ಲಾಕ್ ಡೌನ್ ಹಿನ್ನೆಲೆಯಲ್ಲಿ ಮೇ 10 ರಿಂದಲೇ ಕನ್ನಡ ಕಿರುತೆರೆಯ ಎಲ್ಲಾ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಲು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ತೀರ್ಮಾನ ಕೈಗೊಂಡಿದೆ. ಸರ್ಕಾರ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮೇ 10 ರಿಂದ ಮೇ 24 ರವರೆಗೂ ಚಿತ್ರೀಕರಣ ಬಂದ್ ಆಗಲಿದೆ ಅಂತ ಅಸೋಷಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ತಿಳಿಸಿದ್ದಾರೆ.
ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟುವ ಸಂಬಂಧ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಇದಕ್ಕೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಎಲ್ಲಾ ರೀತಿಯ ಬೆಂಬಲ ನೀಡಲು ಒಮ್ಮತದ ತೀರ್ಮಾನ ತೆಗೆದುಕೊಂಡಿದೆ. ಅಂತೆಯೇ ಮೇ 10 ರಿಂದ ಮೇ 24 ರವರೆಗೆ ಕನ್ನಡದ ಎಲ್ಲಾ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಗಳ ಚಿತ್ರೀಕರಣ ಸ್ಥಗಿತಗೊಳ್ಳಲಿದೆ. ಸರ್ಕಾರದ ಮಾರ್ಗಸೂಚಿ ಅನುಸಾರ ರೆಸಾರ್ಟ್, ಪ್ರವಾಸಿ ತಾಣ, ಬೆಂಗಳೂರಿನ ಹೊರವಲಯ ಅಥವಾ ಮನೆ ಇಲ್ಲೇಯೇ ಚಿತ್ರೀಕರಣ ನಡೆಯುವಂತಿಲ್ಲ ಎಂದು ಶಿವಕುಮಾರ್ ತಿಳಿಸಿದ್ದಾರೆ. ಹಾಗೊಂದು ವೇಳೆ ಸರ್ಕಾರದ ಕೋವಿಡ್ ನಿಯಮ ಮೀರಿಯೂ ಯಾರಾದರೂ ಚಿತ್ರೀಕರಣ ಮಾಡಿದ್ದಲ್ಲಿ ಅವರ ವಿರುದ್ಧ ಕಠಿಣ ಶಿಕ್ಷೆ ಆಗಲಿದೆ. ಮುಂದೆ ಆಗುವ ಅನಾಹುತಗಳಿಗೆ ತಾವು ಜವಾಬ್ದಾರಿ ಆಗುವುದಿಲ್ಲ ಅಂತಲೂ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.