ಸದ್ಯ ಬೆಂಗಳೂರಿನ ಪರಿಸ್ಥಿತಿ ನೋಡಿದಾಗ ಭಯವಾಗುತ್ತಿದೆ. ಎಷ್ಟೋ ಜನ ಆಕ್ಸಿಜನ್, ಬೆಡ್ ಇಲ್ಲದೆ ನರಳುತ್ತಿದ್ದಾರೆ. ಹೀಗಾಗಿ ನಾನು ನನ್ನ ಶೂಟಿಂಗ್ ಹೌಸ್ ವೊಂದನ್ನು ಕೋವಿಡ್ ರೋಗಿಗಳ ಸೇವೆಗೆ ನೀಡಲು ಬಯಸಿದ್ದೇನೆ. ಈ ಮೂಲಕ ಜಾಗದ ಅಭಾವ ಕಡಿಮೆ ಮಾಡುವ ಸಣ್ಣ ಪ್ರಯತ್ನ ನನ್ನದು
ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಲೆಕ್ಕವಿಲ್ಲದಷ್ಟು ಮಂದಿ ಜೀವ ಬಿಡುತ್ತಿದ್ದಾರೆ. ಸರ್ಕಾರ ಮಾಡುವಷ್ಟು ಮಾಡಿದರೂ ಕೊರೊನಾ ಹಾವಳಿ ನಿಂತಿಲ್ಲ. ಸಮರೋಪಾದಿಯಲ್ಲಿ ಸೇವೆಗಳು ನಿರಂತರವಾಗಿದ್ದರೂ ನಿಯಂತ್ರಣಕ್ಕೆ ಬರದೆ, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಇಲ್ಲಿ ಪರ, ವಿರೋಧಗಳ ಚರ್ಚೆಯೂ ನಡೆಯುತ್ತಿದೆ. ಈಗ ಆ ಬಗ್ಗೆ ಮಾತನಾಡುವ ಸಂದರ್ಭವಲ್ಲ. ಮನುಷ್ಯತ್ವ ರೂಪಿಸಿಕೊಂಡಿರುವ ಮಂದಿ ತಮ್ಮ ಕೈಲಾದ ಸೇವೆಗೆ ಮುಂದಾಗಿದ್ದಾರೆ.
ಇದಕ್ಕೆ ಸಿನಿಮಾ ರಂಗದ ಹಲವರೂ ಕೈ ಜೋಡಿಸಿದ್ದಾರೆ. ಈಗಾಗಲೇ ನಟ ಸುದೀಪ್ ಅವರು, ಆಕ್ಸಿಜನ್ ಕೊರತೆ ನೀಗಿಸಲು ಮುಂದಾಗಿದ್ದು ಗೊತ್ತೇ ಇದೆ. ಹಾಗೆಯೇ, ಗೀತ ಸಾಹಿತಿ ಕವಿರಾಜ್ ಕೂಡ ಒಂದು ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಕೊರೊನಾ ಸೋಂಕಿತರ ನೆರವಿಗೆ ಧಾವಿಸಲು ರೂಪುರೇಷೆ ನಡೆಸುತ್ತಿದ್ದಾರೆ. ಅದಕ್ಕೆ ಸಿನಿಮಾದ ಒಂದಷ್ಟು ಜನ ಸಾಥ್ ಕೊಡುವ ಭರವಸೆಯನ್ನೂ ನೀಡಿದ್ದಾರೆ. ಇಲ್ಲೀಗ ಆಕ್ಸಿಜನ್ ಸಮಸ್ಯೆ ತಲೆದೋರಿದೆ. ಬೆಡ್ ವ್ಯವಸ್ಥೆ ಇಲ್ಲದೆಯೂ ಜನರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮದೂ ಒಂದು ಸಣ್ಣ ಸೇವೆ ಅಂದುಕೊಂಡು ಮುಂದೆ ಬಂದಿರುವ ಯುವ ನಟಿ ಸಾತ್ವಿಕ ಅವರು ತಮ್ಮ ಶೂಟಿಂಗ್ ಹೌಸ್ ಅನ್ನು ಕೋವಿಡ್ ಸೆಂಟರ್ ಆಗಿ ರೂಪಿಸಿ, ಕೊರೊನಾ ಸೋಂಕಿತರಿಗೆ ನೆರವಾಗಲು ತೀರ್ಮಾನಿಸಿದ್ದಾರೆ.
ಹೌದು, ನಟಿ ಸಾತ್ವಿಕ ಅವರು ಹಲವು ವರ್ಷಗಳಿಂದ ನಟನೆಯ ಜೊತೆಗೆ ಧಾರಾವಾಹಿ, ಸಿನಿಮಾಗಳ ಚಿತ್ರೀಕರಣಕ್ಕಾಗಿ ಶೂಟಿಂಗ್ ಹೌಸ್ ಅನ್ನು ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಮೂರು ಬಂಗಲೆಗಳನ್ನು ಶೂಟಿಂಗ್ ಬಾಡಿಗೆಗೆ ನೀಡುತ್ತಿದ್ದಾರೆ. ಇದರ ಜೊತೆಯಲ್ಲಿ ಸಾಮಾಜಿಕ ಕೆಲಸಗಳಲ್ಲೂ ತೊಡಗಿರುವ ಸಾತ್ವಿಕ, ಕೊರೊನಾ ಹಾವಳಿಗೆ ತತ್ತರಿಸುತ್ತಿರುವ ಜನರಿಗೆ ಸಿಗದ ಆಕ್ಸಿಜನ್, ಬೆಡ್ ಸಮಸ್ಯೆ ಅರಿತು ತಮ್ಮ ಶೂಟಿಂಗ್ ಹೌಸ್ ಅನ್ನು ಸೋಂಕಿತರ ಸೇವೆಗೆ ನೀಡಲು ಬಯಸಿದ್ದಾರೆ.
ಈ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ನಟಿ ಸಾತ್ವಿಕ, ” ನಾನು ಹಲವು ವರ್ಷಗಳಿಂದ ಬೆಂಗಳೂರಲ್ಲಿ ಮೂರು ವಿಶಾಲವಾದ ಬಂಗಲೆಗಳನ್ನು ಸಿನಿಮಾ,ಧಾರಾವಾಹಿ ಶೂಟಿಂಗ್ ಗಾಗಿ ಬಾಡಿಗೆ ನೀಡುತ್ತ ಬಂದಿದ್ದೇನೆ. ಈಗ ಕೊರೊನಾ ಹಾವಳಿ ಇದ್ದುದರಿಂದ ಸರ್ಕಾರ ಬ್ರೇಕ್ ಹಾಕಿದೆ. ಹಾಗಾಗಿ ಶೂಟಿಂಗ್ ನಡೆಯುತ್ತಿಲ್ಲ. ಸದ್ಯ ಬೆಂಗಳೂರಿನ ಪರಿಸ್ಥಿತಿ ನೋಡಿದಾಗ ಭಯವಾಗುತ್ತಿದೆ. ಎಷ್ಟೋ ಜನ ಆಕ್ಸಿಜನ್, ಬೆಡ್ ಇಲ್ಲದೆ ನರಳುತ್ತಿದ್ದಾರೆ. ಹೀಗಾಗಿ ನಾನು ನನ್ನ ಶೂಟಿಂಗ್ ಹೌಸ್ ವೊಂದನ್ನು ಕೋವಿಡ್ ರೋಗಿಗಳ ಸೇವೆಗೆ ನೀಡಲು ಬಯಸಿದ್ದೇನೆ. ಈ ಮೂಲಕ ಜಾಗದ ಅಭಾವ ಕಡಿಮೆ ಮಾಡುವ ಸಣ್ಣ ಪ್ರಯತ್ನ ನನ್ನದು. ಅಂದಹಾಗೆ, ಕೆಂಗೇರಿ ಬಸ್ ಸ್ಟಾಪ್ ಬಳಿ ವಿಶಾಲವಾದ ಹೌಸ್ ಅನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲು ತೀರ್ಮಾನಿಸಿದ್ದು,
ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ನನ್ನ ಈ ಹೌಸ್ ಪಡೆದು ಕೋವಿಡ್ ಸೆಂಟರ್ ಆಗಿ ರೂಪಿಸಲಿ. ನಾನು ನನ್ನ ಮನೆಯ ಜೊತೆಗೆ ನೀರು, ವಿದ್ಯುತ್ ಬಿಲ್ ವ್ಯವಸ್ಥೆ ಮಾಡುತ್ತೇನೆ. ಉಳಿದಂತೆ ಸರ್ಕಾರ ಆಕ್ಸಿಜನ್, ಬೆಡ್, ವೈದ್ಯ, ಸಿಬ್ಬಂದಿ ಸೇರಿದಂತೆ ರೋಗಿಗಳ ಸೇವೆಗಡ ಅಗತ್ಯ ವಸ್ತುಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಿ” ಎಂದು ಸಾತ್ವಿಕ ಹೇಳಿದ್ದಾರೆ.
ಸಾತ್ವಿಕ , ನಟಿ
ಇನ್ನು ಮನೆ 60*80 ವಿಸ್ತೀರ್ಣ ಹೊಂದಿದ್ದು, ಮೂರು ಬೆಡ್ ರೂಮ್ ಗಳ ಎರಡು ಫ್ಲೋರ್ ಇದೆ. ಬೇಸ್ ಮೆಂಟ್ ಕೂಡ ಇದೆ. ಕ್ಲೋಸ್ಡ್ ಟೆರೇಸ್ ಕೂಡ ಇದೆ.
ಸದ್ಯಬೀ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ಸಾತ್ವಿಕ, ಕೂಡಲೇ ಸರ್ಕಾರದ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಈ ಅನುಕೂಲ ಸದ್ಬಳಕೆ ಮಾಡಿಕೊಳ್ಳಲಿ ಎಂದಿರುವ ಸಾತ್ವಿಕ, ಕೊರೊನಾ ಸೋಂಕಿತರಿಗೆ ಈ ವ್ಯವಸ್ಥೆ ಮಾಡಲು ಮುಂದಾಗಲು ಬಯಸಿದರೆ ನನ್ನ ಮೊಬೈಲ್ ಸಂಖ್ಯೆ 99008 71777 ಕರೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಅದೇನೆ ಇರಲಿ, ಒಬ್ಬ ನಟಿಯಾಗಿ ಕೊರೊನಾ ಸೋಂಕಿತರಿಗೆ ನೆರವಾಗಲು ಬಯಸಿರುವ ಸಾತ್ವಿಕ ಅವರ ಈ ಪ್ರಯತ್ನದಿಂದ ಒಂದಷ್ಟು ಮಂದಿಗೆ ಸಹಾಯವಾದರೆ ಅಷ್ಟೇ ಸಾಕು. ಸರ್ಕಾರ ಈ ಬಗ್ಗೆ ಗಮನ ಹರಿಸಿ, ಆ ಭಾಗದ ಸೋಂಕಿತರಿಗಾದರೂ ನೆರವಾಗಲಿ.