Categories
ಸಿನಿ ಸುದ್ದಿ

ಸದಸ್ಯರಲ್ಲದವರನ್ನೂ ಪರಿಗಣಿಸಿ: ಇಂತಹ ಪರಿಸ್ಥಿತಿಯಲ್ಲಿ ಸಹಕರಿಸಿ ಅಂತ ಮನವಿ ಮಾಡಿದ ನಟ‌ ಯತಿರಾಜ್

ಹತ್ತಾರು ವರ್ಷಗಳಿಂದ ಸಿನಿಮಾ ರಂಗದ ಅನೇಕ ವಿಭಾಗಗಳಲ್ಲಿ ದುಡಿಯುತ್ತಿದ್ದರೂ, ಕೆಲವರು ಎಲ್ಲಿಯೂ ಸದಸ್ಯರಾಗಿಲ್ಲ. ಹಾಗಾಗಿ ಅವರ ಬಳಿ ಯಾವುದೇ ಕಾರ್ಡ್ ಕೂಡ ಇಲ್ಲ. ಅದಕ್ಕೆ ಏನೇ ಕಾರಣಗಳಿದ್ದರೂ, ಇಂತಹ ಸಂದಿಗ್ಧ ಸಮಯದಲ್ಲಿ ಅದು ಮಾನದಂಡ ಆಗಬಾರದು

ಕೊರೊನಾ ಎಂಬ ಮಹಾಮಾರಿ ಎಲ್ಲರನ್ನೂ ಸಾಕಷ್ಟು ಸಂಕಷ್ಟಕ್ಕೀಡು ಮಾಡಿದೆ. ಅದರಲ್ಲೂ ಬಣ್ಣದ ಲೋಕದ ಜನರ ಪಾಡಂತೂ ಹೇಳತೀರದು. ಅವರ ಸಮಸ್ಯೆ ಅರಿತು ಈಗಾಗಲೇ ಹಲವು ಸ್ಟಾರ್ ನಟರು ಸಹಾಯ ಮಾಡಿದ್ದಾರೆ. ಸರ್ಕಾರ, ಒಕ್ಕೂಟ, ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸಹಾಯಕ್ಕೆ ಮುಂದಾಗಿವೆ. ಇಂತಹ ಕಷ್ಟದ ಕಾಲದಲ್ಲಿ ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆಯೇ. ಆದರೆ, ಸರ್ಕಾರದ ಸಹಾಯ ಕೆಲವರಿಗೆ ಮಾತ್ರ ಎಂಬಂತಾಗಿದೆ. ಎಲ್ಲಾ ವರ್ಗಕ್ಕೂ ಇದು ಸಲ್ಲಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದು, ಸಂಬಂಧಿಸಿದವರು ಈ ಬಗ್ಗೆ ಗಮನಿಸಬೇಕು ಎಂಬ ಮನವಿ ಕೂಡ ಮಾಡಲಾಗುತ್ತಿದೆ. ಈ ಕುರಿತಂತೆ, ನಟ, ನಿರ್ದೇಶಕ ಯತಿರಾಜ್ ಕೂಡ ವಾಣಿಜ್ಯ ಮಂಡಳಿ, ಒಕ್ಕೂಟ ಮತ್ತು ಸಂಘ ಸಂಸ್ಥೆಗಳ ಹಾಗು ಸಂಬಂಧಿಸಿದವರಿಗೆ ಮನವಿ ಮಾಡಿದ್ದಾರೆ. ಅವರು ಮಾಡಿದ ಮನವಿ ಹೀಗಿದೆ.

ಓವರ್ ಟು ಯತಿರಾಜ್…

ಹತ್ತಾರು ವರ್ಷಗಳಿಂದ ಸಿನಿಮಾ ರಂಗದ ಅನೇಕ ವಿಭಾಗಗಳಲ್ಲಿ ದುಡಿಯುತ್ತಿದ್ದರೂ, ಕೆಲವರು ಎಲ್ಲಿಯೂ ಸದಸ್ಯರಾಗಿಲ್ಲ. ಹಾಗಾಗಿ ಅವರ ಬಳಿ ಯಾವುದೇ ಕಾರ್ಡ್ ಕೂಡ ಇಲ್ಲ. ಅದಕ್ಕೆ ಏನೇ ಕಾರಣಗಳಿದ್ದರೂ, ಇಂತಹ ಸಂದಿಗ್ಧ ಸಮಯದಲ್ಲಿ ಅದು ಮಾನದಂಡ ಆಗಬಾರದು. ದುರಾದೃಷ್ಟವಶಾತ್ ಅವರು ಸದಸ್ಯರಲ್ಲ ಎನ್ನುವ ಕಾರಣದಿಂದ ಈಗ ಸಿಗಬೇಕಾದ ಎಲ್ಲಾ ಸೌಲಭ್ಯಗಳಿಂದ ಅವರು ವಂಚಿತರಾಗುತ್ತಿದ್ದಾರೆ. ವಿಶೇಷವಾಗಿ ಸಹ ಹಾಗೂ ಸಹಾಯಕ ನಿರ್ದೇಶಕರುಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ.

ಅದೇ ರೀತಿ ಎಲ್ಲೆಡೆ ಬರಲಾಗದ ಹಿರಿಯರಿಗೂ ಕೆಲ ಸೌಲಭ್ಯಗಳು ತಲುಪುತ್ತಿಲ್ಲ. ಮುಂಚೂಣಿಯಲ್ಲಿರುವ ಸ್ವಯಂ ಸೇವಕರು ಈ‌ ಮನವಿಯನ್ನು ಪರಿಗಣಿಸಿ ಅಸಹಾಯಕರ ಕೈ ಹಿಡಿದು, ನಾವೆಲ್ಲರೂ ಒಂದೇ ಎಂದು ಸಾರುವ ಮೂಲಕ ಮಾನವೀಯ ಮೌಲ್ಯಗಳನ್ನು ಉಳಿಸಿ ಎಂದು ವಿನಮ್ರವಾಗಿ ಬೇಡಿಕೊಳ್ಳುತ್ತೇನೆ’ ಎಂದಿದ್ದಾರೆ ಯತಿರಾಜ್.

Categories
ಸಿನಿ ಸುದ್ದಿ

ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಜೊತೆ ನಟ‌ ಸುದೀಪ್ ಚೆಸ್ ಗೇಮ್! ಕೊರೊನಾ ಪರಿಹಾರ ನಿಧಿಗೆ ಈ ಪಂದ್ಯಾವಳಿ

ನಟ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಅಂದರೆ ಎಲ್ಲಿಲ್ಲದ ಪ್ರೀತಿ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಈಗಾಗಲೇ ಸಿಸಿಎಲ್ ಪಂದ್ಯಾವಳಿಯಲ್ಲಿ ಗೆದ್ದು ಬೀಗಿದ್ದಾರೆ ಕೂಡ. ಈಗ ಸುದೀಪ್ ಇನ್ನೊಂದು ಆಟಕ್ಕೂ ಸಜ್ಜಾಗಿದ್ದಾರೆ.

ಹೌದು, ಚೆಸ್ ಜಗತ್ತಿನ ಚಾಂಪಿಯನ್ ಎನಿಸಿಕೊಂಡಿರುವ ವಿಶ್ವನಾಥನ್ ಆನಂದ್ ಅವರು ಜೂ.13 ರಂದು ಏಕಕಾಲದಲ್ಲಿ ಹಲವರ ಜೊತೆ ಪ್ರದರ್ಶನ ಚೆಸ್ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ಈ ಪಂದ್ಯಗಳು ನಡೆಯಲಿವೆ. ಈ ಚೆಸ್ ಪಂದ್ಯದಲ್ಲಿ ತಾರೆಯರು ಮತ್ತು ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.

ಈ ಪಂದ್ಯದಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ಕನ್ನಡ ನಟ‌ಕಿಚ್ಚ ಸುದೀಪ್ ಕೂಡ ಆಡಲಿದ್ದಾರೆ. ಇನ್ನು ಇವರೊಂದಿಗೆ ನಟ ರಿತೇಶ್ ದೇಶಮುಖ್, ಸಿಂಗರ್ ಅರ್ಜಿತ್ ಸಿಂಗ್ ಗಾಯಕಿ ಅನನ್ಯಾ ಬಿರ್ಲಾ, ಕ್ರಿಕೆಟಿಗ ಚಹಲ್, ಶಿಯೋಮಿ ಇಂಡಿಯಾದ ಸಿಇಓ ಮನುಕುಮಾರ್ಬಜೈನ್, ಝೆರೊಧ ಸಹಸಂಸ್ಥಾಪಕ ನಿಖಿಲ್ ಕಾಮತ್, ನಿರ್ಮಾಪಕ ಸಾಜಿದ್ ನಾಡಿಯವಾಲ, ಪ್ರಚುರ ಪದಕಣ್ಣಯ್ಯ ಕೂಡ ಆಡಲಿದ್ದಾರೆ.


ಅಂದಹಾಗೆ, ಈ ಪಂದ್ಯದ ಉದ್ದೇಶ ಕೊರೊನಾ ಪರಿಹಾರ ನಿಧಿಗೆ ಹಣ ಸಂಗ್ರಹಕ್ಕೆ. ಅಕ್ಷಯಾ ಪಾತ್ರಾ ಫೌಂಡೇಷನ್, ಚೆಸ್.ಕಾಮ್, ಎಕ್ಸ್ ಸೆಟರಾ ಟ್ಯಾಲೆಂಟ್‌ ಮ್ಯಾನೇಜ್ಮೆಂಟ್ ಸಹಯೋಗದಲ್ಲಿ ಈ ಪಂದ್ಯ ನಡೆಯಲಿದೆ. ಚೆಸ್.ಕಾಮ್ ನ ಅಧಿಕೃತ ಯುಟ್ಯೂಬ್ ವಾಹಿನಿಯಲ್ಲಿ ಇದು ನೇರ ಪ್ರಸಾರಗೊಳ್ಳಲಿದೆ.

Categories
ಸಿನಿ ಸುದ್ದಿ

ಬಂಡಾಯ ಕವಿ ಸಿದ್ದಲಿಂಗಯ್ಯ ಪ್ರೇಮಕವಿಯೂ ಹೌದು.. ಅಷ್ಟೇ ಅಲ್ಲ, ಬೆಳ್ಳಿತೆರೆ ಜೋಡಿಗಳಿಗೆ ನವಿರಾದ ಗೀತೆ ರಚಿಸಿದ ಮೋಡಿಗಾರ ಕೂಡ

‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ’ ಅಂತ ಸಾಹಿತ್ಯ ರಚನೆ ಮಾಡಿದ ವಿಶಿಷ್ಟ ಸಾಹಿತಿ ಸಿದ್ದಲಿಂಗಯ್ಯ. ಬೆಳ್ಳಿತೆರೆಯ ಮೇಲೆ ಈ ಹಾಡು ಮೂಡಿ ಬಂದಾಗ ಅದಕ್ಕೆ ಮತ್ತಷ್ಟು ಜನಪ್ರಿಯತೆ ಸಿಕ್ಕಿತು ಅನ್ನೋದು ಇನ್ನೊಂದು ವಿಶೇಷ. ಹೌದು, ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯದ ಸೊಗಡು ಕನ್ನಡ ಚಿತ್ರರಂಗಕ್ಕೂ ಪಸರಿಸಿದೆ

ಕವಿ, ಪ್ರಾಧ್ಯಾಪಕ ಡಾ. ಸಿದ್ದಲಿಂಗಯ್ಯ ಕೇವಲ ಬಂಡಾಯ ಸಾಹಿತಿ ಮಾತ್ರವಲ್ಲ, ಪ್ರೇಮ ಕವಿಯೂ ಹೌದು. ಹೋರಾಟದ ಅಂಗಳದಲ್ಲಿದ್ದ ಇಕ್ರಲಾ, ಒದಿರ್ಲಾ ಅಂತ ಬೆಂಕಿ ಸಾಹಿತ್ಯವನ್ನು ರಚಿಸಿದ ಸಂದರ್ಭದಲ್ಲಿ
‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ’ ಅಂತ ಸಾಹಿತ್ಯ ರಚನೆ ಮಾಡಿದ ವಿಶಿಷ್ಟ ಸಾಹಿತಿ ಸಿದ್ದಲಿಂಗಯ್ಯ. ಬೆಳ್ಳಿತೆರೆಯ ಮೇಲೆ ಈ ಹಾಡು ಮೂಡಿ ಬಂದಾಗ ಅದಕ್ಕೆ ಮತ್ತಷ್ಟು ಜನಪ್ರಿಯತೆ ಸಿಕ್ಕಿತು ಅನ್ನೋದು ಇನ್ನೊಂದು ವಿಶೇಷ. ಹೌದು, ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯದ ಸೊಗಡು ಕನ್ನಡ ಚಿತ್ರರಂಗಕ್ಕೂ ಪಸರಿಸಿದೆ. ಸಿನಿಮಾಗಳಲ್ಲಿ ಕಾಡುವ ಪ್ರೇಮ ಗೀತೆಗಳನ್ನ ಬರೆಯುವ ಮೂಲಕ ಪ್ರೇಮ ಕವಿ ಅಂತಾ ಕರೆಯಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಕನ್ನಡದ ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ʼಧರಣಿ ಮಂಡಲ ಮಧ್ಯದೊಳಗೆʼ ಸಿನಿಮಾ. ಈ ಚಿತ್ರಕ್ಕೆ ಸಿದ್ದಲಿಂಗಯ್ಯ ಮೂರು ಹಾಡುಗಳನ್ನ ಬರೆದಿದ್ದಾರೆ.

ಶ್ರೀನಾಥ್, ಎಡಕಲ್ಲು ಚಂದ್ರಶೇಖರ್, ಜೈ ಜಗದೀಶ್ ಅಭಿನಯದ ಈ ಚಿತ್ರದಲ್ಲಿ, ‘ಗೆಳತಿ ಓ ಗೆಳತಿ’ ಎಂಬ ಹಾಡು ಸೂಪರ್ ಹಿಟ್ ಆಗಿತ್ತು. ಒಂದು ಅಚ್ಚರಿ ಸಂಗತಿ ಅಂದರೆ, ಈ ಹಾಡಿಗೆ 1984ರಲ್ಲಿ ಅತ್ಯುತ್ತಮ ಗೀತೆ ಎಂದು ರಾಜ್ಯ ಪ್ರಶಸ್ತಿಯನ್ನ ಚೊಚ್ಚಲ ಸಿನಿಮಾಕ್ಕೆ ಸಿದ್ದಲಿಂಗಯ್ಯ ಪಡೆಯುತ್ತಾರೆ‌. ವಿಶೇಷ ಅಂದ್ರೆ, ಆಗವರು ಬಂಡಾಯ ಸಾಹಿತ್ಯದ ಮುಂಚೂಣಿಯ ಸಾಹಿತಿ ಎನಿಸಿಕೊಂಡಿದ್ದರು. ಹಾಗಾಗಿ ಈ ಗೀತೆಗಳನ್ನು ಅವರು ಅನಾಮಧೇಯ ಹೆಸರಲ್ಲಿ ಬರೆದಿದ್ದರಂತೆ. ಕೊನೆಗೆ ಅತ್ಯುತ್ತಮ ಗೀತೆ ರಚನೆಯ ಪ್ರಶಸ್ತಿ ಬಂದಾಗ ಈ ಗೀತೆ ಬರೆದಿದ್ದ ತಾವೇ ಅಂತ ಬಹಿರಂಗವಾಗಿ ಒಪ್ಪಿಕೊಂಡು ಪ್ರಶಸ್ತಿ ಸ್ವೀಕರಿಸಿದ್ದರಂತೆ. ಬಳಿಕ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ , ಶಿವರಾಮ್ ಅಭಿನಯದ ಬಾ ನಲ್ಲೇ ಮಧುಚಂದ್ರಕ್ಕೆ ಚಿತ್ರದಲ್ಲಿ, ಸಿದ್ದಲಿಂಗಯ್ಯನವರು ಮತ್ತೊಂದು ಹಿಟ್ ಹಾಡನ್ನ ಬರೆಯುತ್ತಾರೆ. ಅದುವೇ ,’ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ.. ಹಾಡು.ಈ ಎರಡು ಚಿತ್ರಗಳ ಬಳಿಕ ಪ್ರತಿಭಟನೆ ಎಂಬ ಚಿತ್ರಕ್ಕೆ ಸಿದ್ದಲಿಂಗಯ್ಯನವರು ಸಾಹಿತ್ಯ ಬರೆಯುತ್ತಾರೆ.

ಸಿದ್ದಲಿಂಗಯ್ಯನವರು ಮೂರು ಸಿನಿಮಾಗಳಿಗೆ ಮಾತ್ರ ಸಾಹಿತ್ಯ ಬರೆದಿದ್ದರೂ ಕೂಡ, ಬಾ ನಲ್ಲೆ ಮಧುಚಂದ್ರಕೆ ಹಾಗು ಪುಟ್ಟಣ್ಣ ಅವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ಹಾಡುಗಳು ಬಹಳ ಜನಪ್ರಿಯ ಗೀತೆಗಳಾಗಿವೆ. ಈ ಗೀತೆಗಳಿಂದ ಸಿದ್ದಲಿಂಗಯ್ಯ ಅವರನ್ನು ಪ್ರೇಮ ಗೀತೆಯ ಕವಿ ಅಂತಾ ಕರೆಯುತ್ತಾರೆ. ಹಾಗೆಯೇ ಸಿದ್ದಲಿಂಗಯ್ಯ ಅವರ ಮತ್ತೊಂದು ಗೀತೆ ʼಪ್ರತಿಭಟನೆʼ ಹೆಸರಿನ ಚಿತ್ರದಲ್ಲಿ ಬಳಕೆ ಆಯಿತು. ಆ ಮೂಲಕ ಹೋರಾಟ, ಸಾಹಿತ್ಯ, ರಾಜಕಾರಣದ ಜತೆಗೆಯೇ ಕವಿ ಸಿದ್ದಲಿಂಗಯ್ಯ, ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದರು. ಅಷ್ಟು ಮಾತ್ರವಲ್ಲದೆ ಅವರು ರಚಿಸಿದ ಅನೇಕ ಗೀತೆಗಳು ಭಾವಗೀತೆಗಳಾಗಿ ಜನಪ್ರಿಯತೆ ಪಡೆದವು. ಹಾಗೆಯೇ ಕ್ರಾಂತಿ ಗೀತೆಗಳಾಗಿ ನಾಡಿನಾದ್ಯಂತ ಹೋರಾಟದ ಕೆಚ್ಚು ಹಚ್ಚಿದವು ಎನ್ನುವುದು ಸಿದ್ದಲಿಂಗಯ್ಯ ಅವರ ಸಾಹಿತ್ಯದ ವಿಶೇಷ, ವಿಶಿಷ್ಟ.

Categories
ಸಿನಿ ಸುದ್ದಿ

ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ನಿರ್ಮಾಪಕ ರಮೇಶ್ ರೆಡ್ಡಿ, ಕೆ.ಮಂಜು

  

ಕೋವಿಡ್ ಎರಡನೇ ಅಲೆಯಿಂದ ಇಡೀ ದೇಶವೇ ನಲುಗಿದೆ. ಇದರಿಂದ ಎಲ್ಲಾ ಕ್ಷೇತ್ರಗಳಿಗು ಪೆಟ್ಟು ಬಿದ್ದಿದೆ. ಇದಕ್ಕೆ ಕನ್ನಡ ಚಿತ್ರರಂಗ ಕೂಡ ಹೊರತಲ್ಲ. ಕನ್ನಡ ಸಿನಿಮಾ ರಂಗ ಅನುಭವಿಸುತ್ತಿರುವ ನಷ್ಟ ಅಷ್ಟಿಷ್ಟಲ್ಲ. ಈ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಷ್ಟೋ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.
ಇಂತಹ‌ ಸಮಯದಲ್ಲಿ ಅಂಹವರಿಗೆ ಕೈಲಾದಷ್ಟು ಸಹಾಯ ‌ಮಾಡಬೇಕು ಎಂಬ ಉದ್ದೇಶದಿಂದ ನಿರ್ಮಾಪಕರಾದ ರಮೇಶ್ ರೆಡ್ಡಿ, ಕೆ.ಮಂಜು‌ ಹಾಗು ಗೆಳೆಯರು ನೂರಾರು ಕಾರ್ಮಿಕರಿಗೆ ಕಿಟ್ ವಿತರಿಸಿದ್ದಾರೆ.

ಹೌದು, ಜೂನ್ 11ರ ಶುಕ್ರವಾರ ಕೆ.ಆರ್ ರಸ್ತೆಯ ಗರಡಿ ಅಪಾರ್ಟ್ಮೆಂಟ್ ಪಕ್ಕದ ಮೈದಾನದಲ್ಲಿ ಸಿನಿಮಾ ಬರಹಗಾರರು, ಸಂಕಲನ‌ಕಾಋಉ, ಹಾಗೂ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ‌ ಮಾಡುವವರು ಮತ್ತು ಆರ್ ಪಿಗಳು ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್ ವಿತರಿಸಿದ್ದಾರೆ.

ಈ ಹಿಂದೆ ಕೂಡ ಕೊರೊನಾ ಹಾವಳಿಗೆ ತತ್ತರಿಸಿದ್ದ ಜನರಿಗೆ ನಿರ್ಮಾಪಕ ರಮೇಶ್ ರೆಡ್ಡಿ ಅವರ ನೇತೃತ್ವದಲ್ಲಿ ಆಹಾರ ಪದಾರ್ಥಗಳನ್ನು ಹಂಚಲಾಗಿತ್ತು. ಮುಂದೆಯೂ ಕೂಡ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂಬುದು ನಿರ್ಮಾಪಕ ಕೆ.ಮಂಜು ಮಾತು.


Categories
ಸಿನಿ ಸುದ್ದಿ

ನಟ, ಪತ್ರಕರ್ತ ಲಿಂಗೇನಹಳ್ಳಿ ಸುರೇಶ್‌ ಚಂದ್ರ ಇನ್ನು ನೆನಪು ಮಾತ್ರ…

ಹಿರಿಯ ಪತ್ರಕರ್ತ ಹಾಗೂ ನಟ ಲಿಂಗೇನಹಳ್ಳಿ ಸುರೇಶ್‌ ಚಂದ್ರ ಇನ್ನು ನೆನಪು ಮಾತ್ರ. ಅನಾರೋಗ್ಯದ ಹಿನ್ನೆಲೆಯಲ್ಲಿ ಬಹು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಲಿಂಗೇನಹಳ್ಳಿ ಅವರ ಮೂಲ ಊರು. ಅಲ್ಲಿಯೇ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸ್ನೇಹ ಜೀವಿಯಾಗಿದ್ದ ಸುರೇಶ್‌ ಚಂದ್ರ ಅವರದ್ದು ಬಹುಮುಖ ವ್ಯಕ್ತಿತ್ವ. ದೀರ್ಘಕಾಲ ಸಿನಿಮಾ, ರಾಜಕೀಯ ಕ್ಷೇತ್ರಗಳಲ್ಲಿ ಪತ್ರಕರ್ತರಾಗಿ ದುಡಿದಿದ್ದರು. ಸಿನಿಮಾ ಪತ್ರಿಕೋದ್ಯಮ ಒಡನಾಟದೊಂದಿಗೆಯೇ ಸಿನಿಮಾ ಜಗತ್ತಿನ ಜತೆಗೆ ಅನೂನ್ಯ ಬಾಂಧವ್ಯ ಹೊಂದಿದ್ದ ಅವರು, ಪತ್ರಕರ್ತನಾಗಿದ್ದರ ಜತೆಗೆಯೇ ನಟರಾಗಿಯೂ ಪರಿಚಿತರಾದರು.

ನಿರ್ದೇಶಕ ಎಸ್.‌ ನಾರಾಯಣ ನಿರ್ದೇಶನದ ‘ಚೆಲುವಿನ ಚಿತ್ತಾರ’ ಚಿತ್ರದೊಂದಿಗೆ ಸಿನಿಮಾ ಜಗತ್ತಿನಲ್ಲಿ ಹೆಚ್ಚಿನ ಅವಕಾಶ ದಕ್ಕಿಸಿಕೊಂಡ ಸುರೇಶ್‌ ಚಂದ್ರ ಅವರು, ಆನಂತರದ ದಿನಗಳಲ್ಲಿ ಪತ್ರಿಕಾ ವೃತ್ತಿಯ ಜತೆಗೆಯೇ ನಟನೆಯಲ್ಲೂ ಬ್ಯುಸಿ ಆದರು. ‘ನಂದ ಲವ್ಸ್‌ ನಂದಿತಾ’, ‘ಜಂಗ್ಲಿ’, ‘ಉಗ್ರಂ’ ನಂತಹ ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡು ಸಾಕಷ್ಟು ಜನಪ್ರಿಯತೆ ಪಡೆದರು. ನಾಡಿನ ಹೆಸರಾಂತ ಸಂಜೆ ದಿನ ಪತ್ರಿಕೆ ‘ಸಂಜೆವಾಣಿ’ಯಲ್ಲಿ ದೀರ್ಘಕಾಲ ಪತ್ರಿಕಾ ವೃತ್ತಿಯನ್ನು ಸಲ್ಲಿಸಿದ ಅವರು, ಅಲ್ಲಿಯೇ ಕಾಪಿ ಎಡಿಟರ್‌ ಆಗಿ, ಸಹ ಸಂಪಾದಕರಾಗಿ ದುಡಿದರು. ಕೊನೆಗೆ ಸಂಪಾದಕರಾಗಿ ನಿವೃತ್ತಿ ಪಡೆದರು. ಪತ್ರಿಕಾ ವೃತ್ತಿಯನ್ನು ಅತ್ಯಂತ ಗೌರವ ಮತ್ತು ಶ್ರದ್ದೆಯಿಂದ ಪರಿಗಣಿಸಿದ್ದ ಅವರು, ನಿರಂತರವಾಗಿ ಒಂದೇ ಸಂಸ್ಥೆಯಲ್ಲಿದ್ದು ನಿಷ್ಟೆಗೂ ಸೈ ಎನಿಸಿಕೊಂಡಿದ್ದರು.

ಪತ್ರಿಕಾ ವೃತ್ತಿಯ ಜತೆಗೆ ಸಾಹಿತ್ಯ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಅವರು, ಮೂರ್ನಾಲ್ಕು ಚಿತ್ರಗಳಿಗೆ ಸಂಭಾಷಣೆ ಕೂಡ ಬರೆದಿದ್ದರು. ಅದೆಲ್ಲಕ್ಕಿಂದ ಮುಖ್ಯವಾಗಿ ಪತ್ರಕರ್ತ ಬಳಗದಲ್ಲಿ ಅಪಾರ ಸ್ನೇಹಿತರನ್ನು ಸಂಪಾದಿಸಿಕೊಂಡಿದ್ದರು. ಸಾಹಿತ್ಯ ವಲಯದಲ್ಲೂ ಅವರು ಸಾಕಷ್ಟು ಜನರಿಗೆ ಪರಿಚಿತರಿದ್ದರು.

Categories
ಸಿನಿ ಸುದ್ದಿ

ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲೊಮ್ಮೆ ಸಂಚಾರಿಯ ಸಂಚಾರ ! ನಟ ಸಂಚಾರಿ ವಿಜಯ್ ಹೇಳಿದ ಬಟ್ಟೆ ಪ್ರಸಂಗ !!


ಬೆಂಗಳೂರು ಅಂದ್ರೇನೆ ಹಾಗೆ. ಅದೊಂದು ಕಲರ್ ಫುಲ್ ನಗರ. ಶ್ರಮ ಜೀವಿಗಳ ಸಲಹುವ ಸಿಟಿ. ಇಲ್ಲಿ ಕರುಣೆಯೂ ಇದೆ, ಕಣ್ಣೀರು ಇದೆ. ಕಷ್ಟವೂ ಇದೆ, ಸುಖವೂ ಇದೆ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಮೋಸ ಉಂಟು, ದ್ವೇಷವೂ ಉಂಟು. ಬಡವ, ಶ್ರೀಮಂತ ಎಂಬ ಭೇದ-ಭಾವ ಇಲ್ಲದ ರಾಜಧಾನಿ ಇದು. ಎಲ್ಲೆಲ್ಲಿಂದಲೋ ಬಂದವರು ಇಲ್ಲಿ ನಾನಾ ರೀತಿ ಕಷ್ಟ ಅನುಭವಿಸಿದ್ದಾರೆ. ಮೋಸ ಹೋಗಿದ್ದಾರೆ. ಅದಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕೂಡ ಹೊರತಲ್ಲ. ಆ ಅನುಭವ ಏನು ಅನ್ನೋದನ್ನು ಸ್ವತಃ ಸಂಚಾರಿ ವಿಜಯ್ ಹೇಳಿಕೊಂಡಿದ್ದಾರೆ…

ಓವರ್ ಟು ಸಂಚಾರಿ ವಿಜಯ್…

‘ವರುಷಗಳ ಹಿಂದೆ ನಮ್ಮ ಮನೆಯಲ್ಲಿ ನನ್ನ ಕೈಗೆ ಒಂದಿಷ್ಟು ಹಣ ಸಿಕ್ಕರೆ ಮುಗಿಯಿತು. ಹೇಳಿ ಕೇಳಿ ಶೋಕಿವಾಲನ ಬ್ರೀಡಿನಂತಿದ್ದ ನಾನು ಬೆಳ್ಳಂಬೆಳಗ್ಗೆ ಎದ್ದು ರೆಡಿಯಾಗಿ ಮುರುಕು ಮಸುಕು ಕನ್ನಡಿ ಮುಂದೆ ನಿಂತು ಕನ್ನಡಿಯ ಮೇಲಿನ ಧೂಳ್ಯಾವುದೂ ಪೌಡರ್ ಯಾವುದು ಗೊತ್ತಾಗದೆ ಅಳತೆ ಮೀರಿ ಮುಖದ ತುಂಬಾ ಪಾಂಡ್ಸ್ ಪೌಡರ್ ಮೆತ್ತಿಕೊಂಡು, ತಲೆಗೆ ಕೊಬ್ಬರಿ ಎಣ್ಣೆ ಸುರಿದು ಸೈಡಿನಿಂದ ಕ್ರಾಪು ತೆಗೆದು ಮೂವತ್ತು ರೂಪಾಯಿಯ ಕನ್ನಡಕ ಕಣ್ಣಿಗೆ ಬಿತ್ತೆಂದರೆ ಆಹ!!! ಜಗತ್ತೇ ಕಲರ್ಫುಲ್. ನಮ್ಮ ತಂದೆಯ ಶೂ ನನಗೂ ಮುಕ್ಕಾಲು ಭಾಗ ಸೈಜ್ ಆಗುತ್ತಿದ್ದರಿಂದ ಸ್ವಲ್ಪ ಬಟ್ಟೆಯನ್ನು ಹಿಮ್ಮಡಿಯ ಜಾಗಕ್ಕೆ ತುರುಕಿ ಬಿಗಿ ಮಾಡಿ ನೀರಿನಿಂದ ಅದರ ಮೇಲ್ಮೈ ಎಲ್ಲ ಒರೆಸಿ ಎರೆಡೂ ಪಾದಗಳಿಗೆ ಕೂರಿಸಿ ಊರಲ್ಲಿ ಟಾರ್ರೋಡು ಇರುತ್ತಿರಲಿಲ್ಲವಾದ್ದರಿಂದ ಶೂಗೆ ಮಣ್ಣು ಮೆತ್ತಿಕೊಳ್ಳಬಾರದೆಂದು ತುದಿಗಾಲಿನಲ್ಲೇ ಸೂಕ್ಷ್ಮವಾಗಿ ನಡೆಯುತ್ತಾ ದಾರಿಯಲ್ಲಿ ಎದುರು ಸಿಗುತ್ತಿದ್ದ ಶನಿ ಮಹಾತ್ಮನ ಗುಡಿಗೆ ಡೈ ಹೊಡೆದು ಬಸ್ ಸ್ಟಾಂಡ್ ಗೆ ಬಂದರೆ ಊರಿಗೆ ಊರೇ ಈ ನವರಂಗಿಯ ಅವತಾರ ನೋಡಿ ಮೂರ್ಛೆ ಹೋಗದೆ ಉಳಿದರೆ ಪುಣ್ಯ…

ಇಂಥಾ ಈ ನವರಂಗಿ ನಮ್ಮೂರಿಂದ ಹೊರಡುವ ಬೆಂಗಳೂರು-ಚಿಕ್ಕಮಗಳೂರಿನ ಬಸ್ಸು ಹತ್ತಿದವನೇ ಮೊದಲು ಜೋಪಾನ ಮಾಡುತ್ತಿದ್ದುದು ಪ್ಯಾಂಟ್ ಒಳಗಿನ ಸುರಂಗದೋಪಾದಿಯಲ್ಲಿದ್ದ ಚಡ್ಡಿಯ ಜೇಬಿನ ಹೇರ್ ಪಿನ್ನನ್ನು. ಕಾರಣ ಇವನ ಹತ್ತಿರ ಇರುವ ಹಣವನ್ನು ಎಲ್ಲಿ ಯಾರು ಕದ್ದುಬಿಡುತ್ತಾರೋ ಎಂದು ಜೋಪಾನ ಮಾಡುತ್ತಿದ್ದುದು ದೊಗಳೆಯ ಪ್ಯಾಂಟ್ ಒಳಗಿನ ಚಡ್ಡಿ ಅದರ ಮೇಲೊಂದು ಜಗದಗಲದ ಜೇಬು ಅಲ್ಲಿ ಮನೆಯಿಂದ ತಂದ ಹಣನಿಧಿ. ಅದನ್ನು ಒಂದರಮೇಲೊಂದು ಸುರುಳಿಯಾಕಾರದಲ್ಲಿ ಸುತ್ತಿ ಅದಕ್ಕೊಂದು ರಬ್ಬರ್ ಬ್ಯಾಂಡ್ ಬಿಗಿದು, ಆ ಜೇಬನ್ನು ಸೀಲ್ ಮಾಡಲೆಂಬಂತೆ ಒಂದಷ್ಟು ಹೇರ್ ಪಿನ್ ಸಿಕ್ಕಿಸಿ ಎಂಥ ಚತುರ ಕಳ್ಳ ಕಾಕನೇ ಬಂದರೂ ಈ ಭದ್ರವಾದ ಕೋಟೆಯ ಒಂದು ಪಿನ್ನನ್ನೂ ಅಲುಗಾಡಿಲಸಧ್ಯವಾದಷ್ಟು ಸೇಫ್ಟಿ ಪಿನ್ನಿನ ಸೇಫ್ಟಿ…

ಭದ್ರವಾಗಿರುವುದು ಖಾತ್ರಿಯಾದ ಮೇಲೆ ಆಟ ಶುರು, ಅವರಿವರ ಜೊತೆ ಕಿತ್ತಾಡಿ ನೂಕಾಡಿ ತಳ್ಳಾಡಿ ಹಿಮಾಲಯ ಪರ್ವತದ ನೆತ್ತಿಯನ್ನೇ ಮುಟ್ಟಿದವನಂತೆ ಹೆಮ್ಮೆಯಿಂದ ಬೀಗುತ್ತಾ ಕೊನೆಗೂ ಡ್ರೈವರ್ ನ ಎಡ ಪಕ್ಕದಲ್ಲಿರುವ ಉದ್ದನೆಯ ಸೀಟನ್ನು ಗಿಟ್ಟಿಸಿಕೊಂಡೆ ತೀರಬೇಕು. ಅಷ್ಟು ಸಾಲದೆಂಬಂತೆ ನಾವು ಕೂರುವ ಜಾಗ ಡ್ರೈವರ್ ಸೀಟಿಗಿಂತ ತುಸು ಮುಂದೆಯೇ ಇರಬೇಕು ಹಾಗಿದ್ದರೆ ನಾವು ಡ್ರೈವರಿಗಿಂತ ಮುಂದಿದ್ದೇವೆ ಎಂಬ ಮಂಕು ಗರ್ವ ಬೇರೆ ಅಲ್ಲದೆ ನಮ್ಮ ಎಡ ಭುಜ ಭುಜ ಆನಿಸಿಕೊಂಡೇ ಕೂರಬೇಕು. ಅಪ್ಪಿ ತಪ್ಪಿ ಒಮ್ಮೆಲೇ ಬ್ರೇಕ್ ಏನಾದರೂ ಒತ್ತಿದರೆ ಗ್ಲಾಸು ಒಡೆದು ಬಸ್ಸಿನಾಚೆಗೆ ಮೊದಲನೇ ಪಲ್ಟಿ ಇವನೇ ಆಗಬೇಕು. ಹೇಗೆ ಮಂಗನಾಟ ಆಡುತ್ತ ಅಡ್ಡ ಕೂತು ಡ್ರೈವರ್ ಗೆ ಸರಿಯಾಗಿ ಹಿಂದಿನ ಮಿರರ್ ಕಾಣದೆ ಹತ್ತಾರು ಸಲ ಒರಟು ಲಾಲಿ ಹಾಡಿಸಿ ಕೊಳ್ಳದಿದ್ದರೆ ತಿಂದದ್ದು ಅರಗುವುದು ಎಲ್ಲಿಂದ…

ಅದರಲ್ಲೂ ಚಳಿಗಾಲವೋ ಅಥವಾ ಮಳೆಗಾಲವೇನಾದರೂ ಆಗಿದ್ದರಂತೂ ಮುಚ್ಚಿದ ಕಿಟಕಿಯ ಸಂದಿಯಿಂದ ಸಿಡಿಯುವ ಇರುಚಲು ನೀರನ್ನು ಪಕ್ಕದಲ್ಲಿ ಕುಳಿತಿದ್ದವರ ಮೇಲೆ ಸಿಡಿಯಲು ಬಿಟ್ಟು ಬೀಗುವುದೊಂದು ಖಯಾಲಿ. ಸ್ವಲ್ಪ ಥಂಡಿಯಾಯಿತೆಂದರೆ ಸಾಕು ಎರೆಡು ಮೊಣಕಾಲನ್ನು ಮತ್ತು ಅಂಗೈಯ್ಯನ್ನು ಬಾನೆಟ್ ಗೆ ಒದ್ದುಕೊಂಡು ಕೂರುವುದು ಅದು ಬಿಸಿಯಾಗಿ ಅದರ ಶಾಖ ಮೊಣಕಾಲಿಗೋ ಅಂಗೈಗೋ ತಾಕಿದರೆ ಮನೆಯಲ್ಲಿ ಅಮ್ಮನ ಅಡುಗೆಯ ಒಲೆಯ ಮುಂದೆ ಕೂತು ಬಿಸಿ ಕಾಯಿಸಿದಷ್ಟೇ ಹಿತವಾದ ಅನುಭವ ನೀಡುವಂತೆ ಅನುಭವಿಸುವುದು. ಹೀಗೆ ಹಿಂದಿನ ಸೀಟಿನಲ್ಲಿ ಕೂರುವವರಿಗೆ ಯಾರಿಗಾದರು ಉಂಟೆ ಈ ಸ್ವರ್ಗ ಸುಖ. ಜೊತೆಗೆ ಮುಂದೆ ಕೂತರೆ ಆ ಗ್ಲಾಸಿನ ಮೂಲಕ ಕಾಣುವ ಎಲ್ಲ ಹಳ್ಳಿಗಳನ್ನು ನೋಡುತ್ತಾ ಚುನಾವಣೆಯಲ್ಲಿ ಏನೋ ಭಾರಿ ಅಂತರದಲ್ಲಿ ಗೆದ್ದುಬಂದ ಕ್ಯಾಂಡಿಡೇಟ್ ನಂತೆ ಚಿಳ್ಳೆಪಿಳ್ಳೆಗಳಿಂದ ಹಿಡಿದು ಕಂಡ ಕಂಡವರಿಗೆಲ್ಲಾ ಕೈ ಬೀಸಿದ್ದೇ ಬೀಸಿದ್ದು, ಏಕೆಂದರೆ ಎಲ್ಲಾ ಊರಿನ ಮುಂದಿನ ಉಸಾಬರಿ ಯೆಲ್ಲಾ ಮುಂದೆ ಕೂತ ಇವನದೇ ಅಲ್ಲವೇ? ಅದೂ ಅಲ್ಲದೆ ನಮ್ಮ ಬಸ್ಸು ಇರೋ ಬಾರೋ ವಾಹನಗಳನ್ನೆಲ್ಲಾ ಹಿಂದಿಕ್ಕಿ ಎಲ್ಲರಿಗಿಂತ ಮುಂದಿರಬೇಕು ಅಷ್ಟೇ ಯಾಕಂದ್ರೆ ಇದು ನಮ್ಮಪ್ಪ ಕೊಡಿಸಿದ್ದಲ್ಲವೇ?

ಆದರೆ ಇದೋ ಎಪ್ಪತ್ತು ಎಂಭತ್ತು ಸ್ಪೀಡ್ ಮುಟ್ಟಿದ ತಕ್ಷಣ ಲೇಯ್ ಯಾಕೋ ಹಿಂಗ್ ತುಳೀತಿಯ ನನ್ನಾ ಅಂತ ಬುಸುಗುಡುತ್ತಾ ಬಾನೆಟ್ ಒಳಗಿಂದ ಬಿಸಿ ನೀರ ಬುಗ್ಗೆಗಳ ತೆಗೆದು ನಮ್ಮ ಕಾಲುಗಳ ಮೇಲೆ ಸಿಡಿಸಿ ಆಗಾಗ ಸೇಡು ತೀರಿಸಿಕೊಳ್ಳುತ್ತಿತ್ತು. ಅಂಥದ್ರಲ್ಲಿ ನಮ್ಮ ಬಸ್ಸು ಯಾವುದಾದರೊಂದು ವಾಹನವನ್ನು ಹಿಂದಿಕ್ಕಿದರೆ ಮುಗಿಯಿತು ಫಾರ್ಮುಲಾ ಒನ್ ನಾವೇ ಗೆದ್ದಂತೆ ಕಿರುಚಿದ್ದೇ ಕಿರುಚಿದ್ದು. ನಮ್ಮ ಡ್ರೈವರ್ಗೋ ಚಿಯರ್ ಗರ್ಲೆ ಚಿಯರ್ ಮಾಡುತ್ತಿರಬೇಕು ಎಂದೆನಿಸಿ ಮೈಮೇಲೆ ದೇವರ ಬರಿಸಿಕೊಂಡವನಂತೆ ಮುದ್ದೆ ಕೋಲು ತಿರುಗಿಸುವಂತೆ ಎಡಗೈ ನಿಂದ ಘಡ್ರ ಘಡ್ರ ಅಂತ ಗೇರ್ ತಿರುಗಿಸಿ ಹಾಕಿದವನೇ, ಮಳೆಗೆ ನೆಂದು ಬಿಸಿಲಿಗೆ ಒಣಗಿ ಕೊರಡಿನಂತಾಗಿರುತ್ತಿದ್ದ ಹಾರನ್ನನ್ನು ಅಂಬೋ ಅಂತ ಕಿರುಚಿಸಿ ಬರ್ರೋ ಅನ್ನಿಸಿಬಿಡುತ್ತಿದ್ದರೂ ಅದರ ವೇಗ ಮಾತ್ರ ಅರವತ್ತೇ ಆಗಿರುತ್ತಿತ್ತು…

ಹೀಗೆ ಆಗರ್ಭ ತುಂಬಿರುತ್ತಿದ್ದ ನಮ್ಮ ಬಸ್ಸು ಯಾವುದಕ್ಕೂ ಜಗ್ಗದೆ ಕುಗ್ಗದೆ ಯಾರ ಮಾತಿಗೂ ಕಿವಿಗೊಡದೆ ಅಲ್ಲೊಂದು ಸಣ್ಣ ಗುಂಡಿಗೆ ನಮ್ಮನ್ನು ಅಲುಗಾಡಿಸಿ ಇಲ್ಲೊಂದು ದೊಡ್ಡ ಗುಂಡಿಗೆ ತನ್ನ ಎದೆ ಗೂಡನ್ನು ಕುಕ್ಕಿ ಎಡಗಡೆ ಇದ್ದವರನ್ನು ಬಲಕ್ಕೆ ಎಸೆದು ಬಲಗಡೆ ಇದ್ದವರನ್ನು ಎಡಕ್ಕೆ ನೂಕಿ, ತಳ್ಳಾಡಿಸಿ ಕಿರುಚಾಡಿಸಿ ಅರಚಾಡಿಸಿ ತನ್ನೊಡಲೊಳಗೊಂದು ಮಿನಿ ಕುರುಕ್ಷೇತ್ರ ಮಾಡಿಸಿ ತಾನು ಮಾತ್ರ ಏನು ಮಾಡದ ಗುಮ್ಮನಂತೆ ಮಧ್ಯಾಹ್ನದ ಊಟದ ಹೊತ್ತಿಗೆ ಬೆಂಗಳೂರಿನ ಮೆಜೆಸ್ಟಿಕ್ಕಿಗೆ ತಂದು ಬಿಡುತ್ತಿತ್ತು…

ಬೆಂಗಳೂರಿನ ಹೃದಯ ಭಾಗಕ್ಕೆ ಬಂದು ಇಳಿದವನಿಗೆ ಖುಷಿಯೋ ಖುಷಿ ಸಾಗರದಂತೆ ತುಂಬಿ ತುಳುಕುವ ಜನಸಾಗರ, ಅಲ್ಲಲ್ಲಿ ಕಾಣುವ ಎತ್ತರದ ಬಿಲ್ಡಿಂಗು, ಹೊಟ್ಟೆ ತುಂಬಾ ಉಂಡು ಹೊರಳಾಡುವಂತೆ ಆಡುವ VOLVO ಬಸ್ಸುಗಳು. ಮೆಜಸ್ಟಿಕ್ ಬ್ರಿಜ್ ಹತ್ತಿ ಎಡಕ್ಕೆ ನೋಡಿದರೆ ಬೆಂಗಳೂರಿನ ಮೂಲೆ ಮೂಲೆ ತಲುಪಿಸಲು ಸಾಲುಗಟ್ಟಿ ನಿಂತ BMTC ಬಸ್ಸುಗಳು ಅಲ್ಲೊಂದಷ್ಟು ಕಿಕ್ಕಿರಿದ ಜನಗಳು ಅವಕ್ಕೊಂದಷ್ಟು ಮಾರ್ಗದ ನಂಬರ್ಗಳು. ಬಲಕ್ಕೆ ತಿರುಗಿದರೆ ನಮ್ಮನ್ನು ಊರುಗಳಿಗೆ ಹೊತ್ತೊಯ್ಯಲು ನಿಂತ ಕಡುಗೆಂಪು ಬಸ್ಸುಗಳು ಮತ್ತವುಗಳ ಮುಂದೆ ತಮಿಳುನಾಡು, ಆಂಧ್ರ, ಕಡಪ, ಶಿಮೊಗ್ಗ, ಮಂಗಳೂರು,ಉಡುಪಿ, ಕುಂದಾಪುರ, ಮಂಡ್ಯ, ಕೋಲಾರ, ರಾಯಚೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಅಂತ ಒಂದೇ ಸಮನೆ ಕಂಡಕ್ಟರುಗಳ ಕೂಗು. ಈ ಮಧ್ಯೆ ಪ್ರೈವೇಟ್ ಬಸ್ಸುಗಳ ಕಂಡಕ್ಟರ್ ಗಳು ತಾವೇನು ಕಡಿಮೆ ಎನ್ನುವಂತೆ ಬರೀ ಕೂಗುವುದಷ್ಟೇ ಅಲ್ಲ ಜೊತೆಗೆ ವಿಷಲ್ ಊದುತ್ತ ಊರುಗಳ ಹೆಸರು ಹೇಳುತ್ತಾ ಬಸ್ಸಿನ ಡೋರನ್ನು ಗುದ್ದಿದ್ದೇ ಗುದ್ದಿದ್ದು ಸದ್ಯ ಅವು ತಿಂದ ಹೊಡೆತಕ್ಕೆ ಉದುರಿ ಹೋಗದೆ ಉಳಿದದ್ದೇ ಹೆಚ್ಚು…

ಎರೆಡು ಬಸ್ಸು ನಿಲ್ದಾಣಗಳನ್ನು ಸೀಳಿಕೊಂಡ ಮೆಜೆಸ್ಟಿಕ್ ಸೇತುವೆ ದಾಟಿ ದಾರಿಯನ್ನು ಬಳಸಿ ಕೆಳಗಿಳಿದರೆ ತರೇವಾರಿ ಕೊಳ್ಳುವ ವಸ್ತುಗಳು, ಆಹಾ!!! ಎರೆಡು ಕಣ್ಣು ಸಾಲದು ಕಿವಿಗಳಂತೂ ಸಾಧ್ಯವೇ ಇಲ್ಲ ಬಿಡಿ ಒಬ್ಬರಿಗಿಂತ ಒಬ್ಬರು ನಾಮೇಲು ತಾಮೇಲು ಅಂತ ಕೂಗಿದ್ದೇ ಕೂಗಿದ್ದು. ಅಲ್ಲಿಂದ ಸಾಗಿ ಮುಂದೆ ಬಂದು ಗಾಂಧಿನಗರದ ಸಂದಿಗೊಂದಿಗಳಲ್ಲಿ ಬಿರಿಯಾನಿ,ಪೂರಿ,ಇಡ್ಲಿ,ವಡೆಯ ಪರಿಮಳ ಹೀರಿ ಹೊರಬಂದರೆ ಅಲ್ಲಿ ಕಣ್ಣಿಗೆ ಬೇಕಾದ, ಬಡವರಿಗೆ ಸಾಮಾನ್ಯರಿಗೆ ಕೈಗೆಟುಕುವ ಸಸ್ತಾ ಬಟ್ಟೆಗಳನ್ನು ಮೈತುಂಬ ಹೊದ್ದುಕೊಂಡು ನಿಂತಿರುವ ಬಜಾರುಗಳು ಕಾಣಿಸುತ್ತವೆ. ಒಮ್ಮೆ ನಮ್ಮಂತ ಆಸೆಗಣ್ಣಿನ ಕಮಂಗಿಗಳು ಈ ಬಜಾರಿನ ಒಳ ಹೊಕ್ಕರೆ ಮುಗಿಯಿತು ಒಂದಾ ಮೈತುಂಬ ಬಟ್ಟೆಗಳು ಇರುತ್ತವೆ ಇಲ್ಲ ಮೈಮೇಲೆ ಇರುವ ಬಟ್ಟೆಗಳೂ ಮಾಯವಾಗಿಬಿಟ್ಟಿರುತ್ತವೆ…

ಹೀಗೆ ಬಜಾರಿನಲ್ಲಿ ಕಣ್ಣಿಗೆ ರಂಗು ರಂಗಾಗಿ ಕಾಣುವ ಬಟ್ಟೆಗಳನ್ನು ಕೊಂಡುಕೊಂಡು ವಾಪಸ್ಸು ಊರಿಗೆ ಹೋಗಿ ಬಸ್ ನಿಲ್ದಾಣದಲ್ಲಿ ಇಳಿದರೆ ಹೃತಿಕ್,ಸಲ್ಮಾನ್,ಶಾರುಖ್ ಎಂದು ಪೋಸು ಕೊಡುತ್ತಿದ್ದುದರಲ್ಲಿ ನನಗೇ ಆಗ್ರಸ್ಥಾನ. ಏಕೆಂದರೆ ನಮ್ಮಂತ ಸಾಮಾನ್ಯ ಅಥವಾ ಬಡ ಕುಟುಂಬದವರಿಗೆ ಬ್ರಾಂಡೆಡ್ ವಸ್ತುಗಳು ಅಥವಾ ಬಟ್ಟೆಗಳು ಶ್ರೀಮಂತರಿಗೆ ಮಾತ್ರ ಮೀಸಲು ಎಂದುಕೊಳ್ಳುತ್ತಿದ್ದ ಕಾಲವದು. ಹೀಗೆ ನಮ್ಮಂಥವರ ಕೈಗೆಟುಕುವ ಬಡವರ ಬಟ್ಟೆಯ ಬಜಾರಿನೊಳಕ್ಕೆ ಹೋದವನೇ ನನ್ನ ಅವತಾರವನ್ನು ಅಲ್ಲಿದ್ದವನೊಬ್ಬ ಗಮಿನಿಸಿ ಕೇಳಿಯೇಬಿಟ್ಟ….

‘ಬಾ ಗುರು ಇಲ್ಲಿ ಯಾವ ಥರ ಬಟ್ಟೆ ಬೇಕು ಹೇಳು ತೋರಿಸುತ್ತೀನಿ ಇಲ್ಲಿ ಸಿಗೋ ಬಟ್ಟೆ ಸಿಂಗಾಪುರದಲ್ಲೂ ಸಿಗಲ್ಲ ನಿಂಗೆ’ ಎಂದು ಕೈಹಿಡಿದು ಎಳೆದುಕೊಂಡು ಬಂದು ಅಲ್ಲಿದ್ದ ಎಲ್ಲ ಟೀಶರ್ಟ್ ಪ್ಯಾಂಟ್ ಗಳನ್ನೂ ನನ್ನ ಮುಂದೆ ಹರವಿಬಿಟ್ಟ. ನಾನು ಇವನನ್ನು ಏನು ಕೇಳೇ ಇಲ್ಲವಲ್ಲ ಎಂದು ಮನಸಿನೊಳಗೆ ಚಿಂತಿಸುತ್ತಿರುವಾಗಲೇ ಮತ್ತೊಂದಷ್ಟು ಬಟ್ಟೆಗಳ ತಂದು ಸುರುವಿಬಿಟ್ಟ. ಅದೇಕೋ ಏನೋ ಯಾವೊಂದು ಶರ್ಟ್ ಪ್ಯಾಂಟು ನನಗೆ ಇಷ್ಟವಾಗಲಿಲ್ಲ. ‘ಇಲ್ಲ ನನಗೆ ಇಷ್ಟ ಆಗಲಿಲ್ಲ’ ಅಂದಿದ್ದೆ ತಡ ಪಕ್ಕದ ಅಂಗಡಿಯಿಂದ ಮತ್ತೊಂದು ಲಾಟು ಬಂದು ಬಿತ್ತು. ಇದು ಯಾಕೋ ಸರಿ ಹೋಗುತ್ತಿಲ್ಲ ಎಂದವನೇ ‘ಯಾವುದು ಇಷ್ಟ ಆಗ್ತಾ ಇಲ್ಲ ಗುರು ನನ್ನ ಬಿಟ್ಬಿಡು’ ಎಂದು ಗರಮ್ಮಾಗಿ ಹೇಳಿ ಹೊರಟವನ ಕೈಯ್ಯನ್ನು ಯಾರೋ ಹಿಡಿದು ಎಳೆದಂತಾಯ್ತು, ಹೊರಳಿ ನೋಡಿದರೆ ಅದೇ ಆಸಾಮಿ ‘ಇಷ್ಟು ಬಟ್ಟೆ ತೋರಿಸಿದ್ದೀನಿ, ನೋಡಿದಮೇಲೆ ತಗೊಳ್ಳೇ ಬೇಕು, ಏನು ಆಟ ಆಡ್ತೀಯ’ ಅಂದ. ‘ಅಲ್ಲಾ ಗುರು ಮೊದಲನೇದಾಗಿ ನಾನು ನಿನ್ನನ್ನು ಮಾತನಾಡಿಸಲೇ ಇಲ್ಲ, ನೀನಾಗೆ ಕೈ ಹಿಡಿದು ಕರೆದುಕೊಂಡು ಬಂದು ಎಲ್ಲಾ ಸುರಿದೆ, ನೋಡು ಅಂದೆ, ಈಗ ನೋಡಿದರೆ ತಗೊಳ್ದೆ ಹೋಗೋ ಹಾಗೆ ಇಲ್ಲ ಅಂತ ಬೆದರಿಕೆ ಹಾಕ್ತಾ ಇದ್ದೀಯ, ಯಾವ ನ್ಯಾಯ’ ಎಂದೆ. ಅಷ್ಟು ಹೊತ್ತಿಗೆ ಅಲ್ಲಿದ್ದ ಅಕ್ಕ ಪಕ್ಕದ ನಾಲ್ಕು ಜನ ಸೇರಿಕೊಂಡರು. ಸ್ವಲ್ಪ ಧೈರ್ಯ ಬಂತು ‘ಅಬ್ಬಾ ಸದ್ಯ ಇವನಿಂದ ಬಚಾವಾದೆ’ ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ಅದರಲ್ಲಿದ್ದವನೊಬ್ಬ ಕೇಳಿದ ‘ಯಾಕೆ ಗುರು ಒತ್ತಾಯ ಮಾಡ್ತಿಯಾ? ಅವನು ಇಲ್ಲೇ ತಗೋಳ್ತಾನೆ ಸುಮ್ನೆ ಇರು’ ಎಂದು ನನಗೆ ಮೃದುವಾಗಿ ಒತ್ತಾಯ ಮಾಡಲು ಶುರು ಮಾಡಿದ, ಅದರ ಜೊತೆಗೆ ಉಳಿದವರೂ ನನಗೆ ಮೆಲ್ಲಗೆ ಗದರುವ ಧಾಟಿಯಲ್ಲಿ ಮಾತನಾಡಿದರು, ಆಗ ನನಗೆ ಅರಿವಾಯಿತು ಇವರೆಲ್ಲ ಒಬ್ಬರಿಗೊಬ್ಬರು ಗೊತ್ತಿರುವವರೇ ಅಂತ. ನಾನು ಅವರ ಮಾತಿನ ಹೊಡೆತದಿಂದ ಸುಧಾರಿಸುವಷ್ಟರಲ್ಲಿ ನನ್ನನ್ನು ಅವರ ಅಂಗಡಿಯ ಒಳಕ್ಕೆ ಕರೆದುಕೊಂಡು ಹೋದವರೇ ಬಟ್ಟೆಯನ್ನು ತೆಗೆದುಕೊಳ್ಳುವವರೆಗೆ ಬಿಡದೆ ಹಿಂಸಿಸಿ ನನ್ನ ಬಳಿಯಿದ್ದ ಅಷ್ಟೂ ಹಣವನ್ನು ಪೀಕಿ ನನಗೆ ಇಷ್ಟವಿಲ್ಲದ ಬಟ್ಟೆಗಳನ್ನು ಕೈಗೆ ತುರುಕಿ ಹೊರ ಕಳುಹಿಸಿದರು…

ಜೋಲು ಮುಖ ಹಾಕಿ ಸೀದಾ ಮೆಜೆಸ್ಟಿಕ್ ಕಡೆ ನಡೆದವನೇ, ಕಲ್ಲು ಬೆಂಚಿನ ಮೇಲೆ ಕೂತು ಬಟ್ಟೆ ಅಂಗಡಿಯವನಿಗೂ ಮತ್ತು ನನ್ನಿಂದ ಹಣವನ್ನು ಕಿತ್ತ ಅವನ ಜೊತೆಯವರಿಗೆ ಮನಸ್ಸಿನಲ್ಲಿ ಹಿಡಿ ಶಾಪ ಹಾಕಿ ಕುಳಿತಿದ್ದೆ. ಅಷ್ಟರಲ್ಲಿ ನಮ್ಮೂರ ಬಸ್ಸು ಬಂದು ನಿಂತಿತು ಅದಾಗಲೇ ಹೆಚ್ಚು ಕಡಿಮೆ ಭರ್ತಿಯಾಗಿದ್ದ ಬಸ್ಸಿನಲ್ಲಿ ಸಿಕ್ಕಿದ್ದು ಕೊನೆಯ ಸಾಲಿನ ಕೊನೆಯ ಸೀಟು, ಇನ್ನು ನನಗೆ ಯಾರ ಊರಿನ ಯಾರ ಉಸಾಬರಿಯು ಇಲ್ಲ ಎಂದು ಯಾರಿಗೂ ಕೈಬೀಸದೆ ಅವರು ಕೊಟ್ಟ ಬಟ್ಟೆಯ ಬ್ಯಾಗನ್ನು ಅವಚಿ ಹಿಡಿದು ಹಾಗೆಯೇ ಅದರ ಮೇಲೆ ತಲೆಯೂರಿದ್ದಷ್ಟೇ, ಗೊತ್ತಿಲ್ಲದೇ ಗಾಢವಾದ ನಿದ್ರೆಗೆ ಜಾರಿದ್ದೆ. ಕಣ್ಣು ಬಿಟ್ಟು ನೋಡುವಾಗ ಊರ ಬಸ್ಸು ನಿಲ್ದಾಣದ ಹೆಬ್ಬಾಗಿಲ ಮುಂದೆ ನಿಂತು ಮಳೆಗೆ ತೊಯ್ದಿತ್ತು. ನಾನು ಯಾರಿಗೂ ಕಾಣದಂತೆ ಬಸ್ಸು ಇಳಿದವನೇ ನಸುಗತ್ತಲಿನಲ್ಲಿ ಮನೆ ಸೇರಿದೆ. ಹೀಗೆ ಮುಗಿದಿತ್ತು ಬಟ್ಟೆಯ ಪ್ರಸಂಗವೊಂದು.

Categories
ಸಿನಿ ಸುದ್ದಿ

ಭಾರತ ಸಿಂಧೂರಿ ಸಿನಿಮಾ ವಿಚಾರ ಬಹಿರಂಗವಾದ ಬೆನ್ನಲೇ, ಡಿ.ಕೆ. ರವಿ ಕುರಿತು ಚಿತ್ರ ಮಾಡುವೆ ಅಂತ ಶಾಸಕ ಸಾ.ರಾ. ಮಹೇಶ್‌ ಹೇಳಿದ್ದೇಕೆ?


ಇದೆಲ್ಲ ನಿಜವಾ ? ಜನಕ್ಕೆ ಹಿಗೊಂದು ಅಚ್ಚರಿ. ಯಾಕಂದ್ರೆ, ಯಾರೋ ಅಧಿಕಾರಿಗಳು, ರಾಜಕಾರಣಿಗಳು ಇಲ್ಲವೇ ವಿವಾದಿತ ವ್ಯಕ್ತಿಗಳು ದೊಡ್ಡ ಪ್ರಚಾರಕ್ಕೆ ಬಂದಾಗ ಅವರ ಕುರಿತು ಸಿನಿಮಾ ಮಾಡುವ ಸುದ್ದಿಗಳು ಚಾಲ್ತಿಗೆ ಬರುವುದು ಅಷ್ಟೇ ಸಹಜ. ಈಗ ಅದೇ ಸಾಲಿನಲ್ಲಿ ಮಹಿಳಾ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ದಿವಂಗತ ಡಿ.ಕೆ. ರವಿ ಅವರ ಕುರಿತು ಸಿನಿಮಾ ಮಾಡುವ ವಿಚಾರಗಳು ಹೆಚ್ಚು ಸುದ್ದಿಯಲ್ಲಿವೆ. ಇದೇನು ಹೊಸದಲ್ಲ, ಹಾಗೆಯೇ ವಿಶೇಷವೂ ಅಲ್ಲ. ಕನ್ನಡ ಸಿನಿಮಾದ ಇತಿಹಾಸದಲ್ಲಿ ಹೀಗೆಲ್ಲ ಎಷ್ಟು ವ್ಯಕ್ತಿಗಳ ಬಗ್ಗೆ ಗಾಂಧಿನಗರದಲ್ಲಿ ಸುದ್ದಿ ಆಗಿಲ್ಲ ಹೇಳಿ ? ಮೊನ್ನೆ ಮೊನ್ನೆಯಷ್ಟೇ ಮಾಜಿ ಭೂಗತ ದೊರೆ ಮತ್ತಪ್ಪ ರೈ ಕುರಿತು ಸಿನಿಮಾ ಮಾಡುವ ವಿಚಾರವೂ ಕೊನೆಗೆ ಏನಾಯಿತು ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಅಷ್ಟೇ ಯಾಕೆ, ಸುನಾಮಿ ಹೆಸರಲ್ಲೋ, ಕೊರೋನಾ ಅಂತಲೋ, ಡ್ರಗ್ಸ್‌ ಮಾಫಿಯೋ ಜಾಡು ಹಿಡಿದೋ ಪ್ರಚಲಿತ ವಿಷಯದ ಬೆನ್ನು ಹತ್ತಿ ಅದೇ ಹೆಸರಲ್ಲೊಂದು ಸಿನಿಮಾ ಮಾಡುತ್ತೇವೆಂದು ಸುದ್ದಿ ಮಾಡಿಕೊಂಡವರ ಕಥೆಗಳೂ ಇಲ್ಲಿ ಬೇಕಾದಷ್ಟಿವೆ.

ಕೆಲವರಿಗೆ ಇದೊಂಥರ ಖಾಯಲಿ. ಪ್ರಚಾರದಲ್ಲಿರುವ ವ್ಯಕ್ತಿ ಅಥವಾ ವಸ್ತು, ವಿಷಯಗಳಿಗೆ ರಾತ್ರೋರಾತ್ರಿ ಕಥೆ ಹೆಣೆದು ಸಿನಿಮಾ ಮಾಡುತ್ತೇನೆ ಅಂತ ಸುದ್ದಿ ಮಾಡಿಕೊಂಡವರು ಇಲ್ಲಿ ತುಂಬಾ ಜನರಿದ್ದಾರೆ. ಅವರಾರು ಸದಭಿರುಚಿಯ ಸಿನಿಮಾ ಮಾಡಿದವರಲ್ಲ. ಹಾಗೆಯೇ ಸ್ಟಾರ್‌ ಸಿನಿಮಾಗಳನ್ನು ಮಾಡಿಯೂ ಅನುಭವ ಇಲ್ಲ. ಹಾಗೋ ಹೀಗೋ ಯಾವುದೋ ಒಂದು ವಿಷಯ ದೊಡ್ಡದಾಗಿ ಸುದ್ದಿಯಾದಾಗ ಆ ವಿಷಯದ ಮೇಲೆ ಸಿನಿಮಾ ಮಾಡುತ್ತೇನೆಂದು ಹೇಳಿಕೊಂಡು ಸುದ್ದಿ ಮಾಡಿಕೊಂಡವರು. ಕೊನೆಗೆ ಹಾಗೆ ಸುದ್ದಿ ಆದ ವ್ಯಕ್ತಿ, ವಸ್ತು, ವಿಷಯಗಳ ಪೈಕಿ ಕೆಲವೇ ಕೆಲವು ಸಿನಿಮಾ ಆಗಿವೆ. ಆ ಸಿನಿಮಾ ಮಾಡಿದವರೆಲ್ಲರೂ ಪ್ರೊಪೆಷನಲ್‌ ಸಿನಿಮಾ ಮೇಕರ್ಸ್.ಅವರು ಹೇಳಿದ್ದಕ್ಕೆ ಬದ್ಧತೆ ಹೊಂದಿದವರು. ಮಾತು ಉಳಿಸಿಕೊಳ್ಳುವುದಕ್ಕಾಗಿಯೇ ಕೊನೆಗೆ ಸಿನಿಮಾ ಮಾಡಿದವರು. ಗಾಂಧಿನಗರದ ವಾಸ್ತವದ ಪರಿಸ್ಥಿತಿ ಹೀಗಿದ್ದೂ ಕೂಡ ಈಗ ಎರಡು ವ್ಯಕ್ತಿಗಳ ಕುರಿತು ಸಿನಿಮಾ ಮಾಡುತ್ತೇವೆಂದು ಹೊರಟವರ ಬಗ್ಗೆಯೂ ಈಗ ಸಖತ್‌ ಸುದ್ದಿ ಆಗಿದೆ.

ಒನ್ಸ್‌ ಎಗೇನ್‌ ಇವರು ಕೂಡ ಸಿನಿಮಾ ಮಾಡಲು ಹೊರಟಿದ್ದು ರಾಜ್ಯದಲ್ಲಿ ಹೆಚ್ಚು ಸುದ್ದಿಯಲ್ಲಿರುವ ವ್ಯಕ್ತಿ ಹಾಗೂ ವಿಷಯಗಳ ಬಗ್ಗೆ. ರಾಜ್ಯದಲ್ಲಿ ಈಗ ಹೆಚ್ಚು ಸುದ್ದಿಯಲ್ಲಿರುವ ಮಹಿಳಾ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕುರಿತು ಪತ್ರಕರ್ತ ಕೃಷ್ಣಸ್ವರ್ಣ ಚಂದ್ರ ಎನ್ನುವವರು ಸಿನಿಮಾ ಮಾಡಲು ಹೊರಟಿದ್ದಾರಂತೆ. ಅವರ ಪ್ರಕಾರ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಭಾರತ ಸಿಂಧೂರಿ ಎನ್ನುವ ಚಿತ್ರದ ಟೈಟಲ್‌ ಕೂಡ ರಿಜಿಸ್ಟ್ರಾರ್‌ ಆಗಿದೆಯಂತೆ. ಅಚ್ಚರಿ ಅಂದ್ರೆ ಈ ಸುದ್ದಿ ಬಹಿರಂಗ ಗೊಂಡ ಬೆನ್ನಲೇ ಅತ್ತ ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಕೂಡ ದಿವಂಗತ ಡಿ.ಕೆ.ರವಿ ಕುರಿತು ಸಿನಿಮಾ ಮಾಡುವುದಾಗಿ ಹೇಳಿದ್ದಾರೆನ್ನುವ ಸುದ್ದಿ ಹರಡಿದೆ. ಇದೆಲ್ಲ ಎಷ್ಟು ಸತ್ಯ? ಮಹಿಳಾ ಐಎಎಸ್‌ ಆಧಿಕಾರಿ ರೋಹಿಣಿ ಸಿಂಧೂರಿ ಕುರಿತು ಸಿನಿಮಾ ಮಾಡುತ್ತೇನೆಂದು ಕೃಷ್ಣಸ್ವರ್ಣ ಚಂದ್ರ ಎನ್ನುವವರು ಸುದ್ದಿ ಬಹಿರಂಗ ಪಡಿಸಿದ ಬೆನ್ನಲೇ ಶಾಸಕ ಸಾ.ರಾ. ಮಹೇಶ್‌ ತಾವು ಕೂಡ ದಿವಂಗತ ಡಿ.ಕೆ. ರವಿ ಕುರಿತು ಸಿನಿಮಾ ಮಾಡುತ್ತೇನೆ ಅಂಹ ಹೇಳಿದ್ದೇಕೆ? ಡಿ.ಕೆ. ರವಿ ಕುರಿತು ಸಿನಿಮಾ ಮಾಡಲು ಸಾ.ರಾ. ಮಹೇಶ್‌ ಹೋರಟಿದ್ದಾರೆ?

ಇತ್ತ ಕೃಷ್ಣ ಸ್ವರ್ಣ ಚಂದ್ರ ನಿರ್ದೇಶಿಸುವ ಭಾರತ ಸಿಂಧೂರಿ ಸಿನಿಮಾದಲ್ಲಿ ಇರುವ ಪಾತ್ರಗಳಾದರು ಯಾವು? ಸೋಷಲ್‌ ಮೀಡಿಯಾದಲ್ಲಿ ಈಗ ಈ ಸಿನಿಮಾ ಸುದ್ದಿಗಳ ಸುತ್ತ ಇತ್ಯಾದಿ ಪ್ರಶ್ನೆಗಳು ವೈರಲ್‌ ಆಗಿವೆ.
ಆ ಕತೆ ಇರಲಿ ಬಿಡಿ, ಅವರ ಬಯಸಿದಂತೆ ಸಿನಿಮಾ ಮಾಡಲಿ. ಆದರೆ ಇವರೀಗ ಸಿನಿಮಾ ಮಾಡುತ್ತೇವೆಂದು ಹೇಳಿಕೊಂಡ ಸಂದರ್ಭವಾದರೂ ಹೇಗಿದೆ ಗೊತ್ತಾ? ಸಿನಿಮಾ ಚಟುವಟಿಕೆಗಳೇ ಕಂಪ್ಲೀಟ್‌ ಸ್ಥಬ್ದವಾಗಿರೋ ಈ ಸಂದರ್ಭದಲ್ಲಿ ಇವರೆಲ್ಲ ಸಿನಿಮಾ ಮಾಡ್ತೀವಿ ಅನ್ನೋದು ಎಷ್ಟು ಸತ್ಯ?

ಇವರು ಸಿನಿಮಾ ಮಾಡುವ ಉತ್ಸಾಹ, ಉಮೇದು, ಕೆಚ್ಚು, ಕಿಚ್ಚು ಇನ್ನೆಷ್ಟು ದಿನ ಇರಬಹುದು? ಬರೀ ಇದೆಲ್ಲ ಪ್ರಚಾರದ ಗೀಳಾ ? ಇಂತಹ ಪ್ರಶ್ನೆಗಳು ಕೂಡ ಈಗ ಹೆಚ್ಚು ಚರ್ಚೆಯಲ್ಲಿವೆ. ಐಎಎಸ್‌ ಆಧಿಕಾರಿ ರೋಹಿಣಿ ಸಿಂಧೂರಿ ಅವರ ಕುರಿತು ಸಿನಿಮಾ ಬರುವುದೇ ನಿಜವಾಗಿದ್ದರೆ, ಅತ್ತ ಶಾಸಕ ಸಾ.ರಾ. ಮಹೇಶ್‌ ಅವರು ದಿವಂಗತ ಡಿ.ಕೆ. ರವಿ ಕುರಿತು ಸಿನಿಮಾ ಮಾಡುವುದು ನಿಜವಾ? ಆ ಸಿನಿಮಾ ಬರುವುದದಾರೂ ಯಾವಾಗ? ಉತ್ತರಕ್ಕೆ ಕಾಲವೇ ನಿರ್ಧರಿಸಲಿದೆ.

Categories
ಸಿನಿ ಸುದ್ದಿ

ಕಲಾವಿದರ ಕತ್ತಲ ಬದುಕನ್ನು ಅನಾವರಣಗೊಳಿಸಿದ ಅಣ್ತಮ್ಮ ; ಯತಿರಾಜ್ ನಿರ್ದೇಶನದ ನೈಜ ಘಟನೆಯ ಕಿರುಚಿತ್ರ

ಕನ್ನಡ ಚಿತ್ರರಂಗದ ಸಾವಿರಾರು ಸಿನಿಮಾಗಳ ಪತ್ರಿಕಾ ಪ್ರಚಾರಕರ್ತರಾಗಿ ಕೆಲಸ ಮಾಡುತ್ತಾ ಮುಂಚೂಣಿಯಲ್ಲಿರುವವರು ಸುಧೀಂದ್ರ ವೆಂಕಟೇಶ್ ಇದೇ ಮೊದಲ ಬಾರಿಗೆ ಅವರೂ ಸಹ ಅಣ್ತಮ್ಮ ಕಿರುಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ

ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದಾಕ್ಷಣ, ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಕಾದಿರುವ ಅದೆಷ್ಟೋ ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಇಲ್ಲಿದ್ದಾರೆ. ಕೊರೊನಾ ಎನ್ನುವ ದುಷ್ಟ ವೈರಸ್ಸು ಅಂಥ ಎಲ್ಲರ ಬದುಕನ್ನೂ ಅಕ್ಷರಶಃ ನರಕವನ್ನಾಗಿಸಿದೆ.

ಸಿನಿಮಾ ರಂಗಕ್ಕೆ ಸಂಬಂಧಿಸಿದ ಸಾಕಷ್ಟು ಜನ ಬಡ ಕಲಾವಿದರ ಮನೆಯ ಗೋಡೆಯನ್ನು ಶ್ರೀಮಂತವಾಗಿರಿಸಿರುವುದು ಅವರು ದೊಡ್ಡ ಕಲಾವಿದರ ಜೊತೆಗೆ ತೆಗೆಸಿಕೊಂಡ ಫೋಟೋಗಳು ಮಾತ್ರ. ಮಿಕ್ಕಂತೆ, ಬಡತನ ಅವರ ಬದುಕನ್ನು ಇಂಚಿಂಚಾಗಿ ಕಿತ್ತು ತಿನ್ನುತ್ತಿದೆ. ಸದ್ಯ ಕೊರೊನಾ ಸಂಕಷ್ಟದಿಂದ ಹೆತ್ತ ಮಕ್ಕಳಿಗೆ ಹೊಟ್ಟೆ ತುಂಬ ಊಟ ಹೊಂಚುವುದೂ ಕಷ್ಟಕರವಾಗಿದೆ. ಮಡದಿಯ ತಾಳಿಯನ್ನೂ ಅಡವಿಟ್ಟು ದಿನಸಿ ತಂದವರು ಅದೆಷ್ಟೋ ಮಂದಿ. ಮನೆ ಬಾಡಿಗೆ ಕಟ್ಟಲು ಕೂಡಾ ಹಣವಿಲ್ಲದೆ ಹೆಣಗಾಡುತ್ತಿದ್ದಾರೆ ಇನ್ನಷ್ಟು ಜನ.

ಇಂಥ ಎಷ್ಟೋ ಜನರ ಬಾಳಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಬೆಳಕು ಮೂಡಿಸಿದ್ದಾರೆ. ಮೂರು ಸಾವಿರದ ಇನ್ನೂರು ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರಿಗೆ ಯಶ್ ಸಂದಾಯ ಮಾಡಿರುವ ತಲಾ ಐದು ಸಾವಿರ ರುಪಾಯಿಗಳು ಹಸಿದ ಹೊಟ್ಟೆಗೆ ಅನ್ನದ ದಾರಿ ಮಾಡಿರುವುದರ ಜೊತೆಗೆ ನೊಂದ ಮನಸ್ಸುಗಳಿಗೆ ಸಮಾಧಾನ ನೀಡಿದೆ.


ಈ ವಿಚಾರಕ್ಕೆ ಸಂಬಂಧಿಸಿದಂತೆ ನೈಜ ಘಟನೆಯನ್ನು ಆಧರಿಸಿ ನಟ, ಪತ್ರಕರ್ತ ಯತಿರಾಜ್ ತಮ್ಮ ಕಲಾವಿದ ಫಿಲ್ಮ್ ಅಕಾಡೆಮಿ ಮೂಲಕ ʻಅಣ್ತಮ್ಮʼ ಎನ್ನುವ ಚೊಕ್ಕದಾದ ಕಿರುಚಿತ್ರವೊಂದನ್ನು ರೂಪಿಸಿದ್ದಾರೆ. ಈ ಚಿತ್ರದ ಕಥಾವಸ್ತು ಎಂಥವರ ಮನಸ್ಸನ್ನೂ ಭಾರವಾಗಿಸುತ್ತದೆ. ಜೊತೆಗೆ, ರಾಕಿಭಾಯ್ ಯಶ್ ಅವರ ಬಗೆಗಿನ ಅಭಿಮಾನ ನೂರ್ಮಡಿಗೊಳಿಸುತ್ತದೆ.
ಯತಿರಾಜ್ ನಟಿಸಿ, ನಿರ್ದೇಶಿಸಿರುವ ಈ ಕಿರುಚಿತ್ರದಲ್ಲಿ, ಭಾರತಿ, ಗುರು, ಅಜಯ್ ಗೌಡ, ತ್ರಿಷಿಕಾ, ನಮ್ರತ, ಸ್ಮೃತಿ ಮುಂತಾದವರು ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಸಾವಿರಾರು ಸಿನಿಮಾಗಳ ಪತ್ರಿಕಾ ಪ್ರಚಾರಕರ್ತರಾಗಿ ಕೆಲಸ ಮಾಡುತ್ತಾ ಮುಂಚೂಣಿಯಲ್ಲಿರುವವರು ಸುಧೀಂದ್ರ ವೆಂಕಟೇಶ್. ಇದೇ ಮೊದಲ ಬಾರಿಗೆ ಅವರೂ ಸಹ ಅಣ್ತಮ್ಮ ಕಿರುಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.


ಮಾರುತಿ ಮೀರಜ್ಕರ್ ಸಂಗೀತವಿರುವ ಅಣ್ತಮ್ಮ ಕಿರುಚಿತ್ರಕ್ಕೆ ಸೋನು ಸಾಗರ್ ಛಾಯಾಗ್ರಹಣದ ಜೊತೆಗೆ ಸಂಕಲನ ಕೂಡಾ ಮಾಡಿದ್ದಾರೆ.

Categories
ಸಿನಿ ಸುದ್ದಿ

ಚಿತ್ರೋದ್ಯಮದ ಕಾರ್ಮಿಕರಿಗೆ ಉಚಿತ ಅಕ್ಕಿ ವಿತರಣೆಗೆ ಸುನೀಲ್ ಪುರಾಣಿಕ್ ಸರ್ಕಾರಕ್ಕೆ ಮನವಿ

ಕೋವಿಡ್ 19 ಎರಡನೇ ಅಲೆಯ ಸಾಂಕ್ರಾಮಿಕ ರೋಗದಿಂದ ತೀವ್ರ ಸಂಕಷ್ಟದಲ್ಲಿರುವ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ಸರ್ಕಾರದಿಂದ ಉಚಿತ ಅಕ್ಕಿ ವಿತರಿಸುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಚಿತ್ರರಂಗದ ಇತರ ಗಣ್ಯರೊಂದಿಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಹಾಗೂ ವಾರ್ತಾ ಮತ್ತು ಸಣ್ಣ ಕೈಗಾರಿಕೆ ಸಚಿವ ಸಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕೋವಿಡ್ ಸಾಂಕ್ರಾಮಿಕದಿಂದ
ಕೋವಿಡ್19 ಎರಡನೇ ಅಲೆಯ ಸಾಂಕ್ರಾಮಿಕದಿಂದ ತೀವ್ರ ಸಂಕಷ್ಟದಲ್ಲಿದ್ದ ಕನ್ನಡ ಚಿತ್ರೋದ್ಯಮದವರಿಗೆ ಸರ್ಕಾರದ ವತಿಯಿಂದ ಆರ್ಥಿಕ ನೆರವು ಹಾಗೂ ರೋಗನಿರೋದಕ ಚುಚ್ಚುಮದ್ದು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿದ್ದನ್ನು ಕನ್ನಡ ಚಿತ್ರರಂಗ ಸ್ಮರಿಸುತ್ತದೆ. ತಮಗೇ ತಿಳಿದಿರುವಂತೆ ಲಾಕ್ ಡೌನ್ ನಿಂದಾಗಿ ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತವಾಗಿರುವುದರಿಂದ ಇಡೀ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಚಿತ್ರೋದ್ಯಮದ ಎಷ್ಟೋ ಕಾರ್ಮಿಕರು, ತಂತ್ರಜ್ಞರು ಪಡಿತರ ಕಾರ್ಡುಗಳನ್ನೂ ಸಹ ಹೊಂದಿರುವುದಿಲ್ಲ.
ಆದ್ದರಿಂದ ಪ್ರತಿ ಕುಟುಂಬಕ್ಕೆ 25ಕೆಜಿಯ ಒಂದು ಚೀಲದಂತೆ ಕನಿಷ್ಟ 5000ಚೀಲ ಅಕ್ಕಿಯನ್ನು ಉಚಿತವಾಗಿ ವಿತರಿಸಿದರೆ ಅವರ ಕುಟುಂಬಗಳಿಗೆ ನೆರವಾಗಲಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.

ಅಲ್ಲದೆ ಸರ್ಕಾರದಿಂದ ನೀಡಲಾಗುತ್ತಿರುವ ಆರ್ಥಿಕ ನೆರವಿನ ಸದುಪಯೋಗ ಪಡೆದುಕೊಳ್ಳಲು ಚಿತ್ರೋದ್ಯಮಕ್ಕೆ ಪ್ರತ್ಯೇಕವಾಗಿ ಎರಡು ಸೇವಾಸಿಂಧು ಕೌಂಟರ್ ಗಳನ್ನು ತೆರೆಯುವಂತೆ ವಾರ್ತಾ ಸಚಿವ ಸಿ.ಸಿ.ಪಾಟೀಲ್ ಅವರಲ್ಲಿ ಅವರು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್, ನಿರ್ದೇಶಕಿ ಹಾಗೂ ನಟಿ ರೂಪ ಅಯ್ಯರ್ ಇದ್ದರು.

Categories
ಸಿನಿ ಸುದ್ದಿ

ಮಾಜಿ ಸಚಿವ ಸಿ.ಎಂ.ಉದಾಸಿ ನಿಧನಕ್ಕೆ ಸುನೀಲ್ ಪುರಾಣಿಕ್ ಸಂತಾಪ

ಮಾಜಿ ಸಚಿವರು, ಹಾನಗಲ್ ಕ್ಷೇತ್ರದ ಶಾಸಕರಾದ ಸಿ.ಎಂ. ಉದಾಸಿ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಸಂತಾಪ ಸೂಚಿಸಿದ್ದಾರೆ.
ಹಿರಿಯ ರಾಜಕೀಯ ಮುತ್ಸದ್ದಿ ಸಿ.ಎಂ.ಉದಾಸಿ ಅವರು ಅತ್ಯಂತ ಸರಳ ಸಜ್ಜನ ರಾಜಕಾರಣಿ. ಬಡವರು, ಜನ ಸಾಮಾನ್ಯರ ಬಗ್ಗೆ ಅಪಾರ ಕಾಳಜಿ ಇದ್ದ ಸಹೃದಯ ರಾಜಕಾರಣಿ. ಉದಾಸಿ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ. ಸಾಕಷ್ಟು ಯುವಕರಿಗೆ ಅವರು ಮಾದರಿಯಾಗಿದ್ದರು. ಉದಾಸಿಯವರ ನಿಧನದಿಂದ ಅವರ ಅಪಾರ ಅಭಿಮಾನಿ ಬಳಗ ದುಃಖದಲ್ಲಿ ಮುಳುಗಿದೆ.

ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಭಗವಂತ ಕರುಣಿಸಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!