ಸಿನಿಮಾ ಚಟುವಟಿಕೆಗಳಿಗಿರುವ ನಿರ್ಬಂಧ ಇವರಿಗೇಕೆ ಇಲ್ಲ… !! ಮನರಂಜನಾ ವಾಹಿನಿಗಳ ಧೋರಣೆ ವಿರುದ್ಧ ಭುಗಿಲೆದ್ದ ಜನರ ಆಕ್ರೋಶ

ನಿಮಗೆಲ್ಲ ಗೊತ್ತೇ ಇದೆ. ಲಾಕ್‌ಡೌನ್‌ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್‌ ಹಾಕಿದೆ. ಚಿತ್ರೋದ್ಯಮವೂ ಅದರಿಂದ ಹೊರತಾಗುಳಿದಿಲ್ಲ. ರಾಜ್ಯದಲ್ಲಿ ಜನತಾ ಕರ್ಪ್ಯೋ ಜಾರಿ ಆದ ದಿನದಿಂದಲೇ ಶೂಟಿಂಗ್‌ ಸೇರಿದಂತೆ ಸಿನಿಮಾ ಚಟುವಟಿಕೆಗಳೆಲ್ಲವೂ ಬಂದ್‌ ಆಗಿವೆ. ಇಷ್ಟಾಗಿಯೂ ಸೀರಿಯಲ್‌ ಹಾಗೂ ರಿಯಾಲಿಟಿ ಶೋ ಗಳ ಚಿತ್ರೀಕರಣ ಮಾತ್ರ ನಿಂತಿಲ್ಲ. ಲಾಕ್‌ ಡೌನ್‌ ಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಸೀರಿಯಲ್‌ ಚಿತ್ರೀಕರಣಗಳು ಶೂಟಿಂಗ್‌ ಮನೆಗಳಲ್ಲಿ ಸದ್ದಿಲ್ಲದೆ ನಡೆಯುತ್ತಿರುವುದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರೀಕರಣ ನಡೆಯುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿಲ್ಲವಾದರೂ, ಅಲ್ಲಿ ಚಿತ್ರೀಕರಣದಲ್ಲಿ ಭಾಗಿಯಾದವರಿಗೆ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡು ಉಳಿದವರೆಲ್ಲರೂ ಭಯದಲ್ಲಿದ್ದರೂ, ಚಾನೆಲ್‌ ನವರು ಮಾತ್ರ ಇದ್ಯಾವುದನ್ನು ಲೆಕ್ಕಿಸದೇ ಚಿತ್ರೀಕರಣ ಮಾಡುತ್ತಿರುದ್ದಾರೆನ್ನುವ ಆರೋಪಗಳು ಕೇಳಿಬಂದಿವೆ. ಅದಕ್ಕೆ ಕೆಲವು ಕಹಿ ಘಟನೆಗಳು ಸಾಕ್ಷಿ ಆಗಿವೆ.

ಕನ್ನಡದ ಖಾಸಗಿ ಟಿವಿಯೊಂದರಲ್ಲಿ ಪ್ರಸಾರವಾಗುವ “ಸುಂದರಿʼ ಸೀರಿಯಲ್‌ ಚಿತ್ರೀಕರಣ ನಗರದ ರೆಸಾರ್ಟ್‌ ವೊಂದರಲ್ಲಿ ನಡೆಯುತ್ತಿದ್ದು, ಅಲ್ಲಿನ ಕಲಾವಿದರೊಬ್ಬರಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಹಾಗಾಗಿ ಕಲಾವಿದರು ಭಯದಿಂದಲೇ ಅದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಾಗಿ ಬಂದಿದೆ. ಇದೊಂಥರ ತಮ್ಮಲ್ಲಿ ಭಯ ಹುಟ್ಟಿಸಿದೆ ಅಂತ ಕಲಾವಿದರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹಾಗೆಯೇ ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಕಂಟೆಂಸ್ಟ್‌ ವೊಬ್ಬರು ಅನಾರೋಗ್ಯಕ್ಕೆ ಒಳಗಾಗಿರುವುದು ತೀವ್ರ ಆತಂಕಕ್ಕೆ ದೂಡಿದೆ. ಇಷ್ಟಾಗಿಯೂ ಕನ್ನಡದ ಅನೇಕ ಧಾರಾವಾಹಿಗಳಿಗೆ ಈಗಲೂ ಕದ್ದು ಮುಚ್ಚಿ ಚಿತ್ರೀಕರಣ ನಡೆಯುತ್ತಲೇ ಇದ್ದು, ಮನರಂಜನಾ ವಾಹಿನಿಗಳ ಜನರ ಸಾವು-ನೋವುಗಳ ನಡುವೆಯೂ ಹಣ ಮಾಡುವ ದಂಧೆಗೆ ನಿಂತಿವೆ ಅಂತಲೂ ಪ್ರೇಕ್ಷಕರೊಬ್ಬರು ದೂರಿದ್ದಾರೆ.

ಅಷ್ಟೇ ಅಲ್ಲ, ಈ ಮನರಂಜನಾ ವಾಹಿನಿಗಳಿಗೆ ಜನರ ಬಗ್ಗೆ ಕಿಂಚತ್ತು ಕಾಳಜಿಯೇ ಇಲ್ಲ. ಈಗ ನ್ಯೂಸ್‌ ಚಾನೆಲ್‌ ನೋಡುವುದಕ್ಕಿಂತ ಹೆಚ್ಚಾಗಿ ಜನರು ಮನರಂಜನಾ ವಾಹಿನಗಳನ್ನೇ ಹೆಚ್ಚಾಗಿ ನೋಡುತ್ತಿದ್ದಾರೆ. ಸೀರಿಯಲ್‌, ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಗೆ ಜನರು ಕಾಯುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಮನರಂಜನಾ ವಾಹಿನಿಗಳು ತಮ್ಮ ಕಾರ್ಯಕ್ರಮ ಪ್ರಸಾರ ಮಾಡುವ ಸಂದರ್ಭದಲ್ಲೇ ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಸಣ್ಣ ಪುಟ್ಟ ಕಿರುಚಿತ್ರಗಳನ್ನು, ಇಲ್ಲವೇ ಸೆಲಿಬ್ರಿಟಿಗಳ ಹೇಳಿಕೆಗಳನ್ನು ಪ್ರಸಾರ ಮಾಡಬಹುದು. ಇಲ್ಲಿ ತನಕ ಒಂದೇ ಒಂದು ಮನರಂಜನೆ ಚಾನೆಲ್‌ ಕೂಡ ಈ ಕೆಲಸ ಮಾಡಿಲ್ಲ.

ಬದಲಿಗೆ ಜನರನ್ನು ಕಿತ್ತುಹೋದ ಅರ್ಥ ಹೀನ ಮನೆಹಾಳು ಕತೆಗಳ ಧಾರಾವಾಹಿಗಳ ಮೂಲಕ ಜನರನ್ನು ಹಾಳು ಮಾಡುವುದರ ಜತೆಗೆ ತಮ್ಮ ಟಿಆರ್‌ ಪಿ ಹೆಚ್ಚಿಸಿಕೊಳ್ಳುವುದಕ್ಕಷ್ಟೇ ತಮ್ಮನ್ನು ತಾವು ಮೀಸಲಿರಿಸಿಕೊಂಡಿದ್ದಾರೆ. ಸರ್ಕಾರ ಇವುಗಳಿಗೂ ಕಡಿವಾಣ ಹಾಕಬೇಕಿದೆ ಅಂತ ವೀಕ್ಷಕರೇ ಆಗ್ರಹಿಸಿದ್ದಾರೆ.

Related Posts

error: Content is protected !!