ ಆಕ್ಸಿಜನ್ ಸಮಸ್ಯೆ ತಲೆದೋರಿದೆ. ಬೆಡ್ ವ್ಯವಸ್ಥೆ ಇಲ್ಲದೆಯೂ ಜನರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮದೂ ಒಂದು ಸಣ್ಣ ಸೇವೆ ಅಂದುಕೊಂಡು ಮುಂದೆ ಬಂದಿರುವ ಯುವ ನಟಿ ಸಾತ್ವಿಕ ಅವರು ತಮ್ಮ ಶೂಟಿಂಗ್ ಹೌಸ್ ಅನ್ನು ಕೋವಿಡ್ ಸೆಂಟರ್ ಆಗಿ ರೂಪಿಸಿ, ಕೊರೊನಾ ಸೋಂಕಿತರಿಗೆ ನೆರವಾಗಲು ತೀರ್ಮಾನಿಸಿದ್ದಾರೆ.

ಹೌದು, ನಟಿ ಸಾತ್ವಿಕ ಅವರು ಹಲವು ವರ್ಷಗಳಿಂದ ನಟನೆಯ ಜೊತೆಗೆ ಧಾರಾವಾಹಿ, ಸಿನಿಮಾಗಳ ಚಿತ್ರೀಕರಣಕ್ಕಾಗಿ ಶೂಟಿಂಗ್ ಹೌಸ್ ಅನ್ನು ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಮೂರು ಬಂಗಲೆಗಳನ್ನು ಶೂಟಿಂಗ್ ಬಾಡಿಗೆಗೆ ನೀಡುತ್ತಿದ್ದಾರೆ. ಇದರ ಜೊತೆಯಲ್ಲಿ ಸಾಮಾಜಿಕ ಕೆಲಸಗಳಲ್ಲೂ ತೊಡಗಿರುವ ಸಾತ್ವಿಕ, ಕೊರೊನಾ ಹಾವಳಿಗೆ ತತ್ತರಿಸುತ್ತಿರುವ ಜನರಿಗೆ ಸಿಗದ ಆಕ್ಸಿಜನ್, ಬೆಡ್ ಸಮಸ್ಯೆ ಅರಿತು ತಮ್ಮ ಶೂಟಿಂಗ್ ಹೌಸ್ ಅನ್ನು ಸೋಂಕಿತರ ಸೇವೆಗೆ ನೀಡಲು ಬಯಸಿದ್ದಾರೆ.

ಈ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ನಟಿ ಸಾತ್ವಿಕ, ” ನಾನು ಹಲವು ವರ್ಷಗಳಿಂದ ಬೆಂಗಳೂರಲ್ಲಿ ಮೂರು ವಿಶಾಲವಾದ ಬಂಗಲೆಗಳನ್ನು ಸಿನಿಮಾ,‌ಧಾರಾವಾಹಿ ಶೂಟಿಂಗ್ ಗಾಗಿ ಬಾಡಿಗೆ ನೀಡುತ್ತ ಬಂದಿದ್ದೇನೆ. ಈಗ ಕೊರೊನಾ ಹಾವಳಿ ಇದ್ದುದರಿಂದ ಸರ್ಕಾರ ಬ್ರೇಕ್ ಹಾಕಿದೆ. ಹಾಗಾಗಿ ಶೂಟಿಂಗ್ ನಡೆಯುತ್ತಿಲ್ಲ. ಸದ್ಯ ಬೆಂಗಳೂರಿನ ಪರಿಸ್ಥಿತಿ ನೋಡಿದಾಗ ಭಯವಾಗುತ್ತಿದೆ. ಎಷ್ಟೋ ಜನ ಆಕ್ಸಿಜನ್, ಬೆಡ್ ಇಲ್ಲದೆ ನರಳುತ್ತಿದ್ದಾರೆ. ಹೀಗಾಗಿ ನಾನು ನನ್ನ ಶೂಟಿಂಗ್ ಹೌಸ್ ವೊಂದನ್ನು ಕೋವಿಡ್ ರೋಗಿಗಳ ಸೇವೆಗೆ ನೀಡಲು ಬಯಸಿದ್ದೇನೆ. ಈ ಮೂಲಕ ಜಾಗದ ಅಭಾವ ಕಡಿಮೆ ಮಾಡುವ ಸಣ್ಣ ಪ್ರಯತ್ನ ನನ್ನದು. ಅಂದಹಾಗೆ, ಕೆಂಗೇರಿ ಬಸ್ ಸ್ಟಾಪ್ ಬಳಿ ವಿಶಾಲವಾದ ಹೌಸ್ ಅನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲು ತೀರ್ಮಾನಿಸಿದ್ದು,
ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ನನ್ನ ಈ ಹೌಸ್ ಪಡೆದು ಕೋವಿಡ್ ಸೆಂಟರ್ ಆಗಿ ರೂಪಿಸಲಿ. ನಾನು‌ ನನ್ನ ಮನೆಯ ಜೊತೆಗೆ ನೀರು, ವಿದ್ಯುತ್ ಬಿಲ್ ವ್ಯವಸ್ಥೆ ಮಾಡುತ್ತೇನೆ. ಉಳಿದಂತೆ ಸರ್ಕಾರ ಆಕ್ಸಿಜನ್, ಬೆಡ್, ವೈದ್ಯ, ಸಿಬ್ಬಂದಿ ಸೇರಿದಂತೆ ರೋಗಿಗಳ ಸೇವೆಗಡ ಅಗತ್ಯ ವಸ್ತುಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಿ” ಎಂದು ಸಾತ್ವಿಕ ಹೇಳಿದ್ದಾರೆ.

ಇನ್ನು ಮನೆ 60*80 ವಿಸ್ತೀರ್ಣ ಹೊಂದಿದ್ದು, ಮೂರು ಬೆಡ್ ರೂಮ್ ಗಳ ಎರಡು ಫ್ಲೋರ್ ಇದೆ. ಬೇಸ್ ಮೆಂಟ್ ಕೂಡ ಇದೆ. ಕ್ಲೋಸ್ಡ್ ಟೆರೇಸ್ ಕೂಡ ಇದೆ.
ಸದ್ಯಬೀ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ಸಾತ್ವಿಕ, ಕೂಡಲೇ ಸರ್ಕಾರದ ಜನಪ್ರತಿನಿಧಿಗಳು, ಸಂಬಂಧಿಸಿದ‌ ಅಧಿಕಾರಿಗಳು ಈ ಅನುಕೂಲ ಸದ್ಬಳಕೆ ಮಾಡಿಕೊಳ್ಳಲಿ ಎಂದಿರುವ ಸಾತ್ವಿಕ, ಕೊರೊನಾ ಸೋಂಕಿತರಿಗೆ ಈ ವ್ಯವಸ್ಥೆ ಮಾಡಲು ಮುಂದಾಗಲು‌ ಬಯಸಿದರೆ ನನ್ನ ಮೊಬೈಲ್ ಸಂಖ್ಯೆ 99008 71777 ಕರೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಅದೇನೆ ಇರಲಿ, ಒಬ್ಬ ನಟಿಯಾಗಿ ಕೊರೊನಾ ಸೋಂಕಿತರಿಗೆ ನೆರವಾಗಲು ಬಯಸಿರುವ ಸಾತ್ವಿಕ ಅವರ ಈ ಪ್ರಯತ್ನದಿಂದ ಒಂದಷ್ಟು ಮಂದಿಗೆ ಸಹಾಯವಾದರೆ ಅಷ್ಟೇ ಸಾಕು. ಸರ್ಕಾರ ಈ ಬಗ್ಗೆ ಗಮನ ಹರಿಸಿ, ಆ ಭಾಗದ ಸೋಂಕಿತರಿಗಾದರೂ ನೆರವಾಗಲಿ.

Categories
ಸಿನಿ ಸುದ್ದಿ

‘ಬಿಗ್’ ಶಾಕಿಂಗ್ ನ್ಯೂಸ್; ಆಸ್ಪತ್ರೆ ಸೇರಿದ ದಿವ್ಯಾ ಉರುಡುಗ ! ಅಷ್ಟಕ್ಕೂ ದಿವ್ಯಾಗೆ ಆಗಿದ್ದೇನು?

ಕೊರೋನಾ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವಾಗ ಕೆಲವರು ಬಿಗ್‌ ಬಾಸ್‌ ಮನೆಯೇ ಸುರಕ್ಷಿತ ತಾಣ ಅಂದುಕೊಂಡಿದ್ದು ಹೌದು. ಆದರೆ ಆ ಮನೆಯ ಬಗ್ಗೆಯೂ ಈಗ ಅನುಮಾನ ಶುರುವಾಗಿದೆ. ಯಾಕಂದ್ರೆ,  ಕಲರ್ಸ್‌ ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋ ಗೂ ಅನಾರೋಗ್ಯದ ಕಂಟಕ ಎದುರಾಗಿದೆ. ಇದರ ಸ್ಟಾರ್‌ ನಿರೂಪಕರಾದ ನಟ ಸುದೀಪ್‌ ಅನಾರೋಗ್ಯದ ಕಾರಣ ಶೋ ನಿರೂಪಣೆಗೆ ಗೈರಾದ ಬೆನ್ನಲೇ, ಶೋ ನ ಕಂಟೆಂಸ್ಟ್‌ನಲ್ಲಿ ಒಬ್ಬರಾಗಿದ್ದ ಮಲೆನಾಡ ಚೆಲುವೆ ದಿವ್ಯಾ ಉರುಡುಗ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಬಿಗ್‌ ಬಾಸ್‌ ಮನೆಯಿಂದ ಹೊರ ಕರೆದುಕೊಂಡು ಬರಲಾಗಿದೆ ಎನ್ನುವ ಸುದ್ದಿ ಇದೆ.

ನಟಿ ಹಾಗೂ ಬಿಗ್‌ ಬಾಸ್‌ ಸ್ಪರ್ಧಿ ದಿವ್ಯಾ ಉರುಡುಗ ಅವರ ಅನಾರೋಗ್ಯಕ್ಕೆ ನಿಖರವಾದ ಕಾರಣ ಏನೆಂಬುದು ಇನ್ನು ಗೊತ್ತಾಗಿಲ್ಲ. ಆದರೆ ಕೊರೋನಾ ಕಂಟಕ ಮನೆ ಹೊರಗಡೆ ತಿರುಗಾಡಿದವರನ್ನು ಕಾಡುವ ಹಾಗೆ  ಮನೆಯೊಳಗಡೆ ಅಡಗಿ ಕುಳಿತವರನ್ನೂ ಬಿಟ್ಟಿಲ್ಲ ಎನ್ನುವುದು ನಿಮಗೂ ಗೊತ್ತು. ಹಾಗಾಗಿಯೇ ಕೊರೋನಾ ಕಂಟಕ ಬಿಗ್‌ ಬಾಸ್‌ ಮನೆಗೂ ಎದುರಾಯಿತಾ ಎನ್ನುವ ಆತಂಕ ಶುರುವಾಗಿದೆ. ಹೌದು. ಹಾಗಂತ ನಟಿ ದಿವ್ಯಾ ಅವರಿಗೆ ಕೊರೋನಾವೇ ಅಂತ ಭಾವಿಸಬೇಕಿಲ್ಲ. ಅವರಿಗೆ ಸಹಜವಾದ ಅನಾರೋಗ್ಯದ ಸಮಸ್ಯೆಯಂತೆ. ಹಾಗಾಗಿಯೇ ಅವರನ್ನು ಆಸ್ಪತ್ರೆಗೆ ಸೇರಿಸಲು ಬಿಗ್‌ ಬಾಸ್‌ ಮನೆಯಿಂದ ಹೊರಗೆ ಕರೆತರಲಾಗಿದೆ ಎನ್ನುವ ಮಾತುಗಳಿವೆ.

ಬಿಗ್‌ ಬಾಸ್‌ ಮನೆಯೊಳಗಿರುವ ಕಂಟೆಂಸ್ಟ್‌ ಗಳ ಪೈಕಿ ಸದಾ ಲವಲವಿಕೆಯಿಂದ ಇರುವ ಕಂಟೆಂಸ್ಟ್‌ ಅಂದ್ರೆ ದಿವ್ಯಾ ಉರುಡುಗ. ಆದರೆ ಕೆಲವು ದಿನಗಳಿಂದ ಅವರು ಇದಕ್ಕಿದ್ದಂತೆ ಮಂಕಾಗಿ ಬಿಟ್ಟಿದ್ದರು. ಇದು ವೀಕ್ಷಕರಿಗೆ ಮಾತ್ರವಲ್ಲ, ಅಲ್ಲಿದ್ದವರಿಗೂ ಅನುಮಾನ ತರಿಸಿತ್ತು. ಹೀಗೆಯೇ ಮೊನ್ನೆ ಬಿಗ್‌ ಬಾಸ್‌ ಮನೆಯೊಳಗಿನ ಅವರ ಸಹ ಸ್ಪರ್ಧಿಗಳು ವಿಚಾರಿಸಿದಾಗ ದಿವ್ಯಾ ಒಂದು ವಿಚಾರ ಹೇಳಿಕೊಂಡಿದ್ದರು. ಇದಾದ ಬಳಿಕ ಅವರನ್ನು‌ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತು. ಸದ್ಯಕ್ಕೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಅನ್ನೋದಷ್ಟೇ ಮಾಹಿತಿಇದೆ.

ಬೆಂಗಳೂರು ನಗರದ ಯಾವ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆನ್ನುವುದು ನಿಗೂಢವಾಗಿದೆ. ಏನೇ ಇರಲಿ, ಆದಷ್ಟು ಬೇಗ ಗುಣಮುಖರಾಗಲಿ. ಅದರಾಚೆ ಕುತೂಹಲ ಇರೋದು ಅಂದ್ರೆ, ಮತ್ತೆ ಅವರು ವಾಪಾಸ್‌ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾಗ್ತಾರಾ ಅಂತ.  ಯಾಕಂದ್ರೆ ಈಗ ಕೊರೋನಾ ಎಲ್ಲಾ ಕಡೆಗೂ ವ್ಯಾಪಿಸಿಕೊಂಡಿದೆ. ಆರೋಗ್ಯವಾಗಿದ್ದವರೂ ಕೂಡ ಎಷ್ಟು ಸೇಫ್‌ ಅನ್ನೋದು ಖಾತರಿ ಇಲ್ಲ. ಪ್ರತಿ ಮನೆಯಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್‌ ಕಟ್ಟಿಟ್ಟ ಬುತ್ತಿ ಅಂತಲೇ ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ಬಂದು ಹೋದ ನಂತರ ದಿವ್ಯಾ ಅವರಿಗೆ ಕೊರೋನಾ ಬರೋದಿಲ್ಲ ಅನ್ನೋದಕ್ಕೆ ಗ್ಯಾರಂಟಿ ಏನು? ಅದೇ ಕಾರಣಕ್ಕೆ  ದಿವ್ಯಾ ಅವರನ್ನು ಮತ್ತೆ ಬಿಗ್‌ಬಾಸ್‌ ಮನೆಗೆ ಕಳುಹಿಸುವುದು ಬಹುತೇಕ ಡೌಟ್.‌ ಆದರೂ ಕಲರ್ಸ್‌ ಕನ್ನಡ ಏನೆಲ್ಲ ಮುಂಜಾಗ್ರತೆ ವಹಿಸಿದೆ ಅನ್ನೋದು ಗೊತ್ತಿಲ್ಲ.

Categories
ಸಿನಿ ಸುದ್ದಿ

ಕವಿರತ್ನ ಕಾಳಿದಾಸ ಚಿತ್ರ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನ

ಕನ್ನಡ ಚಿತ್ರರಂಗದಲ್ಲಿ “ಕವಿರತ್ನ ಕಾಳಿದಾಸ”, “ಅಂಜದ ಗಂಡು”, “ಕಿಂದರಿ ಜೋಗಿ” ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನರಾಗಿದ್ದಾರೆ.

81 ವರ್ಷದವರಾಗಿದ್ದ ರೇಣುಕಾ ಶರ್ಮಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಕಳೆದ ಕೆಲವು ದಿನಗಳಿಂದ ಗಿರಿನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿಮೋನಿಯಾ ಖಾಯಿಲೆ ಇದ್ದ ಕಾರಣ ನಿರ್ದೇಶಕ ರೇಣುಕಾ ಶರ್ಮಾ, ನಿನ್ನೆ ರಾತ್ರಿ ಕೊರೋನಾ ಸೋಂಕಿನಿಂದಾಗಿ ವಿಧಿವಶರಾಗಿದ್ದಾರೆ. 


1981ರಲ್ಲಿ “ಅನುಪಮ” ಚಿತ್ರದ ಮೂಲಕ ನಿರ್ದೇಶಕರಾದ ರೇಣುಕಾ ಶರ್ಮಾ,” ಕವಿರತ್ನ ಕಾಳಿದಾಸ” “ಶಹಬ್ಬಾಸ್ ವಿಕ್ರಮ್”, “ಸತ್ಕಾರ” ಹಾಗೂ “ನಮ್ಮ ಊರು ದೇವತೆ”, “ಅಂಜದ ಗಂಡು”, “ಕಿಂದರಿ ಜೋಗಿ”,”ಶಬರಿ ಮಲೆ ಶ್ರೀ ಅಯ್ಯಪ್ಪ”, “ಭರ್ಜರಿ ಗಂಡು” ಹಾಗೂ “ಹಠಮಾರಿ ಹೆಣ್ಣು ಕಿಲಾಡಿ ಗಂಡು”, “ಕೊಲ್ಲೂರು ಶ್ರೀ ಮೂಕಾಂಬಿಕೆ’ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ರೇಣುಕಾ ಶರ್ಮಾ ಪತ್ನಿ ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ವರ್ಗ ತೀರ್ಮಾನಿಸಿದೆ.

error: Content is protected !!